ಅಂತಾರಾಷ್ಟ್ರೀಯ ಮನ್ನಣೆ: ಬೆಜವಾಡ ವಿಲ್ಸನ್ ಅವರ ಚಿತ್ರಣ

ಭಾರತೀಯ ಸಮಾಜದ ಕಪ್ಪುಚುಕ್ಕೆ ಎನ್ನಬಹುದಾದ ಮಲಬಾಚುವ ಪದ್ಧತಿಯನ್ನು ನಿಲ್ಲಿಸಬೇಕೆಂದು ದಶಕಗಳಿಂದ ಹೊರಾಟ ನಿರತರಾಗಿರುವವರು ಬೆಜûವಾಡ ವಿಲ್ಸನ್. ಸಫಾಯಿ ಕರ್ಮಚಾರಿ ಆಂದೋಲನದ ಸ್ಥಾಪಕರಲ್ಲೊಬ್ಬರು. ಅದರ ರಾಷ್ಟ್ರೀಯ ಸಂಚಾಲಕರೂ ಆದ ಅವರು ತಮ್ಮ ಮಾನವ ಹಕ್ಕು ಹೋರಾಟದ ದೆಸೆಯಿಂದ ವಿಶ್ವದ ಗಮನವನ್ನೇ ಆ ಅನಿಷ್ಟ ಪದ್ಧತಿಯ ಕಡೆಗೆ ಸೆಳೆದವರು.
ಕೋಲಾರದ ಕೆ.ಜಿ.ಎಫ್.ನ ಚಿನ್ನದ ಗಣಿ ಪ್ರದೇಶದ ಬೆಜûವಾಡ ರಾಚೇಲ್ ಮತ್ತು ಯಾಕೂಬ್ ದಂಪತಿಗಳ ಮಗ ವಿಲ್ಸನ್ ಹುಟ್ಟಿದ್ದು ೧೯೬೬ರಲ್ಲಿ. ಅವರ ತಂದೆ ೧೯೩೫ರಿಂದಲೇ ಗಣಿ ಪ್ರದೇಶದಲ್ಲಿ ಮಲಬಾಚುವ ವೃತ್ತಿ ಮಾಡುತ್ತಿದ್ದರು. ವಿಲ್ಸನ್ ಅವರ ಅಣ್ಣನೂ ಸಹಿತ ಅದೇ ವೃತ್ತಿಯಲ್ಲಿ ತೊಡಗಿದ್ದರು. ಆಂಧ್ರಪ್ರದೇಶದ ಹಾಸ್ಟೆಲ್‌ನಲ್ಲಿದ್ದುಕೊಂಡು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ವಿಲ್ಸನ್ ಕೋಲಾರ ಮತ್ತು ಹೈದರಾಬಾದ್‌ಗಳಲ್ಲಿ ಶಿಕ್ಷಣ ಮುಂದುವರೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿಪಡೆದರು.

ಒಮ್ಮೆ ಚಿನ್ನದ ನಗರಿ ಎನಿಸಿಕೊಂಡ ಜನಭರಿತ ಕೆ.ಜಿ.ಎಫ್. ಪ್ರದೇಶದ ಒಣಪಾಯಿಖಾನೆಗಳಿಂದ ತಲೆ ಮೇಲೆ ಮಲ ಹೊರುವ ಕಾಯಕವನ್ನು ತಮ್ಮ ತಾಯ್ತಂದೆಯರು, ಅಣ್ಣ ಮಾಡುವುದನ್ನು ಕಣ್ಣಾರೆ ಕಂಡರು. ಅವಮಾನಕರ ಪರಿಸ್ಥಿತಿಯಲ್ಲಿ ದಿನನಿತ್ಯ ಅವರು ಮಾಡುವ ಕೆಲಸ ತೀವ್ರ ಆಘಾತ ನೀಡಿತು. ಭಾವುಕ ತರುಣನಿಗೆ ಆತ್ಮಹತ್ಯೆಯ ಯೋಚನೆಯೂ ಸುಳಿಯಿತು. ಆದರೆ ಬೇಗ ಆಘಾತದಿಂದ ಚೇತರಿಸಿಕೊಂಡ ವಿಲ್ಸನ್ ತನ್ನ ಬದುಕನ್ನು ಮಲಬಾಚುವ ಅಮಾನವೀಯ, ಅನಿಷ್ಟ ಪದ್ಧತಿ ನಿಲ್ಲಿಸುವ ಹೋರಾಟ ಕಟ್ಟಲು, ಅವರ ಮಕ್ಕಳಿಗೆ ಶಿಕ್ಷಣ, ಘನತೆಯ ಉದ್ಯೋಗ ಕೊಡಿಸಲು ಮುಡಿಪಾಗಿಡುವೆನೆಂದು ನಿರ್ಧರಿಸಿದರು.

ಮೊದಲಿಗೆ ಗಣಿ ಕಂಪೆನಿಗೆ ಪತ್ರ ಬರೆದಾಗ ಮಲಬಾಚುವ ಪದ್ಧತಿ ಇದೆ ಎಂಬುದನ್ನೇ ನಿರಾಕರಿಸಿದರು.೧೯೮೬ರಲ್ಲಿ ಪತ್ರ ಅಭಿಯಾನ ಆರಂಭಿಸಿದರು. ಕೆ.ಜಿ.ಎಫ್. ಆಡಳಿತಗಾರರು, ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳು ಪಾರ್ಲಿಮೆಂಟ್ ಸದಸ್ಯರುಗಳಿಗೆಲ್ಲ ಫೋಟೋಗಳ ಸಮೇತ ಪತ್ರ ಬರೆದರು. ಮನೆಯಲ್ಲಿ ಮೊದಲು ವಿರೋಧ ವ್ಯಕ್ತವಾಯಿತು. ತಮ್ಮ ತಲೆಮಾರುಗಳೇ ಆ ಉದ್ಯೋಗ ಮತ್ತದನ್ನು ಮಾಡುವವರ ನಡುವೆ ಕಳೆದಿದೆ. ಕಲಿತ ಮಗ ಬೇರೇನಾದರೂ ಗೌರವ ತರುವ ಕೆಲಸ ಮಾಡಲಿ ಎನ್ನುವುದು ಮನೆಯವರ ಬಯಕೆಯಾಗಿತ್ತು. ಮಾಡುವ ಕೆಲಸ ಯಾವುದೆಂದು ಹೇಳಿಕೊಳ್ಳಲಿಕ್ಕೆ ಅವಮಾನ ಅನುಭವಿಸುವ ಮಲಬಾಚುವವರಿಗೆ ದನಿಯಾಗಿ ರ‍್ಯಾಯ ವ್ಯವಸ್ಥೆ ಕಲ್ಪಿಸುವ ಹೋರಾಟ ಮಾಡುವುದು ತನ್ನ ಕರ್ತವ್ಯ ಎಂದು ವಿಲ್ಸನ್ ತಿಳಿಸಿಹೇಳಿದಾಗ ಕ್ರಮೇಣ ಒಪ್ಪಿಕೊಂಡರು. ೧೯೯೩ರಲ್ಲಿ ತಲೆಮೇಲೆ ಮಲಹೊರುವುದನ್ನು ನಿಷೇಧಿಸುವ ಕಾಯ್ದೆಯನ್ನು ಸಂಸತ್ತು ತಂದಿತು. ಆಗ ವಿಲ್ಸನ್ ಕೆ.ಜಿ.ಎಫ್.ನ ಮಲಬಾಚುವವರ ಫೋಟೋ ತೆಗೆದು ‘ಡೆಕ್ಕನ್ ಹೆರಾಲ್ಡ್’ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟಿಸಿದರು. ಕರ್ನಾಟಕ ಸರ್ಕಾರ ಇರಿಸು ಮುರಿಸು ಅನುಭವಿಸಿತಲ್ಲದೆ ವಿಧಾನ ಸಭೆಯಲ್ಲೂ ಚರ್ಚೆ ನಡೆಯಿತು.

ನಂತರ ೧೯೯೪ರಲ್ಲಿ ವಿಲ್ಸನ್ ಅವರು ಆಂಧÀ್ರಕ್ಕೆ ಹೋಗಿ ಅಲ್ಲಿ ಪಾಲ್ ದಿವಾಕರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಆರ್.ಶಂಕರನ್ ಅವರೊಡನೆ ಸಫಾಯಿ ಕರ್ಮಚಾರಿ ಆಂದೋಲನ್ ಶುರುಮಾಡಿದರು. ಸಂಘಟನೆ ಬೆಳೆಯುತ್ತ ಹೋಯಿತು. ಮೊದಲು ರಾಜ್ಯಮಟ್ಟದಲ್ಲಿ ಕೆಲಸ ಮಾಡಿದ ಆಂದೋಲನವು ೨೦೦೩ರಲ್ಲಿ ರಾಷ್ಟ್ರೀಯ ಆಂದೋಲನವಾಯಿತು. ಮನುಷ್ಯರು, ಮಲಬಾಚುವ ಕೆಲಸ ಮಾಡುವುದನ್ನು ತಪ್ಪಿಸಿ, ಅವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಲು ಪ್ರಯತ್ನಪಟ್ಟಿತು. ಆಂದೋಲನವು ನಡೆಸಿದ ಕಾನೂನು ಹೋರಾಟವು ಸಫಾಯಿ ಕರ್ಮಚಾರಿಗಳ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ಆ ಹೋರಾಟ ಕುರಿತು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸಲಾಗಿದೆ (ಸಿಂಗ್ ೨೦೧೨). ೨೦೦೩ರಲ್ಲಿ ಆಂದೋಲನ ಮತ್ತು ಇತರ ಮಾನವ ಹಕ್ಕುಗಳ ಗುಂಪುಗಳು ಸುಪ್ರೀಂ ಕೋರ್ಟಿನಲ್ಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತು. ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ, ಭಾರತೀಯ ರೈಲ್ವೆ, ರಕ್ಷಣಾ ಇಲಾಖೆ, ನ್ಯಾಯ ಮತ್ತು ಶಿಕ್ಷಣ ಇಲಾಖೆ ಕಾಯ್ದೆ ಉಲ್ಲಂಘಿಸಿವೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಯಿತು. ಫಿರ್ಯಾದುದಾರರು ಮಲಬಾಚುವುದು ಮತ್ತು ಒಣಪಾಯಿಖಾನೆಗಳು ಮುಂದುವರೆದಿರುವುದನ್ನು ಸಂವಿಧಾನದ ಆರ್ಟಿಕಲ್ ೧೪, ೧೭, ೨೧, ಮತ್ತು ೨೩ರ ಮತ್ತು ೧೯೯೩ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕೋರ್ಟು ಘೋಷಿಸಬೇಕೆಂದು ಕೇಳಿದರು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಗದಿತ ಅವಧಿಯೊಳಗೆ ಈ ಅಮಾನವೀಯ ಪದ್ಧತಿಯನ್ನು ತೊಡೆದುಹಾಕಿ, ಈ ಕೆಲಸ ಮಾಡುವ ಕಾರ್ಮಿಕರಿಗೆ ಘನತೆಯ ಪುನರ್ವಸತಿ ಕಲ್ಪಿಸಲು ಆದೇಶಿಸಬೇಕೆಂದು ಕೇಳಿದರು. ಮತ್ತು ಸಂವಿಧಾನದ ಆರ್ಟಿಕಲ್ ೩೨ರ ಅಡಿ ಮಲಬಾಚುವುದು ಮತ್ತು ಒಣಪಾಯಿಖಾನೆಗಳ (ನಿಷೇಧ) ಕಾಯ್ದೆ ೧೯೯೩ನ್ನು ಜಾರಿಗೊಳಿಸಲು ಒತ್ತಾಯಿಸಿತು. ದೇಶಾದ್ಯಂತ ಸರ್ಕಾರ, ಸಂಘ-ಸಂಸ್ಥೆ, ಇಲಾಖೆಗಳು ಚುರುಕಾಗಿ ಸಮಸ್ಯೆ ನಿವಾರಣೆ ಕಡೆಗೆ ಗಮನ ಹರಿಸಬೇಕಾದ ತುರ್ತುಉಂಟಾಯಿತು.

ಈ ಕಾಯ್ದೆ ೧೯೯೩ರಲ್ಲಿ ಪಾರ್ಲಿಮೆಂಟಿನಲ್ಲಿ ಜಾರಿಯಾದರೂ ಅದರ ನೋಟಿಫಿಕೇಷನ್‌ನಲ್ಲಿ ರಾಷ್ಟ್ರಾಧ್ಯಕ್ಷರು ಸಹಿ ಮಾಡಿದ್ದು ಜನವರಿ ೧೯೯೭ರಲ್ಲಿ. ಪಾರ್ಲಿಮೆಂಟಿನಿಂದ ರಾಷ್ಟ್ರಾಧ್ಯಕ್ಷರ ಕಚೇರಿ ತಲುಪಲು ಮೂರು ವರ್ಷಗಳ ಕಾಲ ತೆಗೆದುಕೊಂಡಿತು. ನೈರ್ಮಲ್ಯ ಮತ್ತು ಆರೋಗ್ಯದ ವಿಷಯವು ಸಹ ವಿಷಯಗಳ ಪಟ್ಟಿಯಲ್ಲಿ ಬರುತ್ತವೆ. ಈ ಎರಡು ವಿಷಯಗಳಿಗೆ ಸಂಬಂಧಪಟ್ಟ ಯಾವುದೇ ಆದೇಶಗಳು ಜಾರಿಗೊಳ್ಳುವುದು ಶಾಸನ ಸಭೆಗಳು ಒಪ್ಪಿಗೆ ನೀಡಿದಾಗ ಮಾತ್ರ. ಹಾಗಾಗಿ ೧೯೯೩ರ ಕಾಯ್ದೆಯು ಕೇವಲ ಐದು ರಾಜ್ಯಗಳಲ್ಲಿ ಮಾತ್ರ ಸಮ್ಮತಿಯನ್ನು ಪಡೆದುಕೊಂಡಿತ್ತು. ಸಫಾಯಿ ಕರ್ಮಚಾರಿ ಆಂದೋಲನವು ಸುಪ್ರೀಂ ಕೋರ್ಟಿಗೆ ಹೋಗುವವರೆಗೂ ಇನ್ಯಾವ ರಾಜ್ಯಗಳೂ ಸಮ್ಮತಿಸುವ ಉತ್ಸಾಹವನ್ನು ತೋರಿರಲಿಲ್ಲ. ದೆಹಲಿಯು ೨೦೧೦ ರವರೆಗೂ ಸಮ್ಮತಿಸಿರಲಿಲ್ಲ. ಸುಪ್ರೀಂ ಕೋರ್ಟು, ಸಾಮಾಜಿಕ ಸಬಲೀಕರಣ ಇಲಾಖೆ, ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ, ಕೈಗಾರಿಕೆಗಳ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ೨೯ ರಾಜ್ಯಗಳು ಮತ್ತು ೬ ಕೇಂದ್ರಾಡಳಿತ ಪ್ರದೇಶಗಳಿಗೆ ನೊಟಿಸು ಜಾರಿ ಮಾಡಿತು. ೨೦೦೪-೨೦೦೭ರವರೆಗು ಮೊಕದ್ದಮೆ ಕುರಿತು ೨೦ ವಿಚಾರಣೆಗಲು ನಡೆದವು. ಹಲವು ರಾಜ್ಯಗಳು ಮಲಬಾಚುವ ಪದ್ಧತಿ ಇರುವುದನ್ನೇ ನಿರಾಕರಿಸಿದವು. ಆಗಸ್ಟ್ ೫, ೨೦೦೮ರಲ್ಲಿ ಸುಪ್ರೀಂ ಕೋರ್ಟು ಎಂಟು ವಾರಗಳ ಗಡುವು ನೀಡಿ, ದೇಶಾದ್ಯಂತ ಎಲ್ಲೆಲ್ಲಿ ಮಲಬಾಚುವುದು ಜಾರಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ಫಿರ್ಯಾದುದಾರರಿಗೆ ಹೇಳಿತು.

ಸಫಾಯಿ ಕರ್ಮಚಾರಿ ಆಂದೋಲನವು ಇದನ್ನೊಂದು ಸವಾಲಿನಂತೆ ಸ್ವೀಕರಿಸಿತು. ೧೮ ರಾಜ್ಯಗಳ ೨೭೪ ಜಿಲ್ಲೆಗಳಿಂದ ೧೨೬೦ ಕಾರ್ಯಕರ್ತರು ಮಲಬಾಚುವುದು ಜಾರಿಯಲ್ಲಿರುವುದರ ಮಾಹಿತಿಯನ್ನು ಸಂಗ್ರಹಿಸಿದರು. ಇಂತಹ ಒಂದು ಪ್ರಯತ್ನ ಸ್ವತಂತ್ರ ಬಂದು ೬೦ ವರ್ಷಗಳಾದರೂ ನಡೆದಿರಲಿಲ್ಲ. ಮಲಬಾಚುವ ಕೆಲಸಗಾರರ ನೋವಿನ ಕತೆಗಳನ್ನು ಪದೇ ಪದೇ ಹೇಳಲಾಯಿತು, ದಾಖಲಾತಿಗಳು, ಫೋಟೋಗಳು, ವಿಡಿಯೋಗಳನ್ನು ಅಮಾನವೀಯ ಮತ್ತು ಕಾನೂನುಬಾಹಿರ ಪದ್ಧತಿ ಜಾರಿಯಲ್ಲಿರುವುದಕ್ಕೆ ಸಾಕ್ಷಿಯಾಗಿ ನೀಡಲಾಯಿತು. ಮಾರ್ಚ್ ೪, ೨೦೦೯ರಂದು ಫಿರ್ಯಾದುದಾರರು ಸುಪ್ರೀಂ ಕೋರ್ಟಿಗೆ ಅಂಕಿ–ಅಂಶಗಳನ್ನು ನೀಡಿದರು. ಅವು ಹೀಗಿವೆ-
ಉತ್ತರಪ್ರದೇಶ-೬೫೬
ಬಿಹಾರ-೨೯೦೫
ರಾಜಾಸ್ತಾನ-೮೫೯
ಉತ್ತರಕಾಂಡ-೮೭೪
ಜಮ್ಮು-ಕಾಶ್ಮೀರ-೨೧೫
ಒಡಿಶಾ-೨೫೭೧
ಪಶ್ಚಿಮ ಬಂಗಾಳ-೯೨
ಹಿಮಾಚಲ ಪ್ರದೇಶ-೧೨೯
ಅಸ್ಸಾಂ-೧೭೨
ಪಂಜಾಬ್-೧೩
ಜಾರ್ಖಂಡ್-೫೯
ಮಹಾರಾಷ್ಟ್ರ-೮೨
ಗುಜರಾತ್-೪
ಛತ್ತಿಸ್‌ಗಢ-೨೮೦
ಮಧ್ಯಪ್ರದೇಶ-೮೯೮
ನಾಗಾಲ್ಯಾಂಡ್-೨೨
ಕರ್ನಾಟಕ-೪೭

ಕೋರ್ಟು ತೀರ್ಪು ನೀಡುವುದನ್ನು ೨೦೧೦ರವರೆಗು ಮುಂದೂಡಿತು. ಸಫಾಯಿ ಕರ್ಮಚಾರಿ ಆಂದೋಲನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ೨೦೧೪ರಲ್ಲಿ ತೀರ್ಪು ನೀಡಿ ‘ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಆಕ್ಟ್ ೨೦೧೩’ನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆದೇಶ ನೀಡಿತು. ಕಾಯ್ದೆ ಅನ್ವಯ:
೧. ೨೦೧೩ ರ ಕಾಯ್ದೆಯ ಸೆಕ್ಷನ್ ೧೧ ಮತ್ತು ೧೨ರಡಿಯಲ್ಲಿ ಮಲಬಾಚುವವರ ಅಂತಿಮಪಟ್ಟಿಯಲ್ಲಿ ಒಳಗೊಂಡಿರುವ ವ್ಯಕ್ತಿಗಳಿಗೆ ೨೦೧೩ರ ಕಾಯ್ದೆಯ ಭಾಗ ೪ ‘ಡಿ’ ಯ ಸೌಲಭ್ಯಗಳ ಪ್ರಕಾರ ಈ ಕೆಳಗಿನಂತೆ ಪುನರ್ವಸತಿ ಕಲ್ಪಿಸತಕ್ಕದ್ದು:
ಎ. ನಗದು ಸಹಾಯ
ಬಿ. ಅವರ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಅಥವಾ ಸ್ಥಳೀಯ ಪ್ರಧಿಕಾರಗಳಿಗೆ ಅನುಗುಣವಾಗಿ ಸ್ಕಾಲರ್‌ಶಿಪ್ ನೀಡತಕ್ಕದ್ದು
ಸಿ.ನಿವೇಶನ ನೀಡಬೇಕು ಮತ್ತು ವಸತಿ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು ಅಥವಾ ಧನಸಹಾಯದೊಂದಿಗೆ ಕಟ್ಟಿರುವ ವಸತಿಯನ್ನು ವ್ಯಕ್ತಿಯ ಅರ್ಹತೆ ಮತ್ತು ಒಪ್ಪಿಗೆಗೆ ಅನುಗುಣವಾಗಿ ನೀಡಬೇಕು
ಡಿ.ಕುಟುಂಬದ ಒಬ್ಬ ಸದಸ್ಯನಿಗಾದರೂ ಅವರ ಅರ್ಹತೆ ಮತ್ತು ಒಪ್ಪಿಗೆಯ ಮೇಲೆ ಜೀವನಾಧಾರ ಕೌಶಲ್ಯ ತರಬೇತಿಯನ್ನು ಶಿಷ್ಯವೇತನದೊಂದಿಗೆ ನೀಡಬೇಕು.
ಇ. ಕುಟುಂಬದ ಒಬ್ಬ ಪ್ರೌಢÀ ವ್ಯಕ್ತಿಗೆ ಅವರ ಅರ್ಹತೆ ಮತ್ತು ಒಪ್ಪಿಗೆಗೆ ಅನುಗುಣವಾಗಿ ಪರ್ಯಾಯ ವೃತ್ತಿಗಾಗಿ ಸಬ್ಸಿಡಿ ಸಾಲ ನೀಡಬೇಕು
ಎಫ್. ಕೇಂದ್ರ ಅಥವಾ ರಾಜ್ಯ ಸರ್ಕಾರ ನೊಟಿಫೈ ಮಾಡಿರುವ ಇತರ ಕಾನೂನು ಮತ್ತು ಕಾರ್ಯಕ್ರಮಗಳಾಧಾರಿತ ಸಹಾಯವನ್ನು ನೀಡಬೇಕು.
ಕಾಯ್ದೆ ಜಾರಿಯಾದ ನಂತರ ಆಂದೋಲನವು ಸಾರ್ವಜನಿಕರಿಗೆ ಮಲಬಾಚುವ ಕೆಲಸ ಮಾಡುವವರ ಹಕ್ಕುಗಳ ಕುರಿತುಂತೆ ಅರಿವು ಮೂಡಿಸುವ ಸಲುವಾಗಿ ೧೨೫ ದಿನಗಳ ‘ಭೀಮಯಾತ್ರೆ’ಯನ್ನು ದೇಶಾದ್ಯಂತ ನಡೆಸಿತು. ಯಾತ್ರೆಯು ೨೦೧೬ರ ಏಪ್ರಿಲ್ ೧೪ರ ಅಂಬೇಡ್ಕರ್ ಜಯಂತಿಯಂದು ದೇಹಲಿಯಲ್ಲಿ ಸಮಾರೋಪಗೊಂಡಿತು. ಆಂದೋಲನದಿಂದ ಉತ್ತೇಜಿತರಾದ ಸಾವಿರಾರು ಮಲಬಾಚುವ ಮಹಿಳೆಯರು ಆ ಕೆಲಸವನ್ನು ಬಿಟ್ಟು ಮಲಬಾಚಯವ ಪದ್ಧತಿ ವಿರುದ್ಧದ ಹೋರಾಟದಲ್ಲಿ ಭಾಗಿಯಾದರು, ಒಣಪಾಯಿಖಾನೆಗಳನ್ನು ಹೊಡೆದುರುಳಿಸಿದರು.

ವಿಲ್ಸನ್ ಅವರ ಪ್ರಕಾರ ‘ಮಲಬಾಚುವ ಕೆಲಸ ಮಾಡುವ ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿ ಒಣಪಾಯಿಖಾನೆಗಳನ್ನು ಒಡೆದುರುಳಿಸುವ ಮತ್ತು ಮಲ ತುಂಬುತ್ತಿದ್ದ ಬುಟ್ಟಿಗಳನ್ನು ಸುಡುವ ಮೂಲಕ ರಾಜಕೀಕರಣ ಆರಂಭವಾಗುತ್ತದೆ. ಬುಟ್ಟಿಗಳನ್ನು ಸುಡುವ ಮತ್ತು ಒಣಪಾಯಿಖಾನೆಗಳನ್ನು ಉರುಳಿಸುವ ಮೂಲಕ “ಬುಟ್ಟಿಗಳು ಮತ್ತು ಒಣಪಾಯಿಖಾನೆಗಳು ಅಪಮಾನದ ಸಂಕೇತ”ವೆಂದು ಸಾಧಿಸುತ್ತಾರೆ. ಯಾವುದೇ ಸರ್ಕಾರಿ ಕ್ರಮಕ್ಕಿಂತಲೂ ಸಮುದಾಯದ ಸಬಲಿಕರಣ ಮತ್ತು ಹಕ್ಕುಸ್ಥಾಪನೆ ಹೆಚ್ಚು ಮೌಲ್ಯಯುತವಾದುದು. ಮಲಬಾಚುವವರ ಸಮಸ್ಯೆಗಳ ಕುರಿತಂತೆ ಮುಖ್ಯವಾಹಿನಿ ಸಮಾಜದ ನಿರ್ಲಕ್ಷ್ಯ ಮುಂದುವರೆದಿದ್ದರೂ, ಎಂದರೆ ಮಲ ಬಾಚುವವವರ ಮನೋಭಾವನೆ ಬದಲಾದದ್ದು ಬಹುದೊಡ್ಡ ಬದಲಾವಣೆ’. (ಪಿಯುಸಿಎಲ್ ೨೦೧೯:೧೭೯).

ಸಫಾಯಿ ಕರ್ಮಚಾರಿ ಆಂದೋಲನವು ಮಲಬಾಚುವ ವಿಷಯದ ಬಗ್ಗೆ ಭಾರತೀಯ ಬುದ್ಧಿಜೀವಿಗಳ ಮೌನವನ್ನು ಟೀಕಿಸಿ ಅವರಿಗೊಂದು ಸವಾಲನ್ನು ಹಾಕಿದೆ. ಸ್ಲವೋಜ್ ಜಿûe಼ೆಕ್ ಅವರೊಂದಿಗಿನ ಸಂದರ್ಶನದಲ್ಲಿ ಆಂದೋಲನದ ಸದಸ್ಯರು ಬುದ್ಧಿಜೀವಿಗಳ ಗಂಭೀರ ತನಿಖೆಯ ಅಗತ್ಯವಿರುವಂತಹ ಮಲಬಾಚುವ ವಿಷಯದ ಬಗ್ಗೆ ನಿರ್ಲಕ್ಷ್ಯವಹಿಸಿರುವುದನ್ನು ಪ್ರಶ್ನಿಸಿ ಆ ವಿಷಯವನ್ನು ಜಾಗತಿಕ ಬುದ್ಧಿಜೀವಿಗಳ ಮತ್ತು ಕಾರ್ಯಕರ್ತರ ಕಾಳಜಿಯಾಗಿ ಅಭಿವ್ಯಕ್ತಿಸಬೇಕೆಂದು ಕೇಳಿದರು.(ಪಿಯುಸಿಎಲ್ ೨೦೧೯:೧೮೦)

ಬದ್ಧತೆ ಮತ್ತು ದಣಿವರಿಯದ ಹೋರಾಟಕ್ಕಾಗಿ ವಿಲ್ಸನ್ ಅವರಿಗೆ ೨೦೧೬ರಲ್ಲಿ ರೇಮನ್ ಮಾಗ್ಸೇಸ್ಸೆ ಪ್ರಶಸ್ತಿ ದೊರೆಯಿತು. ಆಂದೋಲನವು ಈಗಲೂ ೨೦೧೩ ಕಾಯ್ದೆಯ ಸಮರ್ಪಕ ಜಾರಿಗಾಗಿ ಮತ್ತು ಮಲಬಾಚುವ ಕೆಲಸಗಾರರನ್ನು ಗುರುತಿಸುವ ಮತ್ತು ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಸಲುವಾಗಿ ತನ್ನ ಹೋರಾಟವನ್ನು ಮುಂದುವರೆಸಿದೆ.