ಮೆಹ್ತರ್ ಮಹಲ್
‘ಮೆಹ್ತರ್ ಮಹಲ್’ ಎಂದರೆ ‘ಗುಡಿಸುವವನ ಅರಮನೆ’ಯನ್ನು ಕ್ರಿ.ಶ. ೧೬೨೦ರಲ್ಲಿ ಕಟ್ಟಲಾಯಿತು. ಮೆಹ್ತರ್ ಮಸೀದಿಗೆ ದ್ವಾರವಾಗಿರುವ ಈ ಮೂರು ಅಂತಸ್ತಿನ ಸುಂದರ ಕಟ್ಟಡವು ಸರಸೆನಿಕ್ ಶೈಲಿಯಲ್ಲಿದೆ. ಈ ಕಟ್ಟಡಕ್ಕೆ ಎರಡು ಮಿನಾರುಗಳಿದ್ದು ಅವುಗಳ ಮೇಲೆ ಪಕ್ಷಿಗಳ, ಸಾಲು ಹಂಸಗಳ ಸೂಕ್ಷö್ಮ ಕೆತ್ತನೆಗಳಿವೆ. ಆನೆ ಮತ್ತು ಸಿಂಹದ ಕೆತ್ತನೆಗಳು ವಿಶಿಷ್ಟವಾಗಿವೆ. ಈ ಮಹಲನ್ನು ಕಟ್ಟಿಸಿದವ ಒಬ್ಬ ಸಫಾಯಿ ಕರ್ಮಚಾರಿ. ಕಸಗುಡಿಸುವವರನ್ನು ಮೆಹ್ತರ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ವಿಜಯಪುರವನ್ನು ಆಳುತ್ತಿದ್ದ ಮೊದಲನೆ ಇಬ್ರಾಹಿಂ ಆದಿಲ್ ಶಾಹಿ ಆತನಿಗೆ ಉಡುಗೊರೆಯಾಗಿ ಕೊಡುತ್ತಿದ್ದ ಚಿನ್ನದ ನಾಣ್ಯಗಳನ್ನು ಕೂಡಿಸಿಟ್ಟು ಈ ಮಹಲನ್ನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಔರಂಗಜೇಬನು ವಿಜಯಪುರವನ್ನು ಆಕ್ರಮಣ ಮಾಡಿದ ನಂತರದಲ್ಲಿ ಈ ಕಟ್ಟಡವು ಪ್ರಾಮುಖ್ಯತೆಯನ್ನು ಕಳೆದುಕೊಂಡಿತು.
ಹುಡುಕಿ ಹೆಕ್ಕಿದರೆ ಮಿನುಗುವ ಮಿಣುಕುಗಳು ಭಾರತದ ಇತಿಹಾಸಕ್ಕೆ ಹೊಸ ಮೆರಗು ನೀಡಬಲ್ಲವು.
ರಂಗಭೂಮಿ ಕಲಾವಿದ ಎನ್. ಲೋಕೇಶ್
ಎನ್. ಲೋಕೇಶ್ ಅವರು ಮೈಸೂರಿನಲ್ಲಿ ಕಳೆದ ಮೂರು ವರ್ಷದಿಂದ ಮ್ಯಾನ್‌ಹೋಲ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಫೇಲಾಗಿರುವ ಇವರು ಉತ್ತಮ ರಂಗಭೂಮಿ ಕಲಾವಿದರು ಮತ್ತು ಹಾಡುಗಾರರು. ದಸರಾ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಹಲವಾರು ಪ್ರದರ್ಶನ ನೀಡಿದ್ದಾರೆ. ಹಲವು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ. ‘ನಮ್ಮ ತಂದೆ ರೈಲ್ವೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಮ್ಮ ರೈಲ್ವೆ ಆಸ್ಪತ್ರೇಲಿ ಗುಡಿಸುವ ಕೆಲಸ ಮಾಡುತ್ತಿದ್ದರು. ಅಪ್ಪ ಕೆಲಸ ಮಾಡುವಾಗಲೇ ತೀರಿಕೊಂಡಿದ್ದರಿಂದ ಅವರ ಕೆಲಸ ತಮ್ಮನಿಗೆ ಸಿಕ್ಕಿತು. ಅಜ್ಜಿ ಮೆಟ್ರೊಪೊಲ್ ಹೋಟೆಲಿನಲ್ಲಿ ಗುಡಿಸುವ ಕೆಲಸ ಮಾಡುತ್ತಿದ್ದರು. ನಮ್ಮ ಪೂರ್ವಿಕರು ವ್ಯವಸಾಯ ಮಾಡುತ್ತಿದ್ದರು, ಮಿಲಿಟರಿಯಲ್ಲಿದ್ದರು. ಊರಿನಲ್ಲಿ ಕಲ್ಲಿನ ಮನೆ ಮತ್ತು ದನಕರುಗಳು ಇದ್ದವು. ನಮ್ಮ ಮೂಲ ಅನಂತಪುರದ ಪೆನುಗೊಂಡ. ನನ್ನ ಕೆಲಸ ಖಾಯಂ ಆಗಬಹುದೆಂಬ ಆಸೆ ಇದೆ’ ಎಂದು ಹೇಳಿದರು. ಸಂಬಳದ ಜೊತೆಗೆ ಹಾಡು, ನಾಟಕದ ಕಾರ್ಯಕ್ರಮದಿಂದಲೂ ಸಂಪಾದನೆ ಮಾಡುವ ಇವರಿಗೆ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಗುರಿ ಇದೆ. ಇವರ ದೊಡ್ಡ ಮಗಳು ಮೈಸೂರಿನ ಪ್ರತಿಷ್ಟಿತ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಯಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಳೆ. ಚಿಕ್ಕ ಮಗಳು ವಿಜ್ಞಾನದ ವಿಷಯ ತೆಗೆದುಕೊಂಡು ಪಿಯುಸಿ ಓದುತ್ತಿದ್ದಾಳೆ.
ಕಬ್ಬಡಿ ಆಟದಲ್ಲಿ ಸಫಾಯಿ ಕರ್ಮಚಾರಿಗಳ ಸಾಧನೆ
ಜ್ಞಾನ, ಕೌಶಲ್ಯದಲ್ಲಿ ಸಫಾಯಿ ಕರ್ಮಚಾರಿಗಳು ಮಾಡಿರುವ ಸಾಧನೆಗಳನ್ನು ದಾಖಲಿಸಿ, ಪರಿಚಯಿಸುವ ಮೂಲಕ ಜಾತಿಯೊಂದಿಗೆ ತಳುಕು ಹಾಕಿಕೊಂಡಿರುವ ಪ್ರತಿಭೆ, ಅರ್ಹತೆ ಇತ್ಯಾದಿ ಮಿಥ್‌ಗಳನ್ನು ಒಡೆಯುವ ಅಗತ್ಯವಿದೆ.
ಉದಾಹರಣೆಗೆ ಹರಿಹರದಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳು ಕಬ್ಬಡಿ ಆಟದಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಹಲವಾರು ಟೀಮ್‌ನ ಭಾಗವಾಗಿ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅದು ಅಲ್ಲಿನ ವಿಶೇಷವೇ ಆಗಿದೆ. ಮಂಡ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳು ಅತ್ಯುತ್ತಮ ನೃತ್ಯ ಪಟುಗಳು ಹಾಗೂ ಬಾಡಿ ಬಿಲ್ಡರ್‌ಗಳಾಗಿದ್ದಾರೆ. ಇರುವ ಅಲ್ಪ ಅವಕಾಶವನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ಸಫಾಯಿ ಕರ್ಮಚಾರಿಗಳ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಜಯಮ್ಮನವರ ಮಗ ಬಿಬಿ.ಎಂ ಮತ್ತು ಎಂ.ಕಾಂ ಮಾಡಿದ್ದಾನೆ. ಕೋಲಾರದ ಮುನಿಯಪ್ಪನವರ ಮಗಳು ಎಂಜಿನಿಯರಿಂಗ್ ಮಾಡಿದ್ದಾಳೆ ಹಾಗೂ ಮಗ ವೈದ್ಯಕೀಯದಲ್ಲಿ ಸ್ನಾತ್ತಕೋತ್ತರ ಪದವಿಯಲ್ಲಿ ಓದುತ್ತಿದ್ದಾನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಫಾಯಿ ಕರ್ಮಚಾರಿ ಕೆಲಸ ಮಾಡುವವರ ಮಗ ಸಫಾಯಿ ಕರ್ಮಚಾರಿಗಳ ವಿಷಯವನ್ನೇ ಕುರಿತು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮನ್ನಣೆ: ಬೆಜವಾಡ ವಿಲ್ಸನ್ ಅವರ ಚಿತ್ರಣ
ಭಾರತೀಯ ಸಮಾಜದ ಕಪ್ಪುಚುಕ್ಕೆ ಎನ್ನಬಹುದಾದ ಮಲಬಾಚುವ ಪದ್ಧತಿಯನ್ನು ನಿಲ್ಲಿಸಬೇಕೆಂದು ದಶಕಗಳಿಂದ ಹೊರಾಟ ನಿರತರಾಗಿರುವವರು ಬೆಜûವಾಡ ವಿಲ್ಸನ್. ಸಫಾಯಿ ಕರ್ಮಚಾರಿ ಆಂದೋಲನದ ಸ್ಥಾಪಕರಲ್ಲೊಬ್ಬರು. ಅದರ ರಾಷ್ಟ್ರೀಯ ಸಂಚಾಲಕರೂ ಆದ ಅವರು ತಮ್ಮ ಮಾನವ ಹಕ್ಕು ಹೋರಾಟದ ದೆಸೆಯಿಂದ ವಿಶ್ವದ ಗಮನವನ್ನೇ ಆ ಅನಿಷ್ಟ ಪದ್ಧತಿಯ ಕಡೆಗೆ ಸೆಳೆದವರು.
ಕೋಲಾರದ ಕೆ.ಜಿ.ಎಫ್.ನ ಚಿನ್ನದ ಗಣಿ ಪ್ರದೇಶದ ಬೆಜûವಾಡ ರಾಚೇಲ್ ಮತ್ತು ಯಾಕೂಬ್ ದಂಪತಿಗಳ ಮಗ ವಿಲ್ಸನ್ ಹುಟ್ಟಿದ್ದು ೧೯೬೬ರಲ್ಲಿ. ಅವರ ತಂದೆ ೧೯೩೫ರಿಂದಲೇ ಗಣಿ ಪ್ರದೇಶದಲ್ಲಿ ಮಲಬಾಚುವ ವೃತ್ತಿ ಮಾಡುತ್ತಿದ್ದರು. ವಿಲ್ಸನ್ ಅವರ ಅಣ್ಣನೂ ಸಹಿತ ಅದೇ ವೃತ್ತಿಯಲ್ಲಿ ತೊಡಗಿದ್ದರು. ಆಂಧ್ರಪ್ರದೇಶದ ಹಾಸ್ಟೆಲ್‌ನಲ್ಲಿದ್ದುಕೊಂಡು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ವಿಲ್ಸನ್ ಕೋಲಾರ ಮತ್ತು ಹೈದರಾಬಾದ್‌ಗಳಲ್ಲಿ ಶಿಕ್ಷಣ ಮುಂದುವರೆಸಿದರು. ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿಪಡೆದರು.
ಒಮ್ಮೆ ಚಿನ್ನದ ನಗರಿ ಎನಿಸಿಕೊಂಡ ಜನಭರಿತ ಕೆ.ಜಿ.ಎಫ್. ಪ್ರದೇಶದ ಒಣಪಾಯಿಖಾನೆಗಳಿಂದ ತಲೆ ಮೇಲೆ ಮಲ ಹೊರುವ ಕಾಯಕವನ್ನು ತಮ್ಮ ತಾಯ್ತಂದೆಯರು, ಅಣ್ಣ ಮಾಡುವುದನ್ನು ಕಣ್ಣಾರೆ ಕಂಡರು. ಅವಮಾನಕರ ಪರಿಸ್ಥಿತಿಯಲ್ಲಿ ದಿನನಿತ್ಯ ಅವರು ಮಾಡುವ ಕೆಲಸ ತೀವ್ರ ಆಘಾತ ನೀಡಿತು. ಭಾವುಕ ತರುಣನಿಗೆ ಆತ್ಮಹತ್ಯೆಯ ಯೋಚನೆಯೂ ಸುಳಿಯಿತು. ಆದರೆ ಬೇಗ ಆಘಾತದಿಂದ ಚೇತರಿಸಿಕೊಂಡ ವಿಲ್ಸನ್ ತನ್ನ ಬದುಕನ್ನು ಮಲಬಾಚುವ ಅಮಾನವೀಯ, ಅನಿಷ್ಟ ಪದ್ಧತಿ ನಿಲ್ಲಿಸುವ ಹೋರಾಟ ಕಟ್ಟಲು, ಅವರ ಮಕ್ಕಳಿಗೆ ಶಿಕ್ಷಣ, ಘನತೆಯ ಉದ್ಯೋಗ ಕೊಡಿಸಲು ಮುಡಿಪಾಗಿಡುವೆನೆಂದು ನಿರ್ಧರಿಸಿದರು.
ಮೊದಲಿಗೆ ಗಣಿ ಕಂಪೆನಿಗೆ ಪತ್ರ ಬರೆದಾಗ ಮಲಬಾಚುವ ಪದ್ಧತಿ ಇದೆ ಎಂಬುದನ್ನೇ ನಿರಾಕರಿಸಿದರು.೧೯೮೬ರಲ್ಲಿ ಪತ್ರ ಅಭಿಯಾನ ಆರಂಭಿಸಿದರು. ಕೆ.ಜಿ.ಎಫ್. ಆಡಳಿತಗಾರರು, ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳು ಪಾರ್ಲಿಮೆಂಟ್ ಸದಸ್ಯರುಗಳಿಗೆಲ್ಲ ಫೋಟೋಗಳ ಸಮೇತ ಪತ್ರ ಬರೆದರು. ಮನೆಯಲ್ಲಿ ಮೊದಲು ವಿರೋಧ ವ್ಯಕ್ತವಾಯಿತು. ತಮ್ಮ ತಲೆಮಾರುಗಳೇ ಆ ಉದ್ಯೋಗ ಮತ್ತದನ್ನು ಮಾಡುವವರ ನಡುವೆ ಕಳೆದಿದೆ. ಕಲಿತ ಮಗ ಬೇರೇನಾದರೂ ಗೌರವ ತರುವ ಕೆಲಸ ಮಾಡಲಿ ಎನ್ನುವುದು ಮನೆಯವರ ಬಯಕೆಯಾಗಿತ್ತು. ಮಾಡುವ ಕೆಲಸ ಯಾವುದೆಂದು ಹೇಳಿಕೊಳ್ಳಲಿಕ್ಕೆ ಅವಮಾನ ಅನುಭವಿಸುವ ಮಲಬಾಚುವವರಿಗೆ ದನಿಯಾಗಿ ರ‍್ಯಾಯ ವ್ಯವಸ್ಥೆ ಕಲ್ಪಿಸುವ ಹೋರಾಟ ಮಾಡುವುದು ತನ್ನ ಕರ್ತವ್ಯ ಎಂದು ವಿಲ್ಸನ್ ತಿಳಿಸಿಹೇಳಿದಾಗ ಕ್ರಮೇಣ ಒಪ್ಪಿಕೊಂಡರು. ೧೯೯೩ರಲ್ಲಿ ತಲೆಮೇಲೆ ಮಲಹೊರುವುದನ್ನು ನಿಷೇಧಿಸುವ ಕಾಯ್ದೆಯನ್ನು ಸಂಸತ್ತು ತಂದಿತು. ಆಗ ವಿಲ್ಸನ್ ಕೆ.ಜಿ.ಎಫ್.ನ ಮಲಬಾಚುವವರ ಫೋಟೋ ತೆಗೆದು ‘ಡೆಕ್ಕನ್ ಹೆರಾಲ್ಡ್’ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟಿಸಿದರು. ಕರ್ನಾಟಕ ಸರ್ಕಾರ ಇರಿಸು ಮುರಿಸು ಅನುಭವಿಸಿತಲ್ಲದೆ ವಿಧಾನ ಸಭೆಯಲ್ಲೂ ಚರ್ಚೆ ನಡೆಯಿತು.
ನಂತರ ೧೯೯೪ರಲ್ಲಿ ವಿಲ್ಸನ್ ಅವರು ಆಂಧÀ್ರಕ್ಕೆ ಹೋಗಿ ಅಲ್ಲಿ ಪಾಲ್ ದಿವಾಕರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಆರ್.ಶಂಕರನ್ ಅವರೊಡನೆ ಸಫಾಯಿ ಕರ್ಮಚಾರಿ ಆಂದೋಲನ್ ಶುರುಮಾಡಿದರು. ಸಂಘಟನೆ ಬೆಳೆಯುತ್ತ ಹೋಯಿತು. ಮೊದಲು ರಾಜ್ಯಮಟ್ಟದಲ್ಲಿ ಕೆಲಸ ಮಾಡಿದ ಆಂದೋಲನವು ೨೦೦೩ರಲ್ಲಿ ರಾಷ್ಟ್ರೀಯ ಆಂದೋಲನವಾಯಿತು. ಮನುಷ್ಯರು, ಮಲಬಾಚುವ ಕೆಲಸ ಮಾಡುವುದನ್ನು ತಪ್ಪಿಸಿ, ಅವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಲು ಪ್ರಯತ್ನಪಟ್ಟಿತು. ಆಂದೋಲನವು ನಡೆಸಿದ ಕಾನೂನು ಹೋರಾಟವು ಸಫಾಯಿ ಕರ್ಮಚಾರಿಗಳ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ. ಆ ಹೋರಾಟ ಕುರಿತು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸಲಾಗಿದೆ (ಸಿಂಗ್ ೨೦೧೨). ೨೦೦೩ರಲ್ಲಿ ಆಂದೋಲನ ಮತ್ತು ಇತರ ಮಾನವ ಹಕ್ಕುಗಳ ಗುಂಪುಗಳು ಸುಪ್ರೀಂ ಕೋರ್ಟಿನಲ್ಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿತು. ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ, ಭಾರತೀಯ ರೈಲ್ವೆ, ರಕ್ಷಣಾ ಇಲಾಖೆ, ನ್ಯಾಯ ಮತ್ತು ಶಿಕ್ಷಣ ಇಲಾಖೆ ಕಾಯ್ದೆ ಉಲ್ಲಂಘಿಸಿವೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಯಿತು. ಫಿರ್ಯಾದುದಾರರು ಮಲಬಾಚುವುದು ಮತ್ತು ಒಣಪಾಯಿಖಾನೆಗಳು ಮುಂದುವರೆದಿರುವುದನ್ನು ಸಂವಿಧಾನದ ಆರ್ಟಿಕಲ್ ೧೪, ೧೭, ೨೧, ಮತ್ತು ೨೩ರ ಮತ್ತು ೧೯೯೩ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕೋರ್ಟು ಘೋಷಿಸಬೇಕೆಂದು ಕೇಳಿದರು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಗದಿತ ಅವಧಿಯೊಳಗೆ ಈ ಅಮಾನವೀಯ ಪದ್ಧತಿಯನ್ನು ತೊಡೆದುಹಾಕಿ, ಈ ಕೆಲಸ ಮಾಡುವ ಕಾರ್ಮಿಕರಿಗೆ ಘನತೆಯ ಪುನರ್ವಸತಿ ಕಲ್ಪಿಸಲು ಆದೇಶಿಸಬೇಕೆಂದು ಕೇಳಿದರು. ಮತ್ತು ಸಂವಿಧಾನದ ಆರ್ಟಿಕಲ್ ೩೨ರ ಅಡಿ ಮಲಬಾಚುವುದು ಮತ್ತು ಒಣಪಾಯಿಖಾನೆಗಳ (ನಿಷೇಧ) ಕಾಯ್ದೆ ೧೯೯೩ನ್ನು ಜಾರಿಗೊಳಿಸಲು ಒತ್ತಾಯಿಸಿತು. ದೇಶಾದ್ಯಂತ ಸರ್ಕಾರ, ಸಂಘ-ಸಂಸ್ಥೆ, ಇಲಾಖೆಗಳು ಚುರುಕಾಗಿ ಸಮಸ್ಯೆ ನಿವಾರಣೆ ಕಡೆಗೆ ಗಮನ ಹರಿಸಬೇಕಾದ ತುರ್ತುಉಂಟಾಯಿತು.
ಈ ಕಾಯ್ದೆ ೧೯೯೩ರಲ್ಲಿ ಪಾರ್ಲಿಮೆಂಟಿನಲ್ಲಿ ಜಾರಿಯಾದರೂ ಅದರ ನೋಟಿಫಿಕೇಷನ್‌ನಲ್ಲಿ ರಾಷ್ಟ್ರಾಧ್ಯಕ್ಷರು ಸಹಿ ಮಾಡಿದ್ದು ಜನವರಿ ೧೯೯೭ರಲ್ಲಿ. ಪಾರ್ಲಿಮೆಂಟಿನಿಂದ ರಾಷ್ಟ್ರಾಧ್ಯಕ್ಷರ ಕಚೇರಿ ತಲುಪಲು ಮೂರು ವರ್ಷಗಳ ಕಾಲ ತೆಗೆದುಕೊಂಡಿತು. ನೈರ್ಮಲ್ಯ ಮತ್ತು ಆರೋಗ್ಯದ ವಿಷಯವು ಸಹ ವಿಷಯಗಳ ಪಟ್ಟಿಯಲ್ಲಿ ಬರುತ್ತವೆ. ಈ ಎರಡು ವಿಷಯಗಳಿಗೆ ಸಂಬಂಧಪಟ್ಟ ಯಾವುದೇ ಆದೇಶಗಳು ಜಾರಿಗೊಳ್ಳುವುದು ಶಾಸನ ಸಭೆಗಳು ಒಪ್ಪಿಗೆ ನೀಡಿದಾಗ ಮಾತ್ರ. ಹಾಗಾಗಿ ೧೯೯೩ರ ಕಾಯ್ದೆಯು ಕೇವಲ ಐದು ರಾಜ್ಯಗಳಲ್ಲಿ ಮಾತ್ರ ಸಮ್ಮತಿಯನ್ನು ಪಡೆದುಕೊಂಡಿತ್ತು. ಸಫಾಯಿ ಕರ್ಮಚಾರಿ ಆಂದೋಲನವು ಸುಪ್ರೀಂ ಕೋರ್ಟಿಗೆ ಹೋಗುವವರೆಗೂ ಇನ್ಯಾವ ರಾಜ್ಯಗಳೂ ಸಮ್ಮತಿಸುವ ಉತ್ಸಾಹವನ್ನು ತೋರಿರಲಿಲ್ಲ. ದೆಹಲಿಯು ೨೦೧೦ ರವರೆಗೂ ಸಮ್ಮತಿಸಿರಲಿಲ್ಲ. ಸುಪ್ರೀಂ ಕೋರ್ಟು, ಸಾಮಾಜಿಕ ಸಬಲೀಕರಣ ಇಲಾಖೆ, ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ, ಕೈಗಾರಿಕೆಗಳ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ೨೯ ರಾಜ್ಯಗಳು ಮತ್ತು ೬ ಕೇಂದ್ರಾಡಳಿತ ಪ್ರದೇಶಗಳಿಗೆ ನೊಟಿಸು ಜಾರಿ ಮಾಡಿತು. ೨೦೦೪-೨೦೦೭ರವರೆಗು ಮೊಕದ್ದಮೆ ಕುರಿತು ೨೦ ವಿಚಾರಣೆಗಲು ನಡೆದವು. ಹಲವು ರಾಜ್ಯಗಳು ಮಲಬಾಚುವ ಪದ್ಧತಿ ಇರುವುದನ್ನೇ ನಿರಾಕರಿಸಿದವು. ಆಗಸ್ಟ್ ೫, ೨೦೦೮ರಲ್ಲಿ ಸುಪ್ರೀಂ ಕೋರ್ಟು ಎಂಟು ವಾರಗಳ ಗಡುವು ನೀಡಿ, ದೇಶಾದ್ಯಂತ ಎಲ್ಲೆಲ್ಲಿ ಮಲಬಾಚುವುದು ಜಾರಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ಫಿರ್ಯಾದುದಾರರಿಗೆ ಹೇಳಿತು.
ಸಫಾಯಿ ಕರ್ಮಚಾರಿ ಆಂದೋಲನವು ಇದನ್ನೊಂದು ಸವಾಲಿನಂತೆ ಸ್ವೀಕರಿಸಿತು. ೧೮ ರಾಜ್ಯಗಳ ೨೭೪ ಜಿಲ್ಲೆಗಳಿಂದ ೧೨೬೦ ಕಾರ್ಯಕರ್ತರು ಮಲಬಾಚುವುದು ಜಾರಿಯಲ್ಲಿರುವುದರ ಮಾಹಿತಿಯನ್ನು ಸಂಗ್ರಹಿಸಿದರು. ಇಂತಹ ಒಂದು ಪ್ರಯತ್ನ ಸ್ವತಂತ್ರ ಬಂದು ೬೦ ವರ್ಷಗಳಾದರೂ ನಡೆದಿರಲಿಲ್ಲ. ಮಲಬಾಚುವ ಕೆಲಸಗಾರರ ನೋವಿನ ಕತೆಗಳನ್ನು ಪದೇ ಪದೇ ಹೇಳಲಾಯಿತು, ದಾಖಲಾತಿಗಳು, ಫೋಟೋಗಳು, ವಿಡಿಯೋಗಳನ್ನು ಅಮಾನವೀಯ ಮತ್ತು ಕಾನೂನುಬಾಹಿರ ಪದ್ಧತಿ ಜಾರಿಯಲ್ಲಿರುವುದಕ್ಕೆ ಸಾಕ್ಷಿಯಾಗಿ ನೀಡಲಾಯಿತು. ಮಾರ್ಚ್ ೪, ೨೦೦೯ರಂದು ಫಿರ್ಯಾದುದಾರರು ಸುಪ್ರೀಂ ಕೋರ್ಟಿಗೆ ಅಂಕಿ–ಅಂಶಗಳನ್ನು ನೀಡಿದರು. ಅವು ಹೀಗಿವೆ-
ಉತ್ತರಪ್ರದೇಶ-೬೫೬
ಬಿಹಾರ-೨೯೦೫
ರಾಜಾಸ್ತಾನ-೮೫೯
ಉತ್ತರಕಾಂಡ-೮೭೪
ಜಮ್ಮು-ಕಾಶ್ಮೀರ-೨೧೫
ಒಡಿಶಾ-೨೫೭೧
ಪಶ್ಚಿಮ ಬಂಗಾಳ-೯೨
ಹಿಮಾಚಲ ಪ್ರದೇಶ-೧೨೯
ಅಸ್ಸಾಂ-೧೭೨
ಪಂಜಾಬ್-೧೩
ಜಾರ್ಖಂಡ್-೫೯
ಮಹಾರಾಷ್ಟ್ರ-೮೨
ಗುಜರಾತ್-೪
ಛತ್ತಿಸ್‌ಗಢ-೨೮೦
ಮಧ್ಯಪ್ರದೇಶ-೮೯೮
ನಾಗಾಲ್ಯಾಂಡ್-೨೨
ಕರ್ನಾಟಕ-೪೭
ಕೋರ್ಟು ತೀರ್ಪು ನೀಡುವುದನ್ನು ೨೦೧೦ರವರೆಗು ಮುಂದೂಡಿತು. ಸಫಾಯಿ ಕರ್ಮಚಾರಿ ಆಂದೋಲನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ೨೦೧೪ರಲ್ಲಿ ತೀರ್ಪು ನೀಡಿ ‘ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಆಕ್ಟ್ ೨೦೧೩’ನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆದೇಶ ನೀಡಿತು. ಕಾಯ್ದೆ ಅನ್ವಯ:
೧. ೨೦೧೩ ರ ಕಾಯ್ದೆಯ ಸೆಕ್ಷನ್ ೧೧ ಮತ್ತು ೧೨ರಡಿಯಲ್ಲಿ ಮಲಬಾಚುವವರ ಅಂತಿಮಪಟ್ಟಿಯಲ್ಲಿ ಒಳಗೊಂಡಿರುವ ವ್ಯಕ್ತಿಗಳಿಗೆ ೨೦೧೩ರ ಕಾಯ್ದೆಯ ಭಾಗ ೪ ‘ಡಿ’ ಯ ಸೌಲಭ್ಯಗಳ ಪ್ರಕಾರ ಈ ಕೆಳಗಿನಂತೆ ಪುನರ್ವಸತಿ ಕಲ್ಪಿಸತಕ್ಕದ್ದು:
ಎ. ನಗದು ಸಹಾಯ
ಬಿ. ಅವರ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಅಥವಾ ಸ್ಥಳೀಯ ಪ್ರಧಿಕಾರಗಳಿಗೆ ಅನುಗುಣವಾಗಿ ಸ್ಕಾಲರ್‌ಶಿಪ್ ನೀಡತಕ್ಕದ್ದು
ಸಿ.ನಿವೇಶನ ನೀಡಬೇಕು ಮತ್ತು ವಸತಿ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು ಅಥವಾ ಧನಸಹಾಯದೊಂದಿಗೆ ಕಟ್ಟಿರುವ ವಸತಿಯನ್ನು ವ್ಯಕ್ತಿಯ ಅರ್ಹತೆ ಮತ್ತು ಒಪ್ಪಿಗೆಗೆ ಅನುಗುಣವಾಗಿ ನೀಡಬೇಕು
ಡಿ.ಕುಟುಂಬದ ಒಬ್ಬ ಸದಸ್ಯನಿಗಾದರೂ ಅವರ ಅರ್ಹತೆ ಮತ್ತು ಒಪ್ಪಿಗೆಯ ಮೇಲೆ ಜೀವನಾಧಾರ ಕೌಶಲ್ಯ ತರಬೇತಿಯನ್ನು ಶಿಷ್ಯವೇತನದೊಂದಿಗೆ ನೀಡಬೇಕು.
ಇ. ಕುಟುಂಬದ ಒಬ್ಬ ಪ್ರೌಢÀ ವ್ಯಕ್ತಿಗೆ ಅವರ ಅರ್ಹತೆ ಮತ್ತು ಒಪ್ಪಿಗೆಗೆ ಅನುಗುಣವಾಗಿ ಪರ್ಯಾಯ ವೃತ್ತಿಗಾಗಿ ಸಬ್ಸಿಡಿ ಸಾಲ ನೀಡಬೇಕು
ಎಫ್. ಕೇಂದ್ರ ಅಥವಾ ರಾಜ್ಯ ಸರ್ಕಾರ ನೊಟಿಫೈ ಮಾಡಿರುವ ಇತರ ಕಾನೂನು ಮತ್ತು ಕಾರ್ಯಕ್ರಮಗಳಾಧಾರಿತ ಸಹಾಯವನ್ನು ನೀಡಬೇಕು.
ಕಾಯ್ದೆ ಜಾರಿಯಾದ ನಂತರ ಆಂದೋಲನವು ಸಾರ್ವಜನಿಕರಿಗೆ ಮಲಬಾಚುವ ಕೆಲಸ ಮಾಡುವವರ ಹಕ್ಕುಗಳ ಕುರಿತುಂತೆ ಅರಿವು ಮೂಡಿಸುವ ಸಲುವಾಗಿ ೧೨೫ ದಿನಗಳ ‘ಭೀಮಯಾತ್ರೆ’ಯನ್ನು ದೇಶಾದ್ಯಂತ ನಡೆಸಿತು. ಯಾತ್ರೆಯು ೨೦೧೬ರ ಏಪ್ರಿಲ್ ೧೪ರ ಅಂಬೇಡ್ಕರ್ ಜಯಂತಿಯಂದು ದೇಹಲಿಯಲ್ಲಿ ಸಮಾರೋಪಗೊಂಡಿತು. ಆಂದೋಲನದಿಂದ ಉತ್ತೇಜಿತರಾದ ಸಾವಿರಾರು ಮಲಬಾಚುವ ಮಹಿಳೆಯರು ಆ ಕೆಲಸವನ್ನು ಬಿಟ್ಟು ಮಲಬಾಚಯವ ಪದ್ಧತಿ ವಿರುದ್ಧದ ಹೋರಾಟದಲ್ಲಿ ಭಾಗಿಯಾದರು, ಒಣಪಾಯಿಖಾನೆಗಳನ್ನು ಹೊಡೆದುರುಳಿಸಿದರು.
ವಿಲ್ಸನ್ ಅವರ ಪ್ರಕಾರ ‘ಮಲಬಾಚುವ ಕೆಲಸ ಮಾಡುವ ಮಹಿಳೆಯರು ಹೋರಾಟದಲ್ಲಿ ಭಾಗಿಯಾಗಿ ಒಣಪಾಯಿಖಾನೆಗಳನ್ನು ಒಡೆದುರುಳಿಸುವ ಮತ್ತು ಮಲ ತುಂಬುತ್ತಿದ್ದ ಬುಟ್ಟಿಗಳನ್ನು ಸುಡುವ ಮೂಲಕ ರಾಜಕೀಕರಣ ಆರಂಭವಾಗುತ್ತದೆ. ಬುಟ್ಟಿಗಳನ್ನು ಸುಡುವ ಮತ್ತು ಒಣಪಾಯಿಖಾನೆಗಳನ್ನು ಉರುಳಿಸುವ ಮೂಲಕ “ಬುಟ್ಟಿಗಳು ಮತ್ತು ಒಣಪಾಯಿಖಾನೆಗಳು ಅಪಮಾನದ ಸಂಕೇತ”ವೆಂದು ಸಾಧಿಸುತ್ತಾರೆ. ಯಾವುದೇ ಸರ್ಕಾರಿ ಕ್ರಮಕ್ಕಿಂತಲೂ ಸಮುದಾಯದ ಸಬಲಿಕರಣ ಮತ್ತು ಹಕ್ಕುಸ್ಥಾಪನೆ ಹೆಚ್ಚು ಮೌಲ್ಯಯುತವಾದುದು. ಮಲಬಾಚುವವರ ಸಮಸ್ಯೆಗಳ ಕುರಿತಂತೆ ಮುಖ್ಯವಾಹಿನಿ ಸಮಾಜದ ನಿರ್ಲಕ್ಷ್ಯ ಮುಂದುವರೆದಿದ್ದರೂ, ಎಂದರೆ ಮಲ ಬಾಚುವವವರ ಮನೋಭಾವನೆ ಬದಲಾದದ್ದು ಬಹುದೊಡ್ಡ ಬದಲಾವಣೆ’. (ಪಿಯುಸಿಎಲ್ ೨೦೧೯:೧೭೯).
ಸಫಾಯಿ ಕರ್ಮಚಾರಿ ಆಂದೋಲನವು ಮಲಬಾಚುವ ವಿಷಯದ ಬಗ್ಗೆ ಭಾರತೀಯ ಬುದ್ಧಿಜೀವಿಗಳ ಮೌನವನ್ನು ಟೀಕಿಸಿ ಅವರಿಗೊಂದು ಸವಾಲನ್ನು ಹಾಕಿದೆ. ಸ್ಲವೋಜ್ ಜಿûe಼ೆಕ್ ಅವರೊಂದಿಗಿನ ಸಂದರ್ಶನದಲ್ಲಿ ಆಂದೋಲನದ ಸದಸ್ಯರು ಬುದ್ಧಿಜೀವಿಗಳ ಗಂಭೀರ ತನಿಖೆಯ ಅಗತ್ಯವಿರುವಂತಹ ಮಲಬಾಚುವ ವಿಷಯದ ಬಗ್ಗೆ ನಿರ್ಲಕ್ಷ್ಯವಹಿಸಿರುವುದನ್ನು ಪ್ರಶ್ನಿಸಿ ಆ ವಿಷಯವನ್ನು ಜಾಗತಿಕ ಬುದ್ಧಿಜೀವಿಗಳ ಮತ್ತು ಕಾರ್ಯಕರ್ತರ ಕಾಳಜಿಯಾಗಿ ಅಭಿವ್ಯಕ್ತಿಸಬೇಕೆಂದು ಕೇಳಿದರು.(ಪಿಯುಸಿಎಲ್ ೨೦೧೯:೧೮೦)
ಬದ್ಧತೆ ಮತ್ತು ದಣಿವರಿಯದ ಹೋರಾಟಕ್ಕಾಗಿ ವಿಲ್ಸನ್ ಅವರಿಗೆ ೨೦೧೬ರಲ್ಲಿ ರೇಮನ್ ಮಾಗ್ಸೇಸ್ಸೆ ಪ್ರಶಸ್ತಿ ದೊರೆಯಿತು. ಆಂದೋಲನವು ಈಗಲೂ ೨೦೧೩ ಕಾಯ್ದೆಯ ಸಮರ್ಪಕ ಜಾರಿಗಾಗಿ ಮತ್ತು ಮಲಬಾಚುವ ಕೆಲಸಗಾರರನ್ನು ಗುರುತಿಸುವ ಮತ್ತು ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಸಲುವಾಗಿ ತನ್ನ ಹೋರಾಟವನ್ನು ಮುಂದುವರೆಸಿದೆ.
ಮಲಬಾಚುವುದರಿಂದ ಹಿಡಿದು ಮೇಯರ್ ಹುದ್ದೆಯವರೆಗು: ಮೈಸೂರು ನಗರದ ಮಾಜಿ ಮೇಯರ್ ನಾರಾಯಣ್ ಅವರ ಸಂದರ್ಶನ
ಕೌಟುಂಬಿಕ ಹಿನ್ನೆಲೆ
ನಾರಾಯಣ್ ಅವರ ಪೂರ್ವಿಕರು ಆಂಧ್ರದ ನೆಲ್ಲೂರಿನವರು. ತಾಯಿ ಈರಮ್ಮ, ತಂದೆ ಚಿನ್ನರಾಮು. ಇವರ ತಾಯಿ ಖಾಯಂ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದರು. ತಂದೆಯವರು ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದರು. ಮುಂದೆ ಅಟೆಂಡರ್ ಆಗಿ ಕೆಲಸ ಮಾಡಿದರು. ಸ್ವತಃ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿದ ನಾರಾಯಣ್ ಅವರು ಮೈಸೂರು ನಗರದ ಮೇಯರ್ ಆಗಿದ್ದರು.
ಸಫಾಯಿ ಕರ್ಮಚಾರಿಗಳಿಗಾಗಿ ಹೋರಾಟ ಮಾಡಲು ಸಿಕ್ಕ ಪ್ರೇರಣೆ ಯಾವುದು?
ಬಾಲ್ಯದಲ್ಲಿ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದ ಅನುಭವ ಮತ್ತು ಜಾತಿಯ ಕಾರಣಕ್ಕಾಗಿ ಅನುಭವಿಸಿದ ನೋವು ಅವಮಾನಗಳೇ ನನಗೆ ಪ್ರೇರಣೆ. ನನ್ನ ಸಮುದಾಯಕ್ಕಾಗಿ ಏನಾದರೂ ಮಾಡಲೇಬೇಕೆಂದು ಸಣ್ಣವಯಸ್ಸಿನಲ್ಲೇ ತೀರ್ಮಾನಿಸಿದೆ. ನಾನು ರೈಲ್ವೆ ಸ್ಟೇಷನ್‌ನಲ್ಲಿ ರೈಲ್ವೆ ಹಳಿಗಳ ಮೇಲಿನ ಮಲಬಾಚಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದೆ. ಮುಂದೆ ಜಾವಾ ಫ್ಯಾಕ್ಟರಿಯಲ್ಲಿ ೨೪ ವರ್ಷಗಳ ಕಾಲ ಸ್ವಚ್ಛತೆಯ ಕೆಲಸ ಮಾಡಿದೆ. ಆರಂಭದಲ್ಲಿ ನನಗೆ ೪ರೂ. ಸಂಬಳ ಸಿಗುತ್ತಿತ್ತು. ಜೊತೆಗೆ ಅಲ್ಲಿನ ಅಧಿಕಾರಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ತೊಳೆಯುವುದು, ಅವರ ಮನೆಯ ನಾಯಿಯನ್ನು ತೊಳೆಯುವುದು, ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದೆ. ಅವರು ಏನಾದರು ಕೆಲಸ ಕೊಡಿಸಬಹುದೆಂಬ ಆಸೆಯಿತ್ತು. ಅವರ ಮನೆಯಲ್ಲಿ ಮರದ ಎಲೆಯನ್ನು ಕಿತ್ತುಕೊಂಡು ಹಿಡಿದರೆ ಮೇಲಿನಿಂದ ಊಟ ಹಾಕುತ್ತಿದ್ದರು. ಈ ಕೆಲಸ ಮತ್ತು ಜಾತಿಯಿಂದ ಅನುಭವಿಸುವ ಕಷ್ಟ ನೋವು ನನಗೆ ಚೆನ್ನಾಗಿ ಗೊತ್ತು.
ಸಫಾಯಿ ಕರ್ಮಚಾರಿಗಳಿಗೆ ನೀವು ಕೈಗೊಂಡ ಕಾರ್ಯಗಳೇನು?
ನಾನು, ನನ್ನ ೧೮-೧೯ನೇ ವಯಸ್ಸಿನಿಂದಲೇ ಸಮಾಜಮುಖಿ ಕೆಲಸವನ್ನು ಮಾಡಲು ಆರಂಭಿಸಿದೆ. ೧೯೭೮ರಲ್ಲಿಯೇ ‘ಪೌರಕಾರ್ಮಿಕರ ಅಭಿವೃದ್ಧಿ ಸಂಘ’ವನ್ನು ಸ್ಥಾಪಿಸಿದೆ. ಪೌರಕಾರ್ಮಿಕರ ಮನೆಗಳಿಗೆ ಕುಡಿಯುವ ನೀರು, ಶೌಚ, ವಿದ್ಯುತ್‌ನಂತಹ ಮೂಲ ಸೌಕರ್ಯಗಳನ್ನು ಕೊಡಿಸಲು ಸಂಘದ ಮೂಲಕ ಹೋರಾಟ ಮಾಡಿದೆವು.
ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕೊಳಗೇರಿಗಳಲ್ಲಿ ಸಾರಾಯಿ ಅಂಗಡಿ ತೆರವು ಮಾಡಿಸುವುದು, ಶಾಲೆಗಳನ್ನು ಸ್ಥಾಪಿಸುವುದು, ಸಾಕ್ಷರತೆಯ ಜಾಥದಂತಹ ಪುನರ್ವಸತಿ ಕೆಲಸಗಳನ್ನು ಒಕ್ಕೂಟದಿಂದ ಮಾಡಿದೆವು.
ನಗರಪಾಲಿಕೆ ಪೌರಕಾರ್ಮಿಕರ ಸಂಘವನ್ನು ಸ್ಥಾಪಿಸಿ ಆ ಮೂಲಕ ಪೌರಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದೆವು.
೧೯೯೬ರಲ್ಲಿ ಕಾರ್ಪೊರೇಟರ್ ಆಗಿ ಆಯ್ಕೆಯಾದಗಲೂ ಪೌರಕಾರ್ಮಿಕರಿಗಾಗಿ ಕೆಲಸ ಮಾಡಿದೆ.
ಮೈಸೂರು ನಗರದ ಮೇಯರ್ ಆಗಿ ನೀವು ಕೈಗೊಂಡ ಕಾರ್ಯಗಳೇನು?
೨೦೦೦ದಲ್ಲಿ ನಾನು ಮೇಯರ್ ಆಗಿ ಚುನಾಯಿತನಾದೆ. ಮೈಸೂರು ರೈಲ್ವೇ ನಿಲ್ದಾಣದಲ್ಲಿ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಎನ್.ರಾಚಯ್ಯ, ಬಿ.ರಾಚಯ್ಯ, ಕೆ.ಸಿದ್ಧಯ್ಯ, ರಾಮಕೃಷ್ಣಯ್ಯನಂತಹ ದಲಿತ ನಾಯಕರುಗಳ ಹೆಸರನ್ನು ಮೈಸೂರಿನ ಕೆಲವು ವೃತ್ತಗಳಿಗೆ ಮತ್ತು ರಸ್ತೆಗಳಿಗೆ ಇರಿಸಿದೆ. ಜಗಜೀವನ್ ರಾಮ್ ಅವರ ಮಗಳು ಮೀರಾ ಕುಮಾರ್ ಅವರು ಮೈಸೂರಿಗೆ ಬಂದಾಗ ಪ್ರತಿಮೆಯನ್ನು ನೋಡಿ ತುಂಬಾ ಸಂತೋಷಪಟ್ಟರು. ಪೌರಕಾರ್ಮಿಕರಿಗಾಗಿ ೫೨೪ ವಸತಿಗಳನ್ನು ನೀಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರಿಸುವ ಹಣದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪಾಲಿಕೆಯಿಂದ ಧನಸಹಾಯ ಸಿಗುವಂತೆ ಮಾಡಿದೆ. ಚೈನಾದಲ್ಲಿ ಮೇಯರ್‌ಗಳ ಸಮಾವೇಶದಲ್ಲಿ ಪಾಲ್ಗೊಂಡೆ.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೀವು ಕೈಗೊಂಡ ಕಾರ್ಯಕ್ರಮಗಳೇನು?
ರಾಜ್ಯ ಮಟ್ಟದಲ್ಲಿ ಪೌರಕಾರ್ಮಿಕರನ್ನು ಸಂಘಟಿಸಲಾಯಿತು. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಎರಡು ಬೃಹತ್ ಸಮಾವೇಶಗಳನ್ನು ಮಾಡಲಾಯಿತು. ಒಂದು ಸಮಾವೇಶದಲ್ಲಿ ಒಂದು ಲಕ್ಷ ಕಾರ್ಮಿಕರು, ಮತ್ತೊಂದು ಸಮಾವೇಶದಲ್ಲಿ ಐವತ್ತು ಸಾವಿರ ಕಾರ್ಮಿಕರು ಸೇರಿದ್ದರು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲು ಶ್ರಮಿಸಿ ಯಶಸ್ವಿಯಾದೆವು. ಪೌರಕಾರ್ಮಿಕರಿಗೆ ರೂ.೧೪೦೦೦ ವೇತನ ಹೆಚ್ಚಳ ಮಾಡಲಾಯಿತು. ಅವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಕಾರ್ಮಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು. ಇದು ದೇಶದಲ್ಲೇ ಮೊದಲು. ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡುವುದು ಜಾರಿಗೆ ತರಲಾಯಿತು. ಸ್ಥಳೀಯ ಸಂಸ್ಥೆಗಳಲ್ಲಿನ ಸ್ಪೆಷಲ್ ಕಾಂಪೊನೆಂಟ್ ಪ್ಲಾನ್ ಹಣದಲ್ಲಿ ಪೌರಕಾರ್ಮಿಕರಿಗಾಗಿ ೨೦% ಮೀಸಲಿಡಿಸಿದೆ. ಪೌರಕಾರ್ಮಿಕರಿಗೆ ವಿದೇಶಿ ಪ್ರವಾಸ ಜಾರಿಗೆ ತರಲಾಯಿತು. ಬೆಂಗಳೂರಿನಲ್ಲಿ ೪೦೦ ಬಿಡಿಎ ಫ್ಲಾಟುಗಳನ್ನು ಪೌರಕಾರ್ಮಿಕರಿಗೆ ನೀಡಲಾಯಿತು.
ಸ್ವಚ್ಛತೆಯ ಕೆಲಸದಲ್ಲಿ ನಾಗರಿಕರ ಪಾತ್ರವೇನು?
ನಾಗರಿಕರ ಪಾತ್ರ ದೊಡ್ಡದಿದೆ. ಅವರು ಜವಾಬ್ದಾರಿಯಿಂದ ಕಾರ್ಮಿಕರೊಂದಿಗೆ ಕೈಜೋಡಿಸಿದರೆ ಸ್ವಚ್ಛತೆಯ ಕೆಲಸಕ್ಕೆ ಮೌಲ್ಯ ಬರುತ್ತದೆ. ಸಿಂಗಪುರ ಹಾಗೂ ಇತರೆ ದೇಶಗಳಲ್ಲಿ ಜಾರಿ ಇರುವಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಆಗ ಬೇಕಾಬಿಟ್ಟಿ ಕಸ ಎಸೆಯುವುದು ಕಡಿಮೆಯಾಗುತ್ತದೆ.
ನೀವು ಎದುರಿಸಿದ ಕಠಿಣ ಸವಾಲು ಯಾವುದು?
ಗುತ್ತಿಗೆ ಪದ್ಧತಿ ರದ್ದುಪಡಿಸಲು ಹೋರಾಟ ಮಾಡುವಾಗ, ಬೇಡಿಕೆ ವಾಪಸ್ಸು ತೆಗೆದುಕೊಳ್ಳಲು ಗುತ್ತಿಗೆದಾರರು ಐದು ಕೋಟಿ ರೂ.ಗಳ ಆಮಿಷ ಒಡ್ಡಿದರು. ನಿರಾಕರಿಸಿದಾಗ ಬೆದರಿಕೆ ಹಾಕಿದರು. ನಾನು ಜಗ್ಗಲಿಲ್ಲ. ತಿರುಗಿ ಅವರು ನಡೆಸಿರುವ ದುರ್ವವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಮಾಡಿದೆ. ಪಿ.ಎಫ್ ಹಣವನ್ನು ಕಾರ್ಮಿಕರಿಂದ ೧೨%, ಮಾಲೀಕರಿಂದ ೩೧% ಸಂಗ್ರಹಿಸಲಾಗುತ್ತದೆ. ಈ ಎರಡೂ ಹಣವನ್ನು ಕಟ್ಟಿಲ್ಲ. ಆ ಬಗ್ಗೆ ತನಿಖೆ ನಡೆಯುತ್ತಿದೆ.
ಈಗ ನೀವು ಕೈಗೊಂಡಿರುವ ಕಾರ್ಯಗಳೇನು?
ಸಾಲಪ್ಪ ವರದಿ ಪ್ರಕಾರ ಪ್ರತಿ ೫೦೦ ಜನಕ್ಕೆ ಒಬ್ಬರು ಪೌರಕಾರ್ಮಿಕರನ್ನು ನೇಮಿಸಬೇಕು. ಆ ವರದಿ ಬಂದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬೀಳುತ್ತಿದ್ದ ಕಸ ೧೮೦೦ ಟನ್. ಈಗ ಅಲ್ಲಿ ಬೀಳುತ್ತಿರುವ ಕಸ ೪೫೦೦ ಟನ್. ಕಸ ಬೀಳುವುದು ಹೆಚ್ಚಾಗಿರುವಾಗ ೭೦೦ ಜನರಿಗೆ ಒಬ್ಬರು ಪೌರಕಾರ್ಮಿಕರನ್ನು ನೇಮಕ ಮಾಡಲು ಹೇಳಲಾಗಿದೆ. ೭೦೦ ಜನರಿಗೆ ಒಬ್ಬರಂತೆ ಮಾಡಿದರೆ ೬೦೦೦ ಜನ ಕೆಲಸ ಕಳೆದುಕೊಳ್ಳುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ, ಕಸ ಹೆಚ್ಚಿದಂತೆ ಪೌರಕಾರ್ಮಿಕರ ನೇಮಕಾತಿ ಹೆಚ್ಚಾಗಬೇಕು. ಅದಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಗುತ್ತಿಗೆ ಪದ್ಧತಿ ರದ್ದು ಮತ್ತು ಬೆಳಗಿನ ಉಪಹಾರದ ಆದೇಶ ಬಂದು ಒಂದು ವರ್ಷವಾದರೂ ಮೈಸೂರಿನಲ್ಲಿ ಜಾರಿಗೊಂಡಿಲ್ಲ. ಪ್ರತಿಭಟನೆ ಮಾಡಲು ದಸರಾ ಸಂದರ್ಭದಲ್ಲಿ ಕೆಲಸ ನಿಲ್ಲಿಸಿ ಮುಷ್ಕರ ಮಾಡುತ್ತಿದ್ದೇವೆ.
ಈ ವೃತ್ತಿಯಲ್ಲಿ ಜಾರಿಯಿರುವ ಅಸ್ಪೃಶ್ಯತೆ, ಜಾತೀಯತೆ ನಿವಾರಿಸಲು ನಿಮ್ಮ ಸಲಹೆ ಏನು?
ಪೌರಕಾರ್ಮಿಕರ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕು, ಆರೋಗ್ಯ ಭದ್ರತೆ ನೀಡಬೇಕು, ಬೇರೆ ವೃತ್ತಿಗಳನ್ನು(ತರಕಾರಿ, ಕಳ್ಳೆಕಾಯಿ ವ್ಯಾಪಾರ, ಕಟ್ಟಡ ಕೆಲಸ ಇತ್ಯಾದಿ) ಅವರಿಗೆ ಪರಿಚಯಿಸಬೇಕು, ಅರಿವು ಮೂಡಿಸಿ ಈ ಕೆಲಸದಿಂದ ಹೊರಬರುವಂತೆ ಮಾಡಬೇಕು, ಉತ್ತಮ ಸಂಬಳ ನೀಡಿದರೆ ಬೇರೆ ಜಾತಿಯವರೂ ಈ ಕೆಲಸಕ್ಕೆ ಬರುತ್ತಾರೆ.
ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಪದಾಧಿಕಾರಿಗಳಾದ ಕೆ.ಬಿ. ಓಬಳೇಶ್ ಅವರ ಸಂದರ್ಶನ
ಕೌಟುಂಬಿಕ ಹಿನ್ನೆಲೆ
ಕನ್ನಮಡಿ ಭೀಮಪ್ಪ ಓಬಳೇಶ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಮಾದಿಗ ಜಾತಿಗೆ ಸೇರಿದವರು. ತಂದೆ ಭೀಮಪ್ಪ ಮತ್ತು ತಾಯಿ ನರಸಮ್ಮ. ಇಬ್ಬರೂ ಅನಕ್ಷರಸ್ಥರು. ಹಳ್ಳಿಯಲ್ಲಿ ದನ ಸತ್ತರೆ ಎತ್ತುವ, ಯಾರಾದರೂ ತೀರಿಕೊಂಡಾಗ ತಮಟೆ ಬಾರಿಸುವಂತಹ ಬಿಟ್ಟಿ ಚಾಕರಿ ಮಾಡುತ್ತಿದ್ದವರು. ಇವರು ಮಾದಿಗರಲ್ಲೇ ದೊಡ್ಡ ಮಣೆಗಾರರು. ಹಾಗಾಗಿ ಇವರ ತಂದೆ ಹಟ್ಟಿಯಲ್ಲಿ ಜರುಗುವ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿದ್ದರು. ಇವರಿಗೆ ಸಿಕ್ಕ ಇನಾಮ್ತಿ ಜಮೀನು ಆಂಧ್ರದಲ್ಲಿತ್ತು. ಅದೊಂದು ಬರಡು ಭೂಮಿಯಾದ್ದರಿಂದ ಕೂಲಿಯನ್ನೇ ನಂಬಿದ್ದ ಕುಟುಂಬವದು. ಇರುವುದಕ್ಕೆ ಸಣ್ಣದೊಂದು ಮನೆ ಮಾತ್ರ ಇತ್ತು.
ಸಫಾಯಿ ಕರ್ಮಚಾರಿಗಳೊಂದಿಗಿನ ಸಂಬಂಧ ಹೇಗೆ ಆರಂಭವಾಯಿತು?
ನನ್ನ ತಾಯಿಯ ತೌರು ಮನೆಯವರಲ್ಲಿ ಅನೇಕರು ೬೦ರ ದಶಕದಲ್ಲಿಯೇ ಬೆಂಗಳೂರಿಗೆ ಬಂದು ಸ್ವಚ್ಛತೆಯ ಕೆಲಸ ಮಾಡಿಕೊಂಡಿದ್ದರು. ಆರಂಭದಲ್ಲಿ ಸಿಟಿ ಮಾರ್ಕೇಟಿನಲ್ಲಿ ಇದ್ದ ಹದಿಮೂರು ಸಾರ್ವಜನಿಕ ಶೌಚಾಲಯವನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ದಿನಕ್ಕೆ ೧೦೦-೧೫೦ ರೂ. ಸಂಪಾದಿಸುತ್ತಿದ್ದರು. ಮೊತ್ತಮೊದಲ ಬಾರಿಗೆ ತಮ್ಮದೆಂಬ ಕಾಸುಕಂಡ ಅವರೆಲ್ಲರೂ ಮುಂದೆ ನಿಧಾನವಾಗಿ ಊರಿನಿಂದ ಇತರರನ್ನು ಇಲ್ಲಿಗೆ ಕರೆಸಿಕೊಂಡರು. ಲಾಲ್‌ಬಾಗ್ ಬಳಿ ಇರುವ ಸಿದ್ಧಾಪುರ ಕೆರೆ ಬಯಲಿನಲ್ಲಿ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದರು. ನಿಧಾನವಾಗಿ ಪಾಲಿಕೆಯಲ್ಲಿ ದಿನಗೂಲಿಗಳಾಗಿ ಸೇರಿಕೊಂಡರು. ಮುಂದೆ ಸಾಲಪ್ಪ ಸಮಿತಿ ವರದಿ ಅನ್ವಯ ಕೆಲವರು ಖಾಯಂ ನೌಕರರಾದರು.
ನಾನು ಎಸ್.ಎಸ್.ಎಲ್.ಸಿಯವರೆಗೂ ಓದಿದ್ದೆ. ನಮ್ಮ ಸೋದರಮಾವ ಕೆಲಸ ಕೊಡಿಸಲು ಬೆಂಗಳೂರಿಗೆ ಕರೆದುಕೊಂಡು ಬಂದರು. ಒಂದು ಜೊತೆ ಬಟ್ಟೆಯಲ್ಲಿ ಅಪ್ಪ ಕೊಟ್ಟ ೫೦ರೂ. ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನನ್ನ ಮಾವ ನನಗೆ ಕೊಡಿಸಿದ್ದು ಮಟನ್ ಶಾಪಿನಲ್ಲಿ ಕಸ ಎತ್ತುವ ಕೆಲಸವನ್ನು. ಮೊದಲ ದಿನವೇ ಅಸಿಸಿ ಎನಿಸಿತು. ಅಲ್ಲದೆ ತುಮಕೂರಿನಲ್ಲಿ ಓದುವಾಗ ದಲಿತ ಸಂಘರ್ಷ ಸಮಿತಿಯ ಸಭೆಗಳಿಗೆ ಹೋಗುತ್ತಿದ್ದೆ, ಕರಪತ್ರಗಳನ್ನು ಓದುತ್ತಿದ್ದೆ. ಇಂತಹ ಕೆಲಸ ಮಾಡಬಾರದೆಂಬುದು ತಿಳಿದಿತ್ತು. ಹಾಗಾಗಿ ಮೂರನೇ ದಿನಕ್ಕೆ ಕೆಲಸ ಬಿಟ್ಟು ಓಡಿಹೋದೆ. ಜೇಬಿನಲ್ಲಿ ೧೦೦-೧೫೦ರೂ. ಇತ್ತು. ದುಡ್ಡು ಖರ್ಚಾಗುವವರೆಗೂ ಅಂಡಲೆದುಕೊಂಡು ಇದ್ದೆ. ಒಂದಷ್ಟು ಹುಡುಗರು ಪರಿಚಯವಾದರು. ಸಂಜಯ್ ಗಾಂಧಿ ಆಸ್ಪತ್ರೆ ಕಟ್ಟಡದ ಕೆಲಸ ನಡೆಯುತ್ತಿತ್ತು. ಎಲ್ಲರೂ ಅಲ್ಲಿ ಹೋಗಿ ಮಲಗುತ್ತಿದ್ದೆವು. ಅಲ್ಲಿದ್ದ ವಾಚ್‌ಮನ್ ಕೃಷ್ಣಪ್ಪ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಹೋಗಿ ಕೆಲಸ ಕೇಳಲು ಹೇಳಿದರು. ನಿಮ್ಹಾನ್ಸ್ನ ಡೈರೆಕ್ಟರ್ ಮನೆಯಲ್ಲಿ ಕಸ ಹೊಡೆಯುತ್ತಿದ್ದವರನ್ನು ಪರಿಚಯಿಸಿದರು. ಅವರು ಸ್ಪೆಷಲ್ ವಾರ್ಡಿನಲ್ಲಿರುತ್ತಿದ್ದ ಶ್ರೀಮಂತ ರೋಗಿಗಳನ್ನು ನೋಡಿಕೊಳ್ಳುವ ಕೆಲಸ ಕೊಡಿಸಿದರು. ದಿನಕ್ಕೆ ೧೦ರೂ. ಕೊಡುತ್ತಿದ್ದರು. ರೋಗಿಯ ಮನೆಯವರು ಕೊಡುತ್ತಿದ್ದ ಊಟವನ್ನೇ ಮಾಡಿಕೊಂಡು, ರೋಗಿಗಳನ್ನು ನೋಡಿಕೊಂಡು ರಾತ್ರಿ ಆಸ್ಪತ್ರೆ ಮೂಲೆಗಳಲ್ಲಿ ಮಲಗಿ ಕಾಲ ಕಳೆಯುತ್ತಿದ್ದೆ. ಅಲ್ಲಾಗಲೇ ನಿಮ್ಹಾನ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ೭೦-೮೦ ಮಂದಿ ಹುಡುಗರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ಖಾಯಂ ನೌಕರರಿಗಾಗಿ ಭಾರತೀಯ ಮಜ್ದೂರ್ ಸಭಾ ಕೆಲಸ ಮಾಡುತ್ತಿತ್ತು. ಆ ಸಂಘ, ನಮ್ಮನ್ನು ಸಂಘಟಿಸಿ ಖಾಯಮಾತಿಗಾಗಿ ಧರಣಿ ಮಾಡಿಸಿದಾಗ ನಮ್ಮನ್ನು ಕೆಲಸದಿಂದ ಉಚ್ಛಾಟಿಸಲಾಯಿತು. ನಾನು ಈ ಮೊದಲೆ ಮಾವನ ಮನೆಗೆ ಬಂದು ಸೇರಿಕೊಂಡಿದ್ದೆ. ಹೇಮಲತಾ ಎಂಬ ಮಕ್ಕಳ ವೈದ್ಯರೊಬ್ಬರು ಅಲೆಕ್ಸಾಂಡರ್ ಸ್ಕೂಲ್ ಆಫ್ ಆಪರೇಟಿಂಗ್ ರೂಮ್ ಟೆಕ್ನಾಲಜಿಗೆ ಸೇರಿಸಲು ಧನಸಹಾಯ ಮಾಡಿದರು. ನಾನು ಪಿಯುಸಿ ಮುಗಿಸಿರಲಿಲ್ಲ. ಆದ್ದರಿಂದ ಅಲ್ಲಿಯವರು ನನ್ನನ್ನು ಫ್ರೇಜûರ್ ಟೌನಿನಲ್ಲಿದ್ದ ಸಂತೋಷ್ ಆಸ್ಪತ್ರೆಗೆ ಸೇರಲು ಹೇಳಿದರು. ಒಂದು ವರ್ಷ ಸಂಬಳವಿಲ್ಲದೆ ಕೆಲಸ ಕಲಿಯಬೇಕು, ಊಟ-ತಿಂಡಿ ಕೊಡುತ್ತೇವೆ, ಒಂದು ವರ್ಷದ ನಂತರ ೮೦೦ರೂ. ಸಂಬಳ ಕೊಡುತ್ತೇವೆ ಎಂದು ಹೇಳಿದರು. ಒಂದು ವರ್ಷದ ಖರ್ಚಿಗೆ ಮಾವ ಸಹಾಯ ಮಾಡಿದರು. ಅಲ್ಲಿ ನಾನು ಕೆಲಸವನ್ನು ಚೆನ್ನಾಗಿ ಕಲಿತೆ. ಮುಂದೆ ೨೦೦೦ರೂ ಸಂಬಳ ಕೊಟ್ಟರು. ಸರ್ಜರಿಗೆ ಬಳಸುವ ಉಪಕರಣಗಳನ್ನು ಸ್ಟರಿಲೈe಼ï ಮಾಡುವುದು, ಓಟಿ ರೂಮನ್ನು ಸ್ಟರಿಲೈe಼ï ಮಾಡುವುದು, ಆಪರೇಷನ್ ನಡೆಯುವಾಗ ಸಹಾಯ ಮಾಡುವುದನ್ನೆಲ್ಲ ಅಚ್ಚುಕಟ್ಟಾಗಿ ಮಾಡುತ್ತಿದ್ದೆ. ಎರಡು ವರ್ಷದ ನಂತರ ಬೆಂಗಳೂರ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ಸೇರಿಕೊಂಡು ಎರಡು ವರ್ಷ ಕೆಲಸ ಮಾಡಿದೆ.
ಪೌರಕಾರ್ಮಿಕರನ್ನು ಸಂಘಟಿಸುವ ಕೆಲಸ ಎಲ್ಲಿಂದ ಆರಂಭವಾಯಿತು?
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿವಿಧ ಸಂಘಟನೆಗಳ ಪರಿಚಯವಾಯಿತು. ಇಲ್ಲಿರುವ ಪೌರಕಾರ್ಮಿಕರಿಗೆ, ನಮ್ಮ ಊರಿನವರಿಗೆ ಏನಾದರೂ ಮಾಡಬೇಕೆನಿಸಿತು. ಇಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರು ಈ ಕೆಲಸಕ್ಕೆ ಸಂಪೂರ್ಣವಾಗಿ ಅಡ್ಜೆಸ್ಟ್ ಆಗಿಬಿಟ್ಟಿದ್ದರು. ಮನೆಯಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ, ಬೇರೆಯವರು ಕೊಟ್ಟದ್ದನ್ನೇ ತಿಂದು ಬದುಕುತ್ತಿದ್ದರು. ಬುಧುವಾರ, ಭಾನುವಾರ ಮಾತ್ರ ಮನೆಯಲ್ಲಿ ಮಾಂಸ ಮಾಡ್ತಾ ಇದ್ರು. ಬೆಳಗಿನ ಹೊತ್ತಿನ ಟೀಯನ್ನು ಸಹ ಹೋಟೆಲಿನಿಂದ ತರುತ್ತಿದ್ದರು. ಶನಿವಾರ ಮಾತ್ರ ಸ್ನಾನ ಮಾಡೋರು. ಬೆಳಗಿನ ಹೊತ್ತು ಟಿಫಿನ್ ಕ್ಯಾರಿಯರ್ ಹಿಡ್ಕೊಂಡು ಟೀ ತರಲು ಹೋಗುತ್ತಿದ್ದ ಚಿತ್ರ ಇನ್ನೂ ಕಣ್ಣ ಮುಂದಿದೆ. ಕುಡಿತ ಜಾಸ್ತಿ ಇತ್ತು, ವಯಸ್ಸಿಗೆ ಮೊದ್ಲು ಸಾಯೋರು. ನಮ್ಮ ಚಿಕ್ಕಪ್ಪ ಒಬ್ಬ ಪಿಟ್‌ಗುಂಡಿ ಕ್ಲೀನ್ ಮಾಡೋಕೆ ಹೋಗ್ತಾ ಇದ್ದ. ನನಗೆ ಗೊತ್ತೆ ಇರಲ್ಲಿಲ್ಲ, ಸಂಜೆ ಆದ್ರೆ ಹೋಗೋನು. ಬಂದ ದುಡ್ಡಲ್ಲಿ ಚೆನ್ನಾಗಿ ಕುಡ್ದು, ಸ್ವಲ್ಪ ದುಡ್ಡು ಮನೆಗೆ ಕೊಡೋನು. ನಮ್ಮ ಅಣ್ಣ ಒಬ್ಬ ಖಾಯಂ ನೌಕ್ರಿ ಮಾಡ್ತ ಇದ್ದ. ಆದ್ರೂ ರಾತ್ರಿ ಹೊತ್ತು ಪಿಟ್‌ಗುಂಡಿ ಕ್ಲೀನ್ ಮಾಡೋಕೆ ಹೋಗ್ತಾ ಇದ್ದ. ಅಲ್ದೆ ಕೃಪಾನಿಧಿ ಕಾಲೇಜ್‌ನ ಹಾಸ್ಟೆಲ್‌ನಲ್ಲಿ ಕೊಡೋ ವೇಸ್ಟ್ ಊಟ ತಗೊಂಡು ಹಂದಿ ಸಾಕೋರಿಗೆ ಕೊಟ್ಟು ೫೦ರೂ. ಸಂಪಾದಿಸ್ತಿದ್ದ. ಜೊತಗೆ ಹಳೇಪ್ಲಾಸ್ಟಿಕ್ ಬಕೇಟು, ಪೇಪರ್ ಸಂಗ್ರಹಿಸಿ ಮಾರಾಟ ಮಾಡ್ತಿದ್ದ. ಹಿಂಗೆ ದುಡ್ ಸಂಪಾದ್ನೆ ಮಾಡಿ ಮನೆ ಕಟ್ಟಿಸಿದ. ಮಕ್ಕಳು ಸ್ಕೂಲಿಗೆ ಹೋಗುತ್ತಿರಲಿಲ್ಲ. ಇಂಗ್ಲಿಷ್ ಸ್ಕೂಲಿಗೆ ಹೋದ್ರೆ ಮಕ್ಳು ಈ ಕೆಲ್ಸ ಮಾಡೋದ್ ಬಿಟ್ಟು ಎಂ.ಜಿ ರೋಡ್ (ಬೆಂಗಳೂರಿನ ಪ್ರತಿಷ್ಟಿತ ಏರಿಯಾ) ಸುತ್ತೋಕೆ ಓಯ್ತರೆ ಎಂದು ನನ್ನ ಮಾವ ಹೇಳುತ್ತಿದ್ದರು. ನಾವ್ಯಾಕೆ ಹೀಗೆ? ಎಂದು ನಿರಂತರ ಕಾಡುತ್ತಿತ್ತು. ಮನೇಲಿ ಅಡ್ಗೆ ಮಾಡ್ದೆ ಇದ್ದಿದ್ದು, ಬೇರೆಯವರು ಕೊಡೋ ಊಟ ತರೋದು ಸಿಟ್ ಬರ್‌ಸ್ತಾ ಇತ್ತು.
೧೯೯೩ರಲ್ಲಿ ನಕ್ಸಲರು ಮಾಡಿದ ಕೊಲೆಗೆ ಅನುಮಾನಿಸಿ ನಮ್ಮ ಊರಿನ ಹಟ್ಟಿಗೆ ಬೆಂಕಿ ಇಟ್ಟಿದ್ದರು. ದೊಡ್ಡ ಗಲಾಟೆ ಆಯಿತು. ಆ ಪ್ರಕರಣ ಕುರಿತು ವರದಿ ಮಾಡಲು ಬಂದವರ ಪರಿಚಯವಾಯಿತು. ಅವರ ಮೂಲಕ ನಕ್ಸಲರ ಹೋರಾಟದ ಬಗ್ಗೆ ತಿಳಿಯಿತು. ನಮ್ಮವರಿಗೆ ಅನ್ಯಾಯವಾಗುವ ಸಂಘ ಯಾಕೆ ಬೇಕು, ನಮ್ಮವರಿಗಾಗಿ ನಾವೇ ಸಂಘಟಿತರಾಗಬೇಕೆನಿಸಿತು. ನಾನಾಗಲೇ ಲಕ್ಕಸಂದ್ರ ಬಿಟ್ಟು ಕೋರಮಂಗಲ ಸ್ಲಂನಲ್ಲಿ ವಾಸಿಸುತ್ತಿದ್ದೆ. ಕರ್ನಾಟಕ ಯುವಜನಸಂಘ ಆರಂಭಿಸಿದೆ. ಪ್ರಭಾಕರ್ ಮತ್ತು ಡಾಮಿನಿಕ್ ಅವರು ಹ್ಯೂಮನ್ ರೈಟ್ಸ್ ಫೆಡರೇಷನ್ ಫಾರ್ ದಲಿತ್ ಲಿಬರೇಷನ್ ಆರಂಭಿಸಿದ್ದರು. ಕಿದ್ವಾಯಿ ಕೆಲಸ ಬಿಟ್ಟು ಈ ಸಂಸ್ಥೆ ಸೇರಿದೆ. ಅಲ್ಲಿ ನನಗೆ ಹೆಚ್ಚಿನ ಎಕ್ಸ್ಪೋಷರ್ ಸಿಕ್ಕಿತು. ೨೦೦೪ರಲ್ಲಿ ಬೆಜ್ವಾಡ್ ವಿಲ್ಸನ್ ಅವರನ್ನೂ ಭೇಟಿಯಾಗಿದ್ದೆ. ಹೆಚ್.ಆರ್.ಎಫ್.ಡಿ.ಎಲ್‌ನವರು ದಲಿತ್ ಫೌಂಡೇಷನ್ ಅನ್ನು ಪರಿಚಯಿಸಿದರು. ಅವರು ಪೌರಕಾರ್ಮಿಕರ ಅಧ್ಯಯನಕ್ಕಾಗಿ ಮೂರು ವರ್ಷಕ್ಕೆ ತಿಂಗಳಿಗೆ ೩೦೦೦ರೂ. ಫೆಲೋಷಿಪ್ ನೀಡಿದರು. ೨೦೦೬ರಲ್ಲಿ ತಮಟೆ ಎಂಬ ಟ್ರಸ್ಟ್ ಅನ್ನು ಕಾರ್ಮಿಕರೊಂದಿಗೆ ಸೇರಿ ಆರಂಭಿಸಿದೆ. ಫೌಂಡೇಷನ್‌ನ ಸಂತೋಷ್ ಅವರು ೯೦೦೦೦ ರೂ. ಧನಸಹಾಯವನ್ನು ನಮ್ಮ ಟ್ರಸ್ಟಿಗೆ ಕೊಡಿಸಿದರು. ಎರಡು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿ ಪಾವಗಡ ಮುನಿಸಿಪಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ಸಂಘಟಿಸಿದೆ. ಪಿಟ್‌ಗುಂಡಿ ಕ್ಲೀನ್ ಮಾಡುವವರ ಪಟ್ಟಿ ತಯಾರಿಸಿದೆವು. ೬೦ ಜನ ಮಲಬಾಚುವವರನ್ನು ಕೆಲಸ ಬಿಡಿಸಿದೆವು. ಅನೈರ್ಮಲ್ಯ ವೃತ್ತಿಯಲ್ಲಿರುವವರ ಮಕ್ಕಳಿಗೆ ನೀಡುವ ಸ್ಕಾಲರ್‌ಶಿಪ್ ೧೩೦೦ರೂ. ಸಿಗುವಂತೆ ಮಾಡಿದೆವು. ಆ ದುಡ್ಡಿನಲ್ಲಿ ಒಬ್ಬ ಮೇಕೆ ಕೊಂಡುಕೊಂಡ, ಮತ್ತೊಬ್ಬ ಬಾಳೆಹಣ್ಣಿನ ವ್ಯಾಪಾರ ಆರಂಭಿಸಿದ. ಮತ್ತೊಬ್ಬ ಶನಿಮಹಾತ್ಮನ ಗುಡಿ ಹತ್ತಿರ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಾನೆ. ಹೀಗೆ ಒಟ್ಟು ಹದಿನೆಂಟು ಕುಟುಂಬಗಳು ಪರ್ಯಾಯ ಕೆಲಸಗಳನ್ನು ಹುಡುಕಿಕೊಂಡವು. ಇನ್ನೂ ಹಲವರಿಗೆ ಪರ್ಯಾಯಗಳು ಸಿಗಬೇಕಾಗಿದೆ.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ಬಗ್ಗೆ ಹೇಳಿ
ಜುಲೈ ೨೩, ೨೦೧೦ರಲ್ಲಿ ಸವಣೂರಿನಲ್ಲಿ ದಲಿತರು ತಮ್ಮ ಮನೆ ಎತ್ತಂಗಡಿಯಾಗುವುದರ ವಿರುದ್ಧ ಮೈಮೇಲೆ ಮಲಸುರಿದುಕೊಂಡು ಪ್ರತಿಭಟಿಸಿದರು. ಇವರಿದ್ದ ಮನೆಯು ನಗರ ಬೆಳೆದಂತೆ ನಗರದ ಮಧ್ಯಕ್ಕೆ ಬಂತು. ಇದನ್ನು ಸಹಿಸದ ಮೇಲ್ಜಾತಿಯವರು ಅವರನ್ನು ತೆರವುಗೊಳಿಸಲು ಒತ್ತಡಹಾಕಿದ್ದರಿಂದ ಪಾಲಿಕೆಯವರು ಅವರ ಮನೆಗಳನ್ನು ಕೆಡವಲು ಹೋಗಿದ್ದರು. ಸಂಘಟನೆಗಳ ಬೆಂಬಲದಿಂದ ಅದು ತಪ್ಪಿತು. ಆ ಪ್ರಕರಣವು ನಮ್ಮನ್ನು ಹೆಚ್ಚು ಆಘಾತಗೊಳಿಸಿತು. ಮಲಬಾಚುವ ಕೆಲಸ ಮಾಡುವ ಭಂಗಿಗಳು, ಮೆಹ್ತಾರರು ಇತ್ಯಾದಿ ಕೆಳಜಾತಿಯವರನ್ನು ಸಂಘಟಿಸುವ ಕೆಲಸವನ್ನು ತೀವ್ರಗೊಳಿಸುವ ಅಗತ್ಯವನ್ನು ಮನಗಂಡು ಕಾವಲು ಸಮಿತಿಯನ್ನು ರಚಿಸಲಾಯಿತು. ಮಲಬಾಚುವವರಿಗೆ ಒಂದು ವೇದಿಕೆಯನ್ನು ನಿರ್ಮಿಸುವುದು, ಅವರನ್ನು ಆ ವೃತ್ತಿಯಿಂದ ಹೊರತರುವುದು ಸಮಿತಿಯ ಉದ್ದೇಶವಾಗಿತ್ತು. ರಾಮಚಂದ್ರ, ಚಂದ್ರಶೇಖರ್, ಪದ್ಮ ಹಾಗೂ ಇತರರು ಸಮಿತಿಯಲ್ಲಿ ಸಕ್ರಿಯರಾಗಿದ್ದಾರೆ. ನಾನು ರಾಜ್ಯ ಸಂಚಾಲಕನಾಗಿದ್ದೇನೆ. ಮೊದಲಿಗೆ ನಾವು ಮಾಡಿದ ಕೆಲಸವೆಂದರೆ ಮಲಬಾಚುವುದನ್ನು ನಿಷೇಧಿಸಲು ಇದ್ದ ಕಾನೂನಿನ ನ್ಯೂನತೆಗಳನ್ನು ಸರಿಪಡಿಸುವುದು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಫಾಯಿ ಕರ್ಮಚಾರಿ ಆಂಧೋಲನವು ಸಕ್ರಿಯವಾಗಿತ್ತು. ಆ ಆಂದೋಲನದಲ್ಲಿ ನಮ್ಮ ಸಂಘ ಕರ್ನಾಟಕವನ್ನು ಪ್ರತಿನಿಧಿಸಿತು.
ಮಲಬಾಚುವ ಪದ್ಧತಿಯ ನಿರ್ಮೂಲನೆಗೆ ನಿಮ್ಮ ಸಲಹೆಗಳೇನು?
ಕಾಯ್ದೆಗೆ ಸೂಕ್ತವಾದ ತಿದ್ದುಪಡಿ ತರಬೇಕು. ಮಲದಗುಂಡಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ಯಾಂತ್ರೀಕೃತಗೊಳಿಸಬೇಕು, ಪರಿಣಾಮಕಾರಿಯಾದ ಪುನರ್ವಸತಿಯನ್ನು ಕಲ್ಪಿಸಬೇಕು. ೨೦೧೩ರಲ್ಲಿ ತಿದ್ದುಪಡಿ ತಂದಮೇಲೂ ಕೆಲವು ನ್ಯೂನತೆಗಳಿವೆ. ಹೊಸ ಕಾನೂನು ವೃತ್ತಿ ನಿರ್ಮೂಲನೆ, ತಡೆಯುವ ಕ್ರಮಗಳು, ಪುನರ್ವಸತಿ ಮತ್ತು ಕಾನೂನಾತ್ಮಕ ದಂಡನೆ ಕುರಿತು ಹೇಳುತ್ತದೆ. ಆದರೆ ಇದನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಗತ್ಯವಾದ ಕ್ರಿಯಾಯೋಜನೆಯನ್ನೇ ಮಾಡಿಲ್ಲ. ಜಾರಿಗೊಳಿಸುವ ಯೋಜನೆ ಮತ್ತು ಹಣದ ಅವಶ್ಯಕತೆ ಇದೆ. ಕಾಯ್ದೆಯಲ್ಲಿ ಜಿಲ್ಲಾಧಿಕಾರಿಗಳೇ ಕಾಯ್ದೆಯನ್ನು ಜಾರಿಗೊಳಿಸುವವರಾಗಿದ್ದಾರೆ. ಆದರೆ ಜಾರಿಗೊಳಿಸದಿದ್ದರೆ ಶಿಕ್ಷೆ ಏನು ಎಂಬುದನ್ನು ಕಾಯ್ದೆಯು ಹೇಳಿಲ್ಲ. ಈ ಕಾಯ್ದೆಯೊಂದಿಗೆ ಇನ್ನೂ ಬೇರೆ ಮಂಡಳಿಗಳೊಂದಿಗೆ ಸಂಪರ್ಕ ಕಲ್ಪಿಸಬೇಕು. ಉದಾಹರಣೆಗೆ ಸಿವಿರೇಜ್ ಪ್ಲಾಂಟುಗಳ ಮೇಲ್ವಿಚಾರಣೆಯನ್ನು ಪರಿಸರ ಮಾಲಿನ್ಯ ಮಂಡಳಿಯವರಿಗೆ ವಹಿಸಬೇಕು. ಉಲ್ಲಂಘಿಸುವುದನ್ನು ಕಾಯ್ದೆ ಅಡಿ ತರಬೇಕು. ಬೆಂಗಳೂರಿನಲ್ಲಿ ೧೯೮ ವಾರ್ಡುಗಳಿವೆ. ೯೮ವಾರ್ಡುಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ಅಪಾರ್ಟ್ಮೆಂಟುಗಳಲ್ಲಿ ಸಿವಿರೇಜ್ ಟ್ರೀಟ್‌ಮೆಂಟ್ ಪ್ಲಾಂಟುಗಳಿವೆ, ಮನೆಗಳಲ್ಲಿ ಪಿಟ್‌ಗುಂಡಿಗಳಿವೆ. ಇವುಗಳ ಸ್ವಚ್ಛತೆ ಕುರಿತಂತೆ ಯಾವ ನಿಯಮಗಳಿಲ್ಲ. ಇಂತಹ ನ್ಯೂನತೆಗಳನ್ನು ಸರಿಪಡಿಸಿ ಭದ್ರವಾದ ಕಾಯ್ದೆಯನ್ನು ಜಾರಿಗೊಳಿಸಬೇಕು.
ಕಾರ್ಮಿಕರ ಪರಿಸ್ಥಿತಿ ಬದಲಾಗಬೇಕಾದರೆ ಬಲವಂತವಾಗಿ ಈ ವೃತ್ತಿಗೆ ತಳ್ಳುವುದನ್ನು ತಪ್ಪಿಸಬೇಕು. ಕಾರ್ಮಿಕರ ಸ್ಥಿತಿಗೆ ನಾಗರಿಕರು ಮತ್ತು ಅಧಿಕಾರಿಗಳಲ್ಲಿ ನೈತಿಕತೆಯ ಕೊರತೆಯು ಕಾರಣವಾಗಿದೆ. ಉದಾಹರಣೆಗೆ ನೋಡುವುದಾದರೆ ಬೆಂಗಳೂರಿನ ಪ್ರತಿಷ್ಟಿತ ವಸತಿ ಸಂಕೀರ್ಣದ ಸಿವೇಜ್ ಟ್ರಿಟ್‌ಮೆಂಟ್ ಪ್ಲಾಂಟ್‌ನಲ್ಲಿ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಶಿಕ್ಷಿತ, ಶ್ರೀಮಂತ, ಕಾನೂನಿನ ತಿಳುವಳಿಕೆ ಇರಬೇಕಾದವರ ಅಸೂಕ್ಷö್ಮತೆಯನ್ನು ಇದು ತೋರಿಸುತ್ತದೆ. ಕಾರ್ಮಿಕರ ಕುರಿತು ಯಾವ ನೈತಿಕ ಜವಾಬ್ದಾರಿಯನ್ನು ಪ್ರತಿಷ್ಟಿತರು ಹೊಂದಿಲ್ಲ. ಹೆಚ್ಚೆಂದರೆ ಪರಿಹಾರವನ್ನು ಕೊಟ್ಟು ಕೈತೊಳೆದುಕೊಳ್ಳುತ್ತಾರಷ್ಟೆ. ಕಾರ್ಮಿಕರ ಪರಿಸ್ಥಿತಿಗೆ ತಾವೆಷ್ಟು ನೈತಿಕವಾಗಿ ಜವಾಬ್ದಾರರೆಂದು ಯೋಚಿಸುವುದಿಲ್ಲ. ಕಾಯ್ದೆಯ ಅನುಷ್ಟಾನ ಕುರಿತಂತೆ ಅಧಿಕಾರಿಗಳಲ್ಲಿಯೂ ಇಚ್ಛಾಶಕ್ತಿಯ ಕೊರತೆ, ನೈತಿಕ ಜವಾಬ್ದಾರಿಯ ಕೊರತೆ ಇದೆ. ಇದಕ್ಕೆ ದಲಿತ ಅಧಿಕಾರಿಗಳೂ ಹೊರತಲ್ಲ.
ಮಲಬಾಚುವ ಕೆಲಸ ಮಾಡುವವರ ಪರಿಸ್ಥಿತಿ ತೀರಾ ಕಠಿಣವಾಗಿದೆ. ಯಾಕೆಂದರೆ ಕಸ ಗುಡಿಸುವ ಪೌರಕಾರ್ಮಿಕರಿಗೆ ಮಾಲೀಕನೆಂಬುವವನು ಇರುತ್ತಾನೆ. ಮಲಬಾಚುವವರಿಗೆ ಹಾಗಲ್ಲ. ನಾಗರಿಕರು ಕರೆದರೆ ಹೋಗಿ ಸ್ವಚ್ಛಮಾಡುವ ಮಲಬಾಚುವವರಿಗೆ ಯಾರೂ ಜವಾಬ್ದಾರರೇ ಇಲ್ಲ. ಈ ಸ್ಥಿತಿ ಬದಲಾಗಬೇಕಾದರೆ ಮಲಬಾಚುವ ಕೆಲಸಗಾರರೆಲ್ಲರನ್ನೂ ಗುರುತಿಸಿ ಸೂಕ್ತವಾದ ಪುನರ್ವಸತಿ ಕಲ್ಪಿಸಬೇಕು. ಹಾಗೆಯೇ ಕಸಗುಡಿಸುವ ಪೌರಕಾರ್ಮಿಕರಿಗೆ ಸಂಬಂಧಪಟ್ಟಂತೆ ಪ್ರತ್ಯೇಕವಾದ, ಸಮಗ್ರವಾದ ಕಾಯ್ದೆಯನ್ನು ತರುವ ಅವಶ್ಯಕತೆಯಿದೆ. ಪೌರಕಾರ್ಮಿಕರು ಪಾಲಿಕೆಗಳಲ್ಲದೆ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಲಾಡ್ಜ್ಗಳು, ಏರ್ ಪೋರ್ಟುಗಳು ಇತ್ಯಾದಿಯೆಡೆ ಕೆಲಸ ಮಾಡುತ್ತಾರೆ. ಎಲ್ಲ ಕಡೆ ಸ್ವಚ್ಛತೆಯ ಕೆಲಸವನ್ನು ಮಾಡುವವರನ್ನು ಒಳಗೊಂಡ ಕಾಯ್ದೆಯ ಅಗತ್ಯವಿದೆ. ಇಲ್ಲಿಯವರೆಗೂ ಅವರಿಗಾಗಿ ಕಾಯ್ದೆ ಇಲ್ಲ.
ಕಾರ್ಮಿಕರೂ ಸಹಿತ ಬದಲಾಗಬೇಕು. ಮುಂದಿನ ಅಪಾಯದ ಅರಿವಿಲ್ಲದೆ ತಕ್ಷಣದ ಹೊಟ್ಟೆಪಾಡಿಗಾಗಿ ಆ ಕೆಲಸ ಮಾಡಲು ಹೋಗುತ್ತಾರೆ. ತಿಂಗಳೆಲ್ಲ ದುಡಿಯುವುದಕ್ಕಿಂತ ದಿನಕ್ಕೆ ನಾಲ್ಕು ಪಿಟ್ ಕ್ಲೀನ್ ಮಾಡಿದರೆ ೮-೧೦ಸಾವಿರದವರೆಗೂ ಸಂಪಾದನೆ ಮಾಡುವುದು ಸಲುಭವೆಂದು ಭಾವಿಸುತ್ತಾರೆ. ಕಾರ್ಮಿಕರಿಗೆ ಸರಿಯಾಗಿ ಮನವರಿಕೆ ಮಾಡುವ ಕೆಲಸವನ್ನು ಆಂದೋಲನದ ಮಾದರಿಯಲ್ಲಿ ಮಾಡಬೇಕಾಗಿದೆ.
ಸಫಾಯಿ ಕರ್ಮಚಾರಿಗಳ ಪರಿಸ್ಥಿತಿಯ ಬದಲಾವಣೆಯಲ್ಲಿ ಸಂಶೋಧನೆಯು ಯಾವ ಪಾತ್ರ ವಹಿಸಬಹುದು?
ಪಿಹೆಚ್.ಡಿ ಪ್ರಬಂಧಗಳಿಂದ ಕಾರ್ಮಿಕರಿಗೆ ಯಾವ ಅನುಕೂಲವೂ ಆಗಿಲ್ಲ. ಯಾಕೆಂದರೆ ಅವುಗಳು ಪ್ರಬಂಧಗಳಾಗಿವೆಯೇ ಹೊರತು ಆಕ್ಷನ್ ರಿಸರ್ಚ್ಗಳಾಗಿಲ್ಲ. ರಿಸರ್ಚುಗಳು ಕೇವಲ ಓದುವ ಪುಸ್ತಕಗಳಾಗಿವೆ; ಅವು ಬದುಕುಗಳನ್ನು ಬದಲಾಯಿಸುವ ಪುಸ್ತಕಗಳಾಗಬೇಕು. ಕಾರ್ಮಿಕರೊಂದಿಗೆ ಕೆಲಸಮಾಡುತ್ತಲೇ ಪ್ರಬಂಧ ಬರೆಯುವಂತೆ ರಿಸರ್ಚ್ ಮಾದರಿಗಳು ಬದಲಾಗಬೇಕು.
ಸಫಾಯಿ ಕರ್ಮಚಾರಿಗಳ ಪರಿಸ್ಥಿತಿಯ ಬದಲಾವಣೆಯಲ್ಲಿ ದಲಿತರ ಪಾತ್ರವೇನು?
ಸಫಾಯಿ ಕರ್ಮಚಾರಿಗಳ ವಿಷಯವು ದಲಿತ ಚಳುವಳಿಯ ಆದ್ಯತೆಯಾಗಬೇಕು. ಸಫಾಯಿ ಕರ್ಮಚಾರಿಗಳು ದಲಿತರಲ್ಲೇ ಅಸ್ಪೃಶ್ಯರಾಗಿದ್ದಾರೆ. ಕಾರ್ಮಿಕರು ಸಾರ್ವಜನಿಕರಿಂದ, ಸರ್ಕಾರದಿಂದ ಮತ್ತು ದಲಿತ ಸಮುದಾಯದಿಂದಲೇ ಅಸ್ಪೃಶ್ಯತೆಯನ್ನು ಅನುಭವಿಸುವ ಸಫಾಯಿ ಕರ್ಮಚಾರಿಗಳನ್ನು ಮೊದಲು ದಲಿತ ಸಮುದಾಯದವರೇ ತಮ್ಮವರೆಂದು ಅಪ್ಪಿಕೊಳ್ಳಬೇಕು. ಅವರ ಹೋರಾಟವನ್ನು ಆದ್ಯತೆಯಾಗಿ ಪರಿಗಣಿಸಿ ಬೆಂಬಲಿಸಬೇಕು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸ್ಥಾಪಕ ಸದಸ್ಯರಾದ ಪದ್ಮ ಅವರ ಸಂದರ್ಶನ
ಪದ್ಮ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂರ‍್ಸ್ಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಬಂದಿರುವ ಅವರು ಕಳೆದ ಹತ್ತು ವರ್ಷಗಳಿಂದ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ಯ ಮೂಲಕ ಮ್ಯಾನ್ಯುವಲ್ ಸ್ಕಾö್ಯವೆಂರ‍್ಸ್ಗಳನ್ನು ಸಂಘಟಿಸುತ್ತಿದ್ದಾರೆ. ಮಲಬಾಚುವ ಪದ್ಧತಿ ತಡೆಗಟ್ಟಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಸ್ಥಾಪಿಸಿರುವ ‘ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ರಾಜ್ಯ ಮೇಲ್ವಿಚಾರಣಾ ಸಮಿತಿ’ಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಯಾರ ಗಮನಕ್ಕೂ ಬರದೆ ಮ್ಯಾನ್ ಹೋಲ್ ಮತ್ತು ಮಲದ ಗುಂಡಿಗಳಲ್ಲಿ ಬಿದ್ದು ಸಾಯುತ್ತಿದ್ದ ಕಾರ್ಮಿಕರ ಕುರಿತ ಅಧಿಕೃತ ದಾಖಲೆಗಳನ್ನು ನಿರ್ಮಿಸುವ, ಹತ್ತು ಲಕ್ಷ ರೂ.ಗಳ ಮರಣ ಪರಿಹಾರ ಪಡೆಯುವ ಮತ್ತು ಮಲಬಾಚುವ ಕೆಲಸಗಾರರ ನೇಮಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ೨೦೧೩ನ್ನು ಜಾರಿಗೊಳಿಸುವ ಕೆಲಸದಲ್ಲಿ ಅವರ ಸಂಘಟನೆಯು ಮಹತ್ವದ ಪಾತ್ರವಹಿಸಿದೆ. ಪ್ರಸ್ತುತ ಅವರ ಸಂಘಟನೆಯು ಕಾಯ್ದೆ ಮತ್ತು ಕಾರ್ಮಿಕರ ಪುನರ್ವಸತಿಯ ಪರಿಣಾಮಕಾರಿ ಜಾರಿಗಾಗಿ ಕೆಲಸ ಮಾಡುತ್ತಿದೆ. ದನಿಯಿಲ್ಲದ, ದಮನಿತ ಮತ್ತು ಅಲಕ್ಷ್ಯಕ್ಕೆ ಒಳಗಾದ ನಿರಕ್ಷರ ಸಮುದಾಯವನ್ನು ಸಂಘಟಿಸುವುದು ಸವಾಲಿನ ಕೆಲಸ. ಅವರ ಮಾನವ ಹಕ್ಕುಗಳಿಗಾಗಿ ಪ್ರಭುತ್ವ ಮತ್ತು ಖಾಸಗಿ ಗುತ್ತಿದಾರರನ್ನು ಎದುರಿಸುವುದು ಸಾಹಸವೇ ಸರಿ. ಇಂತಹ ಸವಾಲು ಮತ್ತು ಸಾಹಸವನ್ನು ಒಬ್ಬ ದಲಿತ ಮಹಿಳೆಯಾಗಿ ತಮ್ಮ ಸಂಘಟನೆಯ ಸಂಗಾತಿಗಳೊಂದಿಗೆ ಪದ್ಮ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು, ಕೆಲವು ಗುರಿಗಳನ್ನು ಸಾಧಿಸಿರುವುದು ಮೈಲಿಗಲ್ಲಾಗಿದೆ. ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೆಳಗೆ ನೀಡಲಾಗಿದೆ.
ಮಲಬಾಚುವ ಕೆಲಸಗಾರರ ಹೋರಾಟದಲ್ಲಿ ಭಾಗಿಯಾಗಲು ಕಾರಣಗಳೇನು?
ಮಾದಿಗ ಜಾತಿಗೆ ಸೇರಿದವಳಾಗಿ ಮಲಬಾಚುವ ಕಾರ್ಮಿಕರ ಸಂಕಟವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನನ್ನ ಕುಟುಂಬವೇ ಈ ಕೆಲಸವನ್ನು ಮಾಡುತ್ತಿತ್ತು. ನನ್ನ ಕುಟುಂಬದವರು ರೆಡ್ಡಿಗಳ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡುತ್ತಿದ್ದರು. ಸತ್ತ ದನಗಳನ್ನು ಎತ್ತುವುದು, ಅವರ ಮನೆ ಮದುವೆ, ತಿಥಿಗಳಲ್ಲಿ ಕೆಲಸ ಮಾಡಿಕೊಡುವುದು, ಅವರಿಗೆ ಕಷ್ಟವೆನಿಸುವ, ಗಲೀಜೆನಿಸುವ ಕೆಲಸಗಳನ್ನೆಲ್ಲ ಮಾಡುವುದು ಬಿಟ್ಟಿ ಚಾಕರಿಯು ಒಳಗೊಂಡಿತ್ತು. ಈ ಕೆಲಸ ಮಾಡಿದರೆ ಸಿಗುತ್ತಿದ್ದುದು ತಂಗಳೂಟ. ಮದುವೆ, ಹಬ್ಬಗಳ ಸಂದರ್ಭಗಳಲ್ಲಿ ಬೇರೆ ಊರಿಗೆ ಹೋಗಿ ಉಳಿದ ಊಟವನ್ನು ತರುತ್ತಿದ್ದರು. ಹಳಸಿದ್ದನ್ನು ಉಂಡಿರುವುದು ಎಷ್ಟು ಸಲ ಎಂಬುದು ಲೆಕ್ಕವಿಲ್ಲ. ನೀರಿಗೆ ಬೊಗಸೆ ಒಡ್ಡಿದರೆ, ಕಾಫೀ, ಟೀಗೆ ತೆಂಗಿನ ಚಿಪ್ಪು ಒಡ್ಡಬೇಕಾಗಿತ್ತು.
ನಾನು ಸಣ್ಣ ವಯಸ್ಸಿನಿಂದಲೇ ದಲಿತ ಸಂಘರ್ಷ ಸಮಿತಿ ಹೋರಾಟವನ್ನು ನೋಡಿಕೊಂಡೇ ಬೆಳೆದವಳು. ದಲಿತ ಸಂಘರ್ಷ ಸಮಿತಿಯ ಹಾಡು, ಜಾಥಾ, ಸಭೆಗಳು, ಪ್ರತಿಭಟನೆಗಳು ಜಾಗೃತಿ ಮೂಡಿಸಿದವು. ನನ್ನ ತಂದೆ ಹೆಸರು ಮುನಿವೆಂಕಟಪ್ಪ. ಆದರೆ ಅವರನ್ನು ಮೇಲ್ಜಾತಿಯವರು ಮುನಿವೆಂಕಟಿಗ ಎಂದೇ ಕರೆಯುತ್ತಿದ್ದರು. ಊರಿನಲ್ಲಿ ಎಲ್ಲ ದಲಿತರನ್ನು ವರ‍್ಗಾö್ಯ, ತಿಮ್ಗಾö್ಯ, ಮುನಿಗ್ಯಾ ಎಂದು ಏಕವಚನದಲ್ಲಿಯೇ ಮಾತನಾಡಿಸುತ್ತಿದ್ದರು. ಗೌರವ ನೀಡುತ್ತಿರಲಿಲ್ಲ. ದಲಿತರು ವಯಸ್ಸಿನಲ್ಲಿ ದೊಡ್ಡವರಾದರೂ ಮೇಲ್ಜಾತಿಯ ಚಿಕ್ಕವಯಸ್ಸಿನವರನ್ನೂ ಸಹ ‘ಅಮ್ಮಾ’ ‘ಬುದ್ಧಿ’ ಎಂದು ಕರೆಯಬೇಕಾಗಿತ್ತು. ಜಾತಿ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸಂಘಟನೆ ಸಹಾಯ ಮಾಡಿತು. ನನ್ನ ತಂದೆಗೆÀ ಹತ್ತು ಎಕರೆ ಜಮೀನಿತ್ತು. ಅದನ್ನು ಮೇಲ್ಜಾತಿಯವರು ಎರಡು ಜೊತೆ ಬಟ್ಟೆ ಕೊಡಿಸಿ ಮೋಸದಿಂದ ಕಿತ್ತುಕೊಂಡಿದ್ದರು. ಹಾಗೆಯೇ ಹಲವು ದಲಿತರು ಮೋಸದಲ್ಲಿ ತಮ್ಮ ಜಮೀನನ್ನು ಕಳೆದುಕೊಂಡಿದ್ದರು. ಇಂತಹ ಸಮಸ್ಯೆಗಳನ್ನು ದಲಿತ ಸಂಘರ್ಷ ಸಮಿತಿ ಸಭೆಗಳಿಗೆ ಹೋಗಿ ಹೇಳುತ್ತಿದ್ದೆ; ಹಾಡುಗಳನ್ನು ಹಾಡುತ್ತಿದ್ದೆ. ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಹನ್ನೆರಡನೇ ವಯಸ್ಸಿನಲ್ಲೇ ವೇದಿಕೆಯ ಮೇಲೆ ಹಾಡುವಂತೆ ಮಾಡಿದರು.
ಕೆ.ಜಿ.ಎಫ್‌ನಲ್ಲಿ ಮಲಬಾಚುವ ಕಾರ್ಮಿಕರ ಪರಿಸ್ಥಿತಿ ಕುರಿತು ಹೇಳಿರಿ.
ಕೆ.ಜಿ.ಎಫ್ ಮತ್ತು ಮಾಲೂರಿನಲ್ಲಿ ಮಾದಿಗ ಜಾತಿಗೆ ಸೇರಿದವರೇ ಮಲಬಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಕೋಲಾರದಲ್ಲಿ ಬೋವಿಗಳು ಮಾಡುತ್ತಿದ್ದಾರೆ. ಬೋವಿಗಳು ಮಾದಿಗರ ಕೈಲಿ ಕೆಲಸ ಮಾಡಿಸುವುದೂ ಇದೆ. ಕೆ.ಜಿ.ಎಫ್ ಗಣಿಗಳಲ್ಲಿ ಮಲಬಾಚಿಸುವ ಸಲುವಾಗಿ ಆಂಧ್ರದಿಂದ ಮಾದಿಗರನ್ನು ಕರೆತರಲಾಯಿತು. ಬ್ರಿಟಿಷ್ ಕಂಪನಿಯು ನಾಮಕಾವಸ್ತೆಗಾದರೂ ಕೂಲಿ, ವಸತಿ, ಆಸ್ಪತ್ರೆ ಸೇವೆಯನ್ನು ಒದಗಿಸುತ್ತಿತ್ತು. ಆದರೆ ಗಣಿಗಳನ್ನು ಮುಚ್ಚಿದ ಮೇಲೆ ದಲಿತ ಕಾರ್ಮಿಕರ ಪರಿಸ್ಥಿತಿ ದಾರುಣವಾಯಿತು. ಮತದಾನದ ಹಕ್ಕು, ರೇಷನ್ ಕಾರ್ಡ್ನಂತಹ ಯಾವ ಹಕ್ಕುಗಳ ಬಗ್ಗೆಯೂ ಅವರಿಗೆ ಅರಿವಿರಲಿಲ್ಲ. ತಾವು ಈ ದೇಶದ ಪ್ರಜೆಗಳು ಎಂಬ ಅರಿವೂ ಇರಲಿಲ್ಲ. ಯಾರು ಕರೆದರೂ ಪಿಟ್ ಗುಂಡಿಗಳನ್ನು ಕ್ಲೀನ್ ಮಾಡಲು ಹೋಗುತ್ತಿದ್ದರು. ತೋಟಿಗ ಎಂದು ಹೀನಾಯವಾಗಿ ಅವರನ್ನು ಕರೆಯುತ್ತಾರೆ. ಅವರಲ್ಲಿ ಅಕಾಲಿಕವಾಗಿ ಸಾಯುವವರ ಸಂಖ್ಯೆ ಹೆಚ್ಚು. ಹಲವಾರು ಜನ ತೀರಿಕೊಂಡಿದ್ದಾರೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ. ತಮ್ಮ ಹಕ್ಕು ಸೌಲಭ್ಯಗಳಿಗಾಗಿ ಯಾರ ಬಳಿ ಹೋಗಬೇಕೆಂಬುದು ಅವರಿಗೆ ಗೊತ್ತಿರಲಿಲ್ಲ. ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಾರೆ. ಹಸಿವನ್ನು ಇಂಗಿಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಅವರಿಗೆ ತಿಳಿದಿಲ್ಲ. ಅವರು ವಾಸಿಸುತ್ತಿದ್ದ ಏರಿಯಾಗಳು ನಕ್ಷೆಯಲ್ಲೇ ಇರಲಿಲ್ಲ. ದಾರುಣವಾಗಿದ್ದ ಅವರ ಪರಿಸ್ಥಿತಿಯ ಬಗ್ಗೆ ಸರ್ಕಾರವಾಗಲಿ, ರಾಜಕೀಯ ನಾಯಕರುಗಳಾಗಲಿ ಕಾಳಜಿವಹಿಸಿಲ್ಲ.
ಇಂತಹ ಸ್ಥಿತಿಯಲ್ಲಿದ್ದ ಕಾರ್ಮಿಕರನ್ನು ಹೇಗೆ ಸಂಘಟಿಸಲಾಯಿತು?
ಆರಂಭದಲ್ಲಿ ತುಂಬಾ ಕಷ್ಟವಾಯಿತು. ಸುಲಭವಾಗಿ ನನ್ನನ್ನು ನಂಬಲಿಲ್ಲ. ನಿಧಾನವಾಗಿ ಅವರ ವಿಶ್ವಾಸ ಬೆಳೆಸಿಕೊಂಡೆ. ನನ್ನ ಜಾತಿಯ ಗುರುತು ಸಹಕಾರಿಯಾಯಿತು. ಸಂಘಟನೆ, ನಾಯಕತ್ವ, ಹಕ್ಕುಗಳಿಗಾಗಿ ಹೊರಾಡುವುದರ ಕಲ್ಪನೆ ಅವರಿಗಿರಲಿಲ್ಲ. ನಿಧಾನವಾಗಿ ತಿಳಿದುಕೊಳ್ಳುತ್ತಾ ಸಂಘಟಿತರಾಗತೊಡಗಿದರು. ಗಟ್ಟಿಯಾದಂತೆ ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು, ಎಂಎಲ್ಲೆಗಳ ಎದುರಿಸುವುದನ್ನು ಕಲಿತುಕೊಂಡರು. “ನೀವು ಮನುಷ್ಯರು, ನೀವು ಈ ದೇಶದ ಪ್ರಜೆಗಳು, ಮತದಾನ ನಿಮ್ಮ ಹಕ್ಕು, ವಸತಿ ನಿಮ್ಮ ಹಕ್ಕು” ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದೆ. ಅವರ ಕಾಲೋನಿಗಳಿಗೆ ಹೋದೆ. ಅವರ ಪರಿಸ್ಥಿತಿ, ಅವರ ಮಕ್ಕಳ ಶಿಕ್ಷಣ, ಹೊಟ್ಟೆಪಾಡು ಇತ್ಯಾದಿಗಳ ದಾಖಲೆ ಮಾಡಿದೆ. ಸಂಬಂಧಪಟ್ಟ ವರದಿಗಳನ್ನು ಅವರಿಗೆ ಓದಿ ಹೇಳುತ್ತಿದ್ದೆ. ಮಲಬಾಚುವ ಕೆಲಸ ಮಾಡಬಾರದು, ಆ ಕೆಲಸ ಮಾಡುವುದಕ್ಕಲ್ಲ ನಾವಿರುವುದು, ಯಾರೂ ಆ ಕೆಲಸ ಮಾಡಬಾರದು ಎಂದು ಹೇಳುತ್ತಿದ್ದೆ. ಅವರ ವಿಷಯ ಕುರಿತು ಸಾರ್ವಜನಿಕ ನ್ಯಾಯಾಲಯ ಕಾರ್ಯಕ್ರಮವನ್ನು ಆಯೋಜಿಸಿದೆ. ಮಲಬಾಚುವ ಪದ್ಧತಿ ಕೆ.ಜಿ.ಎಫ್.ನಲ್ಲಿದೆ ಎಂಬುದನ್ನು ಒಪ್ಪಲು ಯಾರೂ ಸಿದ್ಧರಿರಲಿಲ್ಲ. ಸರ್ಕಾರವೇ ಒಪ್ಪಲಿಲ್ಲ. ಆಫಿಡವಿಟ್ ಹಾಕಿದೆವು; ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತಂದೆವು.
ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಮಲಬಾಚುವ ಪದ್ಧತಿ ಬಗ್ಗೆ ತಿಳಿದುಕೊಳ್ಳಲು ಕೆ.ಜಿ.ಎಫ್.ಗೆ ಬಂದರು. ಅಲ್ಲಿನ ಪೊಲೀಸರು, ಪಾಲಿಕೆ ಅಧಿಕಾರಿಗಳು ಸಚಿವರನ್ನು ಭೇಟಿಯಾಗಲು ನಮ್ಮ ಸಂಘದ ಸದಸ್ಯರನ್ನು ಐಬಿಗೆ ಬರಲು ಹೇಳಿದರು. ಆ ಬಗ್ಗೆ ಪದಾಧಿಕಾರಿಗಳು ನನ್ನನ್ನು ಕೇಳಿದರು. “ನಮ್ಮ ಪರಿಸ್ಥಿತಿಯನ್ನು ತಿಳಿಯಬೇಕಾದರೆ ನಾವಿರುವಲ್ಲಿಗೇ ಅವರು ಬರಬೇಕು” ಎಂದು ಹೇಳಿದೆ. ಅವರು ಅಲ್ಲಿಗೆ ಬಂದಾಗ ನಾನು ಹೋದೆ. ನನ್ನ ಕೆಲಸದ ಬಗ್ಗೆ ವಿಚಾರಣೆ ಮಾಡಿದರು. ಮಲಬಾಚುವುದು ಇನ್ನೂ ಜಾರಿಯಲ್ಲಿ ಇರುವ ಕೋಲಾರ, ಕೆ.ಜಿ.ಎಫ್, ಕುಪ್ಪಂನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ. ವಿಷಯ ಕುರಿತು ಚರ್ಚೆ ನಡೆಸಿದ ನಂತರ ಮಲಬಾಚುವ ಕೆಲಸಗಾರರಿಗೆ ಪರ್ಯಾಯ ಕೆಲಸ ಕೊಡಿಸುವ ನಿರ್ಧಾರ ಮಾಡಿದರು. ಪರ್ಯಾಯವಾಗಿ ನೀಡಿದ್ದು ನಗರಸಭೆಯಲ್ಲಿ ಕಸಗುಡಿಸುವ ಕೆಲಸ. ಆದರೆ ಮೂರು ತಿಂಗಳ ನಂತರ ಗುತ್ತಿಗೆ ಅವಧಿ ಮುಗಿಯಿತೆಂದು ಕೆಸಲದಿಂದ ತೆಗೆದು ಹಾಕಿದರು. ಕೆಲಸಬೇಕೆಂದು ಹೋರಾಟ ಮಾಡಿದೆವು. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಖಾಲಿ ಹೊಟ್ಟೆಯಲ್ಲಿ ಇರಬೇಕಾದ ಪರಿಸ್ಥಿತಿ ಕಾರ್ಮಿಕರದು. ಮೂರು ಜನ ಕಾರ್ಮಿಕರು ಪಿಟ್ ಗುಂಡಿ ಕೆಲಸಕ್ಕೆಂದು ಮತ್ತೆ ಹೋದಾಗ ಅದರಲ್ಲಿ ಬಿದ್ದು ತೀರಿಕೊಂಡರು. ಮಲದಗುಂಡಿಯಲ್ಲಿ ಬಿದ್ದು ತೀರಿಕೊಂಡರೆಂದು ಸಾಬೀತುಪಡಿಸಲು ಮಾದ್ಯಮಗಳಲ್ಲಿ ವ್ಯಾಪಕವಾದ ಪ್ರಚಾರ ಮಾಡಬೇಕಾಯಿತು. ಅಂತಾರಾಷ್ಟ್ರೀಯ ಸಂಘಟನೆಗಳನ್ನು ಸಂಪರ್ಕಿಸಲಾಯಿತು. ದಲಿತ ಸಂಘರ್ಷ ಸಮಿತಿ, ಪಿಯುಸಿಲ್‌ನಂತಹ ಸಂಘಟನೆಗಳು ಬೆಂಬಲ ನೀಡಿದವು. ತೀರಿಕೊಂಡವರ ಕುಟುಂಬಕ್ಕೆ ಪರಿಹಾರ ನೀಡಲಾಯಿತು. ಅವರ ಹೆಂಡತಿಯರಿಗೆ ಗುಡಿಸುವ ಕೆಲಸ ನೀಡಲಾಯಿತು. ಹದಿನೆಂಟು ತಿಂಗಳುಗಳ ನಂತರ ಮತ್ತೆ ಕೆಲಸದಿಂದ ತೆಗೆದರು. ಕಾರ್ಮಿಕರು ಗುಡಿಸುವ ಕೆಲಸ ಮಾಡುತ್ತಿದ್ದುದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೆಲ್ಲ ನಾಶಪಡಿಸಿದರು. ಆದರೆ ನಾನು ಹಿಂಜರಿಯಲಿಲ್ಲ. ಹುಡುಕಿಕೊಂಡು ಹೋಗಿ ಎಲ್ಲಿ, ಯಾವಾಗ ಕೆಲಸ ಮಾಡುತ್ತಿದ್ದರೆಂಬುದನ್ನು ಮತ್ತೆ ದಾಖಲಿಸಿದೆ. ೧೪೦ ಕಾರ್ಮಿಕರ ದಾಖಲೆಗಳನ್ನಿಟ್ಟುಕೊಂಡು ಲೇಬರ್ ಕೊರ್ಟಿಗೆ ಹೋದೆವು. ನಮ್ಮ ಸಂಘದ ಪದಾಧಿಕಾರಿಗಳು ನನಗೆ ಜೀವ ಬೆದರಿಕೆ ಇರುವುದರಿಂದ ಕೆ.ಜಿ.ಎಫ್.ಗೆ ಬರಬೇಡವೆಂದು ಹೇಳಿದರು. ಇಬ್ಬರು ರಾಜಕೀಯ ನಾಯಕರುಗಳು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ‘ನಾನೇನು ಎಮ್ಮೆಲ್ಲೆ ಎಲಕ್ಷನ್‌ಗೆ ನಿಲ್ಲಲು ಬಂದಿಲ್ಲ, ನನ್ನ ಸಮುದಾಯದ ಜನಕ್ಕಾಗಿ ಕೆಲಸ ಮಾಡಲು ಬಂದಿದ್ದೇನೆ’ ಎಂದು ಹೇಳಿದೆ. ಆಮೇಲೆ ಅವರು ಬ್ಲಾಕ್‌ಮೇಲ್ ಮಾಡಿದರು. ನಾನು ಈ ಸಮುದಾಯದವಳೇ ಅಲ್ಲವೆಂದು ಪ್ರಚಾರ ಮಾಡಿದರು. ನನ್ನನ್ನು ಮತ್ತು ನಮ್ಮ ಸಂಘದ ಪದಾಧಿಕಾರಿಗಳನ್ನು ಹೊಡೆಸಿದರು. ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದೆವು. ಅದೊಂದು ದೊಡ್ಡ ಯುದ್ಧ. ನಮ್ಮ ಬದುಕುಗಳನ್ನು ನರಕ ಮಾಡಿದರು. ನಾವು ಪಟ್ಟುಬಿಡಲಿಲ್ಲ. ಕಾರ್ಮಿಕರು ಬಂಡೆಯಂತೆ ನನ್ನೊಂದಿಗೆ ನಿಂತರು. ಮಲಬಾಚುವ ಪದ್ಧತಿ ಜಾರಿ ಇರುವ ಬಗ್ಗೆ ಹಲವು ದೂರುಗಳನ್ನು ದಾಖಲಿಸಿದೆವು. ಹೋರಾಟ ಮಾಡಿ ಸಾವು ಸಂಭವಿಸಿರುವ ಕುಟುಂಬಗಳಿಗೆ ಮರಣ ಪರಿಹಾರ ಕೊಡಿಸಿದೆವು. ಇತ್ತೀಚೆಗೆ ಮಲಬಾಚಿಸಿರುವುದರ ವಿರುದ್ಧ ಮುನಿಸಿಪಲ್ ಕೌನ್ಸಿಲ್ ಸದಸ್ಯರ ವಿರುದ್ಧವೇ ಎಫ್.ಐ.ಆರ್ ಮಾಡಿಸಿದ್ದೇವೆ. ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಹೋರಾಡುತ್ತಿದ್ದೇವೆ. ನಾನು ಮೇಲ್ವಿಚಾರಣಾ ಸಮಿತಿಯ ಸದಸ್ಯೆಯಾಗಿದ್ದೇನೆ. ನಮ್ಮ ಜಾತಿಯ ಮುಂದಿನ ಪೀಳಿಗೆಯವರು ಈ ಕೆಲಸಕ್ಕೆ ಬರಬಾರದು. ಗೌರವ, ಘನತೆ ಸಿಗುವಂತಹ ಕೆಲಸವನ್ನು ಅವರು ಮಾಡಬೇಕು. ಯುವಪೀಳಿಗೆಯವರಲ್ಲಿ ಸ್ಪೂರ್ತಿ ತುಂಬಿ ಓದಿ ಉತ್ತಮ ಕೆಲಸ ಮಾಡುವಂತಾಗಲು ಶ್ರಮಿಸುತ್ತಿದ್ದೇವೆ. ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ. ಎಷ್ಟೊ ಸಲ ನನ್ನ ಬಳಿ ಇರುವ ಅಲ್ಪ ಚಿನ್ನವನ್ನು ಅಡವಿಟ್ಟಿದ್ದೇನೆ. ಮಲಬಾಚುವ ಪದ್ಧತಿಯು ಅತ್ಯಂತ ಹೀನಾಯವಾದ ಗುಲಾಮಗಿರಿ. ಅದನ್ನು ತೊಡೆದುಹಾಕಲು ಹೋರಾಡುವುದನ್ನು ಬಿಟ್ಟರೆ ನನಗೆ ಯಾವ ಗುರಿಯೂ ಇಲ್ಲ. ಜೀವವಿರುವವರೆಗೂ ಈ ಹೋರಾಟಕ್ಕೆ ಬದ್ಧಳಾಗಿರುತ್ತೇನೆ. ಇದು ಬಹುದೊಡ್ಡ ಕೆಲಸ; ಅಪಾರ ಬೆಂಬಲ ಬೇಕು.
ಬೆಂಬಲ ಹೇಗೆ ಸಿಗುತ್ತಿದೆ?
ಸ್ವರಾಜ್ ನೆಟ್‌ವರ್ಕ್, ವಿಸ್ತಾರ್, ಆಕ್ಷನ್‌ಏಡ್, ಸಿಕ್ರಮ್‌ನಂತಹ ಸರ್ಕಾರೇತರ ಸಂಸ್ಥೆಗಳು ಪಿಯುಸಿಎಲ್‌ನಂತಹ ಸಂಘಟನೆಗಳು (ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆಯನ್ನು ಜಯಪ್ರಕಾಶ್ ನಾರಾಯಣ್ ಅವರು ೭೦ರ ದಶಕದಲ್ಲಿ ಆರಂಭಿಸಿದರು) ಬೆಂಬಲ ನೀಡಿವೆ. ಸಾಮಾಜಿಕ ಹೋರಾಟಗಾರರಾದ ವೈ.ಜೆ. ರಾಜೇಂದ್ರ, ಟಿ.ಕೆ.ದಯಾನಂದ, ಚಂದ್ರು ಅವರು ನಿರಂತರ ಬೆಂಬಲ ನೀಡುತ್ತಿದ್ದಾರೆ.
ಕುಟುಂಬದ ಬೆಂಬಲ ಹೇಗಿದೆ?
ನಾನು ಹೋರಾಟ ಮಾಡಲು ಸಾಧ್ಯವಾಗಿದ್ದು ನನ್ನ ತಾಯಿಯ ಬೆಂಬಲದಿಂದ. ನನ್ನ ಎರಡು ಮಕ್ಕಳನ್ನು ಅವರೇ ಸಾಕಿದÀರು. ತುಂಬಾ ಚಿಕ್ಕವಯಸ್ಸಿಗೆ ಮದುವೆಯಾಯಿತು. ಗಂಡ ಟೈಲರಿಂಗ್ ಕೆಲಸ ಮಾಡುತ್ತಿದ್ದ. ಹಿಂದೆ ಗಂಡನಿಂದ ತುಂಬಾ ಕಿರುಕುಳ ಅನುಭವಿಸಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಪಿಯುಸಿಗೆ ಓದು ನಿಲ್ಲಿಸಿ ರೂರಲ್ ಡೆವಲಪ್‌ಮೆಂಟ್ ಆರ್ಗನೈಜೇಷನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ನನ್ನ ಕೆಲಸಕ್ಕೆ ನನ್ನ ಗಂಡ ಅಡ್ಡಿಪಡಿಸುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ.
ತಮಟೆ ಟ್ರಸ್ಟ್ ಮತ್ತು ಸಫಾಯಿ ಕರ್ಮಚಾರಿ ಕಾವಲು ಸಮಿತಿ
ಸಫಾಯಿ ಕರ್ಮಚಾರಿಗಳÀ ಏಳಿಗೆಯನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡಿರುವ ತಮಟೆ ಟ್ರಸ್ಟ್ ೨೦೦೬ರಲ್ಲಿ ಆರಂಭವಾಯಿತು. ಕರ್ನಾಟಕದ ೨೨ ಜಿಲ್ಲೆಗಳಲ್ಲಿ ಪೌರಕಾರ್ಮಿಕರ ವೇದಿಕೆಯನ್ನು ತಮಟೆ ಟ್ರಸ್ಟ್ ಆರಂಭಿಸಿದೆ. ಅವುಗಳಲ್ಲಿ ೭ ಜಿಲ್ಲೆಗಳಲ್ಲಿ ಅತ್ಯಂತ ಕ್ರಿಯಾಶಾಲಿಯಾಗಿ ಕೆಲಸ ಮಾಡುತ್ತಿದೆ. ಆ ಜಿಲ್ಲೆಗಳೆಂದರೆ ತುಮಕೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು. ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜರ್‌ಗಳಿಗಾಗಿ ಶಿಕ್ಷಣ, ವಸತಿ, ಆರೋಗ್ಯ, ಪರ್ಯಾಯ ಉದ್ಯೋಗ ಕಲ್ಪಿಸುವ ಕೆಲಸವನ್ನು ತಮಟೆ ಮಾಡುತ್ತಿದೆ.
ಜುಲೈ ೨೩, ೨೦೧೦ರಲ್ಲಿ ಸವಣೂರಿನಲ್ಲಿ ದಲಿತರು ತಮ್ಮ ಮನೆ ಎತ್ತಂಗಡಿಯಾಗುವುದರ ವಿರುದ್ಧ ಮೈಮೇಲೆ ಮಲಸುರಿದುಕೊಂಡು ನಡೆಸಿದ ಪ್ರತಿಭಟಿನೆಯ ಪರಿಣಾಮವಾಗಿ ಜಾಗೃತಗೊಂಡು ಪರಿಶಿಷ್ಟ ಜಾತಿಗೆ ಸೇರಿದ ಯುವ ಗುಂಪೊಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯನ್ನು ಹುಟ್ಟುಹಾಕಿತು. ಮಲಬಾಚುವ ಕೆಲಸ ಮಾಡುವ ಭಂಗಿಗಳು, ಮೆಹ್ತಾರರು ಇತ್ಯಾದಿ ಕೆಳಜಾತಿಯವರನ್ನು ಸಂಘಟಿಸುವ, ಅವರಿಗಾಗಿ ಒಂದು ವೇದಿಕೆ ಕಲ್ಪಿಸುವ, ಅವರನ್ನು ಆ ವೃತ್ತಿಯಿಂದ ಹೊರತರುವುದು ಸಮಿತಿಯ ಉದ್ದೇಶವಾಗಿದೆ. ದು.ಸರಸ್ವತಿಯವರು ಮಾಡಿರುವ ಈ ಎರಡೂ ಸಂಘಟನೆಯ ಸ್ಥಾಪಕ ಸದಸ್ಯರಾದ ಶ್ರೀಮತಿ ಪದ್ಮ ಮತ್ತು ಶ್ರೀ ಕೆ.ಬಿ.ಓಬಳೇಶ್ ಅವರ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.
ಮಹಿಳಾ ನಾಯಕತ್ವ: ಸೋಲದ ಚೈತನ್ಯ
ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯ ಅನುಭವಿಸಿಕೊಂಡು ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಸಫಾಯಿ ಕರ್ಮಚಾರಿ ಮಹಿಳೆಯರ ಬದುಕು ಮತ್ತು ಅನುಭವ ಸ್ತ್ರೀವಾದಿ ಚಿಂತನೆಯ ಆಳ-ಅಗಲಗಳನ್ನು ವಿಸ್ತರಿಸುವುದರಲ್ಲಿ ಸಂಶಯವಿಲ್ಲ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವುದರ ಜೊತೆಗೆ ಕೆಲಸ ಮಾಡುವ ಸ್ಥಳಗಳಲ್ಲಿ ಅಪಾಯ ಮತ್ತು ಸವಾಲುಗಳನ್ನು ಎದುರಿಸುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು.
ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಮಹಿಳೆಯರು ನಡೆಸಿರುವ ಹೋರಾಟಗಳು ಸಫಾಯಿ ಕರ್ಮಚಾರಿ ಚಳುವಳಿಗೆ ಭದ್ರ ಬುನಾದಿ ಹಾಕಿವೆ.
ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ ಬಳ್ಳಾರಿ ಸಫಾಯಿ ಕರ್ಮಚಾರಿ ಮಹಿಳೆಯರ ಹೋರಾಟ
ಬಳ್ಳಾರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಸಂಘವನ್ನು ಕಟ್ಟುವುದಕ್ಕೆ ನಾಂದಿ ಹಾಡಿದವರು ಅಲ್ಲಿನ ಮಹಿಳಾ ಕಾರ್ಮಿಕರು. ಬಳ್ಳಾರಿಯ ಮೊದಲನೇ ಡಿವಿಷನ್‌ನ ವಾರ್ಡ್ ೩೨ರಲ್ಲಿ ಅನ್ಯಾಯದಿಂದ ಕೆಲಸದಿಂದ ತೆಗೆದುಹಾಕಲಾದ ಎಂಟು ಜನ ಮಹಿಳೆಯರು ಪಾಲಿಕೆಯ ಕಚೇರಿಯ ಮುಂದೆ ಹೋಗಿ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಪ್ರತಿಭಟಿಸಿದ ಘಟನೆಯು ಮುಂದೆ ಬಹು ದೊಡ್ಡ ಹೋರಾಟದ ಸ್ವರೂಪ ಪಡೆದುಕೊಂಡು ‘ಸಮಾನತಾ ಕಾರ್ಮಿಕ ಸಂಘಟನೆ’ ಹುಟ್ಟಿಗೆ ಕಾರಣವಾಯಿತು. ಈ ಯೂನಿಯನ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ಹೆಮ್ಮೆಯಿಂದ ಅಂಬೇಡ್ಕರ್ ದಿನಾಚರಣೆಯನ್ನು, ಸಾವಿತ್ರಿ ಬಾಯಿ ಫುಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮ್ಯೂಸಿಕಲ್ ಚೇರ್, ರಂಗೋಲಿ ಇತ್ಯಾದಿ ಸ್ಪರ್ಧೆಗಳನ್ನು ಒಳಗೊಂಡ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಾರೆ; ಬಹುಮಾನ ವಿತರಿಸುತ್ತಾರೆ. ತಮ್ಮ ಹೋರಾಟವನ್ನು ಬೆಂಗಳೂರಿನ ವಿಧಾನಸೌಧದವರೆಗೂ ಒಯ್ದಿದ್ದಾರೆ.
ತಿಪ್ಪಮ್ಮ, ಬಿ.ಜಯಲಕ್ಷ್ಮಿ, ಕುಳ್ಳಾಯಮ್ಮ, ರತ್ನಮ್ಮ, ಲಕ್ಷ್ಮಿದೇವಿ, ಓಬಳಮ್ಮ, ಮರೆಕ್ಕ, ಯಶೋದಮ್ಮ, ಲಕ್ಷ್ಮಿದೇವಿ, ಸಾಲಮ್ಮ, ¯ಕ್ಷö್ಮಮ್ಮ, ಲಕ್ಷ್ಮಿ, ಅನಸೂಯಮ್ಮ, ಪುಳ್ಳಮ್ಮ, ಶಿವಮ್ಮ, ಲಕ್ಷ್ಮಿದೇವಿ, ನಾಗಮ್ಮ, ಲಕ್ಷö್ಮಮ್ಮ, ಎಸ್.ನಾರಾಯಣಮ್ಮ, ದುರ್ಗಮ್ಮ, ಚಿಕ್ಕೋಬಳಮ್ಮ, ಕಾಮಾಕ್ಷಮ್ಮ, ಭಾರತಿ, ಮಾರಕ್ಕ, ಆದಿಲಕ್ಷ್ಮಿ, ರತಿ, ನಾಗರತ್ನಮ್ಮ, ಪದ್ಮಾವತಿ, ಕೆ.ನಾಗಲಕ್ಷ್ಮಿ, ನಾಗಲಕ್ಷ್ಮಿ, ಲಕ್ಷ್ಮಿ, ಓಬಳಮ್ಮ.ಪಿ, ಓಬಳಮ್ಮ, ಲಕ್ಷ್ಮಿ, ರೇಣುಕ, ಚಿನ್ನು, ವೆಂಕಟಲಕ್ಷ್ಮಿ, ದುರ್ಗಮ್ಮ, ನಾಗಮ್ಮ, ಲಕ್ಷ್ಮಿದೇವಿ. (ಇದಕ್ಕೆ ವಿವರಣೆ ಬೇಕು ಅನ್ಸುತ್ತೆ )
ಕಲ್ಬುರ್ಗಿ ಸಫಾಯಿ ಕರ್ಮಚಾರಿ ಮಹಿಳೆಯರ ಸೋಲದ ಚೈತನ್ಯ
ಕಲ್ಬುರ್ಗಿಯಲ್ಲಿ ನಗರ ಪಾಲಿಕೆಯಲ್ಲಿ ೧೦ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಮಹಿಳೆಯರು ಕೆಲಸದಿಂದ ತೆಗೆದುಹಾಕಿದ್ದರ ವಿರುದ್ಧ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುದೀರ್ಘ ಹೋರಾಟ ಮಾಡಿ ಯಶಸ್ವಿಯಾದದ್ದು ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಿದೆ.
೪೭೦ ಗುತ್ತಿಗೆ ಪೌರಕಾರ್ಮಿಕರನ್ನು ತೆಗೆÀದು ಹಾಕಿದಾಗ ಎಲ್ಲಾ ಕಾರ್ಮಿಕರೂ ಒಟ್ಟಾಗಿ ಕಾರ್ಮಿಕ ಮುಖಂಡರು ಹಾಗೂ ಮಾಜಿ ಕಾರ್ಮಿಕ ಸಚಿವರಾದ ಶ್ರೀ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಎರಡು ತಿಂಗಳ ಕಾಲ ನಗರವೇ ಕಸದ ತಿಪ್ಪೆಯಾಯಿತು. ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಮುಂದೆ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಕಾನೂನು ಹೋರಾಟ ನಡೆಸಿದರು. ಈ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಪಾಲಿಕೆಯ ಕಚೇರಿ ಮುಂದೆ ಸತತ ನಾಲ್ಕು ವರ್ಷಗಳ ಕಾಲ ಧರಣಿ ಮಾಡಿದ್ದಾರೆ. ಜೈಲುವಾಸ ಅನುಭವಿಸಿದ್ದಾರೆ. ಈ ಹೋರಾಟದ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಯಾವ ಬೆದರಿಕೆಗೂ, ಆಮಿಷಕ್ಕೂ ಮಣಿಯದ ಮಹಿಳಾ ಚೈತನ್ಯ. ಮಳೆ, ಗಾಳಿ, ಬಿಸಿಲು, ಪೊಲೀಸರ ಲಾಠಿಗೂ ಅಂಜದ ಈ ಮಹಿಳೆಯರ ಉತ್ಸಾಹಕ್ಕೆ ಎಣೆಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಜನಪದ ಶೈಲಿಯ ಲಾವಣಿಗಳನ್ನು, ಹೋರಾಟದ ಹಾಡುಗಳನ್ನು ಹಾಡುವ ಇವರ ಉತ್ಸಾಹ ಯಾರಿಗಾದರೂ ಸ್ಪೂರ್ತಿಯಾಗಬಲ್ಲದು.
ನಾಗಮ್ಮ, ರಣಮ್ಮ, ಸುಲೋಚನಾ, ಶರಣಮ್ಮ, ಲಲಿತಾ, ಸುಶೀಲಾಬಾಯಿ, ಮಲ್ಲಮ್ಮ, ರುಕ್ಮಿಣಿ, ಸಂಗೀತಾ, ಸಾವಿತ್ರಿಬಾಯಿ, ಶಾಂತಾಬಾಯಿ, ವಿದ್ಯಾವತಿ, ನಾಗಮ್ಮ, ಕೊಂಡಾಬಾಯಿ, ಚಂದ್ರಬಾಗ, ದಯಾಲ್‌ಬಾಯಿ, ದೀಪಿಕಾ, ಸುನೀತಾ, ಸರಸ್ವತಿ, ಮೂನಾಬಾಯಿ, ಕಮಲಾಬಾಯಿ, ಹೇಮಾ, ದುರ್ಗಾಬಾಯಿ, ಪಾರ್ವತಿ, ಶೋಭಾ, ಸಂಪತ್ ಬಾಯಿ, ಲಲಿತಾ, ಭಾರತಿಬಾಯಿ, ಸಂಗಮ್ಮ, ಲಲಿತಾಬಾಯಿ, ಕಾಟೆಮ್ಮ, ಸುಖಾದೇವಿ, ಸಿದ್ದಮ್ಮ, ಸೀತಾಬಾಯಿ, ಶಾಂಭವಿ ಇನ್ನೂ ಹಲವರು ಆ ಹೋರಾಟದ ಹಿಂದಿನ ಶಕ್ತಿ ಚೈತನ್ಯವಾಗಿ ದುಡಿದಿದ್ದಾರೆ.
ಬೆಂಗಳೂರಿನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಹೋರಾಟ
ಬೆಂಗಳೂರಿನ ಪೌರಕಾರ್ಮಿಕರ ಹೋರಾಟ ಬೃ.ಬೆಂ.ಮ.ನ.ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರವು ಜೂನ್ ೨೦೧೭ರಲ್ಲಿ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಲೈಂಗಿಕ ಕಿರುಕುಳ ನೀಡುವುದರ ವಿರುದ್ಧ, ಜಾತಿ ನಿಂದನೆಯ ವಿರುದ್ಧ ಸತತವಾಗಿ ಸಂಘವು ಹೋರಾಡುತ್ತ ಬಂದಿದೆ.
ಕಾರ್ಮಿಕರ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡುಗಳನ್ನು ಕಿತ್ತಿಟ್ಟುಕೊಳ್ಳುವ ಹಾಗೂ ಲೈಂಗಿಕ ಹಲ್ಲೆ ಮಾಡುವ ಮಾಲೀಕರ ವಿರುದ್ಧ ದೂರು ದಾಖಲಿಸಿ ಕಾನೂನು ಹೋರಾಟ ಮಾಡುವುದನ್ನು ವ್ಯವಸ್ಥಿತವಾಗಿ ಸಂಘವು ಮಾಡುತ್ತಿರುವುದು ಕಾರ್ಮಿಕರಲ್ಲಿ ಅಪಾರ ವಿಶ್ವಾಸವನ್ನು, ಧೈರ್ಯವನ್ನು ತುಂಬಿಸಿದೆ. ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆ, ರದ್ದತಿ, ಪರಿಹಾರ) ಕಾಯ್ದೆ, ೨೦೧೩ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಯಶಸ್ವಿಯಾಗಿದ್ದಾರೆ. ಬಿಬಿಎಂಪಿ ಸಂಘದ ರತ್ನಾ, ನಾಗಲಕ್ಷ್ಮಿ, ರಮಾಲಕ್ಷö್ಮಮ್ಮ ಹಾಗೂ ಇತರರಿಗೆ ಈ ಯಶಸ್ಸು ಸಲ್ಲುತ್ತದೆ.
