ಹೋರಾಟದ ಬದುಕು

ಪೌರಕಾರ್ಮಿಕರ ಬದುಕಿನ ಮೂಲ ಸತ್ವದಂತಿರುವ ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನೊಳಗೊಂದು ಕಣ್ಣಾಡಿಸಿ ಬಂದೆವು. ಈ ಸತ್ವವೇ ಅಮಾನವೀಯವಾದ, ಅನಾರೋಗ್ಯಕರವಾದ ಅವರ ಕೆಲಸದ ಪರಿಸ್ಥಿತಿಯ ವಿರುದ್ಧ ಹೋರಾಡಲು ಅವರಿಗೆ ಶಕ್ತಿ ನೀಡಿದೆ. ಈ ಭಾಗದಲ್ಲಿ ಅವರು ನಡೆಸಿರುವ ಹೋರಾಟದ ಬದುಕಿನೊಳಗೆ ಹೆಜ್ಜೆ ಹಾಕೋಣ ಬನ್ನಿ. ಅಸಮಾನತೆ ತಾರತಮ್ಯ ಯಾವ ರೀತಿಯಲ್ಲೇ ಇರಲಿ, ಯಾರೇ ಅದಕ್ಕೆ ಒಳಗಾಗಿರಲಿ ಅದೊಂದು ಒಟ್ಟು ಸಮಾಜದ ಸಮಸ್ಯೆಯೇ ಹೌದು. ಒಟ್ಟು ಸಮಾಜದ ಸ್ಪಂದನೆಯೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯ ಎಚ್ಚೆತ್ತಾಗಲೇ ಸಮಾನತೆಯ ಸಮಾಜದತ್ತ ಹೆಜ್ಜೆ ಹಾಕಲು ಸಾಧ್ಯ. ಸಫಾಯಿ ಕರ್ಮಚಾರಿಗಳನ್ನು ಮತ್ತು ಅವರು ಮಾಡುವ ಸ್ವಚ್ಛತೆಯ ಕೆಲಸವನ್ನು ಕಾನೂನಿನ ಚೌಕಟ್ಟಿನಲ್ಲಿ ಗುರುತಿಸಲಾಗಿದೆ ಮತ್ತು ಈ ದೇಶದ ಪ್ರಜೆಗಳಾಗಿ ಅವರಿಗಿರುವ ಹಕ್ಕುಗಳನ್ನು ಮಾನ್ಯಮಾಡಲಾಗಿದೆಯಾದರೂ ಅದ್ಯಾವುದೂ ಅವರ ನಿತ್ಯ ಬದುಕಿನ ವಾಸ್ತವವಾಗಿ ಪರಿಣಮಿಸಿಲ್ಲ. ಆ ಸಮುದಾಯವೇ ಎಚ್ಚೆತ್ತುಕೊಂಡಾಗ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಅವರ ಹೋರಾಟದ ಇತಿಹಾಸದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಪ್ರಸ್ತುತ ಭಾರತದ ಸಂದರ್ಭದಲ್ಲಿ, ಪೌರಕಾರ್ಮಿಕರ ನಿತ್ಯ ಬದುಕಿನ ಸಂಯೋಜನೆಯ ಬೀಜಗಳು ಅವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕಿನೊಳಗೆ ಅಡಗಿವೆ ಎಂಬುದನ್ನು ಅರಿತಾಗ ಪೌರಕಾರ್ಮಿಕರು ಪಡೆದುಕೊಂಡಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬದುಕು ಆಳವಾದ ರಾಜಕೀಯ ಇತಿಹಾಸವೇ ಆಗಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಅಂತಹ ರಾಜಕೀಯದ ಸ್ವರೂಪ ಮತ್ತು ಸತ್ವವನ್ನು ನಗಣ್ಯ ಮಾಡಲಾಗಿದೆ. ಈ ಸ್ವಚ್ಛತೆಯ ಕೆಲಸಕ್ಕೇ ಅರ್ಹರಾದವರು ಎಂದು ಅದನ್ನು ಅವರ ಮೇಲೆ ಹೇರುವ ಅಸೂಕ್ಷö್ಮತೆಯನ್ನು ಜಾತಿವ್ಯವಸ್ಥೆಯ ಸಮಾಜವು ತೋರಿದೆ ಎಂಬುದು ನಮಗೆ ತಿಳಿದಿರುವ ವಿಷಯ. ಆದರೆ ಪರರ ತ್ಯಾಜ್ಯವನ್ನು ಸ್ವಚ್ಛಮಾಡುವಂತಹ ಕಠಿಣವಾದ, ಅಮಾನವೀಯವಾದ ಶ್ರಮದ ಬದುಕಿನ ಹೋರಾಟದಲ್ಲಿ ಇವರ ಸುಖದುಃಖಗಳು ಅತ್ಯಂತ ಸೂಕ್ಷö್ಮ ಹೆಣಿಗೆಯಲ್ಲಿ ನೇಯ್ದುಕೊಂಡಿವೆ ಎಂಬುದನ್ನು ಇವರ ಹೋರಾಟದ ಪ್ರಜ್ಞೆಯಲ್ಲಿ ನಾವು ಗುರುತಿಸಬಹುದು. ಕರ್ನಾಟಕದ ಪೌರಕಾರ್ಮಿಕರ ರಾಜಕೀಯ ಇತಿಹಾಸವನ್ನು ಸೂಕ್ಷö್ಮವಾಗಿ ಓದಿಕೊಂಡಾಗ ಘನತೆಯ ಬದುಕಿಗಾಗಿ ಅವರು ನಡೆಸಿರುವ ಹೋರಾಟಕ್ಕೆ ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಆಧಾರಸ್ತಂಭವಾಗಿದೆ ಎಂಬುದು ತಿಳಿಯುತ್ತದೆ. ಈ ಆಧಾರಸ್ತಂಭವೇ ಅವರ ಧೈರ್ಯ ಮತ್ತು ಕಲ್ಪನೆಯ ಪ್ರಜ್ಞೆಯನ್ನು ರೂಪಿಸಿದೆ. ಹಾಗಾಗಿ ಇವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ನಾವು ಆದ್ಯತೆ ನೀಡಿದ್ದೇವೆ. ಸ್ವತಂತ್ರ ಭಾರತದ ಆಧುನಿಕ ಕರ್ನಾಟಕದಲ್ಲಿ ರಾಜಕೀಕರಣದತ್ತ ಗಮನಹರಿಸಿದಾಗ ಪೌರಕಾರ್ಮಿಕ ಚಳವಳಿಯ ರಾಜಕೀಯ ವ್ಯಾಕರಣದಲ್ಲಿ ಜಾತಿ ಹಿಂಸೆ ಮತ್ತು ಅವಮಾನವನ್ನು ಕ್ರಾಂತಿಕಾರಕವಾಗಿ ತೊಡೆದುಹಾಕುವ ಪ್ರಕ್ರಿಯೆಯನ್ನು ವಿಶಿಷ್ಟವೂ ಮತ್ತು ಮಾಮೂಲಿಯೂಆದ ಸ್ವರೂಪದಲ್ಲಿ ನಾವು ಕಾಣಬಹುದು. ಇನ್ನೂ ಹುಟ್ಟಲಿರುವ ರಾಜಕೀಯ ಪ್ರಜ್ಞೆಯ ಜಗತ್ತು ಮತ್ತು ಸುರಕ್ಷಿತ ಸವಲತ್ತಿನ ಮೂಲೆಗಳನ್ನೂ ಕೊಳೆಸುವ ಆಳವಾದ ಸಾಮಾಜಿಕ ಅಸ್ವಸ್ಥತೆಯನ್ನು ಬಡಿದು ಹುಟ್ಟುವ ಘನತೆ ಮತ್ತು ನ್ಯಾಯದ ಹೊಸ ಅಭಿವ್ಯಕ್ತಿಗಳನ್ನೂ ಸಹ ಗುರುತಿಸಬಹುದು. ನಿರಂತರ ಹೋರಾಟದ ಫಲವಾಗಿ ತಮ್ಮ ಕೆಲಸಕ್ಕೆ ಕಾನೂನುಬದ್ಧ ಹಕ್ಕುಗಳನ್ನು ಮತ್ತು ಜಾತಿ ತಾರತಮ್ಯದ ವಿರುದ್ಧ ಪ್ರಭುತ್ವದ ರಕ್ಷಣೆಗಳನ್ನು ಅವರು ಪಡೆದುಕೊಂಡಿದ್ದಾರೆ. ಆದರೆ ಕಾಗದದ ಮೇಲಿನ ಕಾನೂನುಗಳು ಅವರ ನಿತ್ಯ ಜೀವನದಲ್ಲಿ ಸಾಕಾರವಾಗಿ ಅವರ ಬದುಕಿನ ಸ್ಥಿತಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿಲ್ಲ ಎಂಬುದು ಕಟು ವಾಸ್ತವವಾಗಿದೆ. ಈ ಕಾರಣಕ್ಕಾಗಿಯೇ ಪೌರಕಾರ್ಮಿಕರು ತಮ್ಮ ಕಸುವನ್ನು ಬಳಸಿಕೊಂಡು ಸರ್ಕಾರಿ ಯಂತ್ರವನ್ನು ಕಾರ್ಯೋನ್ಮುಖವಾಗಿಸುವ ಮತ್ತು ನಾಗರಿಕ ಸಮಾಜವನ್ನು ಬದಲಾವಣೆಯ ದಿಕ್ಕಿನತ್ತ ದೂಡುವ ಕೆಲಸ ಮಾಡಿದ್ದಾರೆ. ಇದೊಂದು ತನ್ನದೇ ವಿಶಿಷ್ಟ ಪ್ರಜ್ಞೆಯನ್ನು ಹೊಂದಿರುವ ಸಾವಯವ ಮತ್ತು ಜನಪ್ರಿಯ ಚಳುವಳಿಯಾಗಿದೆ. ಪ್ರಭುತ್ವದ ಆಡಳಿತಶಾಹಿ ಯಂತ್ರದ ಗುರಿಗಳನ್ನು ಜಾತಿವ್ಯವಸ್ಥೆಯ ಸಮಾಜವು ಸದಾ ಹತ್ತಿಕ್ಕುತ್ತಲೇ ಇರುತ್ತದೆ. ಇಂತಹ ಆಡಳಿತಶಾಹಿಯಿಂದ ಈ ವಿಶಿಷ್ಟ ಪ್ರಜ್ಞೆಯು ಪ್ರತ್ಯೇಕವಾಗಿದ್ದರೂ ಅದರೊಂದಿಗೆ ಆಪ್ತ ಸಂವಾದವನ್ನು ಹೊಂದಿದೆ. ಕಾರ್ಮಿಕರ, ವಿದ್ಯಾರ್ಥಿಗಳ, ಬುದ್ಧಿಜೀವಿಗಳ, ಕಾನೂನು ಕಾರ್ಯಕರ್ತರ, ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಒಳಗೊಂಡಿರುವ ವಿಸ್ತಾರವಾದ ಮತ್ತು ವೈವಿಧ್ಯಮಯವಾದ ಮೈತ್ರಿಕೂಟವಾಗಿ ರೂಪುಗೊಂಡಿದೆ. ಇವರೆಲ್ಲರೂ ದುಡಿಯುವ ಕಾರ್ಮಿಕರು ಎದುರಿಸುವ ಹಲವಾರು ರೀತಿಯ ಅನ್ಯಾಯಗಳ ವಿರುದ್ಧ ಹೋರಾಟವನ್ನು ರೂಪಿಸುವ ಮತ್ತು ದಾಖಲಿಸುವ ಗುಂಪುಗಳಾಗಿ ಕೆಲಸಮಾಡಿದ್ದಾರೆ.
ವಿಭಿನ್ನ ಆಚರಣೆಗಳು ಕಲೆಯುವಂತೆ ಮಾಡಿರುವ ಈ ಚಳುವಳಿಯು, ಸಮಕಾಲೀನ ಸಾಮಾಜಿಕ ಸಂರಚನೆಯಲ್ಲಿ ಜಾತಿ ಮತ್ತು ಲಿಂಗಾಧಾರಿತ ದಮನದ ಸ್ವರೂಪಗಳು ಮಾಮೂಲಿಯಾಗಿರುವುದನ್ನು ಪ್ರಶ್ನಿಸುತ್ತವೆ; ಜಾತಿ-ಅಧಿಕಾರಶಾಹಿ-ಗುತ್ತಿಗೆ ಪದ್ಧತಿಯ ಕಾನೂನುಬಾಹಿರ ಸಂಚುಕೂಟದ ಭ್ರÀಷ್ಟತೆಯನ್ನು ಬಹಿರಂಗಗೊಳಿಸುತ್ತವೆ; ಅಪಾಯಕಾರಿ ಮತ್ತು ಕಠಿಣ ಕೆಲಸದ ಪರಿಸ್ಥಿತಿಯನ್ನು ತೋರಿಸಿಕೊಟ್ಟಿವೆ; ಕೆಲಸದ ಸ್ಥಳದಲ್ಲಿ ಸಂಭವಿಸಿರುವ ಸಾವಿನ ಪ್ರಕರಣಗಳಿಗೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿಸುವ ಮತ್ತು ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿವೆ. ವಿಸ್ತಾರವಾದ ಅಧ್ಯಯನ ನಡೆಸಿ ಎಚ್ಚರದಿಂದ ವರದಿಗಳನ್ನು ತಯಾರಿಸಿ ತಳಮಟ್ಟದ ಪರಿಣಿತಿಯನ್ನು ಬೆಳಸಲು ಸಹಾಯಮಾಡಿವೆ. ಮೌಖಿಕ ಇತಿಹಾಸಗಳನ್ನು ದಾಖಲಿಸಿವೆ. ಜೊತೆಗೆ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಪರ್ಯಾಯ ಜೀವನಾಧಾರಗಳಂತಹ ಸಮುದಾಯದ ಆಂತರಿಕ ವಿಷಯಗಳನ್ನು ಸಹ ಕೈಗೆತ್ತಿಕೊಂಡಿವೆ. ಸಂಬಂಧಪಟ್ಟ ಸಂಸ್ಥೆಗಳು, ಇಲಾಖೆಗಳಿಗೆ ಅಸಂಖ್ಯ ಮನವಿಗಳನ್ನು ಸಮುದಾಯದ ಪರವಾಗಿ ಸಲ್ಲಿಸಿದ ಮೇಲೆ ಅಪಾಯಕಾರಿ ಕೆಲಸದಲ್ಲಿ ತೊಡಗಿರುವಾಗ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಮತ್ತು ಪರಿಹಾರ ಸ್ವಲ್ಪಮಟ್ಟಿಗೆ ದೊರೆತಿದೆ. ಕೊಂಚವೇ ಕೊಂಚಮಟ್ಟಿಗೆ ಕೆಲಸದ ಪರಿಸ್ಥಿತಿಯಲ್ಲಿ ಸುಧಾರಣೆಗಳು ಕಂಡಿವೆ. ಪ್ರಕಟಣೆಗೊಂಡ ಸತ್ಯಶೋಧನಾ ವರದಿಗಳು ನ್ಯಾಯಾಲಯಗಳಲ್ಲಿನ ಹೋರಾಟದಲ್ಲಿ ಪ್ರಮುಖ ಅಸ್ತ್ರಗಳಾಗಿ ಕೆಲಸ ಮಾಡಿವೆ. ಕಾರ್ಮಿಕರಲ್ಲಿ ಅವರ ನ್ಯಾಯಿಕ ಮತ್ತು ಆರ್ಥಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಪಠ್ಯಗಳಾಗಿಯೂ ಕೆಲಸ ಮಾಡಿವೆ. ಇಂತಹ ಕಾರ್ಯಗಳು ಸಾಧ್ಯವಾಗಿರುವುದು ದಶಕಗಳ ಕಾಲ ನಡೆಸಿದ ಕೆಲಸ ಮತ್ತು ತೀವ್ರವಾದ ಹೋರಾಟದಿಂದಾಗಿ.
ಶ್ರಮದ ಫಲವು ತ್ವರಿತವಾಗಿಯೂ ಸಿಕ್ಕಿದೆ, ತಡವಾಗಿಯೂ ಸಿಕ್ಕಿದೆ. ಈ ವಿಷಯವನ್ನು ಒಂದು ಸಣ್ಣ ಉದಾಹರಣೆಯಾಗಿ ನೋಡಬಹುದು. ಒಳಚರಂಡಿ ಕೆಲಸವು ಒಳಗೊಂಡಿರುವ ಜಾತಿ ದೌರ್ಜನ್ಯ ಕುರಿತಂತೆ ಸಾಟಿ ಇಲ್ಲದಂತಹ ನ್ಯಾಯಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹೋರಾಟ ನಡೆಸಿದ್ದರೂ ಸಹ ಇಲ್ಲಿಯವರೆಗೂ ನಿಷೇಧಿತ ಮಲಬಾಚುವ ಕೆಲಸ ಮಾಡಿಸಿದ್ದವರ ವಿರುದ್ಧ ಒಂದೇ ಒಂದು ಪ್ರಕರಣವೂ ಮಲಬಾಚುವ ಪದ್ಧತಿ ನಿಷೇಧ ಕಾಯ್ದೆ ೨೦೧೩ರಡಿ ಅಪರಾಧವಾಗಿ ಇಡಿ ದೇಶದಲ್ಲೇ ದಾಖಲಾಗಿಲ್ಲ. ಪೌರಕಾರ್ಮಿಕರ ಚಳುವಳಿಗೆ ಸಾಮಾಜಿಕ ಪರಿವರ್ತನೆಯ ವೈರುಧ್ಯತೆಯ ಅರಿವಿದೆ. ವರ್ಗ ಮತ್ತು ಜಾತಿ ವೈರುಧö್ಯ ತೀವ್ರತೆಯು ಸಿಡಿಸಿದ ಕ್ರಾಂತಿಕಾರಿ ಬದಲಾವಣೆಯು ಸಾಧ್ಯವಾಗಿರುವುದು ನಿಧಾನವಾಗಿ ತೆರೆದುಕೊಂಡ ಹಕ್ಕುಗಳಿಂದಾಗಿ ಅಲ್ಲ. ಪೌರಕಾರ್ಮಿಕರಿಗೆ ತಮ್ಮ ಅಧಿಕಾರ ಕುರಿತ ಪ್ರಜ್ಞೆ ಮತ್ತು ಜಾತೀಯತೆಯ ಸಮಾಜಕ್ಕೆ ತನ್ನದೇ ಕೊಳೆತ ಅಡಿಪಾಯದ ಕುರಿತು ಇರುವ ಅಜ್ಞಾನದ ನಡುವೆ ಅಜಗಜಾಂತರ ಅಂತರವಿದೆ. ತುಂಬಿ ಚೆಲ್ಲಾಡುವ ಕಸದ ಗುಡ್ಡಗಳು ಮತ್ತು ಚರಂಡಿಗಳು ಈ ವೈರುಧö್ಯದ ಭೌತಿಕ ಸ್ವರೂಪದ ಅಭಿವ್ಯಕ್ತಿಗಳೇ ಆಗಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ನೈರ್ಮಲ್ಯ ಕೆಲಸಗಾರರ ಹೋರಾಟವು ಶತಮಾನದಷ್ಟು ಹಳೆಯದು. ಭಾರತದಲ್ಲಿ ನೈರ್ಮಲ್ಯ ಕಾರ್ಮಿಕರು ಸಂಘಟಿತರಾಗಿ ತಮ್ಮ ಕೆಲಸದ ಪರಿಸ್ಥಿತಿಯನ್ನು ಉತ್ತಮಪಡಿಸುವ ಬೇಡಿಕೆಯನ್ನು ೧೯೨೮ರಿಂದಲೇ ಮುಂದಿಡುತ್ತಾ ಬಂದಿದ್ದಾರೆ. ಕಲ್ಕತ್ತೆಯ ನೈರ್ಮಲ್ಯ ಕೆಲಸಗಾರರು ತಮ್ಮ ಕೆಲಸದ ಪರಿಸ್ಥಿತಿಯನ್ನು ಉತ್ತಮಪಡಿಸಲು ೧೯೨೮ರಲ್ಲಿ ಸಂಘಟಿತರಾಗಿ ಮುಷ್ಕರ ಹೂಡಿದ್ದರು. ದೆಹಲಿಯಲ್ಲಿ ವಸಾಹತುಶಾಹಿ ಕಾಲಘಟ್ಟದಿಂದಲೇ (ಸರ್ಕಾರ್, ೨೦೧೭) ನೈರ್ಮಲ್ಯ ಕೆಲಸಗಾರರು ಹೋರಾಟಮಾಡಿದ್ದರು. ಕರ್ನಾಟಕದಲ್ಲಿ ಹೋರಾಟಗಳನ್ನು ಸಂಘಟಿಸಿದ, ಸಂಘಟಿಸಲು ಸಹಕರಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳ ಕುರಿತು ಈ ಭಾಗದಲ್ಲಿ ಪರಿಚಯಿಸಲಾಗಿದೆ.