ಅಂಚಿನಲ್ಲೂ ಮಿಣುಕುವ ಇತಿಹಾಸ

ಅವಮಾನ ಮತ್ತು ಸಂಕಟವನ್ನೇ ಉಣಿಸಿ, ದುಡಿಮೆಗೆ ಬಿಡಿಗಾಸು ನೀಡಿ ಅಂಚಿಗೆ ತಳ್ಳಿ ಮುಂಬರದಂತೆ ಭದ್ರ ಬೇಲಿ ಬಿಗಿದರೂ ಮಿಂಚುಳಗಳಂತೆ ಪುಟಿದು ಸಾಧನೆಯ ದಾರಿಯಲ್ಲಿ ಮೈಲಿಗಲ್ಲಾದವರ ನೆನೆಯುವ ಭಾಗವಿದು. ಸಂಪತ್ತು, ಹೆಸರು, ಅಧಿಕಾರವೇ ಮಾನದಂಡವಾಗಿರುವ ಸಾಧನೆಯ ಇತಿಹಾಸವಲ್ಲ ಇದು. ಯಾರ ಮನುಷ್ಯ ಘನತೆಯನ್ನು ತುಳಿದು ಮಣ್ಣುಮಾಡಲಾಗಿದೆಯೋ ಅವರ ಮನುಷ್ಯ ಘನತೆಯನ್ನು ಎತ್ತಿ ಹಿಡಿಯಲು ನಡೆಸಿದ ಸತತ ಪ್ರಯತ್ನ ಮತ್ತು ಯಶೋಗಾಥೆಯನ್ನು ಸಾಧನೆ ಎಂದು ಪರಿಗಣಿಸುವ ಪ್ರಯತ್ನವಿದು. ಇಂಗ್ಲಿಷಿನಲ್ಲಿ ಸಾಯಿಲ್ ಎಂದರೆ ಮಣ್ಣೂ ಹೌದು; ಕೊಳೆಯೂ ಹೌದು. ಕೊಳೆಯನ್ನೆತ್ತಿ ಕೊಳೆಸುವಂತಹ ಮಣ್ಣ ಕೆಲಸ ಮಾಡಿ ಸರ್ವರ ಆರೋಗ್ಯ ಕಾಪಾಡುವವರÀ ಘನತೆಯನ್ನು ತುಳಿದು ಮಣ್ಣು ಮಾಡಿದ್ದರೂ ಅವರು ಮಣ್ಣಿನಲ್ಲೇ ಕೊಳೆತು ಮಣ್ಣಿಗೇ ಸಾರವಾಗಿ, ಅದೇ ಮಣ್ಣಿಂದಲೇ ಮೊಳೆಕೆಯೊಡೆದು ತಂಪು ನೆರಳಂಥ ಸಾಧನೆ ಮಾಡಿದವರ ಕತೆಯಿದು. ಭವ್ಯತೆಯ ಕಣ್ಣು ಕುಕ್ಕುವ ಬೆಳಕಿನಡಿಯ ಕತ್ತಲಲ್ಲಿ ಮಿಂಚುಗಳ ಅರಸುವವರಿಗೆ ಮಿಂಚುಳಗಳು ಗೋಚರಿಸಬಲ್ಲವು. ಮನುಷ್ಯ ಚೈತನ್ಯಕ್ಕೆ ಸೋಲಿಲ್ಲ. ಎಷ್ಟು ತುಳಿದರು ಮತ್ತೆ ಮತ್ತೆ ಚಿಗುರುವ ಗರಿಕೆ ಹುಲ್ಲಿನಂತದು ಎಂದು ನಂಬುವ, ತೆರೆದ ಕಣ್ಣು ಮತ್ತು ಮನದ ನೋಟಗಳಿಗೆ ಮಾತ್ರವೇ ಅಂಚಿನಲ್ಲೂ ಸಫಾಯಿ ಕರ್ಮಚಾರಿಗಳು ಕಟ್ಟಿರುವ ಮಿಣುಕು ಇತಿಹಾಸ ಕಾಣುವುದು. ಈ ಇತಿಹಾಸ ಭೂತದಿಂದ ಹಿಡಿದು ವರ್ತಮಾನದೊಂದಿಗೆ ಭವಿಷ್ಯದತ್ತಲೂ ಸಾಗುತ್ತಿದೆ.