ಕೌಟುಂಬಿಕ ಹಿನ್ನೆಲೆ
ಕನ್ನಮಡಿ ಭೀಮಪ್ಪ ಓಬಳೇಶ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಮಾದಿಗ ಜಾತಿಗೆ ಸೇರಿದವರು. ತಂದೆ ಭೀಮಪ್ಪ ಮತ್ತು ತಾಯಿ ನರಸಮ್ಮ. ಇಬ್ಬರೂ ಅನಕ್ಷರಸ್ಥರು. ಹಳ್ಳಿಯಲ್ಲಿ ದನ ಸತ್ತರೆ ಎತ್ತುವ, ಯಾರಾದರೂ ತೀರಿಕೊಂಡಾಗ ತಮಟೆ ಬಾರಿಸುವಂತಹ ಬಿಟ್ಟಿ ಚಾಕರಿ ಮಾಡುತ್ತಿದ್ದವರು. ಇವರು ಮಾದಿಗರಲ್ಲೇ ದೊಡ್ಡ ಮಣೆಗಾರರು. ಹಾಗಾಗಿ ಇವರ ತಂದೆ ಹಟ್ಟಿಯಲ್ಲಿ ಜರುಗುವ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿದ್ದರು. ಇವರಿಗೆ ಸಿಕ್ಕ ಇನಾಮ್ತಿ ಜಮೀನು ಆಂಧ್ರದಲ್ಲಿತ್ತು. ಅದೊಂದು ಬರಡು ಭೂಮಿಯಾದ್ದರಿಂದ ಕೂಲಿಯನ್ನೇ ನಂಬಿದ್ದ ಕುಟುಂಬವದು. ಇರುವುದಕ್ಕೆ ಸಣ್ಣದೊಂದು ಮನೆ ಮಾತ್ರ ಇತ್ತು.
ಸಫಾಯಿ ಕರ್ಮಚಾರಿಗಳೊಂದಿಗಿನ ಸಂಬಂಧ ಹೇಗೆ ಆರಂಭವಾಯಿತು?
ನನ್ನ ತಾಯಿಯ ತೌರು ಮನೆಯವರಲ್ಲಿ ಅನೇಕರು ೬೦ರ ದಶಕದಲ್ಲಿಯೇ ಬೆಂಗಳೂರಿಗೆ ಬಂದು ಸ್ವಚ್ಛತೆಯ ಕೆಲಸ ಮಾಡಿಕೊಂಡಿದ್ದರು. ಆರಂಭದಲ್ಲಿ ಸಿಟಿ ಮಾರ್ಕೇಟಿನಲ್ಲಿ ಇದ್ದ ಹದಿಮೂರು ಸಾರ್ವಜನಿಕ ಶೌಚಾಲಯವನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ದಿನಕ್ಕೆ ೧೦೦-೧೫೦ ರೂ. ಸಂಪಾದಿಸುತ್ತಿದ್ದರು. ಮೊತ್ತಮೊದಲ ಬಾರಿಗೆ ತಮ್ಮದೆಂಬ ಕಾಸುಕಂಡ ಅವರೆಲ್ಲರೂ ಮುಂದೆ ನಿಧಾನವಾಗಿ ಊರಿನಿಂದ ಇತರರನ್ನು ಇಲ್ಲಿಗೆ ಕರೆಸಿಕೊಂಡರು. ಲಾಲ್ಬಾಗ್ ಬಳಿ ಇರುವ ಸಿದ್ಧಾಪುರ ಕೆರೆ ಬಯಲಿನಲ್ಲಿ ಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದರು. ನಿಧಾನವಾಗಿ ಪಾಲಿಕೆಯಲ್ಲಿ ದಿನಗೂಲಿಗಳಾಗಿ ಸೇರಿಕೊಂಡರು. ಮುಂದೆ ಸಾಲಪ್ಪ ಸಮಿತಿ ವರದಿ ಅನ್ವಯ ಕೆಲವರು ಖಾಯಂ ನೌಕರರಾದರು.
ನಾನು ಎಸ್.ಎಸ್.ಎಲ್.ಸಿಯವರೆಗೂ ಓದಿದ್ದೆ. ನಮ್ಮ ಸೋದರಮಾವ ಕೆಲಸ ಕೊಡಿಸಲು ಬೆಂಗಳೂರಿಗೆ ಕರೆದುಕೊಂಡು ಬಂದರು. ಒಂದು ಜೊತೆ ಬಟ್ಟೆಯಲ್ಲಿ ಅಪ್ಪ ಕೊಟ್ಟ ೫೦ರೂ. ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನನ್ನ ಮಾವ ನನಗೆ ಕೊಡಿಸಿದ್ದು ಮಟನ್ ಶಾಪಿನಲ್ಲಿ ಕಸ ಎತ್ತುವ ಕೆಲಸವನ್ನು. ಮೊದಲ ದಿನವೇ ಅಸಿಸಿ ಎನಿಸಿತು. ಅಲ್ಲದೆ ತುಮಕೂರಿನಲ್ಲಿ ಓದುವಾಗ ದಲಿತ ಸಂಘರ್ಷ ಸಮಿತಿಯ ಸಭೆಗಳಿಗೆ ಹೋಗುತ್ತಿದ್ದೆ, ಕರಪತ್ರಗಳನ್ನು ಓದುತ್ತಿದ್ದೆ. ಇಂತಹ ಕೆಲಸ ಮಾಡಬಾರದೆಂಬುದು ತಿಳಿದಿತ್ತು. ಹಾಗಾಗಿ ಮೂರನೇ ದಿನಕ್ಕೆ ಕೆಲಸ ಬಿಟ್ಟು ಓಡಿಹೋದೆ. ಜೇಬಿನಲ್ಲಿ ೧೦೦-೧೫೦ರೂ. ಇತ್ತು. ದುಡ್ಡು ಖರ್ಚಾಗುವವರೆಗೂ ಅಂಡಲೆದುಕೊಂಡು ಇದ್ದೆ. ಒಂದಷ್ಟು ಹುಡುಗರು ಪರಿಚಯವಾದರು. ಸಂಜಯ್ ಗಾಂಧಿ ಆಸ್ಪತ್ರೆ ಕಟ್ಟಡದ ಕೆಲಸ ನಡೆಯುತ್ತಿತ್ತು. ಎಲ್ಲರೂ ಅಲ್ಲಿ ಹೋಗಿ ಮಲಗುತ್ತಿದ್ದೆವು. ಅಲ್ಲಿದ್ದ ವಾಚ್ಮನ್ ಕೃಷ್ಣಪ್ಪ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಹೋಗಿ ಕೆಲಸ ಕೇಳಲು ಹೇಳಿದರು. ನಿಮ್ಹಾನ್ಸ್ನ ಡೈರೆಕ್ಟರ್ ಮನೆಯಲ್ಲಿ ಕಸ ಹೊಡೆಯುತ್ತಿದ್ದವರನ್ನು ಪರಿಚಯಿಸಿದರು. ಅವರು ಸ್ಪೆಷಲ್ ವಾರ್ಡಿನಲ್ಲಿರುತ್ತಿದ್ದ ಶ್ರೀಮಂತ ರೋಗಿಗಳನ್ನು ನೋಡಿಕೊಳ್ಳುವ ಕೆಲಸ ಕೊಡಿಸಿದರು. ದಿನಕ್ಕೆ ೧೦ರೂ. ಕೊಡುತ್ತಿದ್ದರು. ರೋಗಿಯ ಮನೆಯವರು ಕೊಡುತ್ತಿದ್ದ ಊಟವನ್ನೇ ಮಾಡಿಕೊಂಡು, ರೋಗಿಗಳನ್ನು ನೋಡಿಕೊಂಡು ರಾತ್ರಿ ಆಸ್ಪತ್ರೆ ಮೂಲೆಗಳಲ್ಲಿ ಮಲಗಿ ಕಾಲ ಕಳೆಯುತ್ತಿದ್ದೆ. ಅಲ್ಲಾಗಲೇ ನಿಮ್ಹಾನ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ೭೦-೮೦ ಮಂದಿ ಹುಡುಗರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ಖಾಯಂ ನೌಕರರಿಗಾಗಿ ಭಾರತೀಯ ಮಜ್ದೂರ್ ಸಭಾ ಕೆಲಸ ಮಾಡುತ್ತಿತ್ತು. ಆ ಸಂಘ, ನಮ್ಮನ್ನು ಸಂಘಟಿಸಿ ಖಾಯಮಾತಿಗಾಗಿ ಧರಣಿ ಮಾಡಿಸಿದಾಗ ನಮ್ಮನ್ನು ಕೆಲಸದಿಂದ ಉಚ್ಛಾಟಿಸಲಾಯಿತು. ನಾನು ಈ ಮೊದಲೆ ಮಾವನ ಮನೆಗೆ ಬಂದು ಸೇರಿಕೊಂಡಿದ್ದೆ. ಹೇಮಲತಾ ಎಂಬ ಮಕ್ಕಳ ವೈದ್ಯರೊಬ್ಬರು ಅಲೆಕ್ಸಾಂಡರ್ ಸ್ಕೂಲ್ ಆಫ್ ಆಪರೇಟಿಂಗ್ ರೂಮ್ ಟೆಕ್ನಾಲಜಿಗೆ ಸೇರಿಸಲು ಧನಸಹಾಯ ಮಾಡಿದರು. ನಾನು ಪಿಯುಸಿ ಮುಗಿಸಿರಲಿಲ್ಲ. ಆದ್ದರಿಂದ ಅಲ್ಲಿಯವರು ನನ್ನನ್ನು ಫ್ರೇಜûರ್ ಟೌನಿನಲ್ಲಿದ್ದ ಸಂತೋಷ್ ಆಸ್ಪತ್ರೆಗೆ ಸೇರಲು ಹೇಳಿದರು. ಒಂದು ವರ್ಷ ಸಂಬಳವಿಲ್ಲದೆ ಕೆಲಸ ಕಲಿಯಬೇಕು, ಊಟ-ತಿಂಡಿ ಕೊಡುತ್ತೇವೆ, ಒಂದು ವರ್ಷದ ನಂತರ ೮೦೦ರೂ. ಸಂಬಳ ಕೊಡುತ್ತೇವೆ ಎಂದು ಹೇಳಿದರು. ಒಂದು ವರ್ಷದ ಖರ್ಚಿಗೆ ಮಾವ ಸಹಾಯ ಮಾಡಿದರು. ಅಲ್ಲಿ ನಾನು ಕೆಲಸವನ್ನು ಚೆನ್ನಾಗಿ ಕಲಿತೆ. ಮುಂದೆ ೨೦೦೦ರೂ ಸಂಬಳ ಕೊಟ್ಟರು. ಸರ್ಜರಿಗೆ ಬಳಸುವ ಉಪಕರಣಗಳನ್ನು ಸ್ಟರಿಲೈe಼ï ಮಾಡುವುದು, ಓಟಿ ರೂಮನ್ನು ಸ್ಟರಿಲೈe಼ï ಮಾಡುವುದು, ಆಪರೇಷನ್ ನಡೆಯುವಾಗ ಸಹಾಯ ಮಾಡುವುದನ್ನೆಲ್ಲ ಅಚ್ಚುಕಟ್ಟಾಗಿ ಮಾಡುತ್ತಿದ್ದೆ. ಎರಡು ವರ್ಷದ ನಂತರ ಬೆಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ಸೇರಿಕೊಂಡು ಎರಡು ವರ್ಷ ಕೆಲಸ ಮಾಡಿದೆ.
ಪೌರಕಾರ್ಮಿಕರನ್ನು ಸಂಘಟಿಸುವ ಕೆಲಸ ಎಲ್ಲಿಂದ ಆರಂಭವಾಯಿತು?
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿವಿಧ ಸಂಘಟನೆಗಳ ಪರಿಚಯವಾಯಿತು. ಇಲ್ಲಿರುವ ಪೌರಕಾರ್ಮಿಕರಿಗೆ, ನಮ್ಮ ಊರಿನವರಿಗೆ ಏನಾದರೂ ಮಾಡಬೇಕೆನಿಸಿತು. ಇಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರು ಈ ಕೆಲಸಕ್ಕೆ ಸಂಪೂರ್ಣವಾಗಿ ಅಡ್ಜೆಸ್ಟ್ ಆಗಿಬಿಟ್ಟಿದ್ದರು. ಮನೆಯಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ, ಬೇರೆಯವರು ಕೊಟ್ಟದ್ದನ್ನೇ ತಿಂದು ಬದುಕುತ್ತಿದ್ದರು. ಬುಧುವಾರ, ಭಾನುವಾರ ಮಾತ್ರ ಮನೆಯಲ್ಲಿ ಮಾಂಸ ಮಾಡ್ತಾ ಇದ್ರು. ಬೆಳಗಿನ ಹೊತ್ತಿನ ಟೀಯನ್ನು ಸಹ ಹೋಟೆಲಿನಿಂದ ತರುತ್ತಿದ್ದರು. ಶನಿವಾರ ಮಾತ್ರ ಸ್ನಾನ ಮಾಡೋರು. ಬೆಳಗಿನ ಹೊತ್ತು ಟಿಫಿನ್ ಕ್ಯಾರಿಯರ್ ಹಿಡ್ಕೊಂಡು ಟೀ ತರಲು ಹೋಗುತ್ತಿದ್ದ ಚಿತ್ರ ಇನ್ನೂ ಕಣ್ಣ ಮುಂದಿದೆ. ಕುಡಿತ ಜಾಸ್ತಿ ಇತ್ತು, ವಯಸ್ಸಿಗೆ ಮೊದ್ಲು ಸಾಯೋರು. ನಮ್ಮ ಚಿಕ್ಕಪ್ಪ ಒಬ್ಬ ಪಿಟ್ಗುಂಡಿ ಕ್ಲೀನ್ ಮಾಡೋಕೆ ಹೋಗ್ತಾ ಇದ್ದ. ನನಗೆ ಗೊತ್ತೆ ಇರಲ್ಲಿಲ್ಲ, ಸಂಜೆ ಆದ್ರೆ ಹೋಗೋನು. ಬಂದ ದುಡ್ಡಲ್ಲಿ ಚೆನ್ನಾಗಿ ಕುಡ್ದು, ಸ್ವಲ್ಪ ದುಡ್ಡು ಮನೆಗೆ ಕೊಡೋನು. ನಮ್ಮ ಅಣ್ಣ ಒಬ್ಬ ಖಾಯಂ ನೌಕ್ರಿ ಮಾಡ್ತ ಇದ್ದ. ಆದ್ರೂ ರಾತ್ರಿ ಹೊತ್ತು ಪಿಟ್ಗುಂಡಿ ಕ್ಲೀನ್ ಮಾಡೋಕೆ ಹೋಗ್ತಾ ಇದ್ದ. ಅಲ್ದೆ ಕೃಪಾನಿಧಿ ಕಾಲೇಜ್ನ ಹಾಸ್ಟೆಲ್ನಲ್ಲಿ ಕೊಡೋ ವೇಸ್ಟ್ ಊಟ ತಗೊಂಡು ಹಂದಿ ಸಾಕೋರಿಗೆ ಕೊಟ್ಟು ೫೦ರೂ. ಸಂಪಾದಿಸ್ತಿದ್ದ. ಜೊತಗೆ ಹಳೇಪ್ಲಾಸ್ಟಿಕ್ ಬಕೇಟು, ಪೇಪರ್ ಸಂಗ್ರಹಿಸಿ ಮಾರಾಟ ಮಾಡ್ತಿದ್ದ. ಹಿಂಗೆ ದುಡ್ ಸಂಪಾದ್ನೆ ಮಾಡಿ ಮನೆ ಕಟ್ಟಿಸಿದ. ಮಕ್ಕಳು ಸ್ಕೂಲಿಗೆ ಹೋಗುತ್ತಿರಲಿಲ್ಲ. ಇಂಗ್ಲಿಷ್ ಸ್ಕೂಲಿಗೆ ಹೋದ್ರೆ ಮಕ್ಳು ಈ ಕೆಲ್ಸ ಮಾಡೋದ್ ಬಿಟ್ಟು ಎಂ.ಜಿ ರೋಡ್ (ಬೆಂಗಳೂರಿನ ಪ್ರತಿಷ್ಟಿತ ಏರಿಯಾ) ಸುತ್ತೋಕೆ ಓಯ್ತರೆ ಎಂದು ನನ್ನ ಮಾವ ಹೇಳುತ್ತಿದ್ದರು. ನಾವ್ಯಾಕೆ ಹೀಗೆ? ಎಂದು ನಿರಂತರ ಕಾಡುತ್ತಿತ್ತು. ಮನೇಲಿ ಅಡ್ಗೆ ಮಾಡ್ದೆ ಇದ್ದಿದ್ದು, ಬೇರೆಯವರು ಕೊಡೋ ಊಟ ತರೋದು ಸಿಟ್ ಬರ್ಸ್ತಾ ಇತ್ತು.
೧೯೯೩ರಲ್ಲಿ ನಕ್ಸಲರು ಮಾಡಿದ ಕೊಲೆಗೆ ಅನುಮಾನಿಸಿ ನಮ್ಮ ಊರಿನ ಹಟ್ಟಿಗೆ ಬೆಂಕಿ ಇಟ್ಟಿದ್ದರು. ದೊಡ್ಡ ಗಲಾಟೆ ಆಯಿತು. ಆ ಪ್ರಕರಣ ಕುರಿತು ವರದಿ ಮಾಡಲು ಬಂದವರ ಪರಿಚಯವಾಯಿತು. ಅವರ ಮೂಲಕ ನಕ್ಸಲರ ಹೋರಾಟದ ಬಗ್ಗೆ ತಿಳಿಯಿತು. ನಮ್ಮವರಿಗೆ ಅನ್ಯಾಯವಾಗುವ ಸಂಘ ಯಾಕೆ ಬೇಕು, ನಮ್ಮವರಿಗಾಗಿ ನಾವೇ ಸಂಘಟಿತರಾಗಬೇಕೆನಿಸಿತು. ನಾನಾಗಲೇ ಲಕ್ಕಸಂದ್ರ ಬಿಟ್ಟು ಕೋರಮಂಗಲ ಸ್ಲಂನಲ್ಲಿ ವಾಸಿಸುತ್ತಿದ್ದೆ. ಕರ್ನಾಟಕ ಯುವಜನಸಂಘ ಆರಂಭಿಸಿದೆ. ಪ್ರಭಾಕರ್ ಮತ್ತು ಡಾಮಿನಿಕ್ ಅವರು ಹ್ಯೂಮನ್ ರೈಟ್ಸ್ ಫೆಡರೇಷನ್ ಫಾರ್ ದಲಿತ್ ಲಿಬರೇಷನ್ ಆರಂಭಿಸಿದ್ದರು. ಕಿದ್ವಾಯಿ ಕೆಲಸ ಬಿಟ್ಟು ಈ ಸಂಸ್ಥೆ ಸೇರಿದೆ. ಅಲ್ಲಿ ನನಗೆ ಹೆಚ್ಚಿನ ಎಕ್ಸ್ಪೋಷರ್ ಸಿಕ್ಕಿತು. ೨೦೦೪ರಲ್ಲಿ ಬೆಜ್ವಾಡ್ ವಿಲ್ಸನ್ ಅವರನ್ನೂ ಭೇಟಿಯಾಗಿದ್ದೆ. ಹೆಚ್.ಆರ್.ಎಫ್.ಡಿ.ಎಲ್ನವರು ದಲಿತ್ ಫೌಂಡೇಷನ್ ಅನ್ನು ಪರಿಚಯಿಸಿದರು. ಅವರು ಪೌರಕಾರ್ಮಿಕರ ಅಧ್ಯಯನಕ್ಕಾಗಿ ಮೂರು ವರ್ಷಕ್ಕೆ ತಿಂಗಳಿಗೆ ೩೦೦೦ರೂ. ಫೆಲೋಷಿಪ್ ನೀಡಿದರು. ೨೦೦೬ರಲ್ಲಿ ತಮಟೆ ಎಂಬ ಟ್ರಸ್ಟ್ ಅನ್ನು ಕಾರ್ಮಿಕರೊಂದಿಗೆ ಸೇರಿ ಆರಂಭಿಸಿದೆ. ಫೌಂಡೇಷನ್ನ ಸಂತೋಷ್ ಅವರು ೯೦೦೦೦ ರೂ. ಧನಸಹಾಯವನ್ನು ನಮ್ಮ ಟ್ರಸ್ಟಿಗೆ ಕೊಡಿಸಿದರು. ಎರಡು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿ ಪಾವಗಡ ಮುನಿಸಿಪಲ್ನಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ಸಂಘಟಿಸಿದೆ. ಪಿಟ್ಗುಂಡಿ ಕ್ಲೀನ್ ಮಾಡುವವರ ಪಟ್ಟಿ ತಯಾರಿಸಿದೆವು. ೬೦ ಜನ ಮಲಬಾಚುವವರನ್ನು ಕೆಲಸ ಬಿಡಿಸಿದೆವು. ಅನೈರ್ಮಲ್ಯ ವೃತ್ತಿಯಲ್ಲಿರುವವರ ಮಕ್ಕಳಿಗೆ ನೀಡುವ ಸ್ಕಾಲರ್ಶಿಪ್ ೧೩೦೦ರೂ. ಸಿಗುವಂತೆ ಮಾಡಿದೆವು. ಆ ದುಡ್ಡಿನಲ್ಲಿ ಒಬ್ಬ ಮೇಕೆ ಕೊಂಡುಕೊಂಡ, ಮತ್ತೊಬ್ಬ ಬಾಳೆಹಣ್ಣಿನ ವ್ಯಾಪಾರ ಆರಂಭಿಸಿದ. ಮತ್ತೊಬ್ಬ ಶನಿಮಹಾತ್ಮನ ಗುಡಿ ಹತ್ತಿರ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಾನೆ. ಹೀಗೆ ಒಟ್ಟು ಹದಿನೆಂಟು ಕುಟುಂಬಗಳು ಪರ್ಯಾಯ ಕೆಲಸಗಳನ್ನು ಹುಡುಕಿಕೊಂಡವು. ಇನ್ನೂ ಹಲವರಿಗೆ ಪರ್ಯಾಯಗಳು ಸಿಗಬೇಕಾಗಿದೆ.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ಬಗ್ಗೆ ಹೇಳಿ
ಜುಲೈ ೨೩, ೨೦೧೦ರಲ್ಲಿ ಸವಣೂರಿನಲ್ಲಿ ದಲಿತರು ತಮ್ಮ ಮನೆ ಎತ್ತಂಗಡಿಯಾಗುವುದರ ವಿರುದ್ಧ ಮೈಮೇಲೆ ಮಲಸುರಿದುಕೊಂಡು ಪ್ರತಿಭಟಿಸಿದರು. ಇವರಿದ್ದ ಮನೆಯು ನಗರ ಬೆಳೆದಂತೆ ನಗರದ ಮಧ್ಯಕ್ಕೆ ಬಂತು. ಇದನ್ನು ಸಹಿಸದ ಮೇಲ್ಜಾತಿಯವರು ಅವರನ್ನು ತೆರವುಗೊಳಿಸಲು ಒತ್ತಡಹಾಕಿದ್ದರಿಂದ ಪಾಲಿಕೆಯವರು ಅವರ ಮನೆಗಳನ್ನು ಕೆಡವಲು ಹೋಗಿದ್ದರು. ಸಂಘಟನೆಗಳ ಬೆಂಬಲದಿಂದ ಅದು ತಪ್ಪಿತು. ಆ ಪ್ರಕರಣವು ನಮ್ಮನ್ನು ಹೆಚ್ಚು ಆಘಾತಗೊಳಿಸಿತು. ಮಲಬಾಚುವ ಕೆಲಸ ಮಾಡುವ ಭಂಗಿಗಳು, ಮೆಹ್ತಾರರು ಇತ್ಯಾದಿ ಕೆಳಜಾತಿಯವರನ್ನು ಸಂಘಟಿಸುವ ಕೆಲಸವನ್ನು ತೀವ್ರಗೊಳಿಸುವ ಅಗತ್ಯವನ್ನು ಮನಗಂಡು ಕಾವಲು ಸಮಿತಿಯನ್ನು ರಚಿಸಲಾಯಿತು. ಮಲಬಾಚುವವರಿಗೆ ಒಂದು ವೇದಿಕೆಯನ್ನು ನಿರ್ಮಿಸುವುದು, ಅವರನ್ನು ಆ ವೃತ್ತಿಯಿಂದ ಹೊರತರುವುದು ಸಮಿತಿಯ ಉದ್ದೇಶವಾಗಿತ್ತು. ರಾಮಚಂದ್ರ, ಚಂದ್ರಶೇಖರ್, ಪದ್ಮ ಹಾಗೂ ಇತರರು ಸಮಿತಿಯಲ್ಲಿ ಸಕ್ರಿಯರಾಗಿದ್ದಾರೆ. ನಾನು ರಾಜ್ಯ ಸಂಚಾಲಕನಾಗಿದ್ದೇನೆ. ಮೊದಲಿಗೆ ನಾವು ಮಾಡಿದ ಕೆಲಸವೆಂದರೆ ಮಲಬಾಚುವುದನ್ನು ನಿಷೇಧಿಸಲು ಇದ್ದ ಕಾನೂನಿನ ನ್ಯೂನತೆಗಳನ್ನು ಸರಿಪಡಿಸುವುದು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಫಾಯಿ ಕರ್ಮಚಾರಿ ಆಂಧೋಲನವು ಸಕ್ರಿಯವಾಗಿತ್ತು. ಆ ಆಂದೋಲನದಲ್ಲಿ ನಮ್ಮ ಸಂಘ ಕರ್ನಾಟಕವನ್ನು ಪ್ರತಿನಿಧಿಸಿತು.
ಮಲಬಾಚುವ ಪದ್ಧತಿಯ ನಿರ್ಮೂಲನೆಗೆ ನಿಮ್ಮ ಸಲಹೆಗಳೇನು?
ಕಾಯ್ದೆಗೆ ಸೂಕ್ತವಾದ ತಿದ್ದುಪಡಿ ತರಬೇಕು. ಮಲದಗುಂಡಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ಯಾಂತ್ರೀಕೃತಗೊಳಿಸಬೇಕು, ಪರಿಣಾಮಕಾರಿಯಾದ ಪುನರ್ವಸತಿಯನ್ನು ಕಲ್ಪಿಸಬೇಕು. ೨೦೧೩ರಲ್ಲಿ ತಿದ್ದುಪಡಿ ತಂದಮೇಲೂ ಕೆಲವು ನ್ಯೂನತೆಗಳಿವೆ. ಹೊಸ ಕಾನೂನು ವೃತ್ತಿ ನಿರ್ಮೂಲನೆ, ತಡೆಯುವ ಕ್ರಮಗಳು, ಪುನರ್ವಸತಿ ಮತ್ತು ಕಾನೂನಾತ್ಮಕ ದಂಡನೆ ಕುರಿತು ಹೇಳುತ್ತದೆ. ಆದರೆ ಇದನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಗತ್ಯವಾದ ಕ್ರಿಯಾಯೋಜನೆಯನ್ನೇ ಮಾಡಿಲ್ಲ. ಜಾರಿಗೊಳಿಸುವ ಯೋಜನೆ ಮತ್ತು ಹಣದ ಅವಶ್ಯಕತೆ ಇದೆ. ಕಾಯ್ದೆಯಲ್ಲಿ ಜಿಲ್ಲಾಧಿಕಾರಿಗಳೇ ಕಾಯ್ದೆಯನ್ನು ಜಾರಿಗೊಳಿಸುವವರಾಗಿದ್ದಾರೆ. ಆದರೆ ಜಾರಿಗೊಳಿಸದಿದ್ದರೆ ಶಿಕ್ಷೆ ಏನು ಎಂಬುದನ್ನು ಕಾಯ್ದೆಯು ಹೇಳಿಲ್ಲ. ಈ ಕಾಯ್ದೆಯೊಂದಿಗೆ ಇನ್ನೂ ಬೇರೆ ಮಂಡಳಿಗಳೊಂದಿಗೆ ಸಂಪರ್ಕ ಕಲ್ಪಿಸಬೇಕು. ಉದಾಹರಣೆಗೆ ಸಿವಿರೇಜ್ ಪ್ಲಾಂಟುಗಳ ಮೇಲ್ವಿಚಾರಣೆಯನ್ನು ಪರಿಸರ ಮಾಲಿನ್ಯ ಮಂಡಳಿಯವರಿಗೆ ವಹಿಸಬೇಕು. ಉಲ್ಲಂಘಿಸುವುದನ್ನು ಕಾಯ್ದೆ ಅಡಿ ತರಬೇಕು. ಬೆಂಗಳೂರಿನಲ್ಲಿ ೧೯೮ ವಾರ್ಡುಗಳಿವೆ. ೯೮ವಾರ್ಡುಗಳಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ಅಪಾರ್ಟ್ಮೆಂಟುಗಳಲ್ಲಿ ಸಿವಿರೇಜ್ ಟ್ರೀಟ್ಮೆಂಟ್ ಪ್ಲಾಂಟುಗಳಿವೆ, ಮನೆಗಳಲ್ಲಿ ಪಿಟ್ಗುಂಡಿಗಳಿವೆ. ಇವುಗಳ ಸ್ವಚ್ಛತೆ ಕುರಿತಂತೆ ಯಾವ ನಿಯಮಗಳಿಲ್ಲ. ಇಂತಹ ನ್ಯೂನತೆಗಳನ್ನು ಸರಿಪಡಿಸಿ ಭದ್ರವಾದ ಕಾಯ್ದೆಯನ್ನು ಜಾರಿಗೊಳಿಸಬೇಕು.
ಕಾರ್ಮಿಕರ ಪರಿಸ್ಥಿತಿ ಬದಲಾಗಬೇಕಾದರೆ ಬಲವಂತವಾಗಿ ಈ ವೃತ್ತಿಗೆ ತಳ್ಳುವುದನ್ನು ತಪ್ಪಿಸಬೇಕು. ಕಾರ್ಮಿಕರ ಸ್ಥಿತಿಗೆ ನಾಗರಿಕರು ಮತ್ತು ಅಧಿಕಾರಿಗಳಲ್ಲಿ ನೈತಿಕತೆಯ ಕೊರತೆಯು ಕಾರಣವಾಗಿದೆ. ಉದಾಹರಣೆಗೆ ನೋಡುವುದಾದರೆ ಬೆಂಗಳೂರಿನ ಪ್ರತಿಷ್ಟಿತ ವಸತಿ ಸಂಕೀರ್ಣದ ಸಿವೇಜ್ ಟ್ರಿಟ್ಮೆಂಟ್ ಪ್ಲಾಂಟ್ನಲ್ಲಿ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಶಿಕ್ಷಿತ, ಶ್ರೀಮಂತ, ಕಾನೂನಿನ ತಿಳುವಳಿಕೆ ಇರಬೇಕಾದವರ ಅಸೂಕ್ಷö್ಮತೆಯನ್ನು ಇದು ತೋರಿಸುತ್ತದೆ. ಕಾರ್ಮಿಕರ ಕುರಿತು ಯಾವ ನೈತಿಕ ಜವಾಬ್ದಾರಿಯನ್ನು ಪ್ರತಿಷ್ಟಿತರು ಹೊಂದಿಲ್ಲ. ಹೆಚ್ಚೆಂದರೆ ಪರಿಹಾರವನ್ನು ಕೊಟ್ಟು ಕೈತೊಳೆದುಕೊಳ್ಳುತ್ತಾರಷ್ಟೆ. ಕಾರ್ಮಿಕರ ಪರಿಸ್ಥಿತಿಗೆ ತಾವೆಷ್ಟು ನೈತಿಕವಾಗಿ ಜವಾಬ್ದಾರರೆಂದು ಯೋಚಿಸುವುದಿಲ್ಲ. ಕಾಯ್ದೆಯ ಅನುಷ್ಟಾನ ಕುರಿತಂತೆ ಅಧಿಕಾರಿಗಳಲ್ಲಿಯೂ ಇಚ್ಛಾಶಕ್ತಿಯ ಕೊರತೆ, ನೈತಿಕ ಜವಾಬ್ದಾರಿಯ ಕೊರತೆ ಇದೆ. ಇದಕ್ಕೆ ದಲಿತ ಅಧಿಕಾರಿಗಳೂ ಹೊರತಲ್ಲ.
ಮಲಬಾಚುವ ಕೆಲಸ ಮಾಡುವವರ ಪರಿಸ್ಥಿತಿ ತೀರಾ ಕಠಿಣವಾಗಿದೆ. ಯಾಕೆಂದರೆ ಕಸ ಗುಡಿಸುವ ಪೌರಕಾರ್ಮಿಕರಿಗೆ ಮಾಲೀಕನೆಂಬುವವನು ಇರುತ್ತಾನೆ. ಮಲಬಾಚುವವರಿಗೆ ಹಾಗಲ್ಲ. ನಾಗರಿಕರು ಕರೆದರೆ ಹೋಗಿ ಸ್ವಚ್ಛಮಾಡುವ ಮಲಬಾಚುವವರಿಗೆ ಯಾರೂ ಜವಾಬ್ದಾರರೇ ಇಲ್ಲ. ಈ ಸ್ಥಿತಿ ಬದಲಾಗಬೇಕಾದರೆ ಮಲಬಾಚುವ ಕೆಲಸಗಾರರೆಲ್ಲರನ್ನೂ ಗುರುತಿಸಿ ಸೂಕ್ತವಾದ ಪುನರ್ವಸತಿ ಕಲ್ಪಿಸಬೇಕು. ಹಾಗೆಯೇ ಕಸಗುಡಿಸುವ ಪೌರಕಾರ್ಮಿಕರಿಗೆ ಸಂಬಂಧಪಟ್ಟಂತೆ ಪ್ರತ್ಯೇಕವಾದ, ಸಮಗ್ರವಾದ ಕಾಯ್ದೆಯನ್ನು ತರುವ ಅವಶ್ಯಕತೆಯಿದೆ. ಪೌರಕಾರ್ಮಿಕರು ಪಾಲಿಕೆಗಳಲ್ಲದೆ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಲಾಡ್ಜ್ಗಳು, ಏರ್ ಪೋರ್ಟುಗಳು ಇತ್ಯಾದಿಯೆಡೆ ಕೆಲಸ ಮಾಡುತ್ತಾರೆ. ಎಲ್ಲ ಕಡೆ ಸ್ವಚ್ಛತೆಯ ಕೆಲಸವನ್ನು ಮಾಡುವವರನ್ನು ಒಳಗೊಂಡ ಕಾಯ್ದೆಯ ಅಗತ್ಯವಿದೆ. ಇಲ್ಲಿಯವರೆಗೂ ಅವರಿಗಾಗಿ ಕಾಯ್ದೆ ಇಲ್ಲ.
ಕಾರ್ಮಿಕರೂ ಸಹಿತ ಬದಲಾಗಬೇಕು. ಮುಂದಿನ ಅಪಾಯದ ಅರಿವಿಲ್ಲದೆ ತಕ್ಷಣದ ಹೊಟ್ಟೆಪಾಡಿಗಾಗಿ ಆ ಕೆಲಸ ಮಾಡಲು ಹೋಗುತ್ತಾರೆ. ತಿಂಗಳೆಲ್ಲ ದುಡಿಯುವುದಕ್ಕಿಂತ ದಿನಕ್ಕೆ ನಾಲ್ಕು ಪಿಟ್ ಕ್ಲೀನ್ ಮಾಡಿದರೆ ೮-೧೦ಸಾವಿರದವರೆಗೂ ಸಂಪಾದನೆ ಮಾಡುವುದು ಸಲುಭವೆಂದು ಭಾವಿಸುತ್ತಾರೆ. ಕಾರ್ಮಿಕರಿಗೆ ಸರಿಯಾಗಿ ಮನವರಿಕೆ ಮಾಡುವ ಕೆಲಸವನ್ನು ಆಂದೋಲನದ ಮಾದರಿಯಲ್ಲಿ ಮಾಡಬೇಕಾಗಿದೆ.
ಸಫಾಯಿ ಕರ್ಮಚಾರಿಗಳ ಪರಿಸ್ಥಿತಿಯ ಬದಲಾವಣೆಯಲ್ಲಿ ಸಂಶೋಧನೆಯು ಯಾವ ಪಾತ್ರ ವಹಿಸಬಹುದು?
ಪಿಹೆಚ್.ಡಿ ಪ್ರಬಂಧಗಳಿಂದ ಕಾರ್ಮಿಕರಿಗೆ ಯಾವ ಅನುಕೂಲವೂ ಆಗಿಲ್ಲ. ಯಾಕೆಂದರೆ ಅವುಗಳು ಪ್ರಬಂಧಗಳಾಗಿವೆಯೇ ಹೊರತು ಆಕ್ಷನ್ ರಿಸರ್ಚ್ಗಳಾಗಿಲ್ಲ. ರಿಸರ್ಚುಗಳು ಕೇವಲ ಓದುವ ಪುಸ್ತಕಗಳಾಗಿವೆ; ಅವು ಬದುಕುಗಳನ್ನು ಬದಲಾಯಿಸುವ ಪುಸ್ತಕಗಳಾಗಬೇಕು. ಕಾರ್ಮಿಕರೊಂದಿಗೆ ಕೆಲಸಮಾಡುತ್ತಲೇ ಪ್ರಬಂಧ ಬರೆಯುವಂತೆ ರಿಸರ್ಚ್ ಮಾದರಿಗಳು ಬದಲಾಗಬೇಕು.
ಸಫಾಯಿ ಕರ್ಮಚಾರಿಗಳ ಪರಿಸ್ಥಿತಿಯ ಬದಲಾವಣೆಯಲ್ಲಿ ದಲಿತರ ಪಾತ್ರವೇನು?
ಸಫಾಯಿ ಕರ್ಮಚಾರಿಗಳ ವಿಷಯವು ದಲಿತ ಚಳುವಳಿಯ ಆದ್ಯತೆಯಾಗಬೇಕು. ಸಫಾಯಿ ಕರ್ಮಚಾರಿಗಳು ದಲಿತರಲ್ಲೇ ಅಸ್ಪೃಶ್ಯರಾಗಿದ್ದಾರೆ. ಕಾರ್ಮಿಕರು ಸಾರ್ವಜನಿಕರಿಂದ, ಸರ್ಕಾರದಿಂದ ಮತ್ತು ದಲಿತ ಸಮುದಾಯದಿಂದಲೇ ಅಸ್ಪೃಶ್ಯತೆಯನ್ನು ಅನುಭವಿಸುವ ಸಫಾಯಿ ಕರ್ಮಚಾರಿಗಳನ್ನು ಮೊದಲು ದಲಿತ ಸಮುದಾಯದವರೇ ತಮ್ಮವರೆಂದು ಅಪ್ಪಿಕೊಳ್ಳಬೇಕು. ಅವರ ಹೋರಾಟವನ್ನು ಆದ್ಯತೆಯಾಗಿ ಪರಿಗಣಿಸಿ ಬೆಂಬಲಿಸಬೇಕು.

