ತಾತ, ಬಡ್ಡುಬಾಡು ಮತ್ತು ಹಲಗೆ

ಪ್ರಬಲ ಸಂಸ್ಕೃತಿ ಮತ್ತು ತತ್ವಚಿಂತನೆ ಕುರಿತ ಬರವಣಿಗೆಗಳು ಮತ್ತು ಕಲ್ಪನೆಯು ಯಾವಾಗಲೂ ಉದಾತ್ತತೆ ಮತ್ತು ಅಲೌಕಿಕ ಆಕಾಂಕ್ಷೆಗಳನ್ನು ಬಿಂಬಿಸುತ್ತವಲ್ಲದೆ ಆಹಾರ ಮತ್ತು ನಿತ್ಯದ ವಿಷಯಗಳಲ್ಲಿನ ಶುದ್ಧತೆಯ ಕಲ್ಪನೆ ಮತ್ತು ಹೇರಿಕೆಯಲ್ಲಿ ಗ್ರಹಿಸಲ್ಪಟ್ಟಿವೆ. ಶುದ್ಧತೆ ಮೇಲ್ಜಾತಿಯ ಸೂಚಕವೇ ಆಗಿದ್ದು ಜಾತಿತಾರತಮ್ಯದ ತಪ್ಪುಗಳನ್ನು ಸಮರ್ಥಿಸುತ್ತದೆ. ಇದು ಸಫಾಯಿ ಕರ್ಮಚಾರಿ ಸಮುದಾಯದ ಕಲ್ಪನೆಗಳು, ವೃತ್ತಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಉತ್ತರಾಧಿಕಾರವನ್ನು ನಿರಾಕರಿಸುವುದಲ್ಲದೆ ಅವರ ಅಸ್ತಿತ್ವವನ್ನೇ ತಳ್ಳಿಹಾಕುತ್ತದೆ.
ಅಸ್ತಿತ್ವವನ್ನು ಸಮಕಾಲೀನ ಚಿಂತಕಿ, ಕಲಾವಿದೆ, ಕವಿ ಡಾ.ಕೆ.ವಿ.ನೇತ್ರಾವತಿಯವರು ತಮ್ಮ ಕಾವ್ಯದಲ್ಲಿ ಮರುರೂಪಿಸಿದ್ದಾರೆ.

ತಾತ, ಬಡ್ಡುಬಾಡು ಮತ್ತು ಹಲಗೆ
ತಾತ
ನಿಜವಾಗಿಯೂ ಮರುಗುತ್ತಿದ್ದ
ಊರಾಗ ದನ ಸತ್ರೆ
ಅಯ್ಯೋ ಇದಕೇನಾಯ್ತು…
ಏನು ತಿಂತು…
ನೀರು ಕುಡಿತಾ…
ಯಾವಾಗ ಮಲುಗ್ತು…
ತುಂಬಾ ವಿಚಾರಿಸಿ
ಕಾರಣ ತಿಳಿಯುತ್ತಿದ್ದ.

ಅಪ್ಪ ಚಿಕ್ಕಪ್ಪರ ಸಹಾಯದಿಂದ
ಎಳೆದಾಕಿಸಿ
ಊರ ಹೊರಗಿನ ತೋಪಿಗೆ
ಒಬ್ಬನೆ ತಾನೊಬ್ಬನೇ
ಹದವಾಗಿ ಅದರ ಸರ್ಮ ಸುಲಿದು
ಮುಗಿಸುತ್ತಿದ್ದ
ಎಲ್ಲಿಯೂ ಮುಕ್ಕಾಗದ ಹಾಗೆ

ಕೊಯ್ದು ಉದ್ದುದ್ದ ಮಾಡಿ ಬಾಡನ್ನೆಲ್ಲಾ
ಬೇಲಿ ಬಂಡೆಗಳ ಮೇಲೆ ಒಣಗಾಕಿ
ಕಾವಲು ಕಾಯುತ್ತಿದ್ದ
ಕೊಯ್ಸಿಕೊಂಡ ಬಡ್ಡುಬಾಡು
ಆಯಾಗಿ ಒಣಬಂಡೆಗಳ ಮೇಲೊರಗಿ
ಬಿಸಿಲು ಕಾಯುತ್ತಾ ಬೆಚ್ಚಗಾಗುತ್ತಿದ್ದವು
ಒಣಬಾಡಾಗಲು
ತಾ ಮುಂದು ನಾ ಮುಂದು
ಎನ್ನುತ್ತಾ
ಐದಾರು ದಿನಗಳಲ್ಲಿ
ಅಡುಗೆ ಮನೆ ಮಡಕೆ ಸೇರಿ
ಮಲಗುತ್ತಿದ್ದವು
ಒಣಗಿದ ಈರ್ಲಿ ಅಂತೂ
ಅಜ್ಜಿಯ ಮಸಾಲೆಯ ಸಂಗಾತಕ್ಕೆ
ಆತೊರೆಯುತ್ತಾ… ಮನೆ ಮಂದಿಯ
ಗುಂಡಿಗೆಗೆ ಕನ್ನ ಹಾಕುತ್ತಿದ್ದವು.

ಇತ್ತ
ಸುಲಿದ ಸÀರ್ಮ
ಮುಳ್ಳು ಕಲ್ಲಿಲ್ಲದ ನೆಲದ ಮೇಲೆ
ಸ್ವತಂತ್ರವಾಗಿ
ಅಗಲಿಸಿ ಮಲಗುತ್ತಿತ್ತು
ಐದಾರು ಕಡೆ ಮರದ ಗೊತ್ತುಗಳ ಹೊಡೆದು
ವಾರಪೂರ್ತಿ ಒಣಗಿಸುತ್ತಿದ್ದ ತಾತ
ಕಣ್ಣಿಗೆ ಎಣ್ಣೆ ಬಿಟ್ಟು ಕಾವಲು ಕಾದು
ಅದರ ಮೇಲೆ
ತನ್ನ ಉಸಿರನ್ನೆಲ್ಲಾ ಸುರಿಯುತ್ತಿದ್ದ

ಮಾತು ತಯಾರಿಯ ಕನಸು ಕಾಣುತ್ತಾ…
ಗಂಗಮ್ಮನ ಪರಿಷೆಗೆ ಹೇಗೆ
ಕುಣಿಯಬೇಕೆಂದು,
ಮಣ್ಣಿನ ಗುಡ್ಡೆಗೆ ಯಾರು ಕಾಸು
ಸಿಕ್ಕಿಸುವರೋ ಎಂದು,
ಒಂದೇ ಕಣ್ಣಿನಿಂದ
ಎರಡೆರಡು ನೋಟು ಎತ್ತಿ
ಶಬಾಷ್ ಎನಿಸಿಕೊಳ್ಳಬೇಕೆಂದು
ಗ್ಯಾನಿಸುತ್ತಾ…
ಮಸೆ ತುಂಡಿನ ಮೇಲೆ
ಮರಳು ಚೆಲ್ಲಿ ಆರೆ ಮಸೆಯುತ್ತಿದ್ದ

ನೆಲದ ಮೇಲೆ ಬಿಗಿಯಾಗಿ
ಹರಡಿಕೊಂಡು ಒಣಗಿದ್ದ
ದನದ ಸರ್ಮ
ಆರೆಯಿಂದ ಕೂದಲುದುರಿಸಿಕೊಂಡು
ನುಣುಪಾಗುತ್ತಿತ್ತು
ಪಳ ಪಳ ಹೊಳೆಯುತ್ತಿತ್ತು
ಎಳೆಕೂಸ ಕೆನ್ನೆಯಂತೆ
ಇಡೀ ರಾತ್ರಿ
ಕರುಳ ಗಳಿಗೆ ಲೆಕ್ಕ
ನಡೆಯುತ್ತಲೇ ಇರುತ್ತಿತ್ತು
ಒಣಗಿದ ಸರ್ಮದ ಕಾಲುಗಳು ದಾರಗಳಾಗಿ
ಒಲುಮೆಯ ಹೊಲಿಗೆಗೆ ತಯಾರಾಗುತ್ತಿದ್ದವು.

ನೆನೆಹಾಕಿ ಹುಣಸೆ ಬೀಜ
ರುಬ್ಬಿ ನುಣ್ಣಗೆ
ಹೆಣಿಗಿ ಸುತ್ತಿಗೆ ಉಜ್ಜಿ
ಸರ್ಮ ಹಗಲಿಸಿ ಸುತ್ತಿ
ತಾತ ಬಿರುಸಾಗಿ ಹೊಲೆಯುತ್ತಿದ್ದ
ಅದರ ಮೇಲೆ
ಪದಗಳು ಪಟಪಟನೆ ಉದುರುತ್ತಿದ್ದವು

ಬಿಗಿ ಸಾಲದೋ… ಸಾಕಾಯಿತೋ
ನೂರು ಸಲ ನೋಡುತ್ತಾ
ಹಲಗೆಯನು
ಮಾತಾಡಲು ಬಿಟ್ಟು ಬೆಂಕಿಯೊಡನೆ
ಅಪ್ಪಿಕೊಳ್ಳುತ್ತಿದ್ದ ಬಿಗಿಯಾಗಿ
ಒಣಗಿದ ನೀರ ದನಿ
ಸಣ್ಣದಾಗಿ… ಹರಿದು
ಜಗ್ ಜಗ್ ಜಗ್
ಜಗ್ ಜಗ್ ಜಗ್
ನಾದ ಹೊರಡಿಸುತ್ತಿತ್ತು.

ಜಗುನಕ ಸುರಿಸಿದಾಗೆಲ್ಲಾ
ತಾತನ ಮೊಗದಲ್ಲಿ ಬಡ್ಡುಬಾಡು
ಕೊತ ಕೊತ ಕುದಿಯುತ್ತಿತ್ತು
ಏಳು ಸಮುದ್ರಗಳು ಒಮ್ಮೆಗೆ ಉಕ್ಕಿ
ಕುಣಿಯುತ್ತಿದ್ದವು
ಕೋಡಿ ಹರಿದು..
ಗಮಲಿಗೆ

ಜಗ್ ಜಗ್ ಜಗ್
ಜಗುನಕಾ ಜಗುನಕಾ
ಜಗುನಕನ್ನಾ ಜಗುನಕನ್ನಾ

ಸಪ್ಲಮ್ಮ ಮಾರಮ್ಮ
ಪರಿಸೆಗಳಲ್ಲಿ
ಅಕ್ಕೋಜಮ್ಮ ದೊಡ್ಡಮ್ಮ
ಊರಬ್ಬಗಳಲ್ಲಿ
ಹುಟ್ಟುಗಳಲ್ಲಿ
ಸಾವುಗಳಲ್ಲಿ
ಎದೆಗಾಯಗಳಲ್ಲಿ
ಬಂಡಾಯ ಹೂಡುತ್ತಲೇ ಇದ್ದಾನೆ
ತಾತ
ಜಗ್ ಜಗ್ ಜಗ್
ಜಗುನಕ ಜಗುನಕ ಜಗುನಕ
ಜಗುನಕನ್ನಾ ಜಗುನಕನ್ನಾ
– ನೇತ್ರಾವತಿ ಕೆ.ವಿ

ತೀರಿಹೋದ ದನದ ಮಾಂಸವು ಹಸಿವಿಗೆ ಆಹಾರವಾಗುವುದು, ಅದರ ತೊಗಲು ನಾದವಾಗಿ ಹೊಮ್ಮುವುದು -ಇವೆರೆಡರ ನಡುವಿನ ಶ್ರಮ ಮತ್ತು ಕೌಶಲವು ಬೇಡುವ ಏಕಾಗ್ರತೆ, ಶ್ರದ್ಧೆ ಮತ್ತು ತಾಳ್ಮೆ ಆಧ್ಯಾತ್ಮಿಕ ಪ್ರಕ್ರಿಯೆಯೇ ಆಗಿರುವುದನ್ನು ಪದ್ಯವು ಅದ್ಭುತವಾಗಿ ಹಿಡಿದಿಡುತ್ತದೆ. ಒಂದರಿಂದ ಮತ್ತೊಂದು ಆಗುತ್ತಲೇ ಹೋಗುವ ಪ್ರಕೃತಿಯ ಚಕ್ರೀಯ ತತ್ವವನ್ನು ಸಮರ್ಥವಾಗಿ ಮನಗಾಣಿಸುತ್ತದೆ.