ಕಾಳ್ಗಟ್ಟಮ್ಮನ ದೇವಸ್ಥಾನಕ್ಕೆ ಹೊರಟಿದ್ದಳು ಕೆಂಪಮ್ಮ. ಕರೋನಾ ಎಂದು ಯಾರೂ ಅಲ್ಲಿಗೆ ಹೋಗಿರಲಿಲ್ಲ. ಕಸ ಹೊಡೆದು ದೀಪ ಹಚ್ಚಿ ಪೂಜೆ ಮಾಡಿ ಬರೋಣವೆಂದು ಸುಮಾರು ದಿನದಿಂದ ಅಂದುಕೊಂಡವಳಿಗೆ ಬಿಡುವು ಸಿಕ್ಕಿದ್ದು ಇಂದೇ. ಹೂವ, ಬೆಂಕಿಪಟ್ಣ, ಅಳ್ಳೆಣ್ಣೆ, ಬತ್ತಿ, ಕಾಯಿ, ಬಾಳೆಹಣ್ಣು, ಊದುಗಡ್ಡಿ, ಕರ್ಪೂರ, ಅರಿಶಿಣ-ಕುಂಕುಮ, ಎಲೆ-ಅಡಿಕೆಯ ಪೂಜೆ ಸಾಮಾನುಗಳಲ್ಲದೆ, ಸೀಗೆಟ್ಟು, ರಂಗೋಲೆ ಪುಡಿ, ಕಡ್ಡಿರ್ಕೆಯನ್ನು ಮತ್ತು ದಾರಿಯಲ್ಲಿ ಬಿದ್ದಿದ್ದ ಸೆಗಣಿತೊಪ್ಪೆಯನ್ನು ತೆಗೆದುಕೊಂಡು ಹೊರಟಿದ್ದಳು.
ದೇವಸ್ಥಾನವೆಂದರೆ ಪುಟ್ಟದೊಂದು ಗುಡಿ ಹಾಗೂ ಗುಡಿಯೊಳಗೆ ಕಲ್ಲಿನ ಗುಂಡುಗಳು. ಗುಂಡುಗಳು ಎನ್ನುವುದಕ್ಕಿಂತ ಜಾತ್ರೆ ಸಮಯದಲ್ಲಿ ತಮ್ಟದಾರತಿಗೆಂದು ಮಾಡುತ್ತಿದ್ದ ತಮ್ಟದಾಕಾರದಲ್ಲಿದ್ದವು (ಕೊಂಚ ಲೋಟದಾಕಾರ) ಎಂದರೆ ಸರಿ.
ಪುಟ್ಟ ಗುಡಿಯನ್ನು ಗುಡಿಸಿ, ಪಕ್ಕದ ಕುಂಟೆಯಿಂದ ನೀರು ತಂದು ತೊಳೆದಳು. ಬತ್ತಿ ಎಣ್ಣೆಯಲ್ಲಿ ನೆನೆದರೆ ನಿಧಾನ್ಕೆ ಉರಿಯುತ್ತೆ ಅಂತ ಅಮ್ಮನ ಮುಂದಿದ್ದ ದೀಪದಲ್ಲಿನ ಕಿಟ್ಟವನ್ನು ಕೆರೆದು ತೆಗೆದು, ಹೊಸ ಬತ್ತಿ ಹಾಕಿ, ಅಳ್ಳೆಣ್ಣೆ ಬಿಟ್ಟಳು. ಗುಡಿಯ ಮುಂದಿನ ಅಂಗಳದಲ್ಲಿ ತೊಪ್ಪೆ ಹಾಕಿ ಮೇಲೆ ಇಷ್ಟು ನೀರು ಸುರಿದು ಬಗ್ಗಡ ಮಾಡಿ ನೆಲವನ್ನೆಲ್ಲ ದುಂಡಗೆ ಸಾರಿಸಿದಳು. ನಾಕೆಳೆ ರಂಗೋಲೆ ಹಾಕಿದಳು.
ಕುಂಟೆ ಹತ್ತಿರ ಹೋಗಿ ಮೂಗಿಗೆ ಹಾಕಿಕೊಂಡಿದ್ದ ಮಾಸ್ಕು ತೆಗೆದು ಸೊಂಟಕ್ಕೆ ಸಿಗಿಸಿ ಸೀಗೆಟ್ಟು ಹಾಕಿಕೊಂಡು ಕೈಕಾಲು ಮುಖ ತೊಳೆದುಕೊಂಡು ಬಂದಳು. ಮಾಸ್ಕಿಲ್ಲದೆ ಹಾಯೆನಿಸಿತು. ಇನ್ನೆಷ್ಟು ಕಾಲ ಈ ನಳ್ಳಾಟವೋ ಕಾಣೆ ಎಂದುಕೊಂಡು ಮುಖವನ್ನು ಸೆರಗಿನಲ್ಲಿ ಒರೆಸಿಕೊಂಡಳು.
ಗುಡಿಗೆ ಬಂದು ದೀಪ ಹಚ್ಚಿ ಅಮ್ಮನ ಹಣೆಗೆ ಅರಿಶಿಣ-ಕುಂಕುಮವನ್ನು, ಗಲ್ಲಕ್ಕೆ ಅರಿಶಿಣವನ್ನು ಹಚ್ಚಿದಳು. ನೆತ್ತಿಯ ಮೇಲೆರೆಡು ಚೆಂಡುವ್ವ ಇಟ್ಟಳು. ಚಿಪ್ಪಿನಲ್ಲಿದ್ದ ಬಾಳೆಹಣ್ಣಿನ ತುದಿ ಮುರಿದಳು. ತೆಂಗಿನಕಾಯಿ ಒಡೆದು ನೀರನ್ನು ಸುತ್ತ ಚಿಮುಕಿಸಿ ಉಳಿದ ಸ್ವಲ್ಪವನ್ನು ಬಾಯಿಗೆ ಸುರುವಿಕೊಂಡು ಬಾಳೆಹಣ್ಣಿನ ಅಕ್ಕ-ಪಕ್ಕ ಇಟ್ಟಳು. ಎಲೆ ಮೇಲೆ ಕರ್ಪೂರ ಹಚ್ಚಿಟ್ಟು ಅಮ್ಮನಿಗೆ ಬೆಳಗಿದಳು. ಊದುಗಡ್ಡಿ ಹಚ್ಚಿ ಪೂಜೆ ಮಾಡಿದಳು. ‘ಕಷ್ಟ ಪರಿರ್ಸಿ, ಉಸ್ರು ಬಿಡಂಗೆ ಮಾಡೇ ನನ್ ತಾಯಿ’ ಎನ್ನುತ್ತಾ ಕೈಮುಗ್ದು ಅಡ್ಡಬಿದ್ದಳು. ಗುಡಿಗೆ ಮೂರು ಸುತ್ತು ಬಂದು ಗುಡಿಯ ಬಾಗಿಲಲ್ಲಿ ಅಮ್ಮನನ್ನು ನೋಡುತ್ತ ಕುಳಿತಳು. ದೀಪದ ಬೆಳಕಲ್ಲಿ, ಗಲ್ಲದ ಮೇಲಿನ ಅರಿಶಿಣದಲ್ಲಿ ಅಮ್ಮ ಲಕಲಕಿಸುತ್ತಿದ್ದಳು. ಆನಂದವಾಯಿತು. ‘ಕಷ್ಟ ಬಗೆರ್ಸೊ ಶಕ್ತಿ ಕೊಡೆ ನನ್ನವ್ವ ಇನ್ನೇನೂ ಬ್ಯಾಡಾ’ ಎಂದು ಬೇಡಿಕೊಂಡಳು. ಅರೆಗಳಿಗೆ ಹಾಗೇ ಕೂತಳು. ತೆಂಗಿನ ಮರದ ಗರಿಗಳು ಗಾಳಿಗೆ ಓಲಾಡುತ್ತಿದ್ದವು. ಓಲಾಡುವ ಗರಿಯ ಮೇಲೂ ಜೀಕುತ್ತಾ ಗೀಜಗ ಗೂಡು ಹೆಣೆಯುತ್ತಿತ್ತು. ಅತ್ತಿತ್ತ ಚಿತ್ತ ಹರಿಸದೆ ಹುಡುಕಿ ತಂದ ನಾರನ್ನು ಕೊಕ್ಕಿನಿಂದ ತೂರಿಸಿ, ಕಾಲಿನಿಂದ ಹಿಡಿದು, ಮತ್ತೆ ಕೊಕ್ಕಿನಿಂದ ತಿರುಗಿ ಎಳೆದು ತೂರಿಸುವುದು. ಅದನ್ನು ನೋಡಿ ‘ಆಹಾಹಾ ಯರ್ಯಾರ್ಗೆ ಏನೇನ್ ತಾಕತ್ ಕೊಡ್ತಿಯೇ ಯವ್ವಾ’ ಎಂದುಕೊಂಡಳು. ಎದ್ದು ಕಾಯಿ, ಬಾಳೆಹಣ್ಣು ಪುಟ್ಟಿಯಲ್ಲಿಟ್ಟುಕೊಂಡು ಮನೆ ಕಡೆಗೆ ಹೊರಟಳು.
ಕರೋನಾ ಎಂದು ಶಾಲೆಗೆ ರಜೆ ನೀಡಿದ್ದರಿಂದ ಮಕ್ಕಳೆಲ್ಲ ಮನೆಯಲ್ಲೆ ಇದ್ದರು. ‘ಮುಟ್ಟಬೇಡಿ, ಮಾಸ್ಕ್ ಹಾಕಿಕೊಳ್ಳಿ, ಹೊರಗೆ ಹೋಗಬೇಡಿ’ ಎಂದು ಆಶಾ ಕಾರ್ಯಕರ್ತೆಯರು ಹೇಳಿಹೋದದ್ದನ್ನೆ ಮನೆಯವರು ಹೇಳುವುದನ್ನು ಕೇಳಿ ಕೇಳಿ ಮಕ್ಕಳೆಲ್ಲ ರೋಸೋಗಿದ್ದವು. ಹೊಡೆತ, ಬೈಗುಳ ತಪ್ಪದಂತಾಗಿತ್ತು. ಕೂಲಿಗೆ ಹೋದರೆ ನಾಲ್ಕು ಕಾಸು ಕೈಸೇರುತ್ತಿತ್ತು. ಈಗ ಅದೂ ಸಿಗದೆ, ಸಿಗುತ್ತಿದ್ದ ರೇಷನ್ ಸಾಲದೆ ಪರದಾಡುತ್ತಿದ್ದ ತಾಯಂದಿರು ಆತಂಕ ಹೆಚ್ಚಾದಾಗ ಮಕ್ಕಳಿಗೆ ನಾಲ್ಕು ಬಾರಿಸುತ್ತಿದ್ದರು. ಆಮೇಲೆ ಬೇಸರವಾಗಿ ಹತ್ತಿರ ಕರೆದು, ಮೈಸವರಿ ಮುದ್ದುಮಾಡುವಂತಿಲ್ಲ. ‘ಇದೆಂಥಾ ಕಾಯ್ಲ, ಪರಮಾತ್ಮುನಿಗೊಬ್ಬನ್ಗೆ ಗೊತ್ತು’ ಎಂದು ನಿಟ್ಟುಸಿರು ಬಿಡುತ್ತಿದ್ದರು.
ಕೆಂಪಮ್ಮನ ಮನೆ ಅಕ್ಕಪಕ್ಕದಲ್ಲಿದ್ದ ಮಕ್ಕಳೆಲ್ಲ ಸೇರಿದರೆ ಏಳೆಂಟು ಮಕ್ಕಳಿದ್ದವು. ಮನೆಯಲ್ಲಿ ಸುಮ್ಮನೆ ವದೆ ತಿನ್ನುತ್ತವೆ ಎಂದು ಕೆಂಪಮ್ಮ ಆಗೀಗ ಕರೆದು ಕತೆ ಹೇಳುವುದು, ಹಾಡು ಹೇಳುವುದು, ತೆಂಗಿನ ಗರಿಯಲ್ಲಿ ಗಿಳಿ, ವಾಚು, ಗಿರಿಗಿಟ್ಲೆ ಮಾಡಿಸುವುದು, ತಿನ್ನಲು ಏನಾದರೂ ಕೊಡುವುದು, ಸೊಪ್ಪು ಮತ್ತು ಹೂಗಳನ್ನು ಕೀಳಿಸುವುದು, ಕೊಪ್ಪಲಿನ ಗಿಡಗಳಿಗೆ ನೀರು ಹಾಕಿಸುವುದನ್ನು ಮಕ್ಕಳ ಕೈಲಿ ಮಾಡಿಸುತ್ತಿದ್ದಳು. ಈಗಲೂ ಮನೆಗೆ ಹೋದಾಗ ಪಕ್ಕದ ಮನೆಯ ತಿಪ್ಪ ಗೂಸ ಬಿದ್ದಿತ್ತೇನೋ, ‘ಹೋ’ ಎಂದು ಅಳುತ್ತಿದ್ದ. ‘ಲೇ ತಿಪ್ಗಾ ಬರ್ಲ ಮಗ ಬಾಳೆಣ್ ರ್ಸಾದ ತಿನ್ನಿವಂತೆ’ ಎಂದು ಕರೆಯುತ್ತಿದ್ದಂತೆ ಬಿಡುಗಡೆ ಸಿಕ್ಕಂತೆ ತಿಪ್ಪ ಓಡಿಬಂದ. ಬರುವಾಗ ಎಲ್ಲ ದೋಸ್ತರನ್ನು ಕರೆದ. ಅದಾಗಲೇ ಕೆಂಪಮ್ಮ ಬಂದದ್ದು ತಿಳಿದಿದ್ದ ಉಳಿದ ಮಕ್ಕಳು ಓಡಿ ಬಂದರು.
ಕಾಯನ್ನು ಒಡೆದು ಚೂರು ಮಾಡಿ ಬಾಳೆಹಣ್ಣಿನ ಜೊತೆಗೆ ಎಲ್ಲ ಮಕ್ಕಳಿಗೂ ಕೊಟ್ಟಳು. ಮಕ್ಕಳೆಲ್ಲ ಚಿಪ್ಪಿಗಂಟಿದ್ದ ಕಾಯಿ ಕವರಿ ಬಾಳೆ ಹಣ್ಣಿನೊಂದಿಗೆ ಸೇರಿಸಿಕೊಂಡು ಮೆಲ್ಲತೊಡಗಿದರು. ಹಾಡು, ಕತೆಗಳ ಕೆಂಪಮ್ಮ ಮಕ್ಕಳನ್ನ ಕೇಳಿದ್ಲು…
ಬಾಳೆ ಹಣ್ಣು ತಿಂದ್ರ?
ವೋ ವೋ ವಟ್ಟೆವಳಿಕ್ ವೋಗಾಯ್ತು
ಸಿಪ್ಪೆ ಏನ್ಮಾಡಿದ್ರಿ?
ಕೊಟ್ಗೆ ದನ್ಕೆ ಆಕಿದ್ವಿ
ಕೊಟ್ಗೆ ದನ ಏನ್ ಕೊಡ್ತು?
ಸೆಗ್ಣಿ ಕೊಡ್ತು
ಸೆಗ್ಣಿ ಏನ್ಮಾಡಿದ್ರಿ?
ತಿಪ್ಪೆಗಾಕಿದ್ವಿ
ತಿಪ್ಪೆ ಏನ್ ಕೊಡ್ತು?
ಗೊಬ್ರ ಕೊಡ್ತು
ಗೊಬ್ರ ಏನ್ಮಾಡಿದ್ರಿ?
ಬಾಳೆ ತೋಟ್ಕೆ ಆಕಿದ್ವಿ
ಬಾಳೆ ತೋಟ ಏನ್ ಕೊಡ್ತು?
ಬಾಳೆಣ್ ಕೊಡ್ತು
ಬಾಳೆಣ್ ಏನ್ಮಾಡಿದ್ರಿ?
ಅಮ್ಮನ್ ಪೂಜೆಗೆ ಕೊಟ್ವಿ
ಪೂಜೆಲೇನ್ ಕೊಟ್ರು
ಬಾಳೆಣ್ ರ್ಸಾದ ಕೊಟ್ರು
ರ್ಸಾದÀ ಏನ್ಮಾಡಿದ್ರಿ
ಅಣ್ಣು ನುಂಗಣ್ಣ, ಸಿಪ್ಪೆ ದನಕಣ್ಣಾ

ಯಾವಾಗ ಕತೆ, ಹಾಡು ಕೇಳಲಿ ಪ್ರಶ್ನೆ ಹಾಕೊ ತಿಪ್ಪಣ್ಣ ಕೇಳ್ದ- ‘ಅಮ್ಮೊ, ಬಾಳೆಣ್ಣಿಂದ ಸರ್ವಾವಾಗಿ ರೌಂಡ್ ವಡ್ಕಂಡು ಬಾಳೆಣ್ಣಿಗೆ ಬಂದ್ವಿ ಅಲ್ವಾ?’
‘ಊ ಕಣ್ಲಾ ಬಾಳೆಣ್ಣಿಂದ ಸುರುವಚ್ಕಂಡು ಬಾಳೆಣ್ಣಿಗೆ ರ್ಬೋದು. ಇಲ್ಲ ಕೊಟ್ಗೆಯಿಂದ ಸುರುವಚ್ಕಂಡು ಕೊಟ್ಗೆಗೆ ರ್ಬೋದು. ಇಲ್ಲ ತಿಪ್ಪೆಯಿಂದ ಸುರುವಚ್ಕಂಡು ತಿಪ್ಪಗೆ ರ್ಬೋದು.ವಟ್ಟಲ್ಲಿ ಸರ್ವಾದ್ ಕಡೆಗೆ ಬತ್ತೀವಿ, ತರ್ಗಾ ಸುರು ಮಾಡ್ತೀವಿ’ ಎಂದ್ಲು ಕೆಂಪಮ್ಮ.
‘ಸಿಪ್ಪೆ ಅಣ್ಣಾಗ್ಬೇಕಂದ್ರೆ ಏನೇನೆಲ್ಲ ಆಗ್ಬೆಕು ಅಂತ ಗೊತ್ತಾತಾ? ದನ ತಿಂದು ಸೆಗ್ಣಿ ಆಗಿ, ಸಗ್ಣಿ ತಿಪ್ಪೆಗೆ ಬಿದ್ದು ಗೊಬ್ರ ಆಗಿ, ಗೊಬ್ರ ತೋಟಕ್ಕೆ ಬಿದ್ದು ಬಾಳೆ ಮರಕ್ಕೆ ಸಕ್ತಿಕೊಟ್ಟು, ಬಾಳೆಮರ ಅಣ್ ಕೊಡಂಗಾಯ್ತು ಅಲ್ವಾ?’
ಆಗ ತಿಂಡಿಪೋತಿ ಮಂಗ್ಳಿ ಅಂದ್ಲು
ಚಕ್ರ ಚಕ್ರ ಚಕ್ಲಿ ಚಕ್ರ ಬಳೆ ಬಳೆ ಕೋಡ್ಬಳೆ ಚಕ್ರ
ಸುತ್ತಿಸುತ್ತಿ ಮಾಡೊ ಚಕ್ಲಿ-ಕೋಡ್ಬಳೆ
ಕರಂ ಕುರಂ ಕರಂ ಕುರಂ ಚಕ್ಲಿ-ಕೋಡ್ಬಳೆ
ಸಿಕ್ರೆ ಮಂಗ್ಳಿ ತಿನ್ತಳೆ ಒಬ್ಳೆ
ಅಲ್ಲಿಗೆ ಬಂದ್ ಇದ್ನೆಲ್ಲ ಕೇಳಿಸ್ಕಂಡು ನಿಂತಿದ್ಲು ನೇತ್ರ. ಈ ಅಟ್ಟಿ ಉಚ್ಚಮ್ಮನ ಮಗ ಶಿವಂಗೆ ಕೋಲರ್ದಾಗೆ ಕೆಲ್ಸ ಸಿಕ್ಕಿತ್ತು. ಅದೇ ಊರ ಉಡ್ಗಿ ನೇತ್ರನ್ನ ಮೆಚ್ಕಂಡು ಶಿವ ಮದ್ವೆ ಮಾಡ್ಕಂಡಿದ್ದ. ಉಚ್ಚಮ್ಮಂಗೆ ಉಸಾರಿಲ್ಲ ನೋಡಾನ ಅಂತ ಬಂದಿದ್ದ ನೇತ್ರ ಲಾಕ್ಡೌನ್ ಆಗಿ ಇಲ್ಲೆ ಉಳ್ಕಂಡಿದ್ಲು. ಬೋ ಜಾಣೆ. ಅಕ್ಕೊ ನಮ್ಕಡಿದೊಂದು ಇಂತದೆ ಆಟ ಏಳ್ಕೊಡ್ತಿನಿ ಅಂತ ಶುರುವಿಟ್ಕಂಡ್ಲು ನೇತ್ರಾ:


ಎಲ್ಲರು ರೌಂಡಾಗಿ ಕುಂತ್ಕಳಿ
ಎಲ್ಲರು ಕೈನ ಒಲೆ ತರ ಇಟ್ಕಳಿ
ಬೆಳ್ಳು ದೂರ ದೂರ ಇಟ್ಕಳಿ
ಈಗ ಆಟ ಶುರು
ಬೂದಿ ಬೂದಿ ತೋಡು
ಸೌದೆ ಇಕ್ಕು ಸೌದೆ ಇಕ್ಕು
ಇಚ್ಚು ಅಣ್ಸು ಅಣ್ಸು
ಪೆನುಮು ಇಕ್ಕು ಪೆನುಮು ಇಕ್ಕು
(ನೇತ್ರಳ ತೆಲುಗುಗನ್ನಡ ತಿಳಿಯದ ಮಂಗ್ಳಿ ಪೆನುಮು ಅಂದ್ರೆ ಏನಕ್ಕ ಅಂದ್ಲು? ಹೆಂಚು ಅಂದ್ಲು ನೇತ್ರ)
ದೋಸೆ ಆಕು ದೋಸೆ ಆಕು
ತಿರುಗ್ಸು ತಿರುಗ್ಸು
ದೋಸೆ ಬೆಂದೈತಾ ಇಲ್ಲಾ ನೋಡೂನ್ ತಡಿಯಪ್ಪ
ನೋಡಿ ಆ… ಬೆಂದೈತೆ ಅಂತ ಆಮ್ ಆಮ್ ಆಮ್ ಅಂತ ದೋಸೆ ತಿನ್ನೊದು
ತಿಂದಾದ್ಮೇಲೆ ಎಲ್ಲ ಕೈ ಇಂದ್ಕಿಕ್ಕಳಿ ಅಂದ್ಲು. ಎಲ್ಲರು ಕೈಗಳ್ನ ಬೆನ್ ಹಿಂದೆ ಇಟ್ಕೊಂಡ್ರು.
ಕೈಗಳೆಲ್ಲಾ ಎಲ್ ವೋದ್ವು?
ಅಡಿ ಸಂದ್ಕ
ಅಡಿ ಏನ್ ಕೊಡ್ತು
ಸೌದಿ ಕೊಡ್ತು
ಸೌದಿವ್ಯಾ ಏನ್ ಮಾಡ್ದೆ?
ಒಲ್ಯಾಕ್ ಇಕ್ಕಿದ್ರಿ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು
ಬೂದಿವ್ಯಾ ಏನ್ ಮಾಡ್ದೆ?
ವಲ್ಕ ಚೆಲ್ಲಿದ್ನಿ
ವಲ ಏನ್ ಕೊಡ್ತು?
ರಾಗಿ ಕೊಡ್ತು
ರಾಗಿನ ಏನ್ ಮಾಡ್ದೆ?
ಸ್ವಲ್ಪ ರಾಗಿ ಮನ್ಯಾಗ ಮಡ್ಗಿ ಉಳಿದ ರಾಗೀನ ಮೂಟೆ ಕಟ್ಟಿ ಸಂತ್ಯಾಗ ಹೋಗಿ ಮಾರಿದ್ನಿ
ಮಾರಿದ್ರೆ ಏನ್ ಬಂತು
ಕಾಸು ಬಂತು
ಕಾಸ್ನ ಏನ್ ಮಾಡ್ದೆ?
ಆ ಕಾಸುಕ ತೊಟ್ಲು ತೆಗದ್ನಿ
ತೊಟ್ಲಾಗ ಏನ್ ಮಡಗಿದ್ಯಾ?
ಮಗೂನ ಮಡಿಗಿದ್ನಿ
ಮಗೂ ಕೈಕ ಏನ್ ಕೊಟ್ಟ್ಯಾ
ಕೊಬ್ರಿಚಿಪ್ಪು ಬೆಲ್ಲ
ಆ.. ಆ.. ಹೌದಾ ನನಕ ಕೊಬ್ರಿ ಬೆಲ್ಲ
ನಿನಕ ಕೋಳಿ ಪಿಯ್ಯಾ..
‘ವೋ ವೋ ಈ ಚಕ್ರ ದ್ವಾಸೆಯಿಂದ ಕೋಳಿ ಪಿಯ್ಯಕ್ಕೆ ಬಂತು. ದ್ವಾಸೆ ಜತೇಲಿ ಕೋಳಿಸಾರು ಚೆಂದಾಗಿರುತ್ತೆ ನಂಗಿಷ್ಟ’ ಅಂದ್ಲು ಮಂಗ್ಳಿ. ಎಲ್ಲ ಜೋರಾಗಿ ನಕ್ರು.
‘ಇನ್ನು ಇಂತವೆಷ್ಟ್ ಚಕ್ರ ಅವೆ ಗೊತ್ತಾ?’ ಕೆಂಪಮ್ಮ ಕೇಳಿದ್ಲು.
‘ಗೊತ್ತಿಲ್ಲ ಏಳು’ ಅಂದ ಸೀನ.
ಕೆಂಪಮ್ಮ ಹಾಡತೊಡಗಿದಳು:
ಅನಿಅನಿ ಜಿನ್ಗಿ ಜಿನ್ಗಿ
ತೆವ್ಳಿ ತೆವ್ಳಿ ತೊರೆ ಆಗಿ
ಸುಳ್ದು ಸುಳ್ದು ವಳೆ ಆಗಿ
ರ್ದು ಅಲ್ದು ನದಿ ಆಗಿ
ಕೊನ್ಗೋಗಿ ಕಡ್ಲೊಟ್ಟೆ ಸೇರಿ
ಕುದ್ದು ಕುದ್ದು ಆವಿ ಆಗಿ
ಆವಿ ಮ್ಯಾಲೋಗಿ ಮೋಡ್ವಾಗಿ,
ಮೋಡ ತುಂಬ್ಕಂಡು ಮಳ್ಯಾಗಿ ಸರ್ದು
ತರ್ಗ ಅನಿ ಆಗಿ ತೊರೆ ಆಗಿ ವಳೆ ಆಗಿ ನದಿ ಆಗಿ ರ್ದು ಕಡ್ಲು ಸೇರಿ ಕುದ್ದು ಆವಿ ಆಗಿ ಸರ್ದು, ರ್ದು……
‘ಐಟ್ಲಾ ಇದು ನೀರಿನ ಚಕ್ರ’ ಅಂದ್ಲು ಗಂಗೆ.

ಬೀಜ ಮಣ್ಗೆ ಬಿದ್ ಮೊಳ್ತು, ಸಸ್ಯಾಗಿ, ಗಿಡ್ವಾಗಿ ರ್ವಾಗಿ ಊ, ಇಚು, ಕಾಯಿ, ಅಣ್ಣಾಗಿ ಬೀಜವಾಗಿ ತರ್ಗಾ ಉದ್ರಿ ಮೊಳ್ತು….
‘ವೋ ಇದು ಅಸ್ರು ಚಕ್ರ’ ಅಂದ್ಲು ಚಂದ್ರಮ್ಮ.
ಘಮ ಘಮ ರುಚಿರುಚಿ
ಅನ್ನ ಸಾರು ಪಾಯ್ಸ ವೋಳ್ಗೆ
ಪಲ್ಯ ಚಟ್ನಿ ಕಡ್ಬು ಶಾವ್ಗೆ
ಮೂಗು ಗಮ್ನೆ ವಾಸ್ನೆ ಈರಿ
ನಾಲ್ಗೆಲಿ ನೀರೂರಿ
ಬಾಯ್ಲಿಟ್ಟು ಅಲ್ಗುಳು ಜಗ್ದು ಜಗ್ದು
ಗಂಟ್ಲು ನುಂಗಿ
ವಟ್ಟೆ ತುಂಬಿ
ಕಳ್ಳಗೆ ಕಳ್ಸಿ
ಕಸ್ವಿಗೆ ಬೇಕಾದ್ನ ಕಳ್ಳು ಈರಿ
ಮಿಕ್ಕಿದ್ದ್ ದೊಡ್ಡ್ ಕಳ್ಗೆ ವೋಗಿ
ದೊಡ್ಡ್ ಕಳ್ಳು ಉಳ್ದಿದ್ದ್ ಸಾರ ಈರಿ
ಉಳ್ದ ಕಸ ತುದಿ ತಲ್ಪಿ
ಡರ್ ಬುರ್ ಊಸು ಬಂದು
ಎಲ್ಡಕ್ಕೆ ವೋಗೋಕೆ ದೌಡು
ತಿಪ್ಪೆಗ್ ಬಿದ್ದ ಮಲವೆಲ್ಲ ಗೊಬ್ರ ಆಗಿ
ಬೆಳೆಗೆ ಸತ್ವ ಆಗಿ
ತೆನ್ಗಳೆಲ್ಲ ತುಂಬ್ಕಂಡು
ಕಾಳು-ಬೇಳೆ, ದವ್ಸ-ದಾನ್ಯ, ಸೊಪ್ಪು-ರ್ಕಾರಿ, ಅಣ್ಣು-ಅಂಪ್ಲು ಎಲ್ಲ ಆಗಿ
ಎಚ್ಸ್ಕಂಡು, ರ್ಸ್ಕಂಡು, ರುಬ್ಸ್ಕಂಡು, ಬೇಯ್ಸ್ಕಂಡು, ಕಾಯ್ಸ್ಕಂಡು
ಮಾಡ್ದ ಅಡ್ಗೆ ಗಮ ಗಮ ರುಚಿರುಚಿ. ಗಮಗಮ ಮೂಗಿಗ್ ಬಡ್ದು
ಬಾಯಲ್ಲಿ ನೀರೂರಿ
ತರ್ಗ ಸುರು ಚಕ್ರ.
‘ವೋ ವೋ ಇದು ಅನ್ನದ್ ಚಕ್ರ’ ಎಂದಳು ಕೇಳುವುದರಲ್ಲಿ ಕಳೆದೇ ಹೋಗಿದ್ದ ಸೌಭಾಗ್ಯ.
ನೇತ್ರಾ ಉಮೇದಿನಲ್ಲಿ ಇನ್ನಷ್ಟು ಸೇರಿಸಿದಳು.
ಭಲೆ ಭಲೆ ಚಕ್ರ
ಸುತ್ತಿ ಸುತ್ತಿ ತರ್ಗೊ ಚಕ್ರ
ಕೊನೆ ಇಲ್ದೆ ಮದ್ಲು ಇಲ್ದೆ
ಮೇಲೆ-ಕೆಳ್ಗೆ, ಕೆಳ್ಗೆ-ಮೇಲೆ ತರ್ಗೊ ಚಕ್ರ
ಕೊಳೆನೆಲ್ಲ ಬೆಳೆ ಮಾಡೊ ಚಕ್ರ
ಕಸನೆಲ್ಲ ರಸ ಮಾಡೋ ಚಕ್ರ
ಸಂತರಿಗಿದು ಧರ್ಮಚಕ್ರ
ಮನುಷ್ಯರಿಗಿದು ಜೀವನ ಚಕ್ರ
ಮಕ್ಳಿಗಿದು ಮಜಮಜ ಮೋಜಿನ ಚಕ್ರ
ತಮಟೆ ಬಾರಿಸುವ ನರಸಣ್ಣ, ಮೆಟ್ಟುಹೊಲೆಯುವ ನಂಜಕ್ಕ, ರ್ಮ ಹದ ಮಾಡೊ ದಾಸಯ್ಯ ಮತ್ತು ಕತೆ ಹೇಳುವ ಕರಿಯಣ್ಣ ಅಲ್ಲಿಗೆ ಬಂದರು. ಕೊಪ್ಪಲಿನಲ್ಲಿದ್ದ ಹುಣಸೆ ಮರದ ನೆರಳಲ್ಲಿ ಕುಳಿತುಕೊಳ್ಳಲೆಂದು ಕೆಂಪಕ್ಕ ಈಚಲ ಮಂದ್ಲಿಗೆ ತಂದಳು. ದೂರ ಕೂರಲು ಹೇಳಿದಳು. ಮಾಸ್ಕ್ ತೆಗೆಯಬೇಡಿರೆಂದು ಆದೇಶಿಸಿದಳು. ಮಕ್ಕಳು ನರಸಣ್ಣನನ್ನು ತಮಟೆ ಬಾರಿಸಲು ಹೇಳಿದರು. ನರಸಣ್ಣ ತಮಟೆ ಹೊಡೆದರೆ ಎಂಥವರಾದರೂ ಕುಣಿಯುವಂತೆ ಮಾಡುತ್ತಿದ್ದ. ಮಕ್ಕಳಿಗಂತೂ ಬಲು ಖಷಿ ಅವನ ತಮಟೆ ಸದ್ದಿಗೆ ಕುಣಿಯಲು. ಮೂಡಿದ್ದಾಗ ಆ ಮಕ್ಕಳಿಗೂ ತಮಟೆ ಬಾರಿಸುವುದನ್ನು ನರಸಣ್ಣ ಕಲಿಸುತ್ತಿದ್ದ. ಕೋಣವೋ, ದನವೋ, ಆಡೋ ಸತ್ತರೆ ಕಾದಿದ್ದು ಚರ್ಮಕ್ಕಾಗಿ ದಾಸಯ್ಯನ ಹಿಂದೆ ಬೀಳುತ್ತಿದ್ದ ನರಸಣ್ಣ. ದಾಸಯ್ಯನ ಹಿಂದೆ ಬಿದ್ದು ಚರ್ಮ ಹಸನು ಮಾಡಲು ಅವನಿಗೆ ಸಹಾಯ ಮಾಡಿ ತಮಟೆಗೆ ಹೊಂದುವಷ್ಟು ಚರ್ಮವನ್ನು ಸಂಪಾದಿಸುತ್ತಿದ್ದ.
ಚರ್ಮ ಹಸನು ಮಾಡುವುದರಲ್ಲಿ ದಾಸನ ಹೆಂಡತಿ ನಂಜಕ್ಕ ಬಲು ಜಾಣೆ. ಸುಲಿದ ಚರ್ಮಕ್ಕೆ ಅಂಟಿದ್ದ ತುಣುಕನ್ನೆಲ್ಲ ತೆಗೆದು, ಚರ್ಮದ ಮೇಲಿನ ಕೂದಲನ್ನೆಲ್ಲ ಎರೆದು ತೆಗೆದು, ತೊಳೆದು ಸುಣ್ಣ ಬಳಿದು ಮರ್ನಾಲ್ಕು ದಿನ ಇಡುತಿದ್ಲು. ಆಮೇಲೆ ತಂಗಡಿ ಚಕ್ಕೆ ನೆನೆಸಿದ ನೀರಿನಲ್ಲಿ ವಾರ ಹತ್ತು ದಿನವಿಟ್ಟು ತೆಗೆದು ಸಾಫು ಮಾಡುತಿದ್ಲು. ಆಮೇಲೆ ಚೆನ್ನಾಗಿ ಉಜ್ಜಿ ತೊಳೆದು ಸುಣ್ಣದ ನೀರಿನಲ್ಲಿ ಎರಡು ದಿನ ನೆನೆಸಿಡ್ತಿದ್ರು. ಇವೆಲ್ಲ ಆದಮೇಲೆಯೇ ತೊಗಲೆಂಬುವುದು ಬಟ್ಟೆಯಂತೆ ಆಗಿ ಚಪ್ಪಲಿ, ತಮಟೆ ಇತ್ಯಾದಿ ಆಕಾರಕ್ಕೆ ಕತ್ತರಿಸುವಂತಾಗುತ್ತಿತ್ತು. ಚಪ್ಪಲಿ ಹೊಲೆಯುವುದನ್ನೂ ಕಲಿತಿದ್ದ ನಂಜಕ್ಕ ಸಿಮೆಂಟ್ ಫ್ಯಾಕ್ಟರಿ ಹತ್ತಿರ ಚಪ್ಪಲಿ ಹೊಲೆಯಲು ಕುಳಿತುಕೊಳ್ಳುತ್ತಿದ್ದಳು. ಮಕ್ಕಳು ತಮಟೆ ಹೊಡೆಯಲು ಪೀಡಿಸಿದಾಗ ನರಸಣ್ಣ ತಮಟೆ ತರಲು ಎದ್ದ. ತಿಪ್ಪ ‘ನೀನಿಲ್ಲೆ ಇರಣ್ಣೋ ನಾನೋಗಿ ತತ್ತೀನಿ’ ಅಂತ ರೊಯ್ಯನೆ ಬಾಣ ಬಿಟ್ಟಂತೆ ಹೋದ.
ತಮಟೆ ಶುರುವಾದ್ರೆ ಮುಗ್ಯೊ ವತ್ಗೆ ಉಣ್ಣೊ ವತ್ತಾಗುತ್ತೆ ಅಂತ ಕೆಂಪಕ್ಕ ಎಲ್ಡ್ ಕೋಳಿ ಕುಯ್ದು ಬಾಡ್ನೆಸ್ರು ಮಾಡ್ಲಾ ಎಂದು ನಂಜಕ್ಕನನ್ನು ಕೇಳಿದಳು. ಕೋಳಿ ಬಾಡೆಂದರೆ ಜೀವ ಬಿಡುತ್ತಿದ್ದ, ಅಡುಗೆ ಮಾಡಲು ಹಿಂದೇಟು ಹೊಡೆಯುತ್ತಿದ್ದ ನಂಜಕ್ಕ ‘ಊ ಕಣಕ್ಕೋ ಏಸ್ ದಿಸಾಗಿತ್ತು ತಿಂದು, ಇದೇನೊ ಸುಡ್ಗಾಡು ಬಂದು ಅರ್ಕಂಡದೆ. ಬರಿ ಬ್ಯಾಳೆ-ಕಾಳ್ನೆ ತಿಂದು ಸಾಕಾಗದೆ. ಯಾವ್ದು ಕುಯ್ಯನ ಏಳು ನಾನ್ ಕುಯ್ಕೊಡ್ತೀನಿ’ ಎಂದ್ಲು. ಸಾಕಿಕೊಂಡಿದ್ದ ಕೋಳಿಲಿ ಯಾವುದೆಂದು ತೋರಿಸಿ ಕೆಂಪಕ್ಕ ಮಸಾಲೆ ರೆಡಿಮಾಡಿಕೊಳ್ಳಲು ಹೋದಳು. ಕಾಯಿ, ಕಡ್ಲೆ, ಚಕ್ಕೆ-ಲವಂಗ, ಸುಂಠಿ, ಬೆಳ್ಳುಳ್ಳಿ ಈರುಳ್ಳಿನೆಲ್ಲ ರೆಡಿಮಾಡಿಕೊಂಡಳು. ಎಣ್ಣೆ ವಸೀನೆ ಇತ್ತು. ಮಂಗ್ಳಿನ ರ್ದು ‘ನಿಮ್ಮವ್ವಂತವ ಎಣ್ಣೆ ಇಸ್ಕಂಡು ಬಾರೆ, ಅಂಗೆ ನಿಮ್ಮವ್ವನ್ನು ಇಲ್ಲೆ ಉಣ್ಣಕ್ಕೆ ಬಾ ಅಂತ ಕರಿ’ ಎಂದು ಕಳಿಸಿದಳು. ಬಾಡೆಸರಿನ ಹೆಸರು ಕೇಳಿದ ವೆಂಕ್ಟಲಕ್ಷ್ಮಿ ಮಗಳ ಜೊತೆಲೇ ಬಂದು ‘ಯಕ್ಕ ನಾನೇನಾರು ಮಾಡಾನಾ’ ಎಂದು ಕೇಳಿದಳು. ಯಾವ ಕೆಲಸವನ್ನೇ ಆಗಲಿ ಚುರುಕಾಗಿ ಮಾಡಿ ಮುಗಿಸಿಬಿಡುವ ಅವಳನ್ನು ಕಂಡ ಕೆಂಪಮ್ಮ ‘ವೋ ಬಿಡತ್ತಗೆ ನೀನೆ ಬಂದಾ, ಇನ್ನ ಕೋಳಿಸಾರ್ ಮುಗ್ದಂಗೆ, ನಂದೇನು ಕ್ಯಾಮೆ ಇಲ್ಲ’ ಅಂದಳು. ‘ರ್ಲಿ ಬಿಡಕ್ಕೊ’ ಎಂದು ಕೆಲಸ ಶುರುವಚ್ಚಿಕೊಂಡಳು ವೆಂಕ್ಟಲಕ್ಷ್ಮಿ. ಕೆಂಪಕ್ಕ ಇಟ್ಗೆ ಎಸ್ರಿಕ್ಕಿಳು. ಅಷ್ಟೊತ್ತಿಗೆ ಕೋಳಿಕುಯ್ದು ಸೀಯುತ್ತಿದ್ದ ವಾಸನೆ ಮೂಗಿಗೆ ಬಡೀತು.
ಕೋಳಿಬಾಡಿನ ಸಾರು ಆಗುತ್ತಿರುವಾಗ ನರಸಣ್ಣನ ತಮಟೆ ಸದ್ದು ಸಾಗಿತ್ತು.
ಜಗ್ ಜಗ್ಗು ನಕ್ಕು ನಕ್ಕು
ಜಗ್ ಜಗ್ಗು ನಕ್ಕು ನಕ್ಕು
ಮಕ್ಕಳಿಗೆ ಹುಚ್ಚಿಡಿದಂತಾಗಿತ್ತು. ಈಗ ಹುಚ್ಚು ಬಿಟ್ಟವರಂತೆ ಕುಣಿಯತೊಡಗಿದರು.
ನರಸಣ್ಣ ತಮಟೆ ಬಾರಿಸುವುದ ನಿಲ್ಲಿಸಿ ತಮಟೆ ಕತೆ ಶುರುಮಾಡಿದ.
‘ಸುಮ್ನೆ ಅಲ್ಲ ಈ ಕೆಲ್ಸ, ತೊಗಲಿಗೆ ಅಂಟಿದ ಮಾಂಸ ಚರ್ಮದ ಮೇಲೆ ಗೀರು ಬೀಳದಂಗೆ ತಗ್ದು ತೊಳ್ದು, ನೆನ್ಸಿ ಬಿಸ್ಲಾಗೆ ಒಣಗ್ಸಿ, ಒಣಗಿದ ಚರ್ಮ ನಿರಿಗೆ ಬೀಳ್ದಂಗೆ ಕುಟ್ಟಿ ಬಿಗಿ ಮಾಡಿದ್ಮ್ಯಾ ಕೆ ತಮಟೆ, ಕಪಿಲೆ ಬಾನಿ, ಮಿಣಿ, ಚಾವಟಿ, ಚಪ್ಪಲಿ, ಬ್ಯಾಗು ಎಲ್ಲ ಮಾಡದು.’
‘ಕೋಣ-ಎಮ್ಮೆ
ದನ-ಎತ್ತು
ಕುರಿ-ಟಗರು
ಆಡು-ವಾತ
ಇದ್ದಾಗ ಆಲ್ ಕೊಡ್ತವೆ; ಗೇಯ್ಮೆ ಮಾಡ್ತವೆ; ಸತ್ತು ಉಣ್ಣಕೆ ಮಾಂಸ ಕೊಡ್ತವೆ; ಚಮಡ ಕೊಡ್ತವೆ; ಚಪ್ಲಿ, ತಮಟೆ-ನಗಾರಿ, ಮಿಣಿ, ಚಾವಟಿ, ತೊಗಲುಗೊಂಬೆ ಏನೇನಲ್ಲ ಕೊಡ್ತವೆ. ಇದೊಂತರ ತೊಗಲಿನ ಚಕ್ರ ಅಲ್ವಾ’ ಎಂದು ಉದ್ಗರಿಸಿದ ತಿಪ್ಪ.
ನರಸಣ್ಣ ಏನು ಅಂತಾ ಗೊತ್ತ್ತಾಗದೆ ನೋಡಿದಾಗ ಚಕ್ರಗಳ ಕತೆಯನ್ನು ಮಂಗ್ಳಿ ಹೇಳಿದಳು.
‘ನಿಜ ನಿಜ ಕೊನೆನೂ ಇಲ್ಲ, ಮದ್ಲು ಇಲ್ಲ. ಅದ್ರಿಂದ ಇದಾಯ್ತಿವಿ ಇದ್ರಿಂದ ಇನ್ನೊಂದಾಯ್ತಿವಿ. ಏನೇನೋ ಆಗ್ತನೆ ರ್ತೀವಿ.’
ಕತೆಗಳ ಕೇಳಿ ಉಮೇದು ಬಂದ ಕರಿಯಣ್ಣ ‘ನಾವು ಕಾಯಕದಲ್ಲು ಕಡಿಮೆ ಇಲ್ಲ. ದೇವ್ರ ಮ್ಯಾಗಿನ್ ಭಕ್ತೀಲೂ ಕಡಿಮೆ ಇಲ್ಲ.’
ಶ್ರೀನಿವಾಸ, ಕರಿಯಣ್ನ ಕತೆ ಸರ್ವಾಗ್ಲಿ ಅನ್ನೊವಂಗೆ ‘ಲಕ್ಷ್ಮಿನಾರಾಯಾಣ ವರ ಗೋವಿಂದಾ ಗೋವಿಂದಾ’ ಎಂದು ಬಂಬಂಬಂ ಎನ್ನುತ್ತ ಕೈಯನ್ನು ಶಂಖದಂತೆ ಮಾಡಿ ಊದಿದ.
ಉಮೇದು ಬಂದ ಕರಿಯಣ್ಣ
‘ಇಂಗೇ ಒಬ್ಬ ದೂಳಯ್ಯ ಅಂತ ಇದ್ದ. ಈ ನಮ್ ನಿಂಗಕ್ಕ ಮೆಟ್ಟು ವಲಿತಾಳಲ್ಲ ಅಂತ ಕಾಯ್ಕ ಮಾಡ್ಕಂಡಿದ್ದೋನು. ಅವನ್ಗೆ ಸಿವ್ನ ಮ್ಯಾಲೆ ಸ್ಯಾನೆ ಬಕ್ತಿ.’
‘ನಿನ್ನಂಗೆ ಅಲ್ವಾ?’ ಎಂದ ಶ್ರೀನಿವಾಸ
‘ಅಲ್ಲ ಕಣೋ ನಾನು ಯಂಟ್ರೋಣ್ ಸಾಮಿ ಬಕ್ತ’ ಅಂದ ಕರಿಯಣ್ಣ.
‘ಒಟ್ಟಲ್ಲಿ ಯಾವ ದೇವ್ರೋ ಸ್ಯಾನೆ ಬಕ್ತಿ ಇದ್ದೋನು, ಅಷ್ಟೆ ವೆತ್ವಾಸ ಅಂದ್ಲು’ ನಿಂಗಕ್ಕ.
‘ಸರಿ ಇಂಗಿರೋವಾಗ್ಗೆ ಬೆಳಗಾಗೆದ್ದು ಮೆಟ್ಟು ವಲ್ಯೋಕೆ ಕುತ್ಕಂಡ್ರೆ ಉಳಿ ಮೇಲೆ ಸಿವ್ನು ಕಾಣಿಸ್ಕಬೇಕಾ!
ಆಗ ಏನಂದ ಗೊತ್ತಾ ಮಾದಾರ ದೂಳಯ್ಯ’
‘ಯಾರೂ ಪುಗಸಟ್ಟೆ ಕುಂತವರಲ್ಲ ಕ್ಯಾಮಿಲ್ದೆ ನಿನ್ ಬಕ್ತ್ರು. ಅವರತ್ರಕ್ಕೆ ವೋಗಿ ಕಾಯ್ಕ ಮಾಡೋದೇ ನನ್ ಪೂಜೆ ಅಂತಿಯಾ, ಕಾಯ್ಕ ಮಾಡಕೆ ಕುಂತ್ಕಂಡ್ರೆ ಉಳಿ ಮ್ಯಾಕೆ ನಿಂತ್ಕಂತಿಯ.’ ಅಂತ ಅಂದಿದ್ಕೆ ಶಿವ್ನು ‘ಬಲೇ ಬಲೇ ಬಕ್ತ ನೀನು, ಬಿಡುವಲ್ಲೆ ಸಿಕ್ತಿನಿ ಬಿಡಪ್ಪ’ ಅಂತ ವಾದ್ನಂತೆ.
‘ಸುಮ್ಕೆ ಅಲ್ಲ ಕಣ್ರಾ ನಮ್ ಕಾಯ್ಕ. ಬಕ್ತಿ ಅಂದ್ರೆ ಎಂತ ಬಕ್ತಿ ಗೊತ್ತಾ, ಅಳ್ಳಯ್ಯನು ಅವನೆಂಡ್ರು ತೊಡೆ ಚರ್ಮ ಕೂದು ತಗ್ದು ಚಪ್ಲಿ ಮಾಡಿ ಬಸವಣ್ಣಂಗೆ [೧೨ ನೇ ಶತಮಾನದ ವಚನಚಳುವಳಿಯ ಮುಂದಾಳತ್ವವಹಿಸಿದವರು] ಕೊಟ್ಟಾಗ ಅವ್ನು ಸಿವ ಸಿವ ಇದ್ನ ಮೆಟ್ದೊರುಂಟಾ ಅಂತ ನೆತ್ತಿಮ್ಯಾಗೆ ಇಟ್ಕಂಡು ವಾದ್ನಂತೆ.’
ಅನುಭವಗಳ ಗುಡಾಣದೊಳಗಿಂದ ಇನ್ನಷ್ಟು ಕಥಾ ಚಕ್ರಗಳು ಹುಟ್ಟಿರುತ್ತಿದ್ದವೇನೋ ಅಷ್ಟರಲ್ಲಿಕೆಂಪಮ್ಮ ಕೂಗಿದಳು-
‘ಉಣ್ಣಕ್ಕೆಲ್ಲ ಎದ್ದು ಕೈ ತೊಳ್ಕಳಿ’.
ಕೋಳಿಬಾಡಿನೆಸರಿನ ಗಮಲು ಹೀರಿಕೊಂಡು ಎಲ್ಲರು ದಡದಡನೆ ಮೇಲೆದ್ದು ಕೈ ತೊಳೆಯಲು ಹೋದರು.
‘ಐಟ್ಲಾ ಕೋಳಿಸಾರು ಇಷ್ಟ ಅಂದೆ, ಕೋಳಿಸಾರು ಬಂದೇ ಬಿಡ್ತು. ದುಂಡನೆ ಮುದ್ದೆ ಮರ್ದು ದುಂಡನೆ ತುತ್ ಕಟ್ಟಿ ಕೋಳಿಸಾರಲ್ಲದ್ದಿ ಆಮೇಲೆ ಗುಳಂ, ಆಮೇಲೆ ಚಿಚಿ ಅಗಿ, ಮೂಳೆ ಕಡಿ’ ಅಂದ್ಲು ಮಂಗ್ಳಿ. ಅವಳ ಮಾತ್ ಕೇಳಿ ಎಲ್ರ ಬಾಯಲ್ಲೂ ಜೊಲ್ಲು ಸುರೀತು.

