ಮೂತ್ರಸೋಂಕು ತಗುಲಿ ಅದು ಔಷಧಿಗೆ ಸ್ಪಂದಿಸದೇ ಹೋದಾಗ ‘ಯೂರಿನ್ ಕಲ್ಚರ್’ ಎಂದು ಮಾಡುತ್ತಾರೆ. ಯೂರಿನ್ ಕಲ್ಚರ್ ಎಂದರೆ ಮೂತ್ರದಲ್ಲಿನ ಸೂಕ್ಷ್ಮಾ ಣುಗಳನ್ನು ಬೆಳೆಸಿ ಅವು ಯಾವ ನಿರ್ದಿಷ್ಟ ಔಷಧಿಗೆ ಸಾಯುತ್ತವೆ ಎಂದು ಕಂಡುಕೊಳ್ಳುವುದು. ಯಾವುದೇ ವೈರಾಣುವಿನಿಂದ ಬರುವ ತೀವ್ರ ತೆರನಾದ ಸೋಂಕಿಗೂ ಕಲ್ಚರ್ ಟೆಸ್ಟ್ ಮಾಡುತ್ತಾರೆ. ಸೂಕ್ಷ್ಮಾ ಣುಗಳ ವಿಚಾರದೊಂದಿಗೆ ವಿಷಯವನ್ನು ಯಾಕೆ ಪ್ರಾರಂಭಿಸಲಾಯಿತೆಂದರೆ ನಮ್ಮ ಕಣ್ಣಿಗೆ ಕಾಣದ ಲಕ್ಷಾಂತರ ಸೂಕ್ಷ್ಮಾ ಣುಗಳು ಮಣ್ಣನ್ನು ಹಸನು ಮಾಡುತ್ತವೆ, ಮಣ್ಣು ಉಸಿರಾಡುವಂತೆ ಮಾಡುತ್ತವೆ. ಆ ಹಸನಾದ ಭೂಮಿಯ ಮೇಲೆ ಹಸಿವು ನೀಗಿಸಿ, ಕಸುವು ತುಂಬುವ ಆಹಾರವನ್ನು ಬೆಳೆದು ಉಂಡು ನಾವು ಬೆಳೆಯುತ್ತೇವೆ. ಬೆಳೆಯುವುದನ್ನು ಬೇಸಾಯವೆನ್ನುತ್ತೇವೆ. ಇಂಗ್ಲಿಷ್ನಲ್ಲಿ ಅದು ಅಗ್ರಿಕಲ್ಚರ್. ಸಂಸ್ಕೃತಿ ಎಂಬುದು ಸಹ ಮನುಷ್ಯ ಮನುಷ್ಯರ ಒಡನಾಟವೂ ಸೇರಿದಂತೆ ಸುತ್ತಲಿನ ಒಟ್ಟಾರೆ ದೃಶ್ಯ-ಅದೃಶ್ಯ ಜೀವಲೋಕದ ಪರಿಸರದೊಂದಿಗಿನ ಒಡನಾಟದ ಅನುಭವವು ರೂಪಿಸಿದ ಸೂಕ್ಷ್ಮಾ ನೇಯ್ಗೆಯಾಗಿದೆ. ಸಂಸ್ಕೃತಿಯಲ್ಲಿ ಬೆಳೆದು, ಏಳಿಗೆ ಹೊಂದಿ, ಪಸರಿಸಿ, ನಶಿಸುತ್ತೇವೆ. ಈ ನೇಯ್ಗೆ ಸಮೂಹ ಪ್ರಜ್ಞೆ ಮೂಡಿಸುವುದರ ಜೊತೆಗೆ ಬದುಕನ್ನು ಸಾರ್ಥಕತೆಯೆಡೆಗೆ ಒಯ್ಯುವ ಕೆಲಸ ಮಾಡುತ್ತದೆ.
ಮನುಷ್ಯ ಸಮಾಜವು ಪ್ರಾಣಿ ಸಮಾಜಕ್ಕಿಂತ ಭಿನ್ನವಾಗಿರುವುದಕ್ಕೆ ಸಂಸ್ಕೃತಿಯು ಬಹುಮುಖ್ಯ ಕಾರಣವಾಗಿದೆ. ಮನುಷ್ಯರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಂಸ್ಕೃತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.ಸಂಸ್ಕೃತಿಯು ವಿಸ್ತಾರವಾದ, ಆಳವಾದ, ಮಾಂತ್ರಿಕ ಅರ್ಥಗಳನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ ಗರ್ಭದ ತೊಟ್ಟಿಲಿನಿಂದ ಮಣ್ಣ ಮಡಿಲ ಸೇರುವವರೆಗಿನ ಪದ್ಧತಿ, ಆಚರಣೆಗಳೆಲ್ಲವನ್ನು ಒಳಗೊಂಡ ಜೀವನ ವಿಧಾನವನ್ನು ಸಂಸ್ಕೃತಿ ಎಂದು ಹೇಳಬಹುದು. ಆಚರಣೆಗಳು ಆಯಾ ಸಮುದಾಯದ ಲೋಕದೃಷ್ಟಿ, ಅರಿವು ಮತ್ತು ನೆನಪುಗಳ ಪರಂಪರೆಯ ಸಂಕೇತಗಳಾಗಿರುತ್ತವೆ.
ಸೂಕ್ಷ್ಮಾ ವಾಗಿ ಆಳವಾಗಿ ಗಮನಿಸಿದಾಗ ಸುತ್ತಲಿನ ಜೀವಜಾಲದ ಭೌಗೋಳಿಕ ಪರಿಸರ ಮತ್ತು ಅದರೊಂದಿಗಿನ ಸಹಬಾಳ್ವೆ, ಒಡನಾಟದ ಅನುಭವ ಅರಿವು ಮತ್ತು ಲೋಕದೃಷ್ಟಿಯನ್ನು ರೂಪಿಸಿರುವುದು ತಿಳಿಯುತ್ತದೆ. ಈ ಅರಿವು ಮತ್ತು ಲೋಕದೃಷ್ಟಿಯನ್ನು ಆಧರಿಸಿಯೇ ಪ್ರತಿಯೊಂದು ಸಮುದಾಯವು ತನ್ನದೇ ಸೃಷ್ಟಿ ಪುರಾಣವನ್ನು, ಜ್ಞಾನಪುರಾಣವನ್ನು ಕಟ್ಟಿಕೊಂಡಿರುತ್ತದೆ. ಅರಿವು ಮತ್ತು ಲೋಕದೃಷ್ಟಿಯು ಆಯಾ ಸಮುದಾಯದಲ್ಲಿ ಜಾರಿಯಲ್ಲಿರುವ ಆಚರಣೆಗಳಲ್ಲಿ ಸಾಂಕೇತಿಕವಾಗಿ ಬಿಂಬಿತವಾಗುತ್ತಿರುತ್ತದೆ.
ಬಡವರು-ಶ್ರೀಮಂತರು, ಮೇಲ್ಜಾತಿ-ಕೆಳಜಾತಿಯಂತಹ ಶ್ರೇಣೀಕರಣದ ಹೊರತಾಗಿಯೂ ಅರಿವು ಮತ್ತು ಲೋಕದೃಷ್ಟಿಗಳನ್ನು ಎಲ್ಲ ಸಮುದಾಯಗಳು ಕಟ್ಟಿಕೊಳ್ಳುತ್ತವೆ. ಆದರೂ ಸಮಾಜದಲ್ಲಿ ಅಂತಸ್ತು, ಆಸ್ತಿ, ಅಧಿಕಾರ ಹೊಂದಿರುವ ಪ್ರಬಲ ವರ್ಗಗಳ ಸಂಸ್ಕೃತಿ ಮಾತ್ರವೇ ಮುಖ್ಯ ಮತ್ತು ಉಚ್ಛ ಸಂಸ್ಕೃತಿಯಾಗಿ ಪರಿಗಣಿಸಲ್ಪಡುತ್ತದೆ. ಜಾತಿವ್ಯವಸ್ಥೆಯನ್ನು ಆಧರಿಸಿ ಶ್ರೇಣೀಕೃತಗೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿಶ್ರೇಣಿಯ ಮೇಲಿರುವ ಸವರ್ಣೀಯರ/ವೈದಿಕರ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ಮತ್ತು ಶ್ರೇಷ್ಠತೆಯ ಮಾನದಂಡವಾಗಿ ಬಿಂಬಿತವಾಗಿದೆ. ಹೀಗೆ ಬಿಂಬಿತವಾಗಿದ್ದರೂ ಸಹ ಮೇಲು-ಕೀಳು, ಪ್ರಬಲ-ದುರ್ಬಲವೆಂಬ ವಿಂಗಡಣೆಯೊಂದಿಗೇ ಪರಸ್ಪರ ಸಂಸ್ಕೃತಿಗಳ ನಡುವೆ ಅಪಾರವಾದ ತಿಕ್ಕಾಟ, ಪ್ರಭಾವಿಸುವಿಕೆ, ಅನುಸಂಧಾನ ಮತ್ತು ಕೊಡುಕೊಳ್ಳುವಿಕೆಯ ಸಂಕೀರ್ಣವಾದ, ಜಟಿಲವಾದ ಸಂಬಂಧಗಳ ಹೆಣಿಗೆ ಇರುತ್ತದೆ.
ಶ್ರೇಣೀಕರಣದ ಪ್ರಾಬಲ್ಯತೆಯಿಂದಾಗಿ ಶ್ರೇಣಿಯ ಕೆಳಗಿರುವವರು ಮೇಲಿನವರ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುವುದು ಅನುಕರಣೆ ಮತ್ತು ಸಂಸ್ಕೃತೀಕರಣ ಎನಿಸಿಕೊಳ್ಳುತ್ತದೆ. ಶ್ರೇಣಿಯ ಕೆಳಗಿರುವವರ ಸಂಸ್ಕೃತಿಯ ಪ್ರಭಾವವನ್ನು ಮೇಲಿನವರು ಮಾನ್ಯಮಾಡದೆ/ಅಂಗೀಕರಿಸದೆ ಅದು ತಮ್ಮದೇ ಎಂಬಂತೆ ಹೊಂದಿಸಿಕೊಳ್ಳುವುದನ್ನು ಕಾಣಬಹುದು. ಉದಾ: ಹಲವೆಡೆ ಮಾದಿಗ ಜಾತಿಯವರು ಮಣ್ಣಿನ ಮಡಕೆಯನ್ನು ಜಗಲಿಕಟ್ಟೆಯ ಮೇಲೆ ಹೂತಿಟ್ಟು ಅದರಲ್ಲಿ ನೀರು ತುಂಬಿಸಿ ಮೇಲೊಂದು ಸಣ್ಣಗುಡಿ ಕಟ್ಟಿ ಗಂಗೆ ಎಂದು ಪೂಜಿಸುತ್ತಾರೆ. ಈ ನೀರನ್ನು ಪವಿತ್ರವೆಂದು ಬ್ರಾಹ್ಮಣರೂ ಸೇರಿದಂತೆ ಇತರ ಮೇಲ್ಜಾತಿಯವರು ಶುಭಕಾರ್ಯಗಳ ಸಂದರ್ಭದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಇದನ್ನೆಲ್ಲೂ ಉಲ್ಲೇಖಿಸುವುದಿಲ್ಲ. ಹೀಗೆ ಕೆಳಜಾತಿಯ ದೇವಿಯರಿಗೆ ಸಲ್ಲಿಸುವ ಮೊದಲ ಪೂಜೆಯಲ್ಲದೆ ಜಾತ್ರೆ ಮತ್ತು ಉತ್ಸವಗಳ ಸಂದರ್ಭಗಳಲ್ಲಿ ಕೆಳಜಾತಿಯವರ ಕೈಲಿ ದೇವರ ಮುಂದೆ ದೀಪ/ಗರುಡಗಂಬ ಹಿಡಿಸುವುದು, ದೇವರ ಮುಂದೆ ಶಹನಾಯಿ ಊದಿಸುವುದು, ಮೊದಲಿಗೆ ರಥ ಎಳೆಸುವಂತಹ ಆಚರಣೆಗಳು ತಳಜಾತಿಯವರ ಹಕ್ಕಿನ ಸ್ಥಾನವನ್ನು ಕಿತ್ತುಕೊಂಡಿರುವುದರ ಅಥವಾ ಅವರ ದೇವರು ಮತ್ತು ಆಚರಣೆಗಳನ್ನು ತಮ್ಮದಾಗಿಸಿಕೊಂಡ ಚರಿತ್ರೆಯ ಗಾಯಗಳನ್ನು ಎಲ್ಲೆಲ್ಲೂ ಕಾಣಬಹುದಾಗಿದೆ.
ಸಂಸ್ಕೃತಿಯನ್ನು ಪ್ರಕೃತಿಯಿಂದ ಪ್ರತ್ಯೇಕವಾಗಿಯೋ ಅಥವಾ ಮಿಗಿಲಾಗಿಯೋ ನೋಡುವ ಕ್ರಮವೂ ಇದೆ. ಪ್ರತ್ಯೇಕಿಸಿ ನೋಡುವ ಅಥವಾ ಮಿಗಿಲೆಂದು ನೋಡುವಾಗ ಶ್ರೇಷ್ಠವೆಂದು ಸಾಬೀತುಗೊಳಿಸುವ ಅಪಾಯವಿರುತ್ತದೆ. ಎಲ್ಲರ ಮತ್ತು ಎಲ್ಲದರಲ್ಲೊಂದಾಗಿರುವುದಕ್ಕಿಂತ, ಎಷ್ಟೆಷ್ಟು ಪ್ರತ್ಯೇಕವಾಗಿ, ‘ಮುಟ್ಟಿಗೆ’ ದೂರವಾಗಿ ಉಳಿಯುವುದೇ ಶ್ರೇಷ್ಠತೆಗೆ ಆಧಾರವಾಗಿಬಿಡುವ ಅಪಾಯವದು. ಈ ಅಪಾಯವು ಸಮಗ್ರ ದೇಹದೊಳಗೆಯೇ ತಲೆ ಮತ್ತು ಇತರ ಅವಯವಗಳನ್ನು ಬೇರ್ಪಡಿಸಿ, ಪ್ರತ್ಯೇಕ ವಸಾಹತುಗಳಂತೆ ಮಾಡಿದೆ. ಇಲ್ಲಿ ಶ್ರೇಷ್ಠತೆಯ ವ್ಯಸನಕ್ಕಿಂತ ಜೀವಪರ ಕಾಳಜಿಯನ್ನು ಕೇಂದ್ರವಾಗಿಟ್ಟುಕೊಂಡು ಚಲನಶೀಲ ಜ್ಞಾನ ಪರಂಪರೆಯಾಗಿ ಸಂಸ್ಕೃತಿಯನ್ನು ಅರಿಯುವ ಪ್ರಯತ್ನಮಾಡಲಾಗಿದೆ. ತಲತಲಾಂತರಗಳಿಂದ ಪಡೆದುಕೊಂಡ ಜ್ಞಾನವೇ ಆಗಿರುವ ಸಂಸ್ಕೃತಿಯು ರಾಜಕೀಯ ಪ್ರಜ್ಞೆಯೇ ಆಗಿದೆ. ಸಾಯಿಲ್ ಎಂಬ ಇಂಗ್ಲಿಷ್ ಪದಕ್ಕೆ ಮಣ್ಣು ಮತ್ತು ಕೊಳೆ ಎಂಬ ಎರಡೂ ಅರ್ಥವಿದೆ. ಮಣ್ಣು ಮತ್ತು ಕೊಳೆಯೊಂದಿಗೆ ಕೆಲಸದ ಮೂಲಕ ಒಡನಾಡುತ್ತ ಪಡೆದುಕೊಳ್ಳುವ ಜ್ಞಾನ ನಿಜವಾದ ಜ್ಞಾನವಾದ್ದರಿಂದಲೇ ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಹುಟ್ಟಿಕೊಂಡಿದೆ.
ಸಫಾಯಿ ಕರ್ಮಚಾರಿಗಳಿಗೂ ಲೋಕದೃಷ್ಟಿ, ತಿಳಿವು ಮತ್ತು ನೆನಪಿನ ಪರಂಪರೆ ಇದೆ. ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾರೆ.ಪರಸ್ಪರರ ಸಾವು-ನೋವಿಗೆ ಮಿಡಿಯುವ ಮತ್ತು ಹಂಚಿ ಉಣ್ಣುವ, ಅನ್ಯ ದೇವರು, ಧರ್ಮ ಇತ್ಯಾದಿಗಳನ್ನು ಬೇಧವೆಣಿಸದೆ ಒಳಗೊಳ್ಳುವ, ಸ್ಪರ್ಶಕ್ಕೆ, ಭಾವಕ್ಕೆ ಎಟುಕುವ ದೇವರು ಮತ್ತು ಸಂತರು ಅವರ ಸಾಂಸ್ಕೃತಿಕ ಲೋಕದ ಭಾಗವಾಗಿದ್ದಾರೆ. ಮುಟ್ಟುವುದಕ್ಕೆ ಅನರ್ಹವಾದುದು, ಅಶುದ್ಧವಾದುದು ಮತ್ತು ಅಪವಿತ್ರವಾದುದು ಯಾವುದೂ ಈ ಲೋಕದಲ್ಲಿ ಇಲ್ಲ. ಶ್ರಮವೇ ಅವರ ಬದುಕಿನ ಅಧಾರ. ಶ್ರಮದ ಮೂಲಕ ಪಡೆದುಕೊಳ್ಳುವ ಅನುಭವ ಮತ್ತು ಅರಿವೇ ಅವರ ಸಂಸ್ಕೃತಿಯ ಮೂಲಧಾರವಾದ್ದರಿಂದ ಅವರದು ಶ್ರಮ ಸಂಸ್ಕೃತಿಯಾಗಿದೆ. ‘ನಾನು’ ‘ನನ್ನದು’ ಎಂಬುದಕ್ಕಿಂತ ‘ನಾವು’, ‘ನಮ್ಮ’ ಎಂಬ ಪರಸ್ಪರಾವಲಂಬನೆಯ ಸಾಮೂಹಿಕ ಸಂಸ್ಕೃತಿಯಾಗಿದೆ. ತಿಕ್ಕಾಟ, ದಮನಗಳನ್ನು ಎದುರಿಸುತ್ತಲೇ ಅನುಸಂಧಾನದ ದಾರಿಗಳನ್ನು ಹುಡುಕಿಕೊಳ್ಳುವ ಭಾರತೀಯ ಬಹು ಸಂಸ್ಕೃತಿಯ ದರ್ಶನವೂ ಆಗಿದೆ.
ಕಡೆಗಣಿಸಲಾದ ತಳಸಮುದಾಯದವರ ಜ್ಞಾನ, ಅರಿವು, ದರ್ಶನ, ಕಾಣ್ಕೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಕರ್ನಾಟಕದ ಸಾಂಸ್ಕೃತಿಕ ಚಿಂತನೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಂತಹ ಸಮುದಾಯಗಳ ಸಂಸ್ಕೃತಿಯನ್ನು ಉಪಸಂಸ್ಕೃತಿಯಾಗಿ, ಪ್ರತಿಸಂಸ್ಕೃತಿಯಾಗಿ ಚರ್ಚಿಸಲಾಗಿದೆ. ಸಿಂದ್ ಮಾದಿಗರು, ದಕ್ಕಲರು, ಮಾಷ್ಟಿಕರು ಇತ್ಯಾದಿ ಕಡೆಗಣಿಸಲಾದ ಸಮುದಾಯಗಳ ಸಾಂಸ್ಕೃತಿಕ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಉಪಸಂಸ್ಕೃತಿಯ ಮಾಲಿಕೆಯಡಿ ದಾಖಲಿಸಲಾಗಿದ್ದು ಪ್ರಧಾನ ಸಂಪಾದಕರಾದ ಬರಗೂರು ರಾಮಚಂದ್ರಪ್ಪನವರು ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ-
“ಸಂಸ್ಕೃತಿ ಎನ್ನುವುದು ಒಂದೇ ಅಲ್ಲ; ಧರ್ಮ ಎಂಬುದು ಒಂದೇ ಅಲ್ಲ. ಏಕ ಸಂಸ್ಕೃತಿ-ಧರ್ಮಗಳ ಯಜಮಾನ್ಯದಲ್ಲಿ ನಿರ್ಲಕ್ಷಿಸುತ್ತಲೇ ಬಂದ ನೂರೆಂಟು ಸಂಸ್ಕೃತಿಗಳು ನಮ್ಮ ಕಣ್ಣೆದುರಿಗೇ ಇವೆ. ಊರಾಚೆಯ ಅಂಚಿನಲ್ಲಿ ಕಾಡಿನ ಒಡಲಲ್ಲಿ ಜೀವ ಹಿಡಿದುಕೊಂಡಿವೆ. ಅವುಗಳ ಜೀವನ ವಿಧಾನ ಗೊತ್ತೆ? ಕಲೆ ಸಾಹಿತ್ಯಗಳು ಗೊತ್ತೆ?ಇವು ಗೊತ್ತಾಗುತ್ತಾ ಹೋದಂತೆ ಏಕ ಸಂಸ್ಕೃತಿ ಯಜಮಾನಿಕೆಯ ಭ್ರಮೆ ಕರಗತೊಡಗುತ್ತದೆ. ನಮ್ಮೊಂದಿಗೆ ಕರೆದು ಕೂಡಿಸಿಕೊಂಡು ಮುನ್ನಡೆಯಬೇಕಾದ ಬಹು ಸಂಸ್ಕೃತಿಗಳ ಬಹುದೊಡ್ಡ ಲೋಕವೇ ನಮ್ಮೊಳಗೆ ಕಾಣುತ್ತದೆ. ನಾವು ಎಲ್ಲಿಂದ ಎಷ್ಟು ದೂರ ಬಂದಿದ್ದೇವೆ?ನಮ್ಮ ಮೂಲ ನೆಲೆಯಲ್ಲಿ ಎಷ್ಟೊಂದು ಜನರನ್ನು ಎಷ್ಟೊಂದು ದೂರ ನಿಲ್ಲಿಸಿದ್ದೇವೆ ಎಂಬ ಅರಿವು ಆವರಿಸಿಕೊಳ್ಳುತ್ತದೆ. ಈ ‘ದೂರ’ ಸಮೀಪವಾಗುವುದು ಯಾವಾಗ? ಹೇಗೆ ಎಂಬ ಪ್ರಶ್ನೆಗಳಲ್ಲಿ ಉತ್ತರದ ಹುಡುಕಾಟ ಆರಂಭವಾಗುತ್ತದೆ. ಈ ಹುಡುಕಾಟ ದೂರವನ್ನು ಸಮೀಪವಾಗಿಸುವ ಸಂಸ್ಕೃತಿಯಾಗಿ ರೂಪುಗೊಳ್ಳುತ್ತದೆ”(BarguruRamachandrappa: 32&33:1993)
ತಳಸಮುದಾಯ ಮತ್ತು ಅಲಕ್ಷಿತ ಸಮುದಾಯದ ಸಂಸ್ಕೃತಿಯನ್ನು ಪ್ರತಿಸಂಸ್ಕೃತಿಯಾಗಿ ಚರ್ಚಿಸುವ ಸಾಂಸ್ಕೃತಿಕ ಚಿಂತಕ ರಹಮತ್ ತರಿಕೆರೆಯವರು ನೀಡಿರುವ ವಿವರಣೆ ಹೀಗಿದೆ. “ಸಾಮಾಜಿಕವಾಗಿ, ಆರ್ಥಿಕವಾಗಿ ‘ತಳ’ಸ್ತರಕ್ಕೆ ಸೇರಿದ ಸಮುದಾಯಗಳಿಗೆ ಬದುಕಲೇಬೇಕೆಂಬ ಅದಮ್ಯ ಆಸೆಗಳಿರುತ್ತವೆ; ತಮ್ಮಾಸೆ ಕನಸುಗಳ ಈಡೇರಿಕೆಗೆ ವಾಸ್ತವದ ಹೊಳೆ ಅಡ್ಡ ಬಂದರೆ, ಅವು ಈಸುಬಿದ್ದು ಸೆಣಸುವ ಹಠ ತೋರುತ್ತವೆ; ತಮ್ಮನ್ನು ಆವರಿಸಿರುವ ಎಲ್ಲ ತಲ್ಲಣಗಳ ನಡುವೆ ಕೂಡ ಅವು ಪ್ರತಿರೋಧದ ವಿಚಿತ್ರ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ಪ್ರತಿಸಂಸ್ಕೃತಿಯ ಸಾಧ್ಯತೆಗಳು ಸಾಮಾನ್ಯವಾಗಿ ರೂಪು ತಳೆಯುವುದೇ ಇಕ್ಕಟ್ಟುಗಳಲ್ಲಿ. ಹಾಗೆಂದು, ವ್ಯವಸ್ಥೆಯೊಡ್ಡಿದ ಇಕ್ಕಟ್ಟುಗಳಲ್ಲಿ ಪಾರಾಗಿ ತಪ್ಪಿಸಿಕೊಳ್ಳುವ ಜಾಣತನಗಳೇ ಪ್ರತಿಸಂಸ್ಕೃತಿಯಲ್ಲ. ಪ್ರತಿಸಂಸ್ಕೃತಿಯು ಸಂಕಟಗಳಲ್ಲಿರುವ ಸಮುದಾಯಕ್ಕೆ ಪ್ರತಿರೋಧಿಸಿ ಚೈತನ್ಯವನ್ನು ತುಂಬಿ, ಪರ್ಯಾಯಗಳ ಶೋಧನೆಗೆ ಪ್ರೇರೇಪಿಸಬಲ್ಲ ಸಾಮುದಾಯಿಕ ಪ್ರತಿಭೆ ಕೂಡ. ಆದರೆ ‘ಪರ್ಯಾಯ’ವೊಂದು ಒಮ್ಮೆ ರೂಪುಗೊಂಡ ಮೇಲೆ, ಅದು ಸಮುದಾಯಗಳೆಂಬ ಕೆಳಗದ್ದೆಗಳಿಗೆ ಯಾವತ್ತೂ ನೀರುಣಿಸಬಲ್ಲ ಬತ್ತದ ತೊರೆಯಾಗಿ ಉಳಿಯುವುದಿಲ್ಲ. ಒಂದು ಕಾಲಕ್ಕೆ ‘ಪ್ರತಿಸಂಸ್ಕೃತಿ’ ಎಂಬಂತೆ ಮೈತಳೆದ ವಚನ ಚಳುವಳಿಯು ಈಗ ಏನಾಗಿ ನಿಂತಿದೆ ಎಂಬುದು ಇದಕ್ಕೆ ಸಾಕ್ಷಿ. ಈ ಅರ್ಥದಲ್ಲಿ ಬದಲಾಗುವ ಚಾರಿತ್ರಿಕ ಸನ್ನಿವೇಶಗಳಲ್ಲಿ ‘ಪ್ರತಿಸಂಸ್ಕೃತಿ’ಗಳು ಮತ್ತೆ ಮತ್ತೆ ಮೂಡುತ್ತಲೇ ಇರುತ್ತವೆ. ಇದೊಂದು ನಿಲ್ಲದ ಪ್ರಕ್ರಿಯೆ. (ರಹಮತ್ ತರೀಕೆರೆ:ಪೀಠಿಕೆ:೨೦೦೨).
ಸಫಾಯಿ ಕರ್ಮಚಾರಿಗಳನ್ನು ನೈರ್ಮಲ್ಯದ ಕೆಲಸಕ್ಕೆ ಕಟ್ಟಿಹಾಕಲು ಅವರ ಅಸ್ಮಿತೆ ಮತ್ತು ಅಸ್ತಿತ್ವವನ್ನು ರೂಪಿಸಿರುವ ಅವರ ಸಂಸ್ಕೃತಿಯನ್ನೇ ಕೀಳಾಗಿಸಿ ಅನ್ಯರನ್ನಾಗಿಸಲಾಗಿದೆ. ಆ ಮೂಲಕ ಅವರ ಸಂಸ್ಕೃತಿಯ ಮೂಲಾಧಾರವಾಗಿರುವ ಅವರ ತಿಳಿವು ಮತ್ತು ಲೋಕದೃಷ್ಟಿಯನ್ನೇ ಕಡೆಗಣಿಸಲಾಗಿದೆ, ಹತ್ತಿಕ್ಕಲಾಗಿದೆ. ಹೀಗೆ ಅಂಚಿಗೆ ತಳ್ಳಲಾದ ಜನರ ಅನನ್ಯತೆಯೇ ಅವರ ಸಂಸ್ಕೃತಿಯಿಂದ ರೂಪುಗೊಂಡಿರುತ್ತದೆ. ಅವರ ಪೋಷಣೆ ಮತ್ತು ಅವರ ಸಂಸ್ಕೃತಿಯ ಪೋಷಣೆ ಒಂದಕ್ಕೊಂದು ಪೂರಕ ಮತ್ತು ಪ್ರಚೋದಕ. ಇಂಥ ಜೀವನ ಕ್ರಮವೇ ಅಮಾನವೀಯ ವಾಸ್ತವದ ವಿರುದ್ಧ ಸೆಣೆಸಾಡುವ ಸಾಮರ್ಥ್ಯವನ್ನು ನೀಡಿದೆ. ಹಾಗೂ ಅವರನ್ನು ಮಾನವೀಯರನ್ನಾಗಿ ಉಳಿಸಿದೆ. ಪ್ರಭಾವ, ಪ್ರಾಬಲ್ಯ, ದಮನವನ್ನು ಎದುರಿಸುತ್ತಲೇ ತಮ್ಮ ಹೊಲಸನ್ನು ಬಾಚಿಸಿಕೊಂಡು ತುಚ್ಛವಾಗಿ ಕಾಣುವವರ ವಿರುದ್ಧ ಮಾನವೀಯ ಅಂತಃಕರಣವನ್ನು ಕಾಪಾಡಿಕೊಳ್ಳಲು ಗುರಾಣಿಯಂತೆ ಕೆಲಸ ಮಾಡಿದೆ. ಇಂತಹ ಸಂಸ್ಕೃತಿಯನ್ನು ಅರಿಯುವುದು ಅವರ ಪರಿಸ್ಥಿತಿಯ ಸುಧಾರಣೆಗಷ್ಟೇ ಅಲ್ಲದೆ ಒಟ್ಟಾರೆ ಸಮಾಜದ ಒಳಿತಿಗಾಗಿ ಅವಶ್ಯಕ.
ಅಪಾಯಕಾರಿ ಕೆಲಸದ ವಾತಾವರಣದಲ್ಲಿ ಆರೋಗ್ಯವನ್ನು ಕಾಪಾಡುವಂತಹ ಅವಶ್ಯಕ ಕೆಲಸವನ್ನು ಮಾಡುವ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ಸಲ್ಲಿಸಬೇಕಾದುದು ಪ್ರಭುತ್ವದ ಮತ್ತು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಸಫಾಯಿ ಕರ್ಮಚಾರಿಗಳನ್ನು ಮನುಷ್ಯರಾಗಿ, ಪ್ರಜೆಗಳಾಗಿ ಒಪ್ಪಿಕೊಳ್ಳಲು ಅವರ ದುಡಿಮೆಗೆ ನ್ಯಾಯಬದ್ಧವಾಗಿ ಪ್ರತಿಫಲವನ್ನು ಸಲ್ಲಿಸಬೇಕು. ಹಾಗೆಯೇ ಮುಖ್ಯವಾಹಿನಿಯ ಸಂಸ್ಕೃತಿಯು ಅವರ ಮಾನವೀಯ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಪಡೆದುಕೊಳ್ಳುವುದು ಸಾಕಷ್ಟಿದೆ. ಇಲ್ಲಿ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಪ್ರಸ್ತುತ. “ಪ್ರಧಾನ ಸಂಸ್ಕೃತಿಯ ಪ್ರಾಬಲ್ಯದಡಿ ತನ್ನತನ ಕಾಪಾಡಿಕೊಳ್ಳಲು ಶತಾಯ ಗತಾಯ ಹೆಣಗುತ್ತಿರುವ ಮೂಲ ಸಂಸ್ಕೃತಿಗಳ ಅಧ್ಯಯನವು ಮನುಕುಲದ ಒಟ್ಟಾರೆ ಉಳಿವಿಗೆ ಅಗತ್ಯವಾದ ಒಳನೋಟಗಳನ್ನು ಒದಗಿಸಬಲ್ಲದು. ಪ್ರಧಾನ ಸಂಸ್ಕೃತಿಯ ಪ್ರವಾಹಕ್ಕೆ ವಿರುದ್ಧವಾದ ಹಾಗೂ ಭಿನ್ನವಾದ ನಾನಾಮೂಲಾಧಾರೆಗಳು ಆಶ್ಚರ್ಯಕರ ರೀತಿಯಲ್ಲಿ ಇನ್ನೂ ಉಳಿಸಿಕೊಂಡಿರುವ ‘ದೇಸೀ ಜೀವಜನ’ ‘ಜೀವಹೀನ’ ಸಂಸ್ಕೃತಿಯ ಏಕತಾನತೆಯನ್ನು ಮೀರಿ ‘ಜೀವಪರ’ ಸಾಂಸ್ಕೃತಿಕ ಪರ್ಯಾಯವೊಂದಕ್ಕೆ ದಾರಿ ಮಾಡಿಕೊಡಬಲ್ಲದು.
ನೆನಪಿನ ಶಕ್ತಿ, ಚಿಂತಿಸುವ ಶಕ್ತಿ, ಕಲ್ಪನೆ ಮಾಡಿಕೊಳ್ಳುವ ಶಕ್ತಿ ಮತ್ತು ತನ್ನ ಸುತ್ತಲಿನ ಪರಿಸರ ಕುರಿತ ಕುತೂಹಲದಿಂದಾಗಿ ಮನುಷ್ಯ ಸಮುದಾಯಗಳು ಭೂಮಿಯ ಹುಟ್ಟಿನ ಕುರಿತು ಸೃಷ್ಟಿ ಪುರಾಣಗಳನ್ನು ಹಾಗೂ ಸುತ್ತಲಿನ ಪರಿಸರದೊಂದಿಗಿನ ಸಂಬಂಧ, ಸಹಬಾಳ್ವೆ, ಒಡನಾಟದ ಅನುಭವ ಆಧರಿಸಿದ ಜ್ಞಾನ ಪುರಾಣಗಳನ್ನು ಕಟ್ಟಿಕೊಂಡಿವೆ.
ಇಲ್ಲಿ ಸಫಾಯಿ ಕರ್ಮಚಾರಿಗಳ ಸಾಂಸ್ಕೃತಿಕ ಬದುಕನ್ನು ಅವರಲ್ಲಿ ಜಾರಿ ಇರುವ ಸೃಷ್ಟಿ ಪುರಾಣಗಳು, ಜ್ಞಾನ ಪುರಾಣಗಳು ಹಾಗೂ ಅವರು ಜೀವನಾವರ್ತನ, ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಆಚರಿಸುವ ವಿವಿಧ ಆಚರಣೆಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಈ ಪುರಾಣಗಳು ಮತ್ತು ಆಚರಣೆಗಳನ್ನು ಅವಲೋಕಿಸುವಾಗ ಅವು ಪರಿಸರದೊಂದಿಗೆ ನಿಕಟವಾದ ಸಹಬಾಳ್ವೆಯಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ದೇಹವನ್ನು ಮಲಿನವೆಂದು ಭಾವಿಸದೆ, ಮೇಲು-ಕೀಳಿನ ಹೊರತಾದ ಜೀವಪರ ಪ್ರಜ್ಞೆ, ಸರ್ವರ ಹಿತ ಬಯಸುವ ಸಮಷ್ಟಿ ಪ್ರಜ್ಞೆಯ ಪರಂಪರೆ ಒಳಸೆಲೆಯಾಗಿ ಮುಂದುವರೆದುಕೊಂಡುಬಂದಿರುವುದನ್ನು ಕಾಣಬಹುದು. ಅಂತಹ ಪ್ರಜ್ಞೆಯನ್ನು ಸಂಕೇತಿಸುವ ಪ್ರಮುಖ ಪುರಾಣ ಮತ್ತು ಆಚರಣೆಗಳನ್ನು ಇಲ್ಲಿ ನೀಡಲಾಗಿದೆ.
ಸಫಾಯಿಕರ್ಮಚಾರಿಗಳಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸೇರಿರುವ ಜನರಲ್ಲಿ ಜಾರಿ ಇರುವ ಸೃಷ್ಟಿಪುರಾಣಗಳಲ್ಲಿ ಮುಖ್ಯವಾದವುಗಳು ಹೀಗಿವೆ.

