ಪದ್ಮ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮ್ಯಾನ್ಯುವಲ್ ಸ್ಕಾö್ಯವೆಂರ್ಸ್ಗಳನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಬಂದಿರುವ ಅವರು ಕಳೆದ ಹತ್ತು ವರ್ಷಗಳಿಂದ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ಯ ಮೂಲಕ ಮ್ಯಾನ್ಯುವಲ್ ಸ್ಕಾö್ಯವೆಂರ್ಸ್ಗಳನ್ನು ಸಂಘಟಿಸುತ್ತಿದ್ದಾರೆ. ಮಲಬಾಚುವ ಪದ್ಧತಿ ತಡೆಗಟ್ಟಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಸ್ಥಾಪಿಸಿರುವ ‘ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ರಾಜ್ಯ ಮೇಲ್ವಿಚಾರಣಾ ಸಮಿತಿ’ಯ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ಯಾರ ಗಮನಕ್ಕೂ ಬರದೆ ಮ್ಯಾನ್ ಹೋಲ್ ಮತ್ತು ಮಲದ ಗುಂಡಿಗಳಲ್ಲಿ ಬಿದ್ದು ಸಾಯುತ್ತಿದ್ದ ಕಾರ್ಮಿಕರ ಕುರಿತ ಅಧಿಕೃತ ದಾಖಲೆಗಳನ್ನು ನಿರ್ಮಿಸುವ, ಹತ್ತು ಲಕ್ಷ ರೂ.ಗಳ ಮರಣ ಪರಿಹಾರ ಪಡೆಯುವ ಮತ್ತು ಮಲಬಾಚುವ ಕೆಲಸಗಾರರ ನೇಮಕ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ೨೦೧೩ನ್ನು ಜಾರಿಗೊಳಿಸುವ ಕೆಲಸದಲ್ಲಿ ಅವರ ಸಂಘಟನೆಯು ಮಹತ್ವದ ಪಾತ್ರವಹಿಸಿದೆ. ಪ್ರಸ್ತುತ ಅವರ ಸಂಘಟನೆಯು ಕಾಯ್ದೆ ಮತ್ತು ಕಾರ್ಮಿಕರ ಪುನರ್ವಸತಿಯ ಪರಿಣಾಮಕಾರಿ ಜಾರಿಗಾಗಿ ಕೆಲಸ ಮಾಡುತ್ತಿದೆ. ದನಿಯಿಲ್ಲದ, ದಮನಿತ ಮತ್ತು ಅಲಕ್ಷ್ಯಕ್ಕೆ ಒಳಗಾದ ನಿರಕ್ಷರ ಸಮುದಾಯವನ್ನು ಸಂಘಟಿಸುವುದು ಸವಾಲಿನ ಕೆಲಸ. ಅವರ ಮಾನವ ಹಕ್ಕುಗಳಿಗಾಗಿ ಪ್ರಭುತ್ವ ಮತ್ತು ಖಾಸಗಿ ಗುತ್ತಿದಾರರನ್ನು ಎದುರಿಸುವುದು ಸಾಹಸವೇ ಸರಿ. ಇಂತಹ ಸವಾಲು ಮತ್ತು ಸಾಹಸವನ್ನು ಒಬ್ಬ ದಲಿತ ಮಹಿಳೆಯಾಗಿ ತಮ್ಮ ಸಂಘಟನೆಯ ಸಂಗಾತಿಗಳೊಂದಿಗೆ ಪದ್ಮ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿರುವುದು, ಕೆಲವು ಗುರಿಗಳನ್ನು ಸಾಧಿಸಿರುವುದು ಮೈಲಿಗಲ್ಲಾಗಿದೆ. ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೆಳಗೆ ನೀಡಲಾಗಿದೆ.
ಮಲಬಾಚುವ ಕೆಲಸಗಾರರ ಹೋರಾಟದಲ್ಲಿ ಭಾಗಿಯಾಗಲು ಕಾರಣಗಳೇನು?
ಮಾದಿಗ ಜಾತಿಗೆ ಸೇರಿದವಳಾಗಿ ಮಲಬಾಚುವ ಕಾರ್ಮಿಕರ ಸಂಕಟವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ನನ್ನ ಕುಟುಂಬವೇ ಈ ಕೆಲಸವನ್ನು ಮಾಡುತ್ತಿತ್ತು. ನನ್ನ ಕುಟುಂಬದವರು ರೆಡ್ಡಿಗಳ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡುತ್ತಿದ್ದರು. ಸತ್ತ ದನಗಳನ್ನು ಎತ್ತುವುದು, ಅವರ ಮನೆ ಮದುವೆ, ತಿಥಿಗಳಲ್ಲಿ ಕೆಲಸ ಮಾಡಿಕೊಡುವುದು, ಅವರಿಗೆ ಕಷ್ಟವೆನಿಸುವ, ಗಲೀಜೆನಿಸುವ ಕೆಲಸಗಳನ್ನೆಲ್ಲ ಮಾಡುವುದು ಬಿಟ್ಟಿ ಚಾಕರಿಯು ಒಳಗೊಂಡಿತ್ತು. ಈ ಕೆಲಸ ಮಾಡಿದರೆ ಸಿಗುತ್ತಿದ್ದುದು ತಂಗಳೂಟ. ಮದುವೆ, ಹಬ್ಬಗಳ ಸಂದರ್ಭಗಳಲ್ಲಿ ಬೇರೆ ಊರಿಗೆ ಹೋಗಿ ಉಳಿದ ಊಟವನ್ನು ತರುತ್ತಿದ್ದರು. ಹಳಸಿದ್ದನ್ನು ಉಂಡಿರುವುದು ಎಷ್ಟು ಸಲ ಎಂಬುದು ಲೆಕ್ಕವಿಲ್ಲ. ನೀರಿಗೆ ಬೊಗಸೆ ಒಡ್ಡಿದರೆ, ಕಾಫೀ, ಟೀಗೆ ತೆಂಗಿನ ಚಿಪ್ಪು ಒಡ್ಡಬೇಕಾಗಿತ್ತು.
ನಾನು ಸಣ್ಣ ವಯಸ್ಸಿನಿಂದಲೇ ದಲಿತ ಸಂಘರ್ಷ ಸಮಿತಿ ಹೋರಾಟವನ್ನು ನೋಡಿಕೊಂಡೇ ಬೆಳೆದವಳು. ದಲಿತ ಸಂಘರ್ಷ ಸಮಿತಿಯ ಹಾಡು, ಜಾಥಾ, ಸಭೆಗಳು, ಪ್ರತಿಭಟನೆಗಳು ಜಾಗೃತಿ ಮೂಡಿಸಿದವು. ನನ್ನ ತಂದೆ ಹೆಸರು ಮುನಿವೆಂಕಟಪ್ಪ. ಆದರೆ ಅವರನ್ನು ಮೇಲ್ಜಾತಿಯವರು ಮುನಿವೆಂಕಟಿಗ ಎಂದೇ ಕರೆಯುತ್ತಿದ್ದರು. ಊರಿನಲ್ಲಿ ಎಲ್ಲ ದಲಿತರನ್ನು ವರ್ಗಾö್ಯ, ತಿಮ್ಗಾö್ಯ, ಮುನಿಗ್ಯಾ ಎಂದು ಏಕವಚನದಲ್ಲಿಯೇ ಮಾತನಾಡಿಸುತ್ತಿದ್ದರು. ಗೌರವ ನೀಡುತ್ತಿರಲಿಲ್ಲ. ದಲಿತರು ವಯಸ್ಸಿನಲ್ಲಿ ದೊಡ್ಡವರಾದರೂ ಮೇಲ್ಜಾತಿಯ ಚಿಕ್ಕವಯಸ್ಸಿನವರನ್ನೂ ಸಹ ‘ಅಮ್ಮಾ’ ‘ಬುದ್ಧಿ’ ಎಂದು ಕರೆಯಬೇಕಾಗಿತ್ತು. ಜಾತಿ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಸಂಘಟನೆ ಸಹಾಯ ಮಾಡಿತು. ನನ್ನ ತಂದೆಗೆÀ ಹತ್ತು ಎಕರೆ ಜಮೀನಿತ್ತು. ಅದನ್ನು ಮೇಲ್ಜಾತಿಯವರು ಎರಡು ಜೊತೆ ಬಟ್ಟೆ ಕೊಡಿಸಿ ಮೋಸದಿಂದ ಕಿತ್ತುಕೊಂಡಿದ್ದರು. ಹಾಗೆಯೇ ಹಲವು ದಲಿತರು ಮೋಸದಲ್ಲಿ ತಮ್ಮ ಜಮೀನನ್ನು ಕಳೆದುಕೊಂಡಿದ್ದರು. ಇಂತಹ ಸಮಸ್ಯೆಗಳನ್ನು ದಲಿತ ಸಂಘರ್ಷ ಸಮಿತಿ ಸಭೆಗಳಿಗೆ ಹೋಗಿ ಹೇಳುತ್ತಿದ್ದೆ; ಹಾಡುಗಳನ್ನು ಹಾಡುತ್ತಿದ್ದೆ. ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಹನ್ನೆರಡನೇ ವಯಸ್ಸಿನಲ್ಲೇ ವೇದಿಕೆಯ ಮೇಲೆ ಹಾಡುವಂತೆ ಮಾಡಿದರು.
ಕೆ.ಜಿ.ಎಫ್ನಲ್ಲಿ ಮಲಬಾಚುವ ಕಾರ್ಮಿಕರ ಪರಿಸ್ಥಿತಿ ಕುರಿತು ಹೇಳಿರಿ.
ಕೆ.ಜಿ.ಎಫ್ ಮತ್ತು ಮಾಲೂರಿನಲ್ಲಿ ಮಾದಿಗ ಜಾತಿಗೆ ಸೇರಿದವರೇ ಮಲಬಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಕೋಲಾರದಲ್ಲಿ ಬೋವಿಗಳು ಮಾಡುತ್ತಿದ್ದಾರೆ. ಬೋವಿಗಳು ಮಾದಿಗರ ಕೈಲಿ ಕೆಲಸ ಮಾಡಿಸುವುದೂ ಇದೆ. ಕೆ.ಜಿ.ಎಫ್ ಗಣಿಗಳಲ್ಲಿ ಮಲಬಾಚಿಸುವ ಸಲುವಾಗಿ ಆಂಧ್ರದಿಂದ ಮಾದಿಗರನ್ನು ಕರೆತರಲಾಯಿತು. ಬ್ರಿಟಿಷ್ ಕಂಪನಿಯು ನಾಮಕಾವಸ್ತೆಗಾದರೂ ಕೂಲಿ, ವಸತಿ, ಆಸ್ಪತ್ರೆ ಸೇವೆಯನ್ನು ಒದಗಿಸುತ್ತಿತ್ತು. ಆದರೆ ಗಣಿಗಳನ್ನು ಮುಚ್ಚಿದ ಮೇಲೆ ದಲಿತ ಕಾರ್ಮಿಕರ ಪರಿಸ್ಥಿತಿ ದಾರುಣವಾಯಿತು. ಮತದಾನದ ಹಕ್ಕು, ರೇಷನ್ ಕಾರ್ಡ್ನಂತಹ ಯಾವ ಹಕ್ಕುಗಳ ಬಗ್ಗೆಯೂ ಅವರಿಗೆ ಅರಿವಿರಲಿಲ್ಲ. ತಾವು ಈ ದೇಶದ ಪ್ರಜೆಗಳು ಎಂಬ ಅರಿವೂ ಇರಲಿಲ್ಲ. ಯಾರು ಕರೆದರೂ ಪಿಟ್ ಗುಂಡಿಗಳನ್ನು ಕ್ಲೀನ್ ಮಾಡಲು ಹೋಗುತ್ತಿದ್ದರು. ತೋಟಿಗ ಎಂದು ಹೀನಾಯವಾಗಿ ಅವರನ್ನು ಕರೆಯುತ್ತಾರೆ. ಅವರಲ್ಲಿ ಅಕಾಲಿಕವಾಗಿ ಸಾಯುವವರ ಸಂಖ್ಯೆ ಹೆಚ್ಚು. ಹಲವಾರು ಜನ ತೀರಿಕೊಂಡಿದ್ದಾರೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ. ತಮ್ಮ ಹಕ್ಕು ಸೌಲಭ್ಯಗಳಿಗಾಗಿ ಯಾರ ಬಳಿ ಹೋಗಬೇಕೆಂಬುದು ಅವರಿಗೆ ಗೊತ್ತಿರಲಿಲ್ಲ. ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಾರೆ. ಹಸಿವನ್ನು ಇಂಗಿಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಅವರಿಗೆ ತಿಳಿದಿಲ್ಲ. ಅವರು ವಾಸಿಸುತ್ತಿದ್ದ ಏರಿಯಾಗಳು ನಕ್ಷೆಯಲ್ಲೇ ಇರಲಿಲ್ಲ. ದಾರುಣವಾಗಿದ್ದ ಅವರ ಪರಿಸ್ಥಿತಿಯ ಬಗ್ಗೆ ಸರ್ಕಾರವಾಗಲಿ, ರಾಜಕೀಯ ನಾಯಕರುಗಳಾಗಲಿ ಕಾಳಜಿವಹಿಸಿಲ್ಲ.
ಇಂತಹ ಸ್ಥಿತಿಯಲ್ಲಿದ್ದ ಕಾರ್ಮಿಕರನ್ನು ಹೇಗೆ ಸಂಘಟಿಸಲಾಯಿತು?
ಆರಂಭದಲ್ಲಿ ತುಂಬಾ ಕಷ್ಟವಾಯಿತು. ಸುಲಭವಾಗಿ ನನ್ನನ್ನು ನಂಬಲಿಲ್ಲ. ನಿಧಾನವಾಗಿ ಅವರ ವಿಶ್ವಾಸ ಬೆಳೆಸಿಕೊಂಡೆ. ನನ್ನ ಜಾತಿಯ ಗುರುತು ಸಹಕಾರಿಯಾಯಿತು. ಸಂಘಟನೆ, ನಾಯಕತ್ವ, ಹಕ್ಕುಗಳಿಗಾಗಿ ಹೊರಾಡುವುದರ ಕಲ್ಪನೆ ಅವರಿಗಿರಲಿಲ್ಲ. ನಿಧಾನವಾಗಿ ತಿಳಿದುಕೊಳ್ಳುತ್ತಾ ಸಂಘಟಿತರಾಗತೊಡಗಿದರು. ಗಟ್ಟಿಯಾದಂತೆ ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು, ಎಂಎಲ್ಲೆಗಳ ಎದುರಿಸುವುದನ್ನು ಕಲಿತುಕೊಂಡರು. “ನೀವು ಮನುಷ್ಯರು, ನೀವು ಈ ದೇಶದ ಪ್ರಜೆಗಳು, ಮತದಾನ ನಿಮ್ಮ ಹಕ್ಕು, ವಸತಿ ನಿಮ್ಮ ಹಕ್ಕು” ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದೆ. ಅವರ ಕಾಲೋನಿಗಳಿಗೆ ಹೋದೆ. ಅವರ ಪರಿಸ್ಥಿತಿ, ಅವರ ಮಕ್ಕಳ ಶಿಕ್ಷಣ, ಹೊಟ್ಟೆಪಾಡು ಇತ್ಯಾದಿಗಳ ದಾಖಲೆ ಮಾಡಿದೆ. ಸಂಬಂಧಪಟ್ಟ ವರದಿಗಳನ್ನು ಅವರಿಗೆ ಓದಿ ಹೇಳುತ್ತಿದ್ದೆ. ಮಲಬಾಚುವ ಕೆಲಸ ಮಾಡಬಾರದು, ಆ ಕೆಲಸ ಮಾಡುವುದಕ್ಕಲ್ಲ ನಾವಿರುವುದು, ಯಾರೂ ಆ ಕೆಲಸ ಮಾಡಬಾರದು ಎಂದು ಹೇಳುತ್ತಿದ್ದೆ. ಅವರ ವಿಷಯ ಕುರಿತು ಸಾರ್ವಜನಿಕ ನ್ಯಾಯಾಲಯ ಕಾರ್ಯಕ್ರಮವನ್ನು ಆಯೋಜಿಸಿದೆ. ಮಲಬಾಚುವ ಪದ್ಧತಿ ಕೆ.ಜಿ.ಎಫ್.ನಲ್ಲಿದೆ ಎಂಬುದನ್ನು ಒಪ್ಪಲು ಯಾರೂ ಸಿದ್ಧರಿರಲಿಲ್ಲ. ಸರ್ಕಾರವೇ ಒಪ್ಪಲಿಲ್ಲ. ಆಫಿಡವಿಟ್ ಹಾಕಿದೆವು; ಮಾನವ ಹಕ್ಕುಗಳ ಆಯೋಗದ ಗಮನಕ್ಕೆ ತಂದೆವು.
ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಮಲಬಾಚುವ ಪದ್ಧತಿ ಬಗ್ಗೆ ತಿಳಿದುಕೊಳ್ಳಲು ಕೆ.ಜಿ.ಎಫ್.ಗೆ ಬಂದರು. ಅಲ್ಲಿನ ಪೊಲೀಸರು, ಪಾಲಿಕೆ ಅಧಿಕಾರಿಗಳು ಸಚಿವರನ್ನು ಭೇಟಿಯಾಗಲು ನಮ್ಮ ಸಂಘದ ಸದಸ್ಯರನ್ನು ಐಬಿಗೆ ಬರಲು ಹೇಳಿದರು. ಆ ಬಗ್ಗೆ ಪದಾಧಿಕಾರಿಗಳು ನನ್ನನ್ನು ಕೇಳಿದರು. “ನಮ್ಮ ಪರಿಸ್ಥಿತಿಯನ್ನು ತಿಳಿಯಬೇಕಾದರೆ ನಾವಿರುವಲ್ಲಿಗೇ ಅವರು ಬರಬೇಕು” ಎಂದು ಹೇಳಿದೆ. ಅವರು ಅಲ್ಲಿಗೆ ಬಂದಾಗ ನಾನು ಹೋದೆ. ನನ್ನ ಕೆಲಸದ ಬಗ್ಗೆ ವಿಚಾರಣೆ ಮಾಡಿದರು. ಮಲಬಾಚುವುದು ಇನ್ನೂ ಜಾರಿಯಲ್ಲಿ ಇರುವ ಕೋಲಾರ, ಕೆ.ಜಿ.ಎಫ್, ಕುಪ್ಪಂನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ. ವಿಷಯ ಕುರಿತು ಚರ್ಚೆ ನಡೆಸಿದ ನಂತರ ಮಲಬಾಚುವ ಕೆಲಸಗಾರರಿಗೆ ಪರ್ಯಾಯ ಕೆಲಸ ಕೊಡಿಸುವ ನಿರ್ಧಾರ ಮಾಡಿದರು. ಪರ್ಯಾಯವಾಗಿ ನೀಡಿದ್ದು ನಗರಸಭೆಯಲ್ಲಿ ಕಸಗುಡಿಸುವ ಕೆಲಸ. ಆದರೆ ಮೂರು ತಿಂಗಳ ನಂತರ ಗುತ್ತಿಗೆ ಅವಧಿ ಮುಗಿಯಿತೆಂದು ಕೆಸಲದಿಂದ ತೆಗೆದು ಹಾಕಿದರು. ಕೆಲಸಬೇಕೆಂದು ಹೋರಾಟ ಮಾಡಿದೆವು. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಖಾಲಿ ಹೊಟ್ಟೆಯಲ್ಲಿ ಇರಬೇಕಾದ ಪರಿಸ್ಥಿತಿ ಕಾರ್ಮಿಕರದು. ಮೂರು ಜನ ಕಾರ್ಮಿಕರು ಪಿಟ್ ಗುಂಡಿ ಕೆಲಸಕ್ಕೆಂದು ಮತ್ತೆ ಹೋದಾಗ ಅದರಲ್ಲಿ ಬಿದ್ದು ತೀರಿಕೊಂಡರು. ಮಲದಗುಂಡಿಯಲ್ಲಿ ಬಿದ್ದು ತೀರಿಕೊಂಡರೆಂದು ಸಾಬೀತುಪಡಿಸಲು ಮಾದ್ಯಮಗಳಲ್ಲಿ ವ್ಯಾಪಕವಾದ ಪ್ರಚಾರ ಮಾಡಬೇಕಾಯಿತು. ಅಂತಾರಾಷ್ಟ್ರೀಯ ಸಂಘಟನೆಗಳನ್ನು ಸಂಪರ್ಕಿಸಲಾಯಿತು. ದಲಿತ ಸಂಘರ್ಷ ಸಮಿತಿ, ಪಿಯುಸಿಲ್ನಂತಹ ಸಂಘಟನೆಗಳು ಬೆಂಬಲ ನೀಡಿದವು. ತೀರಿಕೊಂಡವರ ಕುಟುಂಬಕ್ಕೆ ಪರಿಹಾರ ನೀಡಲಾಯಿತು. ಅವರ ಹೆಂಡತಿಯರಿಗೆ ಗುಡಿಸುವ ಕೆಲಸ ನೀಡಲಾಯಿತು. ಹದಿನೆಂಟು ತಿಂಗಳುಗಳ ನಂತರ ಮತ್ತೆ ಕೆಲಸದಿಂದ ತೆಗೆದರು. ಕಾರ್ಮಿಕರು ಗುಡಿಸುವ ಕೆಲಸ ಮಾಡುತ್ತಿದ್ದುದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೆಲ್ಲ ನಾಶಪಡಿಸಿದರು. ಆದರೆ ನಾನು ಹಿಂಜರಿಯಲಿಲ್ಲ. ಹುಡುಕಿಕೊಂಡು ಹೋಗಿ ಎಲ್ಲಿ, ಯಾವಾಗ ಕೆಲಸ ಮಾಡುತ್ತಿದ್ದರೆಂಬುದನ್ನು ಮತ್ತೆ ದಾಖಲಿಸಿದೆ. ೧೪೦ ಕಾರ್ಮಿಕರ ದಾಖಲೆಗಳನ್ನಿಟ್ಟುಕೊಂಡು ಲೇಬರ್ ಕೊರ್ಟಿಗೆ ಹೋದೆವು. ನಮ್ಮ ಸಂಘದ ಪದಾಧಿಕಾರಿಗಳು ನನಗೆ ಜೀವ ಬೆದರಿಕೆ ಇರುವುದರಿಂದ ಕೆ.ಜಿ.ಎಫ್.ಗೆ ಬರಬೇಡವೆಂದು ಹೇಳಿದರು. ಇಬ್ಬರು ರಾಜಕೀಯ ನಾಯಕರುಗಳು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ‘ನಾನೇನು ಎಮ್ಮೆಲ್ಲೆ ಎಲಕ್ಷನ್ಗೆ ನಿಲ್ಲಲು ಬಂದಿಲ್ಲ, ನನ್ನ ಸಮುದಾಯದ ಜನಕ್ಕಾಗಿ ಕೆಲಸ ಮಾಡಲು ಬಂದಿದ್ದೇನೆ’ ಎಂದು ಹೇಳಿದೆ. ಆಮೇಲೆ ಅವರು ಬ್ಲಾಕ್ಮೇಲ್ ಮಾಡಿದರು. ನಾನು ಈ ಸಮುದಾಯದವಳೇ ಅಲ್ಲವೆಂದು ಪ್ರಚಾರ ಮಾಡಿದರು. ನನ್ನನ್ನು ಮತ್ತು ನಮ್ಮ ಸಂಘದ ಪದಾಧಿಕಾರಿಗಳನ್ನು ಹೊಡೆಸಿದರು. ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದೆವು. ಅದೊಂದು ದೊಡ್ಡ ಯುದ್ಧ. ನಮ್ಮ ಬದುಕುಗಳನ್ನು ನರಕ ಮಾಡಿದರು. ನಾವು ಪಟ್ಟುಬಿಡಲಿಲ್ಲ. ಕಾರ್ಮಿಕರು ಬಂಡೆಯಂತೆ ನನ್ನೊಂದಿಗೆ ನಿಂತರು. ಮಲಬಾಚುವ ಪದ್ಧತಿ ಜಾರಿ ಇರುವ ಬಗ್ಗೆ ಹಲವು ದೂರುಗಳನ್ನು ದಾಖಲಿಸಿದೆವು. ಹೋರಾಟ ಮಾಡಿ ಸಾವು ಸಂಭವಿಸಿರುವ ಕುಟುಂಬಗಳಿಗೆ ಮರಣ ಪರಿಹಾರ ಕೊಡಿಸಿದೆವು. ಇತ್ತೀಚೆಗೆ ಮಲಬಾಚಿಸಿರುವುದರ ವಿರುದ್ಧ ಮುನಿಸಿಪಲ್ ಕೌನ್ಸಿಲ್ ಸದಸ್ಯರ ವಿರುದ್ಧವೇ ಎಫ್.ಐ.ಆರ್ ಮಾಡಿಸಿದ್ದೇವೆ. ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಹೋರಾಡುತ್ತಿದ್ದೇವೆ. ನಾನು ಮೇಲ್ವಿಚಾರಣಾ ಸಮಿತಿಯ ಸದಸ್ಯೆಯಾಗಿದ್ದೇನೆ. ನಮ್ಮ ಜಾತಿಯ ಮುಂದಿನ ಪೀಳಿಗೆಯವರು ಈ ಕೆಲಸಕ್ಕೆ ಬರಬಾರದು. ಗೌರವ, ಘನತೆ ಸಿಗುವಂತಹ ಕೆಲಸವನ್ನು ಅವರು ಮಾಡಬೇಕು. ಯುವಪೀಳಿಗೆಯವರಲ್ಲಿ ಸ್ಪೂರ್ತಿ ತುಂಬಿ ಓದಿ ಉತ್ತಮ ಕೆಲಸ ಮಾಡುವಂತಾಗಲು ಶ್ರಮಿಸುತ್ತಿದ್ದೇವೆ. ನನ್ನ ಆರ್ಥಿಕ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ. ಎಷ್ಟೊ ಸಲ ನನ್ನ ಬಳಿ ಇರುವ ಅಲ್ಪ ಚಿನ್ನವನ್ನು ಅಡವಿಟ್ಟಿದ್ದೇನೆ. ಮಲಬಾಚುವ ಪದ್ಧತಿಯು ಅತ್ಯಂತ ಹೀನಾಯವಾದ ಗುಲಾಮಗಿರಿ. ಅದನ್ನು ತೊಡೆದುಹಾಕಲು ಹೋರಾಡುವುದನ್ನು ಬಿಟ್ಟರೆ ನನಗೆ ಯಾವ ಗುರಿಯೂ ಇಲ್ಲ. ಜೀವವಿರುವವರೆಗೂ ಈ ಹೋರಾಟಕ್ಕೆ ಬದ್ಧಳಾಗಿರುತ್ತೇನೆ. ಇದು ಬಹುದೊಡ್ಡ ಕೆಲಸ; ಅಪಾರ ಬೆಂಬಲ ಬೇಕು.
ಬೆಂಬಲ ಹೇಗೆ ಸಿಗುತ್ತಿದೆ?
ಸ್ವರಾಜ್ ನೆಟ್ವರ್ಕ್, ವಿಸ್ತಾರ್, ಆಕ್ಷನ್ಏಡ್, ಸಿಕ್ರಮ್ನಂತಹ ಸರ್ಕಾರೇತರ ಸಂಸ್ಥೆಗಳು ಪಿಯುಸಿಎಲ್ನಂತಹ ಸಂಘಟನೆಗಳು (ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆಯನ್ನು ಜಯಪ್ರಕಾಶ್ ನಾರಾಯಣ್ ಅವರು ೭೦ರ ದಶಕದಲ್ಲಿ ಆರಂಭಿಸಿದರು) ಬೆಂಬಲ ನೀಡಿವೆ. ಸಾಮಾಜಿಕ ಹೋರಾಟಗಾರರಾದ ವೈ.ಜೆ. ರಾಜೇಂದ್ರ, ಟಿ.ಕೆ.ದಯಾನಂದ, ಚಂದ್ರು ಅವರು ನಿರಂತರ ಬೆಂಬಲ ನೀಡುತ್ತಿದ್ದಾರೆ.
ಕುಟುಂಬದ ಬೆಂಬಲ ಹೇಗಿದೆ?
ನಾನು ಹೋರಾಟ ಮಾಡಲು ಸಾಧ್ಯವಾಗಿದ್ದು ನನ್ನ ತಾಯಿಯ ಬೆಂಬಲದಿಂದ. ನನ್ನ ಎರಡು ಮಕ್ಕಳನ್ನು ಅವರೇ ಸಾಕಿದÀರು. ತುಂಬಾ ಚಿಕ್ಕವಯಸ್ಸಿಗೆ ಮದುವೆಯಾಯಿತು. ಗಂಡ ಟೈಲರಿಂಗ್ ಕೆಲಸ ಮಾಡುತ್ತಿದ್ದ. ಹಿಂದೆ ಗಂಡನಿಂದ ತುಂಬಾ ಕಿರುಕುಳ ಅನುಭವಿಸಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಪಿಯುಸಿಗೆ ಓದು ನಿಲ್ಲಿಸಿ ರೂರಲ್ ಡೆವಲಪ್ಮೆಂಟ್ ಆರ್ಗನೈಜೇಷನ್ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ನನ್ನ ಕೆಲಸಕ್ಕೆ ನನ್ನ ಗಂಡ ಅಡ್ಡಿಪಡಿಸುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ.

