ಕೌಟುಂಬಿಕ ಹಿನ್ನೆಲೆ
ನಾರಾಯಣ್ ಅವರ ಪೂರ್ವಿಕರು ಆಂಧ್ರದ ನೆಲ್ಲೂರಿನವರು. ತಾಯಿ ಈರಮ್ಮ, ತಂದೆ ಚಿನ್ನರಾಮು. ಇವರ ತಾಯಿ ಖಾಯಂ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದರು. ತಂದೆಯವರು ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದರು. ಮುಂದೆ ಅಟೆಂಡರ್ ಆಗಿ ಕೆಲಸ ಮಾಡಿದರು. ಸ್ವತಃ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿದ ನಾರಾಯಣ್ ಅವರು ಮೈಸೂರು ನಗರದ ಮೇಯರ್ ಆಗಿದ್ದರು.
ಸಫಾಯಿ ಕರ್ಮಚಾರಿಗಳಿಗಾಗಿ ಹೋರಾಟ ಮಾಡಲು ಸಿಕ್ಕ ಪ್ರೇರಣೆ ಯಾವುದು?
ಬಾಲ್ಯದಲ್ಲಿ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದ ಅನುಭವ ಮತ್ತು ಜಾತಿಯ ಕಾರಣಕ್ಕಾಗಿ ಅನುಭವಿಸಿದ ನೋವು ಅವಮಾನಗಳೇ ನನಗೆ ಪ್ರೇರಣೆ. ನನ್ನ ಸಮುದಾಯಕ್ಕಾಗಿ ಏನಾದರೂ ಮಾಡಲೇಬೇಕೆಂದು ಸಣ್ಣವಯಸ್ಸಿನಲ್ಲೇ ತೀರ್ಮಾನಿಸಿದೆ. ನಾನು ರೈಲ್ವೆ ಸ್ಟೇಷನ್‌ನಲ್ಲಿ ರೈಲ್ವೆ ಹಳಿಗಳ ಮೇಲಿನ ಮಲಬಾಚಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದೆ. ಮುಂದೆ ಜಾವಾ ಫ್ಯಾಕ್ಟರಿಯಲ್ಲಿ ೨೪ ವರ್ಷಗಳ ಕಾಲ ಸ್ವಚ್ಛತೆಯ ಕೆಲಸ ಮಾಡಿದೆ. ಆರಂಭದಲ್ಲಿ ನನಗೆ ೪ರೂ. ಸಂಬಳ ಸಿಗುತ್ತಿತ್ತು. ಜೊತೆಗೆ ಅಲ್ಲಿನ ಅಧಿಕಾರಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ತೊಳೆಯುವುದು, ಅವರ ಮನೆಯ ನಾಯಿಯನ್ನು ತೊಳೆಯುವುದು, ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದೆ. ಅವರು ಏನಾದರು ಕೆಲಸ ಕೊಡಿಸಬಹುದೆಂಬ ಆಸೆಯಿತ್ತು. ಅವರ ಮನೆಯಲ್ಲಿ ಮರದ ಎಲೆಯನ್ನು ಕಿತ್ತುಕೊಂಡು ಹಿಡಿದರೆ ಮೇಲಿನಿಂದ ಊಟ ಹಾಕುತ್ತಿದ್ದರು. ಈ ಕೆಲಸ ಮತ್ತು ಜಾತಿಯಿಂದ ಅನುಭವಿಸುವ ಕಷ್ಟ ನೋವು ನನಗೆ ಚೆನ್ನಾಗಿ ಗೊತ್ತು.
ಸಫಾಯಿ ಕರ್ಮಚಾರಿಗಳಿಗೆ ನೀವು ಕೈಗೊಂಡ ಕಾರ್ಯಗಳೇನು?
ನಾನು, ನನ್ನ ೧೮-೧೯ನೇ ವಯಸ್ಸಿನಿಂದಲೇ ಸಮಾಜಮುಖಿ ಕೆಲಸವನ್ನು ಮಾಡಲು ಆರಂಭಿಸಿದೆ. ೧೯೭೮ರಲ್ಲಿಯೇ ‘ಪೌರಕಾರ್ಮಿಕರ ಅಭಿವೃದ್ಧಿ ಸಂಘ’ವನ್ನು ಸ್ಥಾಪಿಸಿದೆ. ಪೌರಕಾರ್ಮಿಕರ ಮನೆಗಳಿಗೆ ಕುಡಿಯುವ ನೀರು, ಶೌಚ, ವಿದ್ಯುತ್‌ನಂತಹ ಮೂಲ ಸೌಕರ್ಯಗಳನ್ನು ಕೊಡಿಸಲು ಸಂಘದ ಮೂಲಕ ಹೋರಾಟ ಮಾಡಿದೆವು.
ಮೈಸೂರು ಕೊಳಚೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕೊಳಗೇರಿಗಳಲ್ಲಿ ಸಾರಾಯಿ ಅಂಗಡಿ ತೆರವು ಮಾಡಿಸುವುದು, ಶಾಲೆಗಳನ್ನು ಸ್ಥಾಪಿಸುವುದು, ಸಾಕ್ಷರತೆಯ ಜಾಥದಂತಹ ಪುನರ್ವಸತಿ ಕೆಲಸಗಳನ್ನು ಒಕ್ಕೂಟದಿಂದ ಮಾಡಿದೆವು.
ನಗರಪಾಲಿಕೆ ಪೌರಕಾರ್ಮಿಕರ ಸಂಘವನ್ನು ಸ್ಥಾಪಿಸಿ ಆ ಮೂಲಕ ಪೌರಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡಿದೆವು.
೧೯೯೬ರಲ್ಲಿ ಕಾರ್ಪೊರೇಟರ್ ಆಗಿ ಆಯ್ಕೆಯಾದಗಲೂ ಪೌರಕಾರ್ಮಿಕರಿಗಾಗಿ ಕೆಲಸ ಮಾಡಿದೆ.
ಮೈಸೂರು ನಗರದ ಮೇಯರ್ ಆಗಿ ನೀವು ಕೈಗೊಂಡ ಕಾರ್ಯಗಳೇನು?
೨೦೦೦ದಲ್ಲಿ ನಾನು ಮೇಯರ್ ಆಗಿ ಚುನಾಯಿತನಾದೆ. ಮೈಸೂರು ರೈಲ್ವೇ ನಿಲ್ದಾಣದಲ್ಲಿ ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಎನ್.ರಾಚಯ್ಯ, ಬಿ.ರಾಚಯ್ಯ, ಕೆ.ಸಿದ್ಧಯ್ಯ, ರಾಮಕೃಷ್ಣಯ್ಯನಂತಹ ದಲಿತ ನಾಯಕರುಗಳ ಹೆಸರನ್ನು ಮೈಸೂರಿನ ಕೆಲವು ವೃತ್ತಗಳಿಗೆ ಮತ್ತು ರಸ್ತೆಗಳಿಗೆ ಇರಿಸಿದೆ. ಜಗಜೀವನ್ ರಾಮ್ ಅವರ ಮಗಳು ಮೀರಾ ಕುಮಾರ್ ಅವರು ಮೈಸೂರಿಗೆ ಬಂದಾಗ ಪ್ರತಿಮೆಯನ್ನು ನೋಡಿ ತುಂಬಾ ಸಂತೋಷಪಟ್ಟರು. ಪೌರಕಾರ್ಮಿಕರಿಗಾಗಿ ೫೨೪ ವಸತಿಗಳನ್ನು ನೀಡಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರಿಸುವ ಹಣದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪಾಲಿಕೆಯಿಂದ ಧನಸಹಾಯ ಸಿಗುವಂತೆ ಮಾಡಿದೆ. ಚೈನಾದಲ್ಲಿ ಮೇಯರ್‌ಗಳ ಸಮಾವೇಶದಲ್ಲಿ ಪಾಲ್ಗೊಂಡೆ.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೀವು ಕೈಗೊಂಡ ಕಾರ್ಯಕ್ರಮಗಳೇನು?
ರಾಜ್ಯ ಮಟ್ಟದಲ್ಲಿ ಪೌರಕಾರ್ಮಿಕರನ್ನು ಸಂಘಟಿಸಲಾಯಿತು. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಎರಡು ಬೃಹತ್ ಸಮಾವೇಶಗಳನ್ನು ಮಾಡಲಾಯಿತು. ಒಂದು ಸಮಾವೇಶದಲ್ಲಿ ಒಂದು ಲಕ್ಷ ಕಾರ್ಮಿಕರು, ಮತ್ತೊಂದು ಸಮಾವೇಶದಲ್ಲಿ ಐವತ್ತು ಸಾವಿರ ಕಾರ್ಮಿಕರು ಸೇರಿದ್ದರು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲು ಶ್ರಮಿಸಿ ಯಶಸ್ವಿಯಾದೆವು. ಪೌರಕಾರ್ಮಿಕರಿಗೆ ರೂ.೧೪೦೦೦ ವೇತನ ಹೆಚ್ಚಳ ಮಾಡಲಾಯಿತು. ಅವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಯಿತು. ಕಾರ್ಮಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು. ಇದು ದೇಶದಲ್ಲೇ ಮೊದಲು. ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡುವುದು ಜಾರಿಗೆ ತರಲಾಯಿತು. ಸ್ಥಳೀಯ ಸಂಸ್ಥೆಗಳಲ್ಲಿನ ಸ್ಪೆಷಲ್ ಕಾಂಪೊನೆಂಟ್ ಪ್ಲಾನ್ ಹಣದಲ್ಲಿ ಪೌರಕಾರ್ಮಿಕರಿಗಾಗಿ ೨೦% ಮೀಸಲಿಡಿಸಿದೆ. ಪೌರಕಾರ್ಮಿಕರಿಗೆ ವಿದೇಶಿ ಪ್ರವಾಸ ಜಾರಿಗೆ ತರಲಾಯಿತು. ಬೆಂಗಳೂರಿನಲ್ಲಿ ೪೦೦ ಬಿಡಿಎ ಫ್ಲಾಟುಗಳನ್ನು ಪೌರಕಾರ್ಮಿಕರಿಗೆ ನೀಡಲಾಯಿತು.
ಸ್ವಚ್ಛತೆಯ ಕೆಲಸದಲ್ಲಿ ನಾಗರಿಕರ ಪಾತ್ರವೇನು?
ನಾಗರಿಕರ ಪಾತ್ರ ದೊಡ್ಡದಿದೆ. ಅವರು ಜವಾಬ್ದಾರಿಯಿಂದ ಕಾರ್ಮಿಕರೊಂದಿಗೆ ಕೈಜೋಡಿಸಿದರೆ ಸ್ವಚ್ಛತೆಯ ಕೆಲಸಕ್ಕೆ ಮೌಲ್ಯ ಬರುತ್ತದೆ. ಸಿಂಗಪುರ ಹಾಗೂ ಇತರೆ ದೇಶಗಳಲ್ಲಿ ಜಾರಿ ಇರುವಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಆಗ ಬೇಕಾಬಿಟ್ಟಿ ಕಸ ಎಸೆಯುವುದು ಕಡಿಮೆಯಾಗುತ್ತದೆ.
ನೀವು ಎದುರಿಸಿದ ಕಠಿಣ ಸವಾಲು ಯಾವುದು?
ಗುತ್ತಿಗೆ ಪದ್ಧತಿ ರದ್ದುಪಡಿಸಲು ಹೋರಾಟ ಮಾಡುವಾಗ, ಬೇಡಿಕೆ ವಾಪಸ್ಸು ತೆಗೆದುಕೊಳ್ಳಲು ಗುತ್ತಿಗೆದಾರರು ಐದು ಕೋಟಿ ರೂ.ಗಳ ಆಮಿಷ ಒಡ್ಡಿದರು. ನಿರಾಕರಿಸಿದಾಗ ಬೆದರಿಕೆ ಹಾಕಿದರು. ನಾನು ಜಗ್ಗಲಿಲ್ಲ. ತಿರುಗಿ ಅವರು ನಡೆಸಿರುವ ದುರ್ವವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಮಾಡಿದೆ. ಪಿ.ಎಫ್ ಹಣವನ್ನು ಕಾರ್ಮಿಕರಿಂದ ೧೨%, ಮಾಲೀಕರಿಂದ ೩೧% ಸಂಗ್ರಹಿಸಲಾಗುತ್ತದೆ. ಈ ಎರಡೂ ಹಣವನ್ನು ಕಟ್ಟಿಲ್ಲ. ಆ ಬಗ್ಗೆ ತನಿಖೆ ನಡೆಯುತ್ತಿದೆ.
ಈಗ ನೀವು ಕೈಗೊಂಡಿರುವ ಕಾರ್ಯಗಳೇನು?
ಸಾಲಪ್ಪ ವರದಿ ಪ್ರಕಾರ ಪ್ರತಿ ೫೦೦ ಜನಕ್ಕೆ ಒಬ್ಬರು ಪೌರಕಾರ್ಮಿಕರನ್ನು ನೇಮಿಸಬೇಕು. ಆ ವರದಿ ಬಂದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬೀಳುತ್ತಿದ್ದ ಕಸ ೧೮೦೦ ಟನ್. ಈಗ ಅಲ್ಲಿ ಬೀಳುತ್ತಿರುವ ಕಸ ೪೫೦೦ ಟನ್. ಕಸ ಬೀಳುವುದು ಹೆಚ್ಚಾಗಿರುವಾಗ ೭೦೦ ಜನರಿಗೆ ಒಬ್ಬರು ಪೌರಕಾರ್ಮಿಕರನ್ನು ನೇಮಕ ಮಾಡಲು ಹೇಳಲಾಗಿದೆ. ೭೦೦ ಜನರಿಗೆ ಒಬ್ಬರಂತೆ ಮಾಡಿದರೆ ೬೦೦೦ ಜನ ಕೆಲಸ ಕಳೆದುಕೊಳ್ಳುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ, ಕಸ ಹೆಚ್ಚಿದಂತೆ ಪೌರಕಾರ್ಮಿಕರ ನೇಮಕಾತಿ ಹೆಚ್ಚಾಗಬೇಕು. ಅದಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಗುತ್ತಿಗೆ ಪದ್ಧತಿ ರದ್ದು ಮತ್ತು ಬೆಳಗಿನ ಉಪಹಾರದ ಆದೇಶ ಬಂದು ಒಂದು ವರ್ಷವಾದರೂ ಮೈಸೂರಿನಲ್ಲಿ ಜಾರಿಗೊಂಡಿಲ್ಲ. ಪ್ರತಿಭಟನೆ ಮಾಡಲು ದಸರಾ ಸಂದರ್ಭದಲ್ಲಿ ಕೆಲಸ ನಿಲ್ಲಿಸಿ ಮುಷ್ಕರ ಮಾಡುತ್ತಿದ್ದೇವೆ.
ಈ ವೃತ್ತಿಯಲ್ಲಿ ಜಾರಿಯಿರುವ ಅಸ್ಪೃಶ್ಯತೆ, ಜಾತೀಯತೆ ನಿವಾರಿಸಲು ನಿಮ್ಮ ಸಲಹೆ ಏನು?
ಪೌರಕಾರ್ಮಿಕರ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕು, ಆರೋಗ್ಯ ಭದ್ರತೆ ನೀಡಬೇಕು, ಬೇರೆ ವೃತ್ತಿಗಳನ್ನು(ತರಕಾರಿ, ಕಳ್ಳೆಕಾಯಿ ವ್ಯಾಪಾರ, ಕಟ್ಟಡ ಕೆಲಸ ಇತ್ಯಾದಿ) ಅವರಿಗೆ ಪರಿಚಯಿಸಬೇಕು, ಅರಿವು ಮೂಡಿಸಿ ಈ ಕೆಲಸದಿಂದ ಹೊರಬರುವಂತೆ ಮಾಡಬೇಕು, ಉತ್ತಮ ಸಂಬಳ ನೀಡಿದರೆ ಬೇರೆ ಜಾತಿಯವರೂ ಈ ಕೆಲಸಕ್ಕೆ ಬರುತ್ತಾರೆ.

