ಕಬ್ಬಡಿ ಆಟದಲ್ಲಿ ಸಫಾಯಿ ಕರ್ಮಚಾರಿಗಳ ಸಾಧನೆ

ಜ್ಞಾನ, ಕೌಶಲ್ಯದಲ್ಲಿ ಸಫಾಯಿ ಕರ್ಮಚಾರಿಗಳು ಮಾಡಿರುವ ಸಾಧನೆಗಳನ್ನು ದಾಖಲಿಸಿ, ಪರಿಚಯಿಸುವ ಮೂಲಕ ಜಾತಿಯೊಂದಿಗೆ ತಳುಕು ಹಾಕಿಕೊಂಡಿರುವ ಪ್ರತಿಭೆ, ಅರ್ಹತೆ ಇತ್ಯಾದಿ ಮಿಥ್‌ಗಳನ್ನು ಒಡೆಯುವ ಅಗತ್ಯವಿದೆ.
ಉದಾಹರಣೆಗೆ ಹರಿಹರದಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳು ಕಬ್ಬಡಿ ಆಟದಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಹಲವಾರು ಟೀಮ್‌ನ ಭಾಗವಾಗಿ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅದು ಅಲ್ಲಿನ ವಿಶೇಷವೇ ಆಗಿದೆ. ಮಂಡ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ಮಕ್ಕಳು ಅತ್ಯುತ್ತಮ ನೃತ್ಯ ಪಟುಗಳು ಹಾಗೂ ಬಾಡಿ ಬಿಲ್ಡರ್‌ಗಳಾಗಿದ್ದಾರೆ. ಇರುವ ಅಲ್ಪ ಅವಕಾಶವನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ.
ಸಫಾಯಿ ಕರ್ಮಚಾರಿಗಳ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಜಯಮ್ಮನವರ ಮಗ ಬಿಬಿ.ಎಂ ಮತ್ತು ಎಂ.ಕಾಂ ಮಾಡಿದ್ದಾನೆ. ಕೋಲಾರದ ಮುನಿಯಪ್ಪನವರ ಮಗಳು ಎಂಜಿನಿಯರಿಂಗ್ ಮಾಡಿದ್ದಾಳೆ ಹಾಗೂ ಮಗ ವೈದ್ಯಕೀಯದಲ್ಲಿ ಸ್ನಾತ್ತಕೋತ್ತರ ಪದವಿಯಲ್ಲಿ ಓದುತ್ತಿದ್ದಾನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಫಾಯಿ ಕರ್ಮಚಾರಿ ಕೆಲಸ ಮಾಡುವವರ ಮಗ ಸಫಾಯಿ ಕರ್ಮಚಾರಿಗಳ ವಿಷಯವನ್ನೇ ಕುರಿತು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.