ರಂಗಭೂಮಿ ಕಲಾವಿದ ಎನ್. ಲೋಕೇಶ್

ಎನ್. ಲೋಕೇಶ್ ಅವರು ಮೈಸೂರಿನಲ್ಲಿ ಕಳೆದ ಮೂರು ವರ್ಷದಿಂದ ಮ್ಯಾನ್‌ಹೋಲ್ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಫೇಲಾಗಿರುವ ಇವರು ಉತ್ತಮ ರಂಗಭೂಮಿ ಕಲಾವಿದರು ಮತ್ತು ಹಾಡುಗಾರರು. ದಸರಾ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಹಲವಾರು ಪ್ರದರ್ಶನ ನೀಡಿದ್ದಾರೆ. ಹಲವು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ನಿರತರಾಗಿದ್ದಾರೆ. ‘ನಮ್ಮ ತಂದೆ ರೈಲ್ವೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಮ್ಮ ರೈಲ್ವೆ ಆಸ್ಪತ್ರೇಲಿ ಗುಡಿಸುವ ಕೆಲಸ ಮಾಡುತ್ತಿದ್ದರು. ಅಪ್ಪ ಕೆಲಸ ಮಾಡುವಾಗಲೇ ತೀರಿಕೊಂಡಿದ್ದರಿಂದ ಅವರ ಕೆಲಸ ತಮ್ಮನಿಗೆ ಸಿಕ್ಕಿತು. ಅಜ್ಜಿ ಮೆಟ್ರೊಪೊಲ್ ಹೋಟೆಲಿನಲ್ಲಿ ಗುಡಿಸುವ ಕೆಲಸ ಮಾಡುತ್ತಿದ್ದರು. ನಮ್ಮ ಪೂರ್ವಿಕರು ವ್ಯವಸಾಯ ಮಾಡುತ್ತಿದ್ದರು, ಮಿಲಿಟರಿಯಲ್ಲಿದ್ದರು. ಊರಿನಲ್ಲಿ ಕಲ್ಲಿನ ಮನೆ ಮತ್ತು ದನಕರುಗಳು ಇದ್ದವು. ನಮ್ಮ ಮೂಲ ಅನಂತಪುರದ ಪೆನುಗೊಂಡ. ನನ್ನ ಕೆಲಸ ಖಾಯಂ ಆಗಬಹುದೆಂಬ ಆಸೆ ಇದೆ’ ಎಂದು ಹೇಳಿದರು. ಸಂಬಳದ ಜೊತೆಗೆ ಹಾಡು, ನಾಟಕದ ಕಾರ್ಯಕ್ರಮದಿಂದಲೂ ಸಂಪಾದನೆ ಮಾಡುವ ಇವರಿಗೆ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಗುರಿ ಇದೆ. ಇವರ ದೊಡ್ಡ ಮಗಳು ಮೈಸೂರಿನ ಪ್ರತಿಷ್ಟಿತ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಯಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಳೆ. ಚಿಕ್ಕ ಮಗಳು ವಿಜ್ಞಾನದ ವಿಷಯ ತೆಗೆದುಕೊಂಡು ಪಿಯುಸಿ ಓದುತ್ತಿದ್ದಾಳೆ.