ಬಡಾವಣೆಯ ನಿವಾಸಿಗಳಿಗೆ ಅರಿವು ಮೂಡಿಸುವ ಸಂವಾದ

ನಿತ್ಯವೂ ತಾವು ಸ್ವಚ್ಛ ಮಾಡುವ ಬಡಾವಣೆಗಳ ನಿವಾಸಿಗಳಿಗೆ ತಮ್ಮ ಕೆಲಸದ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಸಲುವಾಗಿ ಕೆಲವೆಡೆ ನಿವಾಸಿಗಳೊಂದಿಗೆ ಸಭೆಗಳನ್ನು ನಡೆಸುವ ಪ್ರಯತ್ನವನ್ನು ಮಾಡಲಾಗಿತ್ತು. ಅಂತಹ ಒಂದು ಸಭೆಯ ವರದಿಗೆ ಸ್ವಲ್ಪ ನಾಟಕೀಯ ಸ್ವರೂಪ ಕೊಟ್ಟು ಇಲ್ಲಿ ನೀಡಲಾಗಿದೆ.
ಮತ್ತಿಕೆರೆ ವಾರ್ಡಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೆಲ್ಲ ಕೆಲಸ ಮಾಡಿ ಮುಗಿಸಿ ಪಾರ್ಕಿನಲ್ಲಿ ಸೇರಿದ್ದರು. ಎಲ್ಲರಲ್ಲೂ ಏನೋ ಸಡಗರ, ಆತಂಕ. ಅವರೆಲ್ಲರೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರಾಗಿದ್ದರು. ಸಂಘಕ್ಕೆ ಸೇರಿದಾಗಿನಿಂದಲೂ ಹೋರಾಟ ನಡೆಸಿದ್ದಕ್ಕೆ ಕನಿಷ್ಠ ವೇತನ ಪಡೆದುಕೊಂಡಿದ್ದರು. ಇನ್ನು ಹತ್ತು ಹಲವಾರು ಹಕ್ಕುಗಳಿಗಾಗಿ ಹೋರಾಡಿಕೊಂಡೇ ಬಂದಿದ್ದರು. ಸಂಘವೆಂದರೆ ಹೋರಾಟ ಎನ್ನುವಂತಾಗಿದ್ದರೂ ಸಂಘಕ್ಕೆ ಸೇರಿದ ಮೇಲೆ ನಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಘನತೆಯಿಂದ ನಡೆಸಿಕೊಳ್ಳಬೇಕು, ಗೌರವದಿಂದ ನಡೆಸಿಕೊಳ್ಳಬೇಕು ಎಂದವರಿಗೆ ಬಲವಾಗಿ ಅನ್ನಿಸಿತ್ತು. ಹಾಗಾಗಿ ಸಂಘವೆಂದರೆ ಅವರಿಗೆ ಹೆಮ್ಮೆ, ಸಂಘದ ಕೆಲಸವೆಂದರೆ ಕರ್ತವ್ಯವೆಂದು ಭಾವಿಸಿದ್ದರು. ಅವರ ಸಂಘವನ್ನು ಬೆಂಬಲಿಸಲು ಮಾಧ್ಯಮದವರು, ಬೇರೆ ಹೋರಾಟಗಳಲ್ಲಿ ತೊಡಗಿಕೊಂಡಿರುವವರು, ಕಲಾವಿದರು, ಹಾಡುಗಾರರು, ಸಾಹಿತಿಗಳು ಇತರರು ಇದ್ದ ಬೆಂಬಲ ಗುಂಪೊಂದು ಇತ್ತು.
ಕಳೆದ ಸಲದ ಸಂಘದ ಸಭೆಯಲ್ಲಿ ನಾಗರಿಕರಿಗೆ ನಮ್ಮ ವಿಷಯ ಕುರಿತು ಮನವರಿಕೆ ಮಾಡಿಕೊಡಲು ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು. ಭಾನುವಾರದಂದು ಕಾರ್ಮಿಕರಿಗೆ ಅರ್ಧ ದಿವಸ ಕೆಲಸ. ಅಲ್ಲದೆ ಬಡಾವಣೆಯ ಜನರು ರಜೆಯೆಂದು ಮನೆಯಲ್ಲಿ ಇರುವುದರಿಂದ ಹತ್ತಿರದ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಸಂಘದ ಪದಾಧಿಕಾರಿಯಾಗಿದ್ದ ವೆಂಕಟಮ್ಮ ಮತ್ತಿಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆಕೆ ಒಳ್ಳೆ ಹೆಸರು ಗಳಿಸಿದ್ದಳು. ಅಲ್ಲಿನ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವ ಉಸ್ತುವಾರಿಯನ್ನು ವೆಂಕಟಮ್ಮ ತೆಗೆದುಕೊಂಡಿದ್ದಳು. ನಾಗರಿಕರೊಂದಿಗಿನ ಸಂವಾದ ಸಭೆಯ ಉದ್ದೇಶ ಕುರಿತು ಒಂದು ಕರಪತ್ರ ಪ್ರಿಂಟ್ ಹಾಕಿಸಿ ಅದನ್ನು ಕಾರ್ಮಿಕರು ಬಡಾವಣೆಯ ನಾಗರಿಕರಿಗೆ ಹಂಚಿದ್ದರು. ಸಂಘದ ಮುಖಂಡರುಗಳು ಮನೆಮನೆಗೆ ಹೋಗಿ ಹೇಳಿದ್ದರು. ಅಲ್ಲದೆ ಅದೇ ಬಡಾವಣೆಯಲ್ಲಿ ವಾಸವಾಗಿದ್ದ, ಕಾರ್ಮಿಕರ ಹೋರಾಟವನ್ನು ಬೆಂಬಲಿಸುತ್ತಿದ್ದ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಗಾಂಧಿವಾದಿಗಳು ಆಗಿದ್ದ ಸ್ವಾಮಿಯವರು ಪ್ರಚಾರದ ಭಾಗವಾಗಿ ನಡೆಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ನಾಗರಿಕರು ಸಹ ಕುತೂಹಲಗೊಂಡಿದ್ದರು.
ಅಂದು ೧೧.೩೦ರ ಹೊತ್ತಿಗೆ ಸಭೆ ಆರಂಭವಾಗಲಿತ್ತು. ಎಲ್ಲರೂ ೧೧ಕ್ಕೆ ಸೇರಿದ್ದರು. ಜನ ಬರುವರೊ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ ಬಡಾವಣೆಯ ಜನರು ಒಬ್ಬೊಬ್ಬೊರೆ ಪಾರ್ಕಿಗೆ ಬರತೊಡಗಿದರು. ಮುಂಚಿತವಾಗಿಯೇ ಬಂದಿದ್ದ ಸ್ವಾಮಿಯವರೇ ಎಲ್ಲರೂ ಬಂದು ಕುಳಿತುಕೊಂಡ ಮೇಲೆ ಮಾತು ಆರಂಭಿಸಿದರು. ‘ಸ್ವಚ್ಛತೆಗೆ ಆದ್ಯತೆ ನೀಡಿದಾಗಲೇ ಎಲ್ಲರೂ ಆರೋಗ್ಯವಾಗಿರಲು ಸಾಧ್ಯ. ಗಾಂಧೀಜಿಯವರು ಸ್ವಚ್ಛತೆಗಷ್ಟೇ ಅಲ್ಲದೆ ಸ್ವಚ್ಛತೆಯ ಕೆಲಸ ಮಾಡುವವರಿಗೆ ಆದ್ಯತೆ ನೀಡುತ್ತಿದ್ದರು. ಇಂದು ಈ ಸಭೆಯನ್ನು ಕಾರ್ಮಿಕ ಸಂಘದವರು ಕರೆದಿರುವುದು ವಿಶೇಷ. ನಾಗರಿಕರು ಮತ್ತು ಕಾರ್ಮಿಕರು ಪರಸ್ಪರ ಸಂವಾದ ಮಾಡಿಕೊಳ್ಳುವುದು ಎಲ್ಲರ ದೃಷ್ಟಿಯಿಂದ ಉತ್ತಮವಾದ, ಆರೋಗ್ಯಪೂರ್ಣವಾದ ಪರಿಸರವನ್ನು ನಿರ್ಮಿಸಲು ಸಾಧ್ಯ. ನೀವೆಲ್ಲರೂ ಬಂದಿರುವುದು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ. ಸಭೆ ಮುಂದುವರೆಯಲಿ; ಉತ್ತಮವಾದ ಫಲ ದೊರೆಯಲಿ’ ಎಂದು ಹೇಳಿದರು.
ಸಂಘದ ಕಾರ್ಯದರ್ಶಿಯಾಗಿದ್ದ ಜಯಮ್ಮ ನಾಗರಿಕರನ್ನು ಉದ್ದೇಶಿಸಿ ಸಭೆಯ ಉದ್ದೇಶವನ್ನು ಹೇಳಿದರು. ‘ನಾವ್ ಸಂಗ್ದವ್ರು ಈ ಸಭೆ ರ‍್ದಿದಿವಿ. ನಾವು ಕಾರ್ಪೇಸನಲ್ಲಿ ಗುಡ್ಸೊ ಕೆಲ್ಸ ಮಾಡ್ತಿವಿ. ನಿಮ್ ರೋಡು, ಮೋರಿ, ಏರಿಯಾ ಕ್ಲೀನ್ ಮಾಡ್ತಿವಿ. ನಮ್ನ ಪೋರಕರ‍್ಮಿಕ್ರು ಅಂತ ಕರಿತರೆ. ಹಿಂದೆ ಬಸ್ಲಿಂಗಪ್ಪ ಅಂತ ನಮ್ಮೋರು ಮಿನಿಟ್ರಾಗಿದ್ದಾಗ ತೋಟಿ, ಜಾಡ್ಮಾಲಿ ಅಂತ ಕರಿಬರ‍್ದು ಅಂತ ಈ ಎಸ್ರಿಕ್ಕಿರು. ನಾವ್ ಒಬ್ರಿಗೊಬ್ರು ರ‍್ಚಯ್‌ವೇ ಮಾಡ್ಕಂಡಿಲ್ಲ. ರ‍್ಚಯ ಮಾಡ್ಕಳಕೆ ಇಲ್ಲಿ ಸರ‍್ಕಂಡಿದಿವಿ. ಮದ್ಲಿಗೆ ಕಸ್ದ್ ಬಗ್ಗೆ ಏನ್ ತೊಂದರೆ ಅದೆ ಏಳಿ. ನಾವ್ ಮಾಡ ಕೆಲ್ಸದ್ ಬಗ್ಗೆ ನಿಮ್ಗೆ ಏಳ್ತಿವಿ’ ಎಂದು ಕೇಳಿಕೊಂಡಳು.
ಅಷ್ಟರಲ್ಲಿ ಶಾರದಮ್ಮ ಮತ್ತು ಪೆಂಚಾಲಮ್ಮ ಎಲ್ಲರಿಗೂ ಟೀ ನೀಡಿದರು. ನಾಗರಿಕರು ಸ್ವಲ್ಪ ಗಲಿಬಿಲಿಗೊಂಡಿದ್ದರು. ಬೀದಿ ಗುಡಿಸಿ, ಮನೆ ಮನೆಯಿಂದ ಕಸತೆಗೆದುಕೊಂಡು ಹೋಗುತ್ತಿದ್ದ, ಆಗೀಗ ಏನಾದರೂ ಉಳಿದಿದ್ದ ಊಟ-ತಿಂಡಿಯನ್ನು ಒಯ್ಯುತ್ತಿದ್ದ, ಹಳೆ ಬಟ್ಟೆ ಬರೆಯನ್ನು ಒಮ್ಮೊಮ್ಮೆ ತೆಗೆದುಕೊಂಡು ಹೋಗುತ್ತಿದ್ದ, ಮೋರಿ ಕಟ್ಟಿಕೊಂಡಾಗ ಸ್ವಚ್ಛಮಾಡಿಕೊಡುತ್ತಿದ್ದ ಕಾರ್ಮಿಕರು ಇಂದು ಸಭೆ ಕರೆದಿದ್ದಾರೆ. ಅಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೋ ತಮ್ಮ ಗೋಳುಗಳನ್ನು ಹೇಳಿಕೊಂಡು ಏನೋ ಸಹಾಯ ಮಾಡಿ ಎಂದು ಕೇಳಬಹುದೇನೋ ಎಂದುಕೊಂಡರೆ ನಿಮಗೆ ಅನುಮಾನಗಳಿದ್ದರೆ ಬಗೆಹರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವುದಕ್ಕೆ ನಾಗರಿಕರಿಗೆ ಕೊಂಚ ಸಮಯ ಹಿಡಿಯಿತು.
‘ನೀವ್ ಏನ್‌ಬೇಕಾರೂ ಕೇಳ್ಬೋದು, ನಮ್ ತಪ್ಗುಳಿದ್ರೂ ಏಳ್ಬೋದು, ನಿಮ್ಮನ್ನ ಬಂದುಗಳಂತ ಬಾವ್ಸ್ತಿವಿ’ ಎಂದು ಜಯಮ್ಮ ಮತ್ತೊಮ್ಮೆ ಹೇಳಿದಾಗ ಒಬ್ಬರು ಎದ್ದುನಿಂತು ಮಾತನಾಡತೊಡಗಿದರು.
‘ನೀವು ಸರಿಯಾಗಿ ಕಸವನ್ನು ಗುಡಿಸುವುದಿಲ್ಲ.’
‘ಕಟ್ಟಿಕೊಂಡ ಮೋರಿಗಳನ್ನು ಸರಿಯಾಗಿ ತೆರವು ಮಾಡುವುದಿಲ್ಲ.’
‘ಇತ್ತೀಚೆಗಂತು ಆಫೀಸಿನಲ್ಲಿ ಕೆಲಸ ಮಾಡುವವರಂತೆ ಬರುತ್ತೀರಾ, ಒಂದು ಗಳಿಗೆ ತಡವಾದರೂ ಕಸ ತೆಗೆದುಕೊಳ್ಳದೆ ಹಾಗೇ ಹೋಗಿಬಿಡುತ್ತೀರಾ.’
‘ಮಹಡಿ ಮೇಲಿರುವವರು ಅಲ್ಲಿಂದಲೇ ಕಸ ಎಸೆದರೆ ತೆಗೆದುಕೊಳ್ಳುವುದಿಲ್ಲ. ಕೆಳಗೆ ತಂದುಕೊಡಿ ಎಂದು ಹೇಳುತ್ತೀರಾ.’
‘ನಾಯಿ ಸಾಕಿರುವವರು ವಾಕಿಂಗ್ ಕರೆದುಕೊಂಡು ಹೋದಾಗ ಕಕ್ಕಸ್ಸು ಮಾಡಿದರೆ ಅದನ್ನು ಎತ್ತುವುದಿಲ್ಲ. ಮೊನ್ನೆ ೧೦ನೇ ಕ್ರಾಸಿನಲ್ಲಿ ಮನೆಯವರ ಜೊತೆ ಜಗಳವಾಡಿ ಕಸವನ್ನು ತಂದು ಅವರ ಮನೆ ಮುಂದೆ ಸುರಿದಿದ್ದೀರಾ.’
‘ಇತ್ತೀಚೆಗೆ ನಿಮಗೂ ಉತ್ತಮವಾದ ಸಂಬಳ ಸಿಗುತ್ತಿದೆ. ಆದರೂ ಅಸಡ್ಡೆಯಿಂದ ಕೆಲಸಮಾಡುತ್ತೀರಾ’
ಎಲ್ಲರೂ ಹೇಳುತ್ತಿದ್ದುದನ್ನು ಹತ್ತನೆ ತರಗತಿಯಲ್ಲಿ ಪಾಸಾಗಿದ್ದ, ಸಂಘದ ಖಜಾಂಚಿ ಕಸ್ತೂರಿ ಬರೆದುಕೊಳ್ಳುತ್ತಿದ್ದಳು. ಸಂಘದ ಅಕೌಂಟ್ ಇದ್ದ ಬ್ಯಾಂಕಿಗೆ ಹೋಗಿ ಹಣ ಹಾಕುವುದು, ತೆಗೆದುಕೊಂಡು ಬರುವ ಕೆಲಸವನ್ನೂ ಅವಳು ಮಾಡುತ್ತಿದ್ದಳು.
ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಸಂಘದ ಅಧ್ಯಕ್ಷನಾಗಿದ್ದ ಆಂಜನೇಯಲು ಎದ್ದು ನಿಂತ. ಕಾರ್ಮಿಕರನ್ನು ಸಂಘಟಿಸುವುದರಲ್ಲಿ ಅವನು ಎತ್ತಿದ ಕೈ. ಸಂಘ ಕೆಲಸ ಮಾಡುತ್ತಿದ್ದ ವಾರ್ಡಿನಲ್ಲಿರುವ ಎಲ್ಲ ಕೆಲಸಗಾರರನ್ನು ಹೆಸರು ಸಮೇತ ಅವನು ಬಲ್ಲವನಾಗಿದ್ದ. ಏನೇ ಕೆಲಸವಿರಲಿ, ಯಾವ ಕಾರ್ಮಿಕರಿಗೆ ಅನ್ಯಾಯವಾಗಲಿ ಎದೆಕೊಟ್ಟು ನಿಲ್ಲುತ್ತಿದ್ದ. ಅವನನ್ನು ಎಲ್ಲರೂ ಅಣ್ಣಾ ಎಂದೇ ಕರೆಯುತ್ತಿದ್ದರು. ಓದು ಬರಹ ಬರುತ್ತಿರಲಿಲ್ಲವಾದರೂ ವಿಷಯವನ್ನು ಪಕ್ಕಾ ತಿಳಿದುಕೊಂಡಿದ್ದ. ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಗುಡಿಸುವುದರಿಂದ ಹಿಡಿದು, ಲೋಡ್ ಮಾಡಿ ನಗರದ ಹೊರವಲಯದವರೆಗೂ ಕಸದ ಲಾರಿಯೊಂದಿಗೆ ಸುರಿದು ಬರುವ ಎಲ್ಲ ಕೆಲಸಗಳನ್ನು ಅವನು ಬಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ಸಮಾಧಾನ ಮಾಡಿ ಪರಿಹಾರ ಹುಡುಕುವವರೆಗೂ ಬಿಡುತ್ತಿರಲಿಲ್ಲ.
‘ನಮ್ಮ ಸಂಗ್ದ ಕಾರ್ಮಿಕ್ರೆಲ್ಲ ಇಲ್ಲಿದಿವಿ. ನಂಗೆ ಗೊತ್ತಿರದ್ನ ನಾನ್ ಏಳ್ತಿನಿ. ಬೇರೆ ಕರ‍್ಮಿಕ್ರು ಇಲ್ಲವ್ರೆ; ನಿಮ್ಮ ರ‍್ಯಾ ಗುಡ್ಸೋರು. ಅವ್ರು ಉತ್ರ ಏಳ್ತರೆ. ಅದ್ರಾಗೆ ನಾವ್ ಮಾಡ ಕೆಲ್ಸ, ನಮ್ಗಿರ ತೊಂದ್ರೆ, ಅನ್ಬೋಗ್ಸ ಕಷ್ಟ ಎಲ್ಲ ಗೊತ್ತಾಗುತ್ತೆ. ನಾವು ಒಬ್ರಿಗೊಬ್ರು ಅರ್ತಮಾಡ್ಕಂಡ್ರೆ ನಮ್ ನಮ್ ತೊಂದರೆಗಳ್ನ ನಿವರ‍್ಸ್ಕಬೋದು. ಒಬ್ರಿಗೊಬ್ರು ಬೆಂಬ್ಲ ಕೊಡದ್ರಿಂದ ಒಳ್ಳೆದಾಗುತ್ತೆ ರ‍್ತು ನಷ್ಟ ಆಗಲ್ಲ. ಒಬ್ರಿಲ್ಲಿ ಆಪೀಸ್ ಕೆಲ್ಸ ಮಾಡೊರಂಗೆ ಅಂತ ಏಳಿದ್ರು. ನಮ್ದೂನೂ ಆಪಿಸ್ ಕೆಲ್ಸ್ವೆ. ನಾವು ಬೃತ್ ಬೆಂಗ್ಳೂರು ಮಾನಗ್ರ ಪಾಲ್ಕೆ ಪೋರಕರ‍್ಮಿಕ್ರು. ಕಮಿಸನ್ರಿಂದ ಇಡ್ದು ಗುಡ್ಸೋರರ‍್ಗೂ ಅಲ್ಲಿ ಕೆಲ್ಸ ಮಾಡ್ತರೆ. ಇಡೀ ಸಿಟಿನ ಕಿಲಿನಾಗ್ ಇಟ್ಟು ಎಲ್ರ ಆರೋಗ್ಯ ನೋಡ್ಕಳದು ಪಾಲ್ಕೆ ಜಬಾಬ್ದಾರಿ.
ಕಸ ಮ್ಯಾಲಿಂದ ಎಸ್ದ್ರೆ ಕಸ ತುಂಬಿದ್ ಪಿಲಾಸ್ಟಿಕ್ ಚೀಲ ವಡ್ಕಂಡು ಕಸ ಚೆಲ್ತದೆ, ನಮ್ಮ್ ಮ್ಯಾಲು ಬೀಳುತ್ತೆ, ಅದ್ಕೆ ಕಸಾನ ಬಕೇಟಾಗೆ ಆಕಿ ಕೆಳ್ಗಿಡಿ.
ಕಸ್ದಾಗೆ ಪ್ಯಾಡು, ಮಕ್ಳ ಏಲು-ಉಚ್ಚೆ ಬಟ್ಟೆ ಸರ‍್ಸಿ ಆಕ್ತ್ತಾರೆ. ತಿಂದ್ ಮಿಕ್ಕಿದ್ದು ಅದ್ರಾಗೆ ಆಕ್ತಾರೆ. ಎಲ್ಲ ಸರ‍್ಸಿ ಪಿಲಾಸ್ಟಿಕ್‌ನಾಗೆ ಆಕಿರೆ ಅದ್ನ ಬ್ಯಾರೆ ಮಾಡಾಕೆ ಕೈ ಒಳಿಗಾಕಿ ತಗಿಬೇಕು, ಅದೆಷ್ಟ್ ಕಷ್ಟ, ಅಸಯ ಅಂತ ನೀವೇ ಹೇಳಿ.
ನಾಯ್ಗಳನ್ನು ವಾಕಿಂಗ್ ಇಡ್ಕೊಂಡ್ ವೋಗ್ತಿರ, ಅವು ಕಕ್ಕಸ್ ಮಾಡಿದ್ರೆ ನೀವೇ ತಗ್ದು ಪಿಲಾಸ್ಟಿಕ್‌ನಾಗೆ ಆಕ್ಬೆಕು ಅನ್ನೋದು ಎಷ್ಟೊ ಜನ್ಕೆ ಗೊತ್ತೇ ಇಲ್ಲ.
ಕರ‍್ಮಿಕ್ರು ಕೆಟ್ದಾಗಿ ನಡ್ಕತರೆ ಅಂದ್ರಿ. ನಮ್ನು ಯಾರು ಗೋರವ್‌ದಿಂದ ನಡ್ಸ್ಕಳಲ್ಲ. ಯರ‍್ನಾದ್ರು ಎಸ್ರಿಟ್ಟು ಕೂಗಿ, ಒಂದ್ ಗಳಾಸ್ ನೀರ್ ಕೊಟ್ಟಿಲ್ಲ ಇಲ್ಲಿಗಂಟ. ಅಸ್ಪೃಶ್ಯತೆ ಮಾಡದು ಅಪ್ರಾದ, ರ‍್ಯಾ ಜನ ನಮ್ನ ನೋಡಿ ಮೂಗ್ ಮುಚ್ಕಂಡ್ ಪಕ್ಕಕ್ಕೋಯ್ತರೆ. ನೀರ್ ಕೊಟ್ರೂ ಬಚ್ಲು ಚೊಂಬಾಗೆ ತಂದು ಕೈಗೆ ಸುರಿತಾರೆ. ಕಸ್ದಂಗೆ ನಮ್ನು ನೋಡ್ತರೆ. ಇದು ಬದ್ಲಾಗ್ಬೇಕು. ನಾವು ಒಬ್ರುನೊಬ್ರು ಗೊರವ್‌ದಿಂದ ಕಾಣ್ಬೇಕು. ಮನ್ನೆ ಇಂದ್ರಾನರ‍್ದಾಗೆ ಜಾತಿ ಇಡ್ದು ಅವ್ಮಾನ ಮಾಡವ್ರೆ. ಅದ್ಕೆ ಅವ್ರ ಮನೆ ಕಸ ಎತ್ತಲ್ಲ ಅಂತ ತಗೊಂಡೋಗಿ ಸರ‍್ದ್ವಿ. ಆಮೇಲೆ ಎಲ್ತ್ ಆಪಿಸರ್ ಬಂದು ಜಗ್ಳ ಬಗೆ ರ‍್ಸಿ, ನಾವು ಕಂಪ್ಲೆಂಟು ವಾಪ್ಸ್ ತಗಂಡ್ವಿ. ಜಾತಿ ಎಸ್ರಲ್ಲಿ ಬೇದಬಾವ ಮಾಡ್ಬರ‍್ದು ಅಂತ ಸಮ್ಮಿದಾನ್ದಾಗೆ ಏಳೈತೆ. ನೀವೆಲ್ಲ ಓದಿರೋರು, ತಿಳಿದಿರೋರು ನೀವೇ ನಮ್ಗೆ ಕಾನೂನು ತಿಳಿಸ್ಬೆಕಲ್ವಾ? ಮುಂದೆ ಇಂತದಾಗ್ದಂಗೆ ನೋಡ್ಕಂಡು ಕೆಲ್ಸ ಮಾಡಕೆ ನೀವು ಸಾಕಾರ ಕೊಡ್ಬೇಕು ಅಂತ ಕೇಳ್ಕತಿನಿ’ ಎಂದು ಆಂಜನೇಯಲು ಹೇಳಿದ.
ಸಂಘದ ಗೌರವಾಧ್ಯಕ್ಷರಾಗಿದ್ದ ಪದ್ಮ ಮಾತನಾಡಿ ‘ನಾವು ಈ ದೇಶದ ಪ್ರಜೆಗಳು ಅಂತ ನಮ್ಗೂ ನಮ್ ಸಂವಿಧಾನ ಹಕ್ಕು ಕೊಟ್ಟಿದೆ. ಕರ‍್ಮಿಕ್ರಾಗಿ ನಮ್ಗೂ ಕಾನೂನ್ ಅವೆ. ಬದ್ಕಕೆ ಬೇಕಾದ ಸಂಬ್ಳ ಕೊಡ್ಬೇಕು; ದಿನಾ ಮಾಡ್ಲೇಬಾಕಾಗಿರ ಕೆಲ್ಸನ ಗುತ್ಗೆಗೆ ಕೊಡಂಗಿಲ್ಲ. ಅಂದ್ರೂ ಪಾಲ್ಕೆ ನಮ್ ಕೆಲ್ಸ ಗುತ್ಗೆಗೆ ಕೊಟ್ಟದೆ. ರ‍್ಮೆಟ್ ಕೆಲ್ಸ್ದೊರು ಮಾಡೋ ಎಲ್ಲ ಕೆಲ್ಸಾನೂ ನಾವ್ ಮಾಡ್ತಿವಿ; ಅದ್ಕೆ ಅವ್ರಿಗೆ ಕೊಡೋ ಸಂಬ್ಳನೆ ಕೊಡ್ಬೆಕು. ಆದ್ರೆ ಕೊಡಲ್ಲ. ಗ್ಲೋಸು, ಗಂಬೂಟು, ಮಾಸ್ಕು ಕೊಡ್ಬೆಕು. ಬಾಲ್ವಾಡಿ, ಶೌಚಾಲಯ, ರಜೆಗಳು ಎಲ್ಲ ಕೊಡ್ಬೇಕು. ಇಎಸೈ, ಪಿಎಪ್ ಕೊಡ್ಬೇಕು. ಆದ್ರೆ ನಮ್ಗೆ ಯಾವ್ದೂ ಸಿಕ್ಕರ‍್ಲಿಲ್ಲ. ಈಗ ಹತ್ ವರ್ಷ ವೋರಾಟ ಮಾಡಿದ್ಕೆ ಕನಿಷ್ಟ ಸಂಬ್ಳ ಸಿಕ್ಕೈತೆ. ನಮ್ದು ಕಷ್ಟದ್ ಕೆಲ್ಸ; ಮೋರಿ ಕಸ ಕೈಲೇ ಬಳಿಬೇಕು; ಕಳೆ ಕೀಳ್ಬೇಕು, ರಸ್ತೆ ಕಸ ಗುಡಿಸ್ಬೇಕು, ಮನೆ ಮನೆ ಕಸ ತಗಬೇಕು; ರಟ್ಟೆ, ಸೊಂಟ, ಬೆನ್ನು ನೋವು ತಪ್ಪಿದ್ದಲ್ಲ. ಗಲೀಜು, ಧೂಳಲ್ಲಿ ಯಾವ ಸುರಕ್ಷಾ ಸಲಕರಣೆಯು ಇಲ್ದೆ ಕೆಲ್ಸ ಮಾಡ್ತಿವಿ; ಅದಕ್ಕೆ ಕಾಯ್ಲೆಗಳು ತಪ್ಪಿದ್ದಲ್ಲ.’
ವಕೀಲರು ಮತ್ತು ಬೆಂಬಲ ಗುಂಪಿನ ಸದಸ್ಯರಾಗಿದ್ದ ಮೈತ್ರಾ ಅವರು ಕಾರ್ಮಿಕರು ಮಾಡುವ ಅಪಾಯಕಾರಿಯಾದ, ಕಠಿಣ ದುಡಿಮೆ, ಸಂಬಳದಲ್ಲಿ ಇರುವ ತಾರತಮ್ಯ ಮತ್ತು ಕಾರ್ಮಿಕರಿಗಾಗಿ ಇರುವ ಕಾನೂನುಗಳನ್ನು ಹಾಗೂ ಪಾಲಿಕೆಗಳು ಮತ್ತು ಗುತ್ತಿಗೆದಾರರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ವಿವರಿಸಿದರು. ಪೌರಕಾರ್ಮಿಕರ ಹೋರಾಟವನ್ನು ಕುರಿತ ಕಿರುಪುಸ್ತಿಕೆಯನ್ನು ಎಲ್ಲರಿಗೂ ಹಂಚಲಾಯಿತು.
ಒಟ್ಟಾರೆ ಈ ಸಭೆಯು ಪರಿಣಾಮದಿಂದಾಗಿ ಬಡಾವಣೆಯ ಜನರು ಪೌರಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬದಲಾವಣೆಗಳಾಗತೊಡಗಿದವು. ಇಂತಹ ಸಭೆಗಳನ್ನು ಬೇರೆ ಕಡೆಗಳಲ್ಲೂ ಮಾಡಲು ಸಂಘವು ಪ್ರಯತ್ನಿಸಿತು.