ತಳಸಮುದಾಯಗಳ ಸಾಂಸ್ಕೃತಿಕ-ಆಧ್ಯಾತ್ಮಿಕ ನಾಯಕನಾದ ಮಂಟೇಸ್ವಾಮಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವ. ಬಸವಣ್ಣನವರ ಸಮಕಾಲೀನನೆಂದು ನಂಬಲಾಗುವ ಈತ ತನ್ನದೇ ಒಂದು ಆಧ್ಯಾತ್ಮಿಕ ಪರಂಪರೆಯನ್ನು ನಿರ್ಮಿಸಿದ. ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪಗೌಡನಪುರಗಳು ಮಂಟೇಸ್ವಾಮಿ ಪರಂಪರೆಯ ಮುಖ್ಯ ಯಾತ್ರಾಸ್ಥಳಗಳು. ಇಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಈತ ಕರ್ನಾಟಕದ ನೀಲಗಾರ ಸಮುದಾಯದ ಆರಾಧ್ಯ ದೈವ. ಈತ ಸಾಕ್ಷಾತ್ ಶಿವನ ಸ್ವರೂಪವೆಂದೇ ಅವರು ಭಾವಿಸುತ್ತಾರಲ್ಲದೆ ಅವರನ್ನು ಜಗಜ್ಯೋತಿ, ಪರಂಜ್ಯೋತಿ, ಮಂಟೇದ, ಮಂಟೇದಯ್ಯ ಎಂಬ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ.
ಮಂಟೇಸ್ವಾಮಿ ಪುರಾಣ: ಮಂಟೇಸ್ವಾಮಿ ತಳಜಾತಿಗಳ ಮತ್ತೊಬ್ಬ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಎಲ್ಲಿಟ್ಟರೂ ಏಕವಾಗಿ ಉರಿಯುವ ಜ್ಯೋತಿಯನ್ನು ಭೂಮಿಗೆ ತಂದವರು, ಭೂಮಿಯನ್ನು ಸೃಷ್ಟಿಸಿದವರು ಮಂಟೇಸ್ವಾಮಿಯವÀರು ಎಂಬ ನಂಬಿಕೆ ಇದೆ. ಎಲ್ಲವೂ ಹುಟ್ಟಲಿಕ್ಕೆ ಮೊದಲು ಅವರು ಬಂದರು. ಹುಟ್ಟಿ ಹೊನ್ನ ಹುತ್ತದಲ್ಲಿ ಉದ್ಭವವಾಗಿ ೭೭ ಮಾರುದ್ದ ಜಡೆ ಬಿಟ್ಟುಕೊಂಡು, ಲೋಕ ಕಟ್ಟಬೇಕು ಎಂದು ತನ್ನ ಮಾಯಾಜೋಳಿಗೆಯಲ್ಲಿದ್ದ ವಿಭೂತಿ ಗಟ್ಟಿಯನ್ನು ಒಡೆದು ಎರಡು ಹೋಳು ಮಾಡಿ ಒಂದು ಹೋಳಿನಲ್ಲಿ ಭೂಮಿ ಮತ್ತೊಂದು ಹೋಳಿನಲ್ಲಿ ಆಕಾಶ ಮಾಡಿದರಂತೆ. ಅವರ ಪಾದ ಭೂಮಿಗೆ ತಾಗಿದಾಗÀ ಮುತ್ತು ರತ್ನಗಳು ಹುಟ್ಟಿದವಂತೆ. ಮಕ್ಕಳಿಗೆ ಆಹಾರವಾಗಲಿ ಎಂದು ರುದ್ರಾಕ್ಷಿಯನ್ನು ತಾಕಿಸಿ ಗಿಡಮರಗಳನ್ನು ಸೃಷ್ಟಿ ಮಾಡಿದರಂತೆ. ಖಂಡುಗ ಜ್ಞಾನ ಪುಸ್ತಕವನ್ನು, ಕಾಲಜ್ಞಾನದ ಪುಸ್ತಕವನ್ನು ಹಿಡಿದು ಆದಿಶಕ್ತಿಯನ್ನು ಸೃಷ್ಟಿ ಮಾಡಿದರಂತೆ. ಆದಿಶಕ್ತಿ ತನ್ನನ್ನೇ ಮದುವೆಯಾಗಬೇಕೆಂದು ಬಯಸಿದಾಗ ಬೇಸತ್ತ ಮಂಟೆಸ್ವಾಮಿ, ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಮದುವೆಯಾಗು ಎಂದು ವರ ಕೊಡುತ್ತಾರೆ. ಆದಿಶಕ್ತಿಯ ಮಕ್ಕಳಾಗಿ ಬ್ರಹ್ಮ ವಿಷ್ಣು ಮಹೇಶ್ವರರು ಹುಟ್ಟುತ್ತಾರೆ. ಆದರೆ ಅವರು ತಾಯಿಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ವಿಷ್ಣು ಆದಿಶಕ್ತಿಯ ವಿಶೇಷ ಶಕ್ತಿಯಾದ ಉರಿ ಹಸ್ತದಿಂದ ಅವಳೇ ಉರಿದು ಬೂದಿಯಾಗುವಂತೆ ಮಾಡುತ್ತಾನೆ. ಆ ಬೂದಿಯಿಂದ ಮಂಟೆಸ್ವಾಮಿ ಪಾರ್ವತಿ ಲಕ್ಷ್ಮಿ ಸರಸ್ವತಿಯರನ್ನು ಸೃಷ್ಟಿಮಾಡಿ ಶಿವ ವಿಷ್ಣು ಬ್ರಹ್ಮರು ಮದುವೆಯಾಗುವಂತೆ ಹೇಳಿದರಂತೆ. ಸರಸ್ವತಿಗೆ ಮಣ್ಣಿನಿಂದ ಹೆಣ್ಣು-ಗಂಡು ಬೊಂಬೆಗಳನ್ನು ಕ್ರಿಮಿಕೀಟ ಹಾವು ಚೇಳುಗಳನ್ನು ಮಣ್ಣಿನಿಂದ ಮಾಡಿಸಿದರಂತೆ. ಈ ಪ್ರಾಣಿಗಳಲ್ಲಿ ಯಾವುದು ಹೆಚ್ಚು, ಯಾವುದು ಕೀಳು ಯಾವುದು ಮೇಲು ಎಂದು ಸರಸ್ವತಿ ಕೇಳಿದಾಗ, ಮಂಟೆಸ್ವಾಮಿ ಎಲ್ಲಾ ಪ್ರಾಣಿಗಳು ನನಗೆ ಒಂದೇ, ಪ್ರಾಣಿಗಳಲ್ಲಿಯೇ ಅತಿಚಿಕ್ಕ ಪ್ರಾಣಿಯಲ್ಲೂ ಉರಿಯುವ ಜ್ಯೋತಿ ರೂಪವೇ ನಾನು ಎಂದು ಹೇಳಿ ಅದಕ್ಕೆ ಮಿಣುಕು ಹುಳ ಎಂದು ನಾಮಕರಣ ಮಾಡಿದರಂತೆ.
ನೀಲಗಾರರನ್ನು ಮಂಟೇಸ್ವಾಮಿಯ ಶಿಷ್ಯರೆಂದು ಭಾವಿಸಲಾಗುತ್ತದೆ. ಇವರು ಮಂಟೇಸ್ವಾಮಿ ಕಥೆಯನ್ನು, ಕಾವ್ಯವನ್ನು ಅದ್ಭುತವಾಗಿ ಹಾಡುತ್ತಾರೆ. ಜಗತ್ತನ್ನು, ಬ್ರಹ್ಮ, ವಿಷ್ಣು ಮತ್ತು ಅವರ ಹೆಂಡತಿಯರಾದ ಸರಸ್ವತಿ ಮತ್ತು ಲಕ್ಷ್ಮಿಯರನ್ನು, ಜಗದ ಚರಾಚರಗಳನ್ನು ಸೃಷ್ಟಿಮಾಡಿದ್ದು ಮಂಟೇಸ್ವಾಮಿ ಎಂಬುದು ನೀಲಗಾರರ ನಂಬಿಕೆ. ಅವರು ಹಾಡುವ ಹಾಡಿನಲ್ಲಿ ಬರುವ ಪ್ರಮುಖ ಕಥಾ ಪ್ರಸಂಗ ಒಂದು ಹೀಗಿದೆ ಮಂಟೇಸ್ವಾಮಿ ಉತ್ತರದ ಕಲ್ಯಾಣದಿಂದ ದಕ್ಷಿಣಕ್ಕೆ ಬಂದು ಬೊಪ್ಪೇಗೌಡನಪುರದಲ್ಲಿ ನೆಲೆಸಿ ಜನರ ಕಷ್ಟಸುಖಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಒಮ್ಮೆ ಕಲ್ಯಾಣದ ನೆನಪಾಗಿ ಬಸವಣ್ಣ ಮತ್ತು ನೀಲಮ್ಮನವರ ಸತ್ಯವನ್ನು ಕಣ್ಣಾರೆ ನೋಡಬೇಕೆಂದು ಕಲ್ಯಾಣಕ್ಕೆ ಹೊರಡುತ್ತಾರೆ. ಅಲ್ಲಿ ಬಸವಣ್ಣನವರು ನಿತ್ಯ ಅನ್ನದಾಸೋಹವನ್ನು ಶರಣರಿಗಾಗಿ ಏರ್ಪಡಿಸಿರುತ್ತಾರೆ. ಕಷ್ಟ ಕಾಯಿಲೆಯವರನ್ನು ನೋಡಿ ಜಂಗಮರು ಊಟಮಾಡುವುದಿಲ್ಲವಾದ್ದರಿಂದ ಅಂತಹವರನ್ನು ತಡೆಯಲು ಪ್ರವೇಶದ್ವಾರದಲ್ಲಿ ಕಟುಕರ ಸಂಗಯ್ಯನನ್ನು ಕಾವಲಿಗೆ ನೇಮಿಸಿರುತ್ತಾರೆ. ತಮಗಿಂತಲೂ ಹೆಚ್ಚಿನ ಭಕ್ತಿ ಇರುವ ಶರಣ ಮಹಾತ್ಮರು ಬಂದರೆ ತಮಗೆ ತಿಳಿಯಲೆಂದು ದ್ವಾರದಲ್ಲಿ ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಯನ್ನು ಕಟ್ಟುತ್ತಾರೆ. ಅವು ಶಬ್ದ ಮಾಡಿದಾಗ ಬಂದಿರುವವರು ಮಹಾತ್ಮರು ಎಂದು ತಿಳಿಯುತ್ತದೆ.
ಇವನ್ನೆಲ್ಲ ತಿಳಿದುಕೊಂಡ ಮಂಟೇಸ್ವಾಮಿ ಮೂರು ಕಂಡುಗ ತುರಗಜ್ಜಿ, ಏಳು ಕಂಡುಗ ಉಳಿವು ಕೆಟ್ಟವಾಸನೆಯ ದೇಹವನ್ನಿಟ್ಟುಕೊಂಡು, ಸತ್ತೆಮ್ಮೆ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು ಕಲ್ಯಾಣ ಪಟ್ಟಣಕ್ಕೆ ಬರುತ್ತಾರೆ. ಸಂಗಯ್ಯ ತಡೆದು ಬಾಗಿಲಲ್ಲೇ ಕುಳಿತುಕೊಳ್ಳಲು ಹೇಳುತ್ತಾನೆ. ಬಸವಣ್ಣ ಮತ್ತು ನೀಲಮ್ಮನವರು ಮಂಟೇಸ್ವಾಮಿಯನ್ನು ಗುರುತಿಸದೇ ಅವನ ಮುಂದೆಯೇ ಲಿಂಗಾರ್ಚನೆಗೆಂದು ನದಿಯತ್ತ ಸಾಗುತ್ತಾರೆ. ಕಳ್ಳತನದಲ್ಲಿ ಒಳಹೋಗಲು ಪ್ರಯತ್ನಿಸಿದ ಮಂಟೇಸ್ವಾಮಿಗೆ ಸಂಗಯ್ಯ ಎರಡೇಟು ಹಾಕುತ್ತಾನೆ. ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಗಳು ಶಬ್ದಮಾಡುತ್ತವೆ. ಆಗ ಬಸವಣ್ಣನವರು ತಮಗಿಂತ ಮಿಗಿಲಾದ ಶರಣರು ಬಂದಿದ್ದಾರೆಂದು ತಿಳಿದು ಅಲ್ಲಿಗೆ ಬರುತ್ತಾರೆ. ತನ್ನನ್ನು ಕಂಡುಹಿಡಿದುಬಿಡುತ್ತಾರೆಂದು ಮಂಟೇಸ್ವಾಮಿ ಹರಳಯ್ಯನ ಕೇರಿಯಲ್ಲಿರುವ ಕೊಳಚೆ ಗುಂಡಿಗೆ ಬೀಳುತ್ತಾರೆ. ಅಲ್ಲೂ ಅವರನ್ನು ಕಂಡುಹಿಡಿದ ಬಸವಣ್ಣ ಮತ್ತು ನೀಲಮ್ಮನವರು ಗುಂಡಿಯಿಂದ ಮಂಟೇಸ್ವಾಮಿಯನ್ನು ಎಳೆಯುವಾಗ ಅವರ ಕೈಕಾಲುಗಳು ಕಿತ್ತು ಬಂದು ತಲೆ ಬೇರ್ಪಡುತ್ತದೆ. ಬಸವಣ್ಣನವರು ಕೈಕಾಲುಗಳನ್ನು, ನೀಲಮ್ಮನವರು ತಲೆಯನ್ನು ಎತ್ತಿಕೊಂಡು ಪ್ರವೇಶಮಾಡುವಾಗ ಶರಣರು ಅದನ್ನು ನೋಡಿ ‘ಹೆಂಡ ಮಾಂಸಗಳನ್ನು ಬಸವಣ್ಣ ಮತ್ತು ನೀಲಮ್ಮನವರು ತರುತ್ತಿದ್ದಾರೆ, ಅವರು ಕೆಟ್ಟಿದ್ದಾರೆ, ಕಲ್ಯಾಣವನ್ನು ಕೆಡಿಸುತ್ತಾರೆ, ನಾವು ಶುದ್ಧರಾಗಬೇಕು’ ಎಂದು ಮಡಿಯಾಗಲು ನದಿಯತ್ತ ಹೋಗತೊಡಗುತ್ತಾರೆ. ಇತ್ತ ಬಸವಣ್ಣನವರು ಮಂಟೇಸ್ವಾಮಿಯ ರುಂಡ-ಮುಂಡಗಳನ್ನು ಉರಿಗದ್ದುಗೆಯಲ್ಲಿ ಇರಿಸಿ ತಮ್ಮ ತಪ್ಪುಗಳನ್ನು ಮನ್ನಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಅವರು ತಮ್ಮ ನಿಜರೂಪ ತೋರಿಸಿ ಅವರ ಸತ್ಯವನ್ನು ಮೆಚ್ಚಿ ಹರಸುತ್ತಾರೆ.
ಶುದ್ಧವಾಗಲು ಹೋಗಿದ್ದ ಜಂಗಮರ ಲಿಂಗಗಳನ್ನು ಮಾಯಮಾಡಿ ಲಿಂಗವೆಂದರೆ ಅದೊಂದು ತತ್ವವೆಂದು ಮನಗಾಣಿಸಿ ಅವರೆಲ್ಲರನ್ನು ಪರೀಕ್ಷೆಗೆ ಒಡ್ಡಿದಾಗ ಗೆಲ್ಲುವ ಹೊಲೆಯರ ಹೊನ್ನಪ್ಪ ಮತ್ತು ಮಾದಿಗರ ಚನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಈಡಿಗರ ಕ್ಯಾತಪ್ಪ ಅವರನ್ನು ತಮ್ಮ ಶಿಶುಮಕ್ಕಳಾಗಿ ಮಾಡಿಕೊಳ್ಳುತ್ತಾರೆ. ಮುಂದೆಯೂ ಹೀಗೆ ಹಲವೆಡೆ ತಿರುಗುತ್ತ ಶಿಶುಮಕ್ಕಳನ್ನು ಸಂಪಾದಿಸಿಕೊಳ್ಳುತ್ತಾ ಹೋಗುತ್ತಾರೆ. ರಾಚಾಪ್ಪಾಜಿ, ತೋಪಿನ ದೊಡ್ಡಮ್ಮ, ಚೆನ್ನಾಜಮ್ಮ, ಪಲಾರದಯ್ಯ, ಸಿದ್ದಪ್ಪಾಜಿ ಇವರೆಲ್ಲರು ಮಂಟೇಸ್ವಾಮಿಯ ಮುಖ್ಯ ಅನುಯಾಯಿಗಳು. ಹಲವು ಪವಾಡಗಳನ್ನು ಮಂಟೇಸ್ವಾಮಿ ಮಾಡುತ್ತಾರೆ. ಈ ಪವಾಡಗಳೆಲ್ಲವೂ ಜರುಗುವುದು ನಿಜಭಕ್ತಿಯನ್ನು ಪರೀಕ್ಷಿಸಿ ಅಹಂಕಾರವನ್ನು ಮುರಿಯುವುದಕ್ಕಾಗಿಯೇ ಎಂಬುದು ಮುಖ್ಯ. ಹೊಲಸು ತೊಳೆಯುವವರನ್ನು ಕೀಳಾಗಿಸುವ ಜಾತಿ ವ್ಯವಸ್ಥೆಯಲ್ಲಿ ಹೊಲಸಿನ ಮೂಲಕವೇ ನಿಜಭಕ್ತಿಯನ್ನು ಮನಗಾಣಿಸುವುದನ್ನ ಕೀಳೆನಿಸಿಕೊಂಡ ಜಾತಿಯ ಸಂತರೆಲ್ಲರೂ ಮಾಡಿದ್ದಾರೆ. ಭಕ್ತಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಅಲ್ಲಾಡಿಸಿ ಪರೀಕ್ಷೆಗೆ ಒಡ್ಡಲು ಸಹ ಅಸಹ್ಯ ಹುಟ್ಟಿಸುವ ಗಲೀಜನ್ನೇ ಪರೀಕ್ಷೆಯ ಮಾನದಂಡವಾಗಿ ಮಂಟೇಸ್ವಾಮಿ ಬಳಸುತ್ತಾರೆ. ತುರಿಗಜ್ಜಿ, ಕೀವು ತುಂಬಿಕೊಂಡ ದೇಹ, ಹೆಗಲ ಮೇಲೆ ಸತ್ತ ಎಮ್ಮೆ ಕರುವಿನ ಹೆಣ ಹೊತ್ತು ಹೋಗುತ್ತಾರೆ. ಪರೀಕ್ಷೆಯ ಅಂತಿಮ ಹಂತದಲ್ಲಿ ಕೊಳಚೆ ಗುಂಡಿಗೆ ಬೀಳುತ್ತಾರೆ. ಅತಿ ಹೀನಾಯವಾದುದೆಂದು ಪರಿಗಣಿಸಿರುವುದನ್ನೇ ಮಾನದಂಡವಾಗಿ ಮಾಡಿಕೊಂಡು ಶುದ್ಧ-ಅಶುದ್ಧ, ಮೇಲು-ಕೀಳಿನ ಗೋಡೆಗಳನ್ನು ಒಡೆಯಲು ಅಸ್ತ್ರವಾಗಿ ಬಳಸುತ್ತಾರೆ.





