ಬಹುಪಾಲು ಸಫಾಯಿ ಕರ್ಮಚಾರಿಗಳು ಪರಿಶಿಷ್ಟ ಜಾತಿಗಳಡಿ ಪಟ್ಟಿಮಾಡಲಾಗಿರುವ ಮಾದಿಗ ಜಾತಿಯವರಾಗಿದ್ದಾರೆ. ವಿಶಾಲ ದಖ್ಖನ ಪ್ರಸ್ಥಭೂಮಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಜಾತಿ ಶ್ರೇಣೀಕರಣದಲ್ಲಿ ಅತ್ಯಂತ ಕೆಳಗಿರುವ ಮಾದಿಗರು ಚರ್ಮದ ಕಾಯಕದಲ್ಲಿ ಅಪಾರ ಕೌಶಲ್ಯ ಹೊಂದಿದ್ದಾರೆ. ಚರ್ಮವನ್ನು ಹದಗೊಳಿಸುವ ಕಠಿಣ ದುಡಿಮೆಯನ್ನು ಮತ್ತು ಚರ್ಮದಲ್ಲಿ ನಾದಹೊಮ್ಮಿಸುವ ವಾದ್ಯಗಳು, ರಾಸುಗಳಿಗೆ ಮತ್ತು ಕೃಷಿಗೆ ಬೇಕಾಗುವ ಪರಿಕರಗಳನ್ನು ಮಾಡುವ ಕೌಶಲ್ಯವಿರುವ ಮಾದಿಗ ಸಮುದಾಯದವರ ಶ್ರೀಮಂತ ಪರಂಪರೆಯನ್ನು ಇಲ್ಲಿ ನೋಡಲಾಗಿದೆ. ಮಾಂಸ ಕತ್ತರಿಸುವ, ಚರ್ಮ ಹದ ಮಾಡುವ ಕೆಲಸಗಳು ಶ್ರೇಷ್ಠತೆಯ ಮಾನದಂಡದಲ್ಲಿ ಅತ್ಯಂತ ಕೀಳಾಗಿ ಉಳಿದಿವೆ. ವಾದ್ಯದ ಮೇಲೆ ಹೊಮ್ಮುವ ನಾದದ ಶ್ರೇಷ್ಠತೆಯ ಹಿಂದಿನ ದುಡಿಮೆ, ಶ್ರಮ, ಶ್ರದ್ಧೆಯನ್ನು ಮರೆತವರಿಗೆ ಮಾತ್ರವೇ ಆ ಕೆಲಸಗಳು ಕೀಳಾಗಿ ಕಾಣಿಸುತ್ತವೆ. ಸತ್ತ ಪ್ರಾಣಿಯ ಚರ್ಮದಿಂದ ನಾದದವರೆಗಿನ ನಡಿಗೆಯ ಬಲ್ಲವರಿಗೆ ಎಲ್ಲವೂ ಶ್ರೇಷ್ಠವೇ.
ಶರಣರ ಕ್ರಿಯಾಶೀಲ ಪ್ರತಿರೋಧದ ದನಿ
ಎಲ್ಲವನ್ನು ಸಮನಾಗಿ ನೋಡಲು ಕಲಿಸುವ ನಡಿಗೆಯ ಕಾವ್ಯಾತ್ಮಕ ರೂಪವನ್ನು ಕೆಳಗಿನ ವಚನಗಳಲ್ಲಿ ಕಾಣಬಹುದು.
ಕುರಿ ಕೋಳಿ ಕಿರಿಮೀನ ತಿಂಬುವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು
ಅದೆಂತೆಂದಡೆ: ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ ನಾಯನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಗಳರಸು ಬಲ್ಲನವ್ವಾ”
-ಕಾಳವ್ವೆ (ವೀರಣ್ಣ ರಾಜೂರ್: ೧೯೯೩: ೨೦೦೬)
ಈ ವಚನದಲ್ಲಿ ಕೆಳಜಾತಿಯ ಜನರು ಮಾಂಸ ತಿನ್ನುವರೆಂದು ಕೀಳಾಗಿ ಕಾಣುವುದನ್ನು ಕಾಳವ್ವೆ ಪ್ರಶ್ನಿಸುತ್ತಾಳೆ. ನಾನು ಉಂಡು ಬಿಟ್ಟ ಚರ್ಮದಲ್ಲಿ ಮಾಡುವ ಸಿದ್ದಳಿಕೆ ಮತ್ತು ಸಗ್ಗಳಿಕೆಯಲಿ ಇಡುವ ನೀರನ್ನು ಶುದ್ಧವೆಂದು ಕುಡಿಯುವ ನೀವೆಂಥ ಶ್ರೇಷ್ಠರೆಂದು ಪ್ರಶ್ನಿಸುವ ಮೂಲಕ ತನ್ನ ಆಹಾರ ಪದ್ಧತಿ ಮತ್ತು ಕಾಯಕವೆರಡರ ಹೆಮ್ಮೆಯನ್ನು ಎತ್ತಿಹಿಡಿಯುತ್ತಾಳೆ.
“ವೇದಶಾಸ್ತ್ರಕ್ಕೆ ಹಾರುವನಾಗಿ
ವೀರವಿತರಣಕ್ಕೆ ಕ್ಷತ್ರೀಯನಾಗಿ
ಸರ್ವವನಾರೈದು ನೋಡುವಲ್ಲಿ
ವೈಶ್ಯನಾಗಿ ವ್ಯಾಪಾರದೊಳಗಾಗಿ
ಕೃಷಿ ಮಾಡುವುದಕ್ಕೆ ಶೂದ್ರನಾಗಿ
ಇಂತಿ ಜಾತಿ ಗೋತ್ರದೊಳಗಾದ
ನೀಚ ಶ್ರೇಷ್ಠ ಎರಡು ಕುಲವಲ್ಲದೆ
ಹೊಲೆ ಹದಿನೆಂಟು ಜಾತಿ ಎಂಬ ಕುಲವಿಲ್ಲ
ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವಜೀವಹತಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ
ಈ ಉಭಯವನರಿದು ಮರೆಯಲಿಲ್ಲ
ಕೈಯುಳಿಕತ್ತಿ ಅಡಿಗುಂಟಕ್ಕಡಿಯಾಗಬೇಡ
ಅರಿವಿಜಾತ್ಮ ರಾಮ ರಾಮನ”
–ಮಾದಾರ ಚೆನ್ನಯ್ಯ (ಎಂ.ಚಿದಾನಂದ ಮೂರ್ತಿ:೨೦೧೧:೧೦೧)
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು
“ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು
ನೀ ಹೊತ್ತ ಬಹುರೂಪ ತಪ್ಪದೆ ರಜತದ ಬೆಟ್ಟದ ಮೇಲಕ್ಕೆ ಹೋಗು,
ನಿನ್ನ ಭಕ್ತರ ಮುಕ್ತಿಯ ಮಾಡು,
ಕಾಮಿ ಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು”
-ಧೂಳಯ್ಯ(೧೭೨ ಆಲಯ ಬಯಲಾಗಿ, ಸಬಿತಾ ಬನ್ನಾಡಿ)
ಚಪ್ಪಲಿ ಮಾಡುವ ಕಾಯಕದ ಧೂಳಯ್ಯನ ವೃತ್ತಿ ಧರ್ಮವನ್ನು ಮೇಲಿನ ವಚನವು ಸಾಬೀತು ಮಾಡುತ್ತದೆ. ಕಾಯಕವೇ ಪೂಜೆ ಎಂದು ಭಾವಿಸುವ ಧೂಳಯ್ಯ, ಆ ಕೆಲಸ ಮಾಡುವಾಗ ತನ್ನ ಮೆಚ್ಚಿನ ದೇವ ಶಿವ ಕಾಣಿಸಿಕೊಂಡರೆ ಅವನನ್ನೂ ಪ್ರಶ್ನಿಸಿ ಕಳಿಸಬಲ್ಲ. ದೇವರು ದೇವಸ್ಥಾನಗಳಿಂದ ದೂರವಿಟ್ಟಿರುವ ಕೆಳಜಾತಿಯ ಜನ ತಮ್ಮ ಕಾಯಕ ನಿಷ್ಠೆಯಲ್ಲೇ ದೇವರನ್ನು ಕಾಣುವ, ಆಧ್ಯಾತ್ಮಿಕ ಹುಡುಕಾಟ ನಡೆಸುವ ರೀತಿಗೆ ಈ ವಚನ ಸಾಕ್ಷಿಯಾಗಿದೆ.
“ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕಕ್ಕೆ ಬಾರನೆತ್ತುವೆ
ಆಗಮದ ಮೂಗ ಕೊಯ್ಯುವೆ
ಮಹಾದಾನಿ ಕೂಡಲ ಸಂಗಮದೇವ
ಮಾದಾರ ಚೆನ್ನಯ್ಯನ ಮನೆಮಗ ನಾನು”
– ಬಸವಣ್ಣ (ಎಂ. ಚಿದಾನಂದ ಮೂರ್ತಿ:೨೦೧೧: ೯೯ ಮತ್ತು ೧೦೦)
ಈ ವಚನದಲ್ಲಿ ಬಸವಣ್ಣ ಜಾತೀಯತೆಯನ್ನು ಪ್ರತಿಪಾದಿಸುವ ವೈದಿಕ ಧರ್ಮದ ಪವಿತ್ರ ಗ್ರಂಥಗಳನ್ನು ಮಾದಿಗರು ಮಾಡುವ ಚರ್ಮದ ಉಪಕರಣಗಳ ಮೂಲಕವೇ ಬಡಿದು ಜಾತಿಯನ್ನು ವೈಯಕ್ತಿಕವಾಗಿಯೂ, ತಾತ್ವಿಕವಾಗಿಯೂ ಪ್ರಶ್ನಿಸುವುದು ಜಾತಿ ವಿನಾಶದ ಪ್ರಯತ್ನವಾಗಿದೆ.
ಇಂತಹ ವಚನ ಚಳುವಳಿಯೊಳಗಡೆಯೇ ಅಂತರ್ಗತವಾಗಿರುವ ಪ್ರತಿ-ಸಂಸ್ಕೃತಿಯ ವಿಚಾರವು ಮಾದಿಗರ ಸಾಂಸ್ಕೃತಿಕ ಪರಂಪರೆಯನ್ನು ರೂಪಿಸಿದೆ. ಅವು ಇಂದಿನ ಸಫಾಯಿ ಕರ್ಮಚಾರಿಗಳಿಗೆ ಸ್ಪೂರ್ತಿ, ಮಗ್ನತೆ, ಅವಲೋಕನ, ಪ್ರತಿರೋಧ, ಘನತೆ, ಸೇವೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಾನಮಾನದ ಮರುರಚನೆ, ಮರುಸ್ಥಾಪನೆ, ವಿಮೋಚನೆ ಮತ್ತು ಉಪಶಮನವಾಗಿ ಕೆಲಸಮಾಡಬಲ್ಲವು.

