ಚಕ್ರೀಯ ತತ್ವದ ಜೀವ ಪರಂಪರೆ


ಸಂವಿಧಾನದ ಸಮಾನತೆಯ ಆಶಯದಂತೆ ದಲಿತ ಸಮುದಾಯಗಳು ಹಾಗೂ ಸಮಾನ ಮನಸ್ಕರು ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ನಡೆಸಿದಂತಹ ಪ್ರತಿಭಟನೆ, ಸಂಘಟಿತ ಹೋರಾಟ, ಸಾರ್ವಜನಿಕ ವಕಾಲತ್ತುಗಳಂತಹ ಸಾಮಾಜಿಕ ಮಧ್ಯಸ್ಥಿಕೆಯು ಕೆಲವು ವಿಜಯಗಳನ್ನು ಸಾಧಿಸಿ ಹಲವಾರು ಬದಲಾವಣೆಗಳನ್ನು ತಂದಿವೆ. ದಲಿತರಲ್ಲೇ ಅಸ್ಪೃಶ್ಯರಾದ ಸಫಾಯಿ ಕರ್ಮಚಾರಿಗಳ ಮಾನವ ಹಕ್ಕುಗಳ ಹೋರಾಟವು ಹಲವಾರು ಕಾಯ್ದೆಗಳ ಜಾರಿಗೆ, ಹಕ್ಕುಗಳ ಕುರಿತ ಅರಿವಿಗೆ, ವೇತನ ಹೆಚ್ಚಳಕ್ಕೆ, ಗುತ್ತಿಗೆ ರದ್ದತಿಗೆ ಹಾಗೂ ಬಹುಮುಖ್ಯವಾಗಿ ಸಂಘಟಿತರಾಗುವುದಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಸಫಾಯಿ ಕರ್ಮಚಾರಿಗಳು ಕಳಂಕಿತರಾಗಿ, ಪರಕೀಯರಾಗಿಯೇ ಉಳಿದಿದ್ದಾರೆಂಬುದು ಭಾರತದ ಸಾಮಾಜಿಕ ಪ್ರಜ್ಞೆಯು ಅಸ್ಪೃಶ್ಯತೆ ಮತ್ತು ತಾರತಮ್ಯದ ರೋಗದಲ್ಲಿ ಇನ್ನೂ ನರಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸ್ವಚ್ಛತೆಯ ಕೆಲಸ ಮಾಡುವ ಪೌರಕಾರ್ಮಿಕರು ಮೂಲತಃ ಕೃಷಿ ಕೆಲಸಗಳನ್ನು ಬಲ್ಲ ಮತ್ತು ಕುಶಲ ಕರ್ಮಿಗಳಾಗಿದ್ದು ಕೃಷಿ ಸಮಾಜದ ಅಂತರ್ಗತ ಭಾಗವಾಗಿದ್ದರು. ಚಮ್ಮಾರಿಕೆಯಲ್ಲಿ ನುರಿತವರು, ಕೃಷಿ ಉಪಕರಣಗಳು ಮತ್ತು ಸಂಗೀತ ವಾದ್ಯಗಳ ಮಾಡುವವರು, ಹಾಡುಗಾರರು, ಕಥನವಾಚಕರೂ ಆಗಿದ್ದರು. ಇಂತಹ ಪರಂಪರೆಯುಳ್ಳವರನ್ನು ಅಸ್ಪೃಶ್ಯರಾಗಿ ಉಳಿಸಿರುವುದಕ್ಕೆ ಇರುವ ಎರಡು ಮುಖ್ಯ ಕಾರಣಗಳಲ್ಲಿ ಮೊದಲನೆಯದು ಜಾತಿ ಶ್ರೇಣಿಕರಣ. ಈ ಶ್ರೇಣಿಕರಣದ ಮಾನದಂಡದಲ್ಲಿ ಅವರ ಕೆಲಸಗಳನ್ನು ಅಶುದ್ಧವೆಂದು ಪರಿಗಣಿಸಿ ಭೂಮಿ ಮತ್ತು ಸಾರ್ವಜನಿಕ ಸಂಪನ್ಮೂಲಗಳಿಂದ ಅವರನ್ನು ಮತ್ತು ಅವರ ಜೀವಪರ ಸಾಂಸ್ಕೃತಿಕ ಪರಂಪರೆಯನ್ನು ತಾತ್ಸ್ಸಾರದಿಂದ ದೂರವಿಡಲಾಗಿದೆ. ಎರಡನೆಯದು ಬಂಡವಾಳಶಾಹಿ. ಭಾರತದ ಸಾಮಾಜಿಕ ಜೀವನವನ್ನು ಯಾಂತ್ರೀಕೃತ ಮತ್ತು ನಗರೀಕರಣಗೊಳಿಸಲು ಬಂಡವಾಳಶಾಹಿಯು ಈ ಸಮಾಜದ ಒಂದು ಸಮುದಾಯವನ್ನು ಕಸ-ಮಲದ ತ್ಯಾಜ್ಯವನ್ನು ತೆರವು ಮಾಡಲು ದೂಡಿದೆ. ಬಂಡವಾಳಶಾಹಿಯೂ ಸಹ ತನ್ನದೇ ಅಶುದ್ಧ ಎಂಬ ಪರಿಕಲ್ಪನೆಯನ್ನು ಆಧರಿಸಿದೆ. ಅದರ ಮಾನದಂಡದಲ್ಲಿ ಹಲವು ಜ್ಞಾನ ಪರಂಪರೆಗಳನ್ನು ಆಧುನಿಕವಲ್ಲವೆಂದು ಮತ್ತು ಪ್ರಗತಿ ವಿರೋಧಿ ಎಂದು ಪರಿಗಣಿಸುತ್ತದೆ. ಕಸದ ರಾಶಿಗಳು ಮತ್ತು ಕಟ್ಟಿಕೊಂಡ ಚರಂಡಿಗಳನ್ನು ಒಂದು ದಿನ ಅಥವಾ ಒಂದು ವಾರ ತೆರವು ಮಾಡದಿದ್ದರೆ ಜಾತಿ ಶುದ್ಧತೆ ಮತ್ತು ಬಂಡವಾಳಶಾಹಿಯ ಪ್ರಗತಿ ಬೆತ್ತಲಾಗುತ್ತದೆ.
ನೆಲಮೂಲದ ವಿಶಾಲ ಪರಂಪರೆಗಳನ್ನು ಹತ್ತಿಕ್ಕಿ ಮೌನವಾಗಿಸುವ ಮೂಲಕವೇ ಜಾತಿ ಶುದ್ಧತೆ ಮತ್ತು ಬಂಡವಾಳಶಹಿ ಪ್ರಗತಿಗಳೆರಡೂ ಪ್ರಯೋಜನ ಪಡೆದುಕೊಳ್ಳುತ್ತವೆ. ಈ ಮೌನವು ಪೌರಕಾರ್ಮಿಕರ ದುಡಿಮೆಗೆ ಆಧಾರವಾಗಿರುವ ಸತ್ಯಗಳನ್ನು ಕಡೆಗಣಿಸಿ ಅವರ ದುಡಿಮೆಯ ಪ್ರಯೋಜನವನ್ನು ಮಾತ್ರ ಪಡೆದುಕೊಳ್ಳಲು ಪ್ರಸ್ತುತ ಸಾಮಾಜಿಕ ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ಸಫಾಯಿ ಕರ್ಮಚಾರಿಗಳ ದುಡಿಮೆಗೆ ಆಧಾರವಾಗಿರುವ ಸತ್ಯಗಳು ಭಿನ್ನವಾದಜೀವಪರ ಲೋಕದೃಷ್ಟಿಯನ್ನು ತೆರೆದಿಡುತ್ತವೆ. ಮೇಲು-ಕೀಳೆಂಬ ಭೇಧವೆಣಿಸದೆ, ಶುದ್ಧ-ಅಶುದ್ಧ ಒಡಕನ್ನು ಮೀರಿದ ಲೋಕದೃಷ್ಟಿಯದು.ಅಲ್ಲಿ ಜೀವಪಡೆದುಕೊಳ್ಳುವ ಎಲ್ಲವೂ ನಶಿಸಿ, ಕೊಳೆತು ಮತ್ತೆ ಹುಟ್ಟುತ್ತವೆ. ಈ ಮಣ್ಣು ಮತ್ತು ಅದರ ಮೇಲೆ ಹರಿವ ನೀರಿನಲ್ಲಿ ಜೀವ-ಸಾವು-ಮರುಹುಟ್ಟಿನ ನಿಗೂಢಗಳು ಅಡಗಿವೆ. ಮಣ್ಣು ಮತ್ತು ನೀರು ಜೀವ ಮೊಳೆಸುತ್ತವೆ. ಪೊರೆಯುವ, ಪೋಷಿಸುವ ಮಣ್ಣು ಮತ್ತು ನೀರು ಪರಸ್ಪರರನ್ನು ಪೊರೆಯುವ ಬಗ್ಗೆ ಎಚ್ಚರಿಸುತ್ತವೆ.ಈ ಲೋಕದೃಷ್ಟಿ ನಮಗೆ ಬಂದರೆ ಮಾತ್ರ ಮಣ್ಣಿಗೆ ಕೈ ಇಕ್ಕಿ ಮಾಡುವ ದುಡಿಮೆಯಲ್ಲಿ ಬೆಳೆಯುವ ಸತ್ವದ ಅರಿವಾಗುವುದು.ಆಗ ಈ ಅರಿವಿನಲ್ಲಿ ತೊಟ್ಟಿಕ್ಕುವ ಹನಿಗಳು ಹರಿದು ಜಿಗಿದು ಧುಮ್ಮಿಕ್ಕುವ ಲಯದ ಅನುಭವ ನಮಗೆ ಸಿಗುತ್ತದೆ.ಅಂಕು-ಡೊಂಕಿನ, ತಿರುವು-ಮುರುವುಗಳ ನೀರದಾರಿಯಂತೆಯೇ ನಮ್ಮ ನಿರೂಪಣೆಯಲ್ಲಿ ನಾವು ಸಫಾಯಿ ಕರ್ಮಚಾರಿಗಳ ಸಂಸ್ಕೃತಿ ಮತ್ತು ರಾಜಕೀಯದೊಂದಿಗೆ ಬೆಸೆದುಕೊಂಡಿರುವ ಸಂಶೋಧನಾ ಪಠ್ಯ, ಸಂಕಥನ, ದೃಶ್ಯ ಮಾಧ್ಯಮ, ಕಥಾ ವಾಚಕಗಳು ಇತ್ಯಾದಿಯನ್ನು ತೆನೆಯೊಳಗಿನ ಕಾಳುಗಳಂತೆ ಜೋಡಿಸುವ ಪ್ರಯತ್ನ ಮಾಡಿದ್ದೇವೆ.