ಜ್ಞಾನ ಪುರಾಣಗಳು

ಈ ಪುರಾಣಗಳು ಸೃಷ್ಟಿ ಕುರಿತು ಕಟ್ಟಿಕೊಂಡ ಸಮುದಾಯದ ನಂಬಿಕೆ ಮತ್ತು ಕಲ್ಪನೆಯ ಬಗ್ಗೆ ಹೇಳುತ್ತವೆ. ನೀರಿನಿಂದ ಆರಂಭವಾಗಿ ಜಲಚರಗಳು, ಸಸ್ಯಲೋಕ, ಪ್ರಾಣಿಲೋಕ, ಕೀಟಲೋಕ ಮನುಷ್ಯ ಕುಲದವರೆಗಿನ ವಿಕಾಸದ ಅರಿವನ್ನೂ ಹೇಳುತ್ತವೆ. ಈ ಪುರಾಣಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಸೃಷ್ಟಿಸುವ ಸಲುವಾಗಿ ತನ್ನನ್ನೇ ತೆತ್ತುಕೊಳ್ಳುವುದು ಮತ್ತು ಬದುಕುಳಿಯಲು ಬೇಕಾದ ದುಡಿಮೆಗೆ ಅಗತ್ಯವಾದ ಉಪಕರಣಗಳಿಗೆ ತಾನು ಕಚ್ಚಾವಸ್ತುವಾಗುವುದರ ಶ್ರದ್ಧೆಯನ್ನು, ಸಾಂಸಾರಿಕ ಲೋಕದ ರೋಗ, ರುಜಿನ, ಕಷ್ಟ-ಕಾರ್ಪಣ್ಯಗಳ ಎದುರಿಸಲು ಬೇಕಾದ ಚೈತನ್ಯವನ್ನು ಹಾಗೂ ಶುದ್ಧ-ಅಶುದ್ಧದ ದ್ವಿತ್ವವನ್ನು ಮೀರಿದ ಬದುಕಿನ ಲಯವನ್ನು.


ಜ್ಞಾನ ಪುರಾಣಗಳು :
ಮತಂಗ ಮುನಿಯ “ಬೃಹದ್ದೇಶಿ” ಪುರಾಣ: ಭಾರತೀಯ ಸಂಗೀತ ಶಾಸ್ತ್ರದಲ್ಲಿ ಉಪಲಬ್ಧವಾಗಿರುವ ಪ್ರಪ್ರಥಮ ಗ್ರಂಥ ಇದಾಗಿದೆ. ಅತ್ಯಂತ ಪಾಂಡಿತ್ಯಪೂರ್ಣವಾದ, ನಮ್ಮ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನಿರ್ಮಿಸಿದ ಗ್ರಂಥ ಇದಾಗಿದೆ. ಹದಿನಾರು ಶಾಸ್ತ್ರಗಳಲ್ಲಿ ವಿದ್ವಾಂಸನಾದ ಮತಂಗ ಮುನಿ ೧೫೦೦ ವರ್ಷಗಳಷ್ಟು ಹಿಂದೆಯೇ ಬರೆದ ಈ ಗ್ರಂಥವು ನಮ್ಮ ಸಂಗೀತ ಕಲೆ-ಜ್ಞಾನದ ಬುನಾದಿಯಾಗಿದೆ.
ಮುನಿ ಪರಂಪರೆಗೆ ಸೇರಿದ ಮತಂಗ ಮನಿಯು ಚಂಡಾಲನಾಗಿ ಹುಟ್ಟಿ, ತಪಸ್ಸು ಮಾಡಿ ಇಂದ್ರನ ಆಶೀರ್ವಾದದಿಂದ ಜ್ಞಾನಿಯಾಗಿ ಆಶ್ರಮವನ್ನು ಕಟ್ಟಿ ಕಷ್ಟದಲ್ಲಿ ಇರುವವರಿಗೆ ಸಹಾಯಮಾಡುತ್ತಿದ್ದುದರ ಕುರಿತು ರಾಮಾಯಣ ಮಹಾಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ. ಮತಂಗ ಮುನಿಯು ತನ್ನ ಸ್ವಪ್ರಯತ್ನದಿಂದ, ಸತ್ಕರ್ಮದಿಂದ ಜ್ಞಾನಿಯಾಗುತ್ತಾನೆ ಎಂದು ಬೌದ್ಧ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.


ಬೃಹದ್ದೇಶಿ ಎಂದರೆ ಬೃಹತ್ ದೇಶಿ ಎಂದರೆ ದೊಡ್ಡದಾದ ಅಥವಾ ಹಿರಿದಾದ ದೇಸಿ ಎಂದು. ಬೃಹದ್ದೇಶಿ ಪುರಾಣದಲ್ಲಿ ಮತಂಗನು ಸಂಗೀತದ ಮೂಲಕ ದೇಶಿ ಎಂಬುದು ಬೃಹತ್ತಾದುದು, ದೇಶೀ ಎಂಬುದು ಎಲ್ಲಕ್ಕಿಂತ ಹಿರಿದಾದುದು ಎಂಬುದನ್ನು ಮನನ ಮಾಡಿಸುತ್ತಾನೆ. ಧ್ವನಿ ಅಂದರೆ ಶಬ್ದವು ಎಲ್ಲಾ ದೇಶಗಳಲ್ಲಿರುವ ಜಂತುಗಳಿಗೂ, ಸಾಮಾನ್ಯ ಜನರಿಗೂ, ದೊರೆಗಳಿಗೂ ಅವರವರ ಇಷ್ಟದಂತೆ ಇಚ್ಛಿಸಿದ ಸುಖವನ್ನು ಕೊಡುತ್ತದೆ. ಇಂತಹ ಸುಖ ಕೊಡುವ ಕಾರ್ಯದಲ್ಲಿ ತೊಡಗಿರುವ ಈ ಧ್ವನಿಯು ದೇಶೀ ಎಂಬ ಹೆಸರನ್ನು ಹೊಂದಿದೆ. ಧ್ವನಿಯು ವಾಸ್ತವ ಅನುಭವವನ್ನು ನೀಡುವುದರಿಂದ ಅದಕ್ಕೆ ದೇಶಿತ್ವ ಉಂಟಾಗುತ್ತದೆ. ಧ್ವನಿಯಿಂದ-ಬಿಂದು, ಬಿಂದುವಿನಿಂದ-ನಾದ, ನಾದದಿಂದ-ಮಾತೃಕೆ, ಮಾತೃಕೆಯಿಂದ ಅಕ್ಷರ, ಅಕ್ಷರದಿಂದ ಜಗತ್ತಿನ ಜ್ಯೋತಿ ಅಂದರೆ ದೇಶೀ ಹುಟ್ಟುತ್ತದೆ. ಧ್ವನಿಯ ಉತ್ಪತ್ತಿ ಸ್ಥಾನ ಯೋನಿ. ಧ್ವನಿ ಎಲ್ಲದರ ಕಾರಣ. ಚಲಿಸುವ ಮತ್ತು ಚಲಿಸದ ಸಕಲ ಜಗತ್ತೂ ಧ್ವನಿಗೆ ಅಧೀನವಾಗಿದೆ. ಧ್ವನಿಯು ವ್ಯಕ್ತವೂ ಅವ್ಯಕ್ತವೂ ಆಗಿದೆ. ಹೆಂಗಸರು, ಮಕ್ಕಳು, ದನ ಕಾಯುವವರು, ದೊರೆಗಳು ಸ್ವ-ಇಚ್ಛೆಯಿಂದ ತಮಗೆ ಇಷ್ಟ ಬಂದಂತೆ ಪ್ರೀತಿಯಿಂದ ತಮ್ಮ ಬದುಕುಗಳಲ್ಲಿ ಯಾವುದನ್ನು ಹಾಡಿಕೊಳ್ಳುತ್ತಾರೋ ಅದನ್ನು ಮತಂಗಮುನಿ ದೇಶೀ ಎಂದು ಹೇಳುತ್ತಾನೆ. ದೇಶಿಯನ್ನು ಇಷ್ಟಬಂದಂತೆ ಹಾಡಿಕೊಳ್ಳಬಹುದು ಎಂದು ಹೇಳುತ್ತಾ ಅದರ ಉತ್ಪತ್ತಿ ಮತ್ತು ಲಕ್ಷಣಗಳನ್ನು ಹೇಳುತ್ತಾನೆ. ನಾದದಿಂದ ಭಾಷೆ ಹುಟ್ಟುತ್ತದೆ. ಹೊಕ್ಕುಳಲ್ಲಿ ಪ್ರಾಣವಾಯು ಹುಟ್ಟಿ, ಕೆಳಗೂ ಮೇಲೂ ಚಲಿಸಿ ಸಮಸ್ತವಾದ ಭವ್ಯವಾದ ನಾದ ಪದ್ಧತಿಯನ್ನು ಉಂಟುಮಾಡುತ್ತದೆ. ನಾದದಲ್ಲಿ ಐದು ವಿಧ. ಗುಹಾದಿಂದ ಸೂಕ್ಷö್ಮ ನಾದ, ಹೃದಯದಿಂದ ಅತಿಸೂಕ್ಷö್ಮ ನಾದ, ಕಂಠದಿಂದ ವ್ಯಕ್ತ ನಾದ, ಅಂಗಳದಿಂದ ಅವ್ಯಕ್ತ ನಾದ, ಬಾಯಿಯಲ್ಲಿ ಕೃತ್ರಿಮ ನಾದ ನೆಲೆಸಿರುತ್ತದೆ ಎಂದು ಹೇಳುತ್ತಾನೆ. ಮತಂಗ ಮುನಿಯು ಪ್ರಕೃತಿಯಿಂದಲೇ ಧ್ವನಿ ಹುಟ್ಟಿದೆ- ಧ್ವನಿಯಿಂದ ಜ್ಞಾನ ಹುಟ್ಟಿದೆ ಎನ್ನುವ ಬೃಹತ್ ದೇಶಿತ್ವದ ಸತ್ಯವನ್ನು ಈ ಕೃತಿಯ ಮೂಲಕ ಹೇಳಿದ್ದಾನೆ. ಆ ಮೂಲಕ ಜ್ಞಾನ ಎಂಬುದು ಮೌಖಿಕ ನೆಲೆಯ ಮೂಲಕ ಹರಡಿ ಅಕ್ಷರವಾಗಿದೆಯೇ ಹೊರತು ಅಕ್ಷರದಿಂದ ಮಾತ್ರ ಜ್ಞಾನ ಹರಡಿಲ್ಲ ಎಂಬುದನ್ನು ಹೇಳುತ್ತಾನೆ. ಇದರ ಮೂಲ ಸ್ಥಾನ ಯೋನಿಯಾಗಿರುವುದರಿಂದ ಹುಟ್ಟುತ್ತಲೇ ಪ್ರತಿಯೊಬ್ಬರೂ ಸಮತೆಯನ್ನು ಎದೆಗಿರಿಸಿಕೊಂಡ ಜ್ಞಾನಿಗಳಾಗಿಯೇ ಹುಟ್ಟುತ್ತಾರೆ ಎನ್ನುವ ಜೀವಸತ್ಯವನ್ನು ಮನಗಾಣಿಸಿದ್ದಾರೆ.