ಸಫಾಯಿ ಕರ್ಮಚಾರಿಗಳ ಭರವಸೆ: ಐ.ಪಿ.ಡಿ ಸಾಲಪ್ಪ

ಗುಡಿಸುವವರ, ನೈರ್ಮಲ್ಯ ಕೆಲಸಗಾರರ ವಿಷಯ ಬಂದಾಗಲೆಲ್ಲ ಮರೆಯದೇ ಪ್ರಸ್ತಾಪವಾಗುವ ವ್ಯಕ್ತಿಯ ಹೆಸರೆಂದರೆ ಐ.ಪಿ.ಡಿ ಸಾಲಪ್ಪ ಎಂದೆ ಖ್ಯಾತರಾದ ಐವಾರಪಲ್ಲಿ ಪೆದ್ದಯ್ಯ ದೊಡ್ಡ ಸಾಲಪ್ಪ. ಪೌರಕಾರ್ಮಿಕರ ಸಲುವಾಗಿ ದನಿ ಎತ್ತಿದ, ಅವರಿಗೆ ದನಿಯಾದ ಸಾಲಪ್ಪನವರು ಬೆಂಗಳೂರಿನ ಗೌರಿಪುರದಲ್ಲಿ ೧೧.೧೨.೧೯೨೯ರಲ್ಲಿ ಮಾದಿಗ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ಕುಳ್ಳಾಯಮ್ಮ. ತಂದೆ ಶ್ರೀ ಪೆದ್ದಯ್ಯ. ಪೆದ್ದಯ್ಯನವರ ಪೂರ್ವಿಕರು ೧೯೧೦ರಲ್ಲಿ ರೈಲ್ವೆ ಕೂಲಿಗಳಾಗಿ ಅಂದಿನ ಮೈಸೂರು ರಾಜ್ಯಕ್ಕೆ ಬಂದರು. ಪೆದ್ದಯ್ಯನವರು ರೈಲ್ವೆ ಹಳಿಗಳನ್ನು ಹಾಕುವ ಕೆಲಸ ಮಾಡುತ್ತಿದ್ದರು. ಸಾಲಪ್ಪನವರ ಪೂರ್ವಿಕರು ಈಗಿನ ತೆಲಂಗಾಣ ರಾಜ್ಯದ ಅನಂತಪುರದವರು. ಭೀಕರ ಬರಗಾಲವು ಹೊಟ್ಟೆಪಾಡನ್ನು ಅರಸಿಕೊಂಡು ಬೆಂಗಳೂರಿಗೆ ಬರುವಂತೆ ಮಾಡಿತು. ಸಾಲಪ್ಪನವರಿಗೆ ಮೂವರು ಅಕ್ಕಂದಿರು. ಸಾಲಪ್ಪನವರು ಜನಿಸಿದ ಆರು ತಿಂಗಳಲ್ಲೇ ಅವರ ತಾಯಿ ತೀರಿಕೊಂಡರು. ಇವರನ್ನು ಸ್ವಂತ ಮಗುವಿನಂತೆ ಸಾಕಿದವರು ಅವರ ಚಿಕ್ಕಮ್ಮ. ಅಂದರೆ ತಂದೆಯ ತಮ್ಮನ ಹೆಂಡತಿ.
ಹೈಸ್ಕೂಲು ಓದುವಾಗಲೇ ಸಾಲಪ್ಪನವರು ಸ್ವಾತಂತ್ರö್ಯ ಚಳುವಳಿಯಿಂದ ಪ್ರೇರಿತರಾದರು. ಒಮ್ಮೆ ಬೆಂಗಳೂರಿನ ಕೆಂಗೇರಿ ಗೇಟಿನ ಬಳಿ ಸ್ವಾತಂತ್ರö್ಯ ಚಳುವಳಿಗಾರರನ್ನು ಬಂಧಿಸಿ ಇರಿಸಿದ್ದ ವಾಹನದೊಳಗೆ ಕೂತೂಹಲದಿಂದ ಇಣುಕಿ ನೋಡಿದ ಬಾಲಕ ಸಾಲಪ್ಪನ ತಲೆಯ ಮೇಲೆ ಒಳಗೆ ಕುಳಿತಿದ್ದವರು ಗಾಂಧಿ ಟೋಪಿಯನ್ನು ಇರಿಸಿದರು. ಅಂದಿನಿಂದ ಗಾಂಧಿ ಟೋಪಿಯನ್ನು ಧರಿಸಲಾರಂಭಿಸಿದ ಸಾಲಪ್ಪನವರು ಕೊನೆಯವರೆಗೂ ಬಿಡಲಿಲ್ಲ. ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಇವರು ಗಾಂಧಿ ತತ್ವಗಳನ್ನು ಜೀವಮಾನವಿಡಿ ಅನುಸರಿಸಿದರು.
ಸಾಲಪ್ಪನವರು ಹತ್ತನೆ ತರಗತಿ ತೇರ್ಗಡೆಯಾದ ನಂತರ ಬಿನ್ನಿಮಿಲ್ಲಿನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿನ ಕಾರ್ಮಿಕ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಬಳ್ಳಾರಿಯ ಮುನಿಸಿಪಲ್ ಕೌನ್ಸಿಲರ್ ಆಗಿದ್ದ ನಾರಪ್ಪನವರ ಮಗಳು ಸರಸ್ವತಿಯವರನ್ನು ಮದುವೆಯಾದರು. ೧೯೫೬ರಲ್ಲಿ ಜೆ.ಜೆ.ನಗರದಲ್ಲಿ ‘ತಿಲಕ್ ಪಾಠಶಾಲೆ’ ಆರಂಭಿಸಿದರು. ಆ ಪಾಠಶಾಲೆಯಲ್ಲಿ ಗಂಡ-ಹೆಂಡತಿಯರಿಬ್ಬರೂ ಶಿಕ್ಷಕರಾಗಿ ದುಡಿದರು. ಶಾಲೆಯು ರಾಜ್ಯ ಸರ್ಕಾರದ ಮಾನ್ಯತೆಯನ್ನು ಪಡೆದುಕೊಂಡಿತ್ತು. ಮುಂದೆ ವಿನೋಬನಗರದಲ್ಲಿ ‘ಹರಿಜನ ಸೇವಾ ಸಂಘ’ ಪಾಠಶಾಲೆ, ವಾಲ್ಮೀಕಿ ನಗರದಲ್ಲಿ ‘ಅರುಂಧತಿ ಪ್ರೌಢಶಾಲೆ’ ಮತ್ತು ಶ್ರೀರಾಂಪುರದಲ್ಲಿ ‘ವೆಂಕಟೇಶ್ವರ ಶಾಲೆ’ಯನ್ನು ಆರಂಭಿಸಿದರು. ತಿಲಕ್ ಪಾಠಶಾಲೆ ಈಗಲೂ ನಡೆಯುತ್ತಿದೆ. ಸಾಲಪ್ಪನವರು ಶಿಸ್ತಿನ ಶಿಕ್ಷಕರಾಗಿದ್ದರಲ್ಲದೆ ಸ್ವಚ್ಛತೆಯ ಬಗ್ಗೆ ಅಪಾರ ಕಾಳಜಿವಹಿಸುತ್ತಿದ್ದರು. ಮಕ್ಕಳು ಕೈಕಾಲು ತೊಳೆದುಕೊಂಡು ತರಗತಿಯೊಳಗೆ ಬರಲೆಂದು ತಪ್ಪದೆ ಬಕೆಟ್ಟಿನಲ್ಲಿ ನೀರಿರಿಸುವ ವ್ಯವಸ್ಥೆ ಮಾಡಿಸಿದ್ದರು.
ಸಾಲಪ್ಪನವರು ೧೯೮೦ರಲ್ಲಿ ದೂರ ಶಿಕ್ಷಣದ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡರು.
‘ಹರಿಜನ ಯುವಕ ಸೇವಾ ಸಮಾಜ’ ಸ್ಥಾಪಿಸಿ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಿತ್ಯವೂ ಸಂಜೆ ಪೌರಕಾರ್ಮಿಕರನ್ನು ಒಟ್ಟುಗೂಡಿಸಿ ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದರು. ಸತ್ತ ದನದ ಮಾಂಸ, ಹಳಸಿದ ತಂಗಳಿಟ್ಟನ್ನು ತಲೆಯ ಮೇಲೆ ಹೊತ್ತು ತಂದು ತಿನ್ನಬಾರದೆಂದು ಮನವರಿಕೆ ಮಾಡಿಕೊಡುತ್ತಿದ್ದರು. ಕುಡಿತದ ಚಟ ಬಿಡಿಸಲು ಅವಿರತವಾಗಿ ಶ್ರಮಿಸಿದ ಇವರು ಹಾಲಿನ ಮೇಲೆ ಕೈ ಇರಿಸಿ ಕುಡಿತ ಬಿಡುವಂತೆ ಪ್ರಮಾಣ ಮಾಡಿಸುತ್ತಿದ್ದರು. ೧೯೬೪ರಲ್ಲಿ ‘ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ವಕರ‍್ಸ್ ಸಂಘ’ವನ್ನು ಸ್ಥಾಪಿಸಿ ಪೌರಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡಿದರು. ಸಂಘದ ಮೂಲಕ ಪೌರಕಾರ್ಮಿಕರ ಹಕ್ಕು ಮತ್ತು ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡಲು ನಿರಂತರವಾಗಿ ಶ್ರಮಿಸಿದರು. ಪೌರಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ೧೯೬೬ರಲ್ಲಿ ಸಾಲಪ್ಪನವರು ನಡೆಸಿದ ಉಪವಾಸ ಸತ್ಯಾಗ್ರಹವು ಪೌರಕಾರ್ಮಿಕರ ಮೊದಲ ಹೋರಾಟವಾಗಿದೆ. ಪೌರಕಾರ್ಮಿಕರ ಕಡುಕಷ್ಟದ ಬದುಕಿನ ನಿಕಟ ಪರಿಚಯವಿದ್ದ ಸಾಲಪ್ಪನವರು ಪೌರಕಾರ್ಮಿಕರ ಹಕ್ಕುಗಳಿಗಾಗಿ ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರ ಹೋರಾಟ ಮಾಡುತ್ತಿದ್ದರು. ಮುನಿಸಿಪಲ್ ಕೆಲಸ ಮಾಡುವವರು ಇಂಜಿನಿಯರಿಂಗ್ ವಿಭಾಗದಲ್ಲೇ ಇರಲಿ, ಮಲೇರಿಯಾ ವಿಭಾಗದಲ್ಲೇ ಇರಲಿ, ಉದ್ಯಾನದ ಕೆಲಸದಲ್ಲೇ ಇರಲಿ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಮೇಲಿನವರು ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದರು. ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗುವ ಎಷ್ಟೋ ಮೊದಲೇ ಅವರನ್ನು ಗೌರವದಿಂದ ಕಾಣಬೇಕೆಂಬ ತಿಳುವಳಿಕೆಯನ್ನು ಸಾಲಪ್ಪನವರು ಮೇಲಿನವರಿಗೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಅಧಿಕಾರಿಗಳೆಂದರೆ ಹೆದರಿ ನಡುಗುತ್ತಿದ್ದ ಪೌರಕಾರ್ಮಿಕರು ಸ್ವಾಭಿಮಾನದಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡತೊಡಗಿದರು. ನಿರಂತರ ಹೋರಾಟದ ಫಲವಾಗಿ ನಗರಪಾಲಿಕೆಯು ೧೫೦೦ ಜನರನ್ನು ಖಾಯಂಗೊಳಿಸಿತು. ೧೯೭೯-೮೦ರಲ್ಲಿ ೭೬ ದಿನಗಳ ಸರಣಿ ಸತ್ಯಾಗ್ರಹ ನಡೆಸಿ ಪೌರಕಾರ್ಮಿಕರನ್ನು ಕೆ.ಸಿ.ಎಸ್.ಆರ್ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾದರು. ಪೋಷಕರು ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದುಕೊಳ್ಳುತ್ತಿದ್ದ ಮಕ್ಕಳು ವಿದ್ಯಾವಂತರಾಗಿದ್ದರೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ದರ್ಜೆ ಕೆಲಸ ಸಿಗುವಂತೆ ಮಾಡಿದರು. ಇದರಿಂದಾಗಿ ಪೌರಕಾರ್ಮಿಕರಿಗೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸುಮಾರು ೮೦ ಶಾಖೆಗಳಲ್ಲಿ ಕೆಲಸ ಸಿಗುವಂತಾಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ರೂ.೨೫ಕ್ಕೆ ೧೨೯೯೪ ಸೈಟುಗಳು ಪೌರಕಾರ್ಮಿಕರಿಗೆ ಹಂಚಿಕೆಯಾಗಲು ಕಾರಣರಾದರು.
ಪೌರಕಾರ್ಮಿಕರನ್ನು ತುಚ್ಛವಾಗಿ ಕಾಣುವುದರ ವಿರುದ್ಧ ಸದಾ ಪ್ರತಿಭಟಿಸುತ್ತಿದ್ದ ಸಾಲಪ್ಪನವರ ಪ್ರತಿಭಟನಾ ವಿಧಾನಗಳು ಭಿನ್ನವಾಗಿದ್ದವು. ಸೂಕ್ತವಾಗಿ ಮನವರಿಕೆ ಮಾಡಿಕೊಡುವುದರ ಮೂಲಕ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಒಬ್ಬ ಮಹಿಳಾ ಹೆಲ್ತ್ ಇನ್‌ಸ್ಪೆಕ್ಟರ್ ಪೌರಕಾರ್ಮಿಕ ಮಹಿಳೆಯನ್ನು ತುಚ್ಛವಾಗಿ ಮಾತನಾಡಿಸಿದಾಗ ಆಕೆಯನ್ನು ಕರೆದು ಅದೆಷ್ಟು ಚೆನ್ನಾಗಿ ಬುದ್ಧಿ ಹೇಳಿದರೆಂದರೆ, ಮುಂದೆ ಆಕೆ ಸಂಪೂರ್ಣವಾಗಿ ಬದಲಾದರಲ್ಲದೆ ಆಕೆಗೆ ವರ್ಗವಾದಾಗ ಕಾರ್ಮಿಕರೇ ಆಕೆಯನ್ನು ಕಳಿಸಬಾರದೆಂದು ಬೇಡಿಕೊಂಡರಂತೆ.
ಪೌರಕಾರ್ಮಿಕರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ೧೯೬೬ರಲ್ಲಿ ‘ಭಂಗಿ ಬಂಧು’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಪೌರಕಾರ್ಮಿಕರ ಮೇಲೆ ಆಗುತ್ತಿದ್ದ ಶೋಷಣೆ, ಅನ್ಯಾಯ, ದೌರ್ಜನ್ಯಗಳ ಕುರಿತು ತೀಕ್ಷ÷್ಣವಾಗಿ ಬರೆಯುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಭ್ರಷ್ಟತೆ, ದರ್ಪ ಕುರಿತು ನಿರ್ಭೀತರಾಗಿ ಬರೆಯುತ್ತಿದ್ದರು. ವಿದ್ಯುತ್, ನೀರು, ಬಸ್ಸಿನ ದರ ಏರಿಕೆಯಾದಾಗ ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ದಲಿತರ ಹೆಸರಿನಲ್ಲಿ ಮಂಜೂರಾಗುವ ಹಣ ಬೇರೆ ಕಾರ್ಯಗಳಿಗೆ ವಿನಿಯೋಗವಾಗುತ್ತಿದ್ದರ ವಿರುದ್ಧ ಸತತವಾಗಿ ಹೋರಾಟ ನಡೆಸಿದರು. ೧೮% ಮೀಸಲಾತಿ ಪೌರಕಾರ್ಮಿಕರಲ್ಲೂ ಅನ್ವಯವಾಗಬೇಕೆಂದು ಒತ್ತಾಯಿಸಿದರು. ಉದ್ಯೋಗದ ಜೊತೆಗೆ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಗಾಗಿಯೂ ಶ್ರಮಿಸಿದರು.
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಸಾಲಪ್ಪನವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ರಾಜ್ಯದ ಮೂಲೆ ಮೂಲೆಗೂ ಹೋಗಿ ಪೌರಕಾರ್ಮಿಕರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿ ದಾಖಲಿಸುವುದರ ಜೊತೆಗೆ ಉತ್ತಮ ಶಿಫಾರಸ್ಸುಗಳನ್ನು ಒಳಗೊಂಡಿದ್ದ ‘ರಿಪೋರ್ಟ್ ಆನ್ ದಿ ಲಿವಿಂಗ್ ಅಂಡ್ ವರ್ಕಿಂಗ್ ಕಂಡಿಷನ್ಸ್ ಆಫ್ ಸ್ವೀರ‍್ಸ್ ಅಂಡ್ ಸ್ಕಾö್ಯವೆಂರ‍್ಸ್ (ಕಸಗುಡಿಸುವವರ ಮತ್ತು ಮಲಬಾಚುವವರ ಬದುಕು ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಮಿತಿಯ ವರದಿ) ವರದಿಯನ್ನು ಸಮಿತಿಯು ೧೯೭೬ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಒಣಪಾಯಿಖಾನೆಗಳನ್ನು ಆಧುನೀಕರಿಸಬೇಕು, ಪೌರಕಾರ್ಮಿಕರ ಕೆಲಸವನ್ನು ಅಪಾಯಕಾರಿ ವೃತ್ತಿ ಎಂದು ಪರಿಗಣಿಸಬೇಕು, ೫೦೦ ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರು ಇರಬೇಕು, ಅವರಿಗೆ ವಾರದ ರಜೆ, ಮೂರು ತಿಂಗಳ ಖಾಯಿಲೆ ರಜೆ, ಹೆರಿಗೆ ರಜೆ, ಪ್ರತಿ ವರ್ಷ ಪ್ರಯಾಣ ಭತ್ಯೆ, ಸಮವಸ್ತ್ರ, ಆರು ಗಂಟೆಗಳ ಕೆಲಸದ ಅವಧಿ, ಎರಡು ಪಾಳಿಯ ಕೆಲಸ, ಉದ್ದನೆಯ ಪೊರಕೆ, ಮುಚ್ಚಳವಿರುವ ಕಸದ ಡಬ್ಬ, ಗ್ಲೋವ್ಸ್, ಗಂಬೂಟುಗಳು, ಪೌರಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ, ಪೌರಕಾರ್ಮಿಕರಿಗಾಗಿ ಮನೆಗಳು, ಮನೋರಂಜನಾ ಕೇಂದ್ರಗಳು ಇತ್ಯಾದಿ ಅಮೂಲ್ಯ ಶಿಫಾರಸ್ಸುಗಳನ್ನು ವರದಿಯಲ್ಲಿ ಮಾಡಿದರು. ಸಮಾಜದ ಕಣ್ಣಿನಲ್ಲಿ ಮರೆಯಾಗಿ ಅಂಚಿಗೆ ದೂಡಲಾದ ಪೌರಕಾರ್ಮಿಕರ ಪರಿಸ್ಥಿತಿಯನ್ನು ಕೂಲಕಂಷವಾಗಿ ದಾಖಲಿಸಿದ, ಉತ್ತಮ ಶಿಫಾರಸ್ಸುಗಳನ್ನು ಹೊಂದಿದ ಮೊದಲ ವರದಿಯಲ್ಲದೆ ದೇಶದಲ್ಲೇ ಅತ್ಯುತ್ತಮ ವರದಿ ಇದಾಗಿದೆ. ಇದರ ಹೆಗ್ಗಳಿಕೆ ಸಮಿತಿಯ ಅಧ್ಯಕ್ಷರಾದ ಐ.ಪಿ.ಡಿ. ಸಾಲಪ್ಪನವರಿಗೆ ಸಲ್ಲುತ್ತದೆ.
ಸಾಲಪ್ಪನವರು ೧೯೭೫-೭೬ರಲ್ಲಿ ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಬಿನ್ನಿಪೇಟೆಯ ಸಾಮಾನ್ಯ ಕ್ಷೇತ್ರದಿಂದ ಶಾಸಕರಾಗಿ ಆರಿಸಿಬಂದರು. ೧೯೯೨ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ನಾಗಪುರಕ್ಕೆ ಭೇಟಿ ನೀಡಿದಾಗ, ಕಾಲೋನಿಯಲ್ಲಿ ಗಾಂಧೀಜಿಯವರು ಕಟ್ಟಿಸಿದ್ದ ಬಾವಿಯೂ ಹಾಳಾಗಿದ್ದನ್ನು ಕಂಡು ರಿಪೇರಿ ಮಾಡಿಸಲು ಕೂಡಲೇ ಐದು ಲಕ್ಷ ಹಣವನ್ನು ಮಂಜೂರು ಮಾಡಿಸಿದ್ದರು. ಬೆಂಗಳೂರು ನಗರಪಾಲಿಕೆ ಕಾರ್ಮಿಕರ ಒಕ್ಕೂಟಕ್ಕೆ ಮಹಾಕಾರ್ಯದರ್ಶಿಯಾಗಿದ್ದರು. ೧೯೯೨ರಲ್ಲಿ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡರು. ಕೊನೆಯ ತನಕ ಪೌರಕಾರ್ಮಿಕರ ಏಳಿಗೆಗಾಗಿ ದುಡಿದ ಇವರು ಸೆಪ್ಟಂಬರ್ ೧೪, ೧೯೯೬ರಲ್ಲಿ ತೀರಿಕೊಂಡರು. ೨೦೦೩ರಲ್ಲಿ ಇವರಿಗೆ ಬಾಬುಜಗಜೀವನ್ ರಾಮ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.(ಕೃಪೆ: ರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿರುವ ಡಾ.ಬಿ.ಪಿ. ಇಂದಿರಾ ಅವರ ಪುಸ್ತಕ ‘ಸ್ವಚ್ಛತೆಯ ಹರಿಕಾರರು ಐ.ಪಿ.ಡಿ.ಸಾಲಪ್ಪ’ ಅದ್ಯಯನ)
ಪೌರಕಾರ್ಮಿಕರ ಪರಿಸ್ಥಿತಿಯ ಕುರಿತ ಅತ್ಯುತ್ತಮ ವರದಿಯು ಬರುವುದರ ಹಿಂದಿನ ಬಹುಮುಖ್ಯ ಕಾರಣಕರ್ತರು ಅಂದಿನ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ. ಬಸವಲಿಂಗಪ್ಪನವರು ಮತ್ತು ಅಂದಿನ ಮುಖ್ಯಮಂತ್ರಿಗಳಾದ ಶ್ರೀಡಿ. ದೇವರಾಜ ಅರಸ್ ಅವರು. ಪೌರಕಾರ್ಮಿಕರ ಹೋರಾಟದ ಇತಿಹಾಸದಲ್ಲಿ ಇವರಿಬ್ಬರ ಹೆಸರು ಚಿರಸ್ಥಾಯಿ. ಅವರಿಬ್ಬರ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನೀಡಲಾಗಿದೆ.