ಮುತ್ಯಾಲಮ್ಮ : ಆಚರಣೆ-ಪುರಾಣ

ಮುತ್ಯಾಲಮ್ಮನಿಗೆ ಸಫಾಯಿ ಕರ್ಮಚಾರಿಗಳು ವಿಶೇಷವಾಗಿ ಆಂಧ್ರದಿಂದ ವಲಸೆ ಬಂದಿರುವ ಮಾದಿಗ ಸಮುದಾಯದವರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮುತ್ಯಾಲು, ಮುತ್ಯಾಲಮ್ಮ ಎಂದು ಗಂಡು ಮತ್ತು ಹೆಣ್ಣುಮಕ್ಕಳಿಗೆ ಹೆಸರನ್ನು ಇಡುವುದು ಅವರಲ್ಲಿ ಜಾರಿಯಲ್ಲಿದೆ. ಹರಕೆ ಹೊತ್ತವರು, ಪೂಜೆ ಮಾಡಿಸಬೇಕೆಂದುಕೊಂಡವರು ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನವು ತೆಲಂಗಾಣ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಕುರಿ, ಮೇಕೆ ಅಥವಾ ಕೋಳಿಯನ್ನು ದೇವಿಗೆ ಬಲಿ ನೀಡಿ ದೇವಸ್ಥಾನದ ಸುತ್ತ ಇರುವ ಬಯಲಿನಲ್ಲಿ ಒಲೆ ಹೂಡಿ ಬಲಿ ನೀಡಿದ ಪ್ರಾಣಿಯ ಮಾಂಸದಲ್ಲಿ ಅಡುಗೆ ಮಾಡಿ ಉಂಡು ಬರುತ್ತಾರೆ. ತಾವಷ್ಟೇ ಉಣ್ಣದೆ ಕೇಳಿದವರಿಗೆಲ್ಲ ಉಣ್ಣಲು ನೀಡುತ್ತಾರೆ. ಎಲ್ಲ ಖಾಲಿ ಮಾಡಿಯೇ ಬರಬೇಕೆಂಬ ನಂಬಿಕೆ ಇದೆ. ಬೆಲ್ಲ, ಹೆಸರುಬೇಳೆ ಮತ್ತು ಅಕ್ಕಿ ಸೇರಿಸಿ ಮಾಡಿದ ಖಾದ್ಯ ಬಾನವನ್ನು ತಲೆಯ ಮೇಲೆ ಹೊತ್ತು ತಂದು ದೇವಿಗೆ ನೈವೇದ್ಯ ಮಾಡಿಸಿ ಪ್ರಸಾದವಾಗಿ ನೀಡುವುದು ವಾಡಿಕೆಯಲ್ಲಿದೆ. ಯಾವ ಪಾತ್ರೆಯಲ್ಲಿ ಬೇಯಿಸಿರುತ್ತಾರೋ ಅದೇ ಪಾತ್ರೆಗೆ ಅರಿಶಿಣದ ದಾರವನ್ನು ಕಟ್ಟಿ, ಬೇವಿನ ಸೊಪ್ಪನ್ನು ಸಿಕ್ಕಿಸಿಕೊಂಡು ಬರುತ್ತಾರೆ. ಪಾತ್ರೆಗೆ ಅರಿಶಿಣ ಬಳಿದಿರುತ್ತಾರೆ. ಮಕ್ಕಳಿಗಾಗಿ ಹರಸಿಕೊಂಡವರು ಉಪವಾಸವಿದ್ದು ಅರಿಶಿಣ ಲೇಪಿಸಿಕೊಂಡು ಎರಡೂ ಕೈಗಳನ್ನು ಮೇಲೆತ್ತಿ ಹಾವಿನ ಹೆಡೆಯಂತೆ ಆಡಿಸುತ್ತ ನಿಧಾನವಾಗಿ ಕುಣಿಯುತ್ತ ದೇವಿಯ ಗುಡಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಪ್ರಾಣಿಗಳನ್ನು ಬಲಿ ನೀಡುವುದು ಗುಡಿಯ ಹೊರಗಿನ ಮುಂಭಾಗದಲ್ಲಿ. ಮಾಂಸದ ಅಡುಗೆಯನ್ನು ಗುಡಿಯ ಒಳಗೆ ನೈವೇದ್ಯಕ್ಕೆ ತರುವುದಿಲ್ಲ. ನೈವೇದ್ಯಕ್ಕೆಂದು ಬಾನವನ್ನು ಮಾತ್ರ ಗುಡಿಯ ಒಳಗೆ ತರುತ್ತಾರೆ. ಹುತ್ತಕ್ಕೆ ದೇವಿಯ ಕಣ್ಣು ಹಾಗೂ ಬಾಯಿಗಳನ್ನು ಅಂಟಿಸಿ ಅದನ್ನು ದೇವಿ ಎಂದು ಪೂಜಿಸುತ್ತಾರೆ. ಪಕ್ಕದಲ್ಲಿಯೇ ದೊಡ್ಡದೊಂದು ಗುಂಡುಕಲ್ಲಿದೆ.


ಪುರಾಣ

ದೇವಿಗೆ ಪೂಜೆ ಮಾಡುವ ಮುತ್ಯಾಲಪ್ಪನವರು ಹೇಳಿದ ದೇವಿಯ ಕತೆ ಹೀಗಿದೆ,
ಭೂಮಿಯ ಹುಟ್ಟಿಗೂ ಮೊದಲು ಓಂಕಾರ ಬಿಟ್ಟರೆ ಭೂಮಿ, ಗಾಳಿ, ನೀರು ಏನೂ ಇರಲಿಲ್ಲ. ಓಂಕಾರವು ಪಕ್ಷಿಯ ಸ್ವರೂಪ ಪಡೆದುಕೊಂಡು ಮುಕ್ಕರಿಸಿ ಮೂರು ಮೊಟ್ಟೆಯನ್ನಿಟ್ಟಿತು. ಮೊದಲನೇ ಮೊಟ್ಟೆಯಲ್ಲಿ ಬ್ರಹ್ಮ, ವಿಷ್ಣು, ಈಶ್ವರರು ಹುಟ್ಟಿದರು. ಎರಡನೆಯ ಮೊಟ್ಟೆಯನ್ನು ಒಡೆದಾಗ ಮೇಲಿನ ಚಿಪ್ಪು ಆಕಾಶವಾಗಿ ಕೆಳಗಿನ ಚಿಪ್ಪು ಭೂಮಿಯಾಯಿತು. ಮೂರನೆಯ ಮೊಟ್ಟೆಯಲ್ಲಿ ಮೂರು ಬ್ರಾಹ್ಮಣರು ಜನಿಸಿದರು. ಅವರೆಂದರೆ ನಾಗಲೋಕ/ಪಾತಾಳಲೋಕವನ್ನು ನೋಡಿಕೊಳ್ಳುವ ನಾಗಋಷಿ ಬ್ರಾಹ್ಮಣ, ದೇವಲೋಕವನ್ನುನೋಡಿಕೊಳ್ಳುವ ದೇವಋಷಿ ಬ್ರಾಹ್ಮಣ ಮತ್ತು ಕಲಿಯುಗವನ್ನು ನೋಡಿಕೊಳ್ಳುವ ಕಲಿಋಷಿ ಬ್ರಾಹ್ಮಣ ಅಂದರೆ ಕಮ್ಮಗಿರಿ ಸ್ವಾಮಿ. ಈ ಕಮ್ಮಗಿರಿ ಸ್ವಾಮಿಯು ಮೂರು ವರ್ಷ ಪೂರ್ವದಿಕ್ಕು, ಮೂರು ವರ್ಷ ಪಶ್ಚಿಮ ದಿಕ್ಕು ಹಾಗೂ ಮೂರು ವರ್ಷ ಉತ್ತರ ದಿಕ್ಕನ್ನು ಸಂಚರಿಸಿಕೊಂಡು ದಕ್ಷಿಣ ದಿಕ್ಕಿನ ಸಂಚಾರಕ್ಕೆ ಬರುತ್ತಾರೆ. ಹಾಗೆ ಬರುವಾಗ ನರಸಿಂಹ ಕೋಟೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಆ ಊರಿನವರು ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟಿಸುವುದರಲ್ಲಿರುತ್ತಾರೆ. ಎಂಟು ದಿನಗಳ ಪೂಜೆಯನ್ನು ಮುಗಿಸಿ ಒಂಭತ್ತನೆಯ ದಿನದ ಪೂಜೆ ಮಾಡುವ ಹೊತ್ತಿಗೆ ಋಷಿಗಳು ಅಲ್ಲಿಗೆ ಬರುತ್ತಾರೆ. ಪ್ರಾಣ ಪ್ರತಿಷ್ಠಾಪನೆ ನಡೆಯುವಾಗ ‘ಸ್ವಲ್ಪ ನಿಲ್ಲಿ, ನಾನು ಕಾಶಿಗೆ ಹೋಗಿ ಪವಿತ್ರ ನೀರನ್ನು ತರುತ್ತೇನೆ. ಅಲ್ಲಿಯವರೆಗೂ ನೀವೆಲ್ಲರೂ ಉಪವಾಸವಿದ್ದು ಕಾಯುತ್ತಿರಿ’ ಎಂದು ಹೇಳಿ ಅದೃಶ್ಯರಾಗುತ್ತಾರೆ. ಜನರೆಲ್ಲ ‘ಕಾಶಿ ಎಷ್ಟು ದೂರವಿದೆ ಈತ ಅಲ್ಲಿಗೆ ಹೋಗಿ ನೀರು ತರುವುದು ಯಾವಾಗ? ಅಲ್ಲಿಯವರೆಗೂ ಉಪವಾಸವಿರಲು ಸಾಧ್ಯವೇ?’ ಎಂದುಕೊಂಡು ಊಟ ಮಾಡಲಾರಂಭಿಸುತ್ತಾರೆ. ತಮ್ಮ ದಿವ್ಯ ಶಕ್ತಿಯಿಂದ ಕಾಶಿಗೆ ಹೋಗಿ ಪವಿತ್ರ ಜಲವನ್ನು ತಂದ ಋಷಿ ತನ್ನ ಮಾತನ್ನು ಮೀರಿ ಜನ ಊಟಮಾಡುತ್ತಿರುವುದನ್ನು ನೋಡಿ ಕೋಪಗೊಂಡು ಅನ್ನ ಸುಣ್ಣವಾಗಲಿ, ಹಪ್ಪಳ ಕಪ್ಪೆಯಾಗಲಿ, ಎಲೆ ಕಾಗೆಯಾಗಿ ಹಾರಿ ಹೋಗಲಿ ಎಂದು ಶಪಿಸುತ್ತಾರೆ. ಜನ ಹೋಗಿ ತಪ್ಪಾಯಿತೆಂದು ಬೇಡಿಕೊಂಡಾಗ ‘ಅರ್ಧ ಬರುತ್ತೆ; ಅರ್ಧ ಹೋಗುತ್ತೆ’ ಎಂದು ಮುಂದೆ ಹೋಗುತ್ತಾರೆ.
ಅದೇ ಊರಲ್ಲಿ ಆದಿಶಕ್ತಿ ಹುತ್ತ ಮುತ್ತಿರುವ ಗುಂಡುಕಲ್ಲಿನಲ್ಲಿ ನೆಲೆಸಿರುತ್ತಾಳೆ. ಆ ಕಲ್ಲನ್ನು ದನಕಾಯುವ ಹುಡುಗರು ಪೂಜೆ ಮಾಡುತ್ತಿರುತ್ತಾರೆ. ಅತ್ತ ಬರುತ್ತಿದ್ದ ಬ್ರಾಹ್ಮಣನನ್ನು ಕಂಡ ಹುಡುಗರು ಪೂಜೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ಋಷಿಯು ಕಾಶಿಯಿಂದ ತಂದಿದ್ದ ಪವಿತ್ರ ಜಲವನ್ನು ಕಲ್ಲು ಗುಂಡಿನ ಮೇಲೆ ಪ್ರೋಕ್ಷಣೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ನಿನ್ನ ಹಣೆಗೆ ರಕ್ತತಿಲಕ ತಪ್ಪಿದ ದಿನ ಸಿಡಿದು ಚೂರಾಗುತ್ತೀಯ ಎಂದು ಶಾಪ ನೀಡಿ ಹೋಗುತ್ತಾರೆ.
ಆ ಊರಿನಲ್ಲಿ ಮುಸಲನ್ನ ಮತ್ತು ಗಿಡ್ಡಣ್ಣ ಎಂಬ ಅಣ್ಣ ತಮ್ಮಂದಿರು ಇರುತ್ತಾರೆ. ಅವರು ಏಳು ಜೊತೆ ಎತ್ತು, ಏಳು ಜೊತೆ ಜೀತಗಾರರನ್ನಿಟ್ಟುಕೊಂಡು ವ್ಯವಸಾಯ ಮಾಡುತ್ತಿರುತ್ತಾರೆ. ಕಡ್ಲೆಕಾಯಿಯನ್ನು ಬಿತ್ತಿರುತ್ತಾರೆ. ಬಲಿತ ಕಾಯಿಗಳನ್ನು ಕೀಳುತ್ತಿರುವ ಸಂದರ್ಭದಲ್ಲಿ ಒಂದು ಗಿಡವನ್ನು ಕೀಳಲು ತುಂಬಾ ಕಷ್ಟವಾಗುತ್ತದೆ. ಆಗ ಕಲ್ಲುಗುಂಡಿನ ಸ್ವರೂಪದಲ್ಲಿದ್ದ ಆದಿಶಕ್ತಿಯು ನೆಟ್ಟ ನೋಟದಿಂದ ಅತ್ತ ನೋಡಿದಾಗ ಕಾಯಿಗಳು ಸುಲಭವಾಗಿ ಹೊರಬರುತ್ತವೆ. ಕೀಳುತ್ತಿದ್ದವರಿಗೆ ಕಲ್ಲು ಕಾಣಿಸುತ್ತದೆ. ಆಗ ಅವರು ಕಲ್ಲು ಚೆನ್ನಾಗಿದೆ ಎಂದು ಎತ್ತಿ ಪಕ್ಕಕ್ಕೆ ಇಡುತ್ತಾರೆ. ಮರುದಿನ ಕೆಲಸಕ್ಕೆ ಬಂದಾಗ ಇಟ್ಟಿದ್ದ ಜಾಗದಿಂದ ಕಲ್ಲು ಮೂಲ ಸ್ಥಾನಕ್ಕೆ ಹೋಗಿರುತ್ತದೆ. ಮತ್ತೆ ತೆಗೆದಿಡುತ್ತಾರೆ. ಮತ್ತೆ ಸ್ವಸ್ಥಾನಕ್ಕೆ ಕಲ್ಲು ಹೋಗಿರುತ್ತದೆ. ಮೂರನೆಯ ದಿನವೂ ಹಾಗೆ ಆಗುತ್ತದೆ. ಇದು ಯಾರೋ ಎತ್ತಿ ಇಡುತ್ತಿದ್ದಾರೆ ಎಂದು ಏಳೂ ಜನರು ರಾತ್ರಿ ಕಾವಲು ಕಾಯ್ದು ಕಂಡು ಹಿಡಿಯಬೇಕೆಂದು ಅಲ್ಲಿಗೆ ಬರುತ್ತಾರೆ. ಅರ್ಧ ರಾತ್ರಿಯಲ್ಲಿ ಆ ಕಲ್ಲಿನಿಂದ ರಾಕ್ಷಸಾವತಾರ ಭೂಮಿಯಿಂದ ಆಕಾಶದವರೆಗೂ ಎದ್ದು ನಿಂತದ್ದನ್ನು ನೋಡಿ ಏಳೂ ಜನರು ರಕ್ತಕಾರಿಕೊಂಡು ಸಾಯುತ್ತಾರೆ. ಎತ್ತುಗಳೂ ಸಾಯುತ್ತವೆ. ಹೋದರ‍್ಯಾರೂ ಬರಲಿಲ್ಲವೆಂದು ಅಣ್ಣ ಮತ್ತು ತಮ್ಮ ಹೋಗುತ್ತಾರೆ, ಊರಿಗೆ ಊರೇ ಹೋಗುತ್ತದೆ. ಈ ವಿಷಯ ಸರ್ಕಾರಕ್ಕೆ ಗೊತ್ತಾಗುತ್ತದೆ. ಯಾರೋ ಕೊಲೆ ಮಾಡಿದ್ದಾರೆಂದು ಬೇಡಿ ಹಾಕಲು ಬಂದಾಗ ದೇವಿಯು ಮೂರು ವರ್ಷದ ಹುಡುಗಿಯ ರೂಪದಲ್ಲಿ ಕಾಣಿಸಿಕೊಂಡು ಕೇಕೆ ಹಾಕಿ ಕೂಗುತ್ತಾಳೆ. ‘ಯಾರು ನೀನು’ ಎಂದು ಕೇಳಿದಾಗ ‘ನಾನು ನರಸಿಕೋಟೆ ಮುತ್ಯಾಲಮ್ಮ. ನನ್ನ ಪೂಜಿಸಿ’ ಎನ್ನುತ್ತಾಳೆ. ‘ಹೇಗೆ ನಂಬುವುದು ನೀನು ದೇವಿ ಎಂದು? ನೆಲಕ್ಕೆ ತಗುಲದೆ ಗಾಳೀಲಿ ನಿಂತರೆ ನಂಬುತ್ತೇವೆ’ ಎಂದು ಜನ ಹೇಳುತ್ತಾರೆ. ಆಗ, ‘ಪೂಜೆ ಮಾಡಿ ನೋಡಿ ನೀವು ಹೇಳಿದಂತೆ ಆಗುತ್ತದೆ’ ಎಂದು ಹೇಳುತ್ತಾಳೆ. ಪೂಜೆ ಮಾಡಿದಾಗ ಕಲ್ಲು ಗಾಳಿಯಲ್ಲಿ ನಿಲ್ಲುತ್ತದೆ. ಅಂದಿನಿಂದ ಕಲ್ಲನ್ನು ಅದರ ಮೂಲ ಸ್ಥಾನದಲ್ಲಿಡುತ್ತಾರೆ. ನಿತ್ಯವೂ ಪೂಜೆ ಮಾಡಬೇಕೆಂದು ಬೆಟ್ಟದ ಮೇಲಿನ ರಾಮದೇವರನ್ನು ಪೂಜಿಸುತ್ತಿದ್ದ ವಾಲ್ಮೀಕಿ ಸಮುದಾಯದ ಚಿನ್ನಲಿಂಗಪ್ಪನನ್ನೆ ಜನ ನೇಮಿಸುತ್ತಾರೆ. ಅಂದಿನಿಂದಲೂ ಪೂಜೆ ನಡೆದುಕೊಂಡು ಬಂದಿದೆ. ಚಿನ್ನಲಿಂಗಪ್ಪನ ನಂತರ ಅವರ ಮಗ ಪೋತಪ್ಪ ಸುಮಾರು ಎಂಭತ್ತು ವರ್ಷಗಳ ಕಾಲ ಪೂಜೆ ಮಾಡಿದರು. ‘ಆನಂತರ ಅವರ ಮಗನಾದ ನಾನು ಮುತ್ಯಾಲಪ್ಪ ನಲವತ್ತು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದರು. ದೇವಿಯ ಮುಂದೆ ಇರುವ ಮತ್ತೊಂದು ಶಿಲೆ ದೇವಿಯ ತಮ್ಮ ಪೋತಲಯ್ಯನದು ಎಂದು ಹೇಳಿದರು. ‘ಅಲ್ಲಿ ದೀಪ ಆರಬಾರದು, ನಿತ್ಯವೂ ಬೆಳಗಿನ ಜಾವ ನಾಲ್ಕಕ್ಕೆ ಹೋಗಿ ದೀಪ ಹಚ್ಚಿ ಬರುತ್ತೇನೆ’ ಎಂದು ಹೇಳಿದರು. ಶುಕ್ರವಾರ, ಭಾನುವಾರ ಮತ್ತು ಮಂಗಳವಾರ ಜನರು ಪೂಜೆ ಮಾಡಿಸಿಕೊಂಡು ಹೋಗಲು ಅಲ್ಲಿಗೆ ಬರುತ್ತಾರೆ. ಈಗ ದೇವಸ್ಥಾನಕ್ಕೆಂದು ಸಮಿತಿ ಇದೆ. ಎಲ್ಲ ಜಾತಿಗೂ ಸೇರಿದ ಒಟ್ಟು ಹದಿನಾರು ಮಂದಿ ಸದಸ್ಯರುಗಳಿದ್ದಾರೆ. ಎಲ್ಲ ಜಾತಿಯ ಜನರು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಬ್ರಾಹ್ಮಣರೂ ಬರುತ್ತಾರೆ. ಅವರು ಪ್ರಾಣಿಬಲಿ ನೀಡುವುದಿಲ್ಲ. ಮುಸಲ್ಮಾನರೂ ಸಹ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಅವರು ಪ್ರಾಣಿಯನ್ನು ಕಡಿಯುವುದಿಲ್ಲ. ಹಲಾಲ್ ಮಾಡುತ್ತಾರೆ ಎಂದು ಹೇಳಿದರು.
ಈ ದೇವಿಯ ಕತೆಯು ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು, ಭೂಮಿಯ ಹುಟ್ಟಿಗೆ ಕಾರಣಳಾದವಳೆಂದು ಪರಿಗಣಿಸುವ ಪ್ರಾಚೀನ ಮಾತೃಪ್ರಧಾನತೆಯ ಸೂಚಕವೇ ಆಗಿದೆ. ಹೆಣ್ಣನ್ನು ನಿಯಂತ್ರಿಸಿ, ಅವಳ ದುಡಿಮೆಯನ್ನು ಬಳಸಿಕೊಳ್ಳುತ್ತ ಬೆಳೆದ ಪಿತೃಪ್ರಧಾನತೆಯು ಗಟ್ಟಿಗೊಂಡಂತೆ, ಪ್ರಬಲವಾದಂತೆ ಹೆಣ್ಣುಮಕ್ಕಳನ್ನು ಅಬಲೆಯರು, ಶಕ್ತಿಹೀನರು, ಧೈರ್ಯವಿಲ್ಲದವರನ್ನಾಗಿ ಮಾಡಲಾಯಿತು. ಹಾಗೆಯೇ ದೇವಿಯರೂ ಸಹಿತ ಧೈರ್ಯ,ವ್ಯಘ್ರತೆಯನ್ನು ಕಳೆದುಕೊಂಡು ಸೌಮ್ಯಗೊಂಡರು. ಬಲಾಢ್ಯ ದೇವಿಯನ್ನು ಮಣಿಸುವ ಶಿಷ್ಟ ಸಂಪ್ರದಾಯದ ಭಾಗವಾಗಿಯೇ ಬ್ರಾಹ್ಮಣನೊಬ್ಬ ಪ್ರಾಣಪ್ರತಿಷ್ಠಾಪನೆ ಮಾಡುವುದು, ಕಾರಣವಿಲ್ಲದೆ ಶಾಪ ನೀಡುವಂತಹದು ವೈದಿಕಶಾಹಿ ಪಿತೃಪ್ರಧಾನತೆಯು ದೇಸಿ, ಅನಾರ್ಯ ಮಾತೃದೇವತಾ ಆಚರಣೆಯನ್ನು ಹತ್ತಿಕ್ಕುವ ಪ್ರಕ್ರಿಯೆಗಳಾಗಿವೆ.