ಹಬ್ಬದ ಸಂಭ್ರಮಕ್ಕೆ ಬಡತನವು ಅಡ್ಡಿಯಾಗುವುದಿಲ್ಲ. ತಮ್ಮ ಕಷ್ಟಗಳು ಮತ್ತು ಜಂಜಾಟಗಳ ನಡುವಿನಲ್ಲೇ ತಮ್ಮದೇ ದಾರಿ ಹುಡುಕಿಕೊಂಡು ಹಬ್ಬದ ಆಚರಣೆಗೆ ನಡೆಸುವ ತಯಾರಿಯನ್ನು ಈ ನಿಜಾಧಾರಿತ ಕಾಲ್ಪನಿಕ ಕಥೆ ನಿರೂಪಿಸುತ್ತದೆ.
ಬಾಡುಚೀಟಿ ಕಟ್ಟುವಾ ಬಾರಾ…
ಎಂಟಮ್ಮನ ದೊಡ್ಡಮಗ ಅಮರಪ್ಪ ಐದಾರು ವರುಷದ ಹಿಂದೆ ಕೆಲಸ ಹುಡುಕಿಕೊಂಡು ಹೋಗಿ ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ ಹೆಂಡತಿಯನ್ನೂ ಅಲ್ಲೇ ಸೇರಿಸಿದ್ದ. ಮಕ್ಕಳನ್ನು ಕರೆದುಕೊಂಡು ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೇ ತನ್ನ ಹುಟ್ಟೂರಾದ ಕುಂಬಾರಹಳ್ಳಿಗೆ ಬಂದಿದ್ದ. ಕುಂಬಾರಹಳ್ಳಿಗೆ ಬರುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು.
ಅಮರಪ್ಪನ ಹೆಂಡತಿ ನೇತ್ರಮ್ಮ ಕೆಲಸ ಮಾಡಿ ಮಾಡಿ ಇತ್ತೀಚೆಗಂತು ತುಂಬಾನೇ ನಿತ್ರಾಣಗೊಂಡಿದ್ದಳು.ನನ್ಕ ನಡುವು ಶಾನ ಅಗೀತಾ ಅದಿ ಮಾರಾಯ' ಅಂತ ಯಾವಾಗಲೂ ತನ್ನ ಗಂಡ ಅಮರಪ್ಪನಿಗೆ ಹೇಳುತ್ತಿದ್ದಳು.ಏನೇ ಈ ನಡ್ವಿ ಯಾವಾಗ ನೋಡಿದ್ರು ನಡುವು ನೋವು ನಡುವು ನೋವು ಅಂತೀಯಾ, ಇರು ಅಂಗೆ ವೋಗಿ ಎರ್ಡು ಎಂಡ್ರಕಾಯಿಗ್ಳವ ಇಡ್ತಂದು ಬಂದು ಬುಡ್ತೀನಿ. ಎಂಡ್ರಕಾಯಿ ನಡುವು ನೋವ್ಕ ಬಲೆ ಒಳ್ಳೇದು ಅಂತ ನಮ್ಮಮ್ಮನು ಅನ್ನೋಳು, ಅಪ್ನವೂನು ಕರ್ದಂದು ಹೋತೀನಿ, ಅಪ್ನು ಮೀನು ಎಂಡ್ರಕಾಯಿಗ್ಳುವ ಇಡೇದ್ರಾಗ ಎಸ್ಪರ್ಟು. ಬಿರ್ನಬರ್ಬೋದು’ ಅಂತ ಏಡಿಕಾಯಿಬೇಟೆಗೆ ಹೋಗಲು ಎದ್ದ. ಅಷ್ಟರಲ್ಲಿ ಅಮರಪ್ಪನ ನಾಲ್ಕು ಜನ ಮಕ್ಕಳು ಅಪ್ಪೋ ನಾವೂನೂ ಬತ್ತೀವಿ, ನಾವುನೂ ಬತ್ತೀವಿ, ಎಂಡ್ರಕಾಯಿ ಇಡೇದ್ನಾ ನಾವು ನೋಡಬೇಕು' ಎಂದರು. ಅದಕ್ಕೆ ಅಮರಪ್ಪಆ ಸರೆ ಬನ್ರಿ, ನಾವ್ ಇಡ್ದಾಕಿದ್ರೆ ಬಕೀಟಾಕ ಇಡ್ದಾಕೆನ್ನೀರಿ’ ಎಂದು ಮಕ್ಕಳಿಗೆ ಹೇಳುತ್ತಾ, ತನ್ನ ತಂದೆಯನ್ನು ಕುರಿತು ಅಪ್ಪೋ ಬಾ ಅಂಗೆ ಹೋಗಿ ಎರ್ಡು ಎಂಡ್ರಕಾಯಿಗ್ಳುವ ಇಡ್ತಂ ಬರೋನಾ, ಎಂಡ್ರಕಾಯ್ಗಳ್ವು ಇಡ್ದು ಶಾನ ದಿನ ಆಯ್ತು' ಅಂದ. ಬಾಯಿ ತುಂಬ ಎಲೆ ಅಡಿಕೆ ಇಟ್ಟುಕೊಂಡು ಆಕರಾಯಿಯಿಂದ ಕುಡುಗೋಲಿಗೆ ಕರ್ಕುಲು ಇಕ್ಕುತ್ತಿದ್ದ ಸೌಡಪ್ಪ ಮಾತನಾಡಲಾಗದೇ ಕೈ ಸನ್ನೆಯಲ್ಲಿ ಹೋಗೋಣ ಎಂದು ತೋರಿಸುತ್ತಾ.. ಉವೂಉನೋಉಉ ಅಂದ. ಅದಕ್ಕೆ ತಾತನನ್ನು ನೋಡಿ ಮಕ್ಕಳು ತಾತ ಮಾಡಿದ ಹಾಗೆ ಉವೂಉನೋಉಉ ಅಂತ ಮಾಡಿ, ಗೊಳ್ ಎಂದು ನಕ್ಕವು. ಎಲೆ ಅಡಿಕೆ ಉಗಿದು ಬಂದ ಸೌಡಪ್ಪಇದು ಹುಚ್ಚಳ್ಳು ಹೂ ಕಾಲ, ಎಂಡ್ರಕಾಯಿಗ್ಳಾಗ ಬರೇ ಕೊಬ್ಬು ಇರುತಾದಿ, ಎಂಡ್ರಕಾಯಿಗ್ಳನ್ನಾ ಇವಾಗೇನೆ ಇಡಿಬೇಕು. ಒಳ್ಳೆ ಕೆಲ್ಸ ಮಾಡ್ದೆ ನಡಿ ಹೋಗಾನಾ’ ಎನ್ನುತ್ತಾ ಚನಿಕೆ, ವರಬಾರಿ, ಮೀನು ಸಿಕ್ಕಿದರೆ ಮೀನು ಇಡಿಯಬಹುದು ಎಂದು ಕೊಡಮೆಯನ್ನು ಎತ್ತಿಕೊಂಡು ಮಕ್ಕಳನ್ನು, ಅಮರಪ್ಪನನ್ನು ಕರೆದುಕೊಂಡು ಚದುಮನಹಳ್ಳಿ ಕೆರೆಗೆ ಹೋದ. ಮಕ್ಕಳು ಮೊದಲ ಸಲ ಏಡಿಕಾಯಿ ಬೇಟೆಗೆ ಹೋಗ್ತಾ ಇರೋದ್ರಿಂದ ತುಂಬಾ ಕುತೂಹಲ ಮತ್ತು ಖುಷಿಯಿಂದ ಇದ್ದರು.
ಚದುಮನಹಳ್ಳಿಯ ಕೆರೆ ತುಂಬಾ ನೀರಿತ್ತು. ಅಮರಪ್ಪನ ಮಗ ಭೀಮ ಇದ್ದುಕೊಂಡು ತನ್ನ ತಂದೆ ಅಮರಪ್ಪನಿಗೆ ಎಂಡ್ರಕಾಯ್ಗಳ್ವ ಇಡೇದು ನಿನ್ಕ ಎಂಗೆ ತಿಳಿತಾದಿ, ಎಂಗಿ ಇಡಿತೀಯಾ ನಮ್ಕು ಕಲ್ಸಪ್ಪೋ' ಅಂದ. ಅದಕ್ಕೆ ಅಮರಪ್ಪನನ್ಕೂ ನಿಮ್ ತಾತನೇ ಕಲಿಸಿದ್ದು. ತಾತ್ನು ಶನ್ನಾಗಿ ಇಡಿತಾನಿ.’ ಅಂದ. ಇದನ್ನು ಕೇಳಿಸಿಕೊಂಡ ಸೌಡಪ್ಪ ಏ ಮರಿಗ್ಳೆ ಇಲ್ಲಿ ನೋಡ್ರ್ಯಾ ಲೇ ಈ ನೀರು ಹಂಚುಗ್ಳಾಗ ಬಕ್ಕಿಗ್ಳು ಮುದ್ರು ಹಾಕೆಂದಿರ್ತಾವಿ. ಇಂಗಿ ಬಕ್ಕಿಗ್ಳುಕ ಮಣ್ಣು ಮುಚ್ಚಿ ಅಂದಿದ್ರೆ ಅದ್ನ ಮುದ್ರು ಅಂತಾರಿ. ಆ ಮುದ್ರು ಒಳ್ಗಿ ಎಂಡ್ರುಕಾಯಿ ಇರ್ತಾದಿ ಅಂತ ಅರ್ಥ. ಮುದ್ರುವ ಶನಿಕ್ಯಾಗ ರಸಿ ಅಗದಂದು ಅದ್ರಾಕ ಕೈ ಇಕ್ಕಿದ್ರೆ, ಎಂಡ್ರ್ಕಾ ಸಿಕ್ಕಿಹೋತಾದಿ. ಒಂದೊಂದು ಮುದ್ರಾಗ ಒಂದು, ಎರಡು, ಮೂರು ಎಂಡ್ರುಕಾಯಿಗ್ಳು ಇರ್ತಾವಿ. ಮುದ್ರು ಇರ್ದೀರ ಇರೋ ಬಕ್ಕಿಗ್ಳಾಗ ನೀರು ತೆಳ್ಳಗ ಇದ್ರೆ ಅಲ್ಲಿನೂ ಎಂಡ್ರಕಾಯಿಗ್ಳು ಇರ್ತಾವಿ. ಅವ್ಗಳ್ವ ಚನಿಕ್ಯಾಗ, ಹೊರಬಾರ್ಯಾಗ ಅಗ್ದು ಹಿಡಿಬೋದು. ಇಲ್ಲ ಅಂದ್ರೆ ಹೂ ಇರೋ ಕಡ್ಡಿ (ಮುಂದಿನ ಭಾಗದಲ್ಲಿ ಕವಲುಗಳು ಇರೋ ಕಡ್ಡಿ)ಎತ್ತಿ ಅಂದು ಆ ಬಕ್ಯಾಕ ಇಕ್ಕಿದ್ರೆ ಎಂಡ್ರುಕಾಯಿ ಕಡ್ಡಿವ್ಯಾ ಕಚ್ಚಿಂತಾದಿ. ಅವಾಗ ಮೆತ್ತುಗ ಎಳತಂದು, ಕೊಂಡಿಗ್ಳುವ ಮಡ್ಸಿ ಇಡ್ತಂದು ಬಕೀಟಾಕ ಹಾಕೆಂಬೇಕು' ಅಂತ ಸೌಡಪ್ಪ ಮಕ್ಕಳಿಗೆ ತಾನು ಏಡಿಕಾಯಿ ಹಿಡಿಯುವುದನ್ನು ತೋರಿಸ್ತಾನೆ ಹೇಳ್ತಾ ಹೋದ. ಮಕ್ಕಳು ಅರಳು ಕಣ್ಣುಗಳಿಂದ ನೋಡ್ತಾ ಕೇಳಿಸಿಕೊಳ್ತಾ ಅಪ್ಪ-ಮಗ ಇಡಿತಾ ಇದ್ದ ಏಡಿಕಾಯಿಗಳನ್ನು ನಾಜೂಕಾಗಿ ಇಡಿದು ಬಕೇಟಲ್ಲಿ ಹಾಕಿಕೊಳ್ಳುತ್ತಿದ್ದರು. ಅಮರಪ್ಪನ ದೊಡ್ಡ ಮಗ ಭೀಮತಾತ ಈ ಬಕ್ಯಾಗ ನಾನು ಕೈ ಹಾಕಿ ಇಡಿತೀನಿ ಇರ್ತಾತೋ’ ಅಂತ ಖುಷಿಯಾಗಿ ಹೋಗಿ ಬೊಕ್ಕೆಯಲ್ಲಿ ಕೈ ಹಾಕ್ದ. ಹಾಕಿದ್ ತಕ್ಷಣ ನೀರುಹಾವು ಇವನ ಕೈ ಮೇಲೆ ಬಂದು ಬಿಡ್ತು. ತುಂಬ ಹೆದರಿಕೊಂಡ ಭೀಮ ಕಿಟಾರ್ ಅಂತ ಕಿರುಚಿ ಓಡಿಹೋದ. ಮಕ್ಕಳೆಲ್ಲಾ ಭಯಕ್ಕೆ ಮುದುರಿಕೊಂಡುವು. ಇದನ್ನು ನೋಡಿಕೊಂಡಿದ್ದ ಸೌಡಪ್ಪ ಲೇ ಭೀಮ ಬಕ್ಯಾಗ ನೀರು ತೆಳ್ಳಗ ಅದೋ ಇಲ್ಲೋ ಅಂತ ನೋಡದೀರ ಕೈ ಕಾಕಿದ್ರೆ ಇಂಗೇ ಹಾಗೋದು. ಹೋದ್ರೆ ಹೋಗ್ಲಿ ಬುಡೋ ದೈರ್ಯ ಬತ್ತಾದಿ. ಎಲ್ಲಾ ಹಾವುಗ್ಳು ವಿಷ ಅಲ್ಲ. ನೀರುಹಾವು ಕಚ್ಚಿದ್ರೆ ಕೆಸ್ರು ನೀರು ಕುಡುದ್ರೆ ಸರ್ವೋತಾದಿ' ಎಂದ. ಇತ್ತ ನೀರಲ್ಲಿ ಮೀನುಗಳು ಎಗರುವುದನ್ನು ನೋಡಿ, ಮಕ್ಕಳುಅಪ್ಪ, ತಾತ ಅಲ್ಲಿ ನೋಡ್ರೆ ಏಸೊಂದು ಮೀನ್ಗಳು ಎಗರ್ತಾವಿ’ ಎಂದರು. ಅಮರಪ್ಪ ಅವುಗಳನ್ನು ನೋಡಿ ಹೌದಲ್ಲೋ ಎಷ್ಟುಂದು ಮೀನುಗ್ಳು ಅವೆ' ಅಂದ. ಸೌಡಪ್ಪರ‍್ರೆ ನಾನು ಹೋಗಿ ತೂಮತ್ರ ಕೊಡಿಮಿ ಹಾಕಿ ಬತ್ತೀನಿ’ ಎನ್ನುತ್ತಾ ಕೊಡಮೆಯನ್ನು ಎತ್ತಿಕೊಂಡು ತೂಬಿನ ಹತ್ತಿರ ಬಂದು ಮೇಲಿನಿಂದ ನೀರು ಬರುತ್ತಿರುವ ಜಾಗಕ್ಕೆ ಕೊಡಮೆಯ ಬಾಯಿ ಸರಿಹೊಂದುವಂತೆ ಕೊಡಮೆ ಇಟ್ಟು ಕೊಡಮೆ ಕದಲದ ಹಾಗೆ ಅಕ್ಕ ಪಕ್ಕ ಎರಡು ಕಡ್ಡಿಗಳನ್ನು ಮಣ್ಣಿನಲ್ಲಿ ಚುಚ್ಚಿದ. ಮತ್ತೆ ಬಂದು ಇತ್ತ ಏಡಿಕಾಯಿಗಳನ್ನು ಹಿಡಿದ. ಸರಿ ಎಲ್ಲರೂ ಸೇರಿ ಬಕೇಟಿನ ತುಂಬಾ ಏಡಿಕಾಯಿಗಳನ್ನು ಹಿಡಿದು ಎತ್ತಿಕೊಂಡು, ತೂಬಿನ ಹತ್ತಿರ ಬಂದರು. ಕೊಡಮೆಯ ತುಂಬಾ ಮೀನುಗಳು ಬಿದ್ದಿದ್ದವು. ಮಕ್ಕಳೂ ಇವುಗಳನ್ನು ನೋಡಿ ಆ ಮೀನ್ಗಳು ಮೀನ್ಗಳು, ತಾತ ಮೀನ್ಗಳ್ವ ಹೆಂಗೆ ಇಡೇದು ಹೇಳು ತಾತ' ಎಂದು ಕೇಳಿಕೊಂಡವು. ಆಗ ಚೌಡಪ್ಪನುಅರೇ ನನ್ನ ಮಕ್ಳೆ, ಎಲ್ಲಾನೂನು ಒಂದೇ ಸಾರಿ ಕಲ್ತು ಬುಡಬೇಕಾ? ಸರೇ ಬನ್ರೆ ಇಲ್ಲಿ ನೋಡ್ರಿ, ಅರೇ ನೀರ್ಕ ಇಂಗೆ ಕೊಡಿಮಿ ಇಕ್ಕುಬೇಕು. ಕೊಡಿಮಿ ಬಾಯಾಗಿಂದ ಮೀನ್ಗ್ಳು ಅದರೊಳ್ಳಿಕ್ಯಾ ಬೀಳ್ತಾವಿ. ಕೊಡಿಮಿ ಬಾಯಿ ಒಳಿಕ್ಯಾ ಇರೋದ್ಕ ಮೀನ್ಗ್ಳು ಮ್ಯಾಲಿಕಿ ಬರದೀರ ಅದರಾಗೆ ಇದ್ದೋತಾವಿ. ಮೀನ್ಗ್ಳು ಅದರೊಳಿಕ್ಕಿ ಬಿದ್ದ ಮ್ಯಾಲಿ ಅವ್ನ ಇಂಗಿ ಬಗ್ಗಿಸೆಂಬೇಕು’ ಎಂದು ಮಕ್ಕಳಿಗೆ ವಿವರಿಸುತ್ತಾ ಕೊಡಮೆಯಲ್ಲಿದ್ದ ಮೀನುಗಳನ್ನು ಇನ್ನೊಂದು ಬಕೇಟಿಗೆ ಸುರಿದುಕೊಂಡು ಮೊಮ್ಮಗಳಾದ ಚಿನ್ನಮ್ಮನಿಗೆ ಎತ್ತಿಕೊಳ್ಳಲು ಕೊಟ್ಟ. ಎಲ್ಲರೂ ಏಡಿಕಾಯಿಗಳನ್ನು ಮತ್ತು ಮೀನುಗಳನ್ನು ಎತ್ತಿಕೊಂಡು ಮನೆಗೆ ಬಂದರು.
ಏಡಿಕಾಯಿಗಳನ್ನು ಸುಲಿಯಲು ಕಾಯುತ್ತಿದ್ದ ಎಂಟಮ್ಮ. ಪುಳ್ಳೆಗಳನ್ನು ಹಾಕಿ ಸ್ವಲ್ಪ ಬೆಂಕಿಯನ್ನು ಹಾಕಿದಳು. ತನ್ನ ಗಂಡ ಸೌಡಪ್ಪನಿಗೆ ಮಾರಾಯ ಎಂಡ್ರಕಾಯಿಗ್ಳು ಎರ್ಡು ಕಿಚ್ಚಾಕ ಹಾಕು ಮಕ್ಕ್ಳು ತಿಂತಾವೆ. ಇವ್ನ ಸುಲ್ದು ಹೆಸ್ರು ಮಾಡೂ ಪಟ್ಟಿಕ್ಯಾ ಲೇಟು ಆತಾದಿ' ಎಂದಳು. ಚೌಡಪ್ಪ ಸ್ವಲ್ಪ ಏಡಿಕಾಯಿಗಳನ್ನು ಸುಟ್ಟು ಮಕ್ಕಳಿಗೆ ಕೊಟ್ಟ. ಮಕ್ಕಳು ರುಚಿ ರುಚಿ ಎಂದು ತಿಂದವು. ಸೊಸೆಯ ಸೊಂಟ ನೋವಿಗೆ ಏಡಿಕಾಯಿಗಳು ಒಳ್ಳೆಯದು ಎಂದು ಸ್ವಲ್ಪ ಏಡಿಕಾಯಿಗಳನ್ನು ಒರಳಿಗೆ ಹಾಕಿ ಕುಟ್ಟಿ ರಸ ತೆಗೆದು ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಸ್ವಲ್ಪ ಹುಣಸೆ ನೀರನ್ನು ಹಾಕಿ ಕುದಿಸಿ ರಾಮರಸ ಮಾಡಿ ಸೊಸೆಗೆ ಕುಡಿಯಲು ಕೊಟ್ಟಳು ಎಂಟಮ್ಮ. ಆಮೇಲೆ ಅಮರಪ್ಪ, ಸೌಡಪ್ಪ,ಎಂಟಮ್ಮ ಮೂರು ಜನ ಸೇರಿಕೊಂಡು ಎಂಡ್ರಕಾಯಿಗಳ ಓಡುಗ್ಳುವ, ಪೀತ್ರುಗಳ್ವ ಕಿತ್ತು ಹಸನು ಮಾಡಿದ್ರು. ಎಂಟಮ್ಮ ಸುಲಿದ ಏಡಿಕಾಯಿಗಳನ್ನು ಎಣ್ಣೆಯಲ್ಲಿ ಚನ್ನಾಗಿ ಉರಿದು, ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಈರುಳ್ಳಿ ಬೆಳ್ಳುಳ್ಳಿ, ಮೆಣಸು,ಜೀರಿಗೆ ದನಿಯಾ, ಚಕ್ಕೆ ಲವಂಗ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕೊಬರಿಯನ್ನು ಹಾಕಿ ಚನ್ನಾಗಿ ಒರಳಲ್ಲಿ ರುಬ್ಬಿ,ಆ ಕಾರವನ್ನು ಉರಿದ ಏಡಿಕಾಯಿಗೆ ಹಾಕಿ ಕಲಿಸಿ ಕುದಿಯಲು ಒಲೆಮೇಲೆ ಇಟ್ಟಳು. ಅದಕ್ಕೆ ಪ್ರತ್ಯೇಕವಾಗಿ ಬೇಯಿಸಿಕೊಂಡಿದ್ದ ಹಸಿ ಕಳ್ಳೆಬೀಜ, ಎಳೆ ಸೊರೆಕಾಯಿಯನ್ನು ಹಾಕಿ ಸೇರಿಸಿ, ಸಾರನ್ನು ಚನ್ನಾಗಿ ಕುದಿಸಿದಳು. ಏಡಿಕಾಯಿಯ ಗಮಲು ಮನೆ ಬೀದಿಯನ್ನೆಲ್ಲಾ ಆವರಿಸಿಕೊಂಡಿತು. ಈ ವಾಸನೆಯನ್ನು ಹಿಡಿದುಕೊಂಡ ತಿಂಡಿಪೋತ ಭೀಮಅಜ್ಜಿ ಸಾರು ಬಲೇ ಗಮ್ಲು ಬತ್ತಾದಿ, ಹೆಂಗೆ ಮಾಡೋದು ಹೇಳಜ್ಜಿ’ ಅಂದ. ಅದಕ್ಕೆ ಎಂಟಮ್ಮ ‘ಎಂಡ್ರಕಾಯಿ ಹೆಸ್ರು ಮಾಡಿದ್ದ್ ಆಗೇಯ್ತು, ಇರು ಮೀನ್ಗ್ಳು ಸಾರು ಹೆಂಗೆ ಮಾಡೋದು ಹೇಳಿಕೊಡ್ತೀನಿ’ ಎಂದಳು.
ಅಷ್ಟರಲ್ಲಿ ಮತ್ತೊಂದು ಕಡೆ ಅಮರಪ್ಪ ಮತ್ತು ಸೌಡಪ್ಪ ಇಬ್ಬರೂ ಕೂಡಿ ಹುಣಸೆ ಹಣ್ಣು, ರಾಗಿ ಹಸಿಟ್ಟು, ಕೆಂಮಣ್ಣು ಇವುಗಳನ್ನು ಸೇರಿಸಿ ಹುಣಸೆ ಮೀನುಗಳಿಗೆ ಚನ್ನಾಗಿ ಉಜ್ಜಿ ಕವುಸು ತೆಗೆದು ಹಸುನು ಮಾಡಿ ಸಾರು ಮಾಡಲು ಎಂಟಮ್ಮನಿಗೆ ತಂದುಕೊಟ್ಟರು. ಭೀಮನನ್ನು ಉದ್ದೇಶಿಸಿ ಎಂಟಮ್ಮ“ನೋಡೋ ಭೀಮ” ಎನ್ನುತ್ತಾ ಮೊಮ್ಮಗನಿಗೆ ಮೀನುಸಾರು ಮಾಡುವ ವಿಧಾನವನ್ನು ತೋರಿಸುತ್ತಲೇ ಮೀನುಸಾರು ಮಾಡಲು ಶುರುಮಾಡಿದಳು. ಮೊದ್ಲು ಕಾರ ರುಬ್ಬೆಂಬೇಕು. ಕಾರುಕ ಮೆಣ್ಸುಕಾಯಿ, ಬೆಳ್ಳುಳ್ಲಿ, ಸುಟ್ಟಿರೋ ಈರುಳ್ಳಿ, ದಣ್ಯಾಲು, ಚಕ್ಕಿ, ಲವಂಗ, ಕೊಮಿರಿ, ಹುಣಿಸೆಣ್ಣು, ಸೊಂಟಿ ಹಾಕೆಂಬೇಕು. ಟೆಂಕಾಯಿ ಚಿಪ್ಪಿವ್ಯಾ ಕಿಚ್ಚಾಗ ಸುಟ್ಟಂದು, ಅದು ಚನ್ನಾಗಿ ಸುಟ್ಟಮ್ಯಾಲೆ ಅದು ಕೆಂಪ್ಗ ಇದ್ದಂಗೇನೆ ಅದನ್ನಾ ಒರ್ಲಾಕ ತಂದು ಹಾಕಿ, ಅದ್ರ ಮ್ಯಾಗ ಅರಲೆಣ್ಣಿ ಅಟ್ಬೇಕು. ಆವಾಗ ಅದು ಉಸೋ ಅನ್ನಂದು ತಣ್ಣುಗ ಆಗೇತಾದಿ, ಅವಾಗ ಎಲ್ಲಾನೂ ನುಣ್ಣುಗ ಚನ್ನಾಗಿ ರುಬ್ಬೆಂಬೇಕು. ರುಬ್ಬೆಂದಿದ್ದು ಆದಮ್ಯಾಕ, ಈರುಳ್ಳಿ ಕೋಯ್ದಂದು ಕರಿಬೇಸೊಪ್ಪು, ಸಾಸ್ವಿ ಹಾಕೆಂದು ತಿರುಪೋತುಕ ಹಾಕಿ, ಅದರಾಕ ರುಬೆಂದಿರೋ ಕಾರ್ವ ಕಲ್ಸಿ ಉಪ್ಪು ಹಾಕಿ ಶನ್ನಾಗಿ ಕುದಿಸೆಂಬೇಕು. ಹೆಸ್ರು ಗಮ್ ಅಂದ್ ಗಮ್ಲು ಬಂದ ಮ್ಯಾಕ ಮೀನ್ಗ್ಳು ಹಾಕಿ ಒಂದು ಕುದಿ ಕುದ್ಸಿ ಕೆಳಿಕ್ಕಿ ಇಳಿಸೆಂಬೇಕು' ಎಂದು ಒಂದೊಂದನ್ನು ಮೊಮ್ಮಗನಿಗೆ ವಿವರಿಸಿ ಹೇಳುತ್ತಲೇ ಮೀನುಸಾರು ಮಾಡಿದಳು. ಗಮಲನ್ನು ತಡೆದುಕೊಳ್ಳಲಾಗದ ಭೀಮ ಪಾತ್ರೆಗೆ ಕೈ ಹಾಕಿ ಒಂದು ಮೀನನ್ನು ಎತ್ತಿಕೊಂಡು ಬಾಯಿಗೆ ಬಿಟ್ಟುಕೊಂಡ. ಆಗಲೇ ಸಂಜೆ ಏಳು ಗಂಟೆ ಆಗುತ್ತಾ ಬಂದಿತ್ತು. ಮನೆಯವರೆಲ್ಲಾ ಸೇರಿ ಊಟ ಮಾಡಲು ಕೂತರು. ಎಂಟಮ್ಮ ಎಲ್ಲರಿಗೂ ಸಮನಾಗಿ ಏಡಿಕಾಯಿ ಮತ್ತು ಮೀನುಸಾರನ್ನು ಬಡಿಸಿದಳು. ಅಷ್ಟರಲ್ಲಿ ಎಂಟಮ್ಮನ ಮನೆಯಲ್ಲಿ ದೀಪಾವಳಿ ಹಬ್ಬದ ಕೊನೆ ಬಾಡುಚೀಟಿ ಕಟ್ಟೋಕೆ ಅಂತ ಪ್ರತಿ ತಿಂಗಳಿನ ಹಾಗೆ ಅವತ್ತು ಕೇರಿ ಜನ ಎಲ್ಲಾ ಬಂದು ಸೇರಿದರು. ಎಂಟಮ್ಮ ಬಾಡುಚೀಟಿ ಹಾಕಿಸುವುದರಲ್ಲಿ, ಸಂತೆಯಲ್ಲಿ ಕುರಿ ದನ ವ್ಯಾಪಾರವನ್ನು ಮಾಡುವುದರಲ್ಲಿ ಎತ್ತಿದ ಕೈ. ಅಷ್ಟೇ ಚನ್ನಾಗಿ ಪ್ರತಿ ವರುಷ ದೀಪಾವಳಿ ಹಬ್ಬಕ್ಕೆ, ಯುಗಾದಿ ಹಬ್ಬಕ್ಕೆ ಬಾಡುಚೀಟಿ ಕಟ್ಟಿರೋರಿಗೆ ಮೋಸ ಇಲ್ಲದಂಗೆ ಗುಡ್ಡೆ ಬಾಡನ್ನು ತನ್ನ ಗಂಡ ಸೌಡಪ್ಪನಿಂದ ಮಾಡಿಸುತ್ತಿದ್ದಳು. ಕೇರಿ ಜನಾನೂ ಗುಡ್ಡೆ ಬಾಡು ಮಾಡೋವಾಗ ಒಟ್ಟಿಗಿರೋರು. ಎಲ್ಲರೂ ಬಾಡುಚೀಟಿ ಹಾಕಿದ್ರೆ ಎಂಟಮ್ಮನ ಹತ್ರಾನೆ ಹಾಕಬೇಕು ಎನ್ನುತ್ತಿದ್ದರು. ಎಂಟಮ್ಮ ಚೀಟಿಕಟ್ಟಲು ಬಂದವರನ್ನು ನೋಡಿ ‘ಓ ಅವಾಗೆ ಸೀಟಿಕ ಟೇಮ್ ಆಗೇಯ್ತಾ... ಬನ್ರ್ಯಾ ಎಲ್ಲಾ, ಇವತ್ತು ಅಪ್ನು ಮಗ್ನು ಮೊಮ್ಮಕ್ಳು ಎಲ್ಲಾ ಹೋಗಿ ಶಾನ ಎಂಡ್ರುಕಾಯಿಗ್ಳುವ, ಮೀನುಗ್ಳುವ ತಂದ್ರು. ಶಾನ ಹೆಸ್ರು ಆಗೇದಿ. ಎಲ್ಲರೂ ತಿನ್ರ್ಯಾ’ ಅದ್ಲು. ಅವರು ‘ಅಯ್ಯೋ ಬ್ಯಾಡ ಎಂಟಕ್ಕೋ’ ಅಂದ್ರು. ಆದರೆ ಎಂಟಮ್ಮ ಬಿಡದೆ ಬಲವಂತದಿಂದ ಎಲ್ಲರಿಗೂ ಸಾರು ಹಾಕಿದ್ಲು. ಏಡಿಕಾಯಿ ಸಾರನ್ನು ಲೊಟಕ ಹಾಕಿಕೊಂಡು ತಿನ್ನುತಿದ್ದ ಚನ್ನಕಿಷ್ಣ ಇದ್ದುಕಂಡುಹೆಸ್ರು ಬಲೇ ಅದಿ ಎಂಟಕ್ಕೋ. ನಾನೂನು ನೆನ್ನಿ ಎಕ್ಣಗ್ಳು ತಂದಿದ್ನಿ, ನಮ್ಮೋಳು ಕೂಡ ಕೋಳಿ ಬಾಡ್ಕ ಹಾಕೋ ಮಸಾಲ ಹಾಕಿ ಬಲೇ ಶನ್ನಾಗಿ ಎಕ್ಣಸಾರು ಮಾಡಿದ್ಲು’ ಅಂದ. ಅದಕ್ಕೆ ಎಂಟಮ್ಮ ಹೌದೇನೋ ಶನ್ನಕಿಷ್ಣ, ನಮ್ಮಕ್ಕೊಂದು ಕೊಡ್ಕೂಡ್ದಾ ಸುಟ್ಟನ್ನೋಕ. ನನ್ ಸೊಸಿಕಿ ನಡುವು ನೋವಂತಿ. ನಡ್ವು ನೋವ್ಕ ಬಲೇ ಒಳೇದು ಎಕ್ಣ' ಎಂದಳು. ಇದನ್ನ ಕೇಳಿಸಿಕೊಳ್ಳುತ್ತಿದ್ದ ಭೀಮ ಇದ್ದುಕೊಂಡು ``ಈ ಎಕ್ಣುಗ್ಳುವ ಎಂಗಣ್ಣ ಚನ್ನಕಿಷ್ಣಣ್ಣ ಇಡಿಯೋದು ಹೇಳಣ್ಣೋ' ಅಂದ. ಚನ್ನಕಿಷ್ಣ ಎಕ್ಣಗಳನ್ನ ಹಿಡಿಯುವುದರ ಕುರಿತು ಹೇಳಲು ಶುರುಮಾಡಿದಮಳಿ ಬಿದ್ದು ಮಾರ್ನೆ ದಿನ ಹೋದ್ರೆ ಎಕ್ಣಗ್ಳುವ ಇಡೇಕ ಬಲೇ ಈಸಿ. ಮಳಿ ನೀರ್ ಬಕ್ಕಿಗ್ಳಾಕ ಹೋಗಿ ಬಕ್ಕಿಗ್ಳು ಮುಚ್ಚೋಗಿರ್ತಾವಿ. ಅದ್ಕ ಅವು ಸಲ್ಪ ಸಲ್ಪಾನೇ ಬಯ್ಲಾಗ ಬಕ್ಕಿಗ್ಳನ ತೋಡೆಂದಿರ್ತಾವಿ. ಆ ಬಕ್ಕಿಗ್ಳನ ಶನಿಕ್ಯಾಗ ರಸಿ ರಸೇ ಅಗ್ದರೆ ಸಾಕು ಸಿಕ್ಕೋತಾವಿ. ಬ್ಯಾರೆ ಟೇಮ್ಯಾಗ ಇಡಿಬೇಕಂದ್ರೆ ನೆಟ್ ಎಕ್ಣ ಬಕ್ಕಿಗ್ಳುವ ತಡ್ಕಿ, ಅವು ತೋಡೆಂದು ಹೋಗಿರೋ ಬಕ್ಕಿಗ್ಳುಕ ಮಣ್ಣು ಬರ‍್ರುಗ ತುರ್ಕಬೇಕು. ದೊಡ್ಡ ಬಕ್ಕಿ ಇರೋದ್ನ ನೋಡಿ ಅದ್ಕ ಊದುರು ಮಡಿಕಿಂದ ಊದುರು ಇಕ್ಕಬೇಕು. ಇತ್ತುಗ ಊದುರು ಇಕ್ಕತಾ ಇದ್ರೆ ಮುಚ್ಚಿರೋ ಒಂದೊಂದು ತೋಡಾಗೂನು ೧೦-೧೫ ಎಕ್ಣಗ್ಳು ಈಸಿಕಿ ಗುದ್ದುತಾವಿ, ಅವಾಗ ಅವ್ನ ಹೊಡ್ದು ಹಿಡತಂಬೋದು. ಇಲ್ಲಾ ಬಕ್ಕಿಗ್ಳುಕ ಗೋಣಿ ಹಾಕಿ ಅವ್ನ ಇಡಿಬೋದು. ಸಾರುಕ್ಕಿಂತ ಇವ್ನ ಉಪ್ಪು ಕಾರ ಹಾಕೆಂದು ಸುಟ್ಟಂದು ತಿಂದ್ರೆ ಬಲೇ ರುಚಿ’ ಅಂದ ಚನ್ನಕಿಷ್ಣ. ಇದನ್ನ ಕೇಳಿಸಿಕೊಳ್ಳುತ್ತಾ ಚೀಟಿ ಕಟ್ಟೋಕೆ ಕಾಯುತ್ತಿದ್ದ ದದ್ದೀಮಪ್ಪನ ಬಾಯಿಂದ ನೀರು ಸುರೀತಿತ್ತು.
ಊಟ ಮಾಡುತ್ತಿದ್ದ ಭೀಮ ಚನ್ನಕಿಷ್ಣನನ್ನು ನೋಡ್ತಾ ಅಣ್ಣೋ ನಾವು ಈ ಹಬ್ಬ ಮುಗಿಸೆಂದು ಹೋಗಿ ನಾಲ್ಕು ಐದು ತಿಂಗ್ಳ ಬುಟ್ಟಂದು ಬತ್ತೀರಿ. ಅವಾಗ ಎಕ್ಣಗ್ಳುವ ಇಡಿಯೋಕ ಹೋಗಾನ' ಅಂದ. ಇದನ್ನು ಕೇಳಿಸಿಕಂಡ ಎಂಟಮ್ಮ.ಲೇ ತಲಿಕಿಂದ್ಲು ಮೊಮ್ಮಗನೇ ಯಾವಾಗ ಅಂದ್ರೆ ಅವಾಗ ಎಕ್ಣುಗ್ಳುವ, ಮೀನುಗ್ಳುವ, ಎಂಡ್ರಕಾಯಿಗ್ಳುವ ಇಡೀಕ ಆಗಲ್ಲಪ್ಪ, ಉಬ್ಬಿ ಮಳ್ಯಾಗ, ಮಗ್ಗಿ ಮಳಿ, ಸಣ್ಣಸಿಲಿ ಮಳಿ, ದೊಡ್ಡಸಿಲಿ ಮಳ್ಯಾಗ ಅವು ನಂಮ್ಮಂಗೆ ಮಕ್ಕಳು ಮರೀನಾ ಮಾಡೋಟೇಮು. ಅವಾಗ ಇಡೀಕೂಡದು’ ಅಂದ್ಲು. ಇದನ್ನು ಕೇಳಿಸಿಕೊಂಡ ಚನ್ನಕಿಷ್ಣ ಹೌದೌದು, ಇಡೇದು ಎಲ್ಲಾದ್ರೂ ಉಂಟಾ. ಅದು ಪಾಪ್ದ ಕೆಲ್ಸ. ಭೀಮ, ಒಂದು ಕೆಲ್ಸ ಮಾಡು ಉಗಾದಿ ಹಬ್ಕ ಬಂದುಬುಡು, ಎಕ್ಣಗ್ಳುವ ಇಡೇದು ಹೇಳಿಕೊಡ್ತೀನಿ' ಎಂದ. ಭೀಮ ಸರಿ ಎನ್ನುವಂತೆ ತನ್ನ ಅಜ್ಜಿ ಮುಖಾನ ನೋಡ್ತಾ ತಲೆ ಅಲ್ಲಾಡಿಸಿಅಂಗ್ಯಾದ್ರೆ ನಾವು ಉಬ್ಬಿಮಳಿ ಮಗ್ಗಿಮಳ್ಯಾಗ ಬರೀ ಸೊಪ್ಪು ತಿನ್ನಬೇಕಾ’ ಎಂದ. ಅದಕ್ಕೆ ವೆಂಕಟಮ್ಮ‘ಸೊಪ್ಪು ಹೆಸ್ರು ಅಂದ್ರೆ ತಾಶಾರು ಮಾಡಬ್ಯಾಡಪ್ಪೋ, ನೂರೊಂದು ಬೆರ್ಕಿ ಸೊಪ್ಪು ತಂದು, ಸೊಪ್ಪು ಹೆಸ್ರು ಮಾಡಿದ್ರೆ ಎಂಥಾ ಕಾಯ್ಲಾ ಇದ್ರು ಒಳ್ಟೋತಾದಿ’ ಎಂದಳು. ಅದಕ್ಕೆ ಚನ್ನಕಿಷ್ಣ ಬೆರ್ಕಿ ಸೊಪ್ಪು ಹೆಸ್ರು ಸುಟ್ಟು ಮಾಡು ಇದ್ದು, ನಂಜಂದು ತಿಂದ್ರೆ, ಏನ್ ಹೇಳ್ತೀಯಾ ಎಂಟಕ್ಕ ಸರ್ಗ ಮೂರೇ ಗೇಣು. ನಮ್ ದೊಡ್ಡತ್ತಿ ಏನ್ ಶನ್ನಾಗಿ ಓಣಬಾಡು ಮಾಡ್ತಾಳಿ ತಿಳಿಕ್ಕಾ? ಏಸು ಬಾಡು ಇದ್ರೂನೂ ಇಸ್ಕೇಲು ಮಡಿಗಿ ಕೊಯ್ದಂಗಿ ಕೊಯ್ದು ಕಣ ಕಣ ಅನ್ನೋ ಅಂಗಿ ಓಣಗಾಕಿ ಮಡ್ಕಿಕ್ಯಾ ಹಾಕಿ ಮಡ್ಗತಾಳಿ. ನಾವು ಇಟ್ಟು ತಿನ್ನೋವಾಗೆಲ್ಲಾ ಕೆಂಡ್ಗಳ ಮ್ಯಾಗ ಹಾಕಿ ಸುಟ್ಟಂದು ತಿಂತೀರಿ' ಅಂದ. ಇದನ್ನು ಕೇಳಿಸಿಕೊಳ್ಳುತ್ತಿದ್ದ ತಿಂಡಿಪೋತ ಭೀಮ ಒಣಬಾಡು ಕನಸು ಕಾಣುತ್ತಾ ಬಾಗಿಲಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದ. ಚೀಟಿ ಕಟ್ಟೋಕೆ ಬಂದೋರು ಮನೆತುಂಬಾ ಇದ್ದಿದ್ದರಿಂದ ಮನೆ ಪೂರ್ತಿ ತುಂಬಿತ್ತು. ಎಂಟಮ್ಮ ಭೀಮನನ್ನು ನೋಡಿಲೇ ಭೀಮ ದಾಲಬಂದ್ರ ಮ್ಯಾಲಿ ಕೂತು ತಿನ್ನಬ್ಯಾಡೋ, ಇಲ್ಲಿ ಬಂದು ತಿನ್ನು’ ಅಂದ್ಲು. ಅದಕ್ಕೆ ಭೀಮ ಏನಜ್ಜಿ ಯಾವಾಗ ನೋಡಿದ್ರು ಏನೋ ಒಂದು ಹೇಳ್ತಾ ಇರ್ತೀಯಾ, ಅದು ಅಂಗ ಮಾಡಬ್ಯಾಡ ಇದು ಇಂಗ ಮಾಡಬ್ಯಾಡ ಅಂತೀಯಾ, ದಾಲಬಂದ್ರ ಮ್ಯಾಗ ಕೂತಂದ್ರೆ ಏನು ಆತಾದಿ? ಏನೂ ಆಗಲ್ಲ ಸುಮ್ಮನಿರು. ನಮ್ಮ ಅಮ್ಮನ ಅಂಗ್ಯಾ ನೀನೂ ಗೊಣ ಗೊಣ ಅಂತಾನೇ ಇರ್ತೀಯಾ' ಅಂದ. ಅದಕ್ಕೆ ಎಂಟಮ್ಮನುಅಲ್ಲೋ ಮೊಮ್ಮಗನೆ ನೀನು ಪ್ಯಾಟ್ಯಾಗ ಸೇರೆಂದ್ಯಾ ಅಂತ ದೊಡ್ಡೋರು ಮಾಡಿರೋ ರೀತಿ ರಿವಾಜುನ ಬಿಡೋಕಾತಾದ್ಯಾ? ಎಲ್ಲಕೂ ರೀತಿ ರಿವಾಜು ಪಬ್ಬತಿ ಅನ್ನೋದು ಅದಿ. ಇಂತದ್ಕ ಇಲ್ಲ ಅನ್ನಂಗಿಲ್ಲ. ಹುಟ್ಟೋದ್ರಿಂದ ಸಾಯೋವರ್ಕು ಎಲ್ಲಾನೂನು ಒಂದೇ ಸಮ್ಕ ನಡೆಯೋದು, ಒಂದೇ ಯೇಗದಾಗ ನಡೆಯೋದು. ನೀನು ಇಲ್ಲಿ ತಕದಿಮಿ ಅಂತಾ ಇದ್ಯಾ ಅಂದ್ರೆ ಜಗತ್ತೆಲ್ಲಾ ಅಂಗೇ ಇರಲ್ಲ. ದಾಲಬಂದ್ರ ಅಂದ್ರೆ ಏನು ಅಂತ ಅನ್ನಂದಿದ್ಯಾ, ಮನಿಕ್ಯಾ ತಾಯಿ ಇದ್ದಂಗ್ಯಾ, ತಾಯಿಕ ತಲಿಮಗನು ನೀನು, ದಾಲಬಂದ್ರ ಮ್ಯಾಗ ಕೂತಂದ್ರೆ ಅಮ್ಮನ ಎದಿ ಮ್ಯಾಗ ಕೂತಂದಂಗ್ಯಾ, ಎದಿ ಮ್ಯಾಲಿ ಕೂತಂದ್ರೆ ಆ ತಾಯಿಕ ಏಸು ನೋವಾತಾದಿ… ಹಗಲು ಅಂದೀರಾ, ರಾತ್ರಿ ಅಂದೀರಾ ನಮ್ಮ ಮನಿ ಕಾಯ್ತಾಳೇ. ದಾಲಬಂದ್ರ ಮ್ಯಾಗ ಕೂತಂದ್ರೆ ಮದ್ವಿ ಆಗಲ್ಲನೋ’ ಅಂದ್ಲು.
ಅದಕ್ಕೆ ಭೀಮ ಇದ್ದುಕಂಡು ಓ ಬುಡಜ್ಜೇ... ರೀತಿ ರಿವಾಜು ಮದುವಿಕ್ಯಾ ಏನ್ಕ ಬೇಕು. ನಾನು ಓದೋದು ಮುಗೀಲಿ ಇರು, ಒಬ್ಬ ಹುಡುಗೀ ನನ್ನ ಜತಿ ಬರಾಗ ರಡಿ ಅವ್ಳೆ, ಕರಕಂಬಂದ್ಬುಡುತೀನಿ' ಅಂದ.ನೀನು ಯಾರನಾನ ಕರಕಂಬಾ, ಯಾವ ಜಾತ್ಯಾದ್ರೆ ಏನು? ಯಾವ ಕುಲ ಆದ್ರೆ ಏನು? ಅವ್ಳು ಮನುಸುಳೇ ಅಲ್ಲಾ. ಬ್ಯಾರೆ ಜಾತ್ಯೋಳು ಅಂತ ಮಕ್ಕಳು ಆಗಲ್ಲ ಅಂತಾದೇನು? ಕರಕಂಬಂದ್ರೂ ನೀನು ನಮ್ಮ ಪಬ್ಬತಿ ಪಕಾರ ಮದ್ವಿ ಆಗಬೇಕು ಅಷ್ಟೆ. ಇಲ್ಲ ಅಂದ್ರೆ ಅರ್ಸಿನ್ ನೀರ್ ಕಾಣ್ದಾ ಹೋದೋನು ಅಂತ ಜನ ಆಡೆಂತಾರಿ ಲೇ. ನಮ್ಕ ಅವಮಾನ ಅದು. ಮದ್ವಿ ಅಂದ್ರೆ ಏನು ಅನ್ನಂದಿದ್ಯಾ, ಮದ್ವಿ ಆಗೋಕು ಕೇಳೆಂದು ಬಂದಿರ್ಬೇಕು. ಅದು ಮಕ್ಕಳ ಆಟನಾ?’ ಅಂದ್ಲು ಎಂಟಮ್ಮ.
ಅದಕ್ಕೆ ಭೀಮ ಏನು ಮದ್ವಿ? ಹುಡ್ಗಿ ಕತ್ತಾಕ ದಾರ ಗಂಡಾಕೋದಾ?' ಎಂದ. ಅದಕ್ಕೆ ಎಂಟಮ್ಮಮದ್ವಿ ಅಂದ್ರೆ ಸುಮ್ನೆ ಅಲ್ಲಾ, ಮಾವು ನೇರ್ಳಿ, ಏಳಿ ರೆಂಬೆಗ್ಳುವ ಹಾಕಿ ಸಪ್ಪರ ಹಾಕ್ಬೇಕು. ಜಂಬುನೇರ್ಳಿ ಅಸಿ ಕಂಬ ಊಣಿ ಅದ್ಕ ನವದಾನ್ಯದು ಅರ್ಸಿನ ಬಟ್ಟಿ ಮಾಡಿ ಕಟ್ಬೇಕು. ಸಪ್ಪುರ್ಕ ಬಾಳಿಗೊನಿ, ಎಳ್ನೀರು ಕಟ್ಬೇಕು. ನೆಲ್ಲು ಕುಟ್ಟಿ ಕರಿ ಕಂಬ್ಳಿ ಮ್ಯಾಗ ಅಸಿ ಬಸ್ಬೇðಕು. ಕಳ್ಸ ಪೂಜಿಸ್ಬೇಕು. ಕಂಸ್ಹು ತಟ್ಟಿ ಇಕ್ಕಿ, ಅದ್ರಾಗ ಒಣ ಗೊಬ್ರ ಅರ್ಡಿ, ಅದರ ಮ್ಯಾಲಿ ಕಳಸಶಂಬು ಇಕ್ಬೇಕು. ಮದ್ವಿ ಹೆಣ್ನೀಂದ ಗೊಬ್ರ ಅರ್ಡ್ಸಿ ಅದ್ರ ಮ್ಯಾಲಿ ನವದಾನ್ಯಗ್ಳ ಮಳ್ಕಿ ಹಾಕ್ಸಿ, ಅರಿಣಿ ಪೂಜಿ ಮಾಡ್ಸ್ಬೇಕು. ಮುಂಡಿ ಹೆಂಗ್ಸು ಕೈಯಾಗ ಅರಿಣಿ ಗಡ್ಗಿ ಮ್ಯಾಲಿ ದೀಪ ಅಂಟ್ಸಿ, ಇಡೀ ರಾತ್ರೆಲ್ಲಾ ಅವ್ಳೇ ಆ ದೀಪ ಆರದಂಗಿ ನೋಡೆಂಬೇಕು. ಕೊನೇಕ ಮುತೈದಿ ಕಡಿಂದ ಕಳ್ಸ ತೊಳ್ಸ್ಬೇಕು. ಈಸು ಆದರೆ ಅದೊಂದು ಮದಿವಿ ಅನಿಸೆಂತಾದಿ’ ಅಂದ್ಲು.
ಬಾಡುಚೀಟಿ ಕಟ್ಟೋಕೆ ಬಂದು, ಅಜ್ಜಿ ಮೊಮ್ಮಗನ ಯಾವಾರ ಕತೇನ ಕೇಳಿಸಿಕೊಳ್ಳುತ್ತಿದ್ದ ಮಂಜಮ್ಮ ಎಂಟಕ್ಕ ನಿಮ್ಮ ಕತಿವ್ಯಾ ಅಮ್ಯಾಕಿಕ್ಕೆನ್ರಾ, ಮೊದ್ಲು ನನ್ನ ಸೀಟಿ ಕಾಸುಗ್ಳುವ ತೆಗುದಾ, ಮನ್ಯಾಗ ತುಂಬಿದ ಬಸುರೆಂಗ್ಸುವ ಬುಟ್ಟು ಬಂದಿದ್ನಿ. ನಾಡಿದ್ದು ಎರಿಗಿಸಾಂಗ್ವಿ ನನ್ನ ಸೊಸಿಕಿ. ನಿನ್ಕ ಮನ್ನೇನೇ ಹೇಳಿದ್ನಲ್ಲಾ..ಒಂಬತ್ತು ವಸಿಕಿ ಹಾಕಬೇಕು ಅಂತಾ. ಚಕ್ಕಲಿ, ಸಿಮುಲುಂಟಿ ಮಾಡಿದ್ನಿ. ಉಳಿದಿದ್ದು ನೀವೇ ಯಾರಾನಾ ಬಂದು ಮಾಡಬೇಕಕ್ಕೋ' ಎಂದಳು. ಅದಕ್ಕೆ ಅಲ್ಲಿ ಇದ್ದ ಊರುಕುಂಟೆಮ್ಮಅಯ್ಯೋ ಎಲ್ಲರೂ ಸೇರಿ ಒಂದೊಂದು ಮಾಡಿದ್ರೆ ಆಯ್ತು ಬುಡು ದೋ, ಅದ್ಕ ಯಾಕ ಆಸು ಟೆನ್ಸನ್ನು’ ಅಂದ್ಲು.
ಮಂಜಮ್ಮನು ಊರುಕುಂಟೆಮ್ಮನನ್ನು ಕುರಿತು ಹೌದು ಊರುಕುಂಟೆಮ್ಮ, ಏನು ನಿಮ್ ಮನಿ ಹತ್ರ ಮನ್ನಿ ಜಗ್ಳಾ? ನೆನ್ನೇ ಕೇಳಾನ ಅನ್ನಂದು ಸುಮ್ಮನೇ ಆದ್ನಿ' ಅಂದ್ಲು. ಊರುಕುಂಟೆಮ್ಮಅಯ್ಯೋ ಅಂದೊಂದು ದೊಡ್ಡ ಕಥಿ ಆಗೇಯ್ತು ಮಂಜಮ್ಮ. ಮಂತಿ, ಏನಂತಂದ್ರೆ ನನ್ನ ಮಮ್ಮಗ್ಳು ಮನ್ಯಾ ವಯ್ಸ್ಕ ಬಂದಿದ್ಲಲ್ಲಾ, ಅವರ ಸಣ್ಣ ಸ್ವಾದರ ಮಾಮನು ಕೈಯಾಗ ಗುಡಸ್ಲು ಹಾಕಿಸಿದ್ರಿ. ಒಂಬತ್ತು ದಿನ ವಸಿಕಿಗ್ಳು ಆದ ಮ್ಯಾಲಿ ಅವ್ನ ಕೈಯಾಗೇ ಗುಡುಸುಲ್ವಾ ಕಿಳಿಸಿದ್ರಿ. ಅದ್ಕ ಅವ್ರ ದೊಡ್ ಸ್ವಾದರ ಮಾಮುನು ಬಂದು ನಾನು ದೊಡ್ ಸ್ವಾದರ ಮಾಮನು ಇರೋವಾಗ ನಾನು ಮಾಡಬೇಕಾಗಿರೋ ಶಾಸ್ತ್ರವ ಇನ್ನೊಬ್ಬರ ಕೈಯಾಗ ಎಂಗಿ ಮಾಡಿಸಿದ್ರಿ ಅಂತ ಜಗ್ಳ ಮಾಡಿದ್ನು’ ಅಂದ್ಲು.
ಅದಕ್ಕೆ ಮಂಜಮ್ಮ ಅಯ್ಯೋ ಆ ಕುಡುಕುನ ಮಾತು ಏನು ಬುಡು, ಅವುö್ನ ಯಾವಾಗೂನೂ ಅಂಗೆ. ಅವುö್ನದು ಇದ್ದಿದ್ದೆ.' ಎಂದಳು. ಊರುಕುಂಟೆಮ್ಮನಾಳಿ ಎರಿಗಿಸಾಂಗ್ವಿಕ ನಾನು ಒತೀನೆ ಬಿರ್ನಾ ಬತ್ತೀನಿ ಬುಡು, ಹೆರಿಗಿ ಸಾಂಗ್ವಿಕಿನ್ನಾ ಬಾಳಂತಿ ಸಾಂಗ್ವಿ ಚನ್ನಾಗಿ ಮಾಡ್ಬೇಕು ಮಂಜಕ್ಕ. ತಾಯಿ ಮಗೂಕ ಬೇವು ಸೊಪ್ಪು, ಅರಿಸಿನ ರುಬ್ಬಿ ಮೈಕೆಲ್ಲಾ ಇಕ್ಕಿ, ಈಪ್ಲೀಸು ಸೊಪ್ಪು, ಬೇವು ಸೊಪ್ಪು, ಮಾವು, ಏಳಿ, ನಿಂಬಿ, ಕೂನು ಸೊಪ್ಪು ನೀರಾಕ ಹಾಕಿ ಶನ್ನಾಗಿ ಕಾಸಿ ನೀರಟ್ಟಬೇಕು. ಅದು ಬಲೇ ಒಳ್ಳೇದು ನೋಡು ತಾಯಿ ಮಗೂಕ ಮಂಜಕ್ಕ’ ಅಂದ್ಲು. ಊ ಊರುಕುಂಟೆಮ್ಮೋ ನಾನು ಮಾತ್ರ ಯಾವ ಸಾಂಗ್ವಿಗ್ಳುವೂ ಬುಡಲ್ಲ, ನಮ್ಮ ಪಬ್ಬತಿವ್ಯಾ ನಾವು ಬುಡೋಕಾತಾದ್ಯಾ' ಅಂದ್ಲು ಮಂಜಮ್ಮ. ಇದನ್ನು ಕೇಳಿಸಿಕೊಳ್ಳುತ್ತಿದ್ದ ಎಂಟಮ್ಮಹೌದು ಲೇ ಮಂಜಮ್ಮ ಈ ಸರಿ ಯಾವ ಮಗ್ವಾನಾ ಹುಟ್ಲಿ ಅತ್ಗಾ ಆಪ್ರೀಸುನು ಮಾಡಿಸಾಕು. ಮನ್ಯಾಗ ಯಾವೋನು ಏನಾನ ಅನ್ನನ್ಲಿ, ತಲಿಕೆಡಿಸೆಂಬ್ಯಾಡ. ನಿನ್ನ ಸೊಸಿ ಶಾನ ಯೀಕು ಅವ್ಳಿ ಪಾಪ. ಇಂತ ಕಾಲಬಂದೂ ಮೂರು ನಾಲ್ಕು ಮಕ್ಳು ಆದ್ರೆ ಶನ್ನಾಗಿರಲ್ಲ. ಮೊದ್ಲು ಮಗೂಕ ಎರ್ಗಿಕ್ಯಾ ಆಸ್ಪತ್ರಿಕ್ಯಾ ಹೋದ್ರು ನಿನ್ನ ಸೊಸಿ ಏನು ಬಾದಿ ಬಿದ್ಲು ಪಾಪ. ನಾನೆ ಕಣ್ನಾರೆ ನೋಡಿದ್ನಿ. ಯಾವ ಡಾಕ್ಟರು ಏನು ಮಾಡಕ್ಕಾಗದೀರಾ ತೋಟಿ ಮುನೆಮ್ಮನ್ವ ಕರ್ಸಿ ಕಾನ್ಪು ಮಾಡಿಸಿದ್ರು’ ಎಂದಳು.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮ ತೋಟಿ ಮುನೆಮ್ಮನು ಅಂದ್ರೆ ಬಗ್ಗೆಂದು ಒಡ್ಯಾಡ್ತಾಳಲ್ಲಾ ಆಯಜ್ಜ್ಯಾ? ಆ ಗುಡುಗುಡು ಅಜ್ಜಿ ಏನ್ ಮಾಡ್ತಾಳಿ?' ಅಂದ. ಅದಕ್ಕೆ ಎಂಟಮ್ಮಹೌದು ಅವ್ಳೆ, ಅಯ್ಯೋ! ಅವ್ಳು ಕಾನ್ಪು ಮಾಡುಸೋದ್ರಾಗ ಬಲೇ ಗಟ್ಟೋಳು. ನೀನು ಅಡ್ಡಡ್ಡ ತಿರುಗಿಕಂಡು ಇದ್ದಾಗ, ಎರ್ಡು ದಿನ ಕಾನ್ಪೇ ಆಗಿಲ್ಲಾ. ನೀನು, ನಿಮ್ಮ ಅಮ್ಮನು ಸಾಯ್ತೀರೋ ಬದ್ಕತೀರೋ ಅಂದಂದಿದ್ರಿ. ಸರೀಗ ತಿರ್ಗ್ಸಿ ನಿನ್ನನ್ನಾ ಈಸಿಕಿ ಎಳದಾಕಿದ್ದು. ನೀನು ಅಳ್ಳದೀರಾ ಇದ್ದಾಗ ತಿಕ ಮ್ಯಾಲಿ ಬಿಟ್ಟು ಅಳಿಸಿ ಬದ್ಕಿಸಿದ್ಲು. ನಿಮ್ಮ ಅಪ್ನು ತಲಿ ಇಕ್ಕುದೀರಾ ತಿಕ ಕೆಳಕಿಕ್ಕಿ ಅಂದು ಬಂದಿದ್ನು. ಅವಾಗ ನಾನು ಸತ್ನಿ, ಮಗೂನು ಸತ್ತತು ಅಂದನ್ನಿ. ಆದ್ರೂ ಏನೂ ಮಾಡಿ ಕಾನ್ಪು ಮಾಡಿಸಿದ್ಲು. ನರುಸಮ್ಮನೋರುಕ ಹೇಳಿಕೊಡೋಕ ತೋಟಿ ಮುನಿಮ್ಮನ್ವ ಕರದಂದು ಹೋತಾರಿ. ಆಸು ಏಸ್ಪರ್ಟು ಆಯಮ್ಮನು. ಕಾನ್ಪು ಮಾಡುಸೋದ್ರಾಗ. ಈವಾಗ ಆಯಮ್ಮನು ಸೊಸಿ ಕೂಡ ಅದೇ ಕೆಲ್ಸ ಮಾಡ್ತಾಳಿ’ ಎಂದಳು. ಇದನ್ನು ಕೇಳಿ ಎಲ್ಲರನ್ನೂ ನೋಡ್ತಾ ಭೀಮ ಮಜುಗರದಿಂದ ತಲೆತಗ್ಗಿಸಿ ನಾಚಿಕೊಂಡ.
ಎಂಟಮ್ಮ ಮಂಜಮ್ಮನಿಗೆ ಹುಟ್ಟಿದ್ ಮ್ಯಾಕ ಸ್ವಾದರತ್ತೇನೇ ಮಗ್ವು ಕಿವ್ಯಾಗ ಹೆಸ್ರು ಹೇಳ್ಬೇಕು. ಅದು ಮುಕ್ಕಿವು ನಮ್ಕ, ಅದ್ಕ ಮುಳಬಾಗುಲ್ಕ ಕೊಟ್ಟಿದ್ರಲ್ಲಾ ನಿನ್ನ ಮಗ್ಳು, ಸುಶೀಲಿವ್ಯಾ ಎಂಗಾನಾ ಮಾಡಿ ಕರಕಂಬಾ. ಅವುö್ಳ ಇಲ್ಲಿಕ್ಯಾ ಬಂದು ಒಂದು ವರ್ಸ ಆಯ್ತು. ನೋಡ್ಬೇಕು ಅನ್ಸ್ತಾ ಅದಿ. ಅವುö್ಳಕ ಯಾವಾಗೂನೂ ಕೆಲ್ಸ ಕೆಲ್ಸ..ಮದಿವ್ಯಾಗ ಕೊಡೋಕು ತೆಗಿಯೋಕು ಗಂಡ್ಸ್ರು ಗಂಡ್ಸ್ರು ಏಜ್ವಿ ಆಡಿದ್ರು ಅಂತ ಆ ಹೆಣ್ಣು ಮಗ್ವು ಏನು ಮಾಡ್ತಾದಿ? ಏಸು ನ್ಯಾಯುಗ್ಳುವ ಮಾಡಿಸಿದ್ನಿ ನಾನೆ, ಅವುö್ಳ ಕೈಯಾಗೆ ಈ ಸರಿ ಅವುö್ಳ ಅಳೀನ್ದು/ಸೊಸಿದೋ ಹೆಸ್ರು ಹೇಳ್ಬೇಕು. ಯುಗಾದಿಕ್ಯಾ ಮೊದ್ಲು ಮಗೂಕ ಮುಂದ್ಯಾವ್ರ ಮಾಡ್ಬೇಕು. ಅವಾಗೆ ಹೆಸ್ರು ಇಕ್ರ್ಯಾ. ಮಗ್ವ ಮುಂದಲೆ ಕೂದ್ಲು ಮಾವುನು ಕತ್ತರಿಸಿ ಮುನೇಶ್ವರ್ನ್ಕ ಇಕ್ಕುಬೇಕು ಅಲ್ಲಾ, ಅದ್ಕ ಸುಶೀಲಿ ಗಂಡನ ಕೈಯಾಗ ಅದ್ವ ಮಾಡ್ಸು. ದ್ಯಾವ್ರಕ ನಮ್ಮನು ಕರುದ್ರು, ನಮ್ಮ ಕೈಯಾಗೇನೆ ಎಲ್ಲಾನು ಮಾಡಿಸಿದ್ರು ಅಂತಾನೂ ಅವುö್ರಕ ಅನ್ಸುತಾದಿ ಸಂಬಂಧಗ್ಳು ಸರಿಹೋತಾದಿ' ಅಂದ್ಲು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮಅಜ್ಜಿ ಮುಂದ್ಯಾವ್ರ ಹೆಂಗಿ ಮಾಡೋದು?’ ಅಂದ. ಅದಕ್ಕೆ ಎಂಟಮ್ಮ ಊರು ಆಶಿಕ್ಯಾ ಇರೋ ತೋಪಾಗ ಏಳು ಜನ ಅಕ್ಕ ತಂಗೀರ್ಕ ಗುಡಿ ಕಟ್ಟಿ, ಅದ್ರು ಮುಂದಿ ಮುನೇಶ್ವರ್ನು ನಿಲ್ಲಿಸಿ, ಜೋಡಿ ಕೋಳಿ ಕೋಯ್ದು ಪೂಜಿ ಮಾಡ್ಬೇಕು. ಈ ಪೂಜಿಕ್ಯಾ ಕಣಗಿಲಿ ಸೊಪ್ಪು, ನೆಕ್ಕಿಲಿ ಸೊಪ್ಪು ಬೇಕೇ ಬೇಕು. ಸ್ವಾದರ ಮಾಮುನು ಮಗೂಕ ಮುಂದಲಿ ಕೂದ್ಲು ಕತ್ತರ್ಸಿ ಮುನೇಶ್ವರ್ನಕ ಇಕ್ಕಿ ಪೂಜಿ ಮಾಡ್ತಾನಿ. ಮಕ್ಕಳ್ಕ ಮುಂದ್ಯಾವ್ರ ಮಾಡ್ಸುದೀರಾ ಇದ್ರೆ ತೊಂದಿರಿ ಆತಾದಿ. ಮಗೂಕ ಮೊದಲು ದ್ಯಾವ್ರ ಇದು. ನಿನ್ಕೂ ಈ ದ್ಯಾವ್ರವ ಉಗಾದಿ ಬಂದುಬುಡುತು ಅಂತ ಮೂರು ದಿನ ಮುಗ್ವುಕೇ ಮಾಡಿದ್ರಿ' ಅಂದ್ಲು. ಎಂಟಮ್ಮ ಎಲ್ಲರ ಹತ್ತಿರ ಬಾಡು ಚೀಟಿಯ ಕಾಸುಗಳನ್ನು ತೆಗೆದುಕೊಂಡು ಬರೆದುಕೊಂಡಳು. ಅರುಣಪ್ಪ ಲೇಟಾಗಿ ಬಾಡು ಚೀಟಿ ಕಟ್ಟಲು ಬಂದ. ಎಂಟಮ್ಮ ಅರುಣಪ್ಪನನ್ನು ನೋಡಿಯಾಕೋ ಅರುಣ ಮನೆ ಒಳಕ್ಯಾ ಬರದೀರಾ ಅಟ್ಯಾಗ್ಯಾ ಇದ್ಯಾ? ಒಳಿಕ್ಯಾ ಬಾ’ ಅಂದ್ಲು. ಅದಕ್ಕೆ ಅರುಣಪ್ಪ ಎಂಟಕ್ಕೂ ನಾಚಪಲ್ಲಿನಾಗ ನಮ್ಮ ಮುನೇಶನೋರು ಅಪ್ಪುನು ಕರೋನಾ ಬಂದು ಸತ್ತೋಗಿ ಬುಟ್ನು ಪಾಪ. ಸಾವ್ಕ ಹೋಗಿದ್ನಿ. ಕರೋನಾ ಬಂದು ಸತ್ತೋದ್ನು ಅಂತ ಯಾರೂ ಹತ್ರಾನೇ ಬರಿಲ್ಲ. ನಾನೇ ಚಟ್ಟ ಚನ್ನಾಗಿ ಕಟ್ಟಿದ್ನಿ. ಎಂಟೇಸುನು ಬಿದ್ರು ಬೊಂಬುಗ್ಳು, ನೆಲ್ಲು ಹುಲ್ಲು, ಸಾವು ಸಾಮಾನು ತಂದ. ಇಬ್ಬರೂ ಸೇರಿ ಸಾಂಗ್ವಿ ಮಾಡಿದ್ರಿ. ಈವಾಗೆ ಬಂದ್ವಿ ಎಂಟಕ್ಕೂ, ಇನ್ನೂ ನೀರು ಅಟ್ಟಂದಿಲ್ಲ ಅದ್ಕೆ ಮನ್ಯಾಕ ಬರಲ್ಲ' ಅಂದ. ಎಂಟಮ್ಮಹೋಗಲಿ ಬುಡು ಅರುಣಪ್ಪ ನಿನ್ಕ ಪುಣ್ಯ ಬತ್ತಾದಿ. ಕರೋನಾ ಬಂದು ಸತ್ತೋದ್ರೆ ಜನ ಬಲೇ ಕೆಟ್ಟುದಾಗಿ ನೋಡ್ತಾರಿ. ನೀನು ಹೋಗಿ ಸಾಂಗ್ವಿ ಮಾಡಿದ್ಯಾ, ತಣ್ಣುಗ ಕಳಿಸಿಕೊಟ್ಟ್ಯಾ, ಹೋಗ್ಲಿ ಬುಡಪ್ಪ ನೀನು ತಣ್ಣಗಿರು’ ಅಂತ ಹೇಳಿ ಅರುಣಪ್ಪನಿಂದ ಬಾಡು ಚೀಟಿಕಾಸು ತೆಗೆದುಕೊಂಡಳು.
ಮಂಜಮ್ಮನು ಸರಿ ಎಂಟಕ್ಕೂ ನಾನು ಬತ್ತೀನಿ. ನಾಳಿ ಎರ್ಗಿ ಸಾಂಗ್ವಿಕ್ಯಾ ಎಲ್ರೂ ಬನ್ರೆ' ಎಂದು ಹೇಳಿ ಹೊರಟಳು. ಭೀಮ ಇದ್ದುಕಂಡುಆ ರ‍್ರೆ ರ‍್ರೆ ಅಕ್ಕೋ.. ನಾನೂ ಬತ್ತೀನಿ’ ಅಂತ ಜೋರಾಗಿ ಕೂಗಿದ. ಎಲ್ಲಿ ಏನು ಸಿಗುತ್ತೆ ಅಂತ ಕಾಯುವ ತಿಂಡಿಪೋತ ಜಾಣ ಭೀಮನ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಹೀಗೆ ಎಂಟಮ್ಮನ ಮನೆಗೆ ಚೀಟಿ ಕಟ್ಟೋಕೋ, ಎಲೆ ಅಡಿಕೆ ಹಾಕೋಕೋ, ಊಟ ಆದಮ್ಯಾಲೆ ಮಾತುಗಳು ಹೇಳೋಕೋ, ಏನಾದರೂ ಸಮಸ್ಯೆ ಆದರೆ ಅದರ ಕುರಿತು ಮಾತಾಡೋಕೋ ಕೇರಿಜನ ಸೇರುತ್ತಲೇ ಇರುತ್ತಾರೆ. ಹರಟೆ, ಮಾತು ಕಥೆಗಳು ಇಲ್ಲಿ ಮಾಮೂಲು.
ಎಂಟಮ್ಮನ ಮನೆಯ ಮಾತುಕಥೆಗಳಲ್ಲಿ ಹೊಡೆದು ಹೋದ ಅದೆಷ್ಟೋ ಸಂಬಂಧಗಳು ಒಂದಾಗ್ತಾ ಇದ್ದುವು. ಹರಿದ ಅದೆಷ್ಟೋ ಮನಸ್ಸುಗಳು ಕೂಡುತ್ತಿದ್ದುವು.

