ಸಾಂಸ್ಕೃತಿಕ ಆಚರಣೆಗಳು – ಮದುವೆ

ಮಾದಿಗ ಜಾತಿಗಳಲ್ಲಿ ಜಾರಿಯಲ್ಲಿರುವ ಜೀವನಾವರ್ತನಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ ಮತ್ತು ಜೀವಪರ ಪ್ರಜ್ಞೆಯನ್ನು ಕಾಣಬಹುದು.
ಋತುಮತಿ ಆಚರಣೆ:
ಹೆಣ್ಣುಮಕ್ಕಳು ಮೊದಲಸಲ ಮುಟ್ಟಾಗುವ ಸಂದರ್ಭದಲ್ಲಿ ಮಾಡುವ ಆ ಆಚರಣೆಯನ್ನು ಉತ್ಸಾಹ, ಸಂಭ್ರಮಗಳಿಂದ ಮಾಡಲಾಗುತ್ತದೆ. ಹುಡುಗಿ ಋತುಮತಿಯಾದ ಗಳಿಗೆ ಶುಭವೋ ಅಶುಭವೋ ಎಂದು ತಿಳಿದುಕೊಳ್ಳುತ್ತಾರೆ. ಮೂರು, ಐದು, ಒಂಭತ್ತು ಅಥವಾ ಹದಿನಾರು ದಿನಗಳವರೆಗೆ ಋತುಮತಿಯಾದ ಹುಡುಗಿಯನ್ನು ಮನೆಯ ಹೊರಗೆ ಗುಡಿಸಲು ಹಾಕಿ ಕೂರಿಸುತ್ತಾರೆ. ಚಿಕ್ಕಮಕ್ಕಳು ಅವರೊಂದಿಗೆ ಜೊತೆಯಲ್ಲಿ ಇರುತ್ತಾರೆ. ಋತುಮತಿಯಾದ ಹುಡುಗಿಯ ಸೋದರಮಾವ ಅತ್ತಿಸೊಪ್ಪು, ಸಕ್ಲಿಸೊಪ್ಪು, ಅಂಕಲೆಸೊಪ್ಪು, ಆಲದಸೊಪ್ಪು ಹೀಗೆ ಒಂಬತ್ತು ಥರದ ಸೊಪ್ಪುಗಳಿಂದ ಮನೆಯ ಹೊರಗೆ ಗುಡಿಸಲು ಹಾಕಿಕೊಡಬೇಕು. ಕೆಲವು ಕಡೆ ಹೊಂಗೆ ಕೊಂಬೆಗಳಿಂದ ಗುಡಿಸಲು ಹಾಕುವ ಪದ್ಧತಿ ಇದೆ. ಕೆಲವು ಕಡೆ ಹುಡುಗಿಯನ್ನು ಕೂರಿಸಿದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಬ್ಬರಿ ಬಟ್ಟಲುಗಳನ್ನು ಇಡುತ್ತಾರೆ. ಅದರೊಳಗೆ ನಾಟಿ ಮೊಟ್ಟೆ, ಎಣ್ಣೆ, ತುಪ್ಪ ಸೇರಿಸಿ ಹುಡುಗಿಯ ಬಾಯಿಗೆ ವರಸೆಯಲ್ಲಿ ಮಾವನಾದವನು ಹಾಕುತ್ತಾನೆ. ಬೆಲ್ಲವನ್ನೂ ಹಾಕುತ್ತಾನೆ. ಕೊಬ್ಬರಿ ಚಿಪ್ಪನ್ನು ಹುಡುಗಿಯ ತಲೆಗೆ ಒತ್ತಿ ಹೊಡೆಯುತ್ತಾನೆ. ಗುಡಿಸಲು ಹಾಕಿ ಎರಡು ದಿನ ಕಳೆದು ಮೂರನೆ ದಿನ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ಸೋದರಮಾವ ಪೂಜೆ ಮಾಡಿ ಕೋಳಿ ಕೊಯ್ದು ಹುಡುಗಿಯನ್ನು ಕೂರಿಸಿದ ಜಾಗದಲ್ಲಿ ಕೋಳಿ ತಲೆಯನ್ನು ಹೂಳಿ, ಗುಡಿಸಲನ್ನು ಕಿತ್ತಾಕುತ್ತಾನೆ. ಕೆಲವು ಕಡೆ ಮೂರನೆಯ ದಿನ ಗುಡಿಸಲು, ಹುಲ್ಲು, ಹುಡುಗಿ ಹಾಕಿಕೊಂಡ ಬಟ್ಟೆಯನ್ನೆಲ್ಲ ಸುಡುತ್ತಾರೆ.
ಹುಡುಗಿಯ ಅತ್ತೆ ನೀರು ಹಾಕಿ, ಅರಿಶಿಣ ಹಚ್ಚಿ ಮನೆ ಒಳಗೆ ಭತ್ತದ ಹುಲ್ಲನ್ನು ಹಾಸಿ ಅದರ ಮೆಲೆ ಬಿಳಿ ಬಟ್ಟೆ ಹಾಸಿ ಕೂರಿಸುವ ಪದ್ಧತಿಯೂ ಇದೆ.ಕುಸಕ್ಕಿ ಅನ್ನ, ತುಪ್ಪ, ತಂಬಿಟ್ಟು, ಚಿಗಳಿ ಉಂಡೆ ತಿನ್ನಿಸುತ್ತಾರೆ.ದಿನ ಬಿಟ್ಟು ದಿನ ಕೋಳಿಕೊಯ್ದು ಸಾರು ಮಾಡಿ ಹುಡುಗಿಗೆ ಊಟ ಮಾಡಿಸುತ್ತಾರೆ.ದಿನವೂ ಅತ್ತೆ, ಮಾವ, ಚಿಕ್ಕಮ್ಮ ಹೀಗೆ ನೆಂಟರಿಷ್ಟರು ಹುಡುಗಿಗೆ ಹಣ್ಣುಗಳು ಮತ್ತು ಸಿಹಿ ತಿನಿಸುಗಳನ್ನು ತಂದು ಕೊಡುತ್ತಾರೆ; ವಸಗೆ ಹಾಕುತ್ತಾರೆ; ಆರತಿ ಮಾಡಿ ಹಾಡು ಹೇಳುತ್ತಾರೆ.
ತಾಯಿಮನೆಯ ದೊಡ್ಡ ವಸಗೆ ಹಾಕಿ ಹುಡುಗಿಯ ಸೋದರತ್ತೆಯಿಂದ ಹುಡುಗಿಗೆ ಮಡಿಲು ತುಂಬಿಸಿ, ಆರತಿ ಮಾಡಿ ಸ್ನಾನ ಮಾಡಿಸಿ ಹುಡುಗಿಯನ್ನು ಒಳಗೆ ಕರೆದುಕೊಳ್ಳುತ್ತಾರೆ. ಹಬ್ಬದಂತೆ ಮಾಡಿ ಔತಣ ಮಾಡುತ್ತಾರೆ. ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿರುವವರೂ ಸಹ ಹದಿಮೂರು ದಿವಸ ಹೊರಗಡೆ ಇರಿಸಿ, ಸ್ನಾನ ಮಾಡಿಸಿ, ಸೋದರಮಾವನ ಕೈಲಿ ಶಾಸ್ತ್ರ ಮಾಡಿಸುತ್ತಾರೆ.ಗೂಡು ಹಾಕಿ ಕೂರಿಸುವುದು, ಮಡಿಲು ತುಂಬುವುದು, ಮಾವನ ಕೈಲಿ ಹಾರ ಹಾಕಿಸುವ ಆಚರಣೆಗಳನ್ನು ಮಾಡುತ್ತಾರೆ.
ಫಲವಂತಿಕೆ, ಮರುಸೃಷ್ಟಿಯ ಸಂಕೇತವಾಗಿ ಋತುಮತಿಯಾಗುವುದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ಆಚರಣೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾಗಿರುವುದು ಮಾತೃಪ್ರಧಾನ ಕುಟುಂಬದ ಕುರುಹಾಗಿದೆ.

ಗಂಡಸು ಹಾಕುತ್ತಿರುವ ವಿವಿಧ ಸೊಪ್ಪಗಳ ಕೊಂಬೆಗಳ ಗುಡಿಲು. ಬಳಸುವ ಮರದ ಎಲೆ-ಕೊಂಬೆ-ಹೂಗಳು ಕಾಣುವಂತಿರಬೇಕು

ಮದುವೆ:
ಗಂಡು-ಹೆಣ್ಣು ಕೂಡಿ ಬದುಕುವುದನ್ನು ಅಧಿಕೃತಗೊಳಿಸುವ ಮದುವೆಯು ಬಹುಮುಖ್ಯ ಸಾಮಾಜಿಕ ಸಂಸ್ಥೆಯಾಗಿದೆ. ಜಾತಿ ಪ್ರಧಾನವಾದ ಭಾರತೀಯ ಸಮಾಜದಲ್ಲಿ ಜಾತಿಯೊಳಗಡೆ ಮದುವೆಯಾಗುವುದು ಜಾತಿವ್ಯವಸ್ಥೆಯನ್ನು ಉಳಿಸುವ ಬಹುಮುಖ್ಯ ನಿಯಮವಾಗಿದೆ. ಅದನ್ನು ಜಾತಿಶ್ರೇಣಿಯಲ್ಲಿರುವ ಎಲ್ಲ ಜಾತಿಗಳು ಅನುಸರಿಸುತ್ತವೆಯಾದರೂ ತಳಜಾತಿಗಳಲ್ಲಿ ವಿವಾಹದ ಅರ್ಥ ಮತ್ತು ಆಚರಣೆಗಳಲ್ಲಿನ ಭಿನ್ನತೆಯಲ್ಲಿ ಕಾಣಬಹುದಾಗಿದೆ.

ಈ ಭಿನ್ನತೆಯನ್ನು ಗುರುತಿಸುತ್ತಾ ಸ್ತ್ರೀವಾದಿ ವಿಮರ್ಶಕಿ ಆರ್.ಸುನಂದಮ್ಮ ಅವರು ಹೇಳುವ ಮಾತುಗಳಿಲ್ಲಿ ಉಲ್ಲೇಖಾರ್ಹ. “…ವೈದಿಕ ಹಾಗೂ ಅವೈದಿಕರಲ್ಲಿ ವಿವಾಹದಲ್ಲಿನ ಆಚರಣೆಗಳು ಭಿನ್ನವಾಗಿದ್ದವು. ಅವು ಸಂಕೇತಿಸುವ ಅರ್ಥಗಳು ಭಿನ್ನವಾಗಿದ್ದವು. ಅವೈದಿಕರಿಗೆ ವಿವಾಹವು ಜೀವಿಗಳನ್ನು ಮುಂದುವರೆಸಿಕೊಂಡು ಹೋಗುವ ಸಾಧನ ಹಾಗೂ ಪಿತೃತ್ವದ ಅಧಿಕೃತತೆ ಸ್ಥಾಪಿಸಲು ಮಾಡಿಕೊಂಡ ಸಂಸ್ಥೆ ಮಾತ್ರವಾಗಿದೆ. ಆದರೆ ವೈದಿಕರಲ್ಲಿ ಅದಕ್ಕೊಂದು ಧಾರ್ಮಿಕ ಉದ್ದೇಶವಿದೆ. ಒಬ್ಬ ತಂದೆ ಮಗಳನ್ನು ಕನ್ಯಾದಾನ ಮಾಡುವ ಮೂಲಕ ಕನ್ಯಾಸೆರೆ ಬಿಡಿಸಿ ಮೋಕ್ಷ ತಲುಪಿದರೆ, ವರ ತಾನು ವಿವಾಹವಾಗಿ ತನ್ನ ವಂಶವನ್ನು ಮುಂದುವರೆಸಿಕೊಳ್ಳುವುದರ ಜೊತೆಗೆ ಪಿತೃಗಳಿಗೆ ಮೋಕ್ಷವನ್ನು ಪ್ರಾಪ್ತವಾಗಿಸುವ ಧಾರ್ಮಿಕ ಶ್ರದ್ಧೆಯಾಗಿದೆ. ವೈದಿಕರಿಗೆ ಮೋಕ್ಷಹೊಂದುವುದು ಅತ್ಯಂತ ಕಟ್ಟಕಡೆಯ ಉದ್ದೇಶವಾಗಿದೆ. ಅವೈದಿಕರಿಗೆ ಮತ್ತೆಮತ್ತೆ ಉತ್ತಮ ಜನ್ಮ ಪಡೆಯುವ ಉದ್ದೇಶವಾಗಿದೆ”. (ಆರ್.ಸುನಂದಮ್ಮ:೬೮:೨೦೧೭)

ಅಕ್ಷತೆಗೆ ವೈದಿಕರು ಬಳಸುವ ಅಕ್ಕಿ ಮತ್ತು ಅವೈದಿಕರು ಬಳಸುವ ಭತ್ತವನ್ನು ಒಂದು ಉದಾಹರಣೆಯಾಗಿ ನೋಡಬಹುದು. ಅಕ್ಕಿಯನ್ನು ಬಿತ್ತಿ ಬೆಳೆಯಲಾಗದು, ಬಿತ್ತಿ ಬೆಳೆಯುವ ಭತ್ತ ಮರುಹುಟ್ಟಿನ ಸಂಕೇತವಾಗಿದೆ. ಬಹುಮುಖ್ಯವಾದ ಭಿನ್ನತೆಯನ್ನು ಸಾಕ್ಷಿಯಲ್ಲಿ ಕಾಣಬಹುದು. ಉರಿವ ಅಗ್ನಿಸಾಕ್ಷಿಯಾಗಿ ಸಪ್ತಪದಿತುಳಿಯುವುದು ವೈದಿಕರ ಮದುವೆಯ ಬಹುಮುಖ್ಯ ಆಚರಣೆಯಾಗಿದೆ. ಮಾದಿಗರು ಸೇರಿದಂತೆ ಅನೇಕ ತಳಜಾತಿಗಳಲ್ಲಿ ಜೀವಜಲವಾದ ನೀರಿನ ಸಾಕ್ಷಿಯಾಗಿ ಧಾರೆಯನ್ನು ಮಾಡಲಾಗುತ್ತದೆ.

ಮಾದಿಗ ಜಾತಿಯಲ್ಲಿ ಮದುವೆಯು ಬಹುಮುಖ್ಯ ಆಚರಣೆಯಾಗಿದೆ. ಹಿರಿಯರು ಪೂಜಾರಿಯ ಬಳಿ ಹೋಗಿ ಹುಡುಗ ಮತ್ತು ಹುಡುಗಿಯ ಹೆಸರು ಬಲ ಕೂಡಿಬರುತ್ತದೆಯೇ ಎಂಬುದನ್ನು ನೋಡುತ್ತಾರೆ. ನಂತರ ಮದುವೆ ವಿಷಯ ಪಕ್ಕಾ ಮಾಡಿಕೊಳ್ಳಲು ವೀಳ್ಯದ ಶಾಸ್ತ್ರ ಮಾಡುತ್ತಾರೆ. ವೀಳ್ಯವನ್ನು ಪರಸ್ಪರ ಬದಲಾಯಿಸಿಕೊಳ್ಳುವುದೆಂದರೆ ಮುರಿಯಲಾಗದ ಒಪ್ಪಂದ ಮಾಡಿಕೊಂಡಂತೆ. ಪೂಜಾರಪ್ಪನ ಹತ್ತಿರ ಮದುವೆ ದಿನ ನಿಗದಿ ಮಾಡುವುದನ್ನು ಲಗ್ನ ಕಟ್ಟಿಸುವುದು ಎಂದು ಕರೆಯುತ್ತಾರೆ.

ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರ ಮಾಡುತ್ತಾರೆ.ಚಪ್ಪರ ಶಾಸ್ತ್ರದಲ್ಲಿ ಹೆಣ್ಣು ಮತ್ತು ಗಂಡಿನ ಮನೆಯವರಿಬ್ಬರೂ ತಮ್ಮ ಮನೆ ಮುಂದೆ ಚಪ್ಪರ ಹಾಕಿ, ಮಾವು, ನೇರಳೆ, ಏಳೆ ಮರದ ಕೊಂಬೆಗಳನ್ನು ಸೇರಿಸಿದ ಹಸೆ ಕಂಬ ನೆಡುತ್ತಾರೆ. ಅದಕ್ಕೆ ಅರಿಶಿನದ ಕೊಂಬು ಅಥವಾ ಅರಿಶಿನದ ದಾರದಲ್ಲಿ ನವಧಾನ್ಯಗಳನ್ನು ಕಟ್ಟುತ್ತಾರೆ. ಸೋದರಮಾವ ಕೊಂಬೆಗಳನ್ನು ತರುತ್ತಾನೆ. ಚಪ್ಪರಕ್ಕೆ ಬಾಳೆಗೊನೆ ಮತ್ತು ಎಳನೀರನ್ನು ಕಟ್ಟುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿನ ಕಡೆಯಿಂದ, ಗಂಡಿನ ಮನೆಯಲ್ಲಿ ಗಂಡಿನ ಕಡೆಯಿಂದ ಹಸೆ ಕಂಬಕ್ಕೆ ಪೂಜೆ ಮಾಡಿಸುತ್ತಾರೆ. ಮೂರು ಅಥವಾ ಐದು ಜನ ಮಹಿಳೆಯರಿಂದ ಭತ್ತ ಕುಟ್ಟಿಸುತ್ತಾರೆ. ಭತ್ತದಲ್ಲಿ ಹಸೆ ಚಿತ್ರವನ್ನು ಬರೆಯುತ್ತಾರೆ. ಚಿತ್ರದಲ್ಲಿ ಪಕ್ಷಿಗಳು, ಹೂ-ಹಣ್ಣು, ಮರಗಳನ್ನು ಬಿಡಿಸುತ್ತಾರೆ. ಈ ಚಿತ್ರವು ಗಂಡು-ಹೆಣ್ಣಿನ ದಾಂಪತ್ಯವು ಒಟ್ಟಾರೆ ಪರಿಸರದ ಅವಿಬಾಜ್ಯ ಭಾಗವೆಂಬುದನ್ನು ಸೂಚಿಸುತ್ತದೆ. ಹಸೆ ಚಿತ್ರದ ನಡುವೆ ಮಣೆ ಇರಿಸಿ ಮಣೆ ಮೇಲೆ ಗಂಡು-ಹೆಣ್ಣನ್ನು ಕೂರಿಸಿ ಅರಿಶಿಣ ಶಾಸ್ತ್ರ ಮಾಡುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿಗೆ, ಗಂಡಿನ ಮನೆಯಲ್ಲಿ ಗಂಡಿಗೆ ಎಣ್ಣೆ ಬೆರೆಸಿದ ಅರಿಶಿನವನ್ನು ಮುತ್ತೈದೆಯರಿಂದ ಮೂರರಿಂದ ಐದು ಬಾರಿ ಹಚ್ಚಿಸುತ್ತಾರೆ. ನಂತರ ಸ್ನಾನಮಾಡಿಸಿ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿಕೊಂಡು ಬಂದ ಮೇಲೆ ಹೆಣ್ಣಿನ ಸೋದರತ್ತೆ ಹೆಣ್ಣಿಗೆ ಕಾಲುಂಗುರ, ಬಳೆ ಹಾಕುವ ಬಳೆ ಶಾಸ್ತ್ರ ಮಾಡುತ್ತಾಳೆ. ಗಂಡಿಗೂ ಸಹ ಕಾಲುಂಗರ ಹಾಕುತ್ತಾರೆ ಮತ್ತು ಒಂದು ತಿಂಗಳ ಕಾಲ ಅದನ್ನು ಹಾಕಿಕೊಂಡಿರಬೇಕು. ಮದುವೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾದುದು.
ಬಳೆಶಾಸ್ತ್ರ ಮಾಡಿದ ಮೇಲೆ ಗದ್ದಿಗೆಶಾಸ್ತ್ರವನ್ನು ಮಾಡುತ್ತಾರೆ. ಕಂಬಳಿಯನ್ನು ಮಡಿಸಿಟ್ಟು ಅದರ ಮೇಲೆ ಹೊಂಬಾಳೆ ಇರಿಸಿದ ಕಳಶ ಇಡುವುದನ್ನು ಗದ್ದಿಗೆ ಎನ್ನುತ್ತಾರೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಕೆಲವು ಕಡೆ ಕಳಶಕ್ಕೆ ವೀಳ್ಯದೆಲೆ, ತೆಂಗಿನ ಕಾಯಿಯನ್ನು ಇಡುತ್ತಾರೆ. ಈ ಶಾಸ್ತ್ರದಲ್ಲಿ ತಾಯಿ ವಧುವಿಗೆ ತಾಯಿ ಮನೆಯ ಮಾಂಗಲ್ಯವನ್ನು ಕಟ್ಟುತ್ತಾಳೆ. ಹತ್ತಿರದ ಬಾವಿಗೆ ಕರೆದುಕೊಂಡುಹೋಗಿ ಗಂಗೆಪೂಜೆ ಮಾಡಿಸುತ್ತಾರೆ. ಆ ನಂತರ ಹೆಣ್ಣು ಮತ್ತು ಗಂಡಿನ ಕೈಗೆ ಕಂಕಣ (ವೀಳ್ಯದೆಲೆ ಕಟ್ಟಿದ ಅರಿಶಿಣದಾರ) ಕಟ್ಟುತ್ತಾರೆ. ನಂತರ ಅರಣಿ ಪೂಜೆ ಮಾಡುತ್ತಾರೆ. ಚಿತ್ರ ಬರೆದ ಮೂರು ಮಣ್ಣಿನ ರ‍್ವಿಯಲ್ಲಿ ನೀರುತುಂಬಿ ಮೇಲಿನ ಮುಚ್ಚಳದಲ್ಲಿ ದೀಪವನ್ನು ಹಚ್ಚುತ್ತಾರೆ. ರ‍್ವಿಯ ಅಡಿಯಲ್ಲಿ ಒಣಗಿದ ಬೆರಣಿಯನ್ನು ಪುಡಿಮಾಡಿ ಅದರಲ್ಲಿ ಮೊಳಕೆ ಬರಿಸಿದ ಮೂರು ಥÀರದ ಧಾನ್ಯಗಳನ್ನು ಹಾಕಿಡುತ್ತಾರೆ. ಈ ದೀಪವನ್ನು ಹಚ್ಚುವುದು ಬಳೆ ಇಲ್ಲದ ಅಂದರೆ ವಿಧವೆ ಮಹಿಳೆ. ದೀಪ ರಾತ್ರಿ ಎಲ್ಲ ಆರದಂತೆ ನೋಡಿಕೊಳ್ಳುತ್ತಾರೆ. ನಂತರ ಮನೆದೇವರ ಪೂಜೆ ಮಾಡಿಸುತ್ತಾರೆ.

ಕೆಲವು ಕಡೆ ಭತ್ತ ಕುಟ್ಟಿ ಕರಿಕಂಬಳಿ ಮೇಲೆ ಸೂರ್ಯ ಚಂದ್ರ ನೇಗಿಲು ತರಹದ ಚಿತ್ರಗಳನ್ನು ಬರೆಯುತ್ತಾರೆ. ಕಳಶ ಪೀಟೆಯನ್ನು (ಪೀಠ) ಇಟ್ಟು ಅದರ ಮೇಲೆ ಕಂಚಿನ ತಟ್ಟೆ ಇಟ್ಟು ಅದರ ತುಂಬ ಒಣಗಿದ ಗೊಬ್ಬರ ಸರಿದು ಅದರ ಮೇಲೆ ಕಳಶವಿಡುತ್ತಾರೆ. ಅರಣಿಪೂಜೆ ಮಾಡಿ ಅದರ ಅಡಿಯಲ್ಲಿ ಮಧುವಿನಿಂದ ಗೊಬ್ಬರ ಹರಡಿಸಿ ನವಧಾನ್ಯಗಳನ್ನು ಮೊಳಕೆ ಹಾಕಿಸುತ್ತಾರೆ.

ಮೂರು ರೀತಿಯ ಮರದ ಕೊಂಬೆಗಳನ್ನು ಸೇರಿಸಿ ಹಸಿ ಕಂಬ ಮಾಡಿ ನೆಡುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಮರಗಳು ಬದಲಾಗುವುದಾದರೂ ಸಾಮಾನ್ಯವಾಗಿ ಬಸರಿ/ಹನಗಳ್ಳಿ/ಹುಣತಿ/ಆಲ/ಅತ್ತಿ ಮರದ ಕೊಂಬೆಗಳನ್ನು ಬಳಸುತ್ತಾರೆ. ಮುಂದೆ ತಾಳಿಶಾಸ್ತ್ರಮಾಡುತ್ತಾರೆ. ಮುಹೂರ್ತದ ದಿನ ವಧು-ವರರ ಕಡೆಯ ಹಿರಿಯ ಗಂಡಸರು ಗದ್ದಿಗೆ ಹಾಕಿ ಕಳಶ ಇಡುತ್ತಾರೆ. ‘ನಿಮ್ಮ ಮಗಳನ್ನು ನಮ್ಮ ಮನೆಗೆ ತರ್ತೀವಿ’ ಅಂತ ಹೆಣ್ಣಿನ ಮನೆಯವರಿಗೆ ಗಂಡಿನ ಮನೆಯವರು ಇಪ್ಪತ್ತೈದು ರೂಪಾಯಿ ಕೊಡುತ್ತಾರೆ. ದೇವರಿಗೆ ಪೂಜೆ ಮಾಡಿ ಮೊದಲು ಯಜಮಾನರುಗಳಿಗೆಲ್ಲ ಕೈಮುಗಿದು, ಎಲ್ಲರ ಕೈ ಮುಟ್ಟಿಸಿ ಆಶೀರ್ವದಿಸಿದ ತಾಳಿಯನ್ನು ಕಟ್ಟಲು ಅನುಮತಿ ಕೇಳಿ ಗಂಡು ಹೆಣ್ಣಿನ ನಡುವಿನ ಅಂತರಪಟ (ಪರದೆ) ತೆಗೆದು ಗಂಡು ಹೆಣ್ಣಿನ ಕೈಲಿ ಪರಸ್ಪರ ಜೀರಿಗೆ ಹಾಕಿಸಿದ ನಂತರ ಗಂಡಿನ ಕೈಲಿ ಹೆಣ್ಣಿನ ಕುತ್ತಿಗೆಗೆ ಕಟ್ಟಿಸುತ್ತಾರೆ. ತಾಳಿ ಕಟ್ಟಿಸಿದ ನಂತರ ಧಾರೆಶಾಸ್ತ್ರಮಾಡುತ್ತಾರೆ. ತಾಳಿ ಶಾಸ್ತ್ರವಾದ ಮೇಲೆ ತಾಯಿ-ತಂದೆ ಮತ್ತು ಹಿರಿಯರು ಮೊದಲು ಹಸೆ ಕಂಬಕ್ಕೆ ಹಾಲಿನ ಧಾರೆ ಎರೆದು ನಂತರ ಗಂಡಿನ ಬೊಗಸೆಯಲ್ಲಿ ಹೆಣ್ಣಿನ ಬೊಗಸೆ ಇರಿಸಿ ಅದರಲ್ಲಿ ತೆಂಗಿನಕಾಯಿ ಮೇಲೊಂದು ವೀಳ್ಯದೆಲೆ ಅದರ ಮೇಲೊಂದು ಕಾಸು ಇರಿಸಿ ಧಾರೆ ಎರೆಯುತ್ತಾರೆ. ನಂತರ ಮದುವೆಗೆ ಬಂದ ನೆಂಟರೆಲ್ಲರೂ ಧಾರೆ ಎರೆಯುತ್ತಾರೆ. ಕೋಲಾರದ ಕಡೆಯಲ್ಲಿ ವೀಳ್ಯದ ಎಲೆಯನ್ನು ಆಲಿಕೆಯಂತೆ ಸುರುಳಿ ಸುತ್ತಿ, ಆ ಸುರುಳಿಯನ್ನು ಬೆರಳುಗಳ ಸಂದಿಯಲ್ಲಿ ಸಿಕ್ಕಿಸಿ ಅದರೊಳಗೆ ಹಾಲನ್ನು ಹಾಕುವ ಆಚರಣೆ ಜಾರಿಯಲ್ಲಿದೆ. ಧಾರೆಶಾಸ್ತ್ರ ಮುಗಿಯುವವರೆಗೂ ಮದುಮಕ್ಕಳು ಉಪವಾಸವಿರಬೇಕು. ಮದುವೆ ಮುಗಿದ ಮೇಲೆ ಅರಣಿ ಪೂಜೆಯಲ್ಲಿಟ್ಟ ಪೈರುಗಳನ್ನು ಹೆಣ್ಣಿನ ತಲೆಯ ಮೇಲೆ ಹೊರಿಸಿ ದಾರಿ ಉದ್ದಕ್ಕೂ ಚೆಲ್ಲಿಸಿಕೊಂಡು ಅತ್ತಿ ಮರಕ್ಕೆ ಹಾಕಿಸುತ್ತಾರೆ. ಮದುವೆಗೆ ಬಂದ ಬಂಧುಗಳಿಗೆ ಸಿಹಿ ಊಟ ಹಾಕುತ್ತಾರೆ. ಮಾರನೆಯ ದಿನ ಮಾಂಸದ ಊಟ ಹಾಕುತ್ತಾರೆ. ಹೆಣ್ಣು ಗಂಡು ಇಬ್ಬರ ಮುಂದೆಯೂ ಐದು ಅಥವಾ ಒಂಬತ್ತು ತಟ್ಟೆಗಳಲ್ಲಿ ವಿವಿಧ ರಿತಿಯ ಹಣ್ಣು, ಹೂ ಮತ್ತು ತಿಂಡಿಗಳನ್ನು ಇಟ್ಟು ಆರತಿ ಮಾಡುವ ಒಸಗೆ ಶಾಸ್ತ್ರ ಮಾಡುತ್ತಾರೆ. ಎರಡನೆ ದಿನ ಮದುಮಕ್ಕಳಿಬ್ಬರೂ ಹುತ್ತಕ್ಕೆ ಪೂಜೆ ಮಾಡಿಕೊಂಡು ಬರುತ್ತಾರೆ. ಹೆಣ್ಣು ಗಂಡಿನ ಮನೆಗೆ ಮೂರುಸಲ ಹೋಗಿಬಂದ ಮೇಲೆ ಸೋಬನವನ್ನು ಮಾಡುತ್ತಾರೆ.

ಗಂಗೆಪೂಜೆ ಮದುವೆಯ ಮುಖ್ಯ ಆಚರಣೆಯಾಗಿದೆ. ವಿಶೇಷವಾಗಿ ಮಾದಿಗ ಸಮುದಾಯದಲ್ಲಿ ಗಂಗೆಯನ್ನು ಮನೆಯ ಮಗಳೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಮಾದಿಗರ ಕೇರಿಯ ಮಧ್ಯದಲ್ಲಿ ಇರುವ ಗಂಗಮ್ಮನನ್ನು ಎಲ್ಲರೂ ಪೂಜಿಸುತ್ತಾರೆ.
ಮದುವೆಯ ಇನ್ನಿತರ ಆಚರಣೆಯಲ್ಲಿರುವ ಮರದ ಕೊಂಬೆಗಳು, ಗಂಗೆಪೂಜೆ, ಹೂ, ಹಣ್ಣು, ಪಕ್ಷಿಗಳನ್ನು ಒಳಗೊಂಡ ಹಸೆ ಚಿತ್ರಗಳೆಲ್ಲವೂ ಗಂಡು-ಹೆಣ್ಣು ಕೂಡಿಬಾಳುವುದು ಪ್ರಕೃತಿಯ ಒಂದು ಕೊಂಡಿಯಾಗಿ ಎಂಬುದನ್ನು ಸೂಚಿಸುತ್ತದೆ. ಮಾತು ಕೊಡುವುದಕ್ಕೆ ವೀಳ್ಯದೆಲೆ ಸಾಕ್ಷಿಯಾಗಿರುವುದು, ಕರಿಕಂಬಳಿಯ ಗದ್ದಿಗೆಯ ಮೇಲಿಡುವ ಹೊಂಬಾಳೆಯ ಕಳಶ, ಮಣ್ಣಿನ ಮಡಕೆ, ಮರುಸೃಷ್ಟಿಯ ಸಂಕೇತವಾದ ಧಾನ್ಯಗಳ ಮೊಳಕೆ ಎಲ್ಲವೂ ಚಲನಶೀಲ ಪ್ರಕೃತಿಯ ಸಂಕೇತಗಳೇ ಆಗಿವೆ. ಮದುವೆಯಲ್ಲಿ ಬಳಸುವ ಕರಿಕಂಬಳಿ ಮತ್ತು ಕರಿಬಳೆಗಳು ಶುಭದ ಸಂಕೇತಗಳಾಗಿವೆ.
ವೈದಿಕರಲ್ಲಿ ಗಂಡ ತೀರಿಕೊಂಡ ಹೆಣ್ಣು ಅಮಂಗಳವಾದರೆ ಇಲ್ಲಿ ಗಂಡ ತೀರಿಹೋದ ಹೆಣ್ಣಿನ ಕೈಯಲ್ಲಿಯೇ ಮದುವೆ ಮುಗಿಯುವವರೆಗೂ ಆರದಂತೆ ಉರಿವ ದೀಪವನ್ನು ಹಚ್ಚಿಸುತ್ತಾರೆ. ವಿಧವೆ ಇಲ್ಲಿ ಅಶುಭಳಲ್ಲ, ಬಹಿಷ್ಕೃತಳಲ್ಲ. ದೀಪ ಬೆಳಕಿನ ಸಂಕೇತ. ಎಲ್ಲರನ್ನು ಬೆಳಕಿನಂತೆ ಶುಭವೆಂದು ಪರಿಭಾವಿಸುವುದು ಮಾನವೀಯ ಮೌಲ್ಯವೇ ಆಗಿದೆ.

ಹಟ್ಟಿಯ ಹಿರಿಯರು ಅಥವಾ ಸಮುದಾಯದ ಹಿರಿಯರು ಮದುವೆ ಮಾಡಿಸುತ್ತಾರೆ. ಮನೆಯಲ್ಲಿಯೇ ಮದುವೆ ಮಾಡುವುದು, ನೆಂಟರು, ಹಟ್ಟಿಯವರೇ ಸೇರಿ ಮದುವೆ ಕಾರ್ಯಗಳನ್ನು ಮಾಡುವುದು ಪರಿಶಿಷ್ಟ ಜಾತಿಗಳಲ್ಲಿ ಈಗಲೂ ಮುಂದುವರೆದುಕೊಂಡು ಬಂದಿದೆ. ಹಿಂದೆ ಇವರಲ್ಲಿ ಹೆಣ್ಣಿಗೆ ತೆರ ಕೊಡುವ ಪದ್ಧತಿ ಇತ್ತು. ಇಂದಿಗೂ ಸಾಂಕೇತಿಕವಾಗಿದೆ. ಮೇಲ್ಜಾತಿಗಳಲ್ಲಿ ಇರುವ ವರದಕ್ಷಿಣೆಯೂ ಇಂದು ಜಾತಿಶ್ರೇಣಿಯಲ್ಲಿನ ಕೆಳಜಾತಿಗಳಲ್ಲಿ ಜಾರಿಗೆ ಬಂದಿದೆ. ಓದಿರುವ ಹುಡುಗ, ಸರ್ಕಾರಿ ನೌಕರಿಯಲ್ಲಿರುವ ಹುಡುಗನೆಂದರೆ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರು ಹೇಳಿದರು. ಪುರೋಹಿತರು ಮದುವೆ ಮಾಡಿಸುವುದು ಸಹ ಜಾರಿಗೆ ಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ, ಬೌದ್ಧಧರ್ಮಕ್ಕೆ ಮತಾಂತರವಾಗಿರುವವರು ಸಹ ಹಿಂದಿನ ಹಲವಾರು ಆಚರಣೆಗಳನ್ನು ಇಟ್ಟುಕೊಂಡಿದ್ದಾರೆ.