‘ಸ್ಲಂಜಾಯಿಂಟ್ ಆಕ್ಷನ್ ಕಮಿಟಿ’ಯು ಮಲಬಾಚುವ ವಿಷಯವನ್ನು ಹೋರಾಟದ ಆದ್ಯತೆಯಾಗಿ ಪರಿಗಣಿಸಿದ್ದ ಸಂದರ್ಭದಲ್ಲಿಯೇ ಸವಣೂರು ಘಟನೆ ನಡೆದು ವಿಷಯದ ತುರ್ತನ್ನು ಮನವರಿಕೆ ಮಾಡಿಸಿತು. ೨೦೧೦ರಲ್ಲಿ ತಮ್ಮ ಮನೆ ಎತ್ತಂಗಡಿಯಾಗಲಿರುವುದರಿಂದ ಹತಾಶರಾದ ದಲಿತ ಕುಟುಂಬಗಳು ಸರ್ಕಾರ ಮತ್ತು ಮಾಧ್ಯಮದವರ ಗಮನ ಸೆಳೆಯಲು ಮಲದ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದರು. ಈ ಘಟನೆ ಪಿಯುಸಿಎಲ್-ಕ ಮಧ್ಯಂತರ ಸತ್ಯಶೋಧನ ವರದಿ ತಯಾರಿಸಲು ಕಾರಣವಾಯಿತಲ್ಲದೆ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕುರಿತ ಕೆಲಸವನ್ನು ತುರ್ತಾಗಿ ಮುಂದುವರೆಸುವಂತೆ ಮಾಡಿತು.
ಪೌರಕಾರ್ಮಿಕ ಚಳುವಳಿಯಲ್ಲಿ ಮ್ಯಾನ್ಹೋಲ್ ಕಾರ್ಮಿಕರ ಸಾವುಗಳ ಕುರಿತು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿರÀಲಿಲ್ಲ. ಪಿಯುಸಿಎಲ್ ೨೦೦೯ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಮ್ಯಾನ್ ಹೋಲ್ ಕಾರ್ಮಿಕರ ಸಾವುಗಳು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದಾಗ ಈ ವಿಷಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಈ ಮೊಕದ್ದಮೆಯಲ್ಲಿ ಪರ್ಯಾಯ ಕಾನೂನು ವೇದಿಕೆ ಸಂಸ್ಥೆಯ ವಕೀಲರುಗಳಾದ ಕ್ಲಿಫ್ಟನ್ ರೊe಼Áರಿಯೊ, ಮೈತ್ರೇಯಿ ಕೃಷ್ಣನ್ ಹಾಗೂ ರಘುಪತಿಯವರು ಪ್ರಮುಖ ಪಾತ್ರವಹಿಸಿದರು. ಹಿರಿಯ ವಕೀಲರಾದ ರವಿವರ್ಮಕುಮಾರ್ ಅವರು ಕೇಸಿನ ಪರವಾಗಿ ವಾದಿಸಿದರು. ಫೀರ್ಯಾದುದಾರರಾಗಿದ್ದವರು ಪಿಯುಸಿಎಲ್-ಕ ನ ಉಪಾಧ್ಯಕ್ಷ್ಯರಾಗಿದ್ದ ಪ್ರೊ. ವೈ.ಜೆ. ರಾಜೇಂದ್ರ ಅವರು.
ಮೊಕದ್ದಮೆ ಹೂಡುವ ಮುನ್ನ ಪಿಯುಸಿಎಲ್-ಕ ಮತ್ತು ಎಎಲ್ಎಫ್ ಸಂಸ್ಥೆಗಳು, ಹನ್ನೊಂದು ಮ್ಯಾನ್ಹೋಲ್ ಸಾವುಗಳ ಸತ್ಯಶೋಧನಾ ವರದಿಗಳನ್ನು ತಯಾರಿಸಿತ್ತು. ನಾಲ್ಕು ವರದಿಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗಿತ್ತು. ಘಟನೆ ಸಂಭವಿಸಿದ ಸಂದರ್ಭದಲ್ಲಿ ನಾಗರಿಕ ಸಮಾಜದ ಗುಂಪುಗಳು ಉಪಸ್ಥಿತಿ ಇದ್ದು ಸಂತ್ರಸ್ತರ ಕುಂಟುಂಬಗಳಿಗೆ ಪರಿಹಾರ ಸಿಗುವಂತೆ ಮಾಡಿದ್ದವು. ವರದಿಗಳ ತಯಾರಿಸಲು ಒಂದು ವರ್ಷಕಾಲ ಹಿಡಿದಿತ್ತು. ಆ ಅವಧಿಯಲ್ಲಿ ಮ್ಯಾನ್ಹೋಲ್ ಸಾವುಗಳ ಕುರಿತ ದಾಖಲಾತಿಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಈ ದಾಖಲಾತಿಯನ್ನು ಅಧಿಕಾರಶಾಹಿಯ ಅತ್ಯುನ್ನತ ಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದೆ ಮಂಡಿಸಲಾಯಿತು. ಕೆಲಸ ಮಾಡುವಾಗ ಕಾರ್ಮಿಕರು ಸಾಯದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು. ತಳಮಟ್ಟದಲ್ಲಿ ನಡೆಸಿದ ತನಿಖೆಗಳು ಸರ್ಕಾರ ನೀಡಲಾಗಿದೆ ಎಂದು ಹೇಳುವ ಸುರಕ್ಷಾ ಸಲಕರಣೆಗಳು ವಿಫಲಗೊಂಡಿರುವುದನ್ನು ಸಾಬೀತುಪಡಿಸಿದವು. ಸರ್ಕಾರದ ನೀತಿ ಮತ್ತು ಸರ್ಕಾರದ ಏಜೆನ್ಸಿಗಳು ತಮ್ಮದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ಮ್ಯಾನ್ಹೋಲ್ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಅಲಕ್ಷ್ಯಮಾಡಿದ್ದರು. ಒಂದು ವರ್ಷಕಾಲ ನಡೆಸಿದ ಸತ್ಯಶೋಧನಾ ವರದಿ ಆಧರಿಸಿ ಸರ್ಕಾರವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ಒತ್ತಾಯಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿತ್ತು.
ಮೊಕದ್ದಮೆ ಹೂಡಿದ್ದು ಕೊಂಚ ಮಟ್ಟಿಗಿನ ಯಶಸ್ಸನ್ನು ತಂದಿತು. ಕೋರ್ಟ್ ಹಲವಾರು ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದ್ದು ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಹೈಕೋರ್ಟ್ ಪರಿಣತರ ಸಮಿತಿಯನ್ನು ನೇಮಿಸಿ ಮೊಕದ್ದಮೆಯು ಎತ್ತಿರುವ ಹಲವಾರು ವಿಷಯಗಳನ್ನು ಅಧ್ಯಯನ ಮಾಡಲು ಹೇಳಿತು. ಫಿರ್ಯಾದುದಾರರು ನಾಮನಿರ್ದೇಶನ ಮಾಡಿದ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿಯನ್ನು ರಚಿಸಲಾಯಿತು. ಮತ್ತು ಈ ಪದ್ಧತಿಯನ್ನು ನಿವಾರಿಸುವ ಸಲಹೆಗಳನ್ನು ಸೂಚಿಸಲು ಕೋರಿತು. ಎಸ್.ಕೆ.ಕಾಂತಾ (ಮಾಜಿ ಕಾರ್ಮಿಕ ಸಚಿವರು), ಪ್ರೊ. ಜೋಗನ್ ಶಂಕರ್ (ಸಮಾಜಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ) ಅಳಕಟ್ಟಿ(ಕಾರ್ಮಿಕ ಸಂಘಟನೆ ಮುಖಂಡರು) ಅಂಬಣ್ಣ ಅರೋಲ್ಕರ್ (ದಲಿತ ಕಾರ್ಯಕರ್ತ ಮತ್ತು ಹಾಡುಗಾರ), ದು.ಸರಸ್ವತಿ (ಬರಹಗಾರರು ಮತ್ತು ಸಾಮಜಿಕ ಕಾರ್ಯಕರ್ತೆ)ವರು ಸಮಿತಿಯಲ್ಲಿದ್ದರು.
ಸಮಿತಿಯು ಹೈಕೋರ್ಟಿಗೆ ವರದಿಯನ್ನು ಸಲ್ಲಿಸಿದ ನಂತರ ಹೈಕೊರ್ಟು ಆದೇಶ ನೀಡಿ ಆರು ತಿಂಗಳೊಳಗಾಗಿ ಬೆಂಗಳೂರು ಜಲಮಂಡಳಿಯು ಯಂತ್ರಗಳನ್ನು ಒದಗಿಸಬೇಕು ಮತ್ತು ಕಾರ್ಮಿಕರನ್ನು ಮ್ಯಾನ್ಹೋಲ್ನೊಳಗೆ ಇಳಿಸಬಾರದು ಎಂದು ಹೇಳಿತು. ಮುಂದುವರೆದು, ಈ ಮೊಕದ್ದಮೆ ನಡೆಯುತ್ತಿರುವ ಸಂದರ್ಭದಲ್ಲಿ ಫೀರ್ಯಾದುದಾರರು ಗಮನಕ್ಕೆ ತಂದ ಸಾವಿನ ಪ್ರಕರಣಗಳಿಗೆ ಪರಿಹಾರ ನೀಡಲು ಆದೇಶಿಸಿತು.
ಪಿಯುಸಿಎಲ್-ಕ ಹೂಡಿದ್ದ ಸಾ.ಹಿ.ಮೊ.ಯ ಪರಿಣಾಮವಾಗಿ, ಅದೃಶ್ಯವಾಗಿ ಉಳಿದಿದ್ದ ಮ್ಯಾನ್ಹೋಲ್ ಕೆಲಸಗಾರರ ವಿಷಯವು ಬೆಳಕಿಗೆ ಬರಲು ಕೋರ್ಟು ವೇದಿಕೆಯಾಯಿತು. ಮೊದಲು ಸುದ್ದಿ ಪತ್ರಿಕೆಯಲ್ಲಿ ಮೂರು ಸಾಲಿನ ವರದಿಯಾಗಿ ಸಮಾಪ್ತಿಯಾಗುತ್ತಿದ್ದ ವಿಷಯವು ಸರ್ಕಾರದ ನೇರ ಗಮನಕ್ಕೆ ಬಂದಿತು. ಸರಣಿ ಮಧ್ಯಂತರ ಆದೇಶಗಳ ಮೂಲಕ ಕೋರ್ಟು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿತು. ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಆರಂಭಿಸಿತು. ಈ ಪ್ರಕ್ರಿಯೆ ಅದೆಷ್ಟು ನಿಧಾನವಾದದ್ದು ಎಂದರೆ ೨೦೦೯-೨೦೧೪ರವರೆಗೆ ವಿಷಯವನ್ನು ಕೋರ್ಟು ಅಂತಿಮ ವಾದಕ್ಕೆ ತರಲಿಲ್ಲ. ಸಫಾಯಿ ಕರ್ಮಚಾರಿ ಆಂದೋಲನ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಪಿಯುಸಿಲ್-ಕದ ದಾವೆಯನ್ನು ಹೈಕೋರ್ಟು ಡಿಸ್ಪೋಸ್ ಮಾಡಿತು. ಡಿಸ್ಪೋಸ್ ಮಾಡಲು ತೂರಿದ ಪ್ರಶ್ನೆ ಎಂದರೆ, ಇಂತಹ ಪ್ರಕರಣಗಳಲ್ಲಿ ಕೋರ್ಟಿನಿಂದ ನಿರೀಕ್ಷಿಸುವ ಪಾತ್ರವೇನು? ಎಂಬುದು. ಮ್ಯಾನ್ಹೋಲ್ ಕಾರ್ಮಿಕರ ಕುರಿತ ಪಿಯುಸಿಎಲ್-ಕ ಅವರ ಪ್ರಕರಣವು, ಸರಣಿ ಮಧ್ಯಂತರ ಆದೇಶಗಳ ಮೂಲಕ ಸರ್ಕಾರಕ್ಕೆ ತನ್ನ ಜವಾಬ್ದಾರಿ ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿದ ಹೋರಾಟದಿಂದಾಗಿ ಸಫಾಯಿ ಕರ್ಮಚಾರಿಗಳು ತಾರತಮ್ಯದ ವಿರುದ್ಧ ಹೋರಾಡಲು ಸಾಧ್ಯವಾಗಿದೆ. ವೇತನವನ್ನು ಪಡೆಯಲು ಹಾಗೂ ಸಂಘಟಿತರಾಗುವ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ; ಆತ್ಮಗೌರವವನ್ನು ಬೆಳಸಿಕೊಂಡಿದ್ದಾರೆ. ಸಂಘಟನೆ ಬಲವಾಗಿರುವ ಕಡೆ ಕಾರ್ಮಿಕರಿಗೆ ಪೂರ್ತಿ ವೇತನ ಸಿಗುತ್ತಿದೆ. ಕೆಲಸದಿಂದ ವಜಾಮಾಡಿದಾಗ ಮತ್ತೆ ಬಾಕಿ ವೇತನದೊಂದಿಗೆ ಕೆಲಸಕ್ಕೆ ಸೇರಿಸಲು ಸಾಧ್ಯವಾಗಿದೆ. ಮಾಲೀಕರು ಮತ್ತು ಮೇಸ್ತ್ರಿಗಳು ಅಸಭ್ಯವಾಗಿ ವರ್ತಿಸಿದಾಗ ಕಾರ್ಮಿಕರು ಪ್ರತಿಭಟಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಹಕ್ಕುಗಳಿಗಾಗಿ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

