ಪೌರಕಾರ್ಮಿಕರು ಉತ್ತಮ ಕೆಲಸದ ವಾತಾವರಣಕ್ಕಾಗಿ ನಡೆಸುತ್ತಿದ್ದ ಹೋರಾಟವು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್-ಕರ್ನಾಟಕವು ಪೌರಕಾರ್ಮಿಕರ ವಿಷಯ ಕುರಿತು ಕೆಲಸ ಮಾಡಲಾರಂಭಿಸಿತು. ಪ್ರೊ. ಹಸನ್ ಮನ್ಸುರ್ ಮತ್ತು ಪ್ರೊ. ರಾಜೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಸ್ಲಂ ಜಾಯಿಂಟ್ ಆಕ್ಷನ್ ಕಮಿಟಿಯನ್ನು ಆರಂಭಿಸಲಾಯಿತು. ಈ ವೇದಿಕೆಯ ಭಾಗವಾಗಿ ಮಲಬಾಚುವ ಕಾರ್ಮಿಕರ ವಿಷಯವನ್ನು ಕೈಗೆತ್ತಿಕೊಳ್ಳಲು ಪಿಯುಸಿಎಲ್‌ನಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿಯು ಪೌರಕಾರ್ಮಿಕರ ಮೇಲಾಗುತ್ತಿದ್ದ ಅನ್ಯಾಯಗಳನ್ನು ತಡೆಯಲು ವಿಫಲವಾದ ಬಿಬಿಎಂಪಿ ವಿರುದ್ಧ ಫೆಬ್ರವರಿ ೨೦೦೨ರಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿತು. ಪಿಯುಸಿಎಲ್, ಸ್ಲಂ ಫೆಡರೇಷನ್ ಹಾಗೂ ಪ್ರೊ.ಬಾಬು ಮ್ಯಾಥ್ಯೂಸ್, ಡಾ.ಜಿ.ರಾಮಕೃಷ್ಣರಂತಹ ಹಲವಾರು ಗಣ್ಯರು ರ‍್ಯಾಲಿಯನ್ನು ಬೆಂಬಲಿಸಿದರು. ಪೌರಕಾರ್ಮಿಕರ ನ್ಯಾಯಕ್ಕಾಗಿ ಹುಟ್ಟಿಕೊಂಡ ಈ ಹೋರಾಟದ ಭಾಗವಾಗಿ ಕೆ.ಬಿ.ಓಬಳೇಶ್, ಪದ್ಮಾ ಮತ್ತು ರಾಮಚಂದ್ರ ಅವರ ನೇತೃತ್ವದಲ್ಲಿ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ ಎಂಬ ಮತ್ತೊಂದು ಗುಂಪು ಹುಟ್ಟಿತು. ಅವರು ಪಿಯುಸಿಎಲ್-ಕ ಹಾಗೂ ಇತರ ಸಂಘಟನೆಗಳ ಬೆಂಬಲದೊಂದಿಗೆ ‘ಜಾಗೃತಿ ಜಾಥ’ವನ್ನು ಸಂಘಟಿಸಿದರು. ರಾಜ್ಯದಲ್ಲಿ ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವವರ ಮಾನವಹಕ್ಕುಗಳ ಉಲ್ಲಂಘನೆ ಕುರಿತು ವಿಸ್ತಾರವಾದ ಅರಿವು ಮೂಡಿಸುವುದು ಜಾಥಾದ ಉದ್ದೇಶವಾಗಿತ್ತು. ಕಾವಲು ಸಮಿತಿಯು ಮುಂದಿಟ್ಟ ಎರಡು ಮುಖ್ಯ ಬೇಡಿಕೆಗಳೆಂದರೆ ಗುತ್ತಿಗೆ ಪದ್ಧತಿಯ ನಿಷೇಧ ಮತ್ತು ಪೌರಕಾರ್ಮಿಕರ ಖಾಯಮಾತಿ.
ಜಾಥಾ ಬೆಂಗಳೂರಿನಿಂದ ಆರಂಭವಾಗಿ ಇಪ್ಪತ್ತು ರಾಜ್ಯಗಳಲ್ಲಿ ಸಂಚರಿಸಿ ದಿನಾಂಕ:೩೧-೦೩-೨೦೧೬ರಂದು ಬೆಂಗಳೂರಿನಲ್ಲಿ ಸಮಾರೋಪಗೊಂಡಿತು. ರಾಜ್ಯದೆಲ್ಲೆಡೆಯಿಂದ ಜನರು ಭಾಗವಹಿಸಿದರು. ಕೆ.ಬಿ.ಓಬಳೇಶ್, ಪದ್ಮ, ರಾಮಚಂದ್ರ ಮತ್ತು ಇತರರನ್ನು ಒಳಗೊಂಡ ನಿಯೋಗವನ್ನು ಮಾತುಕತೆಗಾಗಿ ಮುಖ್ಯಮಂತ್ರಿಗಳು ಆಹ್ವಾನಿಸಿದರು. ಆ ಸಭೆಯಲ್ಲಿ ಮುಖ್ಯಮಂತ್ರಿಗಳು ಗುತ್ತಿಗೆ ವ್ಯವಸ್ಥೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿದರು.
ಪೌರಕಾರ್ಮಿಕರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಅಭಿವ್ಯಕ್ತಿಸುವುದಲ್ಲದೆ ತಮ್ಮದೇ ಹೋರಾಟವನ್ನು ಮುಂದೆತೆಗೆದುಕೊಂಡು ಹೋಗಲು ಸಹಕರಿಸುವುದೇ ಪಿಯುಸಿಎಲ್-ಕ ದ ತಂತ್ರವಾಗಿದೆ. ಪಿಯುಸಿಎಲ್ ಸಹಾಕಾರದೊಂದಿಗೆ ಕಾವಲು ಸಮಿತಿಯು ಸತ್ಯಶೋಧನಾ ವರದಿ ಇತ್ಯಾದಿ ಕೆಲಸವನ್ನು ಆರಂಭಿಸಿತಲ್ಲದೆ ಪೌರಕಾರ್ಮಿಕರ ಹೋರಾಟದ ಮುಂಚೂಣಿಯಲ್ಲಿದೆ.

