ಶ್ರೀ ಬಿ. ಬಸವಲಿಂಗಪ್ಪ

ಶ್ರೀ ಬಿ. ಬಸವಲಿಂಗಪ್ಪನವರು ಜನಿಸಿದ್ದು ೧೯೨೯ ಏಪ್ರಿಲ್ ೨೧ರಂದು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಇವರ ತಂದೆ ಶ್ರೀ ಬಸಪ್ಪನವರು ಊರೂರು ತಿರುಗುತ್ತ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ತಾಯಿ ಶ್ರೀಮತಿ. ಸಿದ್ಧಲಿಂಗಮ್ಮ. ಬಟ್ಟೆ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಕುಟುಂಬವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ, ನಂತರ ಹರಿಹರಕ್ಕೆ ವಲಸೆ ಹೋಗಿ ನೆಲೆಸಿತು.
ಬಸವಲಿಂಗಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹರಿಹರದಲ್ಲಾಯಿತು. ಗಾಂಧೀಜಿಯವರು ಹುಟ್ಟುಹಾಕಿದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಮೂಲೆ ಮೂಲೆಗೂ ಹಬ್ಬಿದ್ದ ಕಾಲವದು. ಚಳುವಳಿಯ ಕಾವು ಚಿತ್ರದುರ್ಗಕ್ಕೂ ಪಸರಿಸಿದಾಗ ಉತ್ಸಾಹಿ ಯುವಕ ಬಸವಲಿಂಗಪ್ಪನವರೂ ಅದರಲ್ಲಿ ಭಾಗಿಯಾದರು. ಮುಂದೆ ಬಿ.ಎ. ಪದವಿಗಾಗಿ ಮೈಸೂರಿಗೆ ಹೋದಾಗ ಅಂಬೇಡ್ಕರ್ ಚಿಂತನೆಯ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರö್ಯವು ಎಲ್ಲರಿಗೂ ತಲುಪಲು ಜಾತಿ ವ್ಯವಸ್ಥೆಯು ಅಡ್ಡಿಯಾಗಿರುವುದನ್ನು ಅರಿತು ಯುವಕರನ್ನು ಸಂಘಟಿಸುವ ಮತ್ತು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸುವ ಕೆಲಸವನ್ನು ಆರಂಭಿಸಿದರು. ದೇಶದ ಕಾನೂನು ಕುರಿತು ಜನರಿಗಿರುವ ಅಜ್ಞಾನವನ್ನು ಹೋಗಲಾಡಿಸಬೇಕೆಂಬ ಇಚ್ಛೆಯಿಂದ ಬೆಳಗಾವಿಗೆ ಹೋಗಿ ಅಲ್ಲಿನ ರಾಜಾ ಲಕ್ಷö್ಮಣ್‌ರಾವ್ ಕಾನೂನು ಕಾಲೇಜಿಗೆ ಸೇರಿಕೊಂಡರು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದರು. ಇವೆಲ್ಲವೂ ಅವರಿಗೆ ಸ್ಪಷ್ಟತೆಯನ್ನು, ನಿರ್ಭೀತಿಯಿಂದ ಅಭಿವ್ಯಕ್ತಿಸುವುದನ್ನು ಕಲಿಸಿತು. ಕಾನೂನು ಶಿಕ್ಷಣ ಪಡೆದುಕೊಂಡು ಹರಿಹರಕ್ಕೆ ಹಿಂತಿರುಗಿದ ಮೇಲೆ ಅಲ್ಲಿನ ಹಳ್ಳಿಗಳಿಗೆ ಸೈಕಲ್ ಮೇಲೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಜನರನ್ನು ಪ್ರೇರೇಪಿಸಿದರು. ಮೊದಲಿಗೆ ಜನರು ಸ್ಪಂದಿಸಲಿಲ್ಲ. ನಂತರ ಅಲ್ಲಿನ ಹಿರಿಯರೊಬ್ಬರು ಬೆಂಬಲಿಸಿದ್ದರಿಂದ ಜನರು ಮಕ್ಕಳನ್ನು ಶಾಲೆಗೆ ಕಳಿಸತೊಡಗಿದರು. ದಲಿತ ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ಆಂದೋಲನದ ರೀತಿಯಲ್ಲಿ ಮಾಡಿದರು. ಆ ಹಿರಿಯರ ಬೆಂಬಲದಿಂದ ಬದಲಾವಣೆಗೆ ದಲಿತರಷ್ಟೇ ಅಲ್ಲ ಬೇರೆ ಜಾತಿಯ ಪ್ರಗತಿಪರ ಮನಸ್ಸುಗಳು ಹೋರಾಟಕ್ಕೆ ಕೈಜೋಡಿಸಬೇಕೆಂಬುದನ್ನು ಅರಿತುಕೊಂಡರು. ಅಲ್ಲಿನ ದಲಿತರಿಗೆ ನಿವೇಶನಗಳು ಸಿಗುವಂತೆ ಮಾಡಿದರು. ಕಿರ್ಲೋಸ್ಕರ್‌ನಂತಹ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟರು. ಮುಂದೆ ಬೆಂಗಳೂರಿನಲ್ಲಿದ್ದ ತಮ್ಮ ತಂಗಿ ನಿಂಗಮ್ಮನವರ ಬಳಿ ಬಂದು ಅಲ್ಲೇ ವಕೀಲಿ ವೃತ್ತಿಯನ್ನು ಆರಂಭಿಸಿ ಹೆಸರುವಾಸಿಯಾದರು.
೧೯೪೯ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯಕ್ಕೆ ಕಾಲಿಟ್ಟರು. ೧೯೫೦ರಲ್ಲಿ ಟೌನ್‌ಹಾಲ್ ವಿಭಾಗದಿಂದ ಬೆಂಗಳೂರು ನಗರಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಪಕ್ಷದಲ್ಲಿ ಭರವಸೆ ಮೂಡಿಸಿದ ಇವರನ್ನು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಲಾಯಿತು. ಆ ಸಂದರ್ಭದಲ್ಲೇ ಅವರು ಪೌರಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಕಾಳಜಿವಹಿಸಿದರು. ೧೯೫೭ರಲ್ಲಿ ವಿಧಾನಸಭಾ ಚುನಾವಣಿಯಲ್ಲಿ ಸ್ಪರ್ಧಿಸಿ ಬಿಜಾಪುರದಿಂದ ಶಾಸಕರಾಗಿ ಆಯ್ಕೆಯಾದರು. ೩೪ನೇ ವಯಸ್ಸಿನಲ್ಲೆ ಗೃಹಖಾತೆ ಸಚಿವರಾದರು. ೧೯೬೨ರಲ್ಲಿ ಸೋಲನ್ನು ಅನುಭವಿಸಿದರೂ ಹೋರಾಟವನ್ನು ಬಿಡಲಿಲ್ಲ. ಮತ್ತೆ ವಕೀಲಿ ವೃತ್ತಿ ಆರಂಭಿಸಿದರು. ಅಂಬೇಡ್ಕರ್ ಅವರು ಹುಟ್ಟುಹಾಕಿದ ‘ಪೀಪಲ್ ಎಜುಕೇಷನ್ ಸೊಸೈಟಿ’ ಟ್ರಸ್ಟಿಯಾಗಿ ನೇಮಕಗೊಂಡರು. ಮುಂದೆ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮೈಸೂರು ಮಹಾರಾಜರು ರಾಜಮಹಲ್ ಬಡಾವಣೆಯಲ್ಲಿ ಅಂಬೇಡ್ಕರ್ ಅವರಿಗೆಂದು ನೀಡಿದ್ದ ಐದು ಎಕರೆ ಜಮೀನು ಅಂಬೇಡ್ಕರ್ ಅವರು ನಿಧಾನರಾದ ಮೇಲೆ ಪಾಳು ಬಿದ್ದಿತ್ತು. ಬಸವಲಿಂಗಪ್ಪನವರು ಆ ಸ್ಥಳವನ್ನು ಪೀಪಲ್ ಎಜುಕೇಶನ್ ಸೊಸೈಟಿಯ ಸ್ವತ್ತನ್ನಾಗಿಸಿ ೧೯೮೪ರಲ್ಲಿ ನಾಗಸೇನಾ ವಿದ್ಯಾಲಯವನ್ನು ಆರಂಭಿಸಿದರು.
೧೯೭೯ರಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ರಚಿಸಿದ ಸರ್ಕಾರದಲ್ಲಿ ಶ್ರೀಬಸವಲಿಂಗಪ್ಪನವರು ಪೌರಾಡಳಿತ ಸಚಿವರಾದರು. ತಲೆಯ ಮೇಲೆ ಮಲ ಹೊರುವಂಥ ಕ್ರೂರ ಹೀನಾಯ ಪದ್ಧತಿಯನ್ನು ಕೊನೆಗಾಣಿಸುವ ಪ್ರಯತ್ನ÷ಕೈಗೊಂಡರು. ಸರ್ಕಾರದೊಂದಿಗೆ ಚರ್ಚಿಸಿ, ನಾಡಿನಾದ್ಯಂತ ವಿವಿಧ ಕ್ಷೇತ್ರದ ಗಣ್ಯರಿಗೆ ಮನಗಾಣಿಸಿ, ಹಲವರ ವಿರೋಧಗಳನ್ನು ಸಮರ್ಥವಾಗಿ ಎದುರಿಸಿ ಮಲಬಾಚುವ ಪದ್ಧತಿ ನಿಷೇಧಿಸುವ ಕಾಯ್ದೆ ಜಾರಿಗೆ ತರುವಂತಹ ಕ್ರಾಂತಿಕಾರಕ ಹೆಜ್ಜೆಗೆ ಮುಂದಾದರು. ಸ್ವತಃ ದಲಿತ ಸಮುದಾಯಕ್ಕೆ ಸೇರಿದ ಶ್ರೀ ಬಸವಲಿಂಗಪ್ಪನವರ ಇಚ್ಛಾಶಕ್ತಿಯಿಂದಾಗಿಯೇ ಭಾರತ ಸರ್ಕಾರವು ೧೯೯೩ರಲ್ಲಿ ನಿಷೇಧಿಸಿದ ಮಲಬಾಚುವಂತಹ ಹೀನಾಯ ಪದ್ಧತಿಯನ್ನು ಅದಕ್ಕೂ ಇಪ್ಪತ್ತು ವರ್ಷಗಳ ಹಿಂದೆ ೧೯೭೩ರಲ್ಲಿಯೇ ಕರ್ನಾಟಕ ಸರ್ಕಾರವು ನಿಷೇಧಿಸಲು ಸಾಧ್ಯವಾಯಿತು. (ಕೃಪೆ: ಕ್ರಾಂತಿಯ ವಸಂತ-ಬಿ.ಬಸವಲಿಂಗಪ್ಪನವರ ಕಥನ, ಲೇ: ಎನ್. ಕೆ ಹನುಮಂತಯ್ಯ, ೨೦೦೮, ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ-೫೮೩೧೧೩, ಕರ್ನಾಟಕ).
ಅಪ್ಪಟ ವೈಚಾರಿಕ ಮನೋಭಾವದ ಬಿ.ಬಸವಲಿಂಗಪ್ಪನವರು ಕರ್ನಾಟಕದ ಇತಿಹಾಸದ ಮತ್ತೊಂದು ಕ್ರಾಂತಿಕಾರಕ ತಿರುವಿಗೂ ಕಾರಣರಾದವರು. ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ೧೯-೧೧-೧೯೭೩ರಲ್ಲಿ ‘ಹೊಸ ಅಲೆಗಳು’ ಎಂಬ ವಿಷಯ ಕುರಿತು ‘ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್’ ಸಂಸ್ಥೆಯು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಆ ಸಂಕಿರಣಕ್ಕೆಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಬಸವಲಿಂಗಪ್ಪನವರು ತಮ್ಮ ಭಾಷಣದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಬೂಸಾ ಬಹಳಷ್ಟು ಇದೆ’ ಎಂದು ಹೇಳಿದ್ದು ಕರ್ನಾಟಕದಲ್ಲಿ ಚಂಡಮಾರುತವನ್ನೇ ಸೃಷ್ಟಿಸಿತು. ಎರಡು ವರ್ಷಗಳ ಕಾಲ ಶ್ರೀಬಸವಲಿಂಗಪ್ಪನವರ ವಿರುದ್ಧ ಪರ-ವಿರೋಧದ ದಂಗೆಗಳು ನಡೆದವು. ಪರ ವಿರೋಧಗಳ ಚರ್ಚೆ, ವಾದ ವಿವಾದಗಳು ನಡೆದು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದಾಗಿ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಾಯಿತು. ಬೂಸಾ ಚಳುವಳಿ ಎಂದೇ ಪ್ರಚಲಿತವಾದ ಈ ಘಟನೆ ಬಗ್ಗೆ ಕನ್ನಡದ ಶ್ರೇಷ್ಠ ಚಿಂತಕ, ಸಾಹಿತಿ, ವಿಮರ್ಶಕ ಕಿ.ರಂ.ನಾಗರಾಜ್ ಅವರು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. “ಬೂಸಾ ಚಳುವಳಿಯ ಅಂತಿಮ ಪರಿಣಾಮ ಏನೇ ಇರಲಿ ಅನೇಕ ಯುವ ಲೇಖಕರಲ್ಲಿ, ಸಂಘಟಕರಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟಿಸಿದ್ದು ಈ ಹೋರಾಟದ ಫಲ. ತಮ್ಮನ್ನು ತಮ್ಮ ಸುತ್ತಣ ವಲಯದ ಸಂವೇದನೆಯನ್ನು, ದಟ್ಟವಾಗಿ, ತೀವ್ರವಾಗಿ ಕಲಾತ್ಮಕವಾಗಿ ಅಭಿವ್ಯಕ್ತಿಸಬೇಕೆಂಬ ಛಲ ಅನೇಕ ಲೇಖಕರಲ್ಲಿ ಇದು ಮೂಡಿಸಿತು. ಕನ್ನಡ ಸಾಹಿತ್ಯದಲ್ಲಿ ಜೊಳ್ಳು ಯಾವುದು ಗಟ್ಟಿ ಯಾವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದ್ದರ ಫಲವಾಗಿ ಡಾ. ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಇವರುಗಳು ಹೆಚ್ಚು ಗಂಭೀರ ನೆಲೆಗಳನ್ನು ಪ್ರವೇಶಿಸಿದರು. ಅದರ ಫಲವೆಂಬಂತೆ ದೇವನೂರ ಮಹದೇವ, ದೇವಯ್ಯ ಹರವೆ, ಗೋವಿಂದಯ್ಯ, ಅರವಿಂದ ಮಾಲಗತ್ತಿ, ಮ.ನ.ಜವರಯ್ಯ, ಬಿ.ಟಿ.ಜಾಹ್ನವಿ, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ರಾಮಯ್ಯ, ಇಂದೂಧರ ಹೊನ್ನಾಪುರ ಇವರುಗಳ ಅಭಿವ್ಯಕ್ತಿ ವಿಚಾರಗಳಿಗೆ ಒಂದು ಗಟ್ಟಿಯಾದ ನೆಲೆ ಪ್ರಾಪ್ತವಾಯಿತು”. ದಲಿತ ಲೇಖಕರು, ಕಲಾವಿದರ ಎಚ್ಚೆತ್ತ ಪ್ರಜ್ಞೆಯು ಒಗ್ಗೂಡಿದ್ದು ಮುಂದೆ ಅದು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯದ ಗಡಿಗಳನ್ನು ವಿಸ್ತರಿಸಿ, ವಿಮರ್ಶಾ ಮಾನದಂಡಗಳನ್ನೇ ಬದಲಾಯಿಸಿದಂತಹ ದಲಿತ ಸಾಹಿತ್ಯವನ್ನು ಸೃಷ್ಟಿಸಿದ್ದು ಹಾಗೂ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಹೊಸ ತಿರುವನ್ನು ನೀಡಿದ್ದು ಕರ್ನಾಟಕ ಇತಿಹಾಸದ ಐತಿಹಾಸಿಕ ಮೈಲಿಗಲ್ಲು.
೧೯೭೭ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಶ್ರೀ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಉಳುವವನೇ ಭೂ ಒಡೆಯನಾಗುವಂತಹ ಭೂಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿದ್ದು ಮತ್ತೊಂದು ಕ್ರಾಂತಿಕಾರಕ ಹೆಜ್ಜೆ.
ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಜಾರಿಗೊಳಿಸಿದ ೭೩ನೇ ಸಂವಿಧಾನದ ತಿದ್ದುಪಡಿಯ ಕಾರಣಕರ್ತರಲ್ಲಿ ಬಿ. ಬಸವಲಿಂಗಪ್ಪನವರು ಪ್ರಮುಖರು. ತಿದ್ದಪಡಿಯ ಪ್ರಥಮ ಆಯೋಗ ಜರುಗಿ ಜಿಲ್ಲಾ ಪಂಚಾಯತ್ ಮಸೂದೆಗೆ ತಿದ್ದುಪಡಿ ತಂದದ್ದು ಕರ್ನಾಟಕ ರಾಜ್ಯದಲ್ಲಿ, ಬಸವಲಿಂಗಪ್ಪನವರ ನೇತೃತ್ವದಲ್ಲಿ. ಇದು ಪರಿಶಿಷ್ಟರಿಗೆ, ಮಹಿಳೆಯರ ರಾಜಕೀಯ ನಾಯಕತ್ವಕ್ಕೆ ಅವಕಾಶ ಮಾಡಿಕೊಟ್ಟಿತು. ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆ ಸಚಿವರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಸ್ವತಃ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದ ಶ್ರೀಬಿ.ಬಸವಲಿಂಗಪ್ಪನವರು, ಬೌದ್ಧ ಧರ್ಮ ಪ್ರಚಾರಕ್ಕಾಗಿ ‘ಕರ್ನಾಟಕ ಬೌದ್ಧ ಧರ್ಮ ಸಮಿತಿ’ಯನ್ನು ಸ್ಥಾಪಿಸಿದರು. ಜುಲೈ ೨, ೧೯೯೨ರಂದು ಬಿಜಾಪುರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಹಲವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮೈಸೂರು, ಕೋಲಾರ, ಧಾರವಾಡ, ಬೆಳಗಾವಿ, ಬಿಜಾಪುರ, ಕಲ್ಬುರ್ಗಿ, ಬೀದರ್ ಹೀಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಬಸವಲಿಂಗಪ್ಪನವರು ವಿಶೇಷ ಸಭೆಗಳನ್ನು ನಡೆಸಿದರು.
ಕರ್ನಾಟಕದಲ್ಲಿ ದಲಿತ ಪ್ರಜ್ಞೆ ಜಾಗೃತಗೊಳ್ಳಲು ಕಾರಣರಾದ, ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ೧೯೯೨ರಲ್ಲಿ ನಿಧನರಾದರು. ಎಚ್ಚೆತ್ತ ದಲಿತ ಪ್ರಜ್ಞೆಯ ಸಂಕೇತವಾಗಿ ದಲಿತ ರಾಜಕಾರಣದಲ್ಲಿ ಅವರು ಅಮರರು.

ಸಫಾಯಿ ಕರ್ಮಚಾರಿಗಳ ಭರವಸೆ: ಐ.ಪಿ.ಡಿ ಸಾಲಪ್ಪ

ಗುಡಿಸುವವರ, ನೈರ್ಮಲ್ಯ ಕೆಲಸಗಾರರ ವಿಷಯ ಬಂದಾಗಲೆಲ್ಲ ಮರೆಯದೇ ಪ್ರಸ್ತಾಪವಾಗುವ ವ್ಯಕ್ತಿಯ ಹೆಸರೆಂದರೆ ಐ.ಪಿ.ಡಿ ಸಾಲಪ್ಪ ಎಂದೆ ಖ್ಯಾತರಾದ ಐವಾರಪಲ್ಲಿ ಪೆದ್ದಯ್ಯ ದೊಡ್ಡ ಸಾಲಪ್ಪ. ಪೌರಕಾರ್ಮಿಕರ ಸಲುವಾಗಿ ದನಿ ಎತ್ತಿದ, ಅವರಿಗೆ ದನಿಯಾದ ಸಾಲಪ್ಪನವರು ಬೆಂಗಳೂರಿನ ಗೌರಿಪುರದಲ್ಲಿ ೧೧.೧೨.೧೯೨೯ರಲ್ಲಿ ಮಾದಿಗ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ಕುಳ್ಳಾಯಮ್ಮ. ತಂದೆ ಶ್ರೀ ಪೆದ್ದಯ್ಯ. ಪೆದ್ದಯ್ಯನವರ ಪೂರ್ವಿಕರು ೧೯೧೦ರಲ್ಲಿ ರೈಲ್ವೆ ಕೂಲಿಗಳಾಗಿ ಅಂದಿನ ಮೈಸೂರು ರಾಜ್ಯಕ್ಕೆ ಬಂದರು. ಪೆದ್ದಯ್ಯನವರು ರೈಲ್ವೆ ಹಳಿಗಳನ್ನು ಹಾಕುವ ಕೆಲಸ ಮಾಡುತ್ತಿದ್ದರು. ಸಾಲಪ್ಪನವರ ಪೂರ್ವಿಕರು ಈಗಿನ ತೆಲಂಗಾಣ ರಾಜ್ಯದ ಅನಂತಪುರದವರು. ಭೀಕರ ಬರಗಾಲವು ಹೊಟ್ಟೆಪಾಡನ್ನು ಅರಸಿಕೊಂಡು ಬೆಂಗಳೂರಿಗೆ ಬರುವಂತೆ ಮಾಡಿತು. ಸಾಲಪ್ಪನವರಿಗೆ ಮೂವರು ಅಕ್ಕಂದಿರು. ಸಾಲಪ್ಪನವರು ಜನಿಸಿದ ಆರು ತಿಂಗಳಲ್ಲೇ ಅವರ ತಾಯಿ ತೀರಿಕೊಂಡರು. ಇವರನ್ನು ಸ್ವಂತ ಮಗುವಿನಂತೆ ಸಾಕಿದವರು ಅವರ ಚಿಕ್ಕಮ್ಮ. ಅಂದರೆ ತಂದೆಯ ತಮ್ಮನ ಹೆಂಡತಿ.
ಹೈಸ್ಕೂಲು ಓದುವಾಗಲೇ ಸಾಲಪ್ಪನವರು ಸ್ವಾತಂತ್ರö್ಯ ಚಳುವಳಿಯಿಂದ ಪ್ರೇರಿತರಾದರು. ಒಮ್ಮೆ ಬೆಂಗಳೂರಿನ ಕೆಂಗೇರಿ ಗೇಟಿನ ಬಳಿ ಸ್ವಾತಂತ್ರö್ಯ ಚಳುವಳಿಗಾರರನ್ನು ಬಂಧಿಸಿ ಇರಿಸಿದ್ದ ವಾಹನದೊಳಗೆ ಕೂತೂಹಲದಿಂದ ಇಣುಕಿ ನೋಡಿದ ಬಾಲಕ ಸಾಲಪ್ಪನ ತಲೆಯ ಮೇಲೆ ಒಳಗೆ ಕುಳಿತಿದ್ದವರು ಗಾಂಧಿ ಟೋಪಿಯನ್ನು ಇರಿಸಿದರು. ಅಂದಿನಿಂದ ಗಾಂಧಿ ಟೋಪಿಯನ್ನು ಧರಿಸಲಾರಂಭಿಸಿದ ಸಾಲಪ್ಪನವರು ಕೊನೆಯವರೆಗೂ ಬಿಡಲಿಲ್ಲ. ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಇವರು ಗಾಂಧಿ ತತ್ವಗಳನ್ನು ಜೀವಮಾನವಿಡಿ ಅನುಸರಿಸಿದರು.
ಸಾಲಪ್ಪನವರು ಹತ್ತನೆ ತರಗತಿ ತೇರ್ಗಡೆಯಾದ ನಂತರ ಬಿನ್ನಿಮಿಲ್ಲಿನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿನ ಕಾರ್ಮಿಕ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಬಳ್ಳಾರಿಯ ಮುನಿಸಿಪಲ್ ಕೌನ್ಸಿಲರ್ ಆಗಿದ್ದ ನಾರಪ್ಪನವರ ಮಗಳು ಸರಸ್ವತಿಯವರನ್ನು ಮದುವೆಯಾದರು. ೧೯೫೬ರಲ್ಲಿ ಜೆ.ಜೆ.ನಗರದಲ್ಲಿ ‘ತಿಲಕ್ ಪಾಠಶಾಲೆ’ ಆರಂಭಿಸಿದರು. ಆ ಪಾಠಶಾಲೆಯಲ್ಲಿ ಗಂಡ-ಹೆಂಡತಿಯರಿಬ್ಬರೂ ಶಿಕ್ಷಕರಾಗಿ ದುಡಿದರು. ಶಾಲೆಯು ರಾಜ್ಯ ಸರ್ಕಾರದ ಮಾನ್ಯತೆಯನ್ನು ಪಡೆದುಕೊಂಡಿತ್ತು. ಮುಂದೆ ವಿನೋಬನಗರದಲ್ಲಿ ‘ಹರಿಜನ ಸೇವಾ ಸಂಘ’ ಪಾಠಶಾಲೆ, ವಾಲ್ಮೀಕಿ ನಗರದಲ್ಲಿ ‘ಅರುಂಧತಿ ಪ್ರೌಢಶಾಲೆ’ ಮತ್ತು ಶ್ರೀರಾಂಪುರದಲ್ಲಿ ‘ವೆಂಕಟೇಶ್ವರ ಶಾಲೆ’ಯನ್ನು ಆರಂಭಿಸಿದರು. ತಿಲಕ್ ಪಾಠಶಾಲೆ ಈಗಲೂ ನಡೆಯುತ್ತಿದೆ. ಸಾಲಪ್ಪನವರು ಶಿಸ್ತಿನ ಶಿಕ್ಷಕರಾಗಿದ್ದರಲ್ಲದೆ ಸ್ವಚ್ಛತೆಯ ಬಗ್ಗೆ ಅಪಾರ ಕಾಳಜಿವಹಿಸುತ್ತಿದ್ದರು. ಮಕ್ಕಳು ಕೈಕಾಲು ತೊಳೆದುಕೊಂಡು ತರಗತಿಯೊಳಗೆ ಬರಲೆಂದು ತಪ್ಪದೆ ಬಕೆಟ್ಟಿನಲ್ಲಿ ನೀರಿರಿಸುವ ವ್ಯವಸ್ಥೆ ಮಾಡಿಸಿದ್ದರು.
ಸಾಲಪ್ಪನವರು ೧೯೮೦ರಲ್ಲಿ ದೂರ ಶಿಕ್ಷಣದ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡರು.
‘ಹರಿಜನ ಯುವಕ ಸೇವಾ ಸಮಾಜ’ ಸ್ಥಾಪಿಸಿ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಿತ್ಯವೂ ಸಂಜೆ ಪೌರಕಾರ್ಮಿಕರನ್ನು ಒಟ್ಟುಗೂಡಿಸಿ ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದರು. ಸತ್ತ ದನದ ಮಾಂಸ, ಹಳಸಿದ ತಂಗಳಿಟ್ಟನ್ನು ತಲೆಯ ಮೇಲೆ ಹೊತ್ತು ತಂದು ತಿನ್ನಬಾರದೆಂದು ಮನವರಿಕೆ ಮಾಡಿಕೊಡುತ್ತಿದ್ದರು. ಕುಡಿತದ ಚಟ ಬಿಡಿಸಲು ಅವಿರತವಾಗಿ ಶ್ರಮಿಸಿದ ಇವರು ಹಾಲಿನ ಮೇಲೆ ಕೈ ಇರಿಸಿ ಕುಡಿತ ಬಿಡುವಂತೆ ಪ್ರಮಾಣ ಮಾಡಿಸುತ್ತಿದ್ದರು. ೧೯೬೪ರಲ್ಲಿ ‘ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ವಕರ‍್ಸ್ ಸಂಘ’ವನ್ನು ಸ್ಥಾಪಿಸಿ ಪೌರಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡಿದರು. ಸಂಘದ ಮೂಲಕ ಪೌರಕಾರ್ಮಿಕರ ಹಕ್ಕು ಮತ್ತು ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡಲು ನಿರಂತರವಾಗಿ ಶ್ರಮಿಸಿದರು. ಪೌರಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ೧೯೬೬ರಲ್ಲಿ ಸಾಲಪ್ಪನವರು ನಡೆಸಿದ ಉಪವಾಸ ಸತ್ಯಾಗ್ರಹವು ಪೌರಕಾರ್ಮಿಕರ ಮೊದಲ ಹೋರಾಟವಾಗಿದೆ. ಪೌರಕಾರ್ಮಿಕರ ಕಡುಕಷ್ಟದ ಬದುಕಿನ ನಿಕಟ ಪರಿಚಯವಿದ್ದ ಸಾಲಪ್ಪನವರು ಪೌರಕಾರ್ಮಿಕರ ಹಕ್ಕುಗಳಿಗಾಗಿ ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರ ಹೋರಾಟ ಮಾಡುತ್ತಿದ್ದರು. ಮುನಿಸಿಪಲ್ ಕೆಲಸ ಮಾಡುವವರು ಇಂಜಿನಿಯರಿಂಗ್ ವಿಭಾಗದಲ್ಲೇ ಇರಲಿ, ಮಲೇರಿಯಾ ವಿಭಾಗದಲ್ಲೇ ಇರಲಿ, ಉದ್ಯಾನದ ಕೆಲಸದಲ್ಲೇ ಇರಲಿ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಮೇಲಿನವರು ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದರು. ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗುವ ಎಷ್ಟೋ ಮೊದಲೇ ಅವರನ್ನು ಗೌರವದಿಂದ ಕಾಣಬೇಕೆಂಬ ತಿಳುವಳಿಕೆಯನ್ನು ಸಾಲಪ್ಪನವರು ಮೇಲಿನವರಿಗೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಅಧಿಕಾರಿಗಳೆಂದರೆ ಹೆದರಿ ನಡುಗುತ್ತಿದ್ದ ಪೌರಕಾರ್ಮಿಕರು ಸ್ವಾಭಿಮಾನದಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡತೊಡಗಿದರು. ನಿರಂತರ ಹೋರಾಟದ ಫಲವಾಗಿ ನಗರಪಾಲಿಕೆಯು ೧೫೦೦ ಜನರನ್ನು ಖಾಯಂಗೊಳಿಸಿತು. ೧೯೭೯-೮೦ರಲ್ಲಿ ೭೬ ದಿನಗಳ ಸರಣಿ ಸತ್ಯಾಗ್ರಹ ನಡೆಸಿ ಪೌರಕಾರ್ಮಿಕರನ್ನು ಕೆ.ಸಿ.ಎಸ್.ಆರ್ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾದರು. ಪೋಷಕರು ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದುಕೊಳ್ಳುತ್ತಿದ್ದ ಮಕ್ಕಳು ವಿದ್ಯಾವಂತರಾಗಿದ್ದರೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ದರ್ಜೆ ಕೆಲಸ ಸಿಗುವಂತೆ ಮಾಡಿದರು. ಇದರಿಂದಾಗಿ ಪೌರಕಾರ್ಮಿಕರಿಗೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸುಮಾರು ೮೦ ಶಾಖೆಗಳಲ್ಲಿ ಕೆಲಸ ಸಿಗುವಂತಾಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ರೂ.೨೫ಕ್ಕೆ ೧೨೯೯೪ ಸೈಟುಗಳು ಪೌರಕಾರ್ಮಿಕರಿಗೆ ಹಂಚಿಕೆಯಾಗಲು ಕಾರಣರಾದರು.
ಪೌರಕಾರ್ಮಿಕರನ್ನು ತುಚ್ಛವಾಗಿ ಕಾಣುವುದರ ವಿರುದ್ಧ ಸದಾ ಪ್ರತಿಭಟಿಸುತ್ತಿದ್ದ ಸಾಲಪ್ಪನವರ ಪ್ರತಿಭಟನಾ ವಿಧಾನಗಳು ಭಿನ್ನವಾಗಿದ್ದವು. ಸೂಕ್ತವಾಗಿ ಮನವರಿಕೆ ಮಾಡಿಕೊಡುವುದರ ಮೂಲಕ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಒಬ್ಬ ಮಹಿಳಾ ಹೆಲ್ತ್ ಇನ್‌ಸ್ಪೆಕ್ಟರ್ ಪೌರಕಾರ್ಮಿಕ ಮಹಿಳೆಯನ್ನು ತುಚ್ಛವಾಗಿ ಮಾತನಾಡಿಸಿದಾಗ ಆಕೆಯನ್ನು ಕರೆದು ಅದೆಷ್ಟು ಚೆನ್ನಾಗಿ ಬುದ್ಧಿ ಹೇಳಿದರೆಂದರೆ, ಮುಂದೆ ಆಕೆ ಸಂಪೂರ್ಣವಾಗಿ ಬದಲಾದರಲ್ಲದೆ ಆಕೆಗೆ ವರ್ಗವಾದಾಗ ಕಾರ್ಮಿಕರೇ ಆಕೆಯನ್ನು ಕಳಿಸಬಾರದೆಂದು ಬೇಡಿಕೊಂಡರಂತೆ.
ಪೌರಕಾರ್ಮಿಕರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ೧೯೬೬ರಲ್ಲಿ ‘ಭಂಗಿ ಬಂಧು’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಪೌರಕಾರ್ಮಿಕರ ಮೇಲೆ ಆಗುತ್ತಿದ್ದ ಶೋಷಣೆ, ಅನ್ಯಾಯ, ದೌರ್ಜನ್ಯಗಳ ಕುರಿತು ತೀಕ್ಷ÷್ಣವಾಗಿ ಬರೆಯುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಭ್ರಷ್ಟತೆ, ದರ್ಪ ಕುರಿತು ನಿರ್ಭೀತರಾಗಿ ಬರೆಯುತ್ತಿದ್ದರು. ವಿದ್ಯುತ್, ನೀರು, ಬಸ್ಸಿನ ದರ ಏರಿಕೆಯಾದಾಗ ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ದಲಿತರ ಹೆಸರಿನಲ್ಲಿ ಮಂಜೂರಾಗುವ ಹಣ ಬೇರೆ ಕಾರ್ಯಗಳಿಗೆ ವಿನಿಯೋಗವಾಗುತ್ತಿದ್ದರ ವಿರುದ್ಧ ಸತತವಾಗಿ ಹೋರಾಟ ನಡೆಸಿದರು. ೧೮% ಮೀಸಲಾತಿ ಪೌರಕಾರ್ಮಿಕರಲ್ಲೂ ಅನ್ವಯವಾಗಬೇಕೆಂದು ಒತ್ತಾಯಿಸಿದರು. ಉದ್ಯೋಗದ ಜೊತೆಗೆ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಗಾಗಿಯೂ ಶ್ರಮಿಸಿದರು.
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಸಾಲಪ್ಪನವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ರಾಜ್ಯದ ಮೂಲೆ ಮೂಲೆಗೂ ಹೋಗಿ ಪೌರಕಾರ್ಮಿಕರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿ ದಾಖಲಿಸುವುದರ ಜೊತೆಗೆ ಉತ್ತಮ ಶಿಫಾರಸ್ಸುಗಳನ್ನು ಒಳಗೊಂಡಿದ್ದ ‘ರಿಪೋರ್ಟ್ ಆನ್ ದಿ ಲಿವಿಂಗ್ ಅಂಡ್ ವರ್ಕಿಂಗ್ ಕಂಡಿಷನ್ಸ್ ಆಫ್ ಸ್ವೀರ‍್ಸ್ ಅಂಡ್ ಸ್ಕಾö್ಯವೆಂರ‍್ಸ್ (ಕಸಗುಡಿಸುವವರ ಮತ್ತು ಮಲಬಾಚುವವರ ಬದುಕು ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಮಿತಿಯ ವರದಿ) ವರದಿಯನ್ನು ಸಮಿತಿಯು ೧೯೭೬ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಒಣಪಾಯಿಖಾನೆಗಳನ್ನು ಆಧುನೀಕರಿಸಬೇಕು, ಪೌರಕಾರ್ಮಿಕರ ಕೆಲಸವನ್ನು ಅಪಾಯಕಾರಿ ವೃತ್ತಿ ಎಂದು ಪರಿಗಣಿಸಬೇಕು, ೫೦೦ ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರು ಇರಬೇಕು, ಅವರಿಗೆ ವಾರದ ರಜೆ, ಮೂರು ತಿಂಗಳ ಖಾಯಿಲೆ ರಜೆ, ಹೆರಿಗೆ ರಜೆ, ಪ್ರತಿ ವರ್ಷ ಪ್ರಯಾಣ ಭತ್ಯೆ, ಸಮವಸ್ತ್ರ, ಆರು ಗಂಟೆಗಳ ಕೆಲಸದ ಅವಧಿ, ಎರಡು ಪಾಳಿಯ ಕೆಲಸ, ಉದ್ದನೆಯ ಪೊರಕೆ, ಮುಚ್ಚಳವಿರುವ ಕಸದ ಡಬ್ಬ, ಗ್ಲೋವ್ಸ್, ಗಂಬೂಟುಗಳು, ಪೌರಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ, ಪೌರಕಾರ್ಮಿಕರಿಗಾಗಿ ಮನೆಗಳು, ಮನೋರಂಜನಾ ಕೇಂದ್ರಗಳು ಇತ್ಯಾದಿ ಅಮೂಲ್ಯ ಶಿಫಾರಸ್ಸುಗಳನ್ನು ವರದಿಯಲ್ಲಿ ಮಾಡಿದರು. ಸಮಾಜದ ಕಣ್ಣಿನಲ್ಲಿ ಮರೆಯಾಗಿ ಅಂಚಿಗೆ ದೂಡಲಾದ ಪೌರಕಾರ್ಮಿಕರ ಪರಿಸ್ಥಿತಿಯನ್ನು ಕೂಲಕಂಷವಾಗಿ ದಾಖಲಿಸಿದ, ಉತ್ತಮ ಶಿಫಾರಸ್ಸುಗಳನ್ನು ಹೊಂದಿದ ಮೊದಲ ವರದಿಯಲ್ಲದೆ ದೇಶದಲ್ಲೇ ಅತ್ಯುತ್ತಮ ವರದಿ ಇದಾಗಿದೆ. ಇದರ ಹೆಗ್ಗಳಿಕೆ ಸಮಿತಿಯ ಅಧ್ಯಕ್ಷರಾದ ಐ.ಪಿ.ಡಿ. ಸಾಲಪ್ಪನವರಿಗೆ ಸಲ್ಲುತ್ತದೆ.
ಸಾಲಪ್ಪನವರು ೧೯೭೫-೭೬ರಲ್ಲಿ ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಬಿನ್ನಿಪೇಟೆಯ ಸಾಮಾನ್ಯ ಕ್ಷೇತ್ರದಿಂದ ಶಾಸಕರಾಗಿ ಆರಿಸಿಬಂದರು. ೧೯೯೨ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ನಾಗಪುರಕ್ಕೆ ಭೇಟಿ ನೀಡಿದಾಗ, ಕಾಲೋನಿಯಲ್ಲಿ ಗಾಂಧೀಜಿಯವರು ಕಟ್ಟಿಸಿದ್ದ ಬಾವಿಯೂ ಹಾಳಾಗಿದ್ದನ್ನು ಕಂಡು ರಿಪೇರಿ ಮಾಡಿಸಲು ಕೂಡಲೇ ಐದು ಲಕ್ಷ ಹಣವನ್ನು ಮಂಜೂರು ಮಾಡಿಸಿದ್ದರು. ಬೆಂಗಳೂರು ನಗರಪಾಲಿಕೆ ಕಾರ್ಮಿಕರ ಒಕ್ಕೂಟಕ್ಕೆ ಮಹಾಕಾರ್ಯದರ್ಶಿಯಾಗಿದ್ದರು. ೧೯೯೨ರಲ್ಲಿ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡರು. ಕೊನೆಯ ತನಕ ಪೌರಕಾರ್ಮಿಕರ ಏಳಿಗೆಗಾಗಿ ದುಡಿದ ಇವರು ಸೆಪ್ಟಂಬರ್ ೧೪, ೧೯೯೬ರಲ್ಲಿ ತೀರಿಕೊಂಡರು. ೨೦೦೩ರಲ್ಲಿ ಇವರಿಗೆ ಬಾಬುಜಗಜೀವನ್ ರಾಮ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.(ಕೃಪೆ: ರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿರುವ ಡಾ.ಬಿ.ಪಿ. ಇಂದಿರಾ ಅವರ ಪುಸ್ತಕ ‘ಸ್ವಚ್ಛತೆಯ ಹರಿಕಾರರು ಐ.ಪಿ.ಡಿ.ಸಾಲಪ್ಪ’ ಅದ್ಯಯನ)
ಪೌರಕಾರ್ಮಿಕರ ಪರಿಸ್ಥಿತಿಯ ಕುರಿತ ಅತ್ಯುತ್ತಮ ವರದಿಯು ಬರುವುದರ ಹಿಂದಿನ ಬಹುಮುಖ್ಯ ಕಾರಣಕರ್ತರು ಅಂದಿನ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ. ಬಸವಲಿಂಗಪ್ಪನವರು ಮತ್ತು ಅಂದಿನ ಮುಖ್ಯಮಂತ್ರಿಗಳಾದ ಶ್ರೀಡಿ. ದೇವರಾಜ ಅರಸ್ ಅವರು. ಪೌರಕಾರ್ಮಿಕರ ಹೋರಾಟದ ಇತಿಹಾಸದಲ್ಲಿ ಇವರಿಬ್ಬರ ಹೆಸರು ಚಿರಸ್ಥಾಯಿ. ಅವರಿಬ್ಬರ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಬೌದ್ಧಗುರು ಸುನೀತ

ಗಂಗಾನದಿ ತವ ವಂದಪ ಬುದ್ದ ಸಿಸ್ಯರೊಂದ್ಗೆ ಬಿಕ್ಸೆಗೆ ವೋಗಿದ್ದ. ದಾರಿನಾಗ ವೋಯ್ತ ಇದ್ದ ಮಲ ಹೊರೊ ಸುನೀತ ಬುದ್ದನ್ನ ಕಂಡು ಅಂಗೆ ಇಂದ್ಕೆ ರ‍್ಕಂಡ. ಆದ್ರೂ ಬುದ್ದ ಅವನ್ತಕೆ ವೋದ. ಮೈಯಿ, ಬಟ್ಟೆ ಎಲ್ಲ ನರ‍್ತ ಇದ್ದ ಸುನೀತ ಗಾಬ್ರಿ ಬಿದ್ದು ನೀರೊಳ್ಗೆ ವೋಗಿ ಕುತ್ಕಂಡ.
ಬುದ್ದ: ಬಾಸಾಮಿ ನಿಂತಾವಸಿ ಮಾತಾಡ್ಬೇಕು.
ಸುನೀತ: ಅಯ್ಯೊ ದೂರ ವೊಗಿ ಸಾಮಿ ನನ್ನ ಮುಟ್ಸ÷್ಕಂಡ್ರೆ ನೀವು ಗಲೀಜಾತಿರಾ.
ಬುದ್ದ: ನಮ್ನ ಗಲೀಜ್ ಮಾಡೋದು ದುರಾಸೆ, ದ್ವೇಷ, ಮೋಹ. ನೀನು ಸುದ್ವಾಗಿದಿಯಾ ಏನು ನಿನ್ನ ಎಸ್ರು?
ಸುನೀತ: ಸುನ್ತಾ ಅಂತರೆ ಸಾಮಿ.
ಬುದ್ದ: ದೀಕ್ಸೆತಾಂಡು ಬಿಕ್ಸು ಆಗು.
ಸುನೀತ: ಅದೆಂಗಾದಾತು ನಾನು ಕೀಳ್ ಜಾತಿಯೋನು.
ಬುದ್ದ: ಎಲ್ಲಾರ್ ಕಣ್ಣೀರ್ ಉಪ್ಪೆ! ಅರಿವಿನ್ದಾರಿನಾಗೆ ಜಾತಿ ಧರ್ಮ ಇಲ್ಲ.
ಸುನೀತ: ಏಲ್ಬಾಚೊ ನನ್ನ ಎಲ್ರೂ ಏಲ್ನಂಗೆ ಅಸಿಸಿ ಮಾಡ್ತರೆ. ಇಂಗೆ ಯಾರು ನಂತವ ಮಾತಾಡರ‍್ಲಿಲ್ಲ ದೀಕ್ಸೆ ಕೊಟ್ರೆ ಜೀವಾ ಮುಡ್ಪಾಗಿಡ್ತೀನಿ.
ಬುದ್ದ: ಸುನೀತನ ಮೈದಡವಿ ತಲೆ ಬೋಳ್ಸಿ, ಮೈ ತಿಕ್ಕಿ ತೊಳ್ದು ರ‍್ಕೊಂಡೋಗಿ ದೀಕ್ಸೆ ಕೊಟ್ಟ. ಈ ಸಂಗ್ತಿ ಕೇಳಿದ ದರುಮ್‌ಗರ‍್ಗೋಳೆಲ್ಲ ದೊರೆಗೆ ದೂರು ಕೊಟ್ರು. ಕೇಳಕೆ ಅಂತ ದೊರೆ ಬುದ್ದನತ್ರ ಬಂದ. ಆಸ್ರಮದೊಳ್ಗೆ ವೊಗೊವಾಗ ಸಣ್‌ದೊಂದು ಬಂಡೆ ಮ್ಯಾಲೆ ಬಿಕ್ಸು ಒಬ್ಬ ಕುತ್ಕಂಡ ಉಪ್ದೇಸ ಕೊಡ್ತ ಇದ್ದ. ಅವ್ನ ಕಣ್ಣಿನ್ ದೀಪ್ದಾಗೆ ಅವ್ನ ಮಕ ವಳಿತಿತ್ತು. ಅವ್ನಾಡೊ ಮಾತ್ನ ಸಿಲೆ ಅಂಗೆ ಕುಂತು ಕೇಳ್ತ ಇದ್ದೋರ ಮಕ್ದಾಗೆ ಸಾಂತಿ ಅಡ್ಕಂಡಿತ್ತು. ರಾಜಂಗು ಅಲ್ಲೆ ಕುಂತು ಕೇಳ್ಬೇಕು ಅನ್ಸ್ತು. ಬುದ್ದನ್ನ ನೊಡ್ಬೇಕಲ್ಲ ಅಂತ ವೋಗಿ ಏನು ಎತ್ತ ಅಂತ ಯಿಚರ‍್ಸಿ ಅಲ್ಲಿ ಕುಂತಿರೊ ಬಿಕ್ಸು ಯಾರು ಅಂತ ಕೇಳ್ದ.
ಬುದ್ದ: ಅವ್ನು ಸುನೀತ, ಸ್ಯಾನೆ ಜಾಣ, ಪ್ರಾಮಣಿಕ ಬಂದ್ ಮೂರ್ ತಿಂಗ್ಳಾಗೆ ದೊಡ್ಡ ಸಾದ್ನೆ ಮಾಡಿ ಬೋದ್ನೆ ಮಾಡಂಗೆ ಆಗವ್ನೆ ಅಂದ.
ರಾಜ: ದೂರು ಕೊಟ್ಟಿದ್ರೆ ಅಪರಾದ್ವಾಗ್ತಿಲ್ಲ ಅಂದ್ಕಂಡು ‘ಯರ‍್ನೂ ಬೇದ ಮಾಡ್ದಿರೊ ನಿನ್ನ ಅಂತರ‍್ಣಕ್ಕೆ ಎಣೆನೇ ಇಲ್ವಲ್ಲಪ್ಪ, ನಿನ್ನ ಮಾರ್ಗ ಎಂತ ಅದ್ಬುತವಪ್ಪ’ ಅಂತ ಕೈ ಎತ್ತಿ ಮುಗ್ದ.
ಬುದ್ದ: ರ‍್ವಿನ ದಾರಿನಾಗೆ ಜಾತಿಬೇದ ಇಲ್ಲ. ಎಲ್ಲರೂ ವಂದೆ, ಎಲ್ಲರ ರಕ್ತ ಕೆಂಪು, ಎಲ್ರ ಬೆವ್ರು ಉಪ್ಪೇ, ಎಲ್ಲರ ವಳ್ಗೂ ಅರಿವಿನ ದಾರಿ ಕಂಡ್ಕಳ ಬೆಳಕದೆ. ಸುನೀತನ ವಳ್ಗಿರೊ ಬೆಳ್ಕು ನಂಗೆ ಅವತ್ತೇ ಕಾಣ್ತು. ಅದ್ಕೆ ಸುನೀತನ್ನ ರ‍್ಕಂಡು ಬಂದೆ; ನೀನು ಇವತ್ತು ಕಂಡ್ಕಂಡೆ. ಕಾಣ್ದಿರೋರು ದರ‍್ಲಿ, ಕಂಡೋರು ರ‍್ಲಿ.
ಮನ್ನೆ ದಿನ ಕೆಜೆಪ್‌ನಾಗೆ ಒಂದೇಸಲ್ಕೆ ಮರ‍್ಜನ ಕಕ್ಕಸ್ ಗುಂಡಿನಾಗೆ ಬಿದ್ ಸತ್ತೋದ್ರು. ಆಗೆಲ್ಲ ಏಲ್ನ ಕೈಯಾಗೆ ಬಾಚುಸ್ತಿದ್ರು ಈಗ ಏಲ್ನಾಗೆ ಈಜಾಡ್ಸಿ ಉಸ್ರುಗಟ್ಟಿ ಸಾಯ್ರಿ ಅಂತರೆ. ಗೊಬ್ರುದಾಗಿರೋ ಊವ ಊವ್ನಾಗಿರೊ ಗೊಬ್ರ ಕಂಡೋರಿಗೆ ಎಲ್ಡೂ ವಂದೇ ಅಂತ ಗೊತ್ತಾತದೆ. ಊವಿಲ್ದೆ ಗೊಬ್ರಿಲ್ಲ, ಗೊಬ್ರಿಲ್ದೆ ಊವಿಲ್ಲ ಅಂತ ಗೊಬ್ರಊವಿನ ಸಂಬಂಧ ಕತ್ರಿಸಾಕ್ದೊರ‍್ಗೆ ಊವ ಬೇರೆ ಗೊಬ್ರ ಬೇರೆ. ಅಂತರ‍್ಗೆಲ್ಲ ಅವ್ರ ಏಲೆ ಅವ್ರಿಗೆ ಅಸಯ್ಯ; ಅವರೇಲು ಬಾಚೊರು ಅಸಯ್ಯ; ಇನ್ನ ಅವರೊಳ್ಗಿರೊ ಅರಿವಿನ ಬೆಳ್ಕು ಕಾಣ್ಸದುಂಟಾ? (ಕೃಪೆ: ದು.ಸರಸ್ವತಿಯವರ ಸಣ್ತಿಮ್ಮಿ ಪುರಾಣ ಆರು ಏಕಾಂಕಗಳು ಪ್ರ:ಕವಿ ಪ್ರಕಾಶನ, ಕವಲಕ್ಕಿ, ಉ.ಕ.ಜಿಲ್ಲೆ, ೨೦೧೮)

ಅಂಚಿನಲ್ಲೂ ಮಿಣುಕುವ ಇತಿಹಾಸ

ಅವಮಾನ ಮತ್ತು ಸಂಕಟವನ್ನೇ ಉಣಿಸಿ, ದುಡಿಮೆಗೆ ಬಿಡಿಗಾಸು ನೀಡಿ ಅಂಚಿಗೆ ತಳ್ಳಿ ಮುಂಬರದಂತೆ ಭದ್ರ ಬೇಲಿ ಬಿಗಿದರೂ ಮಿಂಚುಳಗಳಂತೆ ಪುಟಿದು ಸಾಧನೆಯ ದಾರಿಯಲ್ಲಿ ಮೈಲಿಗಲ್ಲಾದವರ ನೆನೆಯುವ ಭಾಗವಿದು. ಸಂಪತ್ತು, ಹೆಸರು, ಅಧಿಕಾರವೇ ಮಾನದಂಡವಾಗಿರುವ ಸಾಧನೆಯ ಇತಿಹಾಸವಲ್ಲ ಇದು. ಯಾರ ಮನುಷ್ಯ ಘನತೆಯನ್ನು ತುಳಿದು ಮಣ್ಣುಮಾಡಲಾಗಿದೆಯೋ ಅವರ ಮನುಷ್ಯ ಘನತೆಯನ್ನು ಎತ್ತಿ ಹಿಡಿಯಲು ನಡೆಸಿದ ಸತತ ಪ್ರಯತ್ನ ಮತ್ತು ಯಶೋಗಾಥೆಯನ್ನು ಸಾಧನೆ ಎಂದು ಪರಿಗಣಿಸುವ ಪ್ರಯತ್ನವಿದು. ಇಂಗ್ಲಿಷಿನಲ್ಲಿ ಸಾಯಿಲ್ ಎಂದರೆ ಮಣ್ಣೂ ಹೌದು; ಕೊಳೆಯೂ ಹೌದು. ಕೊಳೆಯನ್ನೆತ್ತಿ ಕೊಳೆಸುವಂತಹ ಮಣ್ಣ ಕೆಲಸ ಮಾಡಿ ಸರ್ವರ ಆರೋಗ್ಯ ಕಾಪಾಡುವವರÀ ಘನತೆಯನ್ನು ತುಳಿದು ಮಣ್ಣು ಮಾಡಿದ್ದರೂ ಅವರು ಮಣ್ಣಿನಲ್ಲೇ ಕೊಳೆತು ಮಣ್ಣಿಗೇ ಸಾರವಾಗಿ, ಅದೇ ಮಣ್ಣಿಂದಲೇ ಮೊಳೆಕೆಯೊಡೆದು ತಂಪು ನೆರಳಂಥ ಸಾಧನೆ ಮಾಡಿದವರ ಕತೆಯಿದು. ಭವ್ಯತೆಯ ಕಣ್ಣು ಕುಕ್ಕುವ ಬೆಳಕಿನಡಿಯ ಕತ್ತಲಲ್ಲಿ ಮಿಂಚುಗಳ ಅರಸುವವರಿಗೆ ಮಿಂಚುಳಗಳು ಗೋಚರಿಸಬಲ್ಲವು. ಮನುಷ್ಯ ಚೈತನ್ಯಕ್ಕೆ ಸೋಲಿಲ್ಲ. ಎಷ್ಟು ತುಳಿದರು ಮತ್ತೆ ಮತ್ತೆ ಚಿಗುರುವ ಗರಿಕೆ ಹುಲ್ಲಿನಂತದು ಎಂದು ನಂಬುವ, ತೆರೆದ ಕಣ್ಣು ಮತ್ತು ಮನದ ನೋಟಗಳಿಗೆ ಮಾತ್ರವೇ ಅಂಚಿನಲ್ಲೂ ಸಫಾಯಿ ಕರ್ಮಚಾರಿಗಳು ಕಟ್ಟಿರುವ ಮಿಣುಕು ಇತಿಹಾಸ ಕಾಣುವುದು. ಈ ಇತಿಹಾಸ ಭೂತದಿಂದ ಹಿಡಿದು ವರ್ತಮಾನದೊಂದಿಗೆ ಭವಿಷ್ಯದತ್ತಲೂ ಸಾಗುತ್ತಿದೆ.