ಹಿಮಾಲಯ ಪರ್ವತ ಪ್ರದೇಶವು ಅತ್ಯಂತ ಸೂಕ್ಷö್ಮಭೂವಿಜ್ಞಾನ ಮತ್ತು ಪರಿಸರ ಪ್ರದೇಶವಾಗಿರುವ ಕಾರಣಕ್ಕಾಗಿಯೇ ಅದನ್ನು ಭೂಮಿಯ ನಾಭಿ ಎನ್ನುತ್ತಾರೆ. ಅಂತಹ ಪ್ರದೇಶದಲ್ಲಿ ಅಭಿವೃದ್ದಿ ಹೆಸರಿನಲ್ಲಿ ರಸ್ತೆ, ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ.
೨೦೨೨-೨೦೨೩ರಲ್ಲಿ ಜಗದ ದೊಡ್ಡಣ್ಣನೆನಿಸಿಕೊಂಡಿರುವ ಅಮೆರಿಕಾದ ಒಂದು ಭಾಗ ಕಾಳ್ಗಿಚ್ಚಿನಲ್ಲಿ ಬೆಂದರೆ, ಮತ್ತೊಂದು ಭಾಗ ಪ್ರವಾಹದಲ್ಲಿ ಮುಳುಗಿತು. ಇಂತಹ ಪ್ರಕೃತಿಯ ಪಾಠಗಳಿಂದ ನಾವು ಪಾಠ ಕಲಿಯದಿದ್ದರೆ ನಮ್ಮ ಮುಂದಿನ ಪೀಳಿಗೆಗಳುನೆಮ್ಮದಿಯಿಂದ ಬದುಕಲು ಸಾಧ್ಯವೇ? ನಾವು ಬದುಕಿರುವ ಭೂಮಿಯನ್ನೇ ನಾಶ ಮಾಡಹೊರಟಿರುವ ಜಗತ್ತಿನ ಹಿರಿಯ ಗಣ್ಯಾತಿಗಣ್ಯರಿಗೆ ಭೂಮಿಯ, ಪ್ರಕೃತಿಯ ನಾಡಿಮಿಡಿತ ಅರಿತಿರುವ ಎಳೆಯರು ತಿದ್ದಿ ಬುದ್ಧಿ ಹೇಳುವಗುರುಗಳಾಗಬೇಕೆ?
ಅಭಿವೃದ್ಧಿ ಎಂಬ ಹೆಸರಿನಲ್ಲಿ ಸರ್ವರನ್ನೂ ನಾಶಪಡಿಸಲು ಪರಿಸರವನ್ನು ಹಾಳುಗೆಡವುತ್ತಿರುವುದನ್ನು ಪಣತೊಟ್ಟಂತೆ ತಡೆಯದಿದ್ದರೆ ಇನ್ನು ೪೦-೫೦ವರ್ಷಗಳಲ್ಲಿ ನಾಶವಾಗುವುದು ಖಂಡಿತ. ನಾಶದ ಬಗ್ಗೆ ಪದೇ ಪದೇ ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ತಡೆಯುವುದಾದರೂ ಹೇಗೆ? ಎಂಬ ದಾರಿಗಳನ್ನು ಹುಡುಕುವಾಗ ನಾವು ಕಟ್ಟಿಕೊಂಡ ಸಮಾಜ, ನಾವು ಬದುಕುವ ಶೈಲಿಯನ್ನು ಹಿಂತಿರುಗಿ ನೋಡಿಕೊಳ್ಳುವ ಅಗತ್ಯವಿದೆ. ಎಲ್ಲರೂ ಹೊಟ್ಟೆತುಂಬಾ ಉಂಡು, ಕಣ್ತುಂಬ ನಿದ್ದೆ ಮಾಡಿ ಕೈ ತುಂಬಾ ದುಡಿದು, ನೆಮ್ಮದಿಯ ಆಸರೆಗಳು ಕಂಡುಕೊಂಡಿರುವ ಸ್ಥಿತಿ ಇದೆಯಾ? ಖಂಡಿತವಾಗಿಯೂ ಇಲ್ಲ. ಹಲವರು ದುಡಿದು, ಕೆಲವರು ಶ್ರೀಮಂತವಾಗಿರುವ ಮಾರ್ಗಗಳನ್ನೇ ನಾವು ಎಷ್ಟೋ ಕಾಲದಿಂದ ಅನುಸರಿಸುತ್ತಿದ್ದೆವೆ. ಇಂಥ ಅಸಮಾನತೆಗೂ ಪರಿಸರ ನಾಶಕ್ಕೂ ಸಂಬಂಧವಿದೆಯೇ? ಖಂಡಿತವಾಗಿಯೂ ಇದೆ. ಅಭಿವೃದ್ಧಿ ಕನ್ನಡಕ ತೊಟ್ಟರೆ ಅದು ಕಾಣುವುದಿಲ್ಲ. ಕೂಡಿ ದುಡಿಯುವ, ಹಂಚಿ ಉಣ್ಣುವ ಸಹಬಾಳ್ವೆಯ ಒಳಗಣ್ಣಿಗೆ ಅದು ಕಾಣುತ್ತದೆ, ಕೇಳುತ್ತದೆ. ಹಾಗೆ ಬದುಕುತ್ತ್ತಿದ್ದ, ಈಗಲೂ ಬದುಕುತ್ತಿರುವ ಸಮುದಾಯಗಳು ಇವೆ. ಆದರೆ ಅಂತಹ ಸಮುದಾಯಗಳನ್ನು ಶುದ್ಧ ಅನಾಗರಿಕವೆಂದು ಅಂಚಿಗೆ ತಳ್ಳಿದ್ದೇವೆ, ಅಮಾನ್ಯ ಮಾಡಿದ್ದೇವೆ. ಅವು ತಮ್ಮ ಶ್ರಮಶಕ್ತಿಯಿಂದ ಮಣ್ಣಿಗೆ ಮತ್ತು ಪರಿಸರದೊಂದಿಗಿನ ನಿಕಟವಾದ ಒಡನಾಟದೊಂದಿಗೆ ಪಡೆದುಕೊಂಡ ಅರಿವು, ಲೋಕದೃಷ್ಟಿಗಳನ್ನು ಜ್ಞಾನಲೋಕದಿಂದ ಹೊರಗಟ್ಟಿದ್ದೇವೆ. ‘ಕೈ ಕೆಸರಾದರೆ ಬಾಯಿ ತುಂಬಾ ಮೊಸರು’ ಎಂಬ ದುಡಿಯುವುದರ ಪ್ರಯೋಜನ ಹೇಳುವ ಗಾದೆಮಾತು ಜನಪ್ರಿಯ. ಈ ಗಾದೆಯ ಅರ್ಥವೆಂದರೆ ದುಡಿದು ಸುಖಪಡು ಎಂದು. ಆದರೆ ಮಣ್ಣಿಗೆ ಕೈ ಇಡದೇ ಸುಖಪಡುವ ವಿಧಾನ ಕಂಡುಕೊಳ್ಳುವುದು ಈಗ ಜಾಣತನವಾಗಿದೆ. ಇಂತಹ ಜಾಣತನಗಳು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ಜ್ಞಾನಿಗಳು ಹೇಳುತ್ತಲೇ ಇದ್ದಾರೆ. ವಿವೇಕವಂತರು ಪರಿಹಾರದ ಮಾರ್ಗಗಳ ಜಾಡು ಹಿಡಿಯುತ್ತಿದ್ದಾರೆ. ಪರಿಹಾರದ ಮಾರ್ಗವೆಂದರೆ ‘ಶುದ್ಧ’ವಾಗಿರುವ ಕೈಗಳನ್ನು ಮಣ್ಣು ಮಾಡಿಕೊಳ್ಳುವ ಮಾರ್ಗ, ಮಣ್ಣಿನೊಂದಿಗೆ ದುಡಿಯುತ್ತಿರುವವರ ಮಾರ್ಗ. ಕಸವನ್ನು ಗೊಬ್ಬರವಾಗಿಸಿ ಮಣ್ಣಿಗೆ ಸತ್ವ ನೀಡುವ ಸಫಾಯಿ ಕರ್ಮಚಾರಿಗಳ ಬದುಕು ಮತ್ತು ಅರಿವು ಸಹ ಪರಿಹಾರ ಮಾರ್ಗವಾಗಿದೆ. ಅಂತಹವರಿಂದ ದೂರ ಬಂದು ಹಾದಿ ತಪ್ಪಿರುವುದರಿಂದ ಜಾಡುಗಳನ್ನು ಕಂಡುಕೊಂಡು ಪಯಣಿಸಬೇಕಾಗಿದೆ. ಅಸಮಾನತೆ, ತಾರತಮ್ಯದ ಕಸವನ್ನು ಗೊಬ್ಬರವಾಗಿಸಿ ಸರ್ವರಿಗೂ ಸಮಬಾಳು, ಸಮಪಾಲಿನ ಬದುಕಿನ ಬೆಳೆ ಬೆಳೆಯುವ ಸಲುವಾಗಿ. ಅಂತಹ ಬೆಳೆಯಿಂದ ಸತ್ವ ಪಡೆದುಕೊಂಡು ಜಗತ್ತನ್ನು ವಿನಾಶದಿಂದ ಬಿಡುಗಡೆಗೊಳಿಸುವ ಸಲುವಾಗಿ.
ಕೃಪೆ:ದು.ಸರಸ್ವತಿಯವರ ಮಹಾಪ್ರಬಂಧ “ಕಮ್ಯುನಿಟಿ ಅಂಡರ್ ಸೀಜ್: ಸೋಷಿಯೋ ಕಲ್ಚರಲ್ ಸ್ಟಡಿ ಆಫ್ ಸಫಾಯಿ ಕರ್ಮಚಾರೀಸ್ ಇನ್ ಕರ್ನಾಟಕ ಫ್ರಂ ಫೆಮಿನಿಸ್ಟ್ ಪರಸ್ಪೆಕ್ಟಿವ್”.
ಡಾ. ಕೆ.ವಿ.ನೇತ್ರಾವತಿಯವರ “ಕೋಲಾರದ ಸಾಂಸ್ಕೃತಿಕ ಅಧ್ಯಯನ”ದ ಟಿಪ್ಪಣಿಗಳು.
