ಮೃತರಾದವರಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವುದರ ಜೊತೆಗೆ ಮರಣಾನಂತರವೂ ಅವರಿಗೆ ಒಳ್ಳೆಯದಾಗಲಿ ಎಂಬ ನಂಬಿಕೆಯಿಂದ ಹಲವಾರು ಆಚರಣೆಗಳನ್ನು ತೀರಿಕೊಂಡಾಗ ಮತ್ತು ತೀರಿಕೊಂಡ ನಂತರದ ದಿನಗಳಲ್ಲಿ ಆಚರಿಸಲಾಗುತ್ತದೆ. ಮಾದಿಗರಲ್ಲಿ ಹೆಣವನ್ನು ಸುಡುವುದಿಲ್ಲ; ಮಣ್ಣುಮಾಡುವ ಸಂಪ್ರದಾಯವಿದೆ. ಯಾರಾದರೂ ತೀರಿಕೊಂಡಾಗ ಗಳಿಗೆ ನೋಡುತ್ತಾರೆ. ಹೆಣದ ಹಿಂದೆ ಸೇರಿನ ಮೇಲೆ ದೀಪವಿಡುತ್ತಾರೆ. ಮನೆಯ ಮುಂದೆ ಸೌದೆಯ ಸಣ್ಣದ ಚೂರುಗಳನ್ನಿಟ್ಟು ಬೆಂಕಿ ಹಾಕುತ್ತಾರೆ. ಮನೆಯ ಮುಂದೆ ಹಾಕಿದ ಬೆಂಕಿಯಲ್ಲಿ ಹೊಸಮಡಕೆಯಲ್ಲಿ ನೀರು, ಅಕ್ಕಿ ಹಾಕಿ ಬೇಯಿಸುವುದನ್ನು ಕೂಳು ಎನ್ನುತ್ತಾರೆ.
ಮಣ್ಣು ಮಾಡಲು ಹೆಣವನ್ನು (ಪುರುಷನಾಗಿರಲಿ, ಸ್ತ್ರೀಯಾಗಿರಲಿ)ಒಯ್ಯುವ ಮೊದಲು ಚೆನ್ನಾಗಿ ಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆ ಹಾಕಿ, ಅರಶಿಣ-ಕುಂಕುಮ, ವಿಭೂತಿ ಹಚ್ಚುತ್ತಾರೆ. ದೊಡ್ಡವರು ಸೇರಿ ಒಟ್ಟು ಹತ್ತು ಜನ ಹೋಗಿ ಚಟ್ಟಕ್ಕೆ ಬೇಕಾದ ಬೊಂಬು, ಹೊಸ ಬಟ್ಟೆ, ಎಲೆ ಅಡಿಕೆ, ಕಳ್ಳೆಪುರಿ, ಕೂಳು ಬೇಯಿಸುವ ಮಡಕೆ ಮತ್ತು ಅಕ್ಕಿಯನ್ನು ತರುತ್ತಾರೆ.ಬೊಂಬಿನಲ್ಲಿ ಬಹಳ ಸುಂದರವಾಗಿ ಚಟ್ಟಕಟ್ಟಿ ಹೂವಿನ ಅಲಂಕಾರ ಮಾಡುತ್ತಾರೆ.ಭತ್ತದ ಹುಲ್ಲು, ಬಿದಿರು ಬೊಂಬುಗಳನ್ನು ಚಟ್ಟ ಕಟ್ಟಲು ಬಳಸುತ್ತಾರೆ.
ಚಟ್ಟದಲ್ಲಿ ಸತ್ತ ವ್ಯಕ್ತಿಯನ್ನು ಮಲಗಿಸುತ್ತಾರೆ. ತೀರಿಹೋದ ವ್ಯಕ್ತಿಯ ಸಂಬಂಧಿಕರಲ್ಲೇ ನಾಲ್ವರು ಚಟ್ಟವನ್ನು ಹೊತ್ತುಕೊಂಡು ಸ್ಮಶಾನಕ್ಕೆ ಒಯ್ಯುತ್ತಾರೆ. ಸ್ಮಶಾನಕ್ಕೆ ಒಯ್ಯುವಾಗ ಹೆಣದ ಮುಂದೆ ಸತ್ತ ವ್ಯಕ್ತಿಯ ಹಿರಿಯ ಮಗನು ಕೂಳಿನ ಮಡಕೆಯನ್ನು ಹಿಡಿದುಕೊಂಡು ಹೋಗಬೇಕು.ಅರ್ಧದಾರಿಯಲ್ಲಿ ಹೆಣವನ್ನು ಇಳಿಸಿ, ಪೂಜೆ ಮಾಡಿ ಕೂಳಿನ ಮಡಕೆಯನ್ನು ಒಡೆದು ಹೆಣವನ್ನು ಸ್ಮಶಾನಕ್ಕೆ ಒಯ್ಯುತ್ತಾರೆ.
ಅಲ್ಲಿ ತೋಡಿದ ಗುಂಡಿಯೊಳಗೆ ಗಳಿಗೆ ನೋಡಿ ಮಣ್ಣುಮಾಡುತ್ತಾರೆ. ಮಣ್ಣು ತೋಡಿ ಗುಂಡಿ ಅಗೆಯುವ ಕೆಲಸವನ್ನು ಸತ್ತವರ ಮನೆಯವರಲ್ಲದೆ ಅವರದೇ ಜಾತಿಯ ಬೇರೆಯವರು ಮಾಡುತ್ತಾರೆ. ಗುಂಡಿ ತೊಡುವವರಿಗೆ ಹಣ ನೀಡಬೇಕು. ತೀರಿಹೋದ ವ್ಯಕ್ತಿ ಇಷ್ಟಪಡುತ್ತಿದ್ದರೆ ಎಲೆ-ಅಡಿಕೆ-ಸುಣ್ಣವನ್ನು ಕುಟ್ಟಿ ಹೆಣದ ಬಾಯಿಗೆ ಇಡುತ್ತಾರೆ. ಹೂತು ಬರುವಾಗ ಹಸು ಸಗಣಿ ತುಳಿದುಕೊಂಡು ಬಂದು ದೀಪ ನೋಡುತ್ತಾರೆ.
ಮಣ್ಣು ಮಾಡಿದ ಗುಂಡಿಯ ಹತ್ತಿರ ಮೂರನೇ ದಿವಸ ಹಾಲು-ತುಪ್ಪ ಹಾಕಿ ಎಡೆ ಇಟ್ಟು ಸ್ಮಶಾನದಲ್ಲಿ ಪೂಜೆ ಮಾಡುತ್ತಾರೆ. ತೀರಿಹೋದ ವ್ಯಕ್ತಿಯ ಹಿರಿಯ ಮಗನು ತಲೆ ಬೋಳಿಸಿಕೊಳ್ಳಬೇಕು. ಹದಿನಾರನೆಯ ದಿವಸ ಸುಣ್ಣಬಣ್ಣ ಮಾಡಿ, ಗಂಗೆಯನ್ನು ತಂದು ಪೂಜೆಮಾಡಿ, ದಾಸಯ್ಯನನ್ನು ಕರೆಸಿ ಸೂತಕ ತೆಗೆಸುತ್ತಾರೆ. ಮಾಂಸದ ಅಡುಗೆ ಮಾಡಿಸಿ ಊಟಹಾಕಿಸುತ್ತಾರೆ. ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ. ತಿಥಿಯಲ್ಲಿ ಸತ್ತ ವ್ಯಕ್ತಿಯು ಇಷ್ಟಪಡುತ್ತಿದ್ದ ತಿನಿಸುಗಳ ಜೊತೆಗೆ ಬೀಡಿ, ಬೆಂಕಿಪೊಟ್ಟಣ, ತಂಬಾಕು, ಹೆಂಡವನ್ನು ಎಡೆ ಇರಿಸುತ್ತಾರೆ. ಕೆಲವರು ಹನ್ನೊಂದನೆಯ ದಿನ ಸೂತಕ ತೆಗೆದು ತಿಥಿ ಮಾಡುತ್ತಾರೆ.
ತೀರಿಕೊಂಡ ವ್ಯಕ್ತಿ ಗಂಡಸಾಗಿದ್ದರೆ ಆತನ ಹೆಂಡತಿಗೆ ತವರು ಮನೆಯವರು ಬಳೆ, ಅರಶಿಣ-ಕುಂಕುಮ, ಹೂ ಮತ್ತು ಸೀರೆಯನ್ನು ತಂದುಕೊಡುತ್ತಾರೆ. ಹೊಸ ಸೀರೆ ಉಡಿಸಿ, ಕುಂಕುಮ-ಅರಿಶಣವಿಟ್ಟು, ಮಡಿಲಕ್ಕಿಕಟ್ಟಿ ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಾರೆ. ಶವವನ್ನು ಗುಂಡಿಗೆ ಹಾಕಿದಮೇಲೆ ಹೆಂಡತಿಯ ಐದು ಬಳೆ ಮತ್ತು ಮಡಿಲಕ್ಕಿಯನ್ನು ಗುಂಡಿಗೆ ಹಾಕುತ್ತಾರೆ. ಹದಿನಾರನೆಯ ದಿನದವರೆಗೂ ಹೆಂಡತಿಯು ಬಳೆಯನ್ನು ತೊಡುತ್ತಾಳೆ. ಹದಿನಾರನೆಯ ದಿನ ಹೊಸ ಸೀರೆ ಉಡಿಸಿ, ಕೈಯಲ್ಲಿರುವ ಬಳೆಗಳನ್ನು ಗಂಗೆಗೆ (ನೀರಿಗೆ) ಹಾಕಿಸುತ್ತಾರೆ; ಒಡೆಸುವುದಿಲ್ಲ. ಮಾಂಗಲ್ಯ ಮತ್ತು ಕುಂಕುಮ ತೆಗೆಸುತ್ತಾರೆ. ವಿಧವೆಯರನ್ನು ಅಮಂಗಳವೆಂದು ಭಾವಿಸುವುದಿಲ್ಲ. ಮದುವೆಯ ಕೆಲವು ಆಚರಣೆಯನ್ನು ಆಕೆಯ ಕೈಲೇ ಮಾಡಿಸುತ್ತಾರೆ.
ಕ್ರೆöÊಸ್ತ ಧರ್ಮಕ್ಕೆ ಮತಾಂತರವಾಗಿರುವವರು ಸಹ ಸತ್ತ ಮೂರನೇ ದಿನ ಹಾಲು-ತುಪ್ಪ ಮಾಡಿದರೆ, ಹನ್ನೊಂದನೆಯ ದಿನ ಪಾದ್ರಿಯನ್ನು ಮನೆಗೆ ಕರೆಸಿ ಪ್ರಾರ್ಥನೆ ಮಾಡಿ ಮಣ್ಣು ಮಾಡುತ್ತಾರೆ. ಗಂಡ ತೀರಿಕೊಂಡರೆ ಹೆಂಡತಿಯ ತೌರು ಮನೆಯವರು ಬಳೆ, ಅರಿಶಿಣ-ಕುಂಕುಮ, ಹೂ ತರುವ ಆಚರಣೆಯನ್ನೂ ಮಾಡುತ್ತಾರೆ. ಹೆಣಕ್ಕೆ ಸ್ನಾನ ಮಾಡಿಸಿದ ಮೇಲೆ ಆತ ಎಲೆ-ಅಡಿಕೆ ತಿನ್ನುತ್ತಿದ್ದರೆ, ಎಲೆ-ಅಡಿಕೆಯನ್ನು ಕುಟ್ಟಿ ಅವರ ಬಾಯಿಗೆ ಇರಿಸುತ್ತಾರೆ. ಬಿಳಿಯ ಬಟ್ಟೆಯನ್ನು ಬಾಕ್ಸ್ನ ಸುತ್ತ ಇರಿಸುತ್ತಾರೆ. ಹೆಣವನ್ನು ಬಾಕ್ಸಿನಲ್ಲಿಟ್ಟು ಬಾಕ್ಸಿನ ಸಮೇತ ಗುಂಡಿಯಲ್ಲಿಟ್ಟು ಮುಚ್ಚುತ್ತಾರೆ. ನಲವತ್ತೆರಡನೇ ದಿನ ತೀರಿಕೊಂಡ ವ್ಯಕ್ತಿಯ ಪೋಟೋ ಇಟ್ಟು ಪಾದ್ರಿಯನ್ನು ಕರೆಯಿಸಿ ಪ್ರೇಯರ್ ಮಾಡಿಸಿ, ಬಂದ ನೆಂಟರಿಗೆಲ್ಲಾ ಸಿಹಿ ಮತ್ತು ಖಾರದ ಊಟ ಹಾಕಿಸುತ್ತಾರೆ.
ಬಳ್ಳಾರಿಯಲ್ಲಿ ನಾಮಧಾರಿ ಸಮುದಾಯದಲ್ಲಿ ಸಾವಾಗಿರುವ ಮನೆಯಲ್ಲಿ ಅಡುಗೆ ಮಾಡಿ, ಸತ್ತ ವ್ಯಕ್ತಿಯ ಕೈಯನ್ನು ಮುಟ್ಟಿಸಿ, ಉಂಡ ಮೇಲೆ ಹೆಣವನ್ನು ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಾರೆ. ಸಾವಾದ ಐದನೆಯ ದಿನದಲ್ಲಿ ಕುರಿ ಕಡಿದು ಮಾಂಸದ ಅಡುಗೆ ಮಾಡಿ ರಕ್ತ ಸಂಬಂಧಿಗಳನ್ನು ಮಾತ್ರ ಕರೆದು ಊಟಹಾಕಿಸುತ್ತಾರೆ. ಹನ್ನೊಂದನೇ ದಿನದಲ್ಲಿ ಸತ್ತುಹೋದ ವ್ಯಕ್ತಿಗೆ ಇಷ್ಟವಾದ ಅಡುಗೆಯನ್ನು ಮಾಡಿ, ಕುರಿ ಕಡಿದು, ಮಾಂಸದ ಅಡುಗೆ ಮಾಡಿ ಎಡೆ ಹಾಕಿ ಪೂಜೆ ಮಾಡುತ್ತಾರೆ. ಆ ದಿವಸ ಸ್ಮಶಾನದಲ್ಲಿ ರಕ್ತಸಂಬಂಧಿಕರೆಲ್ಲಾ ಸೇರಿ ಅಯ್ನೋರು ಗುಡ್ಡೆ ಮಾಡಿ ಅದಕ್ಕೆ ಪೂಜೆ ಮಾಡಿ ಅದರ ಮೇಲೆ ಕೂತು ಊಟಮಾಡುತ್ತಾರೆ.ಈ ಆಚರಣೆಯನ್ನು ಕಡ್ಡಾಯವಾಗಿ ರಕ್ತ ಸಂಬಂಧಿಗಳು ಮಾತ್ರ ಮಾಡುತ್ತಾರೆ.
ಕೆಲವು ಕಡೆ ತಿಥಿಯ ದಿನ ಮೇಕೆ ಕಡಿಯುತ್ತಾರೆ. ಕಡಿದಾಗ ಹೊರಬಂದು ಹೆಪ್ಪುಗಟ್ಟುವ ರಕ್ತವನ್ನು ಹುರಿದು ಮನೆಯವರೆಲ್ಲಾ ತಿನ್ನುತ್ತಾರೆ. ನೆಂಟರಿಗೆಲ್ಲಾ ಮೊದಲನೆ ದಿನ ಸಿಹಿ ಊಟವನ್ನು ಎರಡನೇ ದಿನ ಖಾರದ ಊಟ ಹಾಕಿಸುತ್ತಾರೆ. ಸಾವಾಗಿ ಒಂದು ತಿಂಗಳವರೆಗೂ ಯಾವ ದೇವರಿಗೂ ಪೂಜೆ ಮಾಡುವುದಿಲ್ಲ.
ಗುಲ್ಬರ್ಗದಲ್ಲಿ ಮಾದಿಗ ಜಾತಿಯವರು ಸಾವಾದ ಐದನೇ ದಿನ ‘ದಿನ’ ಮಾಡಿ ಸತ್ತವರ ವಯಸ್ಸಿನಷ್ಟೇ ಇರುವವರನ್ನು ಕರೆದು ಅವರಿಗೆ ಊಟ ಹಾಕಿಸುತ್ತಾರೆ.
ಸಾವಿನ ಆಚರಣೆಯು ವ್ಯಕ್ತಿಯನ್ನು ಘನತೆಯಿಂದ ಬೀಳ್ಕೊಡುವುದಾಗಿದೆ. ಹೆಣಕ್ಕೆ ಅಚ್ಚುಕಟ್ಟಾಗಿ ಸ್ನಾನಮಾಡಿಸುತ್ತಾರೆ. ಬಿದಿರು ಬೊಂಬುಗಳಿಂದ ಚಟ್ಟವನ್ನು ಕಟ್ಟಿ ಹೂಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ. ಸಾವಿನ ಸಂದರ್ಭವನ್ನು ಸೂತಕವಾಗಿ ಪರಿಗಣಿಸುತ್ತಾರಾದರೂ ಸ್ಪರ್ಶವನ್ನು ಮೈಲಿಗೆ ಎಂದು ಪರಿಗಣಿಸುವುದಿಲ್ಲ. ವೈದಿಕರಂತೆ ತಿಥಿಯ ಆಚರಣೆಗೆಂದೇ ನಿರ್ದಿಷ್ಟವಾದ ಅಡುಗೆಗಳನ್ನು ಮಾಡದೆ ತೀರಿಹೋದ ವ್ಯಕ್ತಿಯು ಇಷ್ಟಪಡುವ ಅಡುಗೆಗಳನ್ನು ಇಷ್ಟಪಡುತ್ತಿದ್ದ ವಸ್ತುಗಳನ್ನು(ಹೆಂಡ, ಬೀಡಿಯೂ ಸೇರಿ) ಎಡೆಗೆ ಇಡುತ್ತಾರೆ. ವೈದಿಕರಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುವುದು ನಿಷಿದ್ಧ. ಮಾದಿಗ ಜಾತಿಯವರೂ ಸೇರಿದಂತೆ ಅನೇಕ ಅವೈದಿಕ ಜಾತಿಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುತ್ತಾರೆ; ಹೆಣವನ್ನು ಮಣ್ಣುಮಾಡುವ ಎಲ್ಲ ಕ್ರಿಯೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಆದರೆ ತಿಥಿಯನ್ನು ಗಂಡುಮಕ್ಕಳೇ ಮಾಡುತ್ತಾರೆ.
