ತೊಂಬತ್ತರ ದಶಕದಲ್ಲಿ ಸಫಾಯಿ ಕರ್ಮಚಾರಿ ಚಳುವಳಿಯ ಮೈಲಿಗಲ್ಲುಗಳು

ಕರ್ನಾಟಕದಲ್ಲಿ ೧೯೯೦ರ ದಶಕದ ಅವಧಿಯು ನವ-ಉದಾರವಾದಿ ಕಾರ್ಮಿಕ ಸುಧಾರಣೆಗಳು ಮತ್ತು ಮುನಿಸಿಪಲ್ ಸೇವಾ ಕ್ಷೇತ್ರಕ್ಕೆ ಗುತ್ತಿಗೆ ವ್ಯವಸ್ಥೆಯು ಜಾರಿಗೊಂಡ ಸಂದರ್ಭವಾಗಿತ್ತು. ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯು ಘನ ತ್ಯಾಜ್ಯ ನಿರ್ವಹಣೆಯ ಕೆಲಸಕ್ಕೆ ಖಾಯಂ ನೌಕರರನ್ನು ನೇಮಕಮಾಡಿಕೊಳ್ಳುತ್ತಿತ್ತು. ಸ್ವಚ್ಛತೆಯ ಕೆಲಸಕ್ಕೆ ಮುನಿಸಿಪಲ್ ಬಜೆಟ್‌ನ ಶೇ.೪೦-೫೦ರಷ್ಟು ವ್ಯಯವಾಗುತ್ತಿರುವುದು ದುಬಾರಿ ಎಂಬ ಕಾರಣಕ್ಕೆ ಸರ್ಕಾರವು ತ್ಯಾಜ್ಯನಿರ್ವಹಣೆಯ ಕೆಲಸವನ್ನು ೧೯೯೫ರಲ್ಲಿ ಖಾಸಗಿಗೊಳಿಸಿ ಗುತ್ತಿಗೆಗೆ ನೀಡಿತು. ಬೆಂಗಳೂರಿನ ಬಹುಪಾಲು ವಾರ್ಡುಗಳ ಗುತ್ತಿಗೆ ಹಿಡಿದವರು ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ಕೆಲಸಗಾರರು ಶೇ.೮೦ಕ್ಕಿಂತ ಹೆಚ್ಚಿನವರು ದಲಿತ ಮಹಿಳೆಯರು. ಅತ್ಯಂತ ಕೆಟ್ಟ ಕೆಲಸದ ಪರಿಸ್ಥಿತಿಯಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ೧೯೯೨ರಲ್ಲಿ ಅವರಿಗೆ ಸಿಗುತ್ತಿದ್ದ ವೇತನ ರೂ.೫೦೦-೬೦೦. ೨೦೦೩ರವರೆಗೂ ಅವರಿಗೆ ಸಿಗುತ್ತಿದ್ದ ವೇತನ ೯೦೦-೧೦೦೦ರೂ. ಮಾತ್ರ.

ಗುತ್ತಿಗೆ ವ್ಯವಸ್ಥೆಯಡಿ ಅವಶ್ಯಕ ಸೇವೆ
ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಗುತ್ತಿಗೆಗೆ ನೀಡುವುದು ಗುತ್ತಿಗೆ ಕಾರ್ಮಿಕ ಕಾಯ್ದೆ, ೧೯೭೦ರ ಉಲ್ಲಂಘನೆಯಾಗಿದೆ. ಕಾಯ್ದೆ ಪ್ರಕಾರ ಯಾವ ಕೆಲಸವು ನಿರಂತರವಾಗಿ ನಡೆಯಬೇಕಾಗಿದೆಯೊ ಮತ್ತು ಅವಶ್ಯಕ ಕೆಲಸವಾಗಿದೆಯೊ ಆ ಕೆಲಸವನ್ನು ಮಾಲೀಕರು ಗುತ್ತಿಗೆಗೆ ನಿಡುವಂತಿಲ್ಲ. ನಗರ ಸ್ವಚ್ಛತೆಯು ಮುನಿಸಿಪಾಲಿಟಿಯು ನಿರ್ವಹಿಸಬೇಕಾದ ನಿರಂತರವಾದ ಮುಖ್ಯ ಕೆಲಸವೂ ಆಗಿದೆ. “ಎಸೆನ್ಶಿಯಲ್ ಸರ್ವಿಸಸ್ ಮೇನ್‌ಟೆನೆನ್ಸ್ ಆಕ್ಟ್ ೨೦೧೩”(ಅಗತ್ಯ ಸೇವಾ ನಿರ್ವಹಣಾ ಕಾಯ್ದೆ)ಜಾರಿಗೊಳಿಸಿದಾಗಿನಿಂದ ಒಳಚರಂಡಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು “ಅಗತ್ಯ ಸೇವೆ” ಎಂದು ಪರಿಗಣಿಸಲಾಗಿದೆಯಲ್ಲದೆ ನೈರ್ಮಲ್ಯ ಕೆಲಸಗಾರರು ಮುಷ್ಕರ ಹೂಡುವುದನ್ನು ನಿಷೇಧಿಸಲಾಗಿದೆ. ಆದರೆ ನೈರ್ಮಲ್ಯ ಕೆಲಸವನ್ನು “ಅಗತ್ಯ”ವೆಂದು ಪರಿಗಣಿಸುವ ಸರ್ಕಾರ ಆ ಕೆಲಸವನ್ನು ಗುತ್ತಿಗೆಗೆ ನೀಡಿದೆ.
ಗುತ್ತಿಗೆ ಕಾಯ್ದೆ ವ್ಯಾಪ್ತಿಯೊಳಗಡೆಯೂ ಪದೇ ಪದೇ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಗುತ್ತಿಗೆ ಕಾಯ್ದೆಯು, ಮಾಡುವ ಕೆಲಸವು ಒಂದೇ ರೀತಿಯದಾಗಿದ್ದರೆ ವೇತನವು ಒಂದೇ ಆಗಿರಬೇಕೆಂದು ಹೇಳುತ್ತದೆ. ಆದರೆ ಈ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ೫೦೦೦ಖಾಯಂ ಕಾರ್ಮಿಕರಿಗೆ ಆರೋಗ್ಯ ಸೇವೆ, ರಜೆ ಮತ್ತು ನಿವೃತ್ತಿ ಸೌಲಭ್ಯದೊಂದಿಗೆ ೫೦೦೦-೬೦೦೦ರೂ. ವೇತನ ಸಿಗುತ್ತಿದ್ದರೆ, ೮೦೦೦ ಗುತ್ತಿಗೆ ಕಾರ್ಮಿಕರಿಗೆ ರಜೆಯೂ ಸೇರಿದಂತೆ ಯಾವ ಸೌಲಭ್ಯವೂ ಇಲ್ಲದೆ ಸಿಗುತ್ತಿದ್ದ ವೇತನ ೫೦೦-೬೦೦ರೂ. ಮಾತ್ರ. ಅಂದಿನಿಂದಲೂ ಈ ತಾರತಮ್ಯ ಹೆಚ್ಚುತ್ತಲೇ ಇದೆ. ಇಂತಹ ತಾರತಮ್ಯದ ವಿರುದ್ಧ ಸಫಾಯಿ ಕರ್ಮಚಾರಿಗಳ ಹಕ್ಕು ಮತ್ತು ಘನತೆಗಾಗಿ ತೊಂಬತ್ತರ ದಶಕದಿಂದಲೂ ಹೋರಾಟ ಮಾಡುತ್ತಿರುವ ಸಂಘಟನೆಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಗುತ್ತಿಗೆ ಕೊನೆಗೊಳಿಸಲು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ನಡೆಸಿದ ಹೋರಾಟ
ಗುತ್ತಿಗೆ ವ್ಯವಸ್ಥೆಯ ಅನ್ಯಾಯವನ್ನು ವಿರೋಧಿಸಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ೨೦೦೧ರಲ್ಲಿ ಆರಂಭವಾಯಿತು. ಎನ್.ಆಂಜನೇಯಲು, ಕಾಮ್ರೇಡ್ ಬಾಲಕೃಷ್ಣನ್ ಮತ್ತು ಬಿ.ಎ. ಕೇಶವಮೂರ್ತಿಯವರು ಪದಾಧಿಕಾರಿಗಳಾಗಿದ್ದರು. ಜಯಮ್ಮ, ವೆಂಕಟಮ್ಮ, ಕಸ್ತೂರಿ, ಶಾರದಮ್ಮ, ರವಿ, ಕೃಷ್ಣ, ಪೆದ್ದಣ್ಣ ಹಾಗೂ ಇನ್ನು ಹಲವಾರು ಕಾರ್ಮಿಕರು ಸಕ್ರಿಯರಾಗಿ ತೊಡಗಿಕೊಂಡರು. ಕಾರ್ಮಿಕ ಹಕ್ಕುಗಳ ಹೋರಾಟಗಾರರಾದ ಬಾಬು ಮ್ಯಾಥ್ಯೂಸ್, ಮೋಹನ ಮಾಣಿಯವರು ಪ್ರಮುಖ ಪಾತ್ರವಹಿಸಿದರು. ಕಾರ್ಮಿಕರನ್ನು ಸಂಘಟಿಸುತ್ತಿದ್ದಾರೆಂಬ ಕಾರಣಕ್ಕಾಗಿ ಜುಲೈ ೨೦೦೧ರಲ್ಲಿ ಶಿವನಹಳ್ಳಿ ವಾರ್ಡಿನಲ್ಲಿ ೫೮ಕಾರ್ಮಿಕರನ್ನು ವಜಾಮಾಡಲಾಯಿತು. ಸಂಘವು ಪಾಲಿಕೆ ಅಧಿಕಾರಿಗಳೊಂದಿಗೆ, ಕಾರ್ಮಿಕ ಆಯುಕ್ತರೊಂದಿಗೆ, ಕಾರ್ಮಿಕ ಇಲಾಖೆಯೊಂದಿಗೆ ಚರ್ಚೆ ನಡೆಸಿತು. ಹಲವಾರು ಪ್ರತಿಭಟನಾ ಧರಣಿಗಳನ್ನು, ಸಾರ್ವಜನಿಕ ಸಭೆಗಳನ್ನು, ಪತ್ರಿಕಾ ಗೋಷ್ಟಿಗಳನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಮಿಕರ ಸಮಸ್ಯೆಗಳತ್ತ ಗಮನ ಸೆಳೆಯಿತು. ಕನಿಷ್ಠ ವೇತನ ಕುರಿತು ಚರ್ಚೆನಡೆಸಲು ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಸಂಘದ ಸದಸ್ಯರು ಮತ್ತು ಗುತ್ತಿಗೆದಾರರ ಸಂಘದವರೊಂದಿಗೆ ಸಂಧಾನ ಸಭೆ ನಡೆಸಲಾಯಿತು. “ನಾವು ನಿಮ್ಮ ನಗರವನ್ನು ಸ್ವಚ್ಛಮಾಡುತ್ತೇವೆ ನೀವು ನಿಮ್ಮ ಆಡಳಿತವನ್ನು ಸ್ವಚ್ಛಗೊಳಿಸಿ” ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಪ್ರತಿಭಟನಾ ಆಂದೋಲನವನ್ನು ನಡೆಸಲಾಯಿತು. ಆಂದೋಲನವು ಈ ಕೆಳಗಿನ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಿತು:
೧. ೧೪.೦೮.೨೦೦೧ರ ಕಾರ್ಮಿಕ ಆಯುಕ್ತರ ಆದೇಶವನ್ನು ಜಾರಿಗೊಳಿಸಿ ಕನಿಷ್ಠ ವೇತನ ರೂ.೨೧೪೬ನ್ನು
ನಿಗದಿಮಾಡಬೇಕು.
೨. ಮಹಿಳೆ ಮತ್ತು ಪುರುಷರಿಬ್ಬರಿಗೂ ಸಮಾನ ವೇತನ ನೀಡಬೇಕು
೩. ಗುತ್ತಿಗೆ ಕಾರ್ಮಿಕ ಕಾಯ್ದೆ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು.
೪. ಯೂನಿಫಾರಂ, ಗಂಬೂಟ್ಸ್, ಗ್ಲೋವ್ಸ್ ಮತ್ತು ಬ್ಯಾಡ್ಜುಗಳನ್ನು ಕಾರ್ಮಿಕರಿಗೆ ನೀಡಬೇಕು.
೫.ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿರುವ ಕಾರಣಕ್ಕೆ ವಜಾ ಮಾಡಿರುವ ಕಾರ್ಮಿಕರನ್ನು ಹಿಂತೆಗೆದುಕೊಳ್ಳಬೇಕು.
ವಜಾ ಮಾಡಿರುವ ಕೆಲಸಗಾರರನ್ನು ಹಿಂದೆ ತೆಗೆದುಕೊಳ್ಳದಿದ್ದರೆ ಕಾರ್ಪೊರೇಷನ್ ಕಚೇರಿ ಮುಂದೆ ಮುಷ್ಕರ ಹೂಡುವುದಾಗಿ ಸಂಘ ಹೇಳಿತು.
ವಜಾಮಾಡಲಾಗಿದ್ದ ೫೮ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದರೊಂದಿಗೆ ಆಂದೋಲನವು ಯಶಸ್ವಿಯಾಗಿ ಕೊನೆಗೊಂಡಿತು. ಆದರೆ ಪಾಲಿಕೆಯು ಗುತ್ತಿಗೆದಾರರಿಗೆ ಹಣ ನೀಡುತ್ತಿದ್ದರೂ ಅವರು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹಾಗೂ ಉಳಿದ ಸೌಲಭ್ಯಗಳನ್ನು ನೀಡದಿದ್ದುರಿಂದಾಗಿ ಹೋರಾಟ ಮುಂದುವರೆಯಿತು. ಅಂತಿಮವಾಗಿ ಹೋರಾಟಕ್ಕೆ ಫಲ ದೊರೆಯಿತು. ಆಗಸ್ಟ್ ೨೦೦೨ರಲ್ಲಿ ಕರ್ನಾಟಕ ಸರ್ಕಾರವು ಕನಿಷ್ಠ ವೇತನವನ್ನು ಘೋಷಿಸಿ ಗೆಜೆಟ್ ನೋಟಿಫಿಕೇಷನ್ ನೀಡಿತು. ಗುತ್ತಿಗೆದಾರರು ಗೆಜೆಟ್ ನೊಟಿಫಿಕೇಶನ್ ಪ್ರಶ್ನಿಸಿ ಕೋರ್ಟಿಗೆ ಹೋದಾಗ, ಕೋರ್ಟು ನೋಟಿಫಿಕೇಶನನ್ನು ಎತ್ತಿ ಹಿಡಿಯಿತು. ಆ ಪ್ರಕಾರ ಕನಿಷ್ಠ ವೇತನ ಕಾಯ್ದೆ ೧೯೪೮ರ ಅನ್ವಯ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡುವವರೆಗೂ ರೂ.೧೮೦೦ರನ್ನು ಕನಿಷ್ಠ ವೇತನವಾಗಿ ನೀಡಬೇಕೆಂದು ಆದೇಶಿಸಲಾಯಿತು.
ನೋಟಿಫಿಕೇಷನ್‌ಗೆ ಅನುಗುಣವಾಗಿ ಬೃಹತ್ ಬೆಂಗಳೂರು ನಗರ ಪಾಲಿಕೆಯು ಜಾರಿಯಲ್ಲಿದ್ದ ಗುತ್ತಿಗೆಯನ್ನು ತೆಗೆದು ಹೊಸ ಟೆಂಡರ್‌ಗಳಿಗೆ ಆಹ್ವಾನ ನೀಡಿತು. ಜೂನ್ ೨೦೦೩ರಲ್ಲಿ ಟೆಂಡರ್‌ಗಳು ಜಾರಿಗೊಂಡವು. ಹೊಸ ಟೆಂಡರ್‌ನಲ್ಲಿ ನೀಡಲಾದ ಸೌಲಭ್ಯಗಳೆಂದರೆ: ಕೆಲಸದ ಒಳಗೆ ಮತ್ತು ಹೊರಗೆ ದೈಹಿಕ ಅಪಘಾತಗಳಾದರೆ ವರ್ಕ್ಮೆನ್ ಕಾಂಪೆನ್‌ಸೇಷನ್ ಆಕ್ಟ್ ಪ್ರಕಾರ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು; ಗ್ಲೋವ್ಸ್, ಗಂಬೂಟ್ಸ್, ಮಾಸ್ಕ್ ಇತ್ಯಾದಿ ಸುರಕ್ಷಾ ಸಲಕರಣೆಗಳನ್ನು ನೀಡಬೇಕು;ಶೌಚಾಲಯ, ಕಚೇರಿ ಮತ್ತು ಸಮವಸ್ತ್ರದ ಸೌಲಭ್ಯಗಳನ್ನು ನೀಡಬೇಕು.
ನೋಟಿಫಿಕೇಷನ್‌ಗೆ ಗುತ್ತಿಗೆದಾರರ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು. ೧೦೦೦೦ ಕಾರ್ಮಿಕರಿಗೆ ವೇತನವನ್ನು ಪಡೆದುಕೊಂಡು ೭೦೦೦ ಕಾರ್ಮಿಕರನ್ನು ನೇಮಕಮಾಡಿಕೊಂಡು ೧೭೫ಲಕ್ಷ ರೂಪಾಯಿಗಳ ಲಾಭವನ್ನು ಗುತ್ತಿಗೆದಾರರು ದೋಚಿದ್ದರು. ಇದು, ಸಂಘಟಿತರಾಗಿದ್ದ ಕಾರ್ಮಿಕರನ್ನು ತೆಗೆದುಹಾಕಿ ಕಾರ್ಮಿಕರ ಕಾಯ್ದೆ ಮತ್ತು ಹಕ್ಕುಗಳ ಅರಿವಿಲ್ಲದ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರಯತ್ನವಾಗಿತ್ತು. ಬಹಳಷ್ಟು ಪೌರಕಾರ್ಮಿಕರಿಗೆ ೧೮೦೦ ರೂ.ಕ್ಕಿಂತಲೂ ಕಡಿಮೆ ವೇತನ ದೊರಕುತ್ತಿತ್ತು. ಹಾಗೂ ಯಾವ ಸೌಲಭ್ಯಗಳೂ ದೊರೆತಿರಲಿಲ್ಲ. ಎಲ್ಲಿ ಕಾರ್ಮಿಕ ಸಂಘಟನೆ ಬಲವಾಗಿತ್ತೊ ಅಂತಹ ಸ್ಥಳಗಳಲ್ಲಿ ಸುಮಾರು ೧೦೦೦ಜನ ಪೌರಕಾರ್ಮಿಕರನ್ನು ಕೆಲಸದಿಂದ ವಜಾಮಾಡಲಾಗಿತ್ತು. ಇಷ್ಟೆಲ್ಲ ಸಾಧ್ಯವಾದದ್ದು ಗುತ್ತಿಗೆದಾರರ, ಕಾರ್ಪೊರೇಟರುಗಳ ಮತ್ತು ಅಧಿಕಾರಶಾಹಿ ಕೂಟದಿಂದಾಗಿ.
ಸಂಘವು ಜನತಾ ನ್ಯಾಯಾಲಯವನ್ನು ಆಯೋಜಿಸಿತು. ಅದರ ಪರಿಣಾಮವಾಗಿ ಸರ್ಕಾರ ಕೂಡಲೇ ಕನಿಷ್ಠ ವೇತನ ಕೊಡುವುದಾಗಿ ಘೋಷಿಸಿತು. ಇದು ಬಹುದೊಡ್ಡ ವಿಜಯವೇ ಆದರೂ ಗುತ್ತಿಗೆದಾರರು ವೇತನ ನೀಡಿದ ಮರುದಿನ ರೂ.೨೦೦-೪೦೦ನ್ನು ಹಿಂತಿರುಗಿಸಬೇಕು. ಇಲ್ಲವಾದರೆ ಕೆಲಸದಿಂದ ತೆಗೆದುಹಾಕುವುದಾಗಿ ಕಾರ್ಮಿಕರನ್ನು ಬೆದರಿಸಿದ್ದರು. ಬೆಂಗಳೂರಿನಿಂದ ಹೊರಗಡೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿ ಮಹಿಳೆಯರಿಗೆ ೧೦೦೦ರೂ. ವೇತನ ದೊರೆತರೆ ಪುರುಷರಿಗೆ ೧೦೦೦-೧೨೦೦ರೂ. ವೇತನ ಸಿಗುತ್ತಿದೆ.
ಪೌರಕಾರ್ಮಿಕರ ದಶಕದ ಹೋರಾಟದ ಫಲವಾಗಿ ಆಗಸ್ಟ್ ೨೦೧೬ರಲ್ಲಿ ಸರ್ಕಾರವು ರೂ.೧೪,೪೦೦ಕನಿಷ್ಠ ವೇತನವನ್ನು ಪಾಲಿಕೆಯಿಂದಲೇ ನೇರವಾಗಿ ಪಾವತಿಸುವಂತೆ ನಿಗದಿಪಡಿಸಿತಲ್ಲದೆ ಇಎಸ್‌ಐ, ಪಿಎಫ್, ಕುಡಿಯುವ ನೀರು, ಶೌಚಾಲಯ, ಉಪಾಹಾರ ಮತ್ತು ಸುರಕ್ಷಾ ಸಲಕರಣೆಗಳ ಸೌಲಭ್ಯಗಳನ್ನು ನೀಡಲು ಆದೇಶಿಸಿತು. ಇದಿನ್ನೂ ಸಂಪೂರ್ಣವಾಗಿ ಜಾರಿಯಾಗಬೇಕಾಗಿದೆ.