ಗರ್ಭಿಣಿ ಮಗು ಹೆತ್ತು ಮೂರು/ಐದು/ಒಂಬತ್ತು/ಹದಿನಾರನೇ/ಹತ್ತೊಂಬತ್ತನೇ ದಿನ ಈ ಆಚರಣೆಯನ್ನು ಮಾಡುತ್ತಾರೆ. ತಾಯಿ ಮತ್ತು ಮಗುವಿಗೆ ನೀಲಗಿರಿ, ಬೇವು ಇತ್ಯಾದಿ ಒಂಬತ್ತು ತರಹದ ಸೊಪ್ಪನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಬೇವಿನ ಸೊಪ್ಪಿಗೆ ಅರಿಶಿಣ ಸೇರಿಸಿ ರುಬ್ಬಿ ಮೈಯಿಗೆ ಹಚ್ಚಿ ನಂತರ ಸ್ನಾನ ಮಾಡಿಸುತ್ತಾರೆ.ಇದನ್ನು ಬಳ್ಳಾರಿಯಲ್ಲಿ ‘ನರ್ಲಾ ಕಾರ್ಯ’ ಎನ್ನುತ್ತಾರೆ. ದಾಸಪ್ಪನನ್ನು ಕರೆಸಿ ಗಂಜಲ ಹಾಕಿಸಿ ಸೂತಕ ತೆಗೆಯುತ್ತಾರೆ. ಸೂತಕವನ್ನು ಕಳೆದುಕೊಳ್ಳಲು ಕೆಲವರು ಕೋಳಿ ಕೊಯ್ಯುತ್ತಾರೆ. ನಂತರ ಮಗುವನ್ನು ಮೊರದಲ್ಲಿ ಮಲಗಿಸಿ ಸುಟುಕಿ ಹಾಕುತ್ತಾರೆ. ಮಗುವಿಗೆ ದೆವ್ವ, ಭೂತಗಳು ಕಾಟ ನೀಡದಿರಲೆಂದು ಇದನ್ನು ಮಾಡುತ್ತಾರೆ. ಸೂತಕವನ್ನು ತೆಗೆದ ಮೇಲೆ ತಾಯಿ-ಮಗುವಿಗೆ ಆರತಿ ಮಾಡಿ ಬಂಧುಗಳಿಗೆ ಊಟ ಹಾಕಿಸುತ್ತಾರೆ.
ಕೆಲವು ಕಡೆ ಯುಗಾದಿಗೆ ಮೊದಲು ಮಗುವಿಗೆ ಮುನೇಶ್ವರ ದ್ಯಾವರ ಮಾಡುತ್ತಾರೆ.ಮಗುವಿಗೆ ಮೂರು ತಿಂಗಳು, ಐದು ತಿಂಗಳು, ಒಂಬತ್ತು ತಿಂಗಳು, ಮಗು ಹುಟ್ಟಿದ ಮೂರು ದಿನವಾದರೂ ಸಹ ಯುಗಾದಿಗೆ ಮೊದಲು ಮಗು ಹುಟ್ಟಿದೆ ಎಂದರೆ ದ್ಯಾವರ ಮಾಡಬೇಕು ಎನ್ನುವ ಪದ್ಧತಿ ಇದೆ.ಊರ ಹೊರಗಿನ ತೋಪಿನಲ್ಲಿ ಮಣ್ಣಿನಿಂದ ಮುನೇಶ್ವರನನ್ನು ಮಾಡಿ, ಏಳು ಜನ ಅಕ್ಕ ತಂಗಿಯರನ್ನು ನಿಲ್ಲಿಸಿ ಕೋಳಿ ಕೊಯ್ದು ಪೂಜೆ ಮಾಡಿ, ಮಗುವಿನ ಮುಂದಲೆ ಕೂದಲನ್ನು ಮಾವನಾದವರು ಕತ್ತರಿಸಿ ಮುನೇಶ್ವರನಿಗೆ ಇಡುತ್ತಾರೆ. ಹೆಣ್ಣು, ಗಂಡು ಎರಡೂ ಮಕ್ಕಳಿಗೂ ಈ ದ್ಯಾವರ ಮಾಡುತ್ತಾರೆ. ಇಲ್ಲಿ ಪೂಜೆಗೆ ನೆಕ್ಕಿಲಿ ಸೊಪ್ಪು, ಕಣಗಿಲೆ ಸೊಪ್ಪು ಬೇಕೇ ಬೇಕು. ಇದು ಹೊಸ ಸೃಷ್ಟಿಯನ್ನು ಮಾಡಿರುವುದಕ್ಕೆ ಸೃಷ್ಟಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿದೆ.

