ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಹೋರಾಟವನ್ನು ಬೆಂಬಲಿಸುವ ಉದ್ದೇಶದೊಂದಿಗೆ ‘ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು’ ಆರಂಭವಾಯಿತು. ‘ಮಾನಸ ಸ್ವಾಯತ್ತ ಮಹಿಳಾ ಸಂಘಟನೆ’, ‘ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿರ‍್ಟೀಸ್’ (ಪಿಯುಸಿಎಲ್), ‘ಆಲ್ಟರ್‌ನೆಟಿವ್ ಲಾ ಫೋರಂ’ (ಎಎಲ್‌ಎಫ್), ‘ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ’ ಮತ್ತು ಲಿಂಗತ್ವ ಅಲ್ಪಸಖ್ಯಾಂತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಸಂಗಮ’ ಸಂಸ್ಥೆಗಳು ಒಗ್ಗೂಡಿ ಬೆಂಬಲ ಗುಂಪನ್ನು ಆರಂಭಿಸಿದವು. ಡಾ.ವಿಜಯಾ, ಹೆಚ್.ಎಸ್.ದೊರೆಸ್ವಾಮಿಯವರಂತಹ ಗಣ್ಯರು ಬೆಂಬಲ ನೀಡಿದರು. ಬೆಂಬಲ, ಲಾಬಿ ಮತ್ತು ಪ್ರಚಾರದ ಮೂಲಕ ಬೆಂಬಲ ಗುಂಪು ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿತು.
-ಪೌರಕಾರ್ಮಿಕರ ಹಕ್ಕುಗಳನ್ನು ಗುರುತಿಸಿ ಜಾರಿಗೊಳಿಸಲು ಸರ್ಕಾರದೊಂದಿಗೆ ಲಾಬಿ ಮಾಡುವುದು
-ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ ಕುರಿತು ಪ್ರಚಾರ ಮಾಡುವುದು
-ಪೌರಕಾರ್ಮಿಕರನ್ನು ಕಾರ್ಮಿಕ ಸಂಘಟನೆಯ ಸದಸ್ಯರನ್ನಾಗಿಸುವುದು ಮತ್ತು ಅವರ ನಾಯಕತ್ವ ಕಟ್ಟುವ ಮೂಲಕ ಅವರ ಸಂಘಟನೆಯನ್ನು ಬಲಪಡಿಸುವುದು
ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವ ಹೋರಾಟದಲ್ಲಿ ಬೆಂಬಲ ಗುಂಪು ಸಕ್ರಿಯ ಪಾತ್ರವಹಿಸಿತು. ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ಸಿಗಲು ಕೆಲಸಮಾಡಿತು. ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ನಿರಂತರ ಮನವಿಗಳನ್ನು ನೀಡುವುದರ ಜೊತೆಗೆ ಧರಣಿ ಸತ್ಯಾಗ್ರಹ, ಪ್ರತಿಭಟನೆಗಳನ್ನು ನಡೆಸಲು ಸಹಕಾರ ನೀಡಿತು. ಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗಿರುವ ಹಕ್ಕುಗಳು, ಸರ್ಕಾರದ ಪಾತ್ರವನ್ನು ಒಳಗೊಂಡÀ ‘ಬಡವರ ಬೆವರಿನಲ್ಲಿ ಸ್ವಚ್ಛವಾಗುವ ಬೆಂಗಳೂರು’ ಎಂಬ ಸತ್ಯಶೋಧನಾ ವರದಿಯನ್ನು ಪ್ರಕಟಿಸಿತು. ಪೌರಕಾರ್ಮಿಕರ ಪರಿಸ್ಥಿತಿಯನ್ನು ತಿಳಿಸಿಕೊಡುವ ಸಲುವಾಗಿ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಸಾರ್ವಜನಿಕ ನ್ಯಾಯಾಲಯವನ್ನು ಏರ್ಪಡಿಸಿತು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿತು. ಬೆಂಬಲ ಗುಂಪಿನಲ್ಲಿ ಸಕ್ರಿಯವಾಗಿದ್ದ ‘ಮಾನಸ ಸ್ವಾಯತ್ತ ಮಹಿಳಾ ಗುಂಪು’ ತಾನು ಪ್ರಕಟಿಸುತ್ತಿದ್ದ ‘ಮಾನಸ’ ತಿಂಗಳ ಪತ್ರಿಕೆಯ ಮೂಲಕ ಪೌರಕಾರ್ಮಿಕರ ಪರಿಸ್ಥಿತಿ ಮತ್ತು ಹೋರಾಟಗಳನ್ನು ನಿರಂತರವಾಗಿ ದಾಖಲಿಸಿತು. ಪೌರಕಾರ್ಮಿಕ ಮಹಿಳೆಯರನ್ನು ಸಂಘಟಿಸಲು, ಅವರ ನಾಯಕತ್ವ ಕಟ್ಟಲು ಮತ್ತು ಸ್ವಸಹಾಯ ಸಂಘ ಕಟ್ಟಲು ಕೆಲಸ ಮಾಡಿತು. ಸಂಘವು ಸ್ವಾಯತ್ತವಾಗಿ ಕೆಲಸ ಮಾಡಲು ಅಪಾರವಾಗಿ ಶ್ರಮಿಸಿತು. ಕಾರ್ಮಿಕ ಚಳುವಳಿ, ಮಾನವ ಹಕ್ಕುಗಳ ಚಳುವಳಿ, ಮಹಿಳಾ ಹಕ್ಕುಗಳ ಚಳುವಳಿ, ದಲಿತ ಚಳುವಳಿಗಳಲ್ಲದೆ ಹಲವಾರು ಕ್ಷೇತ್ರದ ಗಣ್ಯರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿತು.

