ಜಾತಿ, ವರ್ಗ ಮತ್ತು ಲಿಂಗ ಮೂರೂ ತಾರತಮ್ಯಗಳನ್ನು ಅನುಭವಿಸುತ್ತ, ದಮನಕ್ಕೆ ಒಳಗಾಗಿ ಕಷ್ಟದ ಬದುಕನ್ನು ನಡೆಸುತ್ತಿರುವ ಈ ಮಹಿಳೆಯರು ಸುಲಭವಾಗಿ ಧೈರ್ಯಗೆಡದೆ ಬದುಕಿನ ಸಂಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಮನೆಯಲ್ಲಿ ಆಚರಿಸುವ ಹಬ್ಬ, ಮದುವೆ ಆಚರಣೆಗಳಿರಲಿ, ಖಾಯಿಲೆ, ಸಾವು, ನೋವುಗಳಿರಲಿ, ದುಡಿವ ಗಂಡಸರು ಮೂಲೆ ಹಿಡಿದಿರಲಿ, ಕುಡಿದು ಗಲಾಟೆ ಮಾಡುವವರಿರಲಿ, ಬಿಟ್ಟು ಹೋಗಿರಲಿ, ತೀರಿಹೋಗಿರಲಿ ಯಾವುದಕ್ಕೂ ಅಂಜದೆ ಮನೆ ಮತ್ತು ಮಕ್ಕಳನ್ನು ನಿಭಾಯಿಸಿಕೊಂಡು ಹೋಗುವ ಈ ಮಹಿಳೆಯರ ಸ್ಥೆöÊರ್ಯ ಮತ್ತು ಚೈತನ್ಯ ದೊಡ್ಡದು. ಕೇವಲ ತಮ್ಮ ಖಾಸಗಿ ಬದುಕಿನ ಆಗುಹೋಗುಗಳಿಗಷ್ಟೇ ಸೀಮಿತವಾಗದೆ ಕಾರ್ಮಿಕರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹೋರಾಡಲು ಈ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಂತಹ ಕೆಲವು ಹೋರಾಟಗಳನ್ನು ಇಲ್ಲಿ ದಾಖಲಿಸಲಾಗಿದೆ.
ಕಾರ್ಮಿಕ ಸಂಘಟನೆಯ ಹುಟ್ಟಿಗೆ ಕಾರಣವಾದ ಬಳ್ಳಾರಿ ಸಫಾಯಿ ಕರ್ಮಚಾರಿ ಮಹಿಳೆಯರ ಹೋರಾಟ
ಬಳ್ಳಾರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಸಂಘವನ್ನು ಕಟ್ಟುವುದಕ್ಕೆ ನಾಂದಿ ಹಾಡಿದವರು ಅಲ್ಲಿನ ಮಹಿಳಾ ಕಾರ್ಮಿಕರು. ಖಾಸಗಿ ಅನುಭವದ ಆಧಾರದ ಮೇಲೆ ರಾಜಕಾರಣವನ್ನು ಕಟ್ಟಬೇಕೆಂಬ ಮಹಿಳಾ ಚಳವಳಿಯ ಧ್ಯೇಯವನ್ನು ಅವರು ಸಾಬೀತುಪಡಿಸಿದ್ದಾರೆ ಎಂದರೆ ತಪ್ಪಾಗಲಾರದು. ಬಳ್ಳಾರಿಯ ಮೊದಲನೇ ಡಿವಿಷನ್‌ನ ವಾರ್ಡ್ ೩೨ರಲ್ಲಿ ಕನಿಷ್ಠ ವೇತನವನ್ನು ಎಲ್ಲರಿಗೂ ಕೊಡಬೇಕೆಂಬ ಕಾರಣಕ್ಕೆ ಅಲ್ಲಿನ ಗುತ್ತಿಗೆದಾರರು ಸುಮಾರು ೨೩ ಜನರನ್ನು ಕೆಲಸದಿಂದ ತೆಗೆದು ಹಾಕಿದರು. ಕೆಲಸದಿಂದ ತೆಗೆದುಹಾಕಿದವರಲ್ಲಿ ಎಂಟು ಜನ ಮಹಿಳೆಯರು ಪಾಲಿಕೆಯ ಕಚೇರಿಯ ಮುಂದೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ಹೇಳಿದರು. ವಿಷಯ ತಿಳಿದ ಕೆಲವು ಕಾರ್ಯಕರ್ತರು ಬಂದು ಆ ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಿದರು. ಆ ನಂತರ ಕಾರ್ಮಿಕರೆಲ್ಲರೂ ಒಗ್ಗೂಡಿ ಕೆಲಸ ಮತ್ತೆ ಕೊಡುವವರೆಗೂ ಏಳುವುದಿಲ್ಲವೆಂದು ಧರಣಿ ಸತ್ಯಾಗ್ರಹ ಮಾಡಿ ಮತ್ತೆ ಕೆಲಸ ಪಡೆದುಕೊಂಡರು. ಹೋರಾಟವೇನೂ ಸುಲಭವಾಗಿರಲಿಲ್ಲ. ರಸ್ತೆಯಲ್ಲಿಯೇ ಧರಣಿ ಕೂತರು. ಯಾವ ಬೆದರಿಕೆಗೂ ಅಂಜಲಿಲ್ಲ, ಆಮಿಷಕ್ಕೆ ಒಳಗಾಗಲಿಲ್ಲ. ಉದ್ದೇಶ ಈಡೇರುವವರೆಗೂ ವಿಚಲಿತರಾಗದೆ ಹೋರಾಟ ಮಾಡಿದರು. ಈ ಹೋರಾಟದ ಮೂಲಕವೇ ಅಲ್ಲಿ ಯೂನಿಯನ್ ಹುಟ್ಟಿಕೊಂಡಿತು. ಆ ಯೂನಿಯನ್‌ಗೆ ಅವರು ಇಟ್ಟಿರುವ ಹೆಸರು ‘ಸಮಾನತಾ ಯೂನಿಯನ್’. ಈಗ ಈ ಯೂನಿಯನ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿದೆ. ತೊಂದರೆ ಆದರೆ ಹೆದರದೆ ಹೋರಾಡುವುದನ್ನು ಕಲಿಯುತ್ತಿದ್ದಾರೆ. ಇನ್ನಿತರ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಹೆಮ್ಮೆಯಿಂದ ಅಂಬೇಡ್ಕರ್ ದಿನಾಚರಣೆಯನ್ನು, ಸಾವಿತ್ರಿ ಬಾಯಿ ಫುಲೆ ದಿನಾಚರಣೆಯನ್ನು ಆಚರಿಸುತ್ತಾರೆ. ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಸ್ಪರ್ಧೆ, ಮ್ಯೂಸಿಕಲ್ ಚೇರ್, ರಂಗೋಲಿ ಇತ್ಯಾದಿ ಸ್ಪರ್ಧೆಗಳನ್ನು ಒಳಗೊಂಡ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಾರೆ. ಬಹುಮಾನ ವಿತರಿಸುತ್ತಾರೆ. ತಮ್ಮ ಹೋರಾಟವನ್ನು ಬೆಂಗಳೂರಿನ ವಿಧಾನಸೌಧದವರೆಗೂ ಒಯ್ದಿದ್ದಾರೆ.
ಕಲ್ಬುರ್ಗಿ ಸಫಾಯಿ ಕರ್ಮಚಾರಿ ಮಹಿಳೆಯರ ಸುದೀರ್ಘ ಹೋರಾಟ
ಕಲ್ಬುರ್ಗಿಯಲ್ಲಿ ನಗರ ಪಾಲಿಕೆಯಲ್ಲಿ ೧೦ ರಿಂದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ ಮಹಿಳೆಯರು ಕೆಲಸದಿಂದ ತೆಗೆದುಹಾಕಿದ್ದರ ವಿರುದ್ಧ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಸುದೀರ್ಘ ಹೋರಾಟ ಮಾಡಿ ಯಶಸ್ವಿಯಾದದ್ದು ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಿದೆ.
ಧರ್ಮ್ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ೪೭೦ ಜನರನ್ನು ಗುತ್ತಿಗೆ ಪೌರಕಾರ್ಮಿಕರಾಗಿ ತೆಗೆದುಕೊಳ್ಳಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಮೇಲೆ ಅಷ್ಟು ಜನ ಕಾರ್ಮಿಕರನ್ನು ತೆಗೆದು ಹಾಕಲಾಯಿತು. ಬಹಳ ವರ್ಷಗಳ ಹಿಂದಿನಿಂದಲೂ ಇದೇ ಕೆಲಸ ಮಾಡಿಕೊಂಡು ಬಂದಿದ್ದ ಇವರಿಗೆ ಇದೊಂದೇ ಜೀವನೋಪಾಯವಾಗಿತ್ತು. ಹಾಗಾಗಿ ಎಲ್ಲಾ ಕಾರ್ಮಿಕರೂ ಒಟ್ಟಾಗಿ ಕಾರ್ಮಿಕ ಮುಖಂಡರು ಹಾಗೂ ಮಾಜಿ ಕಾರ್ಮಿಕ ಸಚಿವರಾದ ಶ್ರೀ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಎರಡು ತಿಂಗಳ ಕಾಲ ನಗರವೇ ಕಸದ ತಿಪ್ಪೆಯಾಯಿತು. ಮತ್ತೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ವಾಪಸ್ಸು ಹೋದ ನಂತರ ಕಾರ್ಮಿಕರು ೨೪೦ ದಿನಗಳ ಕಾಲ ವೇತನವೇ ಇಲ್ಲದೆ ಕೆಲಸ ಮಾಡಿದರು. ವೇತನಕ್ಕಾಗಿ ಕಾರ್ಮಿಕ ನ್ಯಾಯಲಯಕ್ಕೆ ಹೋದರು. ಕಾರ್ಮಿಕ ನ್ಯಾಯಾಲಯವು ೨೪೦ ದಿನಗಳ ಕಾಲ ಕೆಲಸ ಮಾಡಿದ್ದರಿಂದ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆದೇಶ ನೀಡಿತು. ಈ ಆದೇಶವನ್ನು ಪ್ರಶ್ನಿಸಿ ಪಾಲಿಕೆಯು ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಹೈಕೋರ್ಟಿನವರೆಗೂ ಹೋಯಿತು. ವೇತನವು ಬ್ಯಾಂಕಿಗೆ ಜಮಾ ಆಗಿದ್ದ ದಾಖಲೆಯ ಮೂಲಕ ಅವರೆಲ್ಲರೂ ಪಾಲಿಕೆಯ ಕಾರ್ಮಿಕರು ಎಂಬುದು ಸಾಬೀತಾದ ಮೇಲೆ ಕೋರ್ಟು ಕಾರ್ಮಿಕರ ಪರವಾಗಿ ತೀರ್ಪು ನೀಡಿತು. ಇದೇ ಸಂದರ್ಭದಲ್ಲಿ ನಿರ್ಮಲ್ ನಗರ ಯೋಜನೆಯನ್ನು ಜಾರಿಗೊಳಿಸಿ ೭೩೦ ಜನರನ್ನು ಹೊಸದಾಗಿ ಗುತ್ತಿಗೆ ಕೆಲಸಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ೪೭೦ ಜನರಲ್ಲಿ ೪೩ ಜನ ಕಾರ್ಮಿಕರಿಗೆ ಆಮೀಷ ತೋರಿಸಿ ಅವರ ಕೈಲಿ ಸ್ವಸಹಾಯ ಸಂಘ ಮಾಡಿಸಿ ಗುತ್ತಿಗೆ ತೆಗೆದುಕೊಳ್ಳುವಂತೆ ಮಾಡುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡಲಾಯಿತು. ಧರಣಿ ಕುಳಿತ ಕಾರ್ಮಿಕರನ್ನು ಹತ್ತಿಕ್ಕುವ ಪ್ರಯತ್ನಗಳನ್ನೂ ಮಾಡಲಾಯಿತು.
ಈ ಕೆಲಸವನ್ನು ಬಿಟ್ಟರೆ ಇನ್ಯಾವ ಜೀವನಾಧಾರವೂ ಇಲ್ಲದ ಈ ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಪಾಲಿಕೆಯ ಕಚೇರಿ ಮುಂದೆ ಸತತ ನಾಲ್ಕು ವರ್ಷಗಳ ಕಾಲ ಧರಣಿ ಮಾಡಿದ್ದಾರೆ. ಈ ನಾಲ್ಕು ವರ್ಷದ ಅವಧಿಯಲ್ಲಿ ೨೯ ಕಾರ್ಮಿಕರು ತೀರಿಹೋಗಿದ್ದಾರೆ. ನಾಲ್ಕು ಜನ ಕಾರ್ಮಿಕರು ಧರಣಿ ಕುಳಿತ ಟೆಂಟಿನಲ್ಲಿಯೇ ತೀರಿಹೋಗಿದ್ದಾರೆ. ನೀರಿಲ್ಲದೆ, ಶೌಚಾಲಯದ ವ್ಯವಸ್ಥೆ ಇಲ್ಲದೆ, ಸೊಳ್ಳೆಗಳ ಕಡಿತವನ್ನು ಸಹಿಸಿಕೊಂಡು, ಮಳೆ, ಗಾಳಿ, ಬಿಸಿಲು, ಧೂಳು ಎನ್ನದೆ ಕಾರ್ಮಿಕರು ಹೋರಾಡಿದ್ದಾರೆ. ಈ ಹೋರಾಟದ ಯಶಸ್ಸಿನ ಹಿಂದೆ ಕೆಲಸ ಮಾಡಿರುವುದು ಯಾವ ಬೆದರಿಕೆಗೂ, ಆಮಿಷಕ್ಕೂ ಮಣಿಯದ ಮಹಿಳಾ ಚೈತನ್ಯ. ಮಳೆ, ಗಾಳಿ, ಬಿಸಿಲು, ಪೊಲೀಸರ ಲಾಠಿಗೂ ಅಂಜದ ಈ ಮಹಿಳೆಯರ ಉತ್ಸಾಹಕ್ಕೆ ಎಣೆಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಜನಪದ ಶೈಲಿಯ ಲಾವಣಿಗಳನ್ನು, ಹೋರಾಟದ ಹಾಡುಗಳನ್ನು ಹಾಡುವ ಇವರ ಉತ್ಸಾಹ ಯಾರಿಗಾದರೂ ಸ್ಪೂರ್ತಿಯಾಗಬಲ್ಲದು. ಆ ಮಹಿಳೆಯರ ಬದ್ಧತೆ, ಕಷ್ಟವನ್ನು ಸಹಿಸಿ ನಿಲ್ಲುವ ಛಲದಿಂದಾಗಿ ಅವರ ಹೋರಾಟ ಯಶಸ್ವಿಯಾಗಿದೆ. ಅವರ ನಿರಂತರ ಹೋರಾಟದ ಫಲವಾಗಿ ೨೦೧೭ರಲ್ಲಿ ಮತ್ತೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ಬೇಕೆಂದು ಧರಣಿ ಮಾಡಿದ್ದಕ್ಕೆ ಹಲವಾರು ಮಹಿಳೆಯರನ್ನು ಜೈಲಿಗೆ ಹಾಕಲಾಯಿತು. ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬೆಳಗಾವಿ, ಬಿಜಾಪುರ ಹೀಗೆ ದೂರದ ಜೈಲುಗಳಿಗೆ ಹಾಕಲಾಯಿತು. ಕೆಲವರನ್ನು ಎಂಟು ತಿಂಗಳ ಕಾಲ, ಕೆಲವರನ್ನು ಐದು ತಿಂಗಳ ಕಾಲ, ಕೆಲವರನ್ನು ಒಂದೂವರೆ ತಿಂಗಳ ಕಾಲ ಜೈಲಿನಲ್ಲಿಟ್ಟಿದ್ದರು. ಈಗಲೂ ಕೇಸುಗಳು ಆಯಾ ಊರಿನಲ್ಲಿಯೇ ನಡೆಯುತ್ತವೆ. ಕೇಸು ಬಂದಾಗಲೆಲ್ಲ ತಮ್ಮದೇ ಚಾರ್ಜಿನಲ್ಲಿ ಆ ಊರುಗಳಿಗೆ ಕಾರ್ಮಿಕರು ಹೋಗಬೇಕಾಗಿದೆ.
‘ನಾವು ಧರಣಿ ಕೂತಾಗ ನಾವಿಟ್ಟಿದ್ದ ಅಂಬೇಡ್ಕರ್ ಮತ್ತು ಗಾಂಧಿ ಫೋಟೋ ಗಟರ‍್ದಾಗೆ ಹಾಕಿರು. ಟೆಂಟು ಸುಟ್ರು, ಲಾಠಿ ಚಾರ್ಜ್ ಮಾಡಿದ್ರು, ನಮ್ ಚೀಲಗಳಿಗೆ ಬೆಂಕಿ ಹಾಕಿದ್ರು, ನಮ್ ಜತೆ ಕುಂತಿದ್ದ ತಿಪ್ಪಮ್ಮ ಚಳಿ ಉರಿಗೆ (ಜ್ವರ) ೨೦೧೪ರ ಸಂಕ್ರಾತಿ ದಿನ ಸತ್ಲು. ಎಣ ಎತ್ತುದಿಲ್ಲ ಅಂತ ಕುಂತ್ವಿ, ನಮ್‌ನೆಲ್ಲ ಯೂನಿವರ್ಸಿಟಿಗೆ ಹಾಕಿ ಜೆಸಿಬಿ ರ‍್ಸಿ ಎಣ ಮಣ್ ಮಾಡಿದ್ರು. ಆಮ್ಯಾಲೆ ಇಲ್ಲಿಗ್ ತಂದ್ ಹಾಕಿದ್ರು. ಸಾಬ್ರು (ಎಸ್.ಕೆ.ಕಾಂತ ಅವರು) ಇರೊದ್ಕೆ ನಮ್ನ ಜಿಂದಾ ಬಿಟ್ಟಾರೆ’ ಎಂದು ಧರಣಿ ಮಾಡುತ್ತಿದ್ದ ಮಹಿಳೆ ಹೇಳಿದಳು.
ಬೆಂಗಳೂರಿನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಹೋರಾಟ
ಬೃ.ಬೆಂ.ಮ.ನ.ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗುತ್ತಿಗೆ ಪೌರಕಾರ್ಮಿಕರ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ.ಏಐಸಿಸಿಟಿಯು (ಆಲ್ ಇಂಡಿಯಾ ಸೆಂಟರ್ ಫಾರ್ ಟ್ರೇಡ್ ಯೂನಿಯನ್ಸ್)ಗೆ ಅಫಿಲಿಯೇಟ್ ಆಗಿರುವ ಈ ಸಂಘವು ೪೦೦೦ ಸದಸ್ಯತ್ವ ಹೊಂದಿದ್ದು ೨೦೦೭-೨೦೦೮ರಿಂದ ಗುತ್ತಿಗೆ ಪೌರಕಾರ್ಮಿಕರನ್ನು ಸಂಘಟಿಸುತ್ತಿದೆ. ಈ ಸಂಘಕ್ಕೆ ರತ್ನಮ್ಮ ಅವರು ಮಹಾಕಾರ್ಯದರ್ಶಿಯಾಗಿ, ನಿರ್ಮಲ ಅವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಹಾಗೂ ಲೈಂಗಿಕ ಕಿರುಕುಳದ ವಿರುದ್ಧ ನಡೆದ ಆಂದೋಲನದ ನೇತೃತ್ವವಹಿಸಿದೆ. ರಾಜ್ಯಾದ್ಯಂತ ಪೌರಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರವು ಜೂನ್ ೨೦೧೭ರಲ್ಲಿ ಗುತ್ತಿಗೆ ಪದ್ಧತಿಯನ್ನು ನಿಷೇಧಿಸಿ, ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದರ ಪರಿಣಾಮವಾಗಿ ಪೌರಕಾರ್ಮಿಕರು ನಿತ್ಯವೂ ಗುತ್ತಿಗೆದಾರರಿಂದ ಹಿಂಸೆಯನ್ನು ಅನುಭವಿಸುವಂತಾಯಿತು. ಅಕ್ಟೋಬರ್ ೧೨ರಂದು ಕೆ.ಆರ್.ಪುರಂನ ವಾರ್ಡ್ ನಂ. ೫೫ರಲ್ಲಿ ಮೂರು ತಿಂಗಳಿನಿಂದ ಸಂಬಳ ದೊರೆಯದ ಕಾರ್ಮಿಕರು ಸಂಬಳಬೇಕೆಂದು ಕೇಳಿದಾಗ ಗುತ್ತಿಗೆದಾರ ಅಶ್ಲೀಲವಾಗಿ ವರ್ತಿಸಿ, ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಈ ಬಗ್ಗೆ ಬೃ.ಬೆಂ.ಮ.ನ.ಪಾಲಿಕೆಯ ಲೈಂಗಿಕ ಕಿರುಕುಳ ಸಮಿತಿಯಲ್ಲಿ ದೂರು ದಾಖಲಿಸಿದರೂ ಸಮಿತಿಯು ಯಾವ ಕ್ರಮವನ್ನೂ ಜರುಗಿಸಲಿಲ್ಲ.ದೂರು ಕೊಟ್ಟಿದ್ದಕ್ಕೆ ಸಿಟ್ಟಿಗೆದ್ದು ಗುತ್ತಿಗೆದಾರನು ಅಕ್ಟೋಬರ್ ೧೯ರಂದು ೩೭ಜನ ಮಹಿಳಾ ಪೌರಕಾರ್ಮಿಕರನ್ನು ಸುತ್ತುವರೆದು, ಇಬ್ಬರ ಮೇಲೆ ಕಬ್ಬಿಣದ ರಾಡಿನಿಂದ ಥಳಿಸಿ ಗಾಯಗೊಳಿಸಿದ್ದಲ್ಲದೆ ಅಶ್ಲೀಲ ಮಾತುಗಳನ್ನಾಡಿ ಜಾತಿನಿಂದನೆ ಮಾಡಿ, ಸಾರ್ವಜನಿಕವಾಗಿ ಬಟ್ಟೆ ಹರಿದುಹಾಕಿದ್ದಾನೆ. ಕಾರ್ಮಿಕರಿಗೆ ಅರ್ಧ ಸಂಬಳವನ್ನಷ್ಟೇ ನೀಡುತ್ತಿದ್ದ ಈತ ಕಾರ್ಮಿಕರ ಪಾಸ್‌ಬುಕ್ ಮತ್ತು ಎಟಿಎಂ ಕಾರ್ಡುಗಳನ್ನು ಕಿತ್ತಿಟ್ಟುಕೊಂಡಿದ್ದಾನೆ. ಕಾರ್ಮಿಕರು ತಮ್ಮ ಸಂಘಟನೆಯ ಮೂಲಕ ನಿರಂತರ ಒತ್ತಡ ಹಾಕಿದ್ದರಿಂದ ಕೆ.ಆರ್.ಪುರಂ ಪೊಲೀಸರು ಗುತ್ತಿಗೆದಾರನ ವಿರುದ್ಧ ಲೈಂಗಿಕ ಹಲ್ಲೆ ಮತ್ತು ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ೧೯೮೯ರ ಉಲ್ಲಂಘನೆ ಮತ್ತು ಮಲಬಾಚಲು ನೇಮಿಸಿಕೊಳ್ಳುವುದರ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ೨೦೧೩ರ ಅನ್ವಯ ಹಾಗೂ ಕಾರ್ಮಿಕರ ಎಟಿಎಂ ಕಿತ್ತಿಟ್ಟುಕೊಂಡು ವಂಚನೆಮಾಡಿರುವುದರ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಆದರೂ ಗುತ್ತಿಗೆದಾರನನ್ನು ಬಂಧಿಸಲಿಲ್ಲ; ಆತ ತಲೆಮರೆಸಿಕೊಂಡಿದ್ದಾನೆ.
ಏಪ್ರಿಲ್ ೨೦೧೭ರಲ್ಲಿ ವೇತನ ಕೇಳಿದರೆಂಬ ಕಾರಣಕ್ಕೆ ಪೀಣ್ಯದಲ್ಲಿ ಇಬ್ಬರು ಕಾರ್ಮಿಕರ ಮೇಲೆ ಗುತ್ತಿಗೆದಾರನು ಥಳಿಸಿದ್ದನು. ಥಳಿಸಿದ್ದರಿಂದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬೃ.ಬೆಂ.ಮ.ನ.ಪಾಲಿಕೆ ಗುತ್ತಿಗೆ ಕಾರ್ಮಿಕರ ಸಂಘದವತಿಯಿಂದ ದೂರು ನೀಡಿದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಆದರೆ ಇಲ್ಲಿಯವರೆಗೂ ಆರೋಪ ಪಟ್ಟಿಯನ್ನು ಸಲ್ಲಿಸಿಲ್ಲ. ಪಾಲಿಕೆಯೂ ಸಹ ಗುತ್ತಿಗೆದಾರನ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.
ಸಂಘವು ಶೋಷಣೆಗೆ ಕಾರಣವಾಗಿರುವ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆ, ರದ್ದತಿ, ಪರಿಹಾರ) ಕಾಯ್ದೆ, ೨೦೧೩ನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟವನ್ನು ಮುಂದುವರೆಸಿದೆ.

