ಕರ್ನಾಟಕ ಸರ್ಕಾರದ ಇತಿಹಾಸದಲ್ಲಿ ಶ್ರೀ ಡಿ.ದೇವರಾಜ ಅರಸು ಅವರ ಅವಧಿಯು ಹಲವಾರು ಕ್ರಾಂತಿಕಾರಕ ಹೆಜ್ಜೆಗಳಿಗೆ ಸಾಕ್ಷಿಯಾಯಿತು. ಮಲಬಾಚುವ ಪದ್ಧತಿ ನಿಷೇಧ, ಉಳುವವರನ್ನೇ ಹೊಲದೊಡೆಯರನ್ನಾಗಿಸಿದ ಭೂ ಸುಧಾರಣಾ ಕಾಯ್ದೆ, ಪೌರಕಾರ್ಮಿಕರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐ.ಪಿ.ಡಿ. ಸಾಲಪ್ಪ ನೇತ್ರತ್ವದಲ್ಲಿ ಸಮಿತಿ ರಚನೆ, ಎಲ್.ಜಿ.ಹಾವನೂರ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಅಧ್ಯಯನ ಹೀಗೆ ಹಲವಾರು ಕಾರ್ಯಗಳ ಮೂಲಕ ಕರ್ನಾಟಕದ ದಲಿತರ ಮತ್ತು ಹಿಂದುಳಿದವರ ಏಳಿಗೆಗೆ ಕ್ರಾಂತಿಕಾರಕ ಹೆಜ್ಜೆಗಳನ್ನು ಕರ್ನಾಟಕದ ಇತಿಹಾಸದಲ್ಲಿ ಮೂಡಿಸಿದ್ದಾರೆ.
ಶ್ರೀ ಬಿ. ಬಸವಲಿಂಗಪ್ಪ
ಶ್ರೀ ಬಿ. ಬಸವಲಿಂಗಪ್ಪನವರು ಜನಿಸಿದ್ದು ೧೯೨೯ ಏಪ್ರಿಲ್ ೨೧ರಂದು. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಇವರ ತಂದೆ ಶ್ರೀ ಬಸಪ್ಪನವರು ಊರೂರು ತಿರುಗುತ್ತ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ತಾಯಿ ಶ್ರೀಮತಿ. ಸಿದ್ಧಲಿಂಗಮ್ಮ. ಬಟ್ಟೆ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಕುಟುಂಬವು ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ, ನಂತರ ಹರಿಹರಕ್ಕೆ ವಲಸೆ ಹೋಗಿ ನೆಲೆಸಿತು.
ಬಸವಲಿಂಗಪ್ಪನವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹರಿಹರದಲ್ಲಾಯಿತು. ಗಾಂಧೀಜಿಯವರು ಹುಟ್ಟುಹಾಕಿದ ‘ಕ್ವಿಟ್ ಇಂಡಿಯಾ’ ಚಳುವಳಿ ದೇಶದ ಮೂಲೆ ಮೂಲೆಗೂ ಹಬ್ಬಿದ್ದ ಕಾಲವದು. ಚಳುವಳಿಯ ಕಾವು ಚಿತ್ರದುರ್ಗಕ್ಕೂ ಪಸರಿಸಿದಾಗ ಉತ್ಸಾಹಿ ಯುವಕ ಬಸವಲಿಂಗಪ್ಪನವರೂ ಅದರಲ್ಲಿ ಭಾಗಿಯಾದರು. ಮುಂದೆ ಬಿ.ಎ. ಪದವಿಗಾಗಿ ಮೈಸೂರಿಗೆ ಹೋದಾಗ ಅಂಬೇಡ್ಕರ್ ಚಿಂತನೆಯ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರö್ಯವು ಎಲ್ಲರಿಗೂ ತಲುಪಲು ಜಾತಿ ವ್ಯವಸ್ಥೆಯು ಅಡ್ಡಿಯಾಗಿರುವುದನ್ನು ಅರಿತು ಯುವಕರನ್ನು ಸಂಘಟಿಸುವ ಮತ್ತು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ವಿಷಯಗಳನ್ನು ಚರ್ಚಿಸುವ ಕೆಲಸವನ್ನು ಆರಂಭಿಸಿದರು. ದೇಶದ ಕಾನೂನು ಕುರಿತು ಜನರಿಗಿರುವ ಅಜ್ಞಾನವನ್ನು ಹೋಗಲಾಡಿಸಬೇಕೆಂಬ ಇಚ್ಛೆಯಿಂದ ಬೆಳಗಾವಿಗೆ ಹೋಗಿ ಅಲ್ಲಿನ ರಾಜಾ ಲಕ್ಷö್ಮಣ್‌ರಾವ್ ಕಾನೂನು ಕಾಲೇಜಿಗೆ ಸೇರಿಕೊಂಡರು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದರು. ಇವೆಲ್ಲವೂ ಅವರಿಗೆ ಸ್ಪಷ್ಟತೆಯನ್ನು, ನಿರ್ಭೀತಿಯಿಂದ ಅಭಿವ್ಯಕ್ತಿಸುವುದನ್ನು ಕಲಿಸಿತು. ಕಾನೂನು ಶಿಕ್ಷಣ ಪಡೆದುಕೊಂಡು ಹರಿಹರಕ್ಕೆ ಹಿಂತಿರುಗಿದ ಮೇಲೆ ಅಲ್ಲಿನ ಹಳ್ಳಿಗಳಿಗೆ ಸೈಕಲ್ ಮೇಲೆ ಭೇಟಿ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಜನರನ್ನು ಪ್ರೇರೇಪಿಸಿದರು. ಮೊದಲಿಗೆ ಜನರು ಸ್ಪಂದಿಸಲಿಲ್ಲ. ನಂತರ ಅಲ್ಲಿನ ಹಿರಿಯರೊಬ್ಬರು ಬೆಂಬಲಿಸಿದ್ದರಿಂದ ಜನರು ಮಕ್ಕಳನ್ನು ಶಾಲೆಗೆ ಕಳಿಸತೊಡಗಿದರು. ದಲಿತ ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ಆಂದೋಲನದ ರೀತಿಯಲ್ಲಿ ಮಾಡಿದರು. ಆ ಹಿರಿಯರ ಬೆಂಬಲದಿಂದ ಬದಲಾವಣೆಗೆ ದಲಿತರಷ್ಟೇ ಅಲ್ಲ ಬೇರೆ ಜಾತಿಯ ಪ್ರಗತಿಪರ ಮನಸ್ಸುಗಳು ಹೋರಾಟಕ್ಕೆ ಕೈಜೋಡಿಸಬೇಕೆಂಬುದನ್ನು ಅರಿತುಕೊಂಡರು. ಅಲ್ಲಿನ ದಲಿತರಿಗೆ ನಿವೇಶನಗಳು ಸಿಗುವಂತೆ ಮಾಡಿದರು. ಕಿರ್ಲೋಸ್ಕರ್‌ನಂತಹ ಕಂಪನಿಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವರಿಗೆ ಉದ್ಯೋಗ ದೊರಕಿಸಿಕೊಟ್ಟರು. ಮುಂದೆ ಬೆಂಗಳೂರಿನಲ್ಲಿದ್ದ ತಮ್ಮ ತಂಗಿ ನಿಂಗಮ್ಮನವರ ಬಳಿ ಬಂದು ಅಲ್ಲೇ ವಕೀಲಿ ವೃತ್ತಿಯನ್ನು ಆರಂಭಿಸಿ ಹೆಸರುವಾಸಿಯಾದರು.
೧೯೪೯ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯಕ್ಕೆ ಕಾಲಿಟ್ಟರು. ೧೯೫೦ರಲ್ಲಿ ಟೌನ್‌ಹಾಲ್ ವಿಭಾಗದಿಂದ ಬೆಂಗಳೂರು ನಗರಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಪಕ್ಷದಲ್ಲಿ ಭರವಸೆ ಮೂಡಿಸಿದ ಇವರನ್ನು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಲಾಯಿತು. ಆ ಸಂದರ್ಭದಲ್ಲೇ ಅವರು ಪೌರಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಕಾಳಜಿವಹಿಸಿದರು. ೧೯೫೭ರಲ್ಲಿ ವಿಧಾನಸಭಾ ಚುನಾವಣಿಯಲ್ಲಿ ಸ್ಪರ್ಧಿಸಿ ಬಿಜಾಪುರದಿಂದ ಶಾಸಕರಾಗಿ ಆಯ್ಕೆಯಾದರು. ೩೪ನೇ ವಯಸ್ಸಿನಲ್ಲೆ ಗೃಹಖಾತೆ ಸಚಿವರಾದರು. ೧೯೬೨ರಲ್ಲಿ ಸೋಲನ್ನು ಅನುಭವಿಸಿದರೂ ಹೋರಾಟವನ್ನು ಬಿಡಲಿಲ್ಲ. ಮತ್ತೆ ವಕೀಲಿ ವೃತ್ತಿ ಆರಂಭಿಸಿದರು. ಅಂಬೇಡ್ಕರ್ ಅವರು ಹುಟ್ಟುಹಾಕಿದ ‘ಪೀಪಲ್ ಎಜುಕೇಷನ್ ಸೊಸೈಟಿ’ ಟ್ರಸ್ಟಿಯಾಗಿ ನೇಮಕಗೊಂಡರು. ಮುಂದೆ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಮೈಸೂರು ಮಹಾರಾಜರು ರಾಜಮಹಲ್ ಬಡಾವಣೆಯಲ್ಲಿ ಅಂಬೇಡ್ಕರ್ ಅವರಿಗೆಂದು ನೀಡಿದ್ದ ಐದು ಎಕರೆ ಜಮೀನು ಅಂಬೇಡ್ಕರ್ ಅವರು ನಿಧಾನರಾದ ಮೇಲೆ ಪಾಳು ಬಿದ್ದಿತ್ತು. ಬಸವಲಿಂಗಪ್ಪನವರು ಆ ಸ್ಥಳವನ್ನು ಪೀಪಲ್ ಎಜುಕೇಶನ್ ಸೊಸೈಟಿಯ ಸ್ವತ್ತನ್ನಾಗಿಸಿ ೧೯೮೪ರಲ್ಲಿ ನಾಗಸೇನಾ ವಿದ್ಯಾಲಯವನ್ನು ಆರಂಭಿಸಿದರು.
೧೯೭೯ರಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದು ರಚಿಸಿದ ಸರ್ಕಾರದಲ್ಲಿ ಶ್ರೀಬಸವಲಿಂಗಪ್ಪನವರು ಪೌರಾಡಳಿತ ಸಚಿವರಾದರು. ತಲೆಯ ಮೇಲೆ ಮಲ ಹೊರುವಂಥ ಕ್ರೂರ ಹೀನಾಯ ಪದ್ಧತಿಯನ್ನು ಕೊನೆಗಾಣಿಸುವ ಪ್ರಯತ್ನ÷ಕೈಗೊಂಡರು. ಸರ್ಕಾರದೊಂದಿಗೆ ಚರ್ಚಿಸಿ, ನಾಡಿನಾದ್ಯಂತ ವಿವಿಧ ಕ್ಷೇತ್ರದ ಗಣ್ಯರಿಗೆ ಮನಗಾಣಿಸಿ, ಹಲವರ ವಿರೋಧಗಳನ್ನು ಸಮರ್ಥವಾಗಿ ಎದುರಿಸಿ ಮಲಬಾಚುವ ಪದ್ಧತಿ ನಿಷೇಧಿಸುವ ಕಾಯ್ದೆ ಜಾರಿಗೆ ತರುವಂತಹ ಕ್ರಾಂತಿಕಾರಕ ಹೆಜ್ಜೆಗೆ ಮುಂದಾದರು. ಸ್ವತಃ ದಲಿತ ಸಮುದಾಯಕ್ಕೆ ಸೇರಿದ ಶ್ರೀ ಬಸವಲಿಂಗಪ್ಪನವರ ಇಚ್ಛಾಶಕ್ತಿಯಿಂದಾಗಿಯೇ ಭಾರತ ಸರ್ಕಾರವು ೧೯೯೩ರಲ್ಲಿ ನಿಷೇಧಿಸಿದ ಮಲಬಾಚುವಂತಹ ಹೀನಾಯ ಪದ್ಧತಿಯನ್ನು ಅದಕ್ಕೂ ಇಪ್ಪತ್ತು ವರ್ಷಗಳ ಹಿಂದೆ ೧೯೭೩ರಲ್ಲಿಯೇ ಕರ್ನಾಟಕ ಸರ್ಕಾರವು ನಿಷೇಧಿಸಲು ಸಾಧ್ಯವಾಯಿತು. (ಕೃಪೆ: ಕ್ರಾಂತಿಯ ವಸಂತ-ಬಿ.ಬಸವಲಿಂಗಪ್ಪನವರ ಕಥನ, ಲೇ: ಎನ್. ಕೆ ಹನುಮಂತಯ್ಯ, ೨೦೦೮, ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ-೫೮೩೧೧೩, ಕರ್ನಾಟಕ).
ಅಪ್ಪಟ ವೈಚಾರಿಕ ಮನೋಭಾವದ ಬಿ.ಬಸವಲಿಂಗಪ್ಪನವರು ಕರ್ನಾಟಕದ ಇತಿಹಾಸದ ಮತ್ತೊಂದು ಕ್ರಾಂತಿಕಾರಕ ತಿರುವಿಗೂ ಕಾರಣರಾದವರು. ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ೧೯-೧೧-೧೯೭೩ರಲ್ಲಿ ‘ಹೊಸ ಅಲೆಗಳು’ ಎಂಬ ವಿಷಯ ಕುರಿತು ‘ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್’ ಸಂಸ್ಥೆಯು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಆ ಸಂಕಿರಣಕ್ಕೆಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಬಸವಲಿಂಗಪ್ಪನವರು ತಮ್ಮ ಭಾಷಣದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಬೂಸಾ ಬಹಳಷ್ಟು ಇದೆ’ ಎಂದು ಹೇಳಿದ್ದು ಕರ್ನಾಟಕದಲ್ಲಿ ಚಂಡಮಾರುತವನ್ನೇ ಸೃಷ್ಟಿಸಿತು. ಎರಡು ವರ್ಷಗಳ ಕಾಲ ಶ್ರೀಬಸವಲಿಂಗಪ್ಪನವರ ವಿರುದ್ಧ ಪರ-ವಿರೋಧದ ದಂಗೆಗಳು ನಡೆದವು. ಪರ ವಿರೋಧಗಳ ಚರ್ಚೆ, ವಾದ ವಿವಾದಗಳು ನಡೆದು ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದಾಗಿ ಅವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಾಯಿತು. ಬೂಸಾ ಚಳುವಳಿ ಎಂದೇ ಪ್ರಚಲಿತವಾದ ಈ ಘಟನೆ ಬಗ್ಗೆ ಕನ್ನಡದ ಶ್ರೇಷ್ಠ ಚಿಂತಕ, ಸಾಹಿತಿ, ವಿಮರ್ಶಕ ಕಿ.ರಂ.ನಾಗರಾಜ್ ಅವರು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. “ಬೂಸಾ ಚಳುವಳಿಯ ಅಂತಿಮ ಪರಿಣಾಮ ಏನೇ ಇರಲಿ ಅನೇಕ ಯುವ ಲೇಖಕರಲ್ಲಿ, ಸಂಘಟಕರಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟಿಸಿದ್ದು ಈ ಹೋರಾಟದ ಫಲ. ತಮ್ಮನ್ನು ತಮ್ಮ ಸುತ್ತಣ ವಲಯದ ಸಂವೇದನೆಯನ್ನು, ದಟ್ಟವಾಗಿ, ತೀವ್ರವಾಗಿ ಕಲಾತ್ಮಕವಾಗಿ ಅಭಿವ್ಯಕ್ತಿಸಬೇಕೆಂಬ ಛಲ ಅನೇಕ ಲೇಖಕರಲ್ಲಿ ಇದು ಮೂಡಿಸಿತು. ಕನ್ನಡ ಸಾಹಿತ್ಯದಲ್ಲಿ ಜೊಳ್ಳು ಯಾವುದು ಗಟ್ಟಿ ಯಾವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡಿದ್ದರ ಫಲವಾಗಿ ಡಾ. ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಇವರುಗಳು ಹೆಚ್ಚು ಗಂಭೀರ ನೆಲೆಗಳನ್ನು ಪ್ರವೇಶಿಸಿದರು. ಅದರ ಫಲವೆಂಬಂತೆ ದೇವನೂರ ಮಹದೇವ, ದೇವಯ್ಯ ಹರವೆ, ಗೋವಿಂದಯ್ಯ, ಅರವಿಂದ ಮಾಲಗತ್ತಿ, ಮ.ನ.ಜವರಯ್ಯ, ಬಿ.ಟಿ.ಜಾಹ್ನವಿ, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ರಾಮಯ್ಯ, ಇಂದೂಧರ ಹೊನ್ನಾಪುರ ಇವರುಗಳ ಅಭಿವ್ಯಕ್ತಿ ವಿಚಾರಗಳಿಗೆ ಒಂದು ಗಟ್ಟಿಯಾದ ನೆಲೆ ಪ್ರಾಪ್ತವಾಯಿತು”. ದಲಿತ ಲೇಖಕರು, ಕಲಾವಿದರ ಎಚ್ಚೆತ್ತ ಪ್ರಜ್ಞೆಯು ಒಗ್ಗೂಡಿದ್ದು ಮುಂದೆ ಅದು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯದ ಗಡಿಗಳನ್ನು ವಿಸ್ತರಿಸಿ, ವಿಮರ್ಶಾ ಮಾನದಂಡಗಳನ್ನೇ ಬದಲಾಯಿಸಿದಂತಹ ದಲಿತ ಸಾಹಿತ್ಯವನ್ನು ಸೃಷ್ಟಿಸಿದ್ದು ಹಾಗೂ ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಹೊಸ ತಿರುವನ್ನು ನೀಡಿದ್ದು ಕರ್ನಾಟಕ ಇತಿಹಾಸದ ಐತಿಹಾಸಿಕ ಮೈಲಿಗಲ್ಲು.
೧೯೭೭ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಶ್ರೀ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಉಳುವವನೇ ಭೂ ಒಡೆಯನಾಗುವಂತಹ ಭೂಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿದ್ದು ಮತ್ತೊಂದು ಕ್ರಾಂತಿಕಾರಕ ಹೆಜ್ಜೆ.
ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಶ್ರೀ ಬಿ.ಬಸವಲಿಂಗಪ್ಪನವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಜಾರಿಗೊಳಿಸಿದ ೭೩ನೇ ಸಂವಿಧಾನದ ತಿದ್ದುಪಡಿಯ ಕಾರಣಕರ್ತರಲ್ಲಿ ಬಿ. ಬಸವಲಿಂಗಪ್ಪನವರು ಪ್ರಮುಖರು. ತಿದ್ದಪಡಿಯ ಪ್ರಥಮ ಆಯೋಗ ಜರುಗಿ ಜಿಲ್ಲಾ ಪಂಚಾಯತ್ ಮಸೂದೆಗೆ ತಿದ್ದುಪಡಿ ತಂದದ್ದು ಕರ್ನಾಟಕ ರಾಜ್ಯದಲ್ಲಿ, ಬಸವಲಿಂಗಪ್ಪನವರ ನೇತೃತ್ವದಲ್ಲಿ. ಇದು ಪರಿಶಿಷ್ಟರಿಗೆ, ಮಹಿಳೆಯರ ರಾಜಕೀಯ ನಾಯಕತ್ವಕ್ಕೆ ಅವಕಾಶ ಮಾಡಿಕೊಟ್ಟಿತು. ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆ ಸಚಿವರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಸ್ವತಃ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದ ಶ್ರೀಬಿ.ಬಸವಲಿಂಗಪ್ಪನವರು, ಬೌದ್ಧ ಧರ್ಮ ಪ್ರಚಾರಕ್ಕಾಗಿ ‘ಕರ್ನಾಟಕ ಬೌದ್ಧ ಧರ್ಮ ಸಮಿತಿ’ಯನ್ನು ಸ್ಥಾಪಿಸಿದರು. ಜುಲೈ ೨, ೧೯೯೨ರಂದು ಬಿಜಾಪುರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಹಲವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮೈಸೂರು, ಕೋಲಾರ, ಧಾರವಾಡ, ಬೆಳಗಾವಿ, ಬಿಜಾಪುರ, ಕಲ್ಬುರ್ಗಿ, ಬೀದರ್ ಹೀಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಬಸವಲಿಂಗಪ್ಪನವರು ವಿಶೇಷ ಸಭೆಗಳನ್ನು ನಡೆಸಿದರು.
ಕರ್ನಾಟಕದಲ್ಲಿ ದಲಿತ ಪ್ರಜ್ಞೆ ಜಾಗೃತಗೊಳ್ಳಲು ಕಾರಣರಾದ, ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತರಾಗಿದ್ದ ಶ್ರೀ ಬಿ.ಬಸವಲಿಂಗಪ್ಪನವರು ೧೯೯೨ರಲ್ಲಿ ನಿಧನರಾದರು. ಎಚ್ಚೆತ್ತ ದಲಿತ ಪ್ರಜ್ಞೆಯ ಸಂಕೇತವಾಗಿ ದಲಿತ ರಾಜಕಾರಣದಲ್ಲಿ ಅವರು ಅಮರರು.
ಸಫಾಯಿ ಕರ್ಮಚಾರಿಗಳ ಭರವಸೆ: ಐ.ಪಿ.ಡಿ ಸಾಲಪ್ಪ
ಗುಡಿಸುವವರ, ನೈರ್ಮಲ್ಯ ಕೆಲಸಗಾರರ ವಿಷಯ ಬಂದಾಗಲೆಲ್ಲ ಮರೆಯದೇ ಪ್ರಸ್ತಾಪವಾಗುವ ವ್ಯಕ್ತಿಯ ಹೆಸರೆಂದರೆ ಐ.ಪಿ.ಡಿ ಸಾಲಪ್ಪ ಎಂದೆ ಖ್ಯಾತರಾದ ಐವಾರಪಲ್ಲಿ ಪೆದ್ದಯ್ಯ ದೊಡ್ಡ ಸಾಲಪ್ಪ. ಪೌರಕಾರ್ಮಿಕರ ಸಲುವಾಗಿ ದನಿ ಎತ್ತಿದ, ಅವರಿಗೆ ದನಿಯಾದ ಸಾಲಪ್ಪನವರು ಬೆಂಗಳೂರಿನ ಗೌರಿಪುರದಲ್ಲಿ ೧೧.೧೨.೧೯೨೯ರಲ್ಲಿ ಮಾದಿಗ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶ್ರೀಮತಿ ಕುಳ್ಳಾಯಮ್ಮ. ತಂದೆ ಶ್ರೀ ಪೆದ್ದಯ್ಯ. ಪೆದ್ದಯ್ಯನವರ ಪೂರ್ವಿಕರು ೧೯೧೦ರಲ್ಲಿ ರೈಲ್ವೆ ಕೂಲಿಗಳಾಗಿ ಅಂದಿನ ಮೈಸೂರು ರಾಜ್ಯಕ್ಕೆ ಬಂದರು. ಪೆದ್ದಯ್ಯನವರು ರೈಲ್ವೆ ಹಳಿಗಳನ್ನು ಹಾಕುವ ಕೆಲಸ ಮಾಡುತ್ತಿದ್ದರು. ಸಾಲಪ್ಪನವರ ಪೂರ್ವಿಕರು ಈಗಿನ ತೆಲಂಗಾಣ ರಾಜ್ಯದ ಅನಂತಪುರದವರು. ಭೀಕರ ಬರಗಾಲವು ಹೊಟ್ಟೆಪಾಡನ್ನು ಅರಸಿಕೊಂಡು ಬೆಂಗಳೂರಿಗೆ ಬರುವಂತೆ ಮಾಡಿತು. ಸಾಲಪ್ಪನವರಿಗೆ ಮೂವರು ಅಕ್ಕಂದಿರು. ಸಾಲಪ್ಪನವರು ಜನಿಸಿದ ಆರು ತಿಂಗಳಲ್ಲೇ ಅವರ ತಾಯಿ ತೀರಿಕೊಂಡರು. ಇವರನ್ನು ಸ್ವಂತ ಮಗುವಿನಂತೆ ಸಾಕಿದವರು ಅವರ ಚಿಕ್ಕಮ್ಮ. ಅಂದರೆ ತಂದೆಯ ತಮ್ಮನ ಹೆಂಡತಿ.
ಹೈಸ್ಕೂಲು ಓದುವಾಗಲೇ ಸಾಲಪ್ಪನವರು ಸ್ವಾತಂತ್ರö್ಯ ಚಳುವಳಿಯಿಂದ ಪ್ರೇರಿತರಾದರು. ಒಮ್ಮೆ ಬೆಂಗಳೂರಿನ ಕೆಂಗೇರಿ ಗೇಟಿನ ಬಳಿ ಸ್ವಾತಂತ್ರö್ಯ ಚಳುವಳಿಗಾರರನ್ನು ಬಂಧಿಸಿ ಇರಿಸಿದ್ದ ವಾಹನದೊಳಗೆ ಕೂತೂಹಲದಿಂದ ಇಣುಕಿ ನೋಡಿದ ಬಾಲಕ ಸಾಲಪ್ಪನ ತಲೆಯ ಮೇಲೆ ಒಳಗೆ ಕುಳಿತಿದ್ದವರು ಗಾಂಧಿ ಟೋಪಿಯನ್ನು ಇರಿಸಿದರು. ಅಂದಿನಿಂದ ಗಾಂಧಿ ಟೋಪಿಯನ್ನು ಧರಿಸಲಾರಂಭಿಸಿದ ಸಾಲಪ್ಪನವರು ಕೊನೆಯವರೆಗೂ ಬಿಡಲಿಲ್ಲ. ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಇವರು ಗಾಂಧಿ ತತ್ವಗಳನ್ನು ಜೀವಮಾನವಿಡಿ ಅನುಸರಿಸಿದರು.
ಸಾಲಪ್ಪನವರು ಹತ್ತನೆ ತರಗತಿ ತೇರ್ಗಡೆಯಾದ ನಂತರ ಬಿನ್ನಿಮಿಲ್ಲಿನಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿನ ಕಾರ್ಮಿಕ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಬಳ್ಳಾರಿಯ ಮುನಿಸಿಪಲ್ ಕೌನ್ಸಿಲರ್ ಆಗಿದ್ದ ನಾರಪ್ಪನವರ ಮಗಳು ಸರಸ್ವತಿಯವರನ್ನು ಮದುವೆಯಾದರು. ೧೯೫೬ರಲ್ಲಿ ಜೆ.ಜೆ.ನಗರದಲ್ಲಿ ‘ತಿಲಕ್ ಪಾಠಶಾಲೆ’ ಆರಂಭಿಸಿದರು. ಆ ಪಾಠಶಾಲೆಯಲ್ಲಿ ಗಂಡ-ಹೆಂಡತಿಯರಿಬ್ಬರೂ ಶಿಕ್ಷಕರಾಗಿ ದುಡಿದರು. ಶಾಲೆಯು ರಾಜ್ಯ ಸರ್ಕಾರದ ಮಾನ್ಯತೆಯನ್ನು ಪಡೆದುಕೊಂಡಿತ್ತು. ಮುಂದೆ ವಿನೋಬನಗರದಲ್ಲಿ ‘ಹರಿಜನ ಸೇವಾ ಸಂಘ’ ಪಾಠಶಾಲೆ, ವಾಲ್ಮೀಕಿ ನಗರದಲ್ಲಿ ‘ಅರುಂಧತಿ ಪ್ರೌಢಶಾಲೆ’ ಮತ್ತು ಶ್ರೀರಾಂಪುರದಲ್ಲಿ ‘ವೆಂಕಟೇಶ್ವರ ಶಾಲೆ’ಯನ್ನು ಆರಂಭಿಸಿದರು. ತಿಲಕ್ ಪಾಠಶಾಲೆ ಈಗಲೂ ನಡೆಯುತ್ತಿದೆ. ಸಾಲಪ್ಪನವರು ಶಿಸ್ತಿನ ಶಿಕ್ಷಕರಾಗಿದ್ದರಲ್ಲದೆ ಸ್ವಚ್ಛತೆಯ ಬಗ್ಗೆ ಅಪಾರ ಕಾಳಜಿವಹಿಸುತ್ತಿದ್ದರು. ಮಕ್ಕಳು ಕೈಕಾಲು ತೊಳೆದುಕೊಂಡು ತರಗತಿಯೊಳಗೆ ಬರಲೆಂದು ತಪ್ಪದೆ ಬಕೆಟ್ಟಿನಲ್ಲಿ ನೀರಿರಿಸುವ ವ್ಯವಸ್ಥೆ ಮಾಡಿಸಿದ್ದರು.
ಸಾಲಪ್ಪನವರು ೧೯೮೦ರಲ್ಲಿ ದೂರ ಶಿಕ್ಷಣದ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡರು.
‘ಹರಿಜನ ಯುವಕ ಸೇವಾ ಸಮಾಜ’ ಸ್ಥಾಪಿಸಿ ಪೌರಕಾರ್ಮಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಿತ್ಯವೂ ಸಂಜೆ ಪೌರಕಾರ್ಮಿಕರನ್ನು ಒಟ್ಟುಗೂಡಿಸಿ ಹಲವಾರು ವಿಷಯಗಳ ಕುರಿತು ಮಾತನಾಡುತ್ತಿದ್ದರು. ಸತ್ತ ದನದ ಮಾಂಸ, ಹಳಸಿದ ತಂಗಳಿಟ್ಟನ್ನು ತಲೆಯ ಮೇಲೆ ಹೊತ್ತು ತಂದು ತಿನ್ನಬಾರದೆಂದು ಮನವರಿಕೆ ಮಾಡಿಕೊಡುತ್ತಿದ್ದರು. ಕುಡಿತದ ಚಟ ಬಿಡಿಸಲು ಅವಿರತವಾಗಿ ಶ್ರಮಿಸಿದ ಇವರು ಹಾಲಿನ ಮೇಲೆ ಕೈ ಇರಿಸಿ ಕುಡಿತ ಬಿಡುವಂತೆ ಪ್ರಮಾಣ ಮಾಡಿಸುತ್ತಿದ್ದರು. ೧೯೬೪ರಲ್ಲಿ ‘ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ವಕರ‍್ಸ್ ಸಂಘ’ವನ್ನು ಸ್ಥಾಪಿಸಿ ಪೌರಕಾರ್ಮಿಕರನ್ನು ಸಂಘಟಿಸುವ ಕೆಲಸ ಮಾಡಿದರು. ಸಂಘದ ಮೂಲಕ ಪೌರಕಾರ್ಮಿಕರ ಹಕ್ಕು ಮತ್ತು ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡಲು ನಿರಂತರವಾಗಿ ಶ್ರಮಿಸಿದರು. ಪೌರಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ೧೯೬೬ರಲ್ಲಿ ಸಾಲಪ್ಪನವರು ನಡೆಸಿದ ಉಪವಾಸ ಸತ್ಯಾಗ್ರಹವು ಪೌರಕಾರ್ಮಿಕರ ಮೊದಲ ಹೋರಾಟವಾಗಿದೆ. ಪೌರಕಾರ್ಮಿಕರ ಕಡುಕಷ್ಟದ ಬದುಕಿನ ನಿಕಟ ಪರಿಚಯವಿದ್ದ ಸಾಲಪ್ಪನವರು ಪೌರಕಾರ್ಮಿಕರ ಹಕ್ಕುಗಳಿಗಾಗಿ ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರ ಹೋರಾಟ ಮಾಡುತ್ತಿದ್ದರು. ಮುನಿಸಿಪಲ್ ಕೆಲಸ ಮಾಡುವವರು ಇಂಜಿನಿಯರಿಂಗ್ ವಿಭಾಗದಲ್ಲೇ ಇರಲಿ, ಮಲೇರಿಯಾ ವಿಭಾಗದಲ್ಲೇ ಇರಲಿ, ಉದ್ಯಾನದ ಕೆಲಸದಲ್ಲೇ ಇರಲಿ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಮೇಲಿನವರು ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಿದ್ದರು. ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗುವ ಎಷ್ಟೋ ಮೊದಲೇ ಅವರನ್ನು ಗೌರವದಿಂದ ಕಾಣಬೇಕೆಂಬ ತಿಳುವಳಿಕೆಯನ್ನು ಸಾಲಪ್ಪನವರು ಮೇಲಿನವರಿಗೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಅಧಿಕಾರಿಗಳೆಂದರೆ ಹೆದರಿ ನಡುಗುತ್ತಿದ್ದ ಪೌರಕಾರ್ಮಿಕರು ಸ್ವಾಭಿಮಾನದಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡತೊಡಗಿದರು. ನಿರಂತರ ಹೋರಾಟದ ಫಲವಾಗಿ ನಗರಪಾಲಿಕೆಯು ೧೫೦೦ ಜನರನ್ನು ಖಾಯಂಗೊಳಿಸಿತು. ೧೯೭೯-೮೦ರಲ್ಲಿ ೭೬ ದಿನಗಳ ಸರಣಿ ಸತ್ಯಾಗ್ರಹ ನಡೆಸಿ ಪೌರಕಾರ್ಮಿಕರನ್ನು ಕೆ.ಸಿ.ಎಸ್.ಆರ್ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾದರು. ಪೋಷಕರು ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದುಕೊಳ್ಳುತ್ತಿದ್ದ ಮಕ್ಕಳು ವಿದ್ಯಾವಂತರಾಗಿದ್ದರೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉನ್ನತ ದರ್ಜೆ ಕೆಲಸ ಸಿಗುವಂತೆ ಮಾಡಿದರು. ಇದರಿಂದಾಗಿ ಪೌರಕಾರ್ಮಿಕರಿಗೆ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸುಮಾರು ೮೦ ಶಾಖೆಗಳಲ್ಲಿ ಕೆಲಸ ಸಿಗುವಂತಾಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ರೂ.೨೫ಕ್ಕೆ ೧೨೯೯೪ ಸೈಟುಗಳು ಪೌರಕಾರ್ಮಿಕರಿಗೆ ಹಂಚಿಕೆಯಾಗಲು ಕಾರಣರಾದರು.
ಪೌರಕಾರ್ಮಿಕರನ್ನು ತುಚ್ಛವಾಗಿ ಕಾಣುವುದರ ವಿರುದ್ಧ ಸದಾ ಪ್ರತಿಭಟಿಸುತ್ತಿದ್ದ ಸಾಲಪ್ಪನವರ ಪ್ರತಿಭಟನಾ ವಿಧಾನಗಳು ಭಿನ್ನವಾಗಿದ್ದವು. ಸೂಕ್ತವಾಗಿ ಮನವರಿಕೆ ಮಾಡಿಕೊಡುವುದರ ಮೂಲಕ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಒಬ್ಬ ಮಹಿಳಾ ಹೆಲ್ತ್ ಇನ್‌ಸ್ಪೆಕ್ಟರ್ ಪೌರಕಾರ್ಮಿಕ ಮಹಿಳೆಯನ್ನು ತುಚ್ಛವಾಗಿ ಮಾತನಾಡಿಸಿದಾಗ ಆಕೆಯನ್ನು ಕರೆದು ಅದೆಷ್ಟು ಚೆನ್ನಾಗಿ ಬುದ್ಧಿ ಹೇಳಿದರೆಂದರೆ, ಮುಂದೆ ಆಕೆ ಸಂಪೂರ್ಣವಾಗಿ ಬದಲಾದರಲ್ಲದೆ ಆಕೆಗೆ ವರ್ಗವಾದಾಗ ಕಾರ್ಮಿಕರೇ ಆಕೆಯನ್ನು ಕಳಿಸಬಾರದೆಂದು ಬೇಡಿಕೊಂಡರಂತೆ.
ಪೌರಕಾರ್ಮಿಕರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ೧೯೬೬ರಲ್ಲಿ ‘ಭಂಗಿ ಬಂಧು’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಪೌರಕಾರ್ಮಿಕರ ಮೇಲೆ ಆಗುತ್ತಿದ್ದ ಶೋಷಣೆ, ಅನ್ಯಾಯ, ದೌರ್ಜನ್ಯಗಳ ಕುರಿತು ತೀಕ್ಷ÷್ಣವಾಗಿ ಬರೆಯುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಭ್ರಷ್ಟತೆ, ದರ್ಪ ಕುರಿತು ನಿರ್ಭೀತರಾಗಿ ಬರೆಯುತ್ತಿದ್ದರು. ವಿದ್ಯುತ್, ನೀರು, ಬಸ್ಸಿನ ದರ ಏರಿಕೆಯಾದಾಗ ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ದಲಿತರ ಹೆಸರಿನಲ್ಲಿ ಮಂಜೂರಾಗುವ ಹಣ ಬೇರೆ ಕಾರ್ಯಗಳಿಗೆ ವಿನಿಯೋಗವಾಗುತ್ತಿದ್ದರ ವಿರುದ್ಧ ಸತತವಾಗಿ ಹೋರಾಟ ನಡೆಸಿದರು. ೧೮% ಮೀಸಲಾತಿ ಪೌರಕಾರ್ಮಿಕರಲ್ಲೂ ಅನ್ವಯವಾಗಬೇಕೆಂದು ಒತ್ತಾಯಿಸಿದರು. ಉದ್ಯೋಗದ ಜೊತೆಗೆ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಗಾಗಿಯೂ ಶ್ರಮಿಸಿದರು.
ಕರ್ನಾಟಕ ಸರ್ಕಾರವು ಸೆಪ್ಟಂಬರ್ ೨೩, ೧೯೭೨ರಲ್ಲಿ ಗುಡಿಸುವ ಹಾಗೂ ಮಲಬಾಚುವವರ ಬದುಕುವ ಮತ್ತು ಕೆಲಸದ ಪರಿಸ್ಥಿತಿ ಕುರಿತು ಅಧ್ಯಯನ ಮಾಡಲು ನೇಮಿಸಿದ ಸಮಿತಿಗೆ ಸಾಲಪ್ಪನವರನ್ನು ಅಧ್ಯಕ್ಷ್ಯರನ್ನಾಗಿ ನೇಮಿಸಿತು. ರಾಜ್ಯದ ಮೂಲೆ ಮೂಲೆಗೂ ಹೋಗಿ ಪೌರಕಾರ್ಮಿಕರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿ ದಾಖಲಿಸುವುದರ ಜೊತೆಗೆ ಉತ್ತಮ ಶಿಫಾರಸ್ಸುಗಳನ್ನು ಒಳಗೊಂಡಿದ್ದ ‘ರಿಪೋರ್ಟ್ ಆನ್ ದಿ ಲಿವಿಂಗ್ ಅಂಡ್ ವರ್ಕಿಂಗ್ ಕಂಡಿಷನ್ಸ್ ಆಫ್ ಸ್ವೀರ‍್ಸ್ ಅಂಡ್ ಸ್ಕಾö್ಯವೆಂರ‍್ಸ್ (ಕಸಗುಡಿಸುವವರ ಮತ್ತು ಮಲಬಾಚುವವರ ಬದುಕು ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಮಿತಿಯ ವರದಿ) ವರದಿಯನ್ನು ಸಮಿತಿಯು ೧೯೭೬ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಒಣಪಾಯಿಖಾನೆಗಳನ್ನು ಆಧುನೀಕರಿಸಬೇಕು, ಪೌರಕಾರ್ಮಿಕರ ಕೆಲಸವನ್ನು ಅಪಾಯಕಾರಿ ವೃತ್ತಿ ಎಂದು ಪರಿಗಣಿಸಬೇಕು, ೫೦೦ ಜನಸಂಖ್ಯೆಗೆ ಒಬ್ಬರು ಪೌರಕಾರ್ಮಿಕರು ಇರಬೇಕು, ಅವರಿಗೆ ವಾರದ ರಜೆ, ಮೂರು ತಿಂಗಳ ಖಾಯಿಲೆ ರಜೆ, ಹೆರಿಗೆ ರಜೆ, ಪ್ರತಿ ವರ್ಷ ಪ್ರಯಾಣ ಭತ್ಯೆ, ಸಮವಸ್ತ್ರ, ಆರು ಗಂಟೆಗಳ ಕೆಲಸದ ಅವಧಿ, ಎರಡು ಪಾಳಿಯ ಕೆಲಸ, ಉದ್ದನೆಯ ಪೊರಕೆ, ಮುಚ್ಚಳವಿರುವ ಕಸದ ಡಬ್ಬ, ಗ್ಲೋವ್ಸ್, ಗಂಬೂಟುಗಳು, ಪೌರಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ, ಪೌರಕಾರ್ಮಿಕರಿಗಾಗಿ ಮನೆಗಳು, ಮನೋರಂಜನಾ ಕೇಂದ್ರಗಳು ಇತ್ಯಾದಿ ಅಮೂಲ್ಯ ಶಿಫಾರಸ್ಸುಗಳನ್ನು ವರದಿಯಲ್ಲಿ ಮಾಡಿದರು. ಸಮಾಜದ ಕಣ್ಣಿನಲ್ಲಿ ಮರೆಯಾಗಿ ಅಂಚಿಗೆ ದೂಡಲಾದ ಪೌರಕಾರ್ಮಿಕರ ಪರಿಸ್ಥಿತಿಯನ್ನು ಕೂಲಕಂಷವಾಗಿ ದಾಖಲಿಸಿದ, ಉತ್ತಮ ಶಿಫಾರಸ್ಸುಗಳನ್ನು ಹೊಂದಿದ ಮೊದಲ ವರದಿಯಲ್ಲದೆ ದೇಶದಲ್ಲೇ ಅತ್ಯುತ್ತಮ ವರದಿ ಇದಾಗಿದೆ. ಇದರ ಹೆಗ್ಗಳಿಕೆ ಸಮಿತಿಯ ಅಧ್ಯಕ್ಷರಾದ ಐ.ಪಿ.ಡಿ. ಸಾಲಪ್ಪನವರಿಗೆ ಸಲ್ಲುತ್ತದೆ.
ಸಾಲಪ್ಪನವರು ೧೯೭೫-೭೬ರಲ್ಲಿ ಸಕ್ರಿಯ ರಾಜಕಾರಣವನ್ನು ಪ್ರವೇಶಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಬಿನ್ನಿಪೇಟೆಯ ಸಾಮಾನ್ಯ ಕ್ಷೇತ್ರದಿಂದ ಶಾಸಕರಾಗಿ ಆರಿಸಿಬಂದರು. ೧೯೯೨ರಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ನಾಗಪುರಕ್ಕೆ ಭೇಟಿ ನೀಡಿದಾಗ, ಕಾಲೋನಿಯಲ್ಲಿ ಗಾಂಧೀಜಿಯವರು ಕಟ್ಟಿಸಿದ್ದ ಬಾವಿಯೂ ಹಾಳಾಗಿದ್ದನ್ನು ಕಂಡು ರಿಪೇರಿ ಮಾಡಿಸಲು ಕೂಡಲೇ ಐದು ಲಕ್ಷ ಹಣವನ್ನು ಮಂಜೂರು ಮಾಡಿಸಿದ್ದರು. ಬೆಂಗಳೂರು ನಗರಪಾಲಿಕೆ ಕಾರ್ಮಿಕರ ಒಕ್ಕೂಟಕ್ಕೆ ಮಹಾಕಾರ್ಯದರ್ಶಿಯಾಗಿದ್ದರು. ೧೯೯೨ರಲ್ಲಿ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡರು. ಕೊನೆಯ ತನಕ ಪೌರಕಾರ್ಮಿಕರ ಏಳಿಗೆಗಾಗಿ ದುಡಿದ ಇವರು ಸೆಪ್ಟಂಬರ್ ೧೪, ೧೯೯೬ರಲ್ಲಿ ತೀರಿಕೊಂಡರು. ೨೦೦೩ರಲ್ಲಿ ಇವರಿಗೆ ಬಾಬುಜಗಜೀವನ್ ರಾಮ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.(ಕೃಪೆ: ರಾಜ್ಯ ಪತ್ರಾಗಾರ ಇಲಾಖೆ ಪ್ರಕಟಿಸಿರುವ ಡಾ.ಬಿ.ಪಿ. ಇಂದಿರಾ ಅವರ ಪುಸ್ತಕ ‘ಸ್ವಚ್ಛತೆಯ ಹರಿಕಾರರು ಐ.ಪಿ.ಡಿ.ಸಾಲಪ್ಪ’ ಅದ್ಯಯನ)
ಪೌರಕಾರ್ಮಿಕರ ಪರಿಸ್ಥಿತಿಯ ಕುರಿತ ಅತ್ಯುತ್ತಮ ವರದಿಯು ಬರುವುದರ ಹಿಂದಿನ ಬಹುಮುಖ್ಯ ಕಾರಣಕರ್ತರು ಅಂದಿನ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಶ್ರೀ ಬಿ. ಬಸವಲಿಂಗಪ್ಪನವರು ಮತ್ತು ಅಂದಿನ ಮುಖ್ಯಮಂತ್ರಿಗಳಾದ ಶ್ರೀಡಿ. ದೇವರಾಜ ಅರಸ್ ಅವರು. ಪೌರಕಾರ್ಮಿಕರ ಹೋರಾಟದ ಇತಿಹಾಸದಲ್ಲಿ ಇವರಿಬ್ಬರ ಹೆಸರು ಚಿರಸ್ಥಾಯಿ. ಅವರಿಬ್ಬರ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನೀಡಲಾಗಿದೆ.
ಬೌದ್ಧಗುರು ಸುನೀತ
ಗಂಗಾನದಿ ತವ ವಂದಪ ಬುದ್ದ ಸಿಸ್ಯರೊಂದ್ಗೆ ಬಿಕ್ಸೆಗೆ ವೋಗಿದ್ದ. ದಾರಿನಾಗ ವೋಯ್ತ ಇದ್ದ ಮಲ ಹೊರೊ ಸುನೀತ ಬುದ್ದನ್ನ ಕಂಡು ಅಂಗೆ ಇಂದ್ಕೆ ರ‍್ಕಂಡ. ಆದ್ರೂ ಬುದ್ದ ಅವನ್ತಕೆ ವೋದ. ಮೈಯಿ, ಬಟ್ಟೆ ಎಲ್ಲ ನರ‍್ತ ಇದ್ದ ಸುನೀತ ಗಾಬ್ರಿ ಬಿದ್ದು ನೀರೊಳ್ಗೆ ವೋಗಿ ಕುತ್ಕಂಡ.
ಬುದ್ದ: ಬಾಸಾಮಿ ನಿಂತಾವಸಿ ಮಾತಾಡ್ಬೇಕು.
ಸುನೀತ: ಅಯ್ಯೊ ದೂರ ವೊಗಿ ಸಾಮಿ ನನ್ನ ಮುಟ್ಸ÷್ಕಂಡ್ರೆ ನೀವು ಗಲೀಜಾತಿರಾ.
ಬುದ್ದ: ನಮ್ನ ಗಲೀಜ್ ಮಾಡೋದು ದುರಾಸೆ, ದ್ವೇಷ, ಮೋಹ. ನೀನು ಸುದ್ವಾಗಿದಿಯಾ ಏನು ನಿನ್ನ ಎಸ್ರು?
ಸುನೀತ: ಸುನ್ತಾ ಅಂತರೆ ಸಾಮಿ.
ಬುದ್ದ: ದೀಕ್ಸೆತಾಂಡು ಬಿಕ್ಸು ಆಗು.
ಸುನೀತ: ಅದೆಂಗಾದಾತು ನಾನು ಕೀಳ್ ಜಾತಿಯೋನು.
ಬುದ್ದ: ಎಲ್ಲಾರ್ ಕಣ್ಣೀರ್ ಉಪ್ಪೆ! ಅರಿವಿನ್ದಾರಿನಾಗೆ ಜಾತಿ ಧರ್ಮ ಇಲ್ಲ.
ಸುನೀತ: ಏಲ್ಬಾಚೊ ನನ್ನ ಎಲ್ರೂ ಏಲ್ನಂಗೆ ಅಸಿಸಿ ಮಾಡ್ತರೆ. ಇಂಗೆ ಯಾರು ನಂತವ ಮಾತಾಡರ‍್ಲಿಲ್ಲ ದೀಕ್ಸೆ ಕೊಟ್ರೆ ಜೀವಾ ಮುಡ್ಪಾಗಿಡ್ತೀನಿ.
ಬುದ್ದ: ಸುನೀತನ ಮೈದಡವಿ ತಲೆ ಬೋಳ್ಸಿ, ಮೈ ತಿಕ್ಕಿ ತೊಳ್ದು ರ‍್ಕೊಂಡೋಗಿ ದೀಕ್ಸೆ ಕೊಟ್ಟ. ಈ ಸಂಗ್ತಿ ಕೇಳಿದ ದರುಮ್‌ಗರ‍್ಗೋಳೆಲ್ಲ ದೊರೆಗೆ ದೂರು ಕೊಟ್ರು. ಕೇಳಕೆ ಅಂತ ದೊರೆ ಬುದ್ದನತ್ರ ಬಂದ. ಆಸ್ರಮದೊಳ್ಗೆ ವೊಗೊವಾಗ ಸಣ್‌ದೊಂದು ಬಂಡೆ ಮ್ಯಾಲೆ ಬಿಕ್ಸು ಒಬ್ಬ ಕುತ್ಕಂಡ ಉಪ್ದೇಸ ಕೊಡ್ತ ಇದ್ದ. ಅವ್ನ ಕಣ್ಣಿನ್ ದೀಪ್ದಾಗೆ ಅವ್ನ ಮಕ ವಳಿತಿತ್ತು. ಅವ್ನಾಡೊ ಮಾತ್ನ ಸಿಲೆ ಅಂಗೆ ಕುಂತು ಕೇಳ್ತ ಇದ್ದೋರ ಮಕ್ದಾಗೆ ಸಾಂತಿ ಅಡ್ಕಂಡಿತ್ತು. ರಾಜಂಗು ಅಲ್ಲೆ ಕುಂತು ಕೇಳ್ಬೇಕು ಅನ್ಸ್ತು. ಬುದ್ದನ್ನ ನೊಡ್ಬೇಕಲ್ಲ ಅಂತ ವೋಗಿ ಏನು ಎತ್ತ ಅಂತ ಯಿಚರ‍್ಸಿ ಅಲ್ಲಿ ಕುಂತಿರೊ ಬಿಕ್ಸು ಯಾರು ಅಂತ ಕೇಳ್ದ.
ಬುದ್ದ: ಅವ್ನು ಸುನೀತ, ಸ್ಯಾನೆ ಜಾಣ, ಪ್ರಾಮಣಿಕ ಬಂದ್ ಮೂರ್ ತಿಂಗ್ಳಾಗೆ ದೊಡ್ಡ ಸಾದ್ನೆ ಮಾಡಿ ಬೋದ್ನೆ ಮಾಡಂಗೆ ಆಗವ್ನೆ ಅಂದ.
ರಾಜ: ದೂರು ಕೊಟ್ಟಿದ್ರೆ ಅಪರಾದ್ವಾಗ್ತಿಲ್ಲ ಅಂದ್ಕಂಡು ‘ಯರ‍್ನೂ ಬೇದ ಮಾಡ್ದಿರೊ ನಿನ್ನ ಅಂತರ‍್ಣಕ್ಕೆ ಎಣೆನೇ ಇಲ್ವಲ್ಲಪ್ಪ, ನಿನ್ನ ಮಾರ್ಗ ಎಂತ ಅದ್ಬುತವಪ್ಪ’ ಅಂತ ಕೈ ಎತ್ತಿ ಮುಗ್ದ.
ಬುದ್ದ: ರ‍್ವಿನ ದಾರಿನಾಗೆ ಜಾತಿಬೇದ ಇಲ್ಲ. ಎಲ್ಲರೂ ವಂದೆ, ಎಲ್ಲರ ರಕ್ತ ಕೆಂಪು, ಎಲ್ರ ಬೆವ್ರು ಉಪ್ಪೇ, ಎಲ್ಲರ ವಳ್ಗೂ ಅರಿವಿನ ದಾರಿ ಕಂಡ್ಕಳ ಬೆಳಕದೆ. ಸುನೀತನ ವಳ್ಗಿರೊ ಬೆಳ್ಕು ನಂಗೆ ಅವತ್ತೇ ಕಾಣ್ತು. ಅದ್ಕೆ ಸುನೀತನ್ನ ರ‍್ಕಂಡು ಬಂದೆ; ನೀನು ಇವತ್ತು ಕಂಡ್ಕಂಡೆ. ಕಾಣ್ದಿರೋರು ದರ‍್ಲಿ, ಕಂಡೋರು ರ‍್ಲಿ.
ಮನ್ನೆ ದಿನ ಕೆಜೆಪ್‌ನಾಗೆ ಒಂದೇಸಲ್ಕೆ ಮರ‍್ಜನ ಕಕ್ಕಸ್ ಗುಂಡಿನಾಗೆ ಬಿದ್ ಸತ್ತೋದ್ರು. ಆಗೆಲ್ಲ ಏಲ್ನ ಕೈಯಾಗೆ ಬಾಚುಸ್ತಿದ್ರು ಈಗ ಏಲ್ನಾಗೆ ಈಜಾಡ್ಸಿ ಉಸ್ರುಗಟ್ಟಿ ಸಾಯ್ರಿ ಅಂತರೆ. ಗೊಬ್ರುದಾಗಿರೋ ಊವ ಊವ್ನಾಗಿರೊ ಗೊಬ್ರ ಕಂಡೋರಿಗೆ ಎಲ್ಡೂ ವಂದೇ ಅಂತ ಗೊತ್ತಾತದೆ. ಊವಿಲ್ದೆ ಗೊಬ್ರಿಲ್ಲ, ಗೊಬ್ರಿಲ್ದೆ ಊವಿಲ್ಲ ಅಂತ ಗೊಬ್ರಊವಿನ ಸಂಬಂಧ ಕತ್ರಿಸಾಕ್ದೊರ‍್ಗೆ ಊವ ಬೇರೆ ಗೊಬ್ರ ಬೇರೆ. ಅಂತರ‍್ಗೆಲ್ಲ ಅವ್ರ ಏಲೆ ಅವ್ರಿಗೆ ಅಸಯ್ಯ; ಅವರೇಲು ಬಾಚೊರು ಅಸಯ್ಯ; ಇನ್ನ ಅವರೊಳ್ಗಿರೊ ಅರಿವಿನ ಬೆಳ್ಕು ಕಾಣ್ಸದುಂಟಾ? (ಕೃಪೆ: ದು.ಸರಸ್ವತಿಯವರ ಸಣ್ತಿಮ್ಮಿ ಪುರಾಣ ಆರು ಏಕಾಂಕಗಳು ಪ್ರ:ಕವಿ ಪ್ರಕಾಶನ, ಕವಲಕ್ಕಿ, ಉ.ಕ.ಜಿಲ್ಲೆ, ೨೦೧೮)
ಅಂಚಿನಲ್ಲೂ ಮಿಣುಕುವ ಇತಿಹಾಸ
ಅವಮಾನ ಮತ್ತು ಸಂಕಟವನ್ನೇ ಉಣಿಸಿ, ದುಡಿಮೆಗೆ ಬಿಡಿಗಾಸು ನೀಡಿ ಅಂಚಿಗೆ ತಳ್ಳಿ ಮುಂಬರದಂತೆ ಭದ್ರ ಬೇಲಿ ಬಿಗಿದರೂ ಮಿಂಚುಳಗಳಂತೆ ಪುಟಿದು ಸಾಧನೆಯ ದಾರಿಯಲ್ಲಿ ಮೈಲಿಗಲ್ಲಾದವರ ನೆನೆಯುವ ಭಾಗವಿದು. ಸಂಪತ್ತು, ಹೆಸರು, ಅಧಿಕಾರವೇ ಮಾನದಂಡವಾಗಿರುವ ಸಾಧನೆಯ ಇತಿಹಾಸವಲ್ಲ ಇದು. ಯಾರ ಮನುಷ್ಯ ಘನತೆಯನ್ನು ತುಳಿದು ಮಣ್ಣುಮಾಡಲಾಗಿದೆಯೋ ಅವರ ಮನುಷ್ಯ ಘನತೆಯನ್ನು ಎತ್ತಿ ಹಿಡಿಯಲು ನಡೆಸಿದ ಸತತ ಪ್ರಯತ್ನ ಮತ್ತು ಯಶೋಗಾಥೆಯನ್ನು ಸಾಧನೆ ಎಂದು ಪರಿಗಣಿಸುವ ಪ್ರಯತ್ನವಿದು. ಇಂಗ್ಲಿಷಿನಲ್ಲಿ ಸಾಯಿಲ್ ಎಂದರೆ ಮಣ್ಣೂ ಹೌದು; ಕೊಳೆಯೂ ಹೌದು. ಕೊಳೆಯನ್ನೆತ್ತಿ ಕೊಳೆಸುವಂತಹ ಮಣ್ಣ ಕೆಲಸ ಮಾಡಿ ಸರ್ವರ ಆರೋಗ್ಯ ಕಾಪಾಡುವವರÀ ಘನತೆಯನ್ನು ತುಳಿದು ಮಣ್ಣು ಮಾಡಿದ್ದರೂ ಅವರು ಮಣ್ಣಿನಲ್ಲೇ ಕೊಳೆತು ಮಣ್ಣಿಗೇ ಸಾರವಾಗಿ, ಅದೇ ಮಣ್ಣಿಂದಲೇ ಮೊಳೆಕೆಯೊಡೆದು ತಂಪು ನೆರಳಂಥ ಸಾಧನೆ ಮಾಡಿದವರ ಕತೆಯಿದು. ಭವ್ಯತೆಯ ಕಣ್ಣು ಕುಕ್ಕುವ ಬೆಳಕಿನಡಿಯ ಕತ್ತಲಲ್ಲಿ ಮಿಂಚುಗಳ ಅರಸುವವರಿಗೆ ಮಿಂಚುಳಗಳು ಗೋಚರಿಸಬಲ್ಲವು. ಮನುಷ್ಯ ಚೈತನ್ಯಕ್ಕೆ ಸೋಲಿಲ್ಲ. ಎಷ್ಟು ತುಳಿದರು ಮತ್ತೆ ಮತ್ತೆ ಚಿಗುರುವ ಗರಿಕೆ ಹುಲ್ಲಿನಂತದು ಎಂದು ನಂಬುವ, ತೆರೆದ ಕಣ್ಣು ಮತ್ತು ಮನದ ನೋಟಗಳಿಗೆ ಮಾತ್ರವೇ ಅಂಚಿನಲ್ಲೂ ಸಫಾಯಿ ಕರ್ಮಚಾರಿಗಳು ಕಟ್ಟಿರುವ ಮಿಣುಕು ಇತಿಹಾಸ ಕಾಣುವುದು. ಈ ಇತಿಹಾಸ ಭೂತದಿಂದ ಹಿಡಿದು ವರ್ತಮಾನದೊಂದಿಗೆ ಭವಿಷ್ಯದತ್ತಲೂ ಸಾಗುತ್ತಿದೆ.
ಸಾಂಸ್ಥಿಕ ಚೌಕಟ್ಟು ಮತ್ತು ಕಾನೂನಿನ ಚೌಕಟ್ಟು
ಪೌರಕಾರ್ಮಿಕರು ಪದದ ಅರ್ಥ ವಿವರಣೆ:
ಫೆಬ್ರವರಿ ೨೨, ೧೯೭೩ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಕಸ ಗುಡಿಸುವವರು ಮತ್ತು ಮಲ ಬಾಚುವವರನ್ನು “ಪೌರಕಾರ್ಮಿಕರು” ಎಂದು ಕರೆಯಬೇಕೆಂದು ಘೋಷಿಸಿದರು. ಕರ್ನಾಟಕ ಸರ್ಕಾರವು ಹೊರಡಿಸಿದ ಸುತ್ತೋಲೆ (ಅiಡಿಛಿuಟಚಿಡಿ ಓo. ಊಒಂ ೨೨೯, ಉಉಐ ೭೨, ಃಚಿಟಿgಚಿಟoಡಿe ಜಚಿಣeಜ ೩೦ಣh ಒಚಿಡಿಛಿh ೧೯೭೩)ಯಲ್ಲಿ “…ಗುಡಿಸುವವರು ಮತ್ತು ಮಲ ಬಾಚುವವರನ್ನು ಆ ಹೆಸರಿನಿಂದ ಕರೆಯುವುದನ್ನು ಕೈಬಿಡಲಾಗಿದೆ… ಈ ನಿಟ್ಟಿನಲ್ಲಿ ಪೌರಾಡಳಿತ ಸಚಿವರು ದೆಹಲಿಯಿಂದ ಹಿಂತಿರುಗಿದ ನಂತರ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಗುಡಿಸುವವರ ಮತ್ತು ಮಲಬಾಚುವವರ ಹೆಸರನ್ನು “ಪೌರಕಾರ್ಮಿಕರು” ಎಂದು ಬದಲಾಯಿಸಲಾಗಿದೆ” ಎಂದು ಹೇಳಲಾಗಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೨(೨೭) ಪ್ರಕಾರ “ಪೌರಕಾರ್ಮಿಕರು ಎಂದರೆ ಕಸವನ್ನು ಸಂಗ್ರಹಿಸುವ ಅಥವಾ ತೆಗೆಯುವ, ಚರಂಡಿಗಳು ಅಥವಾ ಕಸಾಯಿಖಾನೆಯನ್ನು ಸ್ವಚ್ಛ ಮಾಡುವವರು ಅಥವಾ ಮಲವನ್ನು ಹೊರತುಪಡಿಸಿ ಕಸವನ್ನು ಸಾಗಿಸುವ ಗಾಡಿಗಳನ್ನು ಓಡಿಸುವವರು” ಎಂದು ವಿವರಿಸಲಾಗಿದೆ.
ಸ್ವಚ್ಛತೆಯ ಕೆಲಸವನ್ನು ಮಾಡುವವರನ್ನು ತೋಟಿಗಳು, ಜಾಡಮಾಲಿಗಳು ಇತ್ಯಾದಿ ಜಾತಿಸೂಚಕ ಮತ್ತು ಅಪಮಾನಕರ ಪದಗಳಿಂದ ಕರೆಯಲಾಗುತ್ತಿತ್ತು. “ತೋಟಿ” ಎಂಬ ಪದದ ಅರ್ಥವನ್ನು ಕಿಟ್ಟಲ್ ನಿಘಂಟಿನಲ್ಲಿ ಹೀಗೆ ವಿವರಿಸಲಾಗಿದೆ-ಹಳ್ಳಿಯ ಅತ್ಯಂತ ಕೀಳಾದ ಸೇವಕ. ವಿಶೇಷವಾಗಿ ಗುಡಿಸುವ, ಮಲಬಾಚುವಂತಹ ಕೀಳಾದ ಕೆಲಸವನ್ನು ಮಾಡುವವರು. ಕಸ, ಮಲ, ಹೊಲಸು ಬಾಚುವುದು ಅತ್ಯಂತ ಕೀಳು ಕೆಲಸವಾಗಿದೆಯಲ್ಲದೆ ಅದನ್ನು ಅಶುದ್ಧ ಮತ್ತು ಅಪವಿತ್ರವೆಂದು ಪರಿಗಣಿಸಲಾಗಿದೆ. ಆ ಕೆಲಸಗಳ ಬಗ್ಗೆ ಇರುವ ಹೇವರಿಕೆ ಮತ್ತು ಜುಗುಪ್ಸೆಯ ಭಾವನೆಗಳು ಜಾತಿವ್ಯವಸ್ಥೆಯಿಂದಾಗಿ ಬಂದಿದೆ. ಆ ಕೆಲಸ ಮಾಡುವವರನ್ನೂ ಜಿಗುಪ್ಸೆಯಿಂದ ಕಾಣಲಾಗುತ್ತದೆ. ಅಂತಹ ಕೆಲಸ ಮಾಡುವವರು ಸಹ ಜಾತಿಶ್ರೇಣೀಕರಣದ ಕೊನೆಯಲ್ಲಿರುವ ಅಸ್ಪೃಶ್ಯರೇ ಆಗಿದ್ದಾರೆ. ಜಾತಿ ಮತ್ತು ವೃತ್ತಿ ಎರಡರಿಂದಲೂ ನಿಕೃಷ್ಟವಾಗಿರುವವರನ್ನು ನಿಕೃಷ್ಟವಾದ ಹೆಸರಿನಿಂದಲೇ ಕರೆಯುವ ಪರಿಪಾಟವಿದೆ.
ಸಾಂಸ್ಥಿಕ ರಚನೆ
ಸಫಾಯಿ ಕರ್ಮಚಾರಿಗಳು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪುರಸಭೆ ಮತ್ತು ಗ್ರಾಮಪಂಚಾಯ್ತಿಯಡಿ ಸ್ವಚ್ಛತೆಯ ಕೆಲಸ ಮಾಡುತ್ತಾರೆ. ಈ ಕೆಲಸವು ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ (ಘನತ್ಯಾಜ್ಯ ನಿರ್ವಹಣೆ) ಅಡಿ ಬರುತ್ತದೆ. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ ಆಕ್ಟ್ನ ಸೆಕ್ಷನ್ ೨೬೧ರ ಅಡಿ ಮುನಿಸಿಪಲ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಸಾಂಸ್ಥಿಕ ಸ್ವರೂಪವನ್ನು ಹೀಗೆ ವಿವರಿಸಲಾಗಿದೆ-
ಮುಖ್ಯ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಆರೋಗ್ಯಾಧಿಕಾರಿ
ಪ್ರತಿ ವಲಯಕ್ಕೆ ಇಬ್ಬರು ಉಪ-ಆರೋಗ್ಯಾಧಿಕಾರಿಗಳು
ಪ್ರತಿ ರೇಂಜಿಗೂ ಒಬ್ಬರು ಆರೋಗ್ಯ ವೈದ್ಯಾಧಿಕಾರಿ
ಒಬ್ಬರು ಹಿರಿಯ ಆರೋಗ್ಯ ವೀಕ್ಷಕರು (ಇನ್‌ಸ್ಪೆಕ್ಟರ್)
ಪ್ರತಿಯೊಂದು ಆಡಳಿತ ವಾರ್ಡಿಗೂ ಇಬ್ಬರು ಕಿರಿಯ ಆರೋಗ್ಯ ವೀಕ್ಷಕರು
ನೈರ್ಮಲ್ಯ ದಫೇದಾರ್
ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು
ಕೆಲಸದ ಸ್ವರೂಪ:
ಜನಸಂಚಾರ ಆರಂಭವಾಗುವ ಮುನ್ನ ಬೆಳಗಿನ ಜಾವವೇ ಸ್ವಚ್ಛತೆಯ ಕೆಲಸವನ್ನು ಮಾಡಿಸುವುದು ರೂಢಿಯಲ್ಲಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಅದಕ್ಕಾಗಿ ಸಫಾಯಿ ಕರ್ಮಚಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಇದೊಂದು ಸರ್ಕಾರಿ ಕೆಲಸವಾಗಿದ್ದರೂ ಕೆಲವೇ ಜಾತಿಗಳಿಗೆ ಮೀಸಲಾಗಿದೆ. ಜನಸಂಚಾರ ಆರಂಭವಾಗುವ ಮುನ್ನವೇ ಸ್ವಚ್ಛ ಮಾಡಬೇಕಾಗಿರುವುದರಿಂದಾಗಿ ಸಫಾಯಿ ಕರ್ಮಚಾರಿಗಳು ಬೆಳಗ್ಗೆ ೬ರಿಂದ ೨.೩೦ರವರೆಗೂ ಕೆಲಸಮಾಡುತ್ತಾರೆ. ಕೆಲವು ಕಡೆ ಬೆಳಗ್ಗೆ ೬ ರಿಂದ ೧೦.೩೦ ಮತ್ತು ಮಧ್ಯಾಹ್ನ ೨.೩೦ರಿಂದ ೫.೩೦ರವರೆಗು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ಮುಖ್ಯರಸ್ತೆಗಳು ಮತ್ತು ಅಡ್ಡರಸ್ತೆಗಳನ್ನು ಗುಡಿಸುವುದು, ಕುಪ್ಪೆ (ಕಸದ ಗುಡ್ಡೆ) ಎತ್ತುವುದು, ರಸ್ತೆ ಬದಿಯ ಚಿಕ್ಕ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಖಾಲಿ ಜಾಗಗಳಲ್ಲಿನ ಘನತ್ಯಾಜ್ಯಗಳನ್ನು ತೆಗೆಯುವುದು, ಕಳೆಸಸ್ಯಗಳನ್ನು ಕೀಳುವುದು, ದೊಡ್ಡ ಮೋರಿಗಳಲ್ಲಿ ಶೇಖರವಾಗುವ ಕಸವನ್ನು ತೆಗೆಯುವುದು, ಮನೆಗಳಿಂದ ಕಸವನ್ನು ಸಂಗ್ರಹಿಸುವುದು, ಕಸವನ್ನು ಲಾರಿಗಳಿಗೆ ಲೋಡ್ ಮಾಡುವುದು ಮತ್ತು ಅನ್‌ಲೋಡ್ ಮಾಡುವುದು, ಮನೆಗಳು ಮತ್ತು ಹೋಟೆಲುಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆ ಇತ್ಯಾದಿ ಸಾರ್ವಜನಿಕ ಸಂಸ್ಥೆಗಳಿಂದ ಕಸವನ್ನು ಸಂಗ್ರಹಿಸುವುದು, ಕಟ್ಟಡ ನಿರ್ಮಾಣದ ತ್ಯಾಜ್ಯವೂ ಸೇರಿದಂತೆ ಇತರೆ ಘನತ್ಯಾಜ್ಯಗಳನ್ನು ಎತ್ತಿಹಾಕುವುದು, ಸತ್ತ ಪ್ರಾಣಿಗಳನ್ನು ಸಾಗಿಸುವುದು, ಜಾತ್ರೆ, ಹಬ್ಬ, ಸಾರ್ವಜನಿಕ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಬೀಳುವ ಕಸದ ರಾಶಿಯನ್ನು ತೆಗೆಯುವುದು, ಕಸವನ್ನು ಡಂಪಿಂಗ್ ಯಾರ್ಡಿಗೆ ಒಯ್ಯುವುದು, ಕಸವನ್ನು ವಿಂಗಡಿಸುವುದು, ಇತ್ಯಾದಿ ಕೆಲಸಗಳನ್ನು ಸಫಾಯಿ ಕರ್ಮಚಾರಿಗಳು ಮಾಡುತ್ತಾರೆ.
ಕೆಲಸದ ಅವಧಿ, ಕೆಲಸದ ವಿವರ, ವೇತನ ಮತ್ತು ದಿನವೊಂದಕ್ಕೆ ಬೀಳುವ ಕಸದ ವಿವರ:
ಕ್ರ.
ಸಂ. ಜಿಲ್ಲೆಯ ಹೆಸರು
ಜನಸಂಖ್ಯೆ ಒಂದು ದಿನದಲ್ಲಿ ಬೀಳುವ ತ್ಯಾಜ್ಯ ಕೆಲಸದ
ಅವಧಿ ಕೆಲಸದ ವಿವರ ಖಾಯಂ
ನೌ ಖಾಸಗಿ
ನೌಕರರು ಗು.ಸಫಾಯಿ
ಕರ್ಮಚಾರಿಗಳ
ವೇತನ ಪ್ರತಿ ತಿಂಗಳಿಗೆ ಖಾಯಂ
ನೌಕರರ
ವೇತನ
೧ ಚಿತ್ರದುರ್ಗ ೧,೪೦,೨೦೬ ೪೫ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/-
ಅಂದಾಜು
ರೂ.೨೦,೦೦೦/-
೨ ಮಂಗಳೂರು ೪,೯೯,೪೮೭ ೨೨೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೦೦ ೧೪,೦೪೦/- ಅಂದಾಜು
ರೂ.೨೦,೦೦೦/-
೩ ಬಳ್ಳಾರಿ ೪.೧೦,೪೦೦ ೧೬೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೪ ಕೋಲಾರ ೧,೮೩,೪೬೨ ೮೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೫೦ ೧೩,೬೫೦/- ಅಂದಾಜು
ರೂ.೨೦,೦೦೦/-
೫ ಕೆ.ಜಿ.ಎಫ್. ೧,೬೩,೬೪೩ ೫೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೧೬೮ ೧೩,೬೫೦/- ಅಂದಾಜು
ರೂ.೨೦,೦೦೦/-
೬ ಗುಲ್ಬರ್ಗಾ ೫,೪೩,೦೦೦ ೧೩೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೯೮೦ ೧೪,೦೪೦/- ಅಂದಾಜು
ರೂ.೨೦,೦೦೦/-
೭ ಮೈಸೂರು ೮,೮೭,೪೪೬ ೪೦೨ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೬೫೦ ೧೪,೦೪೦/- ಅಂದಾಜು
ರೂ.೨೦,೦೦೦/-
೮ ಬೆಂಗಳೂರು ೯೮.೭೫ ಲಕ್ಷ
(೨೦೧೬) ೩೦೦೦ ಟನ್
ಮುಂಜಾನೆ ೬ ಘಂಟೆಯಿಂದ ಮಧ್ಯಾಹ್ನ ೨.೩೦ ರವರೆಗೆ ರಸ್ತೆಗಳನ್ನು ಗುಡಿಸುವುದು, ಕಸ ತುಂಬುವುದು, ತೆರವು ಮಾಡುವುದು, ಚರಂಡಿಗಳ ಸ್ವಚ್ಛತೆ ೨೫೧೪ ೧೭,೦೦೦+ ೧೪,೦೪೦/- ಅಂದಾಜು
ರೂ.೨೨,೦೦೦/-
ಕಾನೂನಿನ ಚೌಕಟ್ಟು
ಘನತ್ಯಾಜ್ಯ ನಿರ್ವಹಣೆಯ ಅಡಿಯಲ್ಲಿ ಬರುವ ಸ್ವಚ್ಛತೆಯ ಕೆಲಸವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳು ನಿರ್ವಹಿಸುತ್ತವೆ. ಸ್ವಚ್ಛತೆಯ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೂ ಕಾಯ್ದೆಯನ್ನು ರಚಿಸಿ ಅನುಷ್ಠಾನಗೊಳಿಸಲಾಗಿದೆ.
ಘನತ್ಯಾಜ್ಯಕ್ಕೆ ಸಂಬಂಧಪಟ್ಟ ಕಾನೂನುಗಳು
• ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್, ೧೯೭೬.
• ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್, ೧೯೭೬.
• ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ಮ್ಯಾನೇಜ್‌ಮೆಂಟ್ ಅಂಡ್ ಹ್ಯಾಂಡ್ಲಿಂಗ್) ರೂಲ್ಸ್
ಘನತ್ಯಾಜ್ಯ ನಿರ್ವಹಣೆಗಾಗಿ ನೇಮಕ ಮಾಡಿಕೊಂಡವರ ಕೆಲಸದ ಪರಿಸ್ಥಿತಿ ಕುರಿತ ಕಾನೂನುಗಳು
• ಕಾಂಟ್ರಾö್ಯಕ್ಟ್ ಲೇಬರ್ ಆ್ಯಕ್ಟ್, ೧೯೭೦,
• ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆ್ಯಕ್ಟ್, ೧೯೪೮.
• ರ‍್ಕ್ಮನ್ಸ್ ಕಾಂಪೆನ್‌ಸೇಷನ್ ಆ್ಯಕ್ಟ್, ೧೯೨೩.
• ಪ್ರಾವಿಡೆಂಟ್ ಫಂಡ್ ಆ್ಯಕ್ಟ್, ೧೯೫೨.
ಪಾಲಿಕೆಗಳ ಜವಾಬ್ದಾರಿ
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಆಕ್ಟ್ನ ಸೆಕ್ಷನ್ ೫೮ರ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳೆಂದರೆ,
• ಎಲ್ಲಾ ಸಾರ್ವಜನಿಕ ರಸ್ತೆಗಳ ಸ್ವಚ್ಛತೆ
• ಗುಡಿಸಿದ ಎಲ್ಲಾ ಕಸವನ್ನು ತೆಗೆಸುವುದು
• ತ್ಯಾಜ್ಯವನ್ನು ಸಂಗ್ರಹಿಸುವುದು, ತೆಗೆಯುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವುದು
• ಒಳಚರಂಡಿ ಮತ್ತು ಚರಂಡಿಗಳನ್ನು ಕಟ್ಟುವುದು, ನಿರ್ವಹಣೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು
ಮುನಿಸಿಪಲ್ ಸಾಲಿಡ್ ವೇಸ್ಟ್ ನಿಯಮಗಳ ಪ್ರಕಾರ ಪಾಲಿಕೆಗಳು ನಿರ್ವಹಿಸಬೇಕಾದ ಕರ್ತವ್ಯಗಳು
• ರಸ್ತೆಗಳಲ್ಲಿ ಸಾರ್ವಜನಿಕ ಕಸದಬುಟ್ಟಿಗಳನ್ನು ಒದಗಿಸುವುದು
• ಸಾರ್ವಜನಿಕ ಸ್ಥಳದಲ್ಲಿ ಅಪಾರವಾಗಿ ಶೇಖರವಾಗುವ ಕಸ, ಹೊಲಸಿನ ಸಂಗ್ರಹಣೆ
• ರಸ್ತೆಗಳನ್ನು ನಿತ್ಯವೂ ಗುಡಿಸಿ ಸಂಗ್ರಹವಾಗುವ ಕಸ, ಹೊಲಸನ್ನು ಸ್ವಚ್ಛಮಾಡಿಸುವುದು
• ಘನತ್ಯಾಜ್ಯ ನಿರ್ವಹಣೆಯ ಭಾಗವಾಗಿ ಸಂಗ್ರಹಣೆ, ಶೇಖರಣೆ, ವಿಂಗಡಣೆ, ಸಾಗಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ(ಡಿಸ್‌ಪೋಸಲ್) ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು
ಮುನಿಸಿಪಲ್ ಸಾಲಿಡ್ ವೇಸ್ಟ್÷್ಸ (ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್) ನಿಯಮಗಳು, ೨೦೦೦ ಅನ್ವಯ
• ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಸ್ಟೇಟ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್)ಯವರು ಅಂತರ್ಜಲ, ಪರಿಸರದ ವಾಯುವಿನ ಗುಣಮಟ್ಟ ಮತ್ತು ಗೊಬ್ಬರದ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಅನುಸರಿಸಬೇಕಾದ ಪ್ರಮಾಣಗಳ ನಿಗಾವಹಿಸಬೇಕು.
• ಅಪಘಾತಗಳನ್ನು ವರದಿ ಮಾಡುವುದು. ಮೆಟ್ರೋಪಾಲಿಟನ್ ನಗರಗಳಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಉಳಿದ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಅಥವಾ ಉಪ-ಆಯುಕ್ತರಿಗೆ ವರದಿ ಮಾಡಬೇಕು.
ಗುತ್ತಿಗೆದಾರರು ನಿರ್ವಹಿಸಬೇಕಾದ ಕರ್ತವ್ಯಗಳು
ಪ್ರಸ್ತುತ ಅಧ್ಯಯನವು ಗುತ್ತಿಗೆ ಸಫಾಯಿ ಕರ್ಮಚಾರಿಗಳನ್ನು ಕೇಂದ್ರವಾಗಿರಿಸಿಕೊಂಡಿದೆ. ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದ ಬಹುಪಾಲು ವಿಷಯಗಳು ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯಡಿ ಬರುತ್ತವೆ.
ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ನಿಯಮ ೨೫ (೨) (೫) (ಎ) ಮತ್ತು ಪರವಾನಗಿ ನೀಡಲು ಇರುವ ಪರವಾನಗಿ ನಿಯಮ ೫ ರ ಪ್ರಕಾರ
• ಒಂದೇ ತರಹದ ಕೆಲಸವಾಗಿದ್ದಲ್ಲಿ ಮುಖ್ಯ ಮಾಲೀಕರು ನೇರವಾಗಿ ನೇಮಕ ಮಾಡಿಕೊಳ್ಳುವ ನೌಕರರಿಗೆ ಲಭ್ಯವಿರುವ ವೇತನ, ರಜೆಗಳು, ಕೆಲಸದ ಅವಧಿ ಮತ್ತು ಇತರೆ ಸೇವಾ ನಿಯಮಗಳನ್ನೇ ಗುತ್ತಿಗೆ ಕಾರ್ಮಿಕರಿಗೂ ನೀಡತಕ್ಕದ್ದು.
ಈ ಕೆಳಗಿನ ಸೌಕರ್ಯಗಳನ್ನು ಕಲ್ಪಿಸತಕ್ಕದ್ದು
• ಕ್ಯಾಂಟೀನ್ ಮತ್ತು ಭೋಜನಾಲಯ
• ವಿಶ್ರಾಂತಿ ಕೊಠಡಿ
• ಕುಡಿಯುವ ನೀರಿನ ಸೌಲಭ್ಯ
• ಶೌಚಾಲಯ ಮತ್ತು ಮೂತ್ರಾಲಯ
• ವಾಶಿಂಗ್ ಸೌಲಭ್ಯಗಳು
• ಪ್ರಥಮ ಚಿಕಿತ್ಸೆ
• ಶಿಶುವಿಹಾರಗಳು
ಪಾಲಿಕೆ ಮತ್ತು ಗುತ್ತಿಗೆದಾರರು ಪಾಲಿಸಬೇಕಾದ ಕಾನೂನಾತ್ಮಕ ಜವಾಬ್ದಾರಿಗಳು
ಪಾಲಿಕೆಯ ಜವಾಬ್ದಾರಿ-
• ವೇತನ ವಿತರಣೆಯ ಸಂದರ್ಭದಲ್ಲಿ ಸೂಕ್ತ ವೇತನ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಬೇಕು
• ಗುತ್ತಿಗೆದಾರರು ವೇತನ ಪಾವತಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಪಾವತಿಸಿ ಆ ಮೊತ್ತವನ್ನು ಗುತ್ತಿಗೆದಾರರಿಂದ ಹಿಂಪಡೆದುಕೊಳ್ಳಬೇಕು
• ಮೇಲೆ ತಿಳಿಸಿರುವುದನ್ನು ಗುತ್ತಿಗೆದಾರರು ಒದಗಿಸದಿದ್ದ ಪಕ್ಷದಲ್ಲಿ ಪಾಲಿಕೆಯು ಒದಗಿಸತಕ್ಕದ್ದು
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆಕ್ಟ್ ೧೯೫೨ ಮತ್ತು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸ್ಕೀಮ್ ೧೯೫೨
ಪ್ರತಿಯೊಬ್ಬ ಗುತ್ತಿಗೆದಾರರು-
• ಪ್ರತಿಯೊಬ್ಬ ಕಾರ್ಮಿಕರಿಗೂ ಪಾಸ್‌ಬುಕ್ ನೀಡಬೇಕು ಮತ್ತು ಅದನ್ನು ನಿರ್ವಹಿಸಬೇಕು
• ಪ್ರತಿ ಸದಸ್ಯರ ದೇಣಿಗೆ ಕಾರ್ಡ್ ಅನ್ನು ತನ್ನ ಸುಪರ್ದಿನಲ್ಲಿಟ್ಟುಕೊಳ್ಳಬೇಕು
• ತಾನು ನೇಮಕ ಮಾಡಿಕೊಂಡಿರುವ ನೌಕರರಿಂದ ಪಡೆದುಕೊಂಡಿರುವ ದೇಣಿಗೆಯ ವಿವರಗಳಿರುವ ಪಟ್ಟಿಯನ್ನು ಪ್ರತಿ ತಿಂಗಳು ಪಾಲಿಕೆಗೆ ಸಲ್ಲಿಸತಕ್ಕದ್ದು
ಎಂಪ್ಲಾಯೀಸ್ ಸ್ಟೇಟ್ ಇನ್‌ಷುರೆನ್ಸ್ ಆಕ್ಟ್ (ಜನರಲ್) ರೆಗ್ಯುಲೇಷನ್ಸ್, ೧೯೪೮ ಅಡಿ
ಗುತ್ತಿಗೆದಾರರ ಕರ್ತವ್ಯಗಳು-
• ಮೂರು ತಿಂಗಳೊಳಗೆ ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿಯನ್ನು ವಿತರಿಸತಕ್ಕದ್ದು
• ನೌಕರರ ಕುರಿತು ಈ ಕೆಳಗಿನ ವಿವರಗಳು ಇರುವ
• ರಿಜಿಸ್ಟರ್ ಅನ್ನು ಇಡಬೇಕು-
೧. ವಿಮೆ ಮಾಡಿರುವ ವ್ಯಕ್ತಿಯ ಹೆಸರು
೨. ವಿಮೆ ನಂಬರ್
೩. ಸಂಪರ್ಕ ಕಲ್ಪಿಸಿರುವ ಆಸ್ಪತ್ರೆಯ ಹೆಸರು
೪. ವೃತ್ತಿ
೫. ನೌಕರರ ದೇಣಿಗೆಯ ಪಾಲು
ಪಾಲಿಕೆಯ ಕರ್ತವ್ಯಗಳು-
• ಎಲ್ಲ ನೌಕರರಿಗೂ ಗುರುತಿನ ಚೀಟಿಯನ್ನು ವಿತರಿಸಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳತಕ್ಕದ್ದು
• ರಿಜಿಸ್ಟರ್‌ಗಳ ತಪಾಸಣೆ/ಪರಿಶೀಲನೆ
ಸುರಕ್ಷಾ ನಿಯಮಗಳು:
• ಘನತ್ಯಾಜ್ಯ ವಿಲೇವಾರಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯಕ್ಕೆ ಅಪಾಯಗಳಿವೆ ಮತ್ತು ಅವರು ಉಸಿರಾಟ ಸಂಬಂಧಿ ಸೋಂಕುಗಳು ಹಾಗೂ ಕರುಳಿನ ಸೋಂಕುಗಳಿಗೆ ಪದೇ ಪದೇ ಒಳಗಾಗುತ್ತಾರೆ. ಕರುಳಿನ ತೊಂದರೆಗಳು, ಭೇದಿ, ಸೋಂಕು, ಚರ್ಮದ ಕಾಯಿಲೆಗಳು, ಜಾಂಡೀಸ್, ಟ್ರಾಕೋಮದಂತಹ ಕಾಯಿಲೆಗಳಿಗೆ ಮತ್ತು ಅಲರ್ಜಿಗೆ ಒಳಗಾಗುವ ಅಪಾಯವಿರುವುದರ ಜೊತೆಗೆ ಕೆಲಸ ಮಾಡುವಾಗ ಸೂಜಿ, ತಗಡು, ಮರದ ತುಂಡುಗಳಂತಹ ಚೂಪಾದ ವಸ್ತುಗಳಿಂದ ಹಾನಿಗೊಳಗಾಗುವ ಅಪಾಯವನ್ನೂ ಎದುರಿಸುತ್ತಾರೆ.
• ಸುರಕ್ಷಾ ಎಚ್ಚರಿಕೆಗಳ (ಒಪ್ಪಂದದ ಶೆಡ್ಯೂಲ್ ೫) ಪ್ರಕಾರ ಮಾಲೀಕರು (ಗುತ್ತಿಗೆದಾರರು ಅಥವಾ ಪಾಲಿಕೆ)
೧. ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಸಮವಸ್ತ್ರ, ಕೈಗವುಸು, ಏಪ್ರನ್, ಸುರಕ್ಷಿತ ಪಾದರಕ್ಷೆ, ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಮತ್ತು ಬ್ಯಾಡ್ಜ್ಗಳಂತಹ ಸುರಕ್ಷಾ ಸಲಕರಣೆಗಳನ್ನು ನೀಡಬೇಕು
೨. ಪೌರಕಾರ್ಮಿಕರಿಗೆ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು (souಡಿಛಿe: ಒಚಿiಣಡಿeಥಿi ಏಡಿishಟಿಚಿಟಿ ಚಿಟಿಜ ಅಟiಜಿಣoಟಿ ಆ’ ಖmzಚಿಡಿio: soಟiಜ ತಿಚಿsಣe mಚಿಟಿಚಿgemeಟಿಣ ಚಿಟಿಜ ಠಿoತಿಡಿಚಿಞಚಿಡಿmiಞಚಿs:೨೦೦೮)
ಘನತೆಗಾಗಿ, ಉತ್ತಮ ಕೆಲಸದ ಪರಿಸ್ಥಿತಿಗಾಗಿ, ಬದುಕುವ ವೇತನಕ್ಕಾಗಿ, ಸುರಕ್ಷಾ ಸಲಕರಣೆಗಳಿಗಾಗಿ ಹೋರಾಟ ಮುಂದುವರೆಯುತ್ತಲೇ ಇದೆ. ಜಾತಿ ಆಧಾರಿತ ಶ್ರೇಣೀಕರಣ ಹೊಂದಿರುವ ನಮ್ಮ ದೇಶದಲ್ಲಿ ಜಾತಿಗೂ ಮತ್ತು ಸ್ವಚ್ಛತೆಯ ಕೆಲಸಕ್ಕೂ ಇರುವ ನಿಕಟ ಸಂಬಂಧವನ್ನು ಮುರಿಯದೇ ಪರಿಹಾರ ಕಾಣಲು ಸಾಧ್ಯವಿಲ್ಲ. ಅಂತಿಮವಾಗಿ ಸಫಾಯಿ ಕರ್ಮಚಾರಿಗಳ ಹೋರಾಟ ಜಾತಿ ವಿನಾಶ ಹೋರಾಟವೇ ಆಗಿದೆ.
ಬಡಾವಣೆಯ ನಿವಾಸಿಗಳಿಗೆ ಅರಿವು ಮೂಡಿಸುವ ಸಂವಾದ
ನಿತ್ಯವೂ ತಾವು ಸ್ವಚ್ಛ ಮಾಡುವ ಬಡಾವಣೆಗಳ ನಿವಾಸಿಗಳಿಗೆ ತಮ್ಮ ಕೆಲಸದ ಪರಿಸ್ಥಿತಿಯನ್ನು ಮನವರಿಕೆ ಮಾಡುವ ಸಲುವಾಗಿ ಕೆಲವೆಡೆ ನಿವಾಸಿಗಳೊಂದಿಗೆ ಸಭೆಗಳನ್ನು ನಡೆಸುವ ಪ್ರಯತ್ನವನ್ನು ಮಾಡಲಾಗಿತ್ತು. ಅಂತಹ ಒಂದು ಸಭೆಯ ವರದಿಗೆ ಸ್ವಲ್ಪ ನಾಟಕೀಯ ಸ್ವರೂಪ ಕೊಟ್ಟು ಇಲ್ಲಿ ನೀಡಲಾಗಿದೆ.
ಮತ್ತಿಕೆರೆ ವಾರ್ಡಿನಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೆಲ್ಲ ಕೆಲಸ ಮಾಡಿ ಮುಗಿಸಿ ಪಾರ್ಕಿನಲ್ಲಿ ಸೇರಿದ್ದರು. ಎಲ್ಲರಲ್ಲೂ ಏನೋ ಸಡಗರ, ಆತಂಕ. ಅವರೆಲ್ಲರೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಸದಸ್ಯರಾಗಿದ್ದರು. ಸಂಘಕ್ಕೆ ಸೇರಿದಾಗಿನಿಂದಲೂ ಹೋರಾಟ ನಡೆಸಿದ್ದಕ್ಕೆ ಕನಿಷ್ಠ ವೇತನ ಪಡೆದುಕೊಂಡಿದ್ದರು. ಇನ್ನು ಹತ್ತು ಹಲವಾರು ಹಕ್ಕುಗಳಿಗಾಗಿ ಹೋರಾಡಿಕೊಂಡೇ ಬಂದಿದ್ದರು. ಸಂಘವೆಂದರೆ ಹೋರಾಟ ಎನ್ನುವಂತಾಗಿದ್ದರೂ ಸಂಘಕ್ಕೆ ಸೇರಿದ ಮೇಲೆ ನಾವೂ ಎಲ್ಲರಂತೆ ಮನುಷ್ಯರು, ನಮ್ಮನ್ನು ಮನುಷ್ಯರಂತೆ ಘನತೆಯಿಂದ ನಡೆಸಿಕೊಳ್ಳಬೇಕು, ಗೌರವದಿಂದ ನಡೆಸಿಕೊಳ್ಳಬೇಕು ಎಂದವರಿಗೆ ಬಲವಾಗಿ ಅನ್ನಿಸಿತ್ತು. ಹಾಗಾಗಿ ಸಂಘವೆಂದರೆ ಅವರಿಗೆ ಹೆಮ್ಮೆ, ಸಂಘದ ಕೆಲಸವೆಂದರೆ ಕರ್ತವ್ಯವೆಂದು ಭಾವಿಸಿದ್ದರು. ಅವರ ಸಂಘವನ್ನು ಬೆಂಬಲಿಸಲು ಮಾಧ್ಯಮದವರು, ಬೇರೆ ಹೋರಾಟಗಳಲ್ಲಿ ತೊಡಗಿಕೊಂಡಿರುವವರು, ಕಲಾವಿದರು, ಹಾಡುಗಾರರು, ಸಾಹಿತಿಗಳು ಇತರರು ಇದ್ದ ಬೆಂಬಲ ಗುಂಪೊಂದು ಇತ್ತು.
ಕಳೆದ ಸಲದ ಸಂಘದ ಸಭೆಯಲ್ಲಿ ನಾಗರಿಕರಿಗೆ ನಮ್ಮ ವಿಷಯ ಕುರಿತು ಮನವರಿಕೆ ಮಾಡಿಕೊಡಲು ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಗಿತ್ತು. ಭಾನುವಾರದಂದು ಕಾರ್ಮಿಕರಿಗೆ ಅರ್ಧ ದಿವಸ ಕೆಲಸ. ಅಲ್ಲದೆ ಬಡಾವಣೆಯ ಜನರು ರಜೆಯೆಂದು ಮನೆಯಲ್ಲಿ ಇರುವುದರಿಂದ ಹತ್ತಿರದ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಸಂಘದ ಪದಾಧಿಕಾರಿಯಾಗಿದ್ದ ವೆಂಕಟಮ್ಮ ಮತ್ತಿಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆಕೆ ಒಳ್ಳೆ ಹೆಸರು ಗಳಿಸಿದ್ದಳು. ಅಲ್ಲಿನ ಪಾರ್ಕಿನಲ್ಲಿ ಕಾರ್ಯಕ್ರಮ ಮಾಡುವ ಉಸ್ತುವಾರಿಯನ್ನು ವೆಂಕಟಮ್ಮ ತೆಗೆದುಕೊಂಡಿದ್ದಳು. ನಾಗರಿಕರೊಂದಿಗಿನ ಸಂವಾದ ಸಭೆಯ ಉದ್ದೇಶ ಕುರಿತು ಒಂದು ಕರಪತ್ರ ಪ್ರಿಂಟ್ ಹಾಕಿಸಿ ಅದನ್ನು ಕಾರ್ಮಿಕರು ಬಡಾವಣೆಯ ನಾಗರಿಕರಿಗೆ ಹಂಚಿದ್ದರು. ಸಂಘದ ಮುಖಂಡರುಗಳು ಮನೆಮನೆಗೆ ಹೋಗಿ ಹೇಳಿದ್ದರು. ಅಲ್ಲದೆ ಅದೇ ಬಡಾವಣೆಯಲ್ಲಿ ವಾಸವಾಗಿದ್ದ, ಕಾರ್ಮಿಕರ ಹೋರಾಟವನ್ನು ಬೆಂಬಲಿಸುತ್ತಿದ್ದ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಗಾಂಧಿವಾದಿಗಳು ಆಗಿದ್ದ ಸ್ವಾಮಿಯವರು ಪ್ರಚಾರದ ಭಾಗವಾಗಿ ನಡೆಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರಿಂದ ನಾಗರಿಕರು ಸಹ ಕುತೂಹಲಗೊಂಡಿದ್ದರು.
ಅಂದು ೧೧.೩೦ರ ಹೊತ್ತಿಗೆ ಸಭೆ ಆರಂಭವಾಗಲಿತ್ತು. ಎಲ್ಲರೂ ೧೧ಕ್ಕೆ ಸೇರಿದ್ದರು. ಜನ ಬರುವರೊ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ ಬಡಾವಣೆಯ ಜನರು ಒಬ್ಬೊಬ್ಬೊರೆ ಪಾರ್ಕಿಗೆ ಬರತೊಡಗಿದರು. ಮುಂಚಿತವಾಗಿಯೇ ಬಂದಿದ್ದ ಸ್ವಾಮಿಯವರೇ ಎಲ್ಲರೂ ಬಂದು ಕುಳಿತುಕೊಂಡ ಮೇಲೆ ಮಾತು ಆರಂಭಿಸಿದರು. ‘ಸ್ವಚ್ಛತೆಗೆ ಆದ್ಯತೆ ನೀಡಿದಾಗಲೇ ಎಲ್ಲರೂ ಆರೋಗ್ಯವಾಗಿರಲು ಸಾಧ್ಯ. ಗಾಂಧೀಜಿಯವರು ಸ್ವಚ್ಛತೆಗಷ್ಟೇ ಅಲ್ಲದೆ ಸ್ವಚ್ಛತೆಯ ಕೆಲಸ ಮಾಡುವವರಿಗೆ ಆದ್ಯತೆ ನೀಡುತ್ತಿದ್ದರು. ಇಂದು ಈ ಸಭೆಯನ್ನು ಕಾರ್ಮಿಕ ಸಂಘದವರು ಕರೆದಿರುವುದು ವಿಶೇಷ. ನಾಗರಿಕರು ಮತ್ತು ಕಾರ್ಮಿಕರು ಪರಸ್ಪರ ಸಂವಾದ ಮಾಡಿಕೊಳ್ಳುವುದು ಎಲ್ಲರ ದೃಷ್ಟಿಯಿಂದ ಉತ್ತಮವಾದ, ಆರೋಗ್ಯಪೂರ್ಣವಾದ ಪರಿಸರವನ್ನು ನಿರ್ಮಿಸಲು ಸಾಧ್ಯ. ನೀವೆಲ್ಲರೂ ಬಂದಿರುವುದು ನಿಮ್ಮ ಆಸಕ್ತಿಯನ್ನು ತೋರಿಸುತ್ತದೆ. ಸಭೆ ಮುಂದುವರೆಯಲಿ; ಉತ್ತಮವಾದ ಫಲ ದೊರೆಯಲಿ’ ಎಂದು ಹೇಳಿದರು.
ಸಂಘದ ಕಾರ್ಯದರ್ಶಿಯಾಗಿದ್ದ ಜಯಮ್ಮ ನಾಗರಿಕರನ್ನು ಉದ್ದೇಶಿಸಿ ಸಭೆಯ ಉದ್ದೇಶವನ್ನು ಹೇಳಿದರು. ‘ನಾವ್ ಸಂಗ್ದವ್ರು ಈ ಸಭೆ ರ‍್ದಿದಿವಿ. ನಾವು ಕಾರ್ಪೇಸನಲ್ಲಿ ಗುಡ್ಸೊ ಕೆಲ್ಸ ಮಾಡ್ತಿವಿ. ನಿಮ್ ರೋಡು, ಮೋರಿ, ಏರಿಯಾ ಕ್ಲೀನ್ ಮಾಡ್ತಿವಿ. ನಮ್ನ ಪೋರಕರ‍್ಮಿಕ್ರು ಅಂತ ಕರಿತರೆ. ಹಿಂದೆ ಬಸ್ಲಿಂಗಪ್ಪ ಅಂತ ನಮ್ಮೋರು ಮಿನಿಟ್ರಾಗಿದ್ದಾಗ ತೋಟಿ, ಜಾಡ್ಮಾಲಿ ಅಂತ ಕರಿಬರ‍್ದು ಅಂತ ಈ ಎಸ್ರಿಕ್ಕಿರು. ನಾವ್ ಒಬ್ರಿಗೊಬ್ರು ರ‍್ಚಯ್‌ವೇ ಮಾಡ್ಕಂಡಿಲ್ಲ. ರ‍್ಚಯ ಮಾಡ್ಕಳಕೆ ಇಲ್ಲಿ ಸರ‍್ಕಂಡಿದಿವಿ. ಮದ್ಲಿಗೆ ಕಸ್ದ್ ಬಗ್ಗೆ ಏನ್ ತೊಂದರೆ ಅದೆ ಏಳಿ. ನಾವ್ ಮಾಡ ಕೆಲ್ಸದ್ ಬಗ್ಗೆ ನಿಮ್ಗೆ ಏಳ್ತಿವಿ’ ಎಂದು ಕೇಳಿಕೊಂಡಳು.
ಅಷ್ಟರಲ್ಲಿ ಶಾರದಮ್ಮ ಮತ್ತು ಪೆಂಚಾಲಮ್ಮ ಎಲ್ಲರಿಗೂ ಟೀ ನೀಡಿದರು. ನಾಗರಿಕರು ಸ್ವಲ್ಪ ಗಲಿಬಿಲಿಗೊಂಡಿದ್ದರು. ಬೀದಿ ಗುಡಿಸಿ, ಮನೆ ಮನೆಯಿಂದ ಕಸತೆಗೆದುಕೊಂಡು ಹೋಗುತ್ತಿದ್ದ, ಆಗೀಗ ಏನಾದರೂ ಉಳಿದಿದ್ದ ಊಟ-ತಿಂಡಿಯನ್ನು ಒಯ್ಯುತ್ತಿದ್ದ, ಹಳೆ ಬಟ್ಟೆ ಬರೆಯನ್ನು ಒಮ್ಮೊಮ್ಮೆ ತೆಗೆದುಕೊಂಡು ಹೋಗುತ್ತಿದ್ದ, ಮೋರಿ ಕಟ್ಟಿಕೊಂಡಾಗ ಸ್ವಚ್ಛಮಾಡಿಕೊಡುತ್ತಿದ್ದ ಕಾರ್ಮಿಕರು ಇಂದು ಸಭೆ ಕರೆದಿದ್ದಾರೆ. ಅಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲೋ ತಮ್ಮ ಗೋಳುಗಳನ್ನು ಹೇಳಿಕೊಂಡು ಏನೋ ಸಹಾಯ ಮಾಡಿ ಎಂದು ಕೇಳಬಹುದೇನೋ ಎಂದುಕೊಂಡರೆ ನಿಮಗೆ ಅನುಮಾನಗಳಿದ್ದರೆ ಬಗೆಹರಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವುದಕ್ಕೆ ನಾಗರಿಕರಿಗೆ ಕೊಂಚ ಸಮಯ ಹಿಡಿಯಿತು.
‘ನೀವ್ ಏನ್‌ಬೇಕಾರೂ ಕೇಳ್ಬೋದು, ನಮ್ ತಪ್ಗುಳಿದ್ರೂ ಏಳ್ಬೋದು, ನಿಮ್ಮನ್ನ ಬಂದುಗಳಂತ ಬಾವ್ಸ್ತಿವಿ’ ಎಂದು ಜಯಮ್ಮ ಮತ್ತೊಮ್ಮೆ ಹೇಳಿದಾಗ ಒಬ್ಬರು ಎದ್ದುನಿಂತು ಮಾತನಾಡತೊಡಗಿದರು.
‘ನೀವು ಸರಿಯಾಗಿ ಕಸವನ್ನು ಗುಡಿಸುವುದಿಲ್ಲ.’
‘ಕಟ್ಟಿಕೊಂಡ ಮೋರಿಗಳನ್ನು ಸರಿಯಾಗಿ ತೆರವು ಮಾಡುವುದಿಲ್ಲ.’
‘ಇತ್ತೀಚೆಗಂತು ಆಫೀಸಿನಲ್ಲಿ ಕೆಲಸ ಮಾಡುವವರಂತೆ ಬರುತ್ತೀರಾ, ಒಂದು ಗಳಿಗೆ ತಡವಾದರೂ ಕಸ ತೆಗೆದುಕೊಳ್ಳದೆ ಹಾಗೇ ಹೋಗಿಬಿಡುತ್ತೀರಾ.’
‘ಮಹಡಿ ಮೇಲಿರುವವರು ಅಲ್ಲಿಂದಲೇ ಕಸ ಎಸೆದರೆ ತೆಗೆದುಕೊಳ್ಳುವುದಿಲ್ಲ. ಕೆಳಗೆ ತಂದುಕೊಡಿ ಎಂದು ಹೇಳುತ್ತೀರಾ.’
‘ನಾಯಿ ಸಾಕಿರುವವರು ವಾಕಿಂಗ್ ಕರೆದುಕೊಂಡು ಹೋದಾಗ ಕಕ್ಕಸ್ಸು ಮಾಡಿದರೆ ಅದನ್ನು ಎತ್ತುವುದಿಲ್ಲ. ಮೊನ್ನೆ ೧೦ನೇ ಕ್ರಾಸಿನಲ್ಲಿ ಮನೆಯವರ ಜೊತೆ ಜಗಳವಾಡಿ ಕಸವನ್ನು ತಂದು ಅವರ ಮನೆ ಮುಂದೆ ಸುರಿದಿದ್ದೀರಾ.’
‘ಇತ್ತೀಚೆಗೆ ನಿಮಗೂ ಉತ್ತಮವಾದ ಸಂಬಳ ಸಿಗುತ್ತಿದೆ. ಆದರೂ ಅಸಡ್ಡೆಯಿಂದ ಕೆಲಸಮಾಡುತ್ತೀರಾ’
ಎಲ್ಲರೂ ಹೇಳುತ್ತಿದ್ದುದನ್ನು ಹತ್ತನೆ ತರಗತಿಯಲ್ಲಿ ಪಾಸಾಗಿದ್ದ, ಸಂಘದ ಖಜಾಂಚಿ ಕಸ್ತೂರಿ ಬರೆದುಕೊಳ್ಳುತ್ತಿದ್ದಳು. ಸಂಘದ ಅಕೌಂಟ್ ಇದ್ದ ಬ್ಯಾಂಕಿಗೆ ಹೋಗಿ ಹಣ ಹಾಕುವುದು, ತೆಗೆದುಕೊಂಡು ಬರುವ ಕೆಲಸವನ್ನೂ ಅವಳು ಮಾಡುತ್ತಿದ್ದಳು.
ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಸಂಘದ ಅಧ್ಯಕ್ಷನಾಗಿದ್ದ ಆಂಜನೇಯಲು ಎದ್ದು ನಿಂತ. ಕಾರ್ಮಿಕರನ್ನು ಸಂಘಟಿಸುವುದರಲ್ಲಿ ಅವನು ಎತ್ತಿದ ಕೈ. ಸಂಘ ಕೆಲಸ ಮಾಡುತ್ತಿದ್ದ ವಾರ್ಡಿನಲ್ಲಿರುವ ಎಲ್ಲ ಕೆಲಸಗಾರರನ್ನು ಹೆಸರು ಸಮೇತ ಅವನು ಬಲ್ಲವನಾಗಿದ್ದ. ಏನೇ ಕೆಲಸವಿರಲಿ, ಯಾವ ಕಾರ್ಮಿಕರಿಗೆ ಅನ್ಯಾಯವಾಗಲಿ ಎದೆಕೊಟ್ಟು ನಿಲ್ಲುತ್ತಿದ್ದ. ಅವನನ್ನು ಎಲ್ಲರೂ ಅಣ್ಣಾ ಎಂದೇ ಕರೆಯುತ್ತಿದ್ದರು. ಓದು ಬರಹ ಬರುತ್ತಿರಲಿಲ್ಲವಾದರೂ ವಿಷಯವನ್ನು ಪಕ್ಕಾ ತಿಳಿದುಕೊಂಡಿದ್ದ. ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಗುಡಿಸುವುದರಿಂದ ಹಿಡಿದು, ಲೋಡ್ ಮಾಡಿ ನಗರದ ಹೊರವಲಯದವರೆಗೂ ಕಸದ ಲಾರಿಯೊಂದಿಗೆ ಸುರಿದು ಬರುವ ಎಲ್ಲ ಕೆಲಸಗಳನ್ನು ಅವನು ಬಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಂಡು ಸಮಾಧಾನ ಮಾಡಿ ಪರಿಹಾರ ಹುಡುಕುವವರೆಗೂ ಬಿಡುತ್ತಿರಲಿಲ್ಲ.
‘ನಮ್ಮ ಸಂಗ್ದ ಕಾರ್ಮಿಕ್ರೆಲ್ಲ ಇಲ್ಲಿದಿವಿ. ನಂಗೆ ಗೊತ್ತಿರದ್ನ ನಾನ್ ಏಳ್ತಿನಿ. ಬೇರೆ ಕರ‍್ಮಿಕ್ರು ಇಲ್ಲವ್ರೆ; ನಿಮ್ಮ ರ‍್ಯಾ ಗುಡ್ಸೋರು. ಅವ್ರು ಉತ್ರ ಏಳ್ತರೆ. ಅದ್ರಾಗೆ ನಾವ್ ಮಾಡ ಕೆಲ್ಸ, ನಮ್ಗಿರ ತೊಂದ್ರೆ, ಅನ್ಬೋಗ್ಸ ಕಷ್ಟ ಎಲ್ಲ ಗೊತ್ತಾಗುತ್ತೆ. ನಾವು ಒಬ್ರಿಗೊಬ್ರು ಅರ್ತಮಾಡ್ಕಂಡ್ರೆ ನಮ್ ನಮ್ ತೊಂದರೆಗಳ್ನ ನಿವರ‍್ಸ್ಕಬೋದು. ಒಬ್ರಿಗೊಬ್ರು ಬೆಂಬ್ಲ ಕೊಡದ್ರಿಂದ ಒಳ್ಳೆದಾಗುತ್ತೆ ರ‍್ತು ನಷ್ಟ ಆಗಲ್ಲ. ಒಬ್ರಿಲ್ಲಿ ಆಪೀಸ್ ಕೆಲ್ಸ ಮಾಡೊರಂಗೆ ಅಂತ ಏಳಿದ್ರು. ನಮ್ದೂನೂ ಆಪಿಸ್ ಕೆಲ್ಸ್ವೆ. ನಾವು ಬೃತ್ ಬೆಂಗ್ಳೂರು ಮಾನಗ್ರ ಪಾಲ್ಕೆ ಪೋರಕರ‍್ಮಿಕ್ರು. ಕಮಿಸನ್ರಿಂದ ಇಡ್ದು ಗುಡ್ಸೋರರ‍್ಗೂ ಅಲ್ಲಿ ಕೆಲ್ಸ ಮಾಡ್ತರೆ. ಇಡೀ ಸಿಟಿನ ಕಿಲಿನಾಗ್ ಇಟ್ಟು ಎಲ್ರ ಆರೋಗ್ಯ ನೋಡ್ಕಳದು ಪಾಲ್ಕೆ ಜಬಾಬ್ದಾರಿ.
ಕಸ ಮ್ಯಾಲಿಂದ ಎಸ್ದ್ರೆ ಕಸ ತುಂಬಿದ್ ಪಿಲಾಸ್ಟಿಕ್ ಚೀಲ ವಡ್ಕಂಡು ಕಸ ಚೆಲ್ತದೆ, ನಮ್ಮ್ ಮ್ಯಾಲು ಬೀಳುತ್ತೆ, ಅದ್ಕೆ ಕಸಾನ ಬಕೇಟಾಗೆ ಆಕಿ ಕೆಳ್ಗಿಡಿ.
ಕಸ್ದಾಗೆ ಪ್ಯಾಡು, ಮಕ್ಳ ಏಲು-ಉಚ್ಚೆ ಬಟ್ಟೆ ಸರ‍್ಸಿ ಆಕ್ತ್ತಾರೆ. ತಿಂದ್ ಮಿಕ್ಕಿದ್ದು ಅದ್ರಾಗೆ ಆಕ್ತಾರೆ. ಎಲ್ಲ ಸರ‍್ಸಿ ಪಿಲಾಸ್ಟಿಕ್‌ನಾಗೆ ಆಕಿರೆ ಅದ್ನ ಬ್ಯಾರೆ ಮಾಡಾಕೆ ಕೈ ಒಳಿಗಾಕಿ ತಗಿಬೇಕು, ಅದೆಷ್ಟ್ ಕಷ್ಟ, ಅಸಯ ಅಂತ ನೀವೇ ಹೇಳಿ.
ನಾಯ್ಗಳನ್ನು ವಾಕಿಂಗ್ ಇಡ್ಕೊಂಡ್ ವೋಗ್ತಿರ, ಅವು ಕಕ್ಕಸ್ ಮಾಡಿದ್ರೆ ನೀವೇ ತಗ್ದು ಪಿಲಾಸ್ಟಿಕ್‌ನಾಗೆ ಆಕ್ಬೆಕು ಅನ್ನೋದು ಎಷ್ಟೊ ಜನ್ಕೆ ಗೊತ್ತೇ ಇಲ್ಲ.
ಕರ‍್ಮಿಕ್ರು ಕೆಟ್ದಾಗಿ ನಡ್ಕತರೆ ಅಂದ್ರಿ. ನಮ್ನು ಯಾರು ಗೋರವ್‌ದಿಂದ ನಡ್ಸ್ಕಳಲ್ಲ. ಯರ‍್ನಾದ್ರು ಎಸ್ರಿಟ್ಟು ಕೂಗಿ, ಒಂದ್ ಗಳಾಸ್ ನೀರ್ ಕೊಟ್ಟಿಲ್ಲ ಇಲ್ಲಿಗಂಟ. ಅಸ್ಪೃಶ್ಯತೆ ಮಾಡದು ಅಪ್ರಾದ, ರ‍್ಯಾ ಜನ ನಮ್ನ ನೋಡಿ ಮೂಗ್ ಮುಚ್ಕಂಡ್ ಪಕ್ಕಕ್ಕೋಯ್ತರೆ. ನೀರ್ ಕೊಟ್ರೂ ಬಚ್ಲು ಚೊಂಬಾಗೆ ತಂದು ಕೈಗೆ ಸುರಿತಾರೆ. ಕಸ್ದಂಗೆ ನಮ್ನು ನೋಡ್ತರೆ. ಇದು ಬದ್ಲಾಗ್ಬೇಕು. ನಾವು ಒಬ್ರುನೊಬ್ರು ಗೊರವ್‌ದಿಂದ ಕಾಣ್ಬೇಕು. ಮನ್ನೆ ಇಂದ್ರಾನರ‍್ದಾಗೆ ಜಾತಿ ಇಡ್ದು ಅವ್ಮಾನ ಮಾಡವ್ರೆ. ಅದ್ಕೆ ಅವ್ರ ಮನೆ ಕಸ ಎತ್ತಲ್ಲ ಅಂತ ತಗೊಂಡೋಗಿ ಸರ‍್ದ್ವಿ. ಆಮೇಲೆ ಎಲ್ತ್ ಆಪಿಸರ್ ಬಂದು ಜಗ್ಳ ಬಗೆ ರ‍್ಸಿ, ನಾವು ಕಂಪ್ಲೆಂಟು ವಾಪ್ಸ್ ತಗಂಡ್ವಿ. ಜಾತಿ ಎಸ್ರಲ್ಲಿ ಬೇದಬಾವ ಮಾಡ್ಬರ‍್ದು ಅಂತ ಸಮ್ಮಿದಾನ್ದಾಗೆ ಏಳೈತೆ. ನೀವೆಲ್ಲ ಓದಿರೋರು, ತಿಳಿದಿರೋರು ನೀವೇ ನಮ್ಗೆ ಕಾನೂನು ತಿಳಿಸ್ಬೆಕಲ್ವಾ? ಮುಂದೆ ಇಂತದಾಗ್ದಂಗೆ ನೋಡ್ಕಂಡು ಕೆಲ್ಸ ಮಾಡಕೆ ನೀವು ಸಾಕಾರ ಕೊಡ್ಬೇಕು ಅಂತ ಕೇಳ್ಕತಿನಿ’ ಎಂದು ಆಂಜನೇಯಲು ಹೇಳಿದ.
ಸಂಘದ ಗೌರವಾಧ್ಯಕ್ಷರಾಗಿದ್ದ ಪದ್ಮ ಮಾತನಾಡಿ ‘ನಾವು ಈ ದೇಶದ ಪ್ರಜೆಗಳು ಅಂತ ನಮ್ಗೂ ನಮ್ ಸಂವಿಧಾನ ಹಕ್ಕು ಕೊಟ್ಟಿದೆ. ಕರ‍್ಮಿಕ್ರಾಗಿ ನಮ್ಗೂ ಕಾನೂನ್ ಅವೆ. ಬದ್ಕಕೆ ಬೇಕಾದ ಸಂಬ್ಳ ಕೊಡ್ಬೇಕು; ದಿನಾ ಮಾಡ್ಲೇಬಾಕಾಗಿರ ಕೆಲ್ಸನ ಗುತ್ಗೆಗೆ ಕೊಡಂಗಿಲ್ಲ. ಅಂದ್ರೂ ಪಾಲ್ಕೆ ನಮ್ ಕೆಲ್ಸ ಗುತ್ಗೆಗೆ ಕೊಟ್ಟದೆ. ರ‍್ಮೆಟ್ ಕೆಲ್ಸ್ದೊರು ಮಾಡೋ ಎಲ್ಲ ಕೆಲ್ಸಾನೂ ನಾವ್ ಮಾಡ್ತಿವಿ; ಅದ್ಕೆ ಅವ್ರಿಗೆ ಕೊಡೋ ಸಂಬ್ಳನೆ ಕೊಡ್ಬೆಕು. ಆದ್ರೆ ಕೊಡಲ್ಲ. ಗ್ಲೋಸು, ಗಂಬೂಟು, ಮಾಸ್ಕು ಕೊಡ್ಬೆಕು. ಬಾಲ್ವಾಡಿ, ಶೌಚಾಲಯ, ರಜೆಗಳು ಎಲ್ಲ ಕೊಡ್ಬೇಕು. ಇಎಸೈ, ಪಿಎಪ್ ಕೊಡ್ಬೇಕು. ಆದ್ರೆ ನಮ್ಗೆ ಯಾವ್ದೂ ಸಿಕ್ಕರ‍್ಲಿಲ್ಲ. ಈಗ ಹತ್ ವರ್ಷ ವೋರಾಟ ಮಾಡಿದ್ಕೆ ಕನಿಷ್ಟ ಸಂಬ್ಳ ಸಿಕ್ಕೈತೆ. ನಮ್ದು ಕಷ್ಟದ್ ಕೆಲ್ಸ; ಮೋರಿ ಕಸ ಕೈಲೇ ಬಳಿಬೇಕು; ಕಳೆ ಕೀಳ್ಬೇಕು, ರಸ್ತೆ ಕಸ ಗುಡಿಸ್ಬೇಕು, ಮನೆ ಮನೆ ಕಸ ತಗಬೇಕು; ರಟ್ಟೆ, ಸೊಂಟ, ಬೆನ್ನು ನೋವು ತಪ್ಪಿದ್ದಲ್ಲ. ಗಲೀಜು, ಧೂಳಲ್ಲಿ ಯಾವ ಸುರಕ್ಷಾ ಸಲಕರಣೆಯು ಇಲ್ದೆ ಕೆಲ್ಸ ಮಾಡ್ತಿವಿ; ಅದಕ್ಕೆ ಕಾಯ್ಲೆಗಳು ತಪ್ಪಿದ್ದಲ್ಲ.’
ವಕೀಲರು ಮತ್ತು ಬೆಂಬಲ ಗುಂಪಿನ ಸದಸ್ಯರಾಗಿದ್ದ ಮೈತ್ರಾ ಅವರು ಕಾರ್ಮಿಕರು ಮಾಡುವ ಅಪಾಯಕಾರಿಯಾದ, ಕಠಿಣ ದುಡಿಮೆ, ಸಂಬಳದಲ್ಲಿ ಇರುವ ತಾರತಮ್ಯ ಮತ್ತು ಕಾರ್ಮಿಕರಿಗಾಗಿ ಇರುವ ಕಾನೂನುಗಳನ್ನು ಹಾಗೂ ಪಾಲಿಕೆಗಳು ಮತ್ತು ಗುತ್ತಿಗೆದಾರರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ವಿವರಿಸಿದರು. ಪೌರಕಾರ್ಮಿಕರ ಹೋರಾಟವನ್ನು ಕುರಿತ ಕಿರುಪುಸ್ತಿಕೆಯನ್ನು ಎಲ್ಲರಿಗೂ ಹಂಚಲಾಯಿತು.
ಒಟ್ಟಾರೆ ಈ ಸಭೆಯು ಪರಿಣಾಮದಿಂದಾಗಿ ಬಡಾವಣೆಯ ಜನರು ಪೌರಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬದಲಾವಣೆಗಳಾಗತೊಡಗಿದವು. ಇಂತಹ ಸಭೆಗಳನ್ನು ಬೇರೆ ಕಡೆಗಳಲ್ಲೂ ಮಾಡಲು ಸಂಘವು ಪ್ರಯತ್ನಿಸಿತು.
ಮೃತ್ಯು ಕೂಪಗಳಾಗಿರುವ ಒಳಚರಂಡಿಗಳ ಸ್ವಚ್ಛ ಮಾಡುವ ಕಾರ್ಮಿಕರು
‘ಸ್ಲಂಜಾಯಿಂಟ್ ಆಕ್ಷನ್ ಕಮಿಟಿ’ಯು ಮಲಬಾಚುವ ವಿಷಯವನ್ನು ಹೋರಾಟದ ಆದ್ಯತೆಯಾಗಿ ಪರಿಗಣಿಸಿದ್ದ ಸಂದರ್ಭದಲ್ಲಿಯೇ ಸವಣೂರು ಘಟನೆ ನಡೆದು ವಿಷಯದ ತುರ್ತನ್ನು ಮನವರಿಕೆ ಮಾಡಿಸಿತು. ೨೦೧೦ರಲ್ಲಿ ತಮ್ಮ ಮನೆ ಎತ್ತಂಗಡಿಯಾಗಲಿರುವುದರಿಂದ ಹತಾಶರಾದ ದಲಿತ ಕುಟುಂಬಗಳು ಸರ್ಕಾರ ಮತ್ತು ಮಾಧ್ಯಮದವರ ಗಮನ ಸೆಳೆಯಲು ಮಲದ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟಿಸಿದರು. ಈ ಘಟನೆ ಪಿಯುಸಿಎಲ್-ಕ ಮಧ್ಯಂತರ ಸತ್ಯಶೋಧನ ವರದಿ ತಯಾರಿಸಲು ಕಾರಣವಾಯಿತಲ್ಲದೆ ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕುರಿತ ಕೆಲಸವನ್ನು ತುರ್ತಾಗಿ ಮುಂದುವರೆಸುವಂತೆ ಮಾಡಿತು.
ಪೌರಕಾರ್ಮಿಕ ಚಳುವಳಿಯಲ್ಲಿ ಮ್ಯಾನ್‌ಹೋಲ್ ಕಾರ್ಮಿಕರ ಸಾವುಗಳ ಕುರಿತು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿರÀಲಿಲ್ಲ. ಪಿಯುಸಿಎಲ್ ೨೦೦೯ರಲ್ಲಿ ಕರ್ನಾಟಕ ಹೈಕೋರ್ಟಿನಲ್ಲಿ ಮ್ಯಾನ್ ಹೋಲ್ ಕಾರ್ಮಿಕರ ಸಾವುಗಳು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದಾಗ ಈ ವಿಷಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಈ ಮೊಕದ್ದಮೆಯಲ್ಲಿ ಪರ್ಯಾಯ ಕಾನೂನು ವೇದಿಕೆ ಸಂಸ್ಥೆಯ ವಕೀಲರುಗಳಾದ ಕ್ಲಿಫ್ಟನ್ ರೊe಼Áರಿಯೊ, ಮೈತ್ರೇಯಿ ಕೃಷ್ಣನ್ ಹಾಗೂ ರಘುಪತಿಯವರು ಪ್ರಮುಖ ಪಾತ್ರವಹಿಸಿದರು. ಹಿರಿಯ ವಕೀಲರಾದ ರವಿವರ್ಮಕುಮಾರ್ ಅವರು ಕೇಸಿನ ಪರವಾಗಿ ವಾದಿಸಿದರು. ಫೀರ್ಯಾದುದಾರರಾಗಿದ್ದವರು ಪಿಯುಸಿಎಲ್-ಕ ನ ಉಪಾಧ್ಯಕ್ಷ್ಯರಾಗಿದ್ದ ಪ್ರೊ. ವೈ.ಜೆ. ರಾಜೇಂದ್ರ ಅವರು.
ಮೊಕದ್ದಮೆ ಹೂಡುವ ಮುನ್ನ ಪಿಯುಸಿಎಲ್-ಕ ಮತ್ತು ಎಎಲ್‌ಎಫ್ ಸಂಸ್ಥೆಗಳು, ಹನ್ನೊಂದು ಮ್ಯಾನ್‌ಹೋಲ್ ಸಾವುಗಳ ಸತ್ಯಶೋಧನಾ ವರದಿಗಳನ್ನು ತಯಾರಿಸಿತ್ತು. ನಾಲ್ಕು ವರದಿಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗಿತ್ತು. ಘಟನೆ ಸಂಭವಿಸಿದ ಸಂದರ್ಭದಲ್ಲಿ ನಾಗರಿಕ ಸಮಾಜದ ಗುಂಪುಗಳು ಉಪಸ್ಥಿತಿ ಇದ್ದು ಸಂತ್ರಸ್ತರ ಕುಂಟುಂಬಗಳಿಗೆ ಪರಿಹಾರ ಸಿಗುವಂತೆ ಮಾಡಿದ್ದವು. ವರದಿಗಳ ತಯಾರಿಸಲು ಒಂದು ವರ್ಷಕಾಲ ಹಿಡಿದಿತ್ತು. ಆ ಅವಧಿಯಲ್ಲಿ ಮ್ಯಾನ್‌ಹೋಲ್ ಸಾವುಗಳ ಕುರಿತ ದಾಖಲಾತಿಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು. ಈ ದಾಖಲಾತಿಯನ್ನು ಅಧಿಕಾರಶಾಹಿಯ ಅತ್ಯುನ್ನತ ಸ್ಥಾನದಲ್ಲಿರುವ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದೆ ಮಂಡಿಸಲಾಯಿತು. ಕೆಲಸ ಮಾಡುವಾಗ ಕಾರ್ಮಿಕರು ಸಾಯದಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು. ತಳಮಟ್ಟದಲ್ಲಿ ನಡೆಸಿದ ತನಿಖೆಗಳು ಸರ್ಕಾರ ನೀಡಲಾಗಿದೆ ಎಂದು ಹೇಳುವ ಸುರಕ್ಷಾ ಸಲಕರಣೆಗಳು ವಿಫಲಗೊಂಡಿರುವುದನ್ನು ಸಾಬೀತುಪಡಿಸಿದವು. ಸರ್ಕಾರದ ನೀತಿ ಮತ್ತು ಸರ್ಕಾರದ ಏಜೆನ್ಸಿಗಳು ತಮ್ಮದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೆ ಮ್ಯಾನ್‌ಹೋಲ್ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು ಅಲಕ್ಷ್ಯಮಾಡಿದ್ದರು. ಒಂದು ವರ್ಷಕಾಲ ನಡೆಸಿದ ಸತ್ಯಶೋಧನಾ ವರದಿ ಆಧರಿಸಿ ಸರ್ಕಾರವು ತನ್ನ ಸಂವಿಧಾನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ಒತ್ತಾಯಿಸಿ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿತ್ತು.
ಮೊಕದ್ದಮೆ ಹೂಡಿದ್ದು ಕೊಂಚ ಮಟ್ಟಿಗಿನ ಯಶಸ್ಸನ್ನು ತಂದಿತು. ಕೋರ್ಟ್ ಹಲವಾರು ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದ್ದು ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಹೈಕೋರ್ಟ್ ಪರಿಣತರ ಸಮಿತಿಯನ್ನು ನೇಮಿಸಿ ಮೊಕದ್ದಮೆಯು ಎತ್ತಿರುವ ಹಲವಾರು ವಿಷಯಗಳನ್ನು ಅಧ್ಯಯನ ಮಾಡಲು ಹೇಳಿತು. ಫಿರ್ಯಾದುದಾರರು ನಾಮನಿರ್ದೇಶನ ಮಾಡಿದ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿಯನ್ನು ರಚಿಸಲಾಯಿತು. ಮತ್ತು ಈ ಪದ್ಧತಿಯನ್ನು ನಿವಾರಿಸುವ ಸಲಹೆಗಳನ್ನು ಸೂಚಿಸಲು ಕೋರಿತು. ಎಸ್.ಕೆ.ಕಾಂತಾ (ಮಾಜಿ ಕಾರ್ಮಿಕ ಸಚಿವರು), ಪ್ರೊ. ಜೋಗನ್ ಶಂಕರ್ (ಸಮಾಜಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ) ಅಳಕಟ್ಟಿ(ಕಾರ್ಮಿಕ ಸಂಘಟನೆ ಮುಖಂಡರು) ಅಂಬಣ್ಣ ಅರೋಲ್‌ಕರ್ (ದಲಿತ ಕಾರ್ಯಕರ್ತ ಮತ್ತು ಹಾಡುಗಾರ), ದು.ಸರಸ್ವತಿ (ಬರಹಗಾರರು ಮತ್ತು ಸಾಮಜಿಕ ಕಾರ್ಯಕರ್ತೆ)ವರು ಸಮಿತಿಯಲ್ಲಿದ್ದರು.
ಸಮಿತಿಯು ಹೈಕೋರ್ಟಿಗೆ ವರದಿಯನ್ನು ಸಲ್ಲಿಸಿದ ನಂತರ ಹೈಕೊರ್ಟು ಆದೇಶ ನೀಡಿ ಆರು ತಿಂಗಳೊಳಗಾಗಿ ಬೆಂಗಳೂರು ಜಲಮಂಡಳಿಯು ಯಂತ್ರಗಳನ್ನು ಒದಗಿಸಬೇಕು ಮತ್ತು ಕಾರ್ಮಿಕರನ್ನು ಮ್ಯಾನ್‌ಹೋಲ್‌ನೊಳಗೆ ಇಳಿಸಬಾರದು ಎಂದು ಹೇಳಿತು. ಮುಂದುವರೆದು, ಈ ಮೊಕದ್ದಮೆ ನಡೆಯುತ್ತಿರುವ ಸಂದರ್ಭದಲ್ಲಿ ಫೀರ್ಯಾದುದಾರರು ಗಮನಕ್ಕೆ ತಂದ ಸಾವಿನ ಪ್ರಕರಣಗಳಿಗೆ ಪರಿಹಾರ ನೀಡಲು ಆದೇಶಿಸಿತು.
ಪಿಯುಸಿಎಲ್-ಕ ಹೂಡಿದ್ದ ಸಾ.ಹಿ.ಮೊ.ಯ ಪರಿಣಾಮವಾಗಿ, ಅದೃಶ್ಯವಾಗಿ ಉಳಿದಿದ್ದ ಮ್ಯಾನ್‌ಹೋಲ್ ಕೆಲಸಗಾರರ ವಿಷಯವು ಬೆಳಕಿಗೆ ಬರಲು ಕೋರ್ಟು ವೇದಿಕೆಯಾಯಿತು. ಮೊದಲು ಸುದ್ದಿ ಪತ್ರಿಕೆಯಲ್ಲಿ ಮೂರು ಸಾಲಿನ ವರದಿಯಾಗಿ ಸಮಾಪ್ತಿಯಾಗುತ್ತಿದ್ದ ವಿಷಯವು ಸರ್ಕಾರದ ನೇರ ಗಮನಕ್ಕೆ ಬಂದಿತು. ಸರಣಿ ಮಧ್ಯಂತರ ಆದೇಶಗಳ ಮೂಲಕ ಕೋರ್ಟು ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿತು. ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಆರಂಭಿಸಿತು. ಈ ಪ್ರಕ್ರಿಯೆ ಅದೆಷ್ಟು ನಿಧಾನವಾದದ್ದು ಎಂದರೆ ೨೦೦೯-೨೦೧೪ರವರೆಗೆ ವಿಷಯವನ್ನು ಕೋರ್ಟು ಅಂತಿಮ ವಾದಕ್ಕೆ ತರಲಿಲ್ಲ. ಸಫಾಯಿ ಕರ್ಮಚಾರಿ ಆಂದೋಲನ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಪಿಯುಸಿಲ್-ಕದ ದಾವೆಯನ್ನು ಹೈಕೋರ್ಟು ಡಿಸ್‌ಪೋಸ್ ಮಾಡಿತು. ಡಿಸ್‌ಪೋಸ್ ಮಾಡಲು ತೂರಿದ ಪ್ರಶ್ನೆ ಎಂದರೆ, ಇಂತಹ ಪ್ರಕರಣಗಳಲ್ಲಿ ಕೋರ್ಟಿನಿಂದ ನಿರೀಕ್ಷಿಸುವ ಪಾತ್ರವೇನು? ಎಂಬುದು. ಮ್ಯಾನ್‌ಹೋಲ್ ಕಾರ್ಮಿಕರ ಕುರಿತ ಪಿಯುಸಿಎಲ್-ಕ ಅವರ ಪ್ರಕರಣವು, ಸರಣಿ ಮಧ್ಯಂತರ ಆದೇಶಗಳ ಮೂಲಕ ಸರ್ಕಾರಕ್ಕೆ ತನ್ನ ಜವಾಬ್ದಾರಿ ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಯಿತು.
ಕೆಲವು ಸ್ಥಳಗಳಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿದ ಹೋರಾಟದಿಂದಾಗಿ ಸಫಾಯಿ ಕರ್ಮಚಾರಿಗಳು ತಾರತಮ್ಯದ ವಿರುದ್ಧ ಹೋರಾಡಲು ಸಾಧ್ಯವಾಗಿದೆ. ವೇತನವನ್ನು ಪಡೆಯಲು ಹಾಗೂ ಸಂಘಟಿತರಾಗುವ ಹಕ್ಕನ್ನು ಚಲಾಯಿಸಲು ಸಾಧ್ಯವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ; ಆತ್ಮಗೌರವವನ್ನು ಬೆಳಸಿಕೊಂಡಿದ್ದಾರೆ. ಸಂಘಟನೆ ಬಲವಾಗಿರುವ ಕಡೆ ಕಾರ್ಮಿಕರಿಗೆ ಪೂರ್ತಿ ವೇತನ ಸಿಗುತ್ತಿದೆ. ಕೆಲಸದಿಂದ ವಜಾಮಾಡಿದಾಗ ಮತ್ತೆ ಬಾಕಿ ವೇತನದೊಂದಿಗೆ ಕೆಲಸಕ್ಕೆ ಸೇರಿಸಲು ಸಾಧ್ಯವಾಗಿದೆ. ಮಾಲೀಕರು ಮತ್ತು ಮೇಸ್ತ್ರಿಗಳು ಅಸಭ್ಯವಾಗಿ ವರ್ತಿಸಿದಾಗ ಕಾರ್ಮಿಕರು ಪ್ರತಿಭಟಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಮ್ಮ ಹಕ್ಕುಗಳಿಗಾಗಿ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ: ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್) ಕರ್ನಾಟಕ
ಪೌರಕಾರ್ಮಿಕರು ಉತ್ತಮ ಕೆಲಸದ ವಾತಾವರಣಕ್ಕಾಗಿ ನಡೆಸುತ್ತಿದ್ದ ಹೋರಾಟವು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿರ‍್ಟೀಸ್-ಕರ್ನಾಟಕವು ಪೌರಕಾರ್ಮಿಕರ ವಿಷಯ ಕುರಿತು ಕೆಲಸ ಮಾಡಲಾರಂಭಿಸಿತು. ಪ್ರೊ. ಹಸನ್ ಮನ್ಸುರ್ ಮತ್ತು ಪ್ರೊ. ರಾಜೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಸ್ಲಂ ಜಾಯಿಂಟ್ ಆಕ್ಷನ್ ಕಮಿಟಿಯನ್ನು ಆರಂಭಿಸಲಾಯಿತು. ಈ ವೇದಿಕೆಯ ಭಾಗವಾಗಿ ಮಲಬಾಚುವ ಕಾರ್ಮಿಕರ ವಿಷಯವನ್ನು ಕೈಗೆತ್ತಿಕೊಳ್ಳಲು ಪಿಯುಸಿಎಲ್‌ನಲ್ಲಿ ತೀರ್ಮಾನಿಸಲಾಯಿತು. ಈ ಸಮಿತಿಯು ಪೌರಕಾರ್ಮಿಕರ ಮೇಲಾಗುತ್ತಿದ್ದ ಅನ್ಯಾಯಗಳನ್ನು ತಡೆಯಲು ವಿಫಲವಾದ ಬಿಬಿಎಂಪಿ ವಿರುದ್ಧ ಫೆಬ್ರವರಿ ೨೦೦೨ರಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜಿಸಿತು. ಪಿಯುಸಿಎಲ್, ಸ್ಲಂ ಫೆಡರೇಷನ್ ಹಾಗೂ ಪ್ರೊ.ಬಾಬು ಮ್ಯಾಥ್ಯೂಸ್, ಡಾ.ಜಿ.ರಾಮಕೃಷ್ಣರಂತಹ ಹಲವಾರು ಗಣ್ಯರು ರ‍್ಯಾಲಿಯನ್ನು ಬೆಂಬಲಿಸಿದರು. ಪೌರಕಾರ್ಮಿಕರ ನ್ಯಾಯಕ್ಕಾಗಿ ಹುಟ್ಟಿಕೊಂಡ ಈ ಹೋರಾಟದ ಭಾಗವಾಗಿ ಕೆ.ಬಿ.ಓಬಳೇಶ್, ಪದ್ಮಾ ಮತ್ತು ರಾಮಚಂದ್ರ ಅವರ ನೇತೃತ್ವದಲ್ಲಿ ‘ಸಫಾಯಿ ಕರ್ಮಚಾರಿ ಕಾವಲು ಸಮಿತಿ’ ಎಂಬ ಮತ್ತೊಂದು ಗುಂಪು ಹುಟ್ಟಿತು. ಅವರು ಪಿಯುಸಿಎಲ್-ಕ ಹಾಗೂ ಇತರ ಸಂಘಟನೆಗಳ ಬೆಂಬಲದೊಂದಿಗೆ ‘ಜಾಗೃತಿ ಜಾಥ’ವನ್ನು ಸಂಘಟಿಸಿದರು. ರಾಜ್ಯದಲ್ಲಿ ಪೌರಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕಾö್ಯವೆಂಜಿಂಗ್ ಕೆಲಸ ಮಾಡುತ್ತಿರುವವರ ಮಾನವಹಕ್ಕುಗಳ ಉಲ್ಲಂಘನೆ ಕುರಿತು ವಿಸ್ತಾರವಾದ ಅರಿವು ಮೂಡಿಸುವುದು ಜಾಥಾದ ಉದ್ದೇಶವಾಗಿತ್ತು. ಕಾವಲು ಸಮಿತಿಯು ಮುಂದಿಟ್ಟ ಎರಡು ಮುಖ್ಯ ಬೇಡಿಕೆಗಳೆಂದರೆ ಗುತ್ತಿಗೆ ಪದ್ಧತಿಯ ನಿಷೇಧ ಮತ್ತು ಪೌರಕಾರ್ಮಿಕರ ಖಾಯಮಾತಿ.
ಜಾಥಾ ಬೆಂಗಳೂರಿನಿಂದ ಆರಂಭವಾಗಿ ಇಪ್ಪತ್ತು ರಾಜ್ಯಗಳಲ್ಲಿ ಸಂಚರಿಸಿ ದಿನಾಂಕ:೩೧-೦೩-೨೦೧೬ರಂದು ಬೆಂಗಳೂರಿನಲ್ಲಿ ಸಮಾರೋಪಗೊಂಡಿತು. ರಾಜ್ಯದೆಲ್ಲೆಡೆಯಿಂದ ಜನರು ಭಾಗವಹಿಸಿದರು. ಕೆ.ಬಿ.ಓಬಳೇಶ್, ಪದ್ಮ, ರಾಮಚಂದ್ರ ಮತ್ತು ಇತರರನ್ನು ಒಳಗೊಂಡ ನಿಯೋಗವನ್ನು ಮಾತುಕತೆಗಾಗಿ ಮುಖ್ಯಮಂತ್ರಿಗಳು ಆಹ್ವಾನಿಸಿದರು. ಆ ಸಭೆಯಲ್ಲಿ ಮುಖ್ಯಮಂತ್ರಿಗಳು ಗುತ್ತಿಗೆ ವ್ಯವಸ್ಥೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿದರು.
ಪೌರಕಾರ್ಮಿಕರು ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಅಭಿವ್ಯಕ್ತಿಸುವುದಲ್ಲದೆ ತಮ್ಮದೇ ಹೋರಾಟವನ್ನು ಮುಂದೆತೆಗೆದುಕೊಂಡು ಹೋಗಲು ಸಹಕರಿಸುವುದೇ ಪಿಯುಸಿಎಲ್-ಕ ದ ತಂತ್ರವಾಗಿದೆ. ಪಿಯುಸಿಎಲ್ ಸಹಾಕಾರದೊಂದಿಗೆ ಕಾವಲು ಸಮಿತಿಯು ಸತ್ಯಶೋಧನಾ ವರದಿ ಇತ್ಯಾದಿ ಕೆಲಸವನ್ನು ಆರಂಭಿಸಿತಲ್ಲದೆ ಪೌರಕಾರ್ಮಿಕರ ಹೋರಾಟದ ಮುಂಚೂಣಿಯಲ್ಲಿದೆ.
ಸಫಾಯಿ ಕರ್ಮಚಾರಿಗಳ ಹೋರಾಟದಲ್ಲಿ ನಾಗರಿಕ ಸಂಘಟನೆಗಳ ಪಾತ್ರ:ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಹೋರಾಟವನ್ನು ಬೆಂಬಲಿಸುವ ಉದ್ದೇಶದೊಂದಿಗೆ ‘ಗುತ್ತಿಗೆ ಪೌರಕಾರ್ಮಿಕರ ಬೆಂಬಲ ಗುಂಪು’ ಆರಂಭವಾಯಿತು. ‘ಮಾನಸ ಸ್ವಾಯತ್ತ ಮಹಿಳಾ ಸಂಘಟನೆ’, ‘ಪೀಪಲ್ಸ್ ಯೂನಿಟಿ ಫಾರ್ ಸಿವಿಲ್ ಲಿರ‍್ಟೀಸ್’ (ಪಿಯುಸಿಎಲ್), ‘ಆಲ್ಟರ್‌ನೆಟಿವ್ ಲಾ ಫೋರಂ’ (ಎಎಲ್‌ಎಫ್), ‘ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ’ ಮತ್ತು ಲಿಂಗತ್ವ ಅಲ್ಪಸಖ್ಯಾಂತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಸಂಗಮ’ ಸಂಸ್ಥೆಗಳು ಒಗ್ಗೂಡಿ ಬೆಂಬಲ ಗುಂಪನ್ನು ಆರಂಭಿಸಿದವು. ಡಾ.ವಿಜಯಾ, ಹೆಚ್.ಎಸ್.ದೊರೆಸ್ವಾಮಿಯವರಂತಹ ಗಣ್ಯರು ಬೆಂಬಲ ನೀಡಿದರು. ಬೆಂಬಲ, ಲಾಬಿ ಮತ್ತು ಪ್ರಚಾರದ ಮೂಲಕ ಬೆಂಬಲ ಗುಂಪು ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನದ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿತು.
-ಪೌರಕಾರ್ಮಿಕರ ಹಕ್ಕುಗಳನ್ನು ಗುರುತಿಸಿ ಜಾರಿಗೊಳಿಸಲು ಸರ್ಕಾರದೊಂದಿಗೆ ಲಾಬಿ ಮಾಡುವುದು
-ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ ಕುರಿತು ಪ್ರಚಾರ ಮಾಡುವುದು
-ಪೌರಕಾರ್ಮಿಕರನ್ನು ಕಾರ್ಮಿಕ ಸಂಘಟನೆಯ ಸದಸ್ಯರನ್ನಾಗಿಸುವುದು ಮತ್ತು ಅವರ ನಾಯಕತ್ವ ಕಟ್ಟುವ ಮೂಲಕ ಅವರ ಸಂಘಟನೆಯನ್ನು ಬಲಪಡಿಸುವುದು
ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವ ಹೋರಾಟದಲ್ಲಿ ಬೆಂಬಲ ಗುಂಪು ಸಕ್ರಿಯ ಪಾತ್ರವಹಿಸಿತು. ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ಸಿಗಲು ಕೆಲಸಮಾಡಿತು. ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ನಿರಂತರ ಮನವಿಗಳನ್ನು ನೀಡುವುದರ ಜೊತೆಗೆ ಧರಣಿ ಸತ್ಯಾಗ್ರಹ, ಪ್ರತಿಭಟನೆಗಳನ್ನು ನಡೆಸಲು ಸಹಕಾರ ನೀಡಿತು. ಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗಿರುವ ಹಕ್ಕುಗಳು, ಸರ್ಕಾರದ ಪಾತ್ರವನ್ನು ಒಳಗೊಂಡÀ ‘ಬಡವರ ಬೆವರಿನಲ್ಲಿ ಸ್ವಚ್ಛವಾಗುವ ಬೆಂಗಳೂರು’ ಎಂಬ ಸತ್ಯಶೋಧನಾ ವರದಿಯನ್ನು ಪ್ರಕಟಿಸಿತು. ಪೌರಕಾರ್ಮಿಕರ ಪರಿಸ್ಥಿತಿಯನ್ನು ತಿಳಿಸಿಕೊಡುವ ಸಲುವಾಗಿ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಸಾರ್ವಜನಿಕ ನ್ಯಾಯಾಲಯವನ್ನು ಏರ್ಪಡಿಸಿತು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿತು. ಬೆಂಬಲ ಗುಂಪಿನಲ್ಲಿ ಸಕ್ರಿಯವಾಗಿದ್ದ ‘ಮಾನಸ ಸ್ವಾಯತ್ತ ಮಹಿಳಾ ಗುಂಪು’ ತಾನು ಪ್ರಕಟಿಸುತ್ತಿದ್ದ ‘ಮಾನಸ’ ತಿಂಗಳ ಪತ್ರಿಕೆಯ ಮೂಲಕ ಪೌರಕಾರ್ಮಿಕರ ಪರಿಸ್ಥಿತಿ ಮತ್ತು ಹೋರಾಟಗಳನ್ನು ನಿರಂತರವಾಗಿ ದಾಖಲಿಸಿತು. ಪೌರಕಾರ್ಮಿಕ ಮಹಿಳೆಯರನ್ನು ಸಂಘಟಿಸಲು, ಅವರ ನಾಯಕತ್ವ ಕಟ್ಟಲು ಮತ್ತು ಸ್ವಸಹಾಯ ಸಂಘ ಕಟ್ಟಲು ಕೆಲಸ ಮಾಡಿತು. ಸಂಘವು ಸ್ವಾಯತ್ತವಾಗಿ ಕೆಲಸ ಮಾಡಲು ಅಪಾರವಾಗಿ ಶ್ರಮಿಸಿತು. ಕಾರ್ಮಿಕ ಚಳುವಳಿ, ಮಾನವ ಹಕ್ಕುಗಳ ಚಳುವಳಿ, ಮಹಿಳಾ ಹಕ್ಕುಗಳ ಚಳುವಳಿ, ದಲಿತ ಚಳುವಳಿಗಳಲ್ಲದೆ ಹಲವಾರು ಕ್ಷೇತ್ರದ ಗಣ್ಯರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡಿತು.
