ಬಾಣಂತನದ ಆಚರಣೆಗಳು

ಗರ್ಭಿಣಿ ಮಗು ಹೆತ್ತು ಮೂರು/ಐದು/ಒಂಬತ್ತು/ಹದಿನಾರನೇ/ಹತ್ತೊಂಬತ್ತನೇ ದಿನ ಈ ಆಚರಣೆಯನ್ನು ಮಾಡುತ್ತಾರೆ. ತಾಯಿ ಮತ್ತು ಮಗುವಿಗೆ ನೀಲಗಿರಿ, ಬೇವು ಇತ್ಯಾದಿ ಒಂಬತ್ತು ತರಹದ ಸೊಪ್ಪನ್ನು ಹಾಕಿದ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಬೇವಿನ ಸೊಪ್ಪಿಗೆ ಅರಿಶಿಣ ಸೇರಿಸಿ ರುಬ್ಬಿ ಮೈಯಿಗೆ ಹಚ್ಚಿ ನಂತರ ಸ್ನಾನ ಮಾಡಿಸುತ್ತಾರೆ.ಇದನ್ನು ಬಳ್ಳಾರಿಯಲ್ಲಿ ‘ನರ‍್ಲಾ ಕಾರ್ಯ’ ಎನ್ನುತ್ತಾರೆ. ದಾಸಪ್ಪನನ್ನು ಕರೆಸಿ ಗಂಜಲ ಹಾಕಿಸಿ ಸೂತಕ ತೆಗೆಯುತ್ತಾರೆ. ಸೂತಕವನ್ನು ಕಳೆದುಕೊಳ್ಳಲು ಕೆಲವರು ಕೋಳಿ ಕೊಯ್ಯುತ್ತಾರೆ. ನಂತರ ಮಗುವನ್ನು ಮೊರದಲ್ಲಿ ಮಲಗಿಸಿ ಸುಟುಕಿ ಹಾಕುತ್ತಾರೆ. ಮಗುವಿಗೆ ದೆವ್ವ, ಭೂತಗಳು ಕಾಟ ನೀಡದಿರಲೆಂದು ಇದನ್ನು ಮಾಡುತ್ತಾರೆ. ಸೂತಕವನ್ನು ತೆಗೆದ ಮೇಲೆ ತಾಯಿ-ಮಗುವಿಗೆ ಆರತಿ ಮಾಡಿ ಬಂಧುಗಳಿಗೆ ಊಟ ಹಾಕಿಸುತ್ತಾರೆ.
ಕೆಲವು ಕಡೆ ಯುಗಾದಿಗೆ ಮೊದಲು ಮಗುವಿಗೆ ಮುನೇಶ್ವರ ದ್ಯಾವರ ಮಾಡುತ್ತಾರೆ.ಮಗುವಿಗೆ ಮೂರು ತಿಂಗಳು, ಐದು ತಿಂಗಳು, ಒಂಬತ್ತು ತಿಂಗಳು, ಮಗು ಹುಟ್ಟಿದ ಮೂರು ದಿನವಾದರೂ ಸಹ ಯುಗಾದಿಗೆ ಮೊದಲು ಮಗು ಹುಟ್ಟಿದೆ ಎಂದರೆ ದ್ಯಾವರ ಮಾಡಬೇಕು ಎನ್ನುವ ಪದ್ಧತಿ ಇದೆ.ಊರ ಹೊರಗಿನ ತೋಪಿನಲ್ಲಿ ಮಣ್ಣಿನಿಂದ ಮುನೇಶ್ವರನನ್ನು ಮಾಡಿ, ಏಳು ಜನ ಅಕ್ಕ ತಂಗಿಯರನ್ನು ನಿಲ್ಲಿಸಿ ಕೋಳಿ ಕೊಯ್ದು ಪೂಜೆ ಮಾಡಿ, ಮಗುವಿನ ಮುಂದಲೆ ಕೂದಲನ್ನು ಮಾವನಾದವರು ಕತ್ತರಿಸಿ ಮುನೇಶ್ವರನಿಗೆ ಇಡುತ್ತಾರೆ. ಹೆಣ್ಣು, ಗಂಡು ಎರಡೂ ಮಕ್ಕಳಿಗೂ ಈ ದ್ಯಾವರ ಮಾಡುತ್ತಾರೆ. ಇಲ್ಲಿ ಪೂಜೆಗೆ ನೆಕ್ಕಿಲಿ ಸೊಪ್ಪು, ಕಣಗಿಲೆ ಸೊಪ್ಪು ಬೇಕೇ ಬೇಕು. ಇದು ಹೊಸ ಸೃಷ್ಟಿಯನ್ನು ಮಾಡಿರುವುದಕ್ಕೆ ಸೃಷ್ಟಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿದೆ.

ಸಾಂಸ್ಕೃತಿಕ ಆಚರಣೆಗಳು – ಮದುವೆ

ಮಾದಿಗ ಜಾತಿಗಳಲ್ಲಿ ಜಾರಿಯಲ್ಲಿರುವ ಜೀವನಾವರ್ತನಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪರಿಸರ ಪ್ರಜ್ಞೆ, ಸಮಷ್ಟಿ ಪ್ರಜ್ಞೆ ಮತ್ತು ಜೀವಪರ ಪ್ರಜ್ಞೆಯನ್ನು ಕಾಣಬಹುದು.
ಋತುಮತಿ ಆಚರಣೆ:
ಹೆಣ್ಣುಮಕ್ಕಳು ಮೊದಲಸಲ ಮುಟ್ಟಾಗುವ ಸಂದರ್ಭದಲ್ಲಿ ಮಾಡುವ ಆ ಆಚರಣೆಯನ್ನು ಉತ್ಸಾಹ, ಸಂಭ್ರಮಗಳಿಂದ ಮಾಡಲಾಗುತ್ತದೆ. ಹುಡುಗಿ ಋತುಮತಿಯಾದ ಗಳಿಗೆ ಶುಭವೋ ಅಶುಭವೋ ಎಂದು ತಿಳಿದುಕೊಳ್ಳುತ್ತಾರೆ. ಮೂರು, ಐದು, ಒಂಭತ್ತು ಅಥವಾ ಹದಿನಾರು ದಿನಗಳವರೆಗೆ ಋತುಮತಿಯಾದ ಹುಡುಗಿಯನ್ನು ಮನೆಯ ಹೊರಗೆ ಗುಡಿಸಲು ಹಾಕಿ ಕೂರಿಸುತ್ತಾರೆ. ಚಿಕ್ಕಮಕ್ಕಳು ಅವರೊಂದಿಗೆ ಜೊತೆಯಲ್ಲಿ ಇರುತ್ತಾರೆ. ಋತುಮತಿಯಾದ ಹುಡುಗಿಯ ಸೋದರಮಾವ ಅತ್ತಿಸೊಪ್ಪು, ಸಕ್ಲಿಸೊಪ್ಪು, ಅಂಕಲೆಸೊಪ್ಪು, ಆಲದಸೊಪ್ಪು ಹೀಗೆ ಒಂಬತ್ತು ಥರದ ಸೊಪ್ಪುಗಳಿಂದ ಮನೆಯ ಹೊರಗೆ ಗುಡಿಸಲು ಹಾಕಿಕೊಡಬೇಕು. ಕೆಲವು ಕಡೆ ಹೊಂಗೆ ಕೊಂಬೆಗಳಿಂದ ಗುಡಿಸಲು ಹಾಕುವ ಪದ್ಧತಿ ಇದೆ. ಕೆಲವು ಕಡೆ ಹುಡುಗಿಯನ್ನು ಕೂರಿಸಿದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಬ್ಬರಿ ಬಟ್ಟಲುಗಳನ್ನು ಇಡುತ್ತಾರೆ. ಅದರೊಳಗೆ ನಾಟಿ ಮೊಟ್ಟೆ, ಎಣ್ಣೆ, ತುಪ್ಪ ಸೇರಿಸಿ ಹುಡುಗಿಯ ಬಾಯಿಗೆ ವರಸೆಯಲ್ಲಿ ಮಾವನಾದವನು ಹಾಕುತ್ತಾನೆ. ಬೆಲ್ಲವನ್ನೂ ಹಾಕುತ್ತಾನೆ. ಕೊಬ್ಬರಿ ಚಿಪ್ಪನ್ನು ಹುಡುಗಿಯ ತಲೆಗೆ ಒತ್ತಿ ಹೊಡೆಯುತ್ತಾನೆ. ಗುಡಿಸಲು ಹಾಕಿ ಎರಡು ದಿನ ಕಳೆದು ಮೂರನೆ ದಿನ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ಸೋದರಮಾವ ಪೂಜೆ ಮಾಡಿ ಕೋಳಿ ಕೊಯ್ದು ಹುಡುಗಿಯನ್ನು ಕೂರಿಸಿದ ಜಾಗದಲ್ಲಿ ಕೋಳಿ ತಲೆಯನ್ನು ಹೂಳಿ, ಗುಡಿಸಲನ್ನು ಕಿತ್ತಾಕುತ್ತಾನೆ. ಕೆಲವು ಕಡೆ ಮೂರನೆಯ ದಿನ ಗುಡಿಸಲು, ಹುಲ್ಲು, ಹುಡುಗಿ ಹಾಕಿಕೊಂಡ ಬಟ್ಟೆಯನ್ನೆಲ್ಲ ಸುಡುತ್ತಾರೆ.
ಹುಡುಗಿಯ ಅತ್ತೆ ನೀರು ಹಾಕಿ, ಅರಿಶಿಣ ಹಚ್ಚಿ ಮನೆ ಒಳಗೆ ಭತ್ತದ ಹುಲ್ಲನ್ನು ಹಾಸಿ ಅದರ ಮೆಲೆ ಬಿಳಿ ಬಟ್ಟೆ ಹಾಸಿ ಕೂರಿಸುವ ಪದ್ಧತಿಯೂ ಇದೆ.ಕುಸಕ್ಕಿ ಅನ್ನ, ತುಪ್ಪ, ತಂಬಿಟ್ಟು, ಚಿಗಳಿ ಉಂಡೆ ತಿನ್ನಿಸುತ್ತಾರೆ.ದಿನ ಬಿಟ್ಟು ದಿನ ಕೋಳಿಕೊಯ್ದು ಸಾರು ಮಾಡಿ ಹುಡುಗಿಗೆ ಊಟ ಮಾಡಿಸುತ್ತಾರೆ.ದಿನವೂ ಅತ್ತೆ, ಮಾವ, ಚಿಕ್ಕಮ್ಮ ಹೀಗೆ ನೆಂಟರಿಷ್ಟರು ಹುಡುಗಿಗೆ ಹಣ್ಣುಗಳು ಮತ್ತು ಸಿಹಿ ತಿನಿಸುಗಳನ್ನು ತಂದು ಕೊಡುತ್ತಾರೆ; ವಸಗೆ ಹಾಕುತ್ತಾರೆ; ಆರತಿ ಮಾಡಿ ಹಾಡು ಹೇಳುತ್ತಾರೆ.
ತಾಯಿಮನೆಯ ದೊಡ್ಡ ವಸಗೆ ಹಾಕಿ ಹುಡುಗಿಯ ಸೋದರತ್ತೆಯಿಂದ ಹುಡುಗಿಗೆ ಮಡಿಲು ತುಂಬಿಸಿ, ಆರತಿ ಮಾಡಿ ಸ್ನಾನ ಮಾಡಿಸಿ ಹುಡುಗಿಯನ್ನು ಒಳಗೆ ಕರೆದುಕೊಳ್ಳುತ್ತಾರೆ. ಹಬ್ಬದಂತೆ ಮಾಡಿ ಔತಣ ಮಾಡುತ್ತಾರೆ. ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿರುವವರೂ ಸಹ ಹದಿಮೂರು ದಿವಸ ಹೊರಗಡೆ ಇರಿಸಿ, ಸ್ನಾನ ಮಾಡಿಸಿ, ಸೋದರಮಾವನ ಕೈಲಿ ಶಾಸ್ತ್ರ ಮಾಡಿಸುತ್ತಾರೆ.ಗೂಡು ಹಾಕಿ ಕೂರಿಸುವುದು, ಮಡಿಲು ತುಂಬುವುದು, ಮಾವನ ಕೈಲಿ ಹಾರ ಹಾಕಿಸುವ ಆಚರಣೆಗಳನ್ನು ಮಾಡುತ್ತಾರೆ.
ಫಲವಂತಿಕೆ, ಮರುಸೃಷ್ಟಿಯ ಸಂಕೇತವಾಗಿ ಋತುಮತಿಯಾಗುವುದನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ಆಚರಣೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾಗಿರುವುದು ಮಾತೃಪ್ರಧಾನ ಕುಟುಂಬದ ಕುರುಹಾಗಿದೆ.

ಗಂಡಸು ಹಾಕುತ್ತಿರುವ ವಿವಿಧ ಸೊಪ್ಪಗಳ ಕೊಂಬೆಗಳ ಗುಡಿಲು. ಬಳಸುವ ಮರದ ಎಲೆ-ಕೊಂಬೆ-ಹೂಗಳು ಕಾಣುವಂತಿರಬೇಕು

ಮದುವೆ:
ಗಂಡು-ಹೆಣ್ಣು ಕೂಡಿ ಬದುಕುವುದನ್ನು ಅಧಿಕೃತಗೊಳಿಸುವ ಮದುವೆಯು ಬಹುಮುಖ್ಯ ಸಾಮಾಜಿಕ ಸಂಸ್ಥೆಯಾಗಿದೆ. ಜಾತಿ ಪ್ರಧಾನವಾದ ಭಾರತೀಯ ಸಮಾಜದಲ್ಲಿ ಜಾತಿಯೊಳಗಡೆ ಮದುವೆಯಾಗುವುದು ಜಾತಿವ್ಯವಸ್ಥೆಯನ್ನು ಉಳಿಸುವ ಬಹುಮುಖ್ಯ ನಿಯಮವಾಗಿದೆ. ಅದನ್ನು ಜಾತಿಶ್ರೇಣಿಯಲ್ಲಿರುವ ಎಲ್ಲ ಜಾತಿಗಳು ಅನುಸರಿಸುತ್ತವೆಯಾದರೂ ತಳಜಾತಿಗಳಲ್ಲಿ ವಿವಾಹದ ಅರ್ಥ ಮತ್ತು ಆಚರಣೆಗಳಲ್ಲಿನ ಭಿನ್ನತೆಯಲ್ಲಿ ಕಾಣಬಹುದಾಗಿದೆ.

ಈ ಭಿನ್ನತೆಯನ್ನು ಗುರುತಿಸುತ್ತಾ ಸ್ತ್ರೀವಾದಿ ವಿಮರ್ಶಕಿ ಆರ್.ಸುನಂದಮ್ಮ ಅವರು ಹೇಳುವ ಮಾತುಗಳಿಲ್ಲಿ ಉಲ್ಲೇಖಾರ್ಹ. “…ವೈದಿಕ ಹಾಗೂ ಅವೈದಿಕರಲ್ಲಿ ವಿವಾಹದಲ್ಲಿನ ಆಚರಣೆಗಳು ಭಿನ್ನವಾಗಿದ್ದವು. ಅವು ಸಂಕೇತಿಸುವ ಅರ್ಥಗಳು ಭಿನ್ನವಾಗಿದ್ದವು. ಅವೈದಿಕರಿಗೆ ವಿವಾಹವು ಜೀವಿಗಳನ್ನು ಮುಂದುವರೆಸಿಕೊಂಡು ಹೋಗುವ ಸಾಧನ ಹಾಗೂ ಪಿತೃತ್ವದ ಅಧಿಕೃತತೆ ಸ್ಥಾಪಿಸಲು ಮಾಡಿಕೊಂಡ ಸಂಸ್ಥೆ ಮಾತ್ರವಾಗಿದೆ. ಆದರೆ ವೈದಿಕರಲ್ಲಿ ಅದಕ್ಕೊಂದು ಧಾರ್ಮಿಕ ಉದ್ದೇಶವಿದೆ. ಒಬ್ಬ ತಂದೆ ಮಗಳನ್ನು ಕನ್ಯಾದಾನ ಮಾಡುವ ಮೂಲಕ ಕನ್ಯಾಸೆರೆ ಬಿಡಿಸಿ ಮೋಕ್ಷ ತಲುಪಿದರೆ, ವರ ತಾನು ವಿವಾಹವಾಗಿ ತನ್ನ ವಂಶವನ್ನು ಮುಂದುವರೆಸಿಕೊಳ್ಳುವುದರ ಜೊತೆಗೆ ಪಿತೃಗಳಿಗೆ ಮೋಕ್ಷವನ್ನು ಪ್ರಾಪ್ತವಾಗಿಸುವ ಧಾರ್ಮಿಕ ಶ್ರದ್ಧೆಯಾಗಿದೆ. ವೈದಿಕರಿಗೆ ಮೋಕ್ಷಹೊಂದುವುದು ಅತ್ಯಂತ ಕಟ್ಟಕಡೆಯ ಉದ್ದೇಶವಾಗಿದೆ. ಅವೈದಿಕರಿಗೆ ಮತ್ತೆಮತ್ತೆ ಉತ್ತಮ ಜನ್ಮ ಪಡೆಯುವ ಉದ್ದೇಶವಾಗಿದೆ”. (ಆರ್.ಸುನಂದಮ್ಮ:೬೮:೨೦೧೭)

ಅಕ್ಷತೆಗೆ ವೈದಿಕರು ಬಳಸುವ ಅಕ್ಕಿ ಮತ್ತು ಅವೈದಿಕರು ಬಳಸುವ ಭತ್ತವನ್ನು ಒಂದು ಉದಾಹರಣೆಯಾಗಿ ನೋಡಬಹುದು. ಅಕ್ಕಿಯನ್ನು ಬಿತ್ತಿ ಬೆಳೆಯಲಾಗದು, ಬಿತ್ತಿ ಬೆಳೆಯುವ ಭತ್ತ ಮರುಹುಟ್ಟಿನ ಸಂಕೇತವಾಗಿದೆ. ಬಹುಮುಖ್ಯವಾದ ಭಿನ್ನತೆಯನ್ನು ಸಾಕ್ಷಿಯಲ್ಲಿ ಕಾಣಬಹುದು. ಉರಿವ ಅಗ್ನಿಸಾಕ್ಷಿಯಾಗಿ ಸಪ್ತಪದಿತುಳಿಯುವುದು ವೈದಿಕರ ಮದುವೆಯ ಬಹುಮುಖ್ಯ ಆಚರಣೆಯಾಗಿದೆ. ಮಾದಿಗರು ಸೇರಿದಂತೆ ಅನೇಕ ತಳಜಾತಿಗಳಲ್ಲಿ ಜೀವಜಲವಾದ ನೀರಿನ ಸಾಕ್ಷಿಯಾಗಿ ಧಾರೆಯನ್ನು ಮಾಡಲಾಗುತ್ತದೆ.

ಮಾದಿಗ ಜಾತಿಯಲ್ಲಿ ಮದುವೆಯು ಬಹುಮುಖ್ಯ ಆಚರಣೆಯಾಗಿದೆ. ಹಿರಿಯರು ಪೂಜಾರಿಯ ಬಳಿ ಹೋಗಿ ಹುಡುಗ ಮತ್ತು ಹುಡುಗಿಯ ಹೆಸರು ಬಲ ಕೂಡಿಬರುತ್ತದೆಯೇ ಎಂಬುದನ್ನು ನೋಡುತ್ತಾರೆ. ನಂತರ ಮದುವೆ ವಿಷಯ ಪಕ್ಕಾ ಮಾಡಿಕೊಳ್ಳಲು ವೀಳ್ಯದ ಶಾಸ್ತ್ರ ಮಾಡುತ್ತಾರೆ. ವೀಳ್ಯವನ್ನು ಪರಸ್ಪರ ಬದಲಾಯಿಸಿಕೊಳ್ಳುವುದೆಂದರೆ ಮುರಿಯಲಾಗದ ಒಪ್ಪಂದ ಮಾಡಿಕೊಂಡಂತೆ. ಪೂಜಾರಪ್ಪನ ಹತ್ತಿರ ಮದುವೆ ದಿನ ನಿಗದಿ ಮಾಡುವುದನ್ನು ಲಗ್ನ ಕಟ್ಟಿಸುವುದು ಎಂದು ಕರೆಯುತ್ತಾರೆ.

ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರ ಮಾಡುತ್ತಾರೆ.ಚಪ್ಪರ ಶಾಸ್ತ್ರದಲ್ಲಿ ಹೆಣ್ಣು ಮತ್ತು ಗಂಡಿನ ಮನೆಯವರಿಬ್ಬರೂ ತಮ್ಮ ಮನೆ ಮುಂದೆ ಚಪ್ಪರ ಹಾಕಿ, ಮಾವು, ನೇರಳೆ, ಏಳೆ ಮರದ ಕೊಂಬೆಗಳನ್ನು ಸೇರಿಸಿದ ಹಸೆ ಕಂಬ ನೆಡುತ್ತಾರೆ. ಅದಕ್ಕೆ ಅರಿಶಿನದ ಕೊಂಬು ಅಥವಾ ಅರಿಶಿನದ ದಾರದಲ್ಲಿ ನವಧಾನ್ಯಗಳನ್ನು ಕಟ್ಟುತ್ತಾರೆ. ಸೋದರಮಾವ ಕೊಂಬೆಗಳನ್ನು ತರುತ್ತಾನೆ. ಚಪ್ಪರಕ್ಕೆ ಬಾಳೆಗೊನೆ ಮತ್ತು ಎಳನೀರನ್ನು ಕಟ್ಟುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿನ ಕಡೆಯಿಂದ, ಗಂಡಿನ ಮನೆಯಲ್ಲಿ ಗಂಡಿನ ಕಡೆಯಿಂದ ಹಸೆ ಕಂಬಕ್ಕೆ ಪೂಜೆ ಮಾಡಿಸುತ್ತಾರೆ. ಮೂರು ಅಥವಾ ಐದು ಜನ ಮಹಿಳೆಯರಿಂದ ಭತ್ತ ಕುಟ್ಟಿಸುತ್ತಾರೆ. ಭತ್ತದಲ್ಲಿ ಹಸೆ ಚಿತ್ರವನ್ನು ಬರೆಯುತ್ತಾರೆ. ಚಿತ್ರದಲ್ಲಿ ಪಕ್ಷಿಗಳು, ಹೂ-ಹಣ್ಣು, ಮರಗಳನ್ನು ಬಿಡಿಸುತ್ತಾರೆ. ಈ ಚಿತ್ರವು ಗಂಡು-ಹೆಣ್ಣಿನ ದಾಂಪತ್ಯವು ಒಟ್ಟಾರೆ ಪರಿಸರದ ಅವಿಬಾಜ್ಯ ಭಾಗವೆಂಬುದನ್ನು ಸೂಚಿಸುತ್ತದೆ. ಹಸೆ ಚಿತ್ರದ ನಡುವೆ ಮಣೆ ಇರಿಸಿ ಮಣೆ ಮೇಲೆ ಗಂಡು-ಹೆಣ್ಣನ್ನು ಕೂರಿಸಿ ಅರಿಶಿಣ ಶಾಸ್ತ್ರ ಮಾಡುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣಿಗೆ, ಗಂಡಿನ ಮನೆಯಲ್ಲಿ ಗಂಡಿಗೆ ಎಣ್ಣೆ ಬೆರೆಸಿದ ಅರಿಶಿನವನ್ನು ಮುತ್ತೈದೆಯರಿಂದ ಮೂರರಿಂದ ಐದು ಬಾರಿ ಹಚ್ಚಿಸುತ್ತಾರೆ. ನಂತರ ಸ್ನಾನಮಾಡಿಸಿ ದೇವಸ್ಥಾನಕ್ಕೆ ಹೋಗಿ ಪೂಜೆಮಾಡಿಸಿಕೊಂಡು ಬಂದ ಮೇಲೆ ಹೆಣ್ಣಿನ ಸೋದರತ್ತೆ ಹೆಣ್ಣಿಗೆ ಕಾಲುಂಗುರ, ಬಳೆ ಹಾಕುವ ಬಳೆ ಶಾಸ್ತ್ರ ಮಾಡುತ್ತಾಳೆ. ಗಂಡಿಗೂ ಸಹ ಕಾಲುಂಗರ ಹಾಕುತ್ತಾರೆ ಮತ್ತು ಒಂದು ತಿಂಗಳ ಕಾಲ ಅದನ್ನು ಹಾಕಿಕೊಂಡಿರಬೇಕು. ಮದುವೆಯಲ್ಲಿ ಸೋದರಮಾವನ ಪಾತ್ರ ಬಹಳ ಮುಖ್ಯವಾದುದು.
ಬಳೆಶಾಸ್ತ್ರ ಮಾಡಿದ ಮೇಲೆ ಗದ್ದಿಗೆಶಾಸ್ತ್ರವನ್ನು ಮಾಡುತ್ತಾರೆ. ಕಂಬಳಿಯನ್ನು ಮಡಿಸಿಟ್ಟು ಅದರ ಮೇಲೆ ಹೊಂಬಾಳೆ ಇರಿಸಿದ ಕಳಶ ಇಡುವುದನ್ನು ಗದ್ದಿಗೆ ಎನ್ನುತ್ತಾರೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಕೆಲವು ಕಡೆ ಕಳಶಕ್ಕೆ ವೀಳ್ಯದೆಲೆ, ತೆಂಗಿನ ಕಾಯಿಯನ್ನು ಇಡುತ್ತಾರೆ. ಈ ಶಾಸ್ತ್ರದಲ್ಲಿ ತಾಯಿ ವಧುವಿಗೆ ತಾಯಿ ಮನೆಯ ಮಾಂಗಲ್ಯವನ್ನು ಕಟ್ಟುತ್ತಾಳೆ. ಹತ್ತಿರದ ಬಾವಿಗೆ ಕರೆದುಕೊಂಡುಹೋಗಿ ಗಂಗೆಪೂಜೆ ಮಾಡಿಸುತ್ತಾರೆ. ಆ ನಂತರ ಹೆಣ್ಣು ಮತ್ತು ಗಂಡಿನ ಕೈಗೆ ಕಂಕಣ (ವೀಳ್ಯದೆಲೆ ಕಟ್ಟಿದ ಅರಿಶಿಣದಾರ) ಕಟ್ಟುತ್ತಾರೆ. ನಂತರ ಅರಣಿ ಪೂಜೆ ಮಾಡುತ್ತಾರೆ. ಚಿತ್ರ ಬರೆದ ಮೂರು ಮಣ್ಣಿನ ರ‍್ವಿಯಲ್ಲಿ ನೀರುತುಂಬಿ ಮೇಲಿನ ಮುಚ್ಚಳದಲ್ಲಿ ದೀಪವನ್ನು ಹಚ್ಚುತ್ತಾರೆ. ರ‍್ವಿಯ ಅಡಿಯಲ್ಲಿ ಒಣಗಿದ ಬೆರಣಿಯನ್ನು ಪುಡಿಮಾಡಿ ಅದರಲ್ಲಿ ಮೊಳಕೆ ಬರಿಸಿದ ಮೂರು ಥÀರದ ಧಾನ್ಯಗಳನ್ನು ಹಾಕಿಡುತ್ತಾರೆ. ಈ ದೀಪವನ್ನು ಹಚ್ಚುವುದು ಬಳೆ ಇಲ್ಲದ ಅಂದರೆ ವಿಧವೆ ಮಹಿಳೆ. ದೀಪ ರಾತ್ರಿ ಎಲ್ಲ ಆರದಂತೆ ನೋಡಿಕೊಳ್ಳುತ್ತಾರೆ. ನಂತರ ಮನೆದೇವರ ಪೂಜೆ ಮಾಡಿಸುತ್ತಾರೆ.

ಕೆಲವು ಕಡೆ ಭತ್ತ ಕುಟ್ಟಿ ಕರಿಕಂಬಳಿ ಮೇಲೆ ಸೂರ್ಯ ಚಂದ್ರ ನೇಗಿಲು ತರಹದ ಚಿತ್ರಗಳನ್ನು ಬರೆಯುತ್ತಾರೆ. ಕಳಶ ಪೀಟೆಯನ್ನು (ಪೀಠ) ಇಟ್ಟು ಅದರ ಮೇಲೆ ಕಂಚಿನ ತಟ್ಟೆ ಇಟ್ಟು ಅದರ ತುಂಬ ಒಣಗಿದ ಗೊಬ್ಬರ ಸರಿದು ಅದರ ಮೇಲೆ ಕಳಶವಿಡುತ್ತಾರೆ. ಅರಣಿಪೂಜೆ ಮಾಡಿ ಅದರ ಅಡಿಯಲ್ಲಿ ಮಧುವಿನಿಂದ ಗೊಬ್ಬರ ಹರಡಿಸಿ ನವಧಾನ್ಯಗಳನ್ನು ಮೊಳಕೆ ಹಾಕಿಸುತ್ತಾರೆ.

ಮೂರು ರೀತಿಯ ಮರದ ಕೊಂಬೆಗಳನ್ನು ಸೇರಿಸಿ ಹಸಿ ಕಂಬ ಮಾಡಿ ನೆಡುತ್ತಾರೆ. ಪ್ರದೇಶದಿಂದ ಪ್ರದೇಶಕ್ಕೆ ಮರಗಳು ಬದಲಾಗುವುದಾದರೂ ಸಾಮಾನ್ಯವಾಗಿ ಬಸರಿ/ಹನಗಳ್ಳಿ/ಹುಣತಿ/ಆಲ/ಅತ್ತಿ ಮರದ ಕೊಂಬೆಗಳನ್ನು ಬಳಸುತ್ತಾರೆ. ಮುಂದೆ ತಾಳಿಶಾಸ್ತ್ರಮಾಡುತ್ತಾರೆ. ಮುಹೂರ್ತದ ದಿನ ವಧು-ವರರ ಕಡೆಯ ಹಿರಿಯ ಗಂಡಸರು ಗದ್ದಿಗೆ ಹಾಕಿ ಕಳಶ ಇಡುತ್ತಾರೆ. ‘ನಿಮ್ಮ ಮಗಳನ್ನು ನಮ್ಮ ಮನೆಗೆ ತರ್ತೀವಿ’ ಅಂತ ಹೆಣ್ಣಿನ ಮನೆಯವರಿಗೆ ಗಂಡಿನ ಮನೆಯವರು ಇಪ್ಪತ್ತೈದು ರೂಪಾಯಿ ಕೊಡುತ್ತಾರೆ. ದೇವರಿಗೆ ಪೂಜೆ ಮಾಡಿ ಮೊದಲು ಯಜಮಾನರುಗಳಿಗೆಲ್ಲ ಕೈಮುಗಿದು, ಎಲ್ಲರ ಕೈ ಮುಟ್ಟಿಸಿ ಆಶೀರ್ವದಿಸಿದ ತಾಳಿಯನ್ನು ಕಟ್ಟಲು ಅನುಮತಿ ಕೇಳಿ ಗಂಡು ಹೆಣ್ಣಿನ ನಡುವಿನ ಅಂತರಪಟ (ಪರದೆ) ತೆಗೆದು ಗಂಡು ಹೆಣ್ಣಿನ ಕೈಲಿ ಪರಸ್ಪರ ಜೀರಿಗೆ ಹಾಕಿಸಿದ ನಂತರ ಗಂಡಿನ ಕೈಲಿ ಹೆಣ್ಣಿನ ಕುತ್ತಿಗೆಗೆ ಕಟ್ಟಿಸುತ್ತಾರೆ. ತಾಳಿ ಕಟ್ಟಿಸಿದ ನಂತರ ಧಾರೆಶಾಸ್ತ್ರಮಾಡುತ್ತಾರೆ. ತಾಳಿ ಶಾಸ್ತ್ರವಾದ ಮೇಲೆ ತಾಯಿ-ತಂದೆ ಮತ್ತು ಹಿರಿಯರು ಮೊದಲು ಹಸೆ ಕಂಬಕ್ಕೆ ಹಾಲಿನ ಧಾರೆ ಎರೆದು ನಂತರ ಗಂಡಿನ ಬೊಗಸೆಯಲ್ಲಿ ಹೆಣ್ಣಿನ ಬೊಗಸೆ ಇರಿಸಿ ಅದರಲ್ಲಿ ತೆಂಗಿನಕಾಯಿ ಮೇಲೊಂದು ವೀಳ್ಯದೆಲೆ ಅದರ ಮೇಲೊಂದು ಕಾಸು ಇರಿಸಿ ಧಾರೆ ಎರೆಯುತ್ತಾರೆ. ನಂತರ ಮದುವೆಗೆ ಬಂದ ನೆಂಟರೆಲ್ಲರೂ ಧಾರೆ ಎರೆಯುತ್ತಾರೆ. ಕೋಲಾರದ ಕಡೆಯಲ್ಲಿ ವೀಳ್ಯದ ಎಲೆಯನ್ನು ಆಲಿಕೆಯಂತೆ ಸುರುಳಿ ಸುತ್ತಿ, ಆ ಸುರುಳಿಯನ್ನು ಬೆರಳುಗಳ ಸಂದಿಯಲ್ಲಿ ಸಿಕ್ಕಿಸಿ ಅದರೊಳಗೆ ಹಾಲನ್ನು ಹಾಕುವ ಆಚರಣೆ ಜಾರಿಯಲ್ಲಿದೆ. ಧಾರೆಶಾಸ್ತ್ರ ಮುಗಿಯುವವರೆಗೂ ಮದುಮಕ್ಕಳು ಉಪವಾಸವಿರಬೇಕು. ಮದುವೆ ಮುಗಿದ ಮೇಲೆ ಅರಣಿ ಪೂಜೆಯಲ್ಲಿಟ್ಟ ಪೈರುಗಳನ್ನು ಹೆಣ್ಣಿನ ತಲೆಯ ಮೇಲೆ ಹೊರಿಸಿ ದಾರಿ ಉದ್ದಕ್ಕೂ ಚೆಲ್ಲಿಸಿಕೊಂಡು ಅತ್ತಿ ಮರಕ್ಕೆ ಹಾಕಿಸುತ್ತಾರೆ. ಮದುವೆಗೆ ಬಂದ ಬಂಧುಗಳಿಗೆ ಸಿಹಿ ಊಟ ಹಾಕುತ್ತಾರೆ. ಮಾರನೆಯ ದಿನ ಮಾಂಸದ ಊಟ ಹಾಕುತ್ತಾರೆ. ಹೆಣ್ಣು ಗಂಡು ಇಬ್ಬರ ಮುಂದೆಯೂ ಐದು ಅಥವಾ ಒಂಬತ್ತು ತಟ್ಟೆಗಳಲ್ಲಿ ವಿವಿಧ ರಿತಿಯ ಹಣ್ಣು, ಹೂ ಮತ್ತು ತಿಂಡಿಗಳನ್ನು ಇಟ್ಟು ಆರತಿ ಮಾಡುವ ಒಸಗೆ ಶಾಸ್ತ್ರ ಮಾಡುತ್ತಾರೆ. ಎರಡನೆ ದಿನ ಮದುಮಕ್ಕಳಿಬ್ಬರೂ ಹುತ್ತಕ್ಕೆ ಪೂಜೆ ಮಾಡಿಕೊಂಡು ಬರುತ್ತಾರೆ. ಹೆಣ್ಣು ಗಂಡಿನ ಮನೆಗೆ ಮೂರುಸಲ ಹೋಗಿಬಂದ ಮೇಲೆ ಸೋಬನವನ್ನು ಮಾಡುತ್ತಾರೆ.

ಗಂಗೆಪೂಜೆ ಮದುವೆಯ ಮುಖ್ಯ ಆಚರಣೆಯಾಗಿದೆ. ವಿಶೇಷವಾಗಿ ಮಾದಿಗ ಸಮುದಾಯದಲ್ಲಿ ಗಂಗೆಯನ್ನು ಮನೆಯ ಮಗಳೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಮಾದಿಗರ ಕೇರಿಯ ಮಧ್ಯದಲ್ಲಿ ಇರುವ ಗಂಗಮ್ಮನನ್ನು ಎಲ್ಲರೂ ಪೂಜಿಸುತ್ತಾರೆ.
ಮದುವೆಯ ಇನ್ನಿತರ ಆಚರಣೆಯಲ್ಲಿರುವ ಮರದ ಕೊಂಬೆಗಳು, ಗಂಗೆಪೂಜೆ, ಹೂ, ಹಣ್ಣು, ಪಕ್ಷಿಗಳನ್ನು ಒಳಗೊಂಡ ಹಸೆ ಚಿತ್ರಗಳೆಲ್ಲವೂ ಗಂಡು-ಹೆಣ್ಣು ಕೂಡಿಬಾಳುವುದು ಪ್ರಕೃತಿಯ ಒಂದು ಕೊಂಡಿಯಾಗಿ ಎಂಬುದನ್ನು ಸೂಚಿಸುತ್ತದೆ. ಮಾತು ಕೊಡುವುದಕ್ಕೆ ವೀಳ್ಯದೆಲೆ ಸಾಕ್ಷಿಯಾಗಿರುವುದು, ಕರಿಕಂಬಳಿಯ ಗದ್ದಿಗೆಯ ಮೇಲಿಡುವ ಹೊಂಬಾಳೆಯ ಕಳಶ, ಮಣ್ಣಿನ ಮಡಕೆ, ಮರುಸೃಷ್ಟಿಯ ಸಂಕೇತವಾದ ಧಾನ್ಯಗಳ ಮೊಳಕೆ ಎಲ್ಲವೂ ಚಲನಶೀಲ ಪ್ರಕೃತಿಯ ಸಂಕೇತಗಳೇ ಆಗಿವೆ. ಮದುವೆಯಲ್ಲಿ ಬಳಸುವ ಕರಿಕಂಬಳಿ ಮತ್ತು ಕರಿಬಳೆಗಳು ಶುಭದ ಸಂಕೇತಗಳಾಗಿವೆ.
ವೈದಿಕರಲ್ಲಿ ಗಂಡ ತೀರಿಕೊಂಡ ಹೆಣ್ಣು ಅಮಂಗಳವಾದರೆ ಇಲ್ಲಿ ಗಂಡ ತೀರಿಹೋದ ಹೆಣ್ಣಿನ ಕೈಯಲ್ಲಿಯೇ ಮದುವೆ ಮುಗಿಯುವವರೆಗೂ ಆರದಂತೆ ಉರಿವ ದೀಪವನ್ನು ಹಚ್ಚಿಸುತ್ತಾರೆ. ವಿಧವೆ ಇಲ್ಲಿ ಅಶುಭಳಲ್ಲ, ಬಹಿಷ್ಕೃತಳಲ್ಲ. ದೀಪ ಬೆಳಕಿನ ಸಂಕೇತ. ಎಲ್ಲರನ್ನು ಬೆಳಕಿನಂತೆ ಶುಭವೆಂದು ಪರಿಭಾವಿಸುವುದು ಮಾನವೀಯ ಮೌಲ್ಯವೇ ಆಗಿದೆ.

ಹಟ್ಟಿಯ ಹಿರಿಯರು ಅಥವಾ ಸಮುದಾಯದ ಹಿರಿಯರು ಮದುವೆ ಮಾಡಿಸುತ್ತಾರೆ. ಮನೆಯಲ್ಲಿಯೇ ಮದುವೆ ಮಾಡುವುದು, ನೆಂಟರು, ಹಟ್ಟಿಯವರೇ ಸೇರಿ ಮದುವೆ ಕಾರ್ಯಗಳನ್ನು ಮಾಡುವುದು ಪರಿಶಿಷ್ಟ ಜಾತಿಗಳಲ್ಲಿ ಈಗಲೂ ಮುಂದುವರೆದುಕೊಂಡು ಬಂದಿದೆ. ಹಿಂದೆ ಇವರಲ್ಲಿ ಹೆಣ್ಣಿಗೆ ತೆರ ಕೊಡುವ ಪದ್ಧತಿ ಇತ್ತು. ಇಂದಿಗೂ ಸಾಂಕೇತಿಕವಾಗಿದೆ. ಮೇಲ್ಜಾತಿಗಳಲ್ಲಿ ಇರುವ ವರದಕ್ಷಿಣೆಯೂ ಇಂದು ಜಾತಿಶ್ರೇಣಿಯಲ್ಲಿನ ಕೆಳಜಾತಿಗಳಲ್ಲಿ ಜಾರಿಗೆ ಬಂದಿದೆ. ಓದಿರುವ ಹುಡುಗ, ಸರ್ಕಾರಿ ನೌಕರಿಯಲ್ಲಿರುವ ಹುಡುಗನೆಂದರೆ ವರದಕ್ಷಿಣೆ ಹೆಚ್ಚು ನೀಡಬೇಕೆಂದು ಸಂದರ್ಶನದ ಸಂದರ್ಭದಲ್ಲಿ ಮಹಿಳೆಯರು ಹೇಳಿದರು. ಪುರೋಹಿತರು ಮದುವೆ ಮಾಡಿಸುವುದು ಸಹ ಜಾರಿಗೆ ಬಂದಿದೆ. ಕ್ರಿಶ್ಚಿಯನ್ ಧರ್ಮಕ್ಕೆ, ಬೌದ್ಧಧರ್ಮಕ್ಕೆ ಮತಾಂತರವಾಗಿರುವವರು ಸಹ ಹಿಂದಿನ ಹಲವಾರು ಆಚರಣೆಗಳನ್ನು ಇಟ್ಟುಕೊಂಡಿದ್ದಾರೆ.

ಬಾಡುಚೀಟಿ ಕಟ್ಟುವಾ ಬಾರಾ…

ಹಬ್ಬದ ಸಂಭ್ರಮಕ್ಕೆ ಬಡತನವು ಅಡ್ಡಿಯಾಗುವುದಿಲ್ಲ. ತಮ್ಮ ಕಷ್ಟಗಳು ಮತ್ತು ಜಂಜಾಟಗಳ ನಡುವಿನಲ್ಲೇ ತಮ್ಮದೇ ದಾರಿ ಹುಡುಕಿಕೊಂಡು ಹಬ್ಬದ ಆಚರಣೆಗೆ ನಡೆಸುವ ತಯಾರಿಯನ್ನು ಈ ನಿಜಾಧಾರಿತ ಕಾಲ್ಪನಿಕ ಕಥೆ ನಿರೂಪಿಸುತ್ತದೆ.


ಬಾಡುಚೀಟಿ ಕಟ್ಟುವಾ ಬಾರಾ…

ಎಂಟಮ್ಮನ ದೊಡ್ಡಮಗ ಅಮರಪ್ಪ ಐದಾರು ವರುಷದ ಹಿಂದೆ ಕೆಲಸ ಹುಡುಕಿಕೊಂಡು ಹೋಗಿ ಬೆಂಗಳೂರಿನ ಬಿ.ಬಿ.ಎಂ.ಪಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡಿದ್ದ. ತನ್ನ ಹೆಂಡತಿಯನ್ನೂ ಅಲ್ಲೇ ಸೇರಿಸಿದ್ದ. ಮಕ್ಕಳನ್ನು ಕರೆದುಕೊಂಡು ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೇ ತನ್ನ ಹುಟ್ಟೂರಾದ ಕುಂಬಾರಹಳ್ಳಿಗೆ ಬಂದಿದ್ದ. ಕುಂಬಾರಹಳ್ಳಿಗೆ ಬರುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು.
ಅಮರಪ್ಪನ ಹೆಂಡತಿ ನೇತ್ರಮ್ಮ ಕೆಲಸ ಮಾಡಿ ಮಾಡಿ ಇತ್ತೀಚೆಗಂತು ತುಂಬಾನೇ ನಿತ್ರಾಣಗೊಂಡಿದ್ದಳು.ನನ್ಕ ನಡುವು ಶಾನ ಅಗೀತಾ ಅದಿ ಮಾರಾಯ' ಅಂತ ಯಾವಾಗಲೂ ತನ್ನ ಗಂಡ ಅಮರಪ್ಪನಿಗೆ ಹೇಳುತ್ತಿದ್ದಳು.ಏನೇ ಈ ನಡ್ವಿ ಯಾವಾಗ ನೋಡಿದ್ರು ನಡುವು ನೋವು ನಡುವು ನೋವು ಅಂತೀಯಾ, ಇರು ಅಂಗೆ ವೋಗಿ ಎರ್ಡು ಎಂಡ್ರಕಾಯಿಗ್ಳವ ಇಡ್ತಂದು ಬಂದು ಬುಡ್ತೀನಿ. ಎಂಡ್ರಕಾಯಿ ನಡುವು ನೋವ್ಕ ಬಲೆ ಒಳ್ಳೇದು ಅಂತ ನಮ್ಮಮ್ಮನು ಅನ್ನೋಳು, ಅಪ್ನವೂನು ಕರ್ದಂದು ಹೋತೀನಿ, ಅಪ್ನು ಮೀನು ಎಂಡ್ರಕಾಯಿಗ್ಳುವ ಇಡೇದ್ರಾಗ ಎಸ್ಪರ್ಟು. ಬಿರ್ನಬರ್ಬೋದು’ ಅಂತ ಏಡಿಕಾಯಿಬೇಟೆಗೆ ಹೋಗಲು ಎದ್ದ. ಅಷ್ಟರಲ್ಲಿ ಅಮರಪ್ಪನ ನಾಲ್ಕು ಜನ ಮಕ್ಕಳು ಅಪ್ಪೋ ನಾವೂನೂ ಬತ್ತೀವಿ, ನಾವುನೂ ಬತ್ತೀವಿ, ಎಂಡ್ರಕಾಯಿ ಇಡೇದ್ನಾ ನಾವು ನೋಡಬೇಕು' ಎಂದರು. ಅದಕ್ಕೆ ಅಮರಪ್ಪಆ ಸರೆ ಬನ್ರಿ, ನಾವ್ ಇಡ್ದಾಕಿದ್ರೆ ಬಕೀಟಾಕ ಇಡ್ದಾಕೆನ್ನೀರಿ’ ಎಂದು ಮಕ್ಕಳಿಗೆ ಹೇಳುತ್ತಾ, ತನ್ನ ತಂದೆಯನ್ನು ಕುರಿತು ಅಪ್ಪೋ ಬಾ ಅಂಗೆ ಹೋಗಿ ಎರ್ಡು ಎಂಡ್ರಕಾಯಿಗ್ಳುವ ಇಡ್ತಂ ಬರೋನಾ, ಎಂಡ್ರಕಾಯ್ಗಳ್ವು ಇಡ್ದು ಶಾನ ದಿನ ಆಯ್ತು' ಅಂದ. ಬಾಯಿ ತುಂಬ ಎಲೆ ಅಡಿಕೆ ಇಟ್ಟುಕೊಂಡು ಆಕರಾಯಿಯಿಂದ ಕುಡುಗೋಲಿಗೆ ಕರ್ಕುಲು ಇಕ್ಕುತ್ತಿದ್ದ ಸೌಡಪ್ಪ ಮಾತನಾಡಲಾಗದೇ ಕೈ ಸನ್ನೆಯಲ್ಲಿ ಹೋಗೋಣ ಎಂದು ತೋರಿಸುತ್ತಾ.. ಉವೂಉನೋಉಉ ಅಂದ. ಅದಕ್ಕೆ ತಾತನನ್ನು ನೋಡಿ ಮಕ್ಕಳು ತಾತ ಮಾಡಿದ ಹಾಗೆ ಉವೂಉನೋಉಉ ಅಂತ ಮಾಡಿ, ಗೊಳ್ ಎಂದು ನಕ್ಕವು. ಎಲೆ ಅಡಿಕೆ ಉಗಿದು ಬಂದ ಸೌಡಪ್ಪಇದು ಹುಚ್ಚಳ್ಳು ಹೂ ಕಾಲ, ಎಂಡ್ರಕಾಯಿಗ್ಳಾಗ ಬರೇ ಕೊಬ್ಬು ಇರುತಾದಿ, ಎಂಡ್ರಕಾಯಿಗ್ಳನ್ನಾ ಇವಾಗೇನೆ ಇಡಿಬೇಕು. ಒಳ್ಳೆ ಕೆಲ್ಸ ಮಾಡ್ದೆ ನಡಿ ಹೋಗಾನಾ’ ಎನ್ನುತ್ತಾ ಚನಿಕೆ, ವರಬಾರಿ, ಮೀನು ಸಿಕ್ಕಿದರೆ ಮೀನು ಇಡಿಯಬಹುದು ಎಂದು ಕೊಡಮೆಯನ್ನು ಎತ್ತಿಕೊಂಡು ಮಕ್ಕಳನ್ನು, ಅಮರಪ್ಪನನ್ನು ಕರೆದುಕೊಂಡು ಚದುಮನಹಳ್ಳಿ ಕೆರೆಗೆ ಹೋದ. ಮಕ್ಕಳು ಮೊದಲ ಸಲ ಏಡಿಕಾಯಿ ಬೇಟೆಗೆ ಹೋಗ್ತಾ ಇರೋದ್ರಿಂದ ತುಂಬಾ ಕುತೂಹಲ ಮತ್ತು ಖುಷಿಯಿಂದ ಇದ್ದರು.

ಚದುಮನಹಳ್ಳಿಯ ಕೆರೆ ತುಂಬಾ ನೀರಿತ್ತು. ಅಮರಪ್ಪನ ಮಗ ಭೀಮ ಇದ್ದುಕೊಂಡು ತನ್ನ ತಂದೆ ಅಮರಪ್ಪನಿಗೆ ಎಂಡ್ರಕಾಯ್ಗಳ್ವ ಇಡೇದು ನಿನ್ಕ ಎಂಗೆ ತಿಳಿತಾದಿ, ಎಂಗಿ ಇಡಿತೀಯಾ ನಮ್ಕು ಕಲ್ಸಪ್ಪೋ' ಅಂದ. ಅದಕ್ಕೆ ಅಮರಪ್ಪನನ್ಕೂ ನಿಮ್ ತಾತನೇ ಕಲಿಸಿದ್ದು. ತಾತ್ನು ಶನ್ನಾಗಿ ಇಡಿತಾನಿ.’ ಅಂದ. ಇದನ್ನು ಕೇಳಿಸಿಕೊಂಡ ಸೌಡಪ್ಪ ಏ ಮರಿಗ್ಳೆ ಇಲ್ಲಿ ನೋಡ್ರ್ಯಾ ಲೇ ಈ ನೀರು ಹಂಚುಗ್ಳಾಗ ಬಕ್ಕಿಗ್ಳು ಮುದ್ರು ಹಾಕೆಂದಿರ್ತಾವಿ. ಇಂಗಿ ಬಕ್ಕಿಗ್ಳುಕ ಮಣ್ಣು ಮುಚ್ಚಿ ಅಂದಿದ್ರೆ ಅದ್ನ ಮುದ್ರು ಅಂತಾರಿ. ಆ ಮುದ್ರು ಒಳ್ಗಿ ಎಂಡ್ರುಕಾಯಿ ಇರ್ತಾದಿ ಅಂತ ಅರ್ಥ. ಮುದ್ರುವ ಶನಿಕ್ಯಾಗ ರಸಿ ಅಗದಂದು ಅದ್ರಾಕ ಕೈ ಇಕ್ಕಿದ್ರೆ, ಎಂಡ್ರ್ಕಾ ಸಿಕ್ಕಿಹೋತಾದಿ. ಒಂದೊಂದು ಮುದ್ರಾಗ ಒಂದು, ಎರಡು, ಮೂರು ಎಂಡ್ರುಕಾಯಿಗ್ಳು ಇರ್ತಾವಿ. ಮುದ್ರು ಇರ್ದೀರ ಇರೋ ಬಕ್ಕಿಗ್ಳಾಗ ನೀರು ತೆಳ್ಳಗ ಇದ್ರೆ ಅಲ್ಲಿನೂ ಎಂಡ್ರಕಾಯಿಗ್ಳು ಇರ್ತಾವಿ. ಅವ್ಗಳ್ವ ಚನಿಕ್ಯಾಗ, ಹೊರಬಾರ್ಯಾಗ ಅಗ್ದು ಹಿಡಿಬೋದು. ಇಲ್ಲ ಅಂದ್ರೆ ಹೂ ಇರೋ ಕಡ್ಡಿ (ಮುಂದಿನ ಭಾಗದಲ್ಲಿ ಕವಲುಗಳು ಇರೋ ಕಡ್ಡಿ)ಎತ್ತಿ ಅಂದು ಆ ಬಕ್ಯಾಕ ಇಕ್ಕಿದ್ರೆ ಎಂಡ್ರುಕಾಯಿ ಕಡ್ಡಿವ್ಯಾ ಕಚ್ಚಿಂತಾದಿ. ಅವಾಗ ಮೆತ್ತುಗ ಎಳತಂದು, ಕೊಂಡಿಗ್ಳುವ ಮಡ್ಸಿ ಇಡ್ತಂದು ಬಕೀಟಾಕ ಹಾಕೆಂಬೇಕು' ಅಂತ ಸೌಡಪ್ಪ ಮಕ್ಕಳಿಗೆ ತಾನು ಏಡಿಕಾಯಿ ಹಿಡಿಯುವುದನ್ನು ತೋರಿಸ್ತಾನೆ ಹೇಳ್ತಾ ಹೋದ. ಮಕ್ಕಳು ಅರಳು ಕಣ್ಣುಗಳಿಂದ ನೋಡ್ತಾ ಕೇಳಿಸಿಕೊಳ್ತಾ ಅಪ್ಪ-ಮಗ ಇಡಿತಾ ಇದ್ದ ಏಡಿಕಾಯಿಗಳನ್ನು ನಾಜೂಕಾಗಿ ಇಡಿದು ಬಕೇಟಲ್ಲಿ ಹಾಕಿಕೊಳ್ಳುತ್ತಿದ್ದರು. ಅಮರಪ್ಪನ ದೊಡ್ಡ ಮಗ ಭೀಮತಾತ ಈ ಬಕ್ಯಾಗ ನಾನು ಕೈ ಹಾಕಿ ಇಡಿತೀನಿ ಇರ್ತಾತೋ’ ಅಂತ ಖುಷಿಯಾಗಿ ಹೋಗಿ ಬೊಕ್ಕೆಯಲ್ಲಿ ಕೈ ಹಾಕ್ದ. ಹಾಕಿದ್ ತಕ್ಷಣ ನೀರುಹಾವು ಇವನ ಕೈ ಮೇಲೆ ಬಂದು ಬಿಡ್ತು. ತುಂಬ ಹೆದರಿಕೊಂಡ ಭೀಮ ಕಿಟಾರ್ ಅಂತ ಕಿರುಚಿ ಓಡಿಹೋದ. ಮಕ್ಕಳೆಲ್ಲಾ ಭಯಕ್ಕೆ ಮುದುರಿಕೊಂಡುವು. ಇದನ್ನು ನೋಡಿಕೊಂಡಿದ್ದ ಸೌಡಪ್ಪ ಲೇ ಭೀಮ ಬಕ್ಯಾಗ ನೀರು ತೆಳ್ಳಗ ಅದೋ ಇಲ್ಲೋ ಅಂತ ನೋಡದೀರ ಕೈ ಕಾಕಿದ್ರೆ ಇಂಗೇ ಹಾಗೋದು. ಹೋದ್ರೆ ಹೋಗ್ಲಿ ಬುಡೋ ದೈರ್ಯ ಬತ್ತಾದಿ. ಎಲ್ಲಾ ಹಾವುಗ್ಳು ವಿಷ ಅಲ್ಲ. ನೀರುಹಾವು ಕಚ್ಚಿದ್ರೆ ಕೆಸ್ರು ನೀರು ಕುಡುದ್ರೆ ಸರ್ವೋತಾದಿ' ಎಂದ. ಇತ್ತ ನೀರಲ್ಲಿ ಮೀನುಗಳು ಎಗರುವುದನ್ನು ನೋಡಿ, ಮಕ್ಕಳುಅಪ್ಪ, ತಾತ ಅಲ್ಲಿ ನೋಡ್ರೆ ಏಸೊಂದು ಮೀನ್ಗಳು ಎಗರ್ತಾವಿ’ ಎಂದರು. ಅಮರಪ್ಪ ಅವುಗಳನ್ನು ನೋಡಿ ಹೌದಲ್ಲೋ ಎಷ್ಟುಂದು ಮೀನುಗ್ಳು ಅವೆ' ಅಂದ. ಸೌಡಪ್ಪರ‍್ರೆ ನಾನು ಹೋಗಿ ತೂಮತ್ರ ಕೊಡಿಮಿ ಹಾಕಿ ಬತ್ತೀನಿ’ ಎನ್ನುತ್ತಾ ಕೊಡಮೆಯನ್ನು ಎತ್ತಿಕೊಂಡು ತೂಬಿನ ಹತ್ತಿರ ಬಂದು ಮೇಲಿನಿಂದ ನೀರು ಬರುತ್ತಿರುವ ಜಾಗಕ್ಕೆ ಕೊಡಮೆಯ ಬಾಯಿ ಸರಿಹೊಂದುವಂತೆ ಕೊಡಮೆ ಇಟ್ಟು ಕೊಡಮೆ ಕದಲದ ಹಾಗೆ ಅಕ್ಕ ಪಕ್ಕ ಎರಡು ಕಡ್ಡಿಗಳನ್ನು ಮಣ್ಣಿನಲ್ಲಿ ಚುಚ್ಚಿದ. ಮತ್ತೆ ಬಂದು ಇತ್ತ ಏಡಿಕಾಯಿಗಳನ್ನು ಹಿಡಿದ. ಸರಿ ಎಲ್ಲರೂ ಸೇರಿ ಬಕೇಟಿನ ತುಂಬಾ ಏಡಿಕಾಯಿಗಳನ್ನು ಹಿಡಿದು ಎತ್ತಿಕೊಂಡು, ತೂಬಿನ ಹತ್ತಿರ ಬಂದರು. ಕೊಡಮೆಯ ತುಂಬಾ ಮೀನುಗಳು ಬಿದ್ದಿದ್ದವು. ಮಕ್ಕಳೂ ಇವುಗಳನ್ನು ನೋಡಿ ಆ ಮೀನ್ಗಳು ಮೀನ್ಗಳು, ತಾತ ಮೀನ್ಗಳ್ವ ಹೆಂಗೆ ಇಡೇದು ಹೇಳು ತಾತ' ಎಂದು ಕೇಳಿಕೊಂಡವು. ಆಗ ಚೌಡಪ್ಪನುಅರೇ ನನ್ನ ಮಕ್ಳೆ, ಎಲ್ಲಾನೂನು ಒಂದೇ ಸಾರಿ ಕಲ್ತು ಬುಡಬೇಕಾ? ಸರೇ ಬನ್ರೆ ಇಲ್ಲಿ ನೋಡ್ರಿ, ಅರೇ ನೀರ್ಕ ಇಂಗೆ ಕೊಡಿಮಿ ಇಕ್ಕುಬೇಕು. ಕೊಡಿಮಿ ಬಾಯಾಗಿಂದ ಮೀನ್ಗ್ಳು ಅದರೊಳ್ಳಿಕ್ಯಾ ಬೀಳ್ತಾವಿ. ಕೊಡಿಮಿ ಬಾಯಿ ಒಳಿಕ್ಯಾ ಇರೋದ್ಕ ಮೀನ್ಗ್ಳು ಮ್ಯಾಲಿಕಿ ಬರದೀರ ಅದರಾಗೆ ಇದ್ದೋತಾವಿ. ಮೀನ್ಗ್ಳು ಅದರೊಳಿಕ್ಕಿ ಬಿದ್ದ ಮ್ಯಾಲಿ ಅವ್ನ ಇಂಗಿ ಬಗ್ಗಿಸೆಂಬೇಕು’ ಎಂದು ಮಕ್ಕಳಿಗೆ ವಿವರಿಸುತ್ತಾ ಕೊಡಮೆಯಲ್ಲಿದ್ದ ಮೀನುಗಳನ್ನು ಇನ್ನೊಂದು ಬಕೇಟಿಗೆ ಸುರಿದುಕೊಂಡು ಮೊಮ್ಮಗಳಾದ ಚಿನ್ನಮ್ಮನಿಗೆ ಎತ್ತಿಕೊಳ್ಳಲು ಕೊಟ್ಟ. ಎಲ್ಲರೂ ಏಡಿಕಾಯಿಗಳನ್ನು ಮತ್ತು ಮೀನುಗಳನ್ನು ಎತ್ತಿಕೊಂಡು ಮನೆಗೆ ಬಂದರು.


ಏಡಿಕಾಯಿಗಳನ್ನು ಸುಲಿಯಲು ಕಾಯುತ್ತಿದ್ದ ಎಂಟಮ್ಮ. ಪುಳ್ಳೆಗಳನ್ನು ಹಾಕಿ ಸ್ವಲ್ಪ ಬೆಂಕಿಯನ್ನು ಹಾಕಿದಳು. ತನ್ನ ಗಂಡ ಸೌಡಪ್ಪನಿಗೆ ಮಾರಾಯ ಎಂಡ್ರಕಾಯಿಗ್ಳು ಎರ್ಡು ಕಿಚ್ಚಾಕ ಹಾಕು ಮಕ್ಕ್ಳು ತಿಂತಾವೆ. ಇವ್ನ ಸುಲ್ದು ಹೆಸ್ರು ಮಾಡೂ ಪಟ್ಟಿಕ್ಯಾ ಲೇಟು ಆತಾದಿ' ಎಂದಳು. ಚೌಡಪ್ಪ ಸ್ವಲ್ಪ ಏಡಿಕಾಯಿಗಳನ್ನು ಸುಟ್ಟು ಮಕ್ಕಳಿಗೆ ಕೊಟ್ಟ. ಮಕ್ಕಳು ರುಚಿ ರುಚಿ ಎಂದು ತಿಂದವು. ಸೊಸೆಯ ಸೊಂಟ ನೋವಿಗೆ ಏಡಿಕಾಯಿಗಳು ಒಳ್ಳೆಯದು ಎಂದು ಸ್ವಲ್ಪ ಏಡಿಕಾಯಿಗಳನ್ನು ಒರಳಿಗೆ ಹಾಕಿ ಕುಟ್ಟಿ ರಸ ತೆಗೆದು ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಸ್ವಲ್ಪ ಹುಣಸೆ ನೀರನ್ನು ಹಾಕಿ ಕುದಿಸಿ ರಾಮರಸ ಮಾಡಿ ಸೊಸೆಗೆ ಕುಡಿಯಲು ಕೊಟ್ಟಳು ಎಂಟಮ್ಮ. ಆಮೇಲೆ ಅಮರಪ್ಪ, ಸೌಡಪ್ಪ,ಎಂಟಮ್ಮ ಮೂರು ಜನ ಸೇರಿಕೊಂಡು ಎಂಡ್ರಕಾಯಿಗಳ ಓಡುಗ್ಳುವ, ಪೀತ್ರುಗಳ್ವ ಕಿತ್ತು ಹಸನು ಮಾಡಿದ್ರು. ಎಂಟಮ್ಮ ಸುಲಿದ ಏಡಿಕಾಯಿಗಳನ್ನು ಎಣ್ಣೆಯಲ್ಲಿ ಚನ್ನಾಗಿ ಉರಿದು, ಅದಕ್ಕೆ ಉಪ್ಪು, ಮೆಣಸಿನ ಕಾಯಿ, ಈರುಳ್ಳಿ ಬೆಳ್ಳುಳ್ಳಿ, ಮೆಣಸು,ಜೀರಿಗೆ ದನಿಯಾ, ಚಕ್ಕೆ ಲವಂಗ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಕೊಬರಿಯನ್ನು ಹಾಕಿ ಚನ್ನಾಗಿ ಒರಳಲ್ಲಿ ರುಬ್ಬಿ,ಆ ಕಾರವನ್ನು ಉರಿದ ಏಡಿಕಾಯಿಗೆ ಹಾಕಿ ಕಲಿಸಿ ಕುದಿಯಲು ಒಲೆಮೇಲೆ ಇಟ್ಟಳು. ಅದಕ್ಕೆ ಪ್ರತ್ಯೇಕವಾಗಿ ಬೇಯಿಸಿಕೊಂಡಿದ್ದ ಹಸಿ ಕಳ್ಳೆಬೀಜ, ಎಳೆ ಸೊರೆಕಾಯಿಯನ್ನು ಹಾಕಿ ಸೇರಿಸಿ, ಸಾರನ್ನು ಚನ್ನಾಗಿ ಕುದಿಸಿದಳು. ಏಡಿಕಾಯಿಯ ಗಮಲು ಮನೆ ಬೀದಿಯನ್ನೆಲ್ಲಾ ಆವರಿಸಿಕೊಂಡಿತು. ಈ ವಾಸನೆಯನ್ನು ಹಿಡಿದುಕೊಂಡ ತಿಂಡಿಪೋತ ಭೀಮಅಜ್ಜಿ ಸಾರು ಬಲೇ ಗಮ್ಲು ಬತ್ತಾದಿ, ಹೆಂಗೆ ಮಾಡೋದು ಹೇಳಜ್ಜಿ’ ಅಂದ. ಅದಕ್ಕೆ ಎಂಟಮ್ಮ ‘ಎಂಡ್ರಕಾಯಿ ಹೆಸ್ರು ಮಾಡಿದ್ದ್ ಆಗೇಯ್ತು, ಇರು ಮೀನ್ಗ್ಳು ಸಾರು ಹೆಂಗೆ ಮಾಡೋದು ಹೇಳಿಕೊಡ್ತೀನಿ’ ಎಂದಳು.
ಅಷ್ಟರಲ್ಲಿ ಮತ್ತೊಂದು ಕಡೆ ಅಮರಪ್ಪ ಮತ್ತು ಸೌಡಪ್ಪ ಇಬ್ಬರೂ ಕೂಡಿ ಹುಣಸೆ ಹಣ್ಣು, ರಾಗಿ ಹಸಿಟ್ಟು, ಕೆಂಮಣ್ಣು ಇವುಗಳನ್ನು ಸೇರಿಸಿ ಹುಣಸೆ ಮೀನುಗಳಿಗೆ ಚನ್ನಾಗಿ ಉಜ್ಜಿ ಕವುಸು ತೆಗೆದು ಹಸುನು ಮಾಡಿ ಸಾರು ಮಾಡಲು ಎಂಟಮ್ಮನಿಗೆ ತಂದುಕೊಟ್ಟರು. ಭೀಮನನ್ನು ಉದ್ದೇಶಿಸಿ ಎಂಟಮ್ಮ“ನೋಡೋ ಭೀಮ” ಎನ್ನುತ್ತಾ ಮೊಮ್ಮಗನಿಗೆ ಮೀನುಸಾರು ಮಾಡುವ ವಿಧಾನವನ್ನು ತೋರಿಸುತ್ತಲೇ ಮೀನುಸಾರು ಮಾಡಲು ಶುರುಮಾಡಿದಳು. ಮೊದ್ಲು ಕಾರ ರುಬ್ಬೆಂಬೇಕು. ಕಾರುಕ ಮೆಣ್ಸುಕಾಯಿ, ಬೆಳ್ಳುಳ್ಲಿ, ಸುಟ್ಟಿರೋ ಈರುಳ್ಳಿ, ದಣ್ಯಾಲು, ಚಕ್ಕಿ, ಲವಂಗ, ಕೊಮಿರಿ, ಹುಣಿಸೆಣ್ಣು, ಸೊಂಟಿ ಹಾಕೆಂಬೇಕು. ಟೆಂಕಾಯಿ ಚಿಪ್ಪಿವ್ಯಾ ಕಿಚ್ಚಾಗ ಸುಟ್ಟಂದು, ಅದು ಚನ್ನಾಗಿ ಸುಟ್ಟಮ್ಯಾಲೆ ಅದು ಕೆಂಪ್ಗ ಇದ್ದಂಗೇನೆ ಅದನ್ನಾ ಒರ್ಲಾಕ ತಂದು ಹಾಕಿ, ಅದ್ರ ಮ್ಯಾಗ ಅರಲೆಣ್ಣಿ ಅಟ್ಬೇಕು. ಆವಾಗ ಅದು ಉಸೋ ಅನ್ನಂದು ತಣ್ಣುಗ ಆಗೇತಾದಿ, ಅವಾಗ ಎಲ್ಲಾನೂ ನುಣ್ಣುಗ ಚನ್ನಾಗಿ ರುಬ್ಬೆಂಬೇಕು. ರುಬ್ಬೆಂದಿದ್ದು ಆದಮ್ಯಾಕ, ಈರುಳ್ಳಿ ಕೋಯ್ದಂದು ಕರಿಬೇಸೊಪ್ಪು, ಸಾಸ್ವಿ ಹಾಕೆಂದು ತಿರುಪೋತುಕ ಹಾಕಿ, ಅದರಾಕ ರುಬೆಂದಿರೋ ಕಾರ್ವ ಕಲ್ಸಿ ಉಪ್ಪು ಹಾಕಿ ಶನ್ನಾಗಿ ಕುದಿಸೆಂಬೇಕು. ಹೆಸ್ರು ಗಮ್ ಅಂದ್ ಗಮ್ಲು ಬಂದ ಮ್ಯಾಕ ಮೀನ್ಗ್ಳು ಹಾಕಿ ಒಂದು ಕುದಿ ಕುದ್ಸಿ ಕೆಳಿಕ್ಕಿ ಇಳಿಸೆಂಬೇಕು' ಎಂದು ಒಂದೊಂದನ್ನು ಮೊಮ್ಮಗನಿಗೆ ವಿವರಿಸಿ ಹೇಳುತ್ತಲೇ ಮೀನುಸಾರು ಮಾಡಿದಳು. ಗಮಲನ್ನು ತಡೆದುಕೊಳ್ಳಲಾಗದ ಭೀಮ ಪಾತ್ರೆಗೆ ಕೈ ಹಾಕಿ ಒಂದು ಮೀನನ್ನು ಎತ್ತಿಕೊಂಡು ಬಾಯಿಗೆ ಬಿಟ್ಟುಕೊಂಡ. ಆಗಲೇ ಸಂಜೆ ಏಳು ಗಂಟೆ ಆಗುತ್ತಾ ಬಂದಿತ್ತು. ಮನೆಯವರೆಲ್ಲಾ ಸೇರಿ ಊಟ ಮಾಡಲು ಕೂತರು. ಎಂಟಮ್ಮ ಎಲ್ಲರಿಗೂ ಸಮನಾಗಿ ಏಡಿಕಾಯಿ ಮತ್ತು ಮೀನುಸಾರನ್ನು ಬಡಿಸಿದಳು. ಅಷ್ಟರಲ್ಲಿ ಎಂಟಮ್ಮನ ಮನೆಯಲ್ಲಿ ದೀಪಾವಳಿ ಹಬ್ಬದ ಕೊನೆ ಬಾಡುಚೀಟಿ ಕಟ್ಟೋಕೆ ಅಂತ ಪ್ರತಿ ತಿಂಗಳಿನ ಹಾಗೆ ಅವತ್ತು ಕೇರಿ ಜನ ಎಲ್ಲಾ ಬಂದು ಸೇರಿದರು. ಎಂಟಮ್ಮ ಬಾಡುಚೀಟಿ ಹಾಕಿಸುವುದರಲ್ಲಿ, ಸಂತೆಯಲ್ಲಿ ಕುರಿ ದನ ವ್ಯಾಪಾರವನ್ನು ಮಾಡುವುದರಲ್ಲಿ ಎತ್ತಿದ ಕೈ. ಅಷ್ಟೇ ಚನ್ನಾಗಿ ಪ್ರತಿ ವರುಷ ದೀಪಾವಳಿ ಹಬ್ಬಕ್ಕೆ, ಯುಗಾದಿ ಹಬ್ಬಕ್ಕೆ ಬಾಡುಚೀಟಿ ಕಟ್ಟಿರೋರಿಗೆ ಮೋಸ ಇಲ್ಲದಂಗೆ ಗುಡ್ಡೆ ಬಾಡನ್ನು ತನ್ನ ಗಂಡ ಸೌಡಪ್ಪನಿಂದ ಮಾಡಿಸುತ್ತಿದ್ದಳು. ಕೇರಿ ಜನಾನೂ ಗುಡ್ಡೆ ಬಾಡು ಮಾಡೋವಾಗ ಒಟ್ಟಿಗಿರೋರು. ಎಲ್ಲರೂ ಬಾಡುಚೀಟಿ ಹಾಕಿದ್ರೆ ಎಂಟಮ್ಮನ ಹತ್ರಾನೆ ಹಾಕಬೇಕು ಎನ್ನುತ್ತಿದ್ದರು. ಎಂಟಮ್ಮ ಚೀಟಿಕಟ್ಟಲು ಬಂದವರನ್ನು ನೋಡಿ ‘ಓ ಅವಾಗೆ ಸೀಟಿಕ ಟೇಮ್ ಆಗೇಯ್ತಾ... ಬನ್ರ್ಯಾ ಎಲ್ಲಾ, ಇವತ್ತು ಅಪ್ನು ಮಗ್ನು ಮೊಮ್ಮಕ್ಳು ಎಲ್ಲಾ ಹೋಗಿ ಶಾನ ಎಂಡ್ರುಕಾಯಿಗ್ಳುವ, ಮೀನುಗ್ಳುವ ತಂದ್ರು. ಶಾನ ಹೆಸ್ರು ಆಗೇದಿ. ಎಲ್ಲರೂ ತಿನ್ರ್ಯಾ’ ಅದ್ಲು. ಅವರು ‘ಅಯ್ಯೋ ಬ್ಯಾಡ ಎಂಟಕ್ಕೋ’ ಅಂದ್ರು. ಆದರೆ ಎಂಟಮ್ಮ ಬಿಡದೆ ಬಲವಂತದಿಂದ ಎಲ್ಲರಿಗೂ ಸಾರು ಹಾಕಿದ್ಲು. ಏಡಿಕಾಯಿ ಸಾರನ್ನು ಲೊಟಕ ಹಾಕಿಕೊಂಡು ತಿನ್ನುತಿದ್ದ ಚನ್ನಕಿಷ್ಣ ಇದ್ದುಕಂಡುಹೆಸ್ರು ಬಲೇ ಅದಿ ಎಂಟಕ್ಕೋ. ನಾನೂನು ನೆನ್ನಿ ಎಕ್ಣಗ್ಳು ತಂದಿದ್ನಿ, ನಮ್ಮೋಳು ಕೂಡ ಕೋಳಿ ಬಾಡ್ಕ ಹಾಕೋ ಮಸಾಲ ಹಾಕಿ ಬಲೇ ಶನ್ನಾಗಿ ಎಕ್ಣಸಾರು ಮಾಡಿದ್ಲು’ ಅಂದ. ಅದಕ್ಕೆ ಎಂಟಮ್ಮ ಹೌದೇನೋ ಶನ್ನಕಿಷ್ಣ, ನಮ್ಮಕ್ಕೊಂದು ಕೊಡ್ಕೂಡ್ದಾ ಸುಟ್ಟನ್ನೋಕ. ನನ್ ಸೊಸಿಕಿ ನಡುವು ನೋವಂತಿ. ನಡ್ವು ನೋವ್ಕ ಬಲೇ ಒಳೇದು ಎಕ್ಣ' ಎಂದಳು. ಇದನ್ನ ಕೇಳಿಸಿಕೊಳ್ಳುತ್ತಿದ್ದ ಭೀಮ ಇದ್ದುಕೊಂಡು ``ಈ ಎಕ್ಣುಗ್ಳುವ ಎಂಗಣ್ಣ ಚನ್ನಕಿಷ್ಣಣ್ಣ ಇಡಿಯೋದು ಹೇಳಣ್ಣೋ' ಅಂದ. ಚನ್ನಕಿಷ್ಣ ಎಕ್ಣಗಳನ್ನ ಹಿಡಿಯುವುದರ ಕುರಿತು ಹೇಳಲು ಶುರುಮಾಡಿದಮಳಿ ಬಿದ್ದು ಮಾರ್ನೆ ದಿನ ಹೋದ್ರೆ ಎಕ್ಣಗ್ಳುವ ಇಡೇಕ ಬಲೇ ಈಸಿ. ಮಳಿ ನೀರ್ ಬಕ್ಕಿಗ್ಳಾಕ ಹೋಗಿ ಬಕ್ಕಿಗ್ಳು ಮುಚ್ಚೋಗಿರ್ತಾವಿ. ಅದ್ಕ ಅವು ಸಲ್ಪ ಸಲ್ಪಾನೇ ಬಯ್ಲಾಗ ಬಕ್ಕಿಗ್ಳನ ತೋಡೆಂದಿರ್ತಾವಿ. ಆ ಬಕ್ಕಿಗ್ಳನ ಶನಿಕ್ಯಾಗ ರಸಿ ರಸೇ ಅಗ್ದರೆ ಸಾಕು ಸಿಕ್ಕೋತಾವಿ. ಬ್ಯಾರೆ ಟೇಮ್ಯಾಗ ಇಡಿಬೇಕಂದ್ರೆ ನೆಟ್ ಎಕ್ಣ ಬಕ್ಕಿಗ್ಳುವ ತಡ್ಕಿ, ಅವು ತೋಡೆಂದು ಹೋಗಿರೋ ಬಕ್ಕಿಗ್ಳುಕ ಮಣ್ಣು ಬರ‍್ರುಗ ತುರ್ಕಬೇಕು. ದೊಡ್ಡ ಬಕ್ಕಿ ಇರೋದ್ನ ನೋಡಿ ಅದ್ಕ ಊದುರು ಮಡಿಕಿಂದ ಊದುರು ಇಕ್ಕಬೇಕು. ಇತ್ತುಗ ಊದುರು ಇಕ್ಕತಾ ಇದ್ರೆ ಮುಚ್ಚಿರೋ ಒಂದೊಂದು ತೋಡಾಗೂನು ೧೦-೧೫ ಎಕ್ಣಗ್ಳು ಈಸಿಕಿ ಗುದ್ದುತಾವಿ, ಅವಾಗ ಅವ್ನ ಹೊಡ್ದು ಹಿಡತಂಬೋದು. ಇಲ್ಲಾ ಬಕ್ಕಿಗ್ಳುಕ ಗೋಣಿ ಹಾಕಿ ಅವ್ನ ಇಡಿಬೋದು. ಸಾರುಕ್ಕಿಂತ ಇವ್ನ ಉಪ್ಪು ಕಾರ ಹಾಕೆಂದು ಸುಟ್ಟಂದು ತಿಂದ್ರೆ ಬಲೇ ರುಚಿ’ ಅಂದ ಚನ್ನಕಿಷ್ಣ. ಇದನ್ನ ಕೇಳಿಸಿಕೊಳ್ಳುತ್ತಾ ಚೀಟಿ ಕಟ್ಟೋಕೆ ಕಾಯುತ್ತಿದ್ದ ದದ್ದೀಮಪ್ಪನ ಬಾಯಿಂದ ನೀರು ಸುರೀತಿತ್ತು.
ಊಟ ಮಾಡುತ್ತಿದ್ದ ಭೀಮ ಚನ್ನಕಿಷ್ಣನನ್ನು ನೋಡ್ತಾ ಅಣ್ಣೋ ನಾವು ಈ ಹಬ್ಬ ಮುಗಿಸೆಂದು ಹೋಗಿ ನಾಲ್ಕು ಐದು ತಿಂಗ್ಳ ಬುಟ್ಟಂದು ಬತ್ತೀರಿ. ಅವಾಗ ಎಕ್ಣಗ್ಳುವ ಇಡಿಯೋಕ ಹೋಗಾನ' ಅಂದ. ಇದನ್ನು ಕೇಳಿಸಿಕಂಡ ಎಂಟಮ್ಮ.ಲೇ ತಲಿಕಿಂದ್ಲು ಮೊಮ್ಮಗನೇ ಯಾವಾಗ ಅಂದ್ರೆ ಅವಾಗ ಎಕ್ಣುಗ್ಳುವ, ಮೀನುಗ್ಳುವ, ಎಂಡ್ರಕಾಯಿಗ್ಳುವ ಇಡೀಕ ಆಗಲ್ಲಪ್ಪ, ಉಬ್ಬಿ ಮಳ್ಯಾಗ, ಮಗ್ಗಿ ಮಳಿ, ಸಣ್ಣಸಿಲಿ ಮಳಿ, ದೊಡ್ಡಸಿಲಿ ಮಳ್ಯಾಗ ಅವು ನಂಮ್ಮಂಗೆ ಮಕ್ಕಳು ಮರೀನಾ ಮಾಡೋಟೇಮು. ಅವಾಗ ಇಡೀಕೂಡದು’ ಅಂದ್ಲು. ಇದನ್ನು ಕೇಳಿಸಿಕೊಂಡ ಚನ್ನಕಿಷ್ಣ ಹೌದೌದು, ಇಡೇದು ಎಲ್ಲಾದ್ರೂ ಉಂಟಾ. ಅದು ಪಾಪ್ದ ಕೆಲ್ಸ. ಭೀಮ, ಒಂದು ಕೆಲ್ಸ ಮಾಡು ಉಗಾದಿ ಹಬ್ಕ ಬಂದುಬುಡು, ಎಕ್ಣಗ್ಳುವ ಇಡೇದು ಹೇಳಿಕೊಡ್ತೀನಿ' ಎಂದ. ಭೀಮ ಸರಿ ಎನ್ನುವಂತೆ ತನ್ನ ಅಜ್ಜಿ ಮುಖಾನ ನೋಡ್ತಾ ತಲೆ ಅಲ್ಲಾಡಿಸಿಅಂಗ್ಯಾದ್ರೆ ನಾವು ಉಬ್ಬಿಮಳಿ ಮಗ್ಗಿಮಳ್ಯಾಗ ಬರೀ ಸೊಪ್ಪು ತಿನ್ನಬೇಕಾ’ ಎಂದ. ಅದಕ್ಕೆ ವೆಂಕಟಮ್ಮ‘ಸೊಪ್ಪು ಹೆಸ್ರು ಅಂದ್ರೆ ತಾಶಾರು ಮಾಡಬ್ಯಾಡಪ್ಪೋ, ನೂರೊಂದು ಬೆರ್ಕಿ ಸೊಪ್ಪು ತಂದು, ಸೊಪ್ಪು ಹೆಸ್ರು ಮಾಡಿದ್ರೆ ಎಂಥಾ ಕಾಯ್ಲಾ ಇದ್ರು ಒಳ್ಟೋತಾದಿ’ ಎಂದಳು. ಅದಕ್ಕೆ ಚನ್ನಕಿಷ್ಣ ಬೆರ್ಕಿ ಸೊಪ್ಪು ಹೆಸ್ರು ಸುಟ್ಟು ಮಾಡು ಇದ್ದು, ನಂಜಂದು ತಿಂದ್ರೆ, ಏನ್ ಹೇಳ್ತೀಯಾ ಎಂಟಕ್ಕ ಸರ್ಗ ಮೂರೇ ಗೇಣು. ನಮ್ ದೊಡ್ಡತ್ತಿ ಏನ್ ಶನ್ನಾಗಿ ಓಣಬಾಡು ಮಾಡ್ತಾಳಿ ತಿಳಿಕ್ಕಾ? ಏಸು ಬಾಡು ಇದ್ರೂನೂ ಇಸ್ಕೇಲು ಮಡಿಗಿ ಕೊಯ್ದಂಗಿ ಕೊಯ್ದು ಕಣ ಕಣ ಅನ್ನೋ ಅಂಗಿ ಓಣಗಾಕಿ ಮಡ್ಕಿಕ್ಯಾ ಹಾಕಿ ಮಡ್ಗತಾಳಿ. ನಾವು ಇಟ್ಟು ತಿನ್ನೋವಾಗೆಲ್ಲಾ ಕೆಂಡ್ಗಳ ಮ್ಯಾಗ ಹಾಕಿ ಸುಟ್ಟಂದು ತಿಂತೀರಿ' ಅಂದ. ಇದನ್ನು ಕೇಳಿಸಿಕೊಳ್ಳುತ್ತಿದ್ದ ತಿಂಡಿಪೋತ ಭೀಮ ಒಣಬಾಡು ಕನಸು ಕಾಣುತ್ತಾ ಬಾಗಿಲಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದ. ಚೀಟಿ ಕಟ್ಟೋಕೆ ಬಂದೋರು ಮನೆತುಂಬಾ ಇದ್ದಿದ್ದರಿಂದ ಮನೆ ಪೂರ್ತಿ ತುಂಬಿತ್ತು. ಎಂಟಮ್ಮ ಭೀಮನನ್ನು ನೋಡಿಲೇ ಭೀಮ ದಾಲಬಂದ್ರ ಮ್ಯಾಲಿ ಕೂತು ತಿನ್ನಬ್ಯಾಡೋ, ಇಲ್ಲಿ ಬಂದು ತಿನ್ನು’ ಅಂದ್ಲು. ಅದಕ್ಕೆ ಭೀಮ ಏನಜ್ಜಿ ಯಾವಾಗ ನೋಡಿದ್ರು ಏನೋ ಒಂದು ಹೇಳ್ತಾ ಇರ್ತೀಯಾ, ಅದು ಅಂಗ ಮಾಡಬ್ಯಾಡ ಇದು ಇಂಗ ಮಾಡಬ್ಯಾಡ ಅಂತೀಯಾ, ದಾಲಬಂದ್ರ ಮ್ಯಾಗ ಕೂತಂದ್ರೆ ಏನು ಆತಾದಿ? ಏನೂ ಆಗಲ್ಲ ಸುಮ್ಮನಿರು. ನಮ್ಮ ಅಮ್ಮನ ಅಂಗ್ಯಾ ನೀನೂ ಗೊಣ ಗೊಣ ಅಂತಾನೇ ಇರ್ತೀಯಾ' ಅಂದ. ಅದಕ್ಕೆ ಎಂಟಮ್ಮನುಅಲ್ಲೋ ಮೊಮ್ಮಗನೆ ನೀನು ಪ್ಯಾಟ್ಯಾಗ ಸೇರೆಂದ್ಯಾ ಅಂತ ದೊಡ್ಡೋರು ಮಾಡಿರೋ ರೀತಿ ರಿವಾಜುನ ಬಿಡೋಕಾತಾದ್ಯಾ? ಎಲ್ಲಕೂ ರೀತಿ ರಿವಾಜು ಪಬ್ಬತಿ ಅನ್ನೋದು ಅದಿ. ಇಂತದ್ಕ ಇಲ್ಲ ಅನ್ನಂಗಿಲ್ಲ. ಹುಟ್ಟೋದ್ರಿಂದ ಸಾಯೋವರ್ಕು ಎಲ್ಲಾನೂನು ಒಂದೇ ಸಮ್ಕ ನಡೆಯೋದು, ಒಂದೇ ಯೇಗದಾಗ ನಡೆಯೋದು. ನೀನು ಇಲ್ಲಿ ತಕದಿಮಿ ಅಂತಾ ಇದ್ಯಾ ಅಂದ್ರೆ ಜಗತ್ತೆಲ್ಲಾ ಅಂಗೇ ಇರಲ್ಲ. ದಾಲಬಂದ್ರ ಅಂದ್ರೆ ಏನು ಅಂತ ಅನ್ನಂದಿದ್ಯಾ, ಮನಿಕ್ಯಾ ತಾಯಿ ಇದ್ದಂಗ್ಯಾ, ತಾಯಿಕ ತಲಿಮಗನು ನೀನು, ದಾಲಬಂದ್ರ ಮ್ಯಾಗ ಕೂತಂದ್ರೆ ಅಮ್ಮನ ಎದಿ ಮ್ಯಾಗ ಕೂತಂದಂಗ್ಯಾ, ಎದಿ ಮ್ಯಾಲಿ ಕೂತಂದ್ರೆ ಆ ತಾಯಿಕ ಏಸು ನೋವಾತಾದಿ… ಹಗಲು ಅಂದೀರಾ, ರಾತ್ರಿ ಅಂದೀರಾ ನಮ್ಮ ಮನಿ ಕಾಯ್ತಾಳೇ. ದಾಲಬಂದ್ರ ಮ್ಯಾಗ ಕೂತಂದ್ರೆ ಮದ್ವಿ ಆಗಲ್ಲನೋ’ ಅಂದ್ಲು.
ಅದಕ್ಕೆ ಭೀಮ ಇದ್ದುಕಂಡು ಓ ಬುಡಜ್ಜೇ... ರೀತಿ ರಿವಾಜು ಮದುವಿಕ್ಯಾ ಏನ್ಕ ಬೇಕು. ನಾನು ಓದೋದು ಮುಗೀಲಿ ಇರು, ಒಬ್ಬ ಹುಡುಗೀ ನನ್ನ ಜತಿ ಬರಾಗ ರಡಿ ಅವ್ಳೆ, ಕರಕಂಬಂದ್ಬುಡುತೀನಿ' ಅಂದ.ನೀನು ಯಾರನಾನ ಕರಕಂಬಾ, ಯಾವ ಜಾತ್ಯಾದ್ರೆ ಏನು? ಯಾವ ಕುಲ ಆದ್ರೆ ಏನು? ಅವ್ಳು ಮನುಸುಳೇ ಅಲ್ಲಾ. ಬ್ಯಾರೆ ಜಾತ್ಯೋಳು ಅಂತ ಮಕ್ಕಳು ಆಗಲ್ಲ ಅಂತಾದೇನು? ಕರಕಂಬಂದ್ರೂ ನೀನು ನಮ್ಮ ಪಬ್ಬತಿ ಪಕಾರ ಮದ್ವಿ ಆಗಬೇಕು ಅಷ್ಟೆ. ಇಲ್ಲ ಅಂದ್ರೆ ಅರ್ಸಿನ್ ನೀರ್ ಕಾಣ್ದಾ ಹೋದೋನು ಅಂತ ಜನ ಆಡೆಂತಾರಿ ಲೇ. ನಮ್ಕ ಅವಮಾನ ಅದು. ಮದ್ವಿ ಅಂದ್ರೆ ಏನು ಅನ್ನಂದಿದ್ಯಾ, ಮದ್ವಿ ಆಗೋಕು ಕೇಳೆಂದು ಬಂದಿರ್ಬೇಕು. ಅದು ಮಕ್ಕಳ ಆಟನಾ?’ ಅಂದ್ಲು ಎಂಟಮ್ಮ.
ಅದಕ್ಕೆ ಭೀಮ ಏನು ಮದ್ವಿ? ಹುಡ್ಗಿ ಕತ್ತಾಕ ದಾರ ಗಂಡಾಕೋದಾ?' ಎಂದ. ಅದಕ್ಕೆ ಎಂಟಮ್ಮಮದ್ವಿ ಅಂದ್ರೆ ಸುಮ್ನೆ ಅಲ್ಲಾ, ಮಾವು ನೇರ್ಳಿ, ಏಳಿ ರೆಂಬೆಗ್ಳುವ ಹಾಕಿ ಸಪ್ಪರ ಹಾಕ್ಬೇಕು. ಜಂಬುನೇರ್ಳಿ ಅಸಿ ಕಂಬ ಊಣಿ ಅದ್ಕ ನವದಾನ್ಯದು ಅರ್ಸಿನ ಬಟ್ಟಿ ಮಾಡಿ ಕಟ್ಬೇಕು. ಸಪ್ಪುರ್ಕ ಬಾಳಿಗೊನಿ, ಎಳ್ನೀರು ಕಟ್ಬೇಕು. ನೆಲ್ಲು ಕುಟ್ಟಿ ಕರಿ ಕಂಬ್ಳಿ ಮ್ಯಾಗ ಅಸಿ ಬಸ್ಬೇðಕು. ಕಳ್ಸ ಪೂಜಿಸ್ಬೇಕು. ಕಂಸ್ಹು ತಟ್ಟಿ ಇಕ್ಕಿ, ಅದ್ರಾಗ ಒಣ ಗೊಬ್ರ ಅರ್ಡಿ, ಅದರ ಮ್ಯಾಲಿ ಕಳಸಶಂಬು ಇಕ್ಬೇಕು. ಮದ್ವಿ ಹೆಣ್ನೀಂದ ಗೊಬ್ರ ಅರ್ಡ್ಸಿ ಅದ್ರ ಮ್ಯಾಲಿ ನವದಾನ್ಯಗ್ಳ ಮಳ್ಕಿ ಹಾಕ್ಸಿ, ಅರಿಣಿ ಪೂಜಿ ಮಾಡ್ಸ್ಬೇಕು. ಮುಂಡಿ ಹೆಂಗ್ಸು ಕೈಯಾಗ ಅರಿಣಿ ಗಡ್ಗಿ ಮ್ಯಾಲಿ ದೀಪ ಅಂಟ್ಸಿ, ಇಡೀ ರಾತ್ರೆಲ್ಲಾ ಅವ್ಳೇ ಆ ದೀಪ ಆರದಂಗಿ ನೋಡೆಂಬೇಕು. ಕೊನೇಕ ಮುತೈದಿ ಕಡಿಂದ ಕಳ್ಸ ತೊಳ್ಸ್ಬೇಕು. ಈಸು ಆದರೆ ಅದೊಂದು ಮದಿವಿ ಅನಿಸೆಂತಾದಿ’ ಅಂದ್ಲು.
ಬಾಡುಚೀಟಿ ಕಟ್ಟೋಕೆ ಬಂದು, ಅಜ್ಜಿ ಮೊಮ್ಮಗನ ಯಾವಾರ ಕತೇನ ಕೇಳಿಸಿಕೊಳ್ಳುತ್ತಿದ್ದ ಮಂಜಮ್ಮ ಎಂಟಕ್ಕ ನಿಮ್ಮ ಕತಿವ್ಯಾ ಅಮ್ಯಾಕಿಕ್ಕೆನ್ರಾ, ಮೊದ್ಲು ನನ್ನ ಸೀಟಿ ಕಾಸುಗ್ಳುವ ತೆಗುದಾ, ಮನ್ಯಾಗ ತುಂಬಿದ ಬಸುರೆಂಗ್ಸುವ ಬುಟ್ಟು ಬಂದಿದ್ನಿ. ನಾಡಿದ್ದು ಎರಿಗಿಸಾಂಗ್ವಿ ನನ್ನ ಸೊಸಿಕಿ. ನಿನ್ಕ ಮನ್ನೇನೇ ಹೇಳಿದ್ನಲ್ಲಾ..ಒಂಬತ್ತು ವಸಿಕಿ ಹಾಕಬೇಕು ಅಂತಾ. ಚಕ್ಕಲಿ, ಸಿಮುಲುಂಟಿ ಮಾಡಿದ್ನಿ. ಉಳಿದಿದ್ದು ನೀವೇ ಯಾರಾನಾ ಬಂದು ಮಾಡಬೇಕಕ್ಕೋ' ಎಂದಳು. ಅದಕ್ಕೆ ಅಲ್ಲಿ ಇದ್ದ ಊರುಕುಂಟೆಮ್ಮಅಯ್ಯೋ ಎಲ್ಲರೂ ಸೇರಿ ಒಂದೊಂದು ಮಾಡಿದ್ರೆ ಆಯ್ತು ಬುಡು ದೋ, ಅದ್ಕ ಯಾಕ ಆಸು ಟೆನ್ಸನ್ನು’ ಅಂದ್ಲು.
ಮಂಜಮ್ಮನು ಊರುಕುಂಟೆಮ್ಮನನ್ನು ಕುರಿತು ಹೌದು ಊರುಕುಂಟೆಮ್ಮ, ಏನು ನಿಮ್ ಮನಿ ಹತ್ರ ಮನ್ನಿ ಜಗ್ಳಾ? ನೆನ್ನೇ ಕೇಳಾನ ಅನ್ನಂದು ಸುಮ್ಮನೇ ಆದ್ನಿ' ಅಂದ್ಲು. ಊರುಕುಂಟೆಮ್ಮಅಯ್ಯೋ ಅಂದೊಂದು ದೊಡ್ಡ ಕಥಿ ಆಗೇಯ್ತು ಮಂಜಮ್ಮ. ಮಂತಿ, ಏನಂತಂದ್ರೆ ನನ್ನ ಮಮ್ಮಗ್ಳು ಮನ್ಯಾ ವಯ್ಸ್ಕ ಬಂದಿದ್ಲಲ್ಲಾ, ಅವರ ಸಣ್ಣ ಸ್ವಾದರ ಮಾಮನು ಕೈಯಾಗ ಗುಡಸ್ಲು ಹಾಕಿಸಿದ್ರಿ. ಒಂಬತ್ತು ದಿನ ವಸಿಕಿಗ್ಳು ಆದ ಮ್ಯಾಲಿ ಅವ್ನ ಕೈಯಾಗೇ ಗುಡುಸುಲ್ವಾ ಕಿಳಿಸಿದ್ರಿ. ಅದ್ಕ ಅವ್ರ ದೊಡ್ ಸ್ವಾದರ ಮಾಮುನು ಬಂದು ನಾನು ದೊಡ್ ಸ್ವಾದರ ಮಾಮನು ಇರೋವಾಗ ನಾನು ಮಾಡಬೇಕಾಗಿರೋ ಶಾಸ್ತ್ರವ ಇನ್ನೊಬ್ಬರ ಕೈಯಾಗ ಎಂಗಿ ಮಾಡಿಸಿದ್ರಿ ಅಂತ ಜಗ್ಳ ಮಾಡಿದ್ನು’ ಅಂದ್ಲು.
ಅದಕ್ಕೆ ಮಂಜಮ್ಮ ಅಯ್ಯೋ ಆ ಕುಡುಕುನ ಮಾತು ಏನು ಬುಡು, ಅವುö್ನ ಯಾವಾಗೂನೂ ಅಂಗೆ. ಅವುö್ನದು ಇದ್ದಿದ್ದೆ.' ಎಂದಳು. ಊರುಕುಂಟೆಮ್ಮನಾಳಿ ಎರಿಗಿಸಾಂಗ್ವಿಕ ನಾನು ಒತೀನೆ ಬಿರ್ನಾ ಬತ್ತೀನಿ ಬುಡು, ಹೆರಿಗಿ ಸಾಂಗ್ವಿಕಿನ್ನಾ ಬಾಳಂತಿ ಸಾಂಗ್ವಿ ಚನ್ನಾಗಿ ಮಾಡ್ಬೇಕು ಮಂಜಕ್ಕ. ತಾಯಿ ಮಗೂಕ ಬೇವು ಸೊಪ್ಪು, ಅರಿಸಿನ ರುಬ್ಬಿ ಮೈಕೆಲ್ಲಾ ಇಕ್ಕಿ, ಈಪ್ಲೀಸು ಸೊಪ್ಪು, ಬೇವು ಸೊಪ್ಪು, ಮಾವು, ಏಳಿ, ನಿಂಬಿ, ಕೂನು ಸೊಪ್ಪು ನೀರಾಕ ಹಾಕಿ ಶನ್ನಾಗಿ ಕಾಸಿ ನೀರಟ್ಟಬೇಕು. ಅದು ಬಲೇ ಒಳ್ಳೇದು ನೋಡು ತಾಯಿ ಮಗೂಕ ಮಂಜಕ್ಕ’ ಅಂದ್ಲು. ಊ ಊರುಕುಂಟೆಮ್ಮೋ ನಾನು ಮಾತ್ರ ಯಾವ ಸಾಂಗ್ವಿಗ್ಳುವೂ ಬುಡಲ್ಲ, ನಮ್ಮ ಪಬ್ಬತಿವ್ಯಾ ನಾವು ಬುಡೋಕಾತಾದ್ಯಾ' ಅಂದ್ಲು ಮಂಜಮ್ಮ. ಇದನ್ನು ಕೇಳಿಸಿಕೊಳ್ಳುತ್ತಿದ್ದ ಎಂಟಮ್ಮಹೌದು ಲೇ ಮಂಜಮ್ಮ ಈ ಸರಿ ಯಾವ ಮಗ್ವಾನಾ ಹುಟ್ಲಿ ಅತ್ಗಾ ಆಪ್ರೀಸುನು ಮಾಡಿಸಾಕು. ಮನ್ಯಾಗ ಯಾವೋನು ಏನಾನ ಅನ್ನನ್ಲಿ, ತಲಿಕೆಡಿಸೆಂಬ್ಯಾಡ. ನಿನ್ನ ಸೊಸಿ ಶಾನ ಯೀಕು ಅವ್ಳಿ ಪಾಪ. ಇಂತ ಕಾಲಬಂದೂ ಮೂರು ನಾಲ್ಕು ಮಕ್ಳು ಆದ್ರೆ ಶನ್ನಾಗಿರಲ್ಲ. ಮೊದ್ಲು ಮಗೂಕ ಎರ್ಗಿಕ್ಯಾ ಆಸ್ಪತ್ರಿಕ್ಯಾ ಹೋದ್ರು ನಿನ್ನ ಸೊಸಿ ಏನು ಬಾದಿ ಬಿದ್ಲು ಪಾಪ. ನಾನೆ ಕಣ್ನಾರೆ ನೋಡಿದ್ನಿ. ಯಾವ ಡಾಕ್ಟರು ಏನು ಮಾಡಕ್ಕಾಗದೀರಾ ತೋಟಿ ಮುನೆಮ್ಮನ್ವ ಕರ್ಸಿ ಕಾನ್ಪು ಮಾಡಿಸಿದ್ರು’ ಎಂದಳು.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮ ತೋಟಿ ಮುನೆಮ್ಮನು ಅಂದ್ರೆ ಬಗ್ಗೆಂದು ಒಡ್ಯಾಡ್ತಾಳಲ್ಲಾ ಆಯಜ್ಜ್ಯಾ? ಆ ಗುಡುಗುಡು ಅಜ್ಜಿ ಏನ್ ಮಾಡ್ತಾಳಿ?' ಅಂದ. ಅದಕ್ಕೆ ಎಂಟಮ್ಮಹೌದು ಅವ್ಳೆ, ಅಯ್ಯೋ! ಅವ್ಳು ಕಾನ್ಪು ಮಾಡುಸೋದ್ರಾಗ ಬಲೇ ಗಟ್ಟೋಳು. ನೀನು ಅಡ್ಡಡ್ಡ ತಿರುಗಿಕಂಡು ಇದ್ದಾಗ, ಎರ್ಡು ದಿನ ಕಾನ್ಪೇ ಆಗಿಲ್ಲಾ. ನೀನು, ನಿಮ್ಮ ಅಮ್ಮನು ಸಾಯ್ತೀರೋ ಬದ್ಕತೀರೋ ಅಂದಂದಿದ್ರಿ. ಸರೀಗ ತಿರ್ಗ್ಸಿ ನಿನ್ನನ್ನಾ ಈಸಿಕಿ ಎಳದಾಕಿದ್ದು. ನೀನು ಅಳ್ಳದೀರಾ ಇದ್ದಾಗ ತಿಕ ಮ್ಯಾಲಿ ಬಿಟ್ಟು ಅಳಿಸಿ ಬದ್ಕಿಸಿದ್ಲು. ನಿಮ್ಮ ಅಪ್ನು ತಲಿ ಇಕ್ಕುದೀರಾ ತಿಕ ಕೆಳಕಿಕ್ಕಿ ಅಂದು ಬಂದಿದ್ನು. ಅವಾಗ ನಾನು ಸತ್ನಿ, ಮಗೂನು ಸತ್ತತು ಅಂದನ್ನಿ. ಆದ್ರೂ ಏನೂ ಮಾಡಿ ಕಾನ್ಪು ಮಾಡಿಸಿದ್ಲು. ನರುಸಮ್ಮನೋರುಕ ಹೇಳಿಕೊಡೋಕ ತೋಟಿ ಮುನಿಮ್ಮನ್ವ ಕರದಂದು ಹೋತಾರಿ. ಆಸು ಏಸ್ಪರ್ಟು ಆಯಮ್ಮನು. ಕಾನ್ಪು ಮಾಡುಸೋದ್ರಾಗ. ಈವಾಗ ಆಯಮ್ಮನು ಸೊಸಿ ಕೂಡ ಅದೇ ಕೆಲ್ಸ ಮಾಡ್ತಾಳಿ’ ಎಂದಳು. ಇದನ್ನು ಕೇಳಿ ಎಲ್ಲರನ್ನೂ ನೋಡ್ತಾ ಭೀಮ ಮಜುಗರದಿಂದ ತಲೆತಗ್ಗಿಸಿ ನಾಚಿಕೊಂಡ.
ಎಂಟಮ್ಮ ಮಂಜಮ್ಮನಿಗೆ ಹುಟ್ಟಿದ್ ಮ್ಯಾಕ ಸ್ವಾದರತ್ತೇನೇ ಮಗ್ವು ಕಿವ್ಯಾಗ ಹೆಸ್ರು ಹೇಳ್ಬೇಕು. ಅದು ಮುಕ್ಕಿವು ನಮ್ಕ, ಅದ್ಕ ಮುಳಬಾಗುಲ್ಕ ಕೊಟ್ಟಿದ್ರಲ್ಲಾ ನಿನ್ನ ಮಗ್ಳು, ಸುಶೀಲಿವ್ಯಾ ಎಂಗಾನಾ ಮಾಡಿ ಕರಕಂಬಾ. ಅವುö್ಳ ಇಲ್ಲಿಕ್ಯಾ ಬಂದು ಒಂದು ವರ್ಸ ಆಯ್ತು. ನೋಡ್ಬೇಕು ಅನ್ಸ್ತಾ ಅದಿ. ಅವುö್ಳಕ ಯಾವಾಗೂನೂ ಕೆಲ್ಸ ಕೆಲ್ಸ..ಮದಿವ್ಯಾಗ ಕೊಡೋಕು ತೆಗಿಯೋಕು ಗಂಡ್ಸ್ರು ಗಂಡ್ಸ್ರು ಏಜ್ವಿ ಆಡಿದ್ರು ಅಂತ ಆ ಹೆಣ್ಣು ಮಗ್ವು ಏನು ಮಾಡ್ತಾದಿ? ಏಸು ನ್ಯಾಯುಗ್ಳುವ ಮಾಡಿಸಿದ್ನಿ ನಾನೆ, ಅವುö್ಳ ಕೈಯಾಗೆ ಈ ಸರಿ ಅವುö್ಳ ಅಳೀನ್ದು/ಸೊಸಿದೋ ಹೆಸ್ರು ಹೇಳ್ಬೇಕು. ಯುಗಾದಿಕ್ಯಾ ಮೊದ್ಲು ಮಗೂಕ ಮುಂದ್ಯಾವ್ರ ಮಾಡ್ಬೇಕು. ಅವಾಗೆ ಹೆಸ್ರು ಇಕ್ರ್ಯಾ. ಮಗ್ವ ಮುಂದಲೆ ಕೂದ್ಲು ಮಾವುನು ಕತ್ತರಿಸಿ ಮುನೇಶ್ವರ್ನ್ಕ ಇಕ್ಕುಬೇಕು ಅಲ್ಲಾ, ಅದ್ಕ ಸುಶೀಲಿ ಗಂಡನ ಕೈಯಾಗ ಅದ್ವ ಮಾಡ್ಸು. ದ್ಯಾವ್ರಕ ನಮ್ಮನು ಕರುದ್ರು, ನಮ್ಮ ಕೈಯಾಗೇನೆ ಎಲ್ಲಾನು ಮಾಡಿಸಿದ್ರು ಅಂತಾನೂ ಅವುö್ರಕ ಅನ್ಸುತಾದಿ ಸಂಬಂಧಗ್ಳು ಸರಿಹೋತಾದಿ' ಅಂದ್ಲು. ಇದನ್ನು ಕೇಳಿಸಿಕೊಳ್ಳುತ್ತಿದ್ದ ಭೀಮಅಜ್ಜಿ ಮುಂದ್ಯಾವ್ರ ಹೆಂಗಿ ಮಾಡೋದು?’ ಅಂದ. ಅದಕ್ಕೆ ಎಂಟಮ್ಮ ಊರು ಆಶಿಕ್ಯಾ ಇರೋ ತೋಪಾಗ ಏಳು ಜನ ಅಕ್ಕ ತಂಗೀರ್ಕ ಗುಡಿ ಕಟ್ಟಿ, ಅದ್ರು ಮುಂದಿ ಮುನೇಶ್ವರ್ನು ನಿಲ್ಲಿಸಿ, ಜೋಡಿ ಕೋಳಿ ಕೋಯ್ದು ಪೂಜಿ ಮಾಡ್ಬೇಕು. ಈ ಪೂಜಿಕ್ಯಾ ಕಣಗಿಲಿ ಸೊಪ್ಪು, ನೆಕ್ಕಿಲಿ ಸೊಪ್ಪು ಬೇಕೇ ಬೇಕು. ಸ್ವಾದರ ಮಾಮುನು ಮಗೂಕ ಮುಂದಲಿ ಕೂದ್ಲು ಕತ್ತರ್ಸಿ ಮುನೇಶ್ವರ್ನಕ ಇಕ್ಕಿ ಪೂಜಿ ಮಾಡ್ತಾನಿ. ಮಕ್ಕಳ್ಕ ಮುಂದ್ಯಾವ್ರ ಮಾಡ್ಸುದೀರಾ ಇದ್ರೆ ತೊಂದಿರಿ ಆತಾದಿ. ಮಗೂಕ ಮೊದಲು ದ್ಯಾವ್ರ ಇದು. ನಿನ್ಕೂ ಈ ದ್ಯಾವ್ರವ ಉಗಾದಿ ಬಂದುಬುಡುತು ಅಂತ ಮೂರು ದಿನ ಮುಗ್ವುಕೇ ಮಾಡಿದ್ರಿ' ಅಂದ್ಲು. ಎಂಟಮ್ಮ ಎಲ್ಲರ ಹತ್ತಿರ ಬಾಡು ಚೀಟಿಯ ಕಾಸುಗಳನ್ನು ತೆಗೆದುಕೊಂಡು ಬರೆದುಕೊಂಡಳು. ಅರುಣಪ್ಪ ಲೇಟಾಗಿ ಬಾಡು ಚೀಟಿ ಕಟ್ಟಲು ಬಂದ. ಎಂಟಮ್ಮ ಅರುಣಪ್ಪನನ್ನು ನೋಡಿಯಾಕೋ ಅರುಣ ಮನೆ ಒಳಕ್ಯಾ ಬರದೀರಾ ಅಟ್ಯಾಗ್ಯಾ ಇದ್ಯಾ? ಒಳಿಕ್ಯಾ ಬಾ’ ಅಂದ್ಲು. ಅದಕ್ಕೆ ಅರುಣಪ್ಪ ಎಂಟಕ್ಕೂ ನಾಚಪಲ್ಲಿನಾಗ ನಮ್ಮ ಮುನೇಶನೋರು ಅಪ್ಪುನು ಕರೋನಾ ಬಂದು ಸತ್ತೋಗಿ ಬುಟ್ನು ಪಾಪ. ಸಾವ್ಕ ಹೋಗಿದ್ನಿ. ಕರೋನಾ ಬಂದು ಸತ್ತೋದ್ನು ಅಂತ ಯಾರೂ ಹತ್ರಾನೇ ಬರಿಲ್ಲ. ನಾನೇ ಚಟ್ಟ ಚನ್ನಾಗಿ ಕಟ್ಟಿದ್ನಿ. ಎಂಟೇಸುನು ಬಿದ್ರು ಬೊಂಬುಗ್ಳು, ನೆಲ್ಲು ಹುಲ್ಲು, ಸಾವು ಸಾಮಾನು ತಂದ. ಇಬ್ಬರೂ ಸೇರಿ ಸಾಂಗ್ವಿ ಮಾಡಿದ್ರಿ. ಈವಾಗೆ ಬಂದ್ವಿ ಎಂಟಕ್ಕೂ, ಇನ್ನೂ ನೀರು ಅಟ್ಟಂದಿಲ್ಲ ಅದ್ಕೆ ಮನ್ಯಾಕ ಬರಲ್ಲ' ಅಂದ. ಎಂಟಮ್ಮಹೋಗಲಿ ಬುಡು ಅರುಣಪ್ಪ ನಿನ್ಕ ಪುಣ್ಯ ಬತ್ತಾದಿ. ಕರೋನಾ ಬಂದು ಸತ್ತೋದ್ರೆ ಜನ ಬಲೇ ಕೆಟ್ಟುದಾಗಿ ನೋಡ್ತಾರಿ. ನೀನು ಹೋಗಿ ಸಾಂಗ್ವಿ ಮಾಡಿದ್ಯಾ, ತಣ್ಣುಗ ಕಳಿಸಿಕೊಟ್ಟ್ಯಾ, ಹೋಗ್ಲಿ ಬುಡಪ್ಪ ನೀನು ತಣ್ಣಗಿರು’ ಅಂತ ಹೇಳಿ ಅರುಣಪ್ಪನಿಂದ ಬಾಡು ಚೀಟಿಕಾಸು ತೆಗೆದುಕೊಂಡಳು.
ಮಂಜಮ್ಮನು ಸರಿ ಎಂಟಕ್ಕೂ ನಾನು ಬತ್ತೀನಿ. ನಾಳಿ ಎರ್ಗಿ ಸಾಂಗ್ವಿಕ್ಯಾ ಎಲ್ರೂ ಬನ್ರೆ' ಎಂದು ಹೇಳಿ ಹೊರಟಳು. ಭೀಮ ಇದ್ದುಕಂಡುಆ ರ‍್ರೆ ರ‍್ರೆ ಅಕ್ಕೋ.. ನಾನೂ ಬತ್ತೀನಿ’ ಅಂತ ಜೋರಾಗಿ ಕೂಗಿದ. ಎಲ್ಲಿ ಏನು ಸಿಗುತ್ತೆ ಅಂತ ಕಾಯುವ ತಿಂಡಿಪೋತ ಜಾಣ ಭೀಮನ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕರು. ಹೀಗೆ ಎಂಟಮ್ಮನ ಮನೆಗೆ ಚೀಟಿ ಕಟ್ಟೋಕೋ, ಎಲೆ ಅಡಿಕೆ ಹಾಕೋಕೋ, ಊಟ ಆದಮ್ಯಾಲೆ ಮಾತುಗಳು ಹೇಳೋಕೋ, ಏನಾದರೂ ಸಮಸ್ಯೆ ಆದರೆ ಅದರ ಕುರಿತು ಮಾತಾಡೋಕೋ ಕೇರಿಜನ ಸೇರುತ್ತಲೇ ಇರುತ್ತಾರೆ. ಹರಟೆ, ಮಾತು ಕಥೆಗಳು ಇಲ್ಲಿ ಮಾಮೂಲು.
ಎಂಟಮ್ಮನ ಮನೆಯ ಮಾತುಕಥೆಗಳಲ್ಲಿ ಹೊಡೆದು ಹೋದ ಅದೆಷ್ಟೋ ಸಂಬಂಧಗಳು ಒಂದಾಗ್ತಾ ಇದ್ದುವು. ಹರಿದ ಅದೆಷ್ಟೋ ಮನಸ್ಸುಗಳು ಕೂಡುತ್ತಿದ್ದುವು.

ಅಲಿಖಿತ ಜ್ಞಾನ ಪುರಾಣಗಳು

ಸಫಾಯಿ ಕರ್ಮಚಾರಿಗಳಿಗೆ ಮಾಂಸದಡುಗೆ ಇಷ್ಟದ ಅಡುಗೆ. ಈ ಇಷ್ಟವು ಮಾಡಿ ಉಣ್ಣುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರ ಜಾಡು ಹಿಡಿದು ನೋಡಿದಾಗ ಅವರೊಳಗೆ ಜೀವಂತವಾಗಿ ಹರಿದಾಡುತ್ತಿರುವ ಜ್ಞಾನಪರಂಪರೆಯ ಪರಿಚಯವಾಗುತ್ತದೆ.
ಯಾವ ಪ್ರಾಣಿಯನ್ನೂ ಗಬ್ಬಾದಾಗ, ಎಳೆಯದಿರುವಾಗ ಕೊಲ್ಲುವುದಿಲ್ಲ. ಏಡಿ, ಮೀನುಗಳನ್ನು ಸಹಿತ ಅವು ಸಂತತಿ ವೃದ್ಧಿಸಿಕೊಳ್ಳುವ ಸಂದರ್ಭದಲ್ಲಿ ಹಿಡಿಯುವುದಿಲ್ಲ. ಪಶು, ಪಕ್ಷಿಗಳ ಜೀವನ ಚಕ್ರವನ್ನು ಇವರು ಚೆನ್ನಾಗಿ ಬಲ್ಲರು. ಹಕ್ಕಿ ಗೂಡುಗಳು, ಅವು ಮೊಟ್ಟೆ ಇಡುವ ಕಾಲ, ಮರಿಮಾಡುವ ಕಾಲ, ಏಡಿಗಳ ಮತ್ತು ಇಲಿಗಳ ಬಿಲಗಳ ರಚನೆ, ಅವುಗಳ ಚಲನವಲನ, ಅವುಗಳನ್ನು ಚಾಕಚಕ್ಯತೆಯಿಂದ ಹಿಡಿಯುವ ಕೌಶಲ, ಪ್ರಾಣಿಗಳನ್ನು ಕೊಯ್ಯಲು ಇರಬೇಕಾದ ಕರಾರುವಾಕ್ಕಾದ ಅಂಗರಚನಾ ಶಾಸ್ತ್ರದ ಅರಿವು, ಸಸ್ಯಶಾಸ್ತ್ರದ ಅರಿವನ್ನು ತಿಳಿಸುವ ಹಲವಾರು ರೀತಿಯ ಸಸ್ಯ/ಕಾಯಿ/ಹಣ್ಣುಗಳ ಗುರುತಿಸುವಿಕೆ ಮತ್ತು ಬಳಸುವಿಕೆ ಇವೆಲ್ಲವೂ ಅವರಿಗೆ ಪರಿಸರ ಮತ್ತು ಋತುಮಾನವನ್ನು ಕುರಿತ ಅರಿವನ್ನು ತಿಳಿಸುತ್ತವೆ.
ದನದ ಚರ್ಮವನ್ನು ನಾಜೂಕಾಗಿ ಸುಲಿದು, ಮಾಂಸದ ತುಣುಕುಗಳು, ಕೂದಲನ್ನು ಅಚ್ಚುಕಟ್ಟಾಗಿ ತೆಗೆದು ಸ್ವಚ್ಛಮಾಡಿ, ಸುಣ್ಣ ಸವರಿ, ತಂಗಡಿ ಗಿಡದ ಚಕ್ಕೆಯನ್ನು ಹಾಕಿದ ನೀರಿನಲ್ಲಿ ನೆನಸಿಟ್ಟು ಹದಮಾಡಿ ಬೇಕಾದ ಆಕಾರಕ್ಕೆ ಕೊಯ್ಯುವಂತೆ ಮಾಡಿ ಅದರಲ್ಲಿ ಮೆಟ್ಟು, ಚಾವಟಿ, ಮಿಣಿಗಳಂತಹ ಕೃಷಿ ಉಪಕರಣಗಳನ್ನೂ, ಅದ್ಭುತ ನಾದ ಹೊಮ್ಮಿಸುವ ತಮಟೆ, ಮೃದಂಗ, ತಬಲಾಗಳಂತಹ ವಾದ್ಯಗಳನ್ನೂ ತಯಾರಿಸುವುದರ ಹಿಂದೆ ಜೀವಶಾಸ್ತ್ರ, ನಾದಜ್ಞಾನದ ಜೀವಂತ ಪರಂಪರೆ ಇದೆ.ಖ್ಯಾತ ಕರ್ನಾಟಕ ಸಂಗೀತ ವಿದುಷಿ ಟಿ.ಎಂ.ಕೃಷ್ಣ ಅವರು ಇತ್ತೀಚೆಗೆ ಅಧ್ಯಯನ ನಡೆಸಿ ಪ್ರಕಟಿಸಿರುವ ‘ಸೆಬಾಸ್ಟಿಯನ್ ಅಂಡ್ ಸನ್ಸ್’ ಪುಸ್ತಕವು ಮೃದಂಗ ಮಾಡುವ ಪರಿಶಿಷ್ಟ ಜಾತಿಯವರಿಗಿರುವ ನಾದ ಭಂಡಾರವನ್ನೇ ತೆರೆದಿಡುತ್ತದೆ. ಈ ಪುಸ್ತಕ ಇದೇ ಹೆಸರಿನಲ್ಲಿ ಕನ್ನಡಕ್ಕೂ ಸುಮಂಗಲಾ ಅವರಿಂದ ಅನುವಾದಗೊಂಡಿದೆ.
ಹಾಡು, ಕಥನ ಕಲೆ, ಕುಣಿತಗಳು ಸಹ ಅವರ ಸೃಜನಶೀಲ ಪರಂಪರೆಯ ಧ್ಯೋತಕಗಳಾಗಿವೆ.

ಜ್ಞಾನ ಪುರಾಣಗಳು

ಈ ಪುರಾಣಗಳು ಸೃಷ್ಟಿ ಕುರಿತು ಕಟ್ಟಿಕೊಂಡ ಸಮುದಾಯದ ನಂಬಿಕೆ ಮತ್ತು ಕಲ್ಪನೆಯ ಬಗ್ಗೆ ಹೇಳುತ್ತವೆ. ನೀರಿನಿಂದ ಆರಂಭವಾಗಿ ಜಲಚರಗಳು, ಸಸ್ಯಲೋಕ, ಪ್ರಾಣಿಲೋಕ, ಕೀಟಲೋಕ ಮನುಷ್ಯ ಕುಲದವರೆಗಿನ ವಿಕಾಸದ ಅರಿವನ್ನೂ ಹೇಳುತ್ತವೆ. ಈ ಪುರಾಣಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಸೃಷ್ಟಿಸುವ ಸಲುವಾಗಿ ತನ್ನನ್ನೇ ತೆತ್ತುಕೊಳ್ಳುವುದು ಮತ್ತು ಬದುಕುಳಿಯಲು ಬೇಕಾದ ದುಡಿಮೆಗೆ ಅಗತ್ಯವಾದ ಉಪಕರಣಗಳಿಗೆ ತಾನು ಕಚ್ಚಾವಸ್ತುವಾಗುವುದರ ಶ್ರದ್ಧೆಯನ್ನು, ಸಾಂಸಾರಿಕ ಲೋಕದ ರೋಗ, ರುಜಿನ, ಕಷ್ಟ-ಕಾರ್ಪಣ್ಯಗಳ ಎದುರಿಸಲು ಬೇಕಾದ ಚೈತನ್ಯವನ್ನು ಹಾಗೂ ಶುದ್ಧ-ಅಶುದ್ಧದ ದ್ವಿತ್ವವನ್ನು ಮೀರಿದ ಬದುಕಿನ ಲಯವನ್ನು.


ಜ್ಞಾನ ಪುರಾಣಗಳು :
ಮತಂಗ ಮುನಿಯ “ಬೃಹದ್ದೇಶಿ” ಪುರಾಣ: ಭಾರತೀಯ ಸಂಗೀತ ಶಾಸ್ತ್ರದಲ್ಲಿ ಉಪಲಬ್ಧವಾಗಿರುವ ಪ್ರಪ್ರಥಮ ಗ್ರಂಥ ಇದಾಗಿದೆ. ಅತ್ಯಂತ ಪಾಂಡಿತ್ಯಪೂರ್ಣವಾದ, ನಮ್ಮ ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನಿರ್ಮಿಸಿದ ಗ್ರಂಥ ಇದಾಗಿದೆ. ಹದಿನಾರು ಶಾಸ್ತ್ರಗಳಲ್ಲಿ ವಿದ್ವಾಂಸನಾದ ಮತಂಗ ಮುನಿ ೧೫೦೦ ವರ್ಷಗಳಷ್ಟು ಹಿಂದೆಯೇ ಬರೆದ ಈ ಗ್ರಂಥವು ನಮ್ಮ ಸಂಗೀತ ಕಲೆ-ಜ್ಞಾನದ ಬುನಾದಿಯಾಗಿದೆ.
ಮುನಿ ಪರಂಪರೆಗೆ ಸೇರಿದ ಮತಂಗ ಮನಿಯು ಚಂಡಾಲನಾಗಿ ಹುಟ್ಟಿ, ತಪಸ್ಸು ಮಾಡಿ ಇಂದ್ರನ ಆಶೀರ್ವಾದದಿಂದ ಜ್ಞಾನಿಯಾಗಿ ಆಶ್ರಮವನ್ನು ಕಟ್ಟಿ ಕಷ್ಟದಲ್ಲಿ ಇರುವವರಿಗೆ ಸಹಾಯಮಾಡುತ್ತಿದ್ದುದರ ಕುರಿತು ರಾಮಾಯಣ ಮಹಾಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ. ಮತಂಗ ಮುನಿಯು ತನ್ನ ಸ್ವಪ್ರಯತ್ನದಿಂದ, ಸತ್ಕರ್ಮದಿಂದ ಜ್ಞಾನಿಯಾಗುತ್ತಾನೆ ಎಂದು ಬೌದ್ಧ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.


ಬೃಹದ್ದೇಶಿ ಎಂದರೆ ಬೃಹತ್ ದೇಶಿ ಎಂದರೆ ದೊಡ್ಡದಾದ ಅಥವಾ ಹಿರಿದಾದ ದೇಸಿ ಎಂದು. ಬೃಹದ್ದೇಶಿ ಪುರಾಣದಲ್ಲಿ ಮತಂಗನು ಸಂಗೀತದ ಮೂಲಕ ದೇಶಿ ಎಂಬುದು ಬೃಹತ್ತಾದುದು, ದೇಶೀ ಎಂಬುದು ಎಲ್ಲಕ್ಕಿಂತ ಹಿರಿದಾದುದು ಎಂಬುದನ್ನು ಮನನ ಮಾಡಿಸುತ್ತಾನೆ. ಧ್ವನಿ ಅಂದರೆ ಶಬ್ದವು ಎಲ್ಲಾ ದೇಶಗಳಲ್ಲಿರುವ ಜಂತುಗಳಿಗೂ, ಸಾಮಾನ್ಯ ಜನರಿಗೂ, ದೊರೆಗಳಿಗೂ ಅವರವರ ಇಷ್ಟದಂತೆ ಇಚ್ಛಿಸಿದ ಸುಖವನ್ನು ಕೊಡುತ್ತದೆ. ಇಂತಹ ಸುಖ ಕೊಡುವ ಕಾರ್ಯದಲ್ಲಿ ತೊಡಗಿರುವ ಈ ಧ್ವನಿಯು ದೇಶೀ ಎಂಬ ಹೆಸರನ್ನು ಹೊಂದಿದೆ. ಧ್ವನಿಯು ವಾಸ್ತವ ಅನುಭವವನ್ನು ನೀಡುವುದರಿಂದ ಅದಕ್ಕೆ ದೇಶಿತ್ವ ಉಂಟಾಗುತ್ತದೆ. ಧ್ವನಿಯಿಂದ-ಬಿಂದು, ಬಿಂದುವಿನಿಂದ-ನಾದ, ನಾದದಿಂದ-ಮಾತೃಕೆ, ಮಾತೃಕೆಯಿಂದ ಅಕ್ಷರ, ಅಕ್ಷರದಿಂದ ಜಗತ್ತಿನ ಜ್ಯೋತಿ ಅಂದರೆ ದೇಶೀ ಹುಟ್ಟುತ್ತದೆ. ಧ್ವನಿಯ ಉತ್ಪತ್ತಿ ಸ್ಥಾನ ಯೋನಿ. ಧ್ವನಿ ಎಲ್ಲದರ ಕಾರಣ. ಚಲಿಸುವ ಮತ್ತು ಚಲಿಸದ ಸಕಲ ಜಗತ್ತೂ ಧ್ವನಿಗೆ ಅಧೀನವಾಗಿದೆ. ಧ್ವನಿಯು ವ್ಯಕ್ತವೂ ಅವ್ಯಕ್ತವೂ ಆಗಿದೆ. ಹೆಂಗಸರು, ಮಕ್ಕಳು, ದನ ಕಾಯುವವರು, ದೊರೆಗಳು ಸ್ವ-ಇಚ್ಛೆಯಿಂದ ತಮಗೆ ಇಷ್ಟ ಬಂದಂತೆ ಪ್ರೀತಿಯಿಂದ ತಮ್ಮ ಬದುಕುಗಳಲ್ಲಿ ಯಾವುದನ್ನು ಹಾಡಿಕೊಳ್ಳುತ್ತಾರೋ ಅದನ್ನು ಮತಂಗಮುನಿ ದೇಶೀ ಎಂದು ಹೇಳುತ್ತಾನೆ. ದೇಶಿಯನ್ನು ಇಷ್ಟಬಂದಂತೆ ಹಾಡಿಕೊಳ್ಳಬಹುದು ಎಂದು ಹೇಳುತ್ತಾ ಅದರ ಉತ್ಪತ್ತಿ ಮತ್ತು ಲಕ್ಷಣಗಳನ್ನು ಹೇಳುತ್ತಾನೆ. ನಾದದಿಂದ ಭಾಷೆ ಹುಟ್ಟುತ್ತದೆ. ಹೊಕ್ಕುಳಲ್ಲಿ ಪ್ರಾಣವಾಯು ಹುಟ್ಟಿ, ಕೆಳಗೂ ಮೇಲೂ ಚಲಿಸಿ ಸಮಸ್ತವಾದ ಭವ್ಯವಾದ ನಾದ ಪದ್ಧತಿಯನ್ನು ಉಂಟುಮಾಡುತ್ತದೆ. ನಾದದಲ್ಲಿ ಐದು ವಿಧ. ಗುಹಾದಿಂದ ಸೂಕ್ಷö್ಮ ನಾದ, ಹೃದಯದಿಂದ ಅತಿಸೂಕ್ಷö್ಮ ನಾದ, ಕಂಠದಿಂದ ವ್ಯಕ್ತ ನಾದ, ಅಂಗಳದಿಂದ ಅವ್ಯಕ್ತ ನಾದ, ಬಾಯಿಯಲ್ಲಿ ಕೃತ್ರಿಮ ನಾದ ನೆಲೆಸಿರುತ್ತದೆ ಎಂದು ಹೇಳುತ್ತಾನೆ. ಮತಂಗ ಮುನಿಯು ಪ್ರಕೃತಿಯಿಂದಲೇ ಧ್ವನಿ ಹುಟ್ಟಿದೆ- ಧ್ವನಿಯಿಂದ ಜ್ಞಾನ ಹುಟ್ಟಿದೆ ಎನ್ನುವ ಬೃಹತ್ ದೇಶಿತ್ವದ ಸತ್ಯವನ್ನು ಈ ಕೃತಿಯ ಮೂಲಕ ಹೇಳಿದ್ದಾನೆ. ಆ ಮೂಲಕ ಜ್ಞಾನ ಎಂಬುದು ಮೌಖಿಕ ನೆಲೆಯ ಮೂಲಕ ಹರಡಿ ಅಕ್ಷರವಾಗಿದೆಯೇ ಹೊರತು ಅಕ್ಷರದಿಂದ ಮಾತ್ರ ಜ್ಞಾನ ಹರಡಿಲ್ಲ ಎಂಬುದನ್ನು ಹೇಳುತ್ತಾನೆ. ಇದರ ಮೂಲ ಸ್ಥಾನ ಯೋನಿಯಾಗಿರುವುದರಿಂದ ಹುಟ್ಟುತ್ತಲೇ ಪ್ರತಿಯೊಬ್ಬರೂ ಸಮತೆಯನ್ನು ಎದೆಗಿರಿಸಿಕೊಂಡ ಜ್ಞಾನಿಗಳಾಗಿಯೇ ಹುಟ್ಟುತ್ತಾರೆ ಎನ್ನುವ ಜೀವಸತ್ಯವನ್ನು ಮನಗಾಣಿಸಿದ್ದಾರೆ.

ಸೃಷ್ಟಿಪುರಾಣಗಳು

ಗಂಗ ಭಾರತ: ಭಾರತ ಗಂಗೆಯ ಭಾರತವೆನ್ನುವ ಪುರಾಣ ಹುಟ್ಟಿರುವುದು ನೀರೇ ಎಲ್ಲದರ ಮೂಲವೆಂಬ ನಂಬಿಕೆಯಲ್ಲಿ. ಮಾದಿಗರ ಮೂಲ ದೇವತೆ ಗಂಗಮ್ಮ. ಮಾದಿಗರ ಉಪಪಂಗಡವಾದ ಮಾಸ್ಟೀಕರು ಗಂಗಭಾರತವನ್ನು ಹೆಚ್ಚಾಗಿ ಹಾಡುತ್ತಾರೆ. ಈ ಪುರಾಣದ ಪ್ರಕಾರ ಜೀವಸಂಕುಲದ ಆದಿಶಕ್ತಿ ಗಂಗಮ್ಮ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿ ಈ ಭೂಮಿಯನ್ನು ನೋಡಿಕೊಳ್ಳುವಂತೆ ಆದೇಶಿಸುತ್ತಾಳೆ. ಈ ಮೂವರೂ ಗಂಗೆಯನ್ನು ಮೂರು ಭಾಗ ಮಾಡಿಕೊಂಡು ಹಂಚಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಗಂಗೆ ಅವರ ಮೇಲೆ ರೇಗಿ, ತರಾಟೆಗೆ ತೆಗೆದುಕೊಂಡು ಅವರನ್ನು ಸರಿದಾರಿಗೆ ತರುತ್ತಾಳೆ. ಇಷ್ಟಾದ ಮೇಲೂ ಮಾದಿಗರು ಗಂಗಮ್ಮನನ್ನು ಬಿಟ್ಟು ಶಿವನ ಆರಾಧನೆ ಮಾಡಲು ಶುರು ಮಾಡಿದಾಗ ಅವಳಿಗೆ ಸಿಟ್ಟು ಬಂದು ಇಡೀ ಸಮುದಾಯ ಕಾಯಿಲೆ ಬೀಳಲೆಂದು ಶಾಪ ಕೊಡುತ್ತಾಳೆ. ದೊಡ್ಡಮ್ಮ ಕಾಯಿಲೆ ರೂಪದಲ್ಲಿ ಸಮುದಾಯದ ಮೇಲೆ ದಾಳಿಮಾಡಲು ಹೊರಡುತ್ತಾಳೆ. ಜನ ಕಾಪಾಡು ಎಂದು ಗಂಗಮ್ಮನನ್ನು ಬೇಡಿಕೊಂಡಾಗ ಚರ್ಮದ ತುಂಡನ್ನು ಅವರ ಕುತ್ತಿಗೆಗೆ ಕಟ್ಟಿ ‘ನಾನು ಚರ್ಮದ ತುಂಡಿನ ರೂಪದಲ್ಲಿ ಎಲ್ಲಿ ಇರುವೆನೋ ಅಲ್ಲಿಗೆ ಬರಬೇಡ’ ಎಂದು ದೊಡ್ಡಮ್ಮನ ಹತ್ತಿರ ಭಾಷೆ ತೆಗೆದುಕೊಳ್ಳುತ್ತಾಳೆ. ಆಗ ಗಂಗಮ್ಮ ನಮ್ಮ ಕಾಯಿಲೆ ವಾಸಿಮಾಡಿದಳು ಎಂದು ಜನ ಆರಾಧಿಸುತ್ತಾರೆ. ತನ್ನ ಸಮುದಾಯದ ಜನರನ್ನು ಒಮ್ಮೆ ಪರೀಕ್ಷೆ ಮಾಡಲು ರೋಗ ಬಂದ ಮುದುಕಿಯ ವೇಷಹಾಕಿಕೊಂಡು ಗಂಗಮ್ಮ ಜನರ ಬಳಿಗೆ ಹೋಗುತ್ತಾಳೆ. ಅವರ ಹತ್ತಿರ ಇರುವ ಗೋವುಗಳನ್ನು ನಾಶ ಮಾಡುತ್ತಾಳೆ. ಮುಟ್ಟಿದರೆ ಸಾಕು ಚರ್ಮ ಉದುರಿ ಬೀಳುವಂಥ ಪರಿಸ್ಥಿತಿಯಲ್ಲಿ ಗಂಗೆ ಇರುತ್ತಾಳೆ. ಅವಳನ್ನು ನಾಶಮಾಡಲು ಹಸು/ಕೋಣದ ವೇಷ ಹಾಕಿಕೊಂಡು ಬರುವ ಶಕ್ತಿಯಿಂದ ತಪ್ಪಿಸಿಕೊಳ್ಳಲು ಗಂಗೆ ಹುತ್ತದಲ್ಲಿ ಸೇರಿಕೊಳ್ಳುತ್ತಾಳೆ. ಕೋಣ ಹುತ್ತವನ್ನು ಗುದ್ದುವಾಗ ಹೊರಗೆ ಬಂದು ಕೋಣವನ್ನೇ ಹುತ್ತಕ್ಕೆ ಸೇರಿಸುತ್ತಾಳೆ. ನಾನು ಊರಿಗೆ ಬಂದಾಗ ಪೂಜೆ ಮಾಡಬೇಕೆಂದು ಹೇಳುವ ಗಂಗಮ್ಮನಿಗೆ ಕೋಣನ ಬಲಿಕೊಟ್ಟು ಪೂಜೆ ಮಾಡುತ್ತಾರೆ. ಗಂಗಮ್ಮನ ಈ ಸಾಹಸಗಳನ್ನು, ಪವಾಡಗಳನ್ನು, ಕತೆ, ಹಾಡಿನ ಮೂಲಕ ಮಾದಿಗರು ಹೇಳುತ್ತಾರೆ. ಆಚರಣೆ ಯಾವುದೇ ಇರಲಿ ಗಂಗಮ್ಮನ ಪೂಜೆ ಈಗಲೂ ಮಾದಿಗ ಸಮುದಾಯದಲ್ಲಿ ಪ್ರಮುಖವಾಗಿದೆ.


ಆದಿ ಜಾಂಬವಪುರಾಣ:
ಸಫಾಯಿ ಕರ್ಮಚಾರಿಗಳ ಪುರಾಣಗಳಲ್ಲಿ ಜಾಂಬವಂತ ಮೂಲ ಪುರುಷನಾಗಿದ್ದಾನೆ. ಭೂಮಿ ಹುಟ್ಟುವ ಆರು ತಿಂಗಳಿಗೆ ಮೊದಲು ಹುಟ್ಟಿದ ಆತನೇ ಸೃಷ್ಟಿಕರ್ತ ಎಂಬುವುದು ಮಾದಿಗ ಕುಲದ ನಂಬಿಕೆಯಾಗಿದೆ. ಆತನನ್ನು ಜಾಂಬವಂತ ತಾತ, ಜಾಂಬವಂತ ಮುನಿ ಎಂದು ಕರೆಯುತ್ತಾರೆ. ಸಮಸ್ತ ಸೃಷ್ಟಿಗೆ ಮೂಲಪುರುಷನಾಗಿ ಜಾಂಬವಂತನೇ ಆದಿಶಕ್ತಿಯೊಂದಿಗೆ ಕೂಡಿ ತ್ರಿಮೂರ್ತಿಗಳಿಗೆ ಜನ್ಮಕೊಟ್ಟಿದ್ದು, ಜಲಮಯವಾಗಿದ್ದಂತಹ ಜಗತ್ತಿನಲ್ಲಿ ಭೂಭಾಗವನ್ನು ರೂಪಿಸಿದ್ದು, ಆಕಾಶÀ, ಸೂರ್ಯ, ಚಂದ್ರ, ನಕ್ಷತ್ರಗಳನ್ನು ಸೃಷ್ಟಿಸಿದ್ದು ಎಂಬ ನಂಬಿಕೆ ಇದೆ. ತನ್ನ ಮಗ ಬೆಪ್ಪು ಮುನಿಯನ್ನು ಕತ್ತರಿಸಿ ಹರಿದ ನೆತ್ತರಿನಿಂದ ಭೂಮಿಯನ್ನು ಸೃಷ್ಟಿಸಿ ಅವನ ಮೂಳೆಗಳಿಂದ ಆಯುಧ, ಉಪಕರಣಗಳನ್ನು ಮಾಡಿ ವಿವಿಧ ಜಾತಿಗಳಿಗೆ ನೀಡಿದನೆಂದು ಹಾಗೂ ಆದಿಜಾಂಬವ ಮುನಿಯ ಮಗಳಾದ ಮತಂಗಕನ್ಯೆಯ ಬೆನ್ನು ಚರ್ಮವನ್ನು ಸಿಗಿದು ತುಂಡುತುಂಡಾಗಿ ಕತ್ತರಿಸಿ, ಹೊಲೆಯರ ತುಂಡು, ಮಾದಿಗರ ತುಂಡು, ಒಕ್ಕಲಿಗರ ತುಂಡು, ಗಾಣಿಗರ ತುಂಡು, ಬಲಿಜಿಗರ ತುಂಡು, ಬ್ರಾಹ್ಮಣನ ತುಂಡು ಎಂದು ಒಂದೊಂದು ಗುಂಪಿಗೂ ಹಂಚಿ ಕೊನೆಯಲ್ಲಿ ಉಳಿದ ತುಂಡನ್ನು ಮಂಡರ ತುಂಡು ಎಂದು ಹೇಳಿದನಂತೆ. ಮಂಡರು ಎಂಬ ಗುಂಪು ಈಗಲೂ ಇದೆ. ಹೀಗೆ ಜಾಂಬವಂತನು ಬಿಡಿಯನ್ನು ಮತ್ತು ವಿವಿಧತೆಯನ್ನು ವ್ಯಕ್ತಪಡಿಸುವುದರ ಜೊತೆಯಲ್ಲೇ ಮಾತಂಗಿಯ ಚರ್ಮದೊಂದಿಗೆ ಅವರಿಗಿರುವ ಬೆಸುಗೆಯ ಕೊಂಡಿಯ ಮೂಲಕ ದೇಹದ ಪೂರ್ಣತೆಯನ್ನು ಮನುಷ್ಯರಿಗೆ ನೆನಪಿಸುತ್ತದೆ.ಜಗತ್ತಿನ ಸೃಷ್ಟಿಕಾರ್ಯ ನಡೆದದ್ದು ಜಂಬು ನೇರಳೆ ಮರದ ಕೆಳಗೆ ಎಂಬುದನ್ನು ಅವರ ಜನಪದ ಹಾಡುಗಳಲ್ಲಿ ನೋಡಬಹುದು. ಭಾರತವನ್ನು ಜಂಬೂದ್ವೀಪವೆಂದು ಕರೆಯುವುದರ ಹಿಂದೆಯೂ ಈ ನಂಬಿಕೆಯೇ ಕೆಲಸಮಾಡಿದೆ.
ಜಂಬೂನಲ್ಲೆ ಹುಟ್ಟಿ ಜಂಬೂನಲ್ಲೆ ಬೆಳೆದು
ಜಂಬುನೇರಳೆ ಕೆಳಗೆ ಜಗವ ನಿಲ್ಲಿಸಿ
ಅಂಗೈಯಲ್ಲಿ ಹಸು ತುಪ್ಪ ಬತ್ತಿ ಹೊಸೆದು
ಆಕಾಶ ಧರಣಮ್ಮ ನಿನಗೆ ಆರತಿ
ಇಲ್ಲಿಯೂ ಸಹ ತನ್ನ ಅಂಗೈಯನ್ನೇ ದೀಪವಾಗಿಸಿ ಬೆಳಗುವುದು ತನ್ನನ್ನೇ ಪೂಜೆಯ ಸಾಧನವಾಗಿಸಿಕೊಳ್ಳುವ ಮೂಲಕ ನಿಷ್ಠೆ, ಗೌರವ ಸಲ್ಲಿಸುವುದಾಗಿದೆ. ಅವರು ಸೃಷ್ಟಿಗೆ ನೀಡಿರುವ ಪ್ರೀತಿ, ಗೌರವವನ್ನು ತೋರುತ್ತದೆ. ನಂಬಿಕೆ ಬರಿ ಇಷ್ಟಕ್ಕೆ ನಿಲ್ಲದೆ ಇಂದಿಗೂ ಮಾದಿಗರ ಜಂಬು ನೇರಳೆ ಕೊಂಬೆಯನ್ನು ಕಡಿದು ತಂದುಧಾರೆಯ ಮಂಟಪದಲ್ಲಿ ನೆಟ್ಟು ಪೂಜಿಸುವ ಕಂಬಳ ದ್ಯಾವರ ಆಚರಣೆಯ ಮೂಲಕ ಮುಂದುವರೆಯುತ್ತಿದೆ. ಸೃಷ್ಟಿಗೆ ನೆರಳಾದ ನೇರಳೆ ಸಂತಾನಕ್ಕೂ ಮೂಲವಿರುವುದು ಮಾತ್ರವಲ್ಲದೆ ತಮ್ಮ ಜಾಂಬವ ಕುಲಕ್ಕೂ, ಜಂಬೂ ದ್ವೀಪಕ್ಕೂ, ಜಂಬೂ ಮರಕ್ಕೂಇರುವ ಪ್ರಾಚೀನ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವ ಆದಿಮ ಸಂಸ್ಕೃತಿಯ ಜೀವಂತ ಲಕ್ಷಣಇದಾಗಿದೆ.ಅಲ್ಲದೆ ಜಾಂಬವಂತನು ಮಾನವ ಕುಲದ ಅನುಭವ ಅಥವಾ ಸ್ಮೃತಿಗು ಮತ್ತು ವಿಕಾಸದ ಕೊಂಡಿಯಾಗಿರುವುದರಿಂದ ಜಾಂಬವಂತನ ಕಲ್ಪನೆಯನ್ನು ಆದಿಕಾಲದ ವಿಕಾಸವಾದ ವಿಜ್ಞಾನವಾಗಿಯೂ ವ್ಯಾಖ್ಯಾನಿಸಬಹುದು.

ಮಂಟೇಸ್ವಾಮಿ


ತಳಸಮುದಾಯಗಳ ಸಾಂಸ್ಕೃತಿಕ-ಆಧ್ಯಾತ್ಮಿಕ ನಾಯಕನಾದ ಮಂಟೇಸ್ವಾಮಿ ಧಾರ್ಮಿಕ ಕ್ರಾಂತಿಯನ್ನು ಮಾಡಿದವ. ಬಸವಣ್ಣನವರ ಸಮಕಾಲೀನನೆಂದು ನಂಬಲಾಗುವ ಈತ ತನ್ನದೇ ಒಂದು ಆಧ್ಯಾತ್ಮಿಕ ಪರಂಪರೆಯನ್ನು ನಿರ್ಮಿಸಿದ. ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪಗೌಡನಪುರಗಳು ಮಂಟೇಸ್ವಾಮಿ ಪರಂಪರೆಯ ಮುಖ್ಯ ಯಾತ್ರಾಸ್ಥಳಗಳು. ಇಲ್ಲಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಈತ ಕರ್ನಾಟಕದ ನೀಲಗಾರ ಸಮುದಾಯದ ಆರಾಧ್ಯ ದೈವ. ಈತ ಸಾಕ್ಷಾತ್ ಶಿವನ ಸ್ವರೂಪವೆಂದೇ ಅವರು ಭಾವಿಸುತ್ತಾರಲ್ಲದೆ ಅವರನ್ನು ಜಗಜ್ಯೋತಿ, ಪರಂಜ್ಯೋತಿ, ಮಂಟೇದ, ಮಂಟೇದಯ್ಯ ಎಂಬ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ.


ಮಂಟೇಸ್ವಾಮಿ ಪುರಾಣ: ಮಂಟೇಸ್ವಾಮಿ ತಳಜಾತಿಗಳ ಮತ್ತೊಬ್ಬ ಸಾಂಸ್ಕೃತಿಕ ನಾಯಕನಾಗಿದ್ದಾನೆ. ಎಲ್ಲಿಟ್ಟರೂ ಏಕವಾಗಿ ಉರಿಯುವ ಜ್ಯೋತಿಯನ್ನು ಭೂಮಿಗೆ ತಂದವರು, ಭೂಮಿಯನ್ನು ಸೃಷ್ಟಿಸಿದವರು ಮಂಟೇಸ್ವಾಮಿಯವÀರು ಎಂಬ ನಂಬಿಕೆ ಇದೆ. ಎಲ್ಲವೂ ಹುಟ್ಟಲಿಕ್ಕೆ ಮೊದಲು ಅವರು ಬಂದರು. ಹುಟ್ಟಿ ಹೊನ್ನ ಹುತ್ತದಲ್ಲಿ ಉದ್ಭವವಾಗಿ ೭೭ ಮಾರುದ್ದ ಜಡೆ ಬಿಟ್ಟುಕೊಂಡು, ಲೋಕ ಕಟ್ಟಬೇಕು ಎಂದು ತನ್ನ ಮಾಯಾಜೋಳಿಗೆಯಲ್ಲಿದ್ದ ವಿಭೂತಿ ಗಟ್ಟಿಯನ್ನು ಒಡೆದು ಎರಡು ಹೋಳು ಮಾಡಿ ಒಂದು ಹೋಳಿನಲ್ಲಿ ಭೂಮಿ ಮತ್ತೊಂದು ಹೋಳಿನಲ್ಲಿ ಆಕಾಶ ಮಾಡಿದರಂತೆ. ಅವರ ಪಾದ ಭೂಮಿಗೆ ತಾಗಿದಾಗÀ ಮುತ್ತು ರತ್ನಗಳು ಹುಟ್ಟಿದವಂತೆ. ಮಕ್ಕಳಿಗೆ ಆಹಾರವಾಗಲಿ ಎಂದು ರುದ್ರಾಕ್ಷಿಯನ್ನು ತಾಕಿಸಿ ಗಿಡಮರಗಳನ್ನು ಸೃಷ್ಟಿ ಮಾಡಿದರಂತೆ. ಖಂಡುಗ ಜ್ಞಾನ ಪುಸ್ತಕವನ್ನು, ಕಾಲಜ್ಞಾನದ ಪುಸ್ತಕವನ್ನು ಹಿಡಿದು ಆದಿಶಕ್ತಿಯನ್ನು ಸೃಷ್ಟಿ ಮಾಡಿದರಂತೆ. ಆದಿಶಕ್ತಿ ತನ್ನನ್ನೇ ಮದುವೆಯಾಗಬೇಕೆಂದು ಬಯಸಿದಾಗ ಬೇಸತ್ತ ಮಂಟೆಸ್ವಾಮಿ, ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಮದುವೆಯಾಗು ಎಂದು ವರ ಕೊಡುತ್ತಾರೆ. ಆದಿಶಕ್ತಿಯ ಮಕ್ಕಳಾಗಿ ಬ್ರಹ್ಮ ವಿಷ್ಣು ಮಹೇಶ್ವರರು ಹುಟ್ಟುತ್ತಾರೆ. ಆದರೆ ಅವರು ತಾಯಿಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ವಿಷ್ಣು ಆದಿಶಕ್ತಿಯ ವಿಶೇಷ ಶಕ್ತಿಯಾದ ಉರಿ ಹಸ್ತದಿಂದ ಅವಳೇ ಉರಿದು ಬೂದಿಯಾಗುವಂತೆ ಮಾಡುತ್ತಾನೆ. ಆ ಬೂದಿಯಿಂದ ಮಂಟೆಸ್ವಾಮಿ ಪಾರ್ವತಿ ಲಕ್ಷ್ಮಿ ಸರಸ್ವತಿಯರನ್ನು ಸೃಷ್ಟಿಮಾಡಿ ಶಿವ ವಿಷ್ಣು ಬ್ರಹ್ಮರು ಮದುವೆಯಾಗುವಂತೆ ಹೇಳಿದರಂತೆ. ಸರಸ್ವತಿಗೆ ಮಣ್ಣಿನಿಂದ ಹೆಣ್ಣು-ಗಂಡು ಬೊಂಬೆಗಳನ್ನು ಕ್ರಿಮಿಕೀಟ ಹಾವು ಚೇಳುಗಳನ್ನು ಮಣ್ಣಿನಿಂದ ಮಾಡಿಸಿದರಂತೆ. ಈ ಪ್ರಾಣಿಗಳಲ್ಲಿ ಯಾವುದು ಹೆಚ್ಚು, ಯಾವುದು ಕೀಳು ಯಾವುದು ಮೇಲು ಎಂದು ಸರಸ್ವತಿ ಕೇಳಿದಾಗ, ಮಂಟೆಸ್ವಾಮಿ ಎಲ್ಲಾ ಪ್ರಾಣಿಗಳು ನನಗೆ ಒಂದೇ, ಪ್ರಾಣಿಗಳಲ್ಲಿಯೇ ಅತಿಚಿಕ್ಕ ಪ್ರಾಣಿಯಲ್ಲೂ ಉರಿಯುವ ಜ್ಯೋತಿ ರೂಪವೇ ನಾನು ಎಂದು ಹೇಳಿ ಅದಕ್ಕೆ ಮಿಣುಕು ಹುಳ ಎಂದು ನಾಮಕರಣ ಮಾಡಿದರಂತೆ.


ನೀಲಗಾರರನ್ನು ಮಂಟೇಸ್ವಾಮಿಯ ಶಿಷ್ಯರೆಂದು ಭಾವಿಸಲಾಗುತ್ತದೆ. ಇವರು ಮಂಟೇಸ್ವಾಮಿ ಕಥೆಯನ್ನು, ಕಾವ್ಯವನ್ನು ಅದ್ಭುತವಾಗಿ ಹಾಡುತ್ತಾರೆ. ಜಗತ್ತನ್ನು, ಬ್ರಹ್ಮ, ವಿಷ್ಣು ಮತ್ತು ಅವರ ಹೆಂಡತಿಯರಾದ ಸರಸ್ವತಿ ಮತ್ತು ಲಕ್ಷ್ಮಿಯರನ್ನು, ಜಗದ ಚರಾಚರಗಳನ್ನು ಸೃಷ್ಟಿಮಾಡಿದ್ದು ಮಂಟೇಸ್ವಾಮಿ ಎಂಬುದು ನೀಲಗಾರರ ನಂಬಿಕೆ. ಅವರು ಹಾಡುವ ಹಾಡಿನಲ್ಲಿ ಬರುವ ಪ್ರಮುಖ ಕಥಾ ಪ್ರಸಂಗ ಒಂದು ಹೀಗಿದೆ ಮಂಟೇಸ್ವಾಮಿ ಉತ್ತರದ ಕಲ್ಯಾಣದಿಂದ ದಕ್ಷಿಣಕ್ಕೆ ಬಂದು ಬೊಪ್ಪೇಗೌಡನಪುರದಲ್ಲಿ ನೆಲೆಸಿ ಜನರ ಕಷ್ಟಸುಖಗಳನ್ನು ನೋಡಿಕೊಳ್ಳುತ್ತಿರುತ್ತಾರೆ. ಒಮ್ಮೆ ಕಲ್ಯಾಣದ ನೆನಪಾಗಿ ಬಸವಣ್ಣ ಮತ್ತು ನೀಲಮ್ಮನವರ ಸತ್ಯವನ್ನು ಕಣ್ಣಾರೆ ನೋಡಬೇಕೆಂದು ಕಲ್ಯಾಣಕ್ಕೆ ಹೊರಡುತ್ತಾರೆ. ಅಲ್ಲಿ ಬಸವಣ್ಣನವರು ನಿತ್ಯ ಅನ್ನದಾಸೋಹವನ್ನು ಶರಣರಿಗಾಗಿ ಏರ್ಪಡಿಸಿರುತ್ತಾರೆ. ಕಷ್ಟ ಕಾಯಿಲೆಯವರನ್ನು ನೋಡಿ ಜಂಗಮರು ಊಟಮಾಡುವುದಿಲ್ಲವಾದ್ದರಿಂದ ಅಂತಹವರನ್ನು ತಡೆಯಲು ಪ್ರವೇಶದ್ವಾರದಲ್ಲಿ ಕಟುಕರ ಸಂಗಯ್ಯನನ್ನು ಕಾವಲಿಗೆ ನೇಮಿಸಿರುತ್ತಾರೆ. ತಮಗಿಂತಲೂ ಹೆಚ್ಚಿನ ಭಕ್ತಿ ಇರುವ ಶರಣ ಮಹಾತ್ಮರು ಬಂದರೆ ತಮಗೆ ತಿಳಿಯಲೆಂದು ದ್ವಾರದಲ್ಲಿ ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಯನ್ನು ಕಟ್ಟುತ್ತಾರೆ. ಅವು ಶಬ್ದ ಮಾಡಿದಾಗ ಬಂದಿರುವವರು ಮಹಾತ್ಮರು ಎಂದು ತಿಳಿಯುತ್ತದೆ.


ಇವನ್ನೆಲ್ಲ ತಿಳಿದುಕೊಂಡ ಮಂಟೇಸ್ವಾಮಿ ಮೂರು ಕಂಡುಗ ತುರಗಜ್ಜಿ, ಏಳು ಕಂಡುಗ ಉಳಿವು ಕೆಟ್ಟವಾಸನೆಯ ದೇಹವನ್ನಿಟ್ಟುಕೊಂಡು, ಸತ್ತೆಮ್ಮೆ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು ಕಲ್ಯಾಣ ಪಟ್ಟಣಕ್ಕೆ ಬರುತ್ತಾರೆ. ಸಂಗಯ್ಯ ತಡೆದು ಬಾಗಿಲಲ್ಲೇ ಕುಳಿತುಕೊಳ್ಳಲು ಹೇಳುತ್ತಾನೆ. ಬಸವಣ್ಣ ಮತ್ತು ನೀಲಮ್ಮನವರು ಮಂಟೇಸ್ವಾಮಿಯನ್ನು ಗುರುತಿಸದೇ ಅವನ ಮುಂದೆಯೇ ಲಿಂಗಾರ್ಚನೆಗೆಂದು ನದಿಯತ್ತ ಸಾಗುತ್ತಾರೆ. ಕಳ್ಳತನದಲ್ಲಿ ಒಳಹೋಗಲು ಪ್ರಯತ್ನಿಸಿದ ಮಂಟೇಸ್ವಾಮಿಗೆ ಸಂಗಯ್ಯ ಎರಡೇಟು ಹಾಕುತ್ತಾನೆ. ನಾಲಿಗೆ ಇಲ್ಲದ ಗಂಟೆ ಮತ್ತು ಗುಡುವಿಲ್ಲದ ನಗಾರಿಗಳು ಶಬ್ದಮಾಡುತ್ತವೆ. ಆಗ ಬಸವಣ್ಣನವರು ತಮಗಿಂತ ಮಿಗಿಲಾದ ಶರಣರು ಬಂದಿದ್ದಾರೆಂದು ತಿಳಿದು ಅಲ್ಲಿಗೆ ಬರುತ್ತಾರೆ. ತನ್ನನ್ನು ಕಂಡುಹಿಡಿದುಬಿಡುತ್ತಾರೆಂದು ಮಂಟೇಸ್ವಾಮಿ ಹರಳಯ್ಯನ ಕೇರಿಯಲ್ಲಿರುವ ಕೊಳಚೆ ಗುಂಡಿಗೆ ಬೀಳುತ್ತಾರೆ. ಅಲ್ಲೂ ಅವರನ್ನು ಕಂಡುಹಿಡಿದ ಬಸವಣ್ಣ ಮತ್ತು ನೀಲಮ್ಮನವರು ಗುಂಡಿಯಿಂದ ಮಂಟೇಸ್ವಾಮಿಯನ್ನು ಎಳೆಯುವಾಗ ಅವರ ಕೈಕಾಲುಗಳು ಕಿತ್ತು ಬಂದು ತಲೆ ಬೇರ್ಪಡುತ್ತದೆ. ಬಸವಣ್ಣನವರು ಕೈಕಾಲುಗಳನ್ನು, ನೀಲಮ್ಮನವರು ತಲೆಯನ್ನು ಎತ್ತಿಕೊಂಡು ಪ್ರವೇಶಮಾಡುವಾಗ ಶರಣರು ಅದನ್ನು ನೋಡಿ ‘ಹೆಂಡ ಮಾಂಸಗಳನ್ನು ಬಸವಣ್ಣ ಮತ್ತು ನೀಲಮ್ಮನವರು ತರುತ್ತಿದ್ದಾರೆ, ಅವರು ಕೆಟ್ಟಿದ್ದಾರೆ, ಕಲ್ಯಾಣವನ್ನು ಕೆಡಿಸುತ್ತಾರೆ, ನಾವು ಶುದ್ಧರಾಗಬೇಕು’ ಎಂದು ಮಡಿಯಾಗಲು ನದಿಯತ್ತ ಹೋಗತೊಡಗುತ್ತಾರೆ. ಇತ್ತ ಬಸವಣ್ಣನವರು ಮಂಟೇಸ್ವಾಮಿಯ ರುಂಡ-ಮುಂಡಗಳನ್ನು ಉರಿಗದ್ದುಗೆಯಲ್ಲಿ ಇರಿಸಿ ತಮ್ಮ ತಪ್ಪುಗಳನ್ನು ಮನ್ನಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಅವರು ತಮ್ಮ ನಿಜರೂಪ ತೋರಿಸಿ ಅವರ ಸತ್ಯವನ್ನು ಮೆಚ್ಚಿ ಹರಸುತ್ತಾರೆ.
ಶುದ್ಧವಾಗಲು ಹೋಗಿದ್ದ ಜಂಗಮರ ಲಿಂಗಗಳನ್ನು ಮಾಯಮಾಡಿ ಲಿಂಗವೆಂದರೆ ಅದೊಂದು ತತ್ವವೆಂದು ಮನಗಾಣಿಸಿ ಅವರೆಲ್ಲರನ್ನು ಪರೀಕ್ಷೆಗೆ ಒಡ್ಡಿದಾಗ ಗೆಲ್ಲುವ ಹೊಲೆಯರ ಹೊನ್ನಪ್ಪ ಮತ್ತು ಮಾದಿಗರ ಚನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಈಡಿಗರ ಕ್ಯಾತಪ್ಪ ಅವರನ್ನು ತಮ್ಮ ಶಿಶುಮಕ್ಕಳಾಗಿ ಮಾಡಿಕೊಳ್ಳುತ್ತಾರೆ. ಮುಂದೆಯೂ ಹೀಗೆ ಹಲವೆಡೆ ತಿರುಗುತ್ತ ಶಿಶುಮಕ್ಕಳನ್ನು ಸಂಪಾದಿಸಿಕೊಳ್ಳುತ್ತಾ ಹೋಗುತ್ತಾರೆ. ರಾಚಾಪ್ಪಾಜಿ, ತೋಪಿನ ದೊಡ್ಡಮ್ಮ, ಚೆನ್ನಾಜಮ್ಮ, ಪಲಾರದಯ್ಯ, ಸಿದ್ದಪ್ಪಾಜಿ ಇವರೆಲ್ಲರು ಮಂಟೇಸ್ವಾಮಿಯ ಮುಖ್ಯ ಅನುಯಾಯಿಗಳು. ಹಲವು ಪವಾಡಗಳನ್ನು ಮಂಟೇಸ್ವಾಮಿ ಮಾಡುತ್ತಾರೆ. ಈ ಪವಾಡಗಳೆಲ್ಲವೂ ಜರುಗುವುದು ನಿಜಭಕ್ತಿಯನ್ನು ಪರೀಕ್ಷಿಸಿ ಅಹಂಕಾರವನ್ನು ಮುರಿಯುವುದಕ್ಕಾಗಿಯೇ ಎಂಬುದು ಮುಖ್ಯ. ಹೊಲಸು ತೊಳೆಯುವವರನ್ನು ಕೀಳಾಗಿಸುವ ಜಾತಿ ವ್ಯವಸ್ಥೆಯಲ್ಲಿ ಹೊಲಸಿನ ಮೂಲಕವೇ ನಿಜಭಕ್ತಿಯನ್ನು ಮನಗಾಣಿಸುವುದನ್ನ ಕೀಳೆನಿಸಿಕೊಂಡ ಜಾತಿಯ ಸಂತರೆಲ್ಲರೂ ಮಾಡಿದ್ದಾರೆ. ಭಕ್ತಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರನ್ನು ಅಲ್ಲಾಡಿಸಿ ಪರೀಕ್ಷೆಗೆ ಒಡ್ಡಲು ಸಹ ಅಸಹ್ಯ ಹುಟ್ಟಿಸುವ ಗಲೀಜನ್ನೇ ಪರೀಕ್ಷೆಯ ಮಾನದಂಡವಾಗಿ ಮಂಟೇಸ್ವಾಮಿ ಬಳಸುತ್ತಾರೆ. ತುರಿಗಜ್ಜಿ, ಕೀವು ತುಂಬಿಕೊಂಡ ದೇಹ, ಹೆಗಲ ಮೇಲೆ ಸತ್ತ ಎಮ್ಮೆ ಕರುವಿನ ಹೆಣ ಹೊತ್ತು ಹೋಗುತ್ತಾರೆ. ಪರೀಕ್ಷೆಯ ಅಂತಿಮ ಹಂತದಲ್ಲಿ ಕೊಳಚೆ ಗುಂಡಿಗೆ ಬೀಳುತ್ತಾರೆ. ಅತಿ ಹೀನಾಯವಾದುದೆಂದು ಪರಿಗಣಿಸಿರುವುದನ್ನೇ ಮಾನದಂಡವಾಗಿ ಮಾಡಿಕೊಂಡು ಶುದ್ಧ-ಅಶುದ್ಧ, ಮೇಲು-ಕೀಳಿನ ಗೋಡೆಗಳನ್ನು ಒಡೆಯಲು ಅಸ್ತ್ರವಾಗಿ ಬಳಸುತ್ತಾರೆ.

ನುಡಿದಂತೆ ನಡೆದ ಸಂತಪರಂಪರೆ

ನಾಯಕನಹಟ್ಟಿ ತಿಪ್ಪೆಸ್ವಾಮಿ

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನೆಲೆಸಿದ್ದ ಶರಣ ತಿಪ್ಪೇರುದ್ರಸ್ವಾಮಿಯವರ ಹೆಸರಿನಲ್ಲಿ ನಡೆಯುವ ಜಾತ್ರೆಯು ಹದಿನೈದು ದಿನಗಳವರೆಗೂ ನಡೆಯುತ್ತದೆ. ಇಲ್ಲಿನ ಮೂಲ ದೇವರು ಮಾರಮ್ಮ ಎಂಬ ನಂಬಿಕೆಯೂ ಇದೆ. ಆ ಮೂಲದೇವರು ಈಗಿರುವುದು ಚಿತ್ರದುರ್ಗದ ಪಾಪೇನಹಳ್ಳಿ (ವಡ್ಡನಹಳ್ಳಿ)ಯಲ್ಲಿದೆ. ಹಿಂದೆ ದೇವಸ್ಥಾನದ ಕಾಂಪೌಂಡ್‌ನಲ್ಲಿಯೇ ಜಾತ್ರೆಯ ದಿನ ದನವನ್ನು ಬಲಿಕೊಟ್ಟು ಅಡುಗೆ ಮಾಡಿ ನೈವೇದ್ಯ ಮಾಡುತ್ತಿದ್ದುದು. ಈಗಲೂ ದನವನ್ನು ಹೊರಗೆ ಕೊಯ್ದು ಅಡುಗೆಯನ್ನು ಮಾತ್ರ ಒಳಗೆ ನೈವೇದ್ಯ ಮಾಡಲಾಗುವುದು.ಇದು ಬಹುಶಃ ಮಾರಮ್ಮನಿಗೆ ಮಾಡುತ್ತಿದ್ದ ಆಚರಣೆಯನ್ನು ಸಂಕೇತಿಸುತ್ತಿರಬಹುದು.ದನ ಕೊಯ್ಯಲು ಸಹಾಯ ಮಾಡುವ ಮುಸ್ಲಿಮರು ಸಹ ಜಾತ್ರೆಯಲ್ಲೂ ಭಾಗವಹಿಸುತ್ತಾರೆ.

ತಿಪ್ಪೇಸ್ವಾಮಿಯವರು ಶರಣರು ಮತ್ತು ಸಮಾಜ ಸುಧಾರಕರೂ ಆಗಿದ್ದರು. ಅಸ್ಪೃಶ್ಯರ ಏಳಿಗೆಗಾಗಿ ಕೆಲಸ ಮಾಡಿದವರು. ದಲಿತರ ಮನೆಗೆ ಹೋಗಿ ಊಟ ಮಾಡುತ್ತಿದ್ದರು. ಊರಿನಲ್ಲಿ ಕೆರೆ-ಕಟ್ಟೆ ಕಟ್ಟಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟವರು. ನಾಯಕನಹಟ್ಟಿ ತಿಪ್ಪೇಸ್ವಾಮಿಯ ಜಾತ್ರೆಯಂದು ದಲಿತರೇ ಮೊದಲಿಗೆ ತೇರನ್ನು ಎಳೆಯುತ್ತಾರೆ. ಒಮ್ಮೆ ಯಾವುದೋ ಕಾರಣಕ್ಕೆ ದಲಿತರನ್ನು ಕರೆಯದಿದ್ದಾಗ ತೇರು ಮುಂದೆ ಹೋಗದೆ ಹಾಗೆ ನಿಂತುಬಿಟ್ಟಿತಂತೆ. ಮತ್ತೆ ಹೋಗಿ ದಲಿತರನ್ನು ಕರೆತಂದು ಎಳೆಸಿದಾಗಲೇ ತೇರು ಮುಂದೆ ಹೋಯಿತು ಎಂಬ ಪ್ರತೀತಿ ಇದೆ. ತಿಪ್ಪೆಸ್ವಾಮಿಗೆ ಹರಸಿಕೊಂಡು ಅಲ್ಲಿಗೆ ಹೋಗಿ ತಿಪ್ಪೆಮೇಲೆ ಕೂರಿಸಿ ಮೂಗುಚುಚ್ಚಿಸಿ ಹರಕೆ ತೀರಿಸುವ ಸಂಪ್ರದಾಯವಿದೆ.
ಬಲಿಯಂತಹ ವೈದಿಕರ ಆಚರಣೆಗಳನ್ನು ಮತ್ತು ಜಾತಿವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ ಶರಣ ಚಳುವಳಿಯ ಭಾಗವಾಗಿ ಶರಣ ತಿಪ್ಪೇರುದ್ರಸ್ವಾಮಿಯವರ ಸ್ಥಾಪನೆಯನ್ನು ನೋಡಬಹುದು. ಹಾಗೆಯೇ ತಿಪ್ಪೆಯನ್ನು ಅಸಹ್ಯದಿಂದ ನೋಡದೆ ಫಲವತ್ತತೆಯ ಸಂಕೇತವಾಗಿ ನೋಡಿರುವುದು ಶುದ್ಧ-ಅಶುದ್ಧ ಪರಿಕಲ್ಪನೆಗೆ ತದ್ವಿರುದ್ಧವಾಗಿದೆ. ಇಂತಹ ಸಂತರು ತಳಜಾತಿಗಳ ಸ್ವಾಭಿಮಾನದ ದೇವರಾಗಿ ಸ್ಥಾನಪಡೆದಿದ್ದಾರೆ.

ಪೊರಕೆ ಹಿಡಿದು ಅಧ್ಯಾತ್ಮ ತೋರಿದ ಸಂತ ಗಾಡ್ಗೆ ಬಾಬಾ

ಸಂತ ಗಾಡ್ಗೆ ಬಾಬಾ (೨೩ ಫೆಬ್ರವರಿ ೧೮೭೬- ೨೦ ಡಿಸೆಂಬರ್ ೧೯೫೬) ಅವರು ಮಹಾರಾಷ್ಟ್ರದ ಸಂತ ಮತ್ತು ಸಮಾಜ ಸುಧಾರಕರಾಗಿದ್ದರು. ಹಳ್ಳಿ ಹಳ್ಳಿ ತಿರುಗಿಕೊಂಡು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತ, ನೈರ್ಮಲ್ಯದ ಕುರಿತು ಜನರಿಗೆ ಅರಿವು ಮೂಡಿಸುತ್ತ, ಸ್ವತಃ ತಾನೇ ಚರಂಡಿ ಮೋರಿಗಳನ್ನು ಶುಚಿಗೊಳಿಸಿಕೊಂಡು ತಿರುಬೋಕಿಯಂತೆ ಬದುಕಿದ್ದ ಗಾಡ್ಗೆ ಬಾಬಾ ಈಗಲೂ ಹಲವಾರು ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದ್ದಾರೆ.

ಅವರ ಮೂಲ ಹೆಸರು ದೇಬುಜಿ ಜಿ಼ಂಗ್‌ರಾಜಿ ಜನರ‍್ಕರ್. ದೋಬಿ ಕುಟುಂಬಕ್ಕೆ ಸೇರಿದ ಇವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಶೆಂಡ್‌ಗಾವ್‌ನವರು. ಊಟದ ಮಡಿಕೆಯನ್ನು ತಲೆಗೆ ಟೊಪ್ಪಿಯಂತೆ ಹಾಕಿಕೊಂಡು, ಪೊರಕೆ ಹಿಡಿದುಕೊಂಡು ಹಳ್ಳಿಹಳ್ಳಿ ತಿರುಗುತ್ತ ಅಲ್ಲಿನ ಚರಂಡಿ ಮತ್ತು ಮೋರಿಗಳನ್ನು ಸ್ವಚ್ಛಮಾಡುತ್ತಿದ್ದರು. ಯಾರಾದರು ನಮಸ್ಕಾರ ಹೇಳಲು ಬಂದರೆ ಪ್ರತಿನಮಸ್ಕಾರ ಹೇಳಲು ಕೆಲಸ ಮುಗಿಯುವವರೆಗೂ ಕಾಯಬೇಕೆಂದು ಹೇಳುತ್ತಿದ್ದರು. ಜನ ಅವರಿಗೆ ಊಟ ಮತ್ತು ಹಣವನ್ನು ನೀಡುತ್ತಿದ್ದರು. ಸಂಗ್ರಹಿಸಿದ ಹಣವನ್ನು ಶಾಲೆಗಳು, ಧರ್ಮಛತ್ರಗಳು, ಆಸ್ಪತ್ರೆಗಳು ಮತ್ತು ಪ್ರಾಣಿಗಳ ಆಶ್ರಯ ತಾಣಗಳನ್ನು ಕಟ್ಟಿಸಲು ಬಳಸುತ್ತಿದ್ದರು. ಆಧ್ಯಾತ್ಮಿಕ ಗುರುಗಳಾಗಿದ್ದ ಮೆಹರ್ ಬಾಬಾರಿಗೆ ಗಾಡ್ಗೆ ಬಾಬಾ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಭಜನೆಗಳನ್ನು, ಕಬೀರರ ದೋಹೆಗಳನ್ನು ಹಾಡುತ್ತ ಸೇವೆ, ಕರುಣೆಯ ಮೌಲ್ಯವನ್ನು ಸಾರುತ್ತಿದ್ದರು. ಕಠಿಣ ದುಡಿಮೆ, ಸರಳ ಜೀವನ ಮತ್ತು ನಿಸ್ವಾರ್ಥ ಸೇವೆಯನ್ನು ಬೋಧಿಸುತ್ತ ಅಂತೆಯೇ ಬದುಕುತ್ತ ಇದ್ದ ಗಾಡ್ಗೆ ಬಾಬಾ ೧೯೫೬ರಲ್ಲಿ ತೀರಿಕೊಂಡರು. ಅವರ ಗೌರವಾರ್ಥ ಭಾರತ ಸರ್ಕಾರವು ನೈರ್ಮಲ್ಯ ಮತ್ತು ನೀರಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅಮರಾವತಿ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇರಿಸಲಾಗಿದೆ. ಗಾಡ್ಗೆ ಬಾಬಾ ಅವರನ್ನು ಅಂಬೇಡ್ಕರ್ ಅವರು ಭೇಟಿಯಾಗಿದ್ದರು.

ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧಿಯವರು ತಾವು ಪ್ರಕಟಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ಭಂಗಿಗಳ ಕುರಿತು ಹೀಗೆ ಬರೆದಿದ್ದಾರೆ. “ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳು ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟ್ಟೆಂಬರ್ ೧೯೩೩) ಸ್ವಚ್ಛತೆಯ ಕೆಲಸ ಮಾಡುವ ಭಂಗಿಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಮತ್ತು ದುಡಿಮೆಯ ಘನತೆಯ ಹಿನ್ನೆಲೆಯಲ್ಲಿ ನೋಡಿದ ಮಹಾತ್ಮ ಗಾಂಧೀಜಿಯವರು ತಮ್ಮ ಆಶ್ರಮದಲ್ಲಿ ಸ್ವತಃ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು ಹಾಗೂ ಎಲ್ಲರಿಂದಲೂ ಶೌಚಾಲಯವನ್ನು ತೊಳೆಸುವ ಕೆಲಸವನ್ನು ಮಾಡಿಸುತ್ತಿದ್ದರು.

“ದೆಹಲಿ ನಿವಾಸಿಗಳ ಆರೋಗ್ಯ ಭಂಗಿಗಳ ಜಾಗರೂಕ ದುಡಿಮೆಯನ್ನು ಆಧರಿಸಿದೆ. ಆದರೆ ಆ ಭಂಗಿಗಳ ನಿವಾಸವು ಕಿಟಕಿಗಳಿಲ್ಲದ, ಬೆಳಕಿಲ್ಲದ ಗೂಡುಗಳಾಗಿವೆ… ನಾವು ಎಚ್ಚೆತ್ತು ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ದೇವರು ನಮ್ಮನ್ನು ಕ್ಷಮಿಸಲಾರ” (ಸೆಪ್ಟಂಬರ್ ೧೯೩೩)

ಎಲ್ಲರ ಕಣ್ಣೀರು ಉಪ್ಪೆಂದ ಬುದ್ಧ ಗುರು

ಅರಿವೇ ಗುರು, ನಿರಂತರ ಪರಿವರ್ತನೆಯೇ ಸತ್ಯವೆಂದ ಬುದ್ಧ ತನ್ನ ತತ್ವ ಮತ್ತು ಆಚರಣೆಯ ಮೂಲಕ ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದ ಮೊದಲಿಗ. ಜನರಾಡುವÀ ಮಾತಿನಲ್ಲಿ, ನಿತ್ಯ ಬದುಕಿನ ಉದಾಹರಣೆಗಳ ಮೂಲಕ ಸತ್ಯವನ್ನು ಅರಿವು ಮಾಡಿಸಿದ ಮಹಾನ್ ಗುರು ಆತ. ಎಲ್ಲರೊಳಗೂ ಅರಿವಿನ ಬೆಳಕಿದೆ ಎಂಬ ಸತ್ಯವನ್ನು ಅರಿತಿದ್ದ ಬುದ್ಧ, ಜಾತಿ-ಅಂತಸ್ತುಗಳ ಭೇದವೆಣಿಸದೆ ರಾಜ-ರಾಣಿಯರು, ಪಂಡಿತರಿಂದ ಹಿಡಿದು, ವೇಶ್ಯೆ, ಕ್ಷೌರಿಕ, ಮಗುವನ್ನು ಕಳೆದುಕೊಂಡು ಸಂಕಟದಲ್ಲಿ ಬೆಂದ ತಾಯಿ, ಕುಟುಂಬದವರನ್ನೆಲ್ಲ ಕಳೆದುಕೊಂಡು ಹುಚ್ಚಿಡಿದು ಬತ್ತಲಾಗಿ ತಿರುಗುತ್ತಿದ್ದ ತಾಯಿ, ಕೊಲೆಗಾರ, ಮಲ ಬಾಚುವವ…. ಹೀಗೆ ಸಕಲರಿಗೂ ಅರಿವಿನ ಮಾರ್ಗ ತೋರಿಸಿಕೊಟ್ಟ.
ಸುನೀತನೆಂಬ ಮಲ ಬಾಚುವವನು ಮೊದಲ ಬಾರಿಗೆ ಬುದ್ಧ ಎದುರಿಗೆ ಬರುತ್ತಿರುವುದನ್ನು ಕಂಡು ಮುದುರಿಕೊಂಡು ಹಿಂದೆ ಸರಿಯುತ್ತಾನೆ. ಬುದ್ಧ ಆತನ ಬಳಿಗೇ ಹೋದಾಗ ಆತ ಹೆದರಿ ನದಿಯೊಳಗೆ ಅವಿತುಕೊಂಡು ‘ನನ್ನ ಬಳಿ ಬರಬೇಡಿ ನನ್ನನ್ನು ಮುಟ್ಟಿದರೆ ನೀವು ಗಲೀಜಾಗುವಿರಿ, ನಾನು ಕೀಳು ಜಾತಿಯವನು’ ಎಂದು ಹೇಳುತ್ತಾನೆ. ಆಗ ಬುದ್ಧ ‘ನಮ್ಮನ್ನು ಗಲೀಜು ಮಾಡುವುದು ದುರಾಸೆ, ದ್ವೇಷ, ಮೋಹವಷ್ಟೇ. ನಿನ್ನಂತಹ ವ್ಯಕ್ತಿ ಸಂತೋಷವನ್ನಲ್ಲದೆ ಬೇರೇನನ್ನು ತರಲು ಸಾಧ್ಯವಿಲ್ಲ. ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರ ಕಣ್ಣೀರು ಉಪ್ಪೇ’ ಎಂದು ಹೇಳಿ ಅವನ ಬಳಿ ಹೋಗಿ ಪ್ರೀತಿಯಿಂದ ಅವನ ಮೈದಡವಿ ಶಿಷ್ಯರ ಸಹಾಯದಿಂದ ಆತನ ತಲೆ ಬೋಳಿಸಿ, ಸ್ನಾನಮಾಡಿಸಿ, ಕಾಷಾಯ ವಸ್ತ್ರ ನೀಡಿ ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಕರೆದುಕೊಂಡು ಹೋಗುತ್ತಾನೆ. ಮುಂದೆ ಆತ ಬಹುದೊಡ್ಡ ಗುರುವಾಗುತ್ತಾನೆ. ಮಲಬಾಚುವವನನ್ನು ಶಿಷ್ಯನಾಗಿ ಸ್ವೀಕರಿಸಿ ಸಂಘಕ್ಕೆ ಸೇರಿಸಿಕೊಂಡದ್ದನ್ನು ವಿರೋಧಿಸಿದ ಹಲವರು ರಾಜನಿಗೆ ದೂರು ನೀಡುತ್ತಾರೆ. ರಾಜ ಪಸೇನದಿ ವಿಚಾರಿಸುವ ಸಲುವಾಗಿ ಬುದ್ಧನ ಆಶ್ರಮಕ್ಕೆ ಹೋಗುತ್ತಾನೆ. ಆಶ್ರಮದಲ್ಲಿ ಭಿಕ್ಕುವೊಬ್ಬ ಉಪದೇಶ ಮಾಡುವುದನ್ನು ಕೇಳಿ ಆಕರ್ಷಿತನಾಗಿ ಅಲ್ಲೇ ನಿಲ್ಲುತ್ತಾನೆ. ಆತನ ಮುಖ ಶಾಂತವಾಗಿದ್ದು, ಕಣ್ಣುಗಳು ದೀಪದಂತೆ ಬೆಳಗುತ್ತಿರುತ್ತವೆ. ನಂತರ ರಾಜ ಬುದ್ಧನಲ್ಲಿಗೆ ಹೋಗಿ ಯಾರು ಆ ಭಿಕ್ಕು ಎಂದು ಕೇಳುತ್ತಾನೆ. ಬುದ್ಧ ‘ಅವನೇ ಸುನೀತ, ಅವನ ಸಾಧನೆ ದೊಡ್ಡದು. ಬಂದ ಕೆಲವೇ ತಿಂಗಳಲ್ಲಿ ಗುರುವಾದ. ಎಲ್ಲರೊಳಗೂ ಅರಿವಿನ ಬೆಳಕು ಇರುತ್ತದೆ. ಅರಿವಿಗೆ ಜಾತಿ ಭೇದಗಳಿಲ್ಲ ಎಲ್ಲರ ರಕ್ತವೂ ಕೆಂಪೇ’ ಎಂದು ಹೇಳುತ್ತಾನೆ. ರಾಜ ಏನೂ ಮಾತನಾಡದೆ ಹಿಂತಿರುಗುತ್ತಾನೆ. (Thich Nhat Hanh: 279:2014)

ರವಿದಾಸ

ರವಿದಾಸರು (೧೫ ಅಥವಾ ೧೬ನೆಯ ಶತಮಾನ) ಉತ್ತರ ಭಾರತದ ಭಕ್ತಿಚಳುವಳಿಯ ಪ್ರಮುಖ ಸಂತ ಕವಿ. ವಾರಣಾಸಿಯ ಅಸ್ಪೃಶ್ಯ ಚಮ್ಮಾರ ಜಾತಿಗೆ ಸೇರಿದವರು. ಇವರ ತಾಯಿ ಕಲ್ಸಾದೇವಿ, ತಂದೆ ಸಂಟೋಕ್ ದಾಸ್. ತನ್ನ ಆಧ್ಯಾತ್ಮಿಕ ಹುಡುಕಾಟವನ್ನು ನಡೆಸುತ್ತ ಹಲವಾರು ವರ್ಷಗಳ ಕಾಲ ಗಂಗಾ ತೀರದಲ್ಲಿ, ಸಾಧು-ಸಂತರು ಹಾಗೂ ಸನ್ಯಾಸಿಗಳ ಸಂಘದಲ್ಲಿ ಕಳೆದರು. ತಮ್ಮದೆ ಒಂದು ಪಂಥವನ್ನು ಹುಟ್ಟುಹಾಕಿದರು. ಅದನ್ನು ರವಿದಾಸೀಯ ಪಂಥವೆಂದು ಕರೆಯಲಾಗುತ್ತದೆ. ತನ್ನ ಹಾಡು/ಕಾವ್ಯ/ತತ್ವಗಳ ಮೂಲಕ ರಾಜಾಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಇನ್ನು ಹಲವೆಡೆ ವ್ಯಾಪಕವಾಗಿ ಸಂಚರಿಸಿದರು. ಹಲವು ಜಾತಿ ಸಮುದಾಯಗಳಿಗೆ ಸೇರಿದ ಜನರು ಇವರ ಮಾರ್ಗದರ್ಶನ ಪಡೆದು ಅನುಯಾಯಿಗಳಾದರು. ಬ್ರಾಹ್ಮಣರೂ ಇವರ ತತ್ವದರ್ಶನ ಮತ್ತು ವ್ಯಕ್ತಿತ್ವಕ್ಕೆ ತಲೆಬಾಗಿದರು, ತಲೆ ದೂಗಿದರು. ಇವರ ೪೧ ಪದ್ಯಗಳನ್ನು ಸಿಖ್ ಧರ್ಮದ ಧರ್ಮಗ್ರಂಥ ‘ಗ್ರಂಥಸಾಹಿಬ್’ನಲ್ಲಿ ಸೇರಿಸಲಾಗಿದೆ. ರವಿದಾಸರು ಸಿಖ್ ಧರ್ಮ ಸ್ಥಾಪಕ ಗುರುನಾನಕ್ ಅವರನ್ನು ಭೇಟಿಯಾಗಿದ್ದರೆಂದು ಹೇಳಲಾಗುತ್ತದೆ.

ರವಿದಾಸರ ಊರಿನಲ್ಲಿ ಅವರ ದೇವಾಲಯವಿದೆ. ಅಲ್ಲಿ ಪ್ರತಿದಿನವೂ ಪೂಜೆ ನಡೆಯುತ್ತದೆ. ಅವರ ಹಾಡುಗಳನ್ನು ಹಾಡಲಾಗುತ್ತದೆ. ಪ್ರತಿ ವರ್ಷ ಅವರ ಜನ್ಮದಿನಾಚರಣೆಯನ್ನು ಉತ್ಸವದಂತೆ ಆಚರಿಸಲಾಗುತ್ತದೆ.

ಜಾತಿಯಿಂದ ಅಸ್ಪೃಶ್ಯನಾದ ರವಿದಾಸರು ತಮ್ಮ ಜಾತೀಯ ಕೀಳು ಸ್ಥಾನವನ್ನೇ ದೈವಿಕವಾಗಿಸಿದವರು. ತನ್ನ ಮತ್ತು ದೇವರೊಂದಿಗಿನ ಸಂಬಂಧವನ್ನು ಅವರು ಹೋಲಿಸುವುದು ರೇಷ್ಮೆಹುಳು ಮತ್ತು ರೇಷ್ಮೆಗೂಡಿನ ಎಳೆಗೆ. ತಾನೊಂದು ಹುಳು ತನ್ನ ಸುತ್ತಿರುವ ರೇಷಿಮೆ ಎಳೆ ದೇವರು ಎನ್ನುವಾಗ ಹುಳುವಿನ ಎಂಜಲಿನಲ್ಲಿ ದೇವರೂಪುಗೊಳ್ಳುತ್ತಾನೆ. ಮತ್ತೊಂದೆಡೆ ತಾನು ನಾರುವ ಅರಳು ಬೀಜವಾದರೆ ದೇವ ಸುಗಂಧ ಸೂಸುವ ಗಂಧವೆನ್ನುತ್ತಾರೆ.

ಇವರ ಹಾಡು ಮತ್ತು ಕಾವ್ಯದಲ್ಲಿ ತಾರತಮ್ಯಗಳಿಗೆ ಪ್ರತಿರೋಧವನ್ನು ಜಾತಿ, ಧರ್ಮ, ಸಮುದಾಯಗಳ ನಡುವಿನ ಬೇಧವನ್ನು ಮೀರಿದ ಸಾಮಾಜಿಕ ಒಗ್ಗಟ್ಟನ್ನು ಸಾಧಿಸುವ ಹುಡುಕಾಟವನ್ನು, ತನ್ನೊಳಗೆ ತನ್ನೊಂದಿಗೆ ನಡೆಸುವ ಹೋರಾಟವನ್ನು ಕಾಣಬಹುದೆಂದು ಪೀಟರ್ ಪ್ರೈಡ್‌ಲ್ಯಾಂಡ್ ಎಂಬ ವಿದ್ವಾಂಸರು ಹೇಳುತ್ತಾರೆ.
(https://www.britannica.com › https://en.wikipedia.org › ).
ದಮನಿತ ಜಾತಿಗೆ ಸೇರಿದವನಾದರೂ ಎಲ್ಲರೂ ಸಮಾನರಾದ ದುಃಖವಿಲ್ಲದೂರಿನ ಕನಸು ಕಂಡ ಸಂತ ಕವಿ ಈತ. ಆತನ ಕನಸು ಇಂದಿನ ಕನಸೂ ಆಗಿದೆ.


೧.ನಗರದ ಓ ನನ್ನ ಜನರೇ, ಎಲ್ಲರಿಗೂ ತಿಳಿದಿದೆ
ನಾನು ಕಸುಬಿನಿಂದ ಚಮ್ಮಾರ, ಜಾತಿಯಿಂದ ಸಮಗಾರ
ಕೀಳು ಜಾತಿಯವ ಆದರೇನು ಎದೆಯೊಳಗೆ ಭಗವಂತನ ಧೇನಿಸುವೆ

೨. ಐಸಿರಿಯ ಲೋಕದಲಿ ವ್ಯಥೆಯ ಹೆಸರಿಲ್ಲ
ಆನಂದಪುರವದು ನೋವಿನ ವಿಳಾಸವಿಲ್ಲ
ಕರವಿಲ್ಲ, ಚಿಂತೆಯಿಲ್ಲ, ಆಸ್ತಿ ಒಡೆತನವಿಲ್ಲ
ತಪ್ಪುಗಳಿಲ್ಲ, ಚಿಂತೆಗಳಿಲ್ಲ, ಭೀತಿ ಕಿರುಕುಳವಿಲ್ಲ
ಓ ನನ್ನ ಬಂಧು ಆ ಲೋಕ ನನ್ನದು
ಆ ದೂರದ ನನ್ನ ಮನೆಯೊಳಗೆ ತಪ್ಪಿನ ಸುಳಿವಿಲ್ಲ
ಸಮೃದ್ಧ, ಸುಭದ್ರ ಸಾಮ್ರಾಜ್ಯದಲಿ
ಎಲ್ಲರೊಂದೆ ಮೂರನೆಯವರಿಲ್ಲ, ಎರಡನೆಯವರಿಲ್ಲ ಎಲ್ಲರೊಂದೇ
ಅಲ್ಲಿನ ಅನ್ನಪಾನಾದಿ ಬಲು ಪ್ರಸಿದ್ಧ, ಅಲ್ಲಿ ನೆಲೆಸಿರುವರೆಲ್ಲರಿಹರು
ಸಂತೃಪ್ತಿ, ಸುಭಿಕ್ಷೆಯಲಿ
ಏನೋ ಮಾಡಿಕೊಂಡು, ಇಷ್ಟಬಂದಲ್ಲಿಗೆ ಹೋಗುತ್ತಾ
ಸವಾಲಿಲ್ಲದ ಅಲೌಕಿಕ ಅರಮನೆಯಲ್ಲಿ ಹೊರಳಾಡುತ್ತಾರೆ
ಹೇಳುತ್ತಾನೆ ರವಿದಾಸ, ಬಿಡುಗಡೆ ಹೊಂದಿದ ಚಮ್ಮಾರ
ನನ್ನ ಆಜು-ಬಾಜಿನಲಿ ತಿರುಗಾಡುವವರೆಲ್ಲ ನನ್ನ ಗೆಳೆಯರು (Gail Omvedt: 104 & 106-107:2008)

ಮುತ್ಯಾಲಮ್ಮ : ಆಚರಣೆ-ಪುರಾಣ

ಮುತ್ಯಾಲಮ್ಮನಿಗೆ ಸಫಾಯಿ ಕರ್ಮಚಾರಿಗಳು ವಿಶೇಷವಾಗಿ ಆಂಧ್ರದಿಂದ ವಲಸೆ ಬಂದಿರುವ ಮಾದಿಗ ಸಮುದಾಯದವರು ಬಹಳ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮುತ್ಯಾಲು, ಮುತ್ಯಾಲಮ್ಮ ಎಂದು ಗಂಡು ಮತ್ತು ಹೆಣ್ಣುಮಕ್ಕಳಿಗೆ ಹೆಸರನ್ನು ಇಡುವುದು ಅವರಲ್ಲಿ ಜಾರಿಯಲ್ಲಿದೆ. ಹರಕೆ ಹೊತ್ತವರು, ಪೂಜೆ ಮಾಡಿಸಬೇಕೆಂದುಕೊಂಡವರು ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಸ್ಥಾನವು ತೆಲಂಗಾಣ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಕುರಿ, ಮೇಕೆ ಅಥವಾ ಕೋಳಿಯನ್ನು ದೇವಿಗೆ ಬಲಿ ನೀಡಿ ದೇವಸ್ಥಾನದ ಸುತ್ತ ಇರುವ ಬಯಲಿನಲ್ಲಿ ಒಲೆ ಹೂಡಿ ಬಲಿ ನೀಡಿದ ಪ್ರಾಣಿಯ ಮಾಂಸದಲ್ಲಿ ಅಡುಗೆ ಮಾಡಿ ಉಂಡು ಬರುತ್ತಾರೆ. ತಾವಷ್ಟೇ ಉಣ್ಣದೆ ಕೇಳಿದವರಿಗೆಲ್ಲ ಉಣ್ಣಲು ನೀಡುತ್ತಾರೆ. ಎಲ್ಲ ಖಾಲಿ ಮಾಡಿಯೇ ಬರಬೇಕೆಂಬ ನಂಬಿಕೆ ಇದೆ. ಬೆಲ್ಲ, ಹೆಸರುಬೇಳೆ ಮತ್ತು ಅಕ್ಕಿ ಸೇರಿಸಿ ಮಾಡಿದ ಖಾದ್ಯ ಬಾನವನ್ನು ತಲೆಯ ಮೇಲೆ ಹೊತ್ತು ತಂದು ದೇವಿಗೆ ನೈವೇದ್ಯ ಮಾಡಿಸಿ ಪ್ರಸಾದವಾಗಿ ನೀಡುವುದು ವಾಡಿಕೆಯಲ್ಲಿದೆ. ಯಾವ ಪಾತ್ರೆಯಲ್ಲಿ ಬೇಯಿಸಿರುತ್ತಾರೋ ಅದೇ ಪಾತ್ರೆಗೆ ಅರಿಶಿಣದ ದಾರವನ್ನು ಕಟ್ಟಿ, ಬೇವಿನ ಸೊಪ್ಪನ್ನು ಸಿಕ್ಕಿಸಿಕೊಂಡು ಬರುತ್ತಾರೆ. ಪಾತ್ರೆಗೆ ಅರಿಶಿಣ ಬಳಿದಿರುತ್ತಾರೆ. ಮಕ್ಕಳಿಗಾಗಿ ಹರಸಿಕೊಂಡವರು ಉಪವಾಸವಿದ್ದು ಅರಿಶಿಣ ಲೇಪಿಸಿಕೊಂಡು ಎರಡೂ ಕೈಗಳನ್ನು ಮೇಲೆತ್ತಿ ಹಾವಿನ ಹೆಡೆಯಂತೆ ಆಡಿಸುತ್ತ ನಿಧಾನವಾಗಿ ಕುಣಿಯುತ್ತ ದೇವಿಯ ಗುಡಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಪ್ರಾಣಿಗಳನ್ನು ಬಲಿ ನೀಡುವುದು ಗುಡಿಯ ಹೊರಗಿನ ಮುಂಭಾಗದಲ್ಲಿ. ಮಾಂಸದ ಅಡುಗೆಯನ್ನು ಗುಡಿಯ ಒಳಗೆ ನೈವೇದ್ಯಕ್ಕೆ ತರುವುದಿಲ್ಲ. ನೈವೇದ್ಯಕ್ಕೆಂದು ಬಾನವನ್ನು ಮಾತ್ರ ಗುಡಿಯ ಒಳಗೆ ತರುತ್ತಾರೆ. ಹುತ್ತಕ್ಕೆ ದೇವಿಯ ಕಣ್ಣು ಹಾಗೂ ಬಾಯಿಗಳನ್ನು ಅಂಟಿಸಿ ಅದನ್ನು ದೇವಿ ಎಂದು ಪೂಜಿಸುತ್ತಾರೆ. ಪಕ್ಕದಲ್ಲಿಯೇ ದೊಡ್ಡದೊಂದು ಗುಂಡುಕಲ್ಲಿದೆ.


ಪುರಾಣ

ದೇವಿಗೆ ಪೂಜೆ ಮಾಡುವ ಮುತ್ಯಾಲಪ್ಪನವರು ಹೇಳಿದ ದೇವಿಯ ಕತೆ ಹೀಗಿದೆ,
ಭೂಮಿಯ ಹುಟ್ಟಿಗೂ ಮೊದಲು ಓಂಕಾರ ಬಿಟ್ಟರೆ ಭೂಮಿ, ಗಾಳಿ, ನೀರು ಏನೂ ಇರಲಿಲ್ಲ. ಓಂಕಾರವು ಪಕ್ಷಿಯ ಸ್ವರೂಪ ಪಡೆದುಕೊಂಡು ಮುಕ್ಕರಿಸಿ ಮೂರು ಮೊಟ್ಟೆಯನ್ನಿಟ್ಟಿತು. ಮೊದಲನೇ ಮೊಟ್ಟೆಯಲ್ಲಿ ಬ್ರಹ್ಮ, ವಿಷ್ಣು, ಈಶ್ವರರು ಹುಟ್ಟಿದರು. ಎರಡನೆಯ ಮೊಟ್ಟೆಯನ್ನು ಒಡೆದಾಗ ಮೇಲಿನ ಚಿಪ್ಪು ಆಕಾಶವಾಗಿ ಕೆಳಗಿನ ಚಿಪ್ಪು ಭೂಮಿಯಾಯಿತು. ಮೂರನೆಯ ಮೊಟ್ಟೆಯಲ್ಲಿ ಮೂರು ಬ್ರಾಹ್ಮಣರು ಜನಿಸಿದರು. ಅವರೆಂದರೆ ನಾಗಲೋಕ/ಪಾತಾಳಲೋಕವನ್ನು ನೋಡಿಕೊಳ್ಳುವ ನಾಗಋಷಿ ಬ್ರಾಹ್ಮಣ, ದೇವಲೋಕವನ್ನುನೋಡಿಕೊಳ್ಳುವ ದೇವಋಷಿ ಬ್ರಾಹ್ಮಣ ಮತ್ತು ಕಲಿಯುಗವನ್ನು ನೋಡಿಕೊಳ್ಳುವ ಕಲಿಋಷಿ ಬ್ರಾಹ್ಮಣ ಅಂದರೆ ಕಮ್ಮಗಿರಿ ಸ್ವಾಮಿ. ಈ ಕಮ್ಮಗಿರಿ ಸ್ವಾಮಿಯು ಮೂರು ವರ್ಷ ಪೂರ್ವದಿಕ್ಕು, ಮೂರು ವರ್ಷ ಪಶ್ಚಿಮ ದಿಕ್ಕು ಹಾಗೂ ಮೂರು ವರ್ಷ ಉತ್ತರ ದಿಕ್ಕನ್ನು ಸಂಚರಿಸಿಕೊಂಡು ದಕ್ಷಿಣ ದಿಕ್ಕಿನ ಸಂಚಾರಕ್ಕೆ ಬರುತ್ತಾರೆ. ಹಾಗೆ ಬರುವಾಗ ನರಸಿಂಹ ಕೋಟೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ಆ ಊರಿನವರು ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟಿಸುವುದರಲ್ಲಿರುತ್ತಾರೆ. ಎಂಟು ದಿನಗಳ ಪೂಜೆಯನ್ನು ಮುಗಿಸಿ ಒಂಭತ್ತನೆಯ ದಿನದ ಪೂಜೆ ಮಾಡುವ ಹೊತ್ತಿಗೆ ಋಷಿಗಳು ಅಲ್ಲಿಗೆ ಬರುತ್ತಾರೆ. ಪ್ರಾಣ ಪ್ರತಿಷ್ಠಾಪನೆ ನಡೆಯುವಾಗ ‘ಸ್ವಲ್ಪ ನಿಲ್ಲಿ, ನಾನು ಕಾಶಿಗೆ ಹೋಗಿ ಪವಿತ್ರ ನೀರನ್ನು ತರುತ್ತೇನೆ. ಅಲ್ಲಿಯವರೆಗೂ ನೀವೆಲ್ಲರೂ ಉಪವಾಸವಿದ್ದು ಕಾಯುತ್ತಿರಿ’ ಎಂದು ಹೇಳಿ ಅದೃಶ್ಯರಾಗುತ್ತಾರೆ. ಜನರೆಲ್ಲ ‘ಕಾಶಿ ಎಷ್ಟು ದೂರವಿದೆ ಈತ ಅಲ್ಲಿಗೆ ಹೋಗಿ ನೀರು ತರುವುದು ಯಾವಾಗ? ಅಲ್ಲಿಯವರೆಗೂ ಉಪವಾಸವಿರಲು ಸಾಧ್ಯವೇ?’ ಎಂದುಕೊಂಡು ಊಟ ಮಾಡಲಾರಂಭಿಸುತ್ತಾರೆ. ತಮ್ಮ ದಿವ್ಯ ಶಕ್ತಿಯಿಂದ ಕಾಶಿಗೆ ಹೋಗಿ ಪವಿತ್ರ ಜಲವನ್ನು ತಂದ ಋಷಿ ತನ್ನ ಮಾತನ್ನು ಮೀರಿ ಜನ ಊಟಮಾಡುತ್ತಿರುವುದನ್ನು ನೋಡಿ ಕೋಪಗೊಂಡು ಅನ್ನ ಸುಣ್ಣವಾಗಲಿ, ಹಪ್ಪಳ ಕಪ್ಪೆಯಾಗಲಿ, ಎಲೆ ಕಾಗೆಯಾಗಿ ಹಾರಿ ಹೋಗಲಿ ಎಂದು ಶಪಿಸುತ್ತಾರೆ. ಜನ ಹೋಗಿ ತಪ್ಪಾಯಿತೆಂದು ಬೇಡಿಕೊಂಡಾಗ ‘ಅರ್ಧ ಬರುತ್ತೆ; ಅರ್ಧ ಹೋಗುತ್ತೆ’ ಎಂದು ಮುಂದೆ ಹೋಗುತ್ತಾರೆ.
ಅದೇ ಊರಲ್ಲಿ ಆದಿಶಕ್ತಿ ಹುತ್ತ ಮುತ್ತಿರುವ ಗುಂಡುಕಲ್ಲಿನಲ್ಲಿ ನೆಲೆಸಿರುತ್ತಾಳೆ. ಆ ಕಲ್ಲನ್ನು ದನಕಾಯುವ ಹುಡುಗರು ಪೂಜೆ ಮಾಡುತ್ತಿರುತ್ತಾರೆ. ಅತ್ತ ಬರುತ್ತಿದ್ದ ಬ್ರಾಹ್ಮಣನನ್ನು ಕಂಡ ಹುಡುಗರು ಪೂಜೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ಋಷಿಯು ಕಾಶಿಯಿಂದ ತಂದಿದ್ದ ಪವಿತ್ರ ಜಲವನ್ನು ಕಲ್ಲು ಗುಂಡಿನ ಮೇಲೆ ಪ್ರೋಕ್ಷಣೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ನಿನ್ನ ಹಣೆಗೆ ರಕ್ತತಿಲಕ ತಪ್ಪಿದ ದಿನ ಸಿಡಿದು ಚೂರಾಗುತ್ತೀಯ ಎಂದು ಶಾಪ ನೀಡಿ ಹೋಗುತ್ತಾರೆ.
ಆ ಊರಿನಲ್ಲಿ ಮುಸಲನ್ನ ಮತ್ತು ಗಿಡ್ಡಣ್ಣ ಎಂಬ ಅಣ್ಣ ತಮ್ಮಂದಿರು ಇರುತ್ತಾರೆ. ಅವರು ಏಳು ಜೊತೆ ಎತ್ತು, ಏಳು ಜೊತೆ ಜೀತಗಾರರನ್ನಿಟ್ಟುಕೊಂಡು ವ್ಯವಸಾಯ ಮಾಡುತ್ತಿರುತ್ತಾರೆ. ಕಡ್ಲೆಕಾಯಿಯನ್ನು ಬಿತ್ತಿರುತ್ತಾರೆ. ಬಲಿತ ಕಾಯಿಗಳನ್ನು ಕೀಳುತ್ತಿರುವ ಸಂದರ್ಭದಲ್ಲಿ ಒಂದು ಗಿಡವನ್ನು ಕೀಳಲು ತುಂಬಾ ಕಷ್ಟವಾಗುತ್ತದೆ. ಆಗ ಕಲ್ಲುಗುಂಡಿನ ಸ್ವರೂಪದಲ್ಲಿದ್ದ ಆದಿಶಕ್ತಿಯು ನೆಟ್ಟ ನೋಟದಿಂದ ಅತ್ತ ನೋಡಿದಾಗ ಕಾಯಿಗಳು ಸುಲಭವಾಗಿ ಹೊರಬರುತ್ತವೆ. ಕೀಳುತ್ತಿದ್ದವರಿಗೆ ಕಲ್ಲು ಕಾಣಿಸುತ್ತದೆ. ಆಗ ಅವರು ಕಲ್ಲು ಚೆನ್ನಾಗಿದೆ ಎಂದು ಎತ್ತಿ ಪಕ್ಕಕ್ಕೆ ಇಡುತ್ತಾರೆ. ಮರುದಿನ ಕೆಲಸಕ್ಕೆ ಬಂದಾಗ ಇಟ್ಟಿದ್ದ ಜಾಗದಿಂದ ಕಲ್ಲು ಮೂಲ ಸ್ಥಾನಕ್ಕೆ ಹೋಗಿರುತ್ತದೆ. ಮತ್ತೆ ತೆಗೆದಿಡುತ್ತಾರೆ. ಮತ್ತೆ ಸ್ವಸ್ಥಾನಕ್ಕೆ ಕಲ್ಲು ಹೋಗಿರುತ್ತದೆ. ಮೂರನೆಯ ದಿನವೂ ಹಾಗೆ ಆಗುತ್ತದೆ. ಇದು ಯಾರೋ ಎತ್ತಿ ಇಡುತ್ತಿದ್ದಾರೆ ಎಂದು ಏಳೂ ಜನರು ರಾತ್ರಿ ಕಾವಲು ಕಾಯ್ದು ಕಂಡು ಹಿಡಿಯಬೇಕೆಂದು ಅಲ್ಲಿಗೆ ಬರುತ್ತಾರೆ. ಅರ್ಧ ರಾತ್ರಿಯಲ್ಲಿ ಆ ಕಲ್ಲಿನಿಂದ ರಾಕ್ಷಸಾವತಾರ ಭೂಮಿಯಿಂದ ಆಕಾಶದವರೆಗೂ ಎದ್ದು ನಿಂತದ್ದನ್ನು ನೋಡಿ ಏಳೂ ಜನರು ರಕ್ತಕಾರಿಕೊಂಡು ಸಾಯುತ್ತಾರೆ. ಎತ್ತುಗಳೂ ಸಾಯುತ್ತವೆ. ಹೋದರ‍್ಯಾರೂ ಬರಲಿಲ್ಲವೆಂದು ಅಣ್ಣ ಮತ್ತು ತಮ್ಮ ಹೋಗುತ್ತಾರೆ, ಊರಿಗೆ ಊರೇ ಹೋಗುತ್ತದೆ. ಈ ವಿಷಯ ಸರ್ಕಾರಕ್ಕೆ ಗೊತ್ತಾಗುತ್ತದೆ. ಯಾರೋ ಕೊಲೆ ಮಾಡಿದ್ದಾರೆಂದು ಬೇಡಿ ಹಾಕಲು ಬಂದಾಗ ದೇವಿಯು ಮೂರು ವರ್ಷದ ಹುಡುಗಿಯ ರೂಪದಲ್ಲಿ ಕಾಣಿಸಿಕೊಂಡು ಕೇಕೆ ಹಾಕಿ ಕೂಗುತ್ತಾಳೆ. ‘ಯಾರು ನೀನು’ ಎಂದು ಕೇಳಿದಾಗ ‘ನಾನು ನರಸಿಕೋಟೆ ಮುತ್ಯಾಲಮ್ಮ. ನನ್ನ ಪೂಜಿಸಿ’ ಎನ್ನುತ್ತಾಳೆ. ‘ಹೇಗೆ ನಂಬುವುದು ನೀನು ದೇವಿ ಎಂದು? ನೆಲಕ್ಕೆ ತಗುಲದೆ ಗಾಳೀಲಿ ನಿಂತರೆ ನಂಬುತ್ತೇವೆ’ ಎಂದು ಜನ ಹೇಳುತ್ತಾರೆ. ಆಗ, ‘ಪೂಜೆ ಮಾಡಿ ನೋಡಿ ನೀವು ಹೇಳಿದಂತೆ ಆಗುತ್ತದೆ’ ಎಂದು ಹೇಳುತ್ತಾಳೆ. ಪೂಜೆ ಮಾಡಿದಾಗ ಕಲ್ಲು ಗಾಳಿಯಲ್ಲಿ ನಿಲ್ಲುತ್ತದೆ. ಅಂದಿನಿಂದ ಕಲ್ಲನ್ನು ಅದರ ಮೂಲ ಸ್ಥಾನದಲ್ಲಿಡುತ್ತಾರೆ. ನಿತ್ಯವೂ ಪೂಜೆ ಮಾಡಬೇಕೆಂದು ಬೆಟ್ಟದ ಮೇಲಿನ ರಾಮದೇವರನ್ನು ಪೂಜಿಸುತ್ತಿದ್ದ ವಾಲ್ಮೀಕಿ ಸಮುದಾಯದ ಚಿನ್ನಲಿಂಗಪ್ಪನನ್ನೆ ಜನ ನೇಮಿಸುತ್ತಾರೆ. ಅಂದಿನಿಂದಲೂ ಪೂಜೆ ನಡೆದುಕೊಂಡು ಬಂದಿದೆ. ಚಿನ್ನಲಿಂಗಪ್ಪನ ನಂತರ ಅವರ ಮಗ ಪೋತಪ್ಪ ಸುಮಾರು ಎಂಭತ್ತು ವರ್ಷಗಳ ಕಾಲ ಪೂಜೆ ಮಾಡಿದರು. ‘ಆನಂತರ ಅವರ ಮಗನಾದ ನಾನು ಮುತ್ಯಾಲಪ್ಪ ನಲವತ್ತು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದರು. ದೇವಿಯ ಮುಂದೆ ಇರುವ ಮತ್ತೊಂದು ಶಿಲೆ ದೇವಿಯ ತಮ್ಮ ಪೋತಲಯ್ಯನದು ಎಂದು ಹೇಳಿದರು. ‘ಅಲ್ಲಿ ದೀಪ ಆರಬಾರದು, ನಿತ್ಯವೂ ಬೆಳಗಿನ ಜಾವ ನಾಲ್ಕಕ್ಕೆ ಹೋಗಿ ದೀಪ ಹಚ್ಚಿ ಬರುತ್ತೇನೆ’ ಎಂದು ಹೇಳಿದರು. ಶುಕ್ರವಾರ, ಭಾನುವಾರ ಮತ್ತು ಮಂಗಳವಾರ ಜನರು ಪೂಜೆ ಮಾಡಿಸಿಕೊಂಡು ಹೋಗಲು ಅಲ್ಲಿಗೆ ಬರುತ್ತಾರೆ. ಈಗ ದೇವಸ್ಥಾನಕ್ಕೆಂದು ಸಮಿತಿ ಇದೆ. ಎಲ್ಲ ಜಾತಿಗೂ ಸೇರಿದ ಒಟ್ಟು ಹದಿನಾರು ಮಂದಿ ಸದಸ್ಯರುಗಳಿದ್ದಾರೆ. ಎಲ್ಲ ಜಾತಿಯ ಜನರು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಬ್ರಾಹ್ಮಣರೂ ಬರುತ್ತಾರೆ. ಅವರು ಪ್ರಾಣಿಬಲಿ ನೀಡುವುದಿಲ್ಲ. ಮುಸಲ್ಮಾನರೂ ಸಹ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಅವರು ಪ್ರಾಣಿಯನ್ನು ಕಡಿಯುವುದಿಲ್ಲ. ಹಲಾಲ್ ಮಾಡುತ್ತಾರೆ ಎಂದು ಹೇಳಿದರು.
ಈ ದೇವಿಯ ಕತೆಯು ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು, ಭೂಮಿಯ ಹುಟ್ಟಿಗೆ ಕಾರಣಳಾದವಳೆಂದು ಪರಿಗಣಿಸುವ ಪ್ರಾಚೀನ ಮಾತೃಪ್ರಧಾನತೆಯ ಸೂಚಕವೇ ಆಗಿದೆ. ಹೆಣ್ಣನ್ನು ನಿಯಂತ್ರಿಸಿ, ಅವಳ ದುಡಿಮೆಯನ್ನು ಬಳಸಿಕೊಳ್ಳುತ್ತ ಬೆಳೆದ ಪಿತೃಪ್ರಧಾನತೆಯು ಗಟ್ಟಿಗೊಂಡಂತೆ, ಪ್ರಬಲವಾದಂತೆ ಹೆಣ್ಣುಮಕ್ಕಳನ್ನು ಅಬಲೆಯರು, ಶಕ್ತಿಹೀನರು, ಧೈರ್ಯವಿಲ್ಲದವರನ್ನಾಗಿ ಮಾಡಲಾಯಿತು. ಹಾಗೆಯೇ ದೇವಿಯರೂ ಸಹಿತ ಧೈರ್ಯ,ವ್ಯಘ್ರತೆಯನ್ನು ಕಳೆದುಕೊಂಡು ಸೌಮ್ಯಗೊಂಡರು. ಬಲಾಢ್ಯ ದೇವಿಯನ್ನು ಮಣಿಸುವ ಶಿಷ್ಟ ಸಂಪ್ರದಾಯದ ಭಾಗವಾಗಿಯೇ ಬ್ರಾಹ್ಮಣನೊಬ್ಬ ಪ್ರಾಣಪ್ರತಿಷ್ಠಾಪನೆ ಮಾಡುವುದು, ಕಾರಣವಿಲ್ಲದೆ ಶಾಪ ನೀಡುವಂತಹದು ವೈದಿಕಶಾಹಿ ಪಿತೃಪ್ರಧಾನತೆಯು ದೇಸಿ, ಅನಾರ್ಯ ಮಾತೃದೇವತಾ ಆಚರಣೆಯನ್ನು ಹತ್ತಿಕ್ಕುವ ಪ್ರಕ್ರಿಯೆಗಳಾಗಿವೆ.

ಸಂಸ್ಕೃತಿ, ಉಪಸಂಸ್ಕೃತಿ, ಪ್ರತಿಸಂಸ್ಕೃತಿ

ಮೂತ್ರಸೋಂಕು ತಗುಲಿ ಅದು ಔಷಧಿಗೆ ಸ್ಪಂದಿಸದೇ ಹೋದಾಗ ‘ಯೂರಿನ್ ಕಲ್ಚರ್’ ಎಂದು ಮಾಡುತ್ತಾರೆ. ಯೂರಿನ್ ಕಲ್ಚರ್ ಎಂದರೆ ಮೂತ್ರದಲ್ಲಿನ ಸೂಕ್ಷ್ಮಾ ಣುಗಳನ್ನು ಬೆಳೆಸಿ ಅವು ಯಾವ ನಿರ್ದಿಷ್ಟ ಔಷಧಿಗೆ ಸಾಯುತ್ತವೆ ಎಂದು ಕಂಡುಕೊಳ್ಳುವುದು. ಯಾವುದೇ ವೈರಾಣುವಿನಿಂದ ಬರುವ ತೀವ್ರ ತೆರನಾದ ಸೋಂಕಿಗೂ ಕಲ್ಚರ್ ಟೆಸ್ಟ್ ಮಾಡುತ್ತಾರೆ. ಸೂಕ್ಷ್ಮಾ ಣುಗಳ ವಿಚಾರದೊಂದಿಗೆ ವಿಷಯವನ್ನು ಯಾಕೆ ಪ್ರಾರಂಭಿಸಲಾಯಿತೆಂದರೆ ನಮ್ಮ ಕಣ್ಣಿಗೆ ಕಾಣದ ಲಕ್ಷಾಂತರ ಸೂಕ್ಷ್ಮಾ ಣುಗಳು ಮಣ್ಣನ್ನು ಹಸನು ಮಾಡುತ್ತವೆ, ಮಣ್ಣು ಉಸಿರಾಡುವಂತೆ ಮಾಡುತ್ತವೆ. ಆ ಹಸನಾದ ಭೂಮಿಯ ಮೇಲೆ ಹಸಿವು ನೀಗಿಸಿ, ಕಸುವು ತುಂಬುವ ಆಹಾರವನ್ನು ಬೆಳೆದು ಉಂಡು ನಾವು ಬೆಳೆಯುತ್ತೇವೆ. ಬೆಳೆಯುವುದನ್ನು ಬೇಸಾಯವೆನ್ನುತ್ತೇವೆ. ಇಂಗ್ಲಿಷ್‌ನಲ್ಲಿ ಅದು ಅಗ್ರಿಕಲ್ಚರ್. ಸಂಸ್ಕೃತಿ ಎಂಬುದು ಸಹ ಮನುಷ್ಯ ಮನುಷ್ಯರ ಒಡನಾಟವೂ ಸೇರಿದಂತೆ ಸುತ್ತಲಿನ ಒಟ್ಟಾರೆ ದೃಶ್ಯ-ಅದೃಶ್ಯ ಜೀವಲೋಕದ ಪರಿಸರದೊಂದಿಗಿನ ಒಡನಾಟದ ಅನುಭವವು ರೂಪಿಸಿದ ಸೂಕ್ಷ್ಮಾ ನೇಯ್ಗೆಯಾಗಿದೆ. ಸಂಸ್ಕೃತಿಯಲ್ಲಿ ಬೆಳೆದು, ಏಳಿಗೆ ಹೊಂದಿ, ಪಸರಿಸಿ, ನಶಿಸುತ್ತೇವೆ. ಈ ನೇಯ್ಗೆ ಸಮೂಹ ಪ್ರಜ್ಞೆ ಮೂಡಿಸುವುದರ ಜೊತೆಗೆ ಬದುಕನ್ನು ಸಾರ್ಥಕತೆಯೆಡೆಗೆ ಒಯ್ಯುವ ಕೆಲಸ ಮಾಡುತ್ತದೆ.
ಮನುಷ್ಯ ಸಮಾಜವು ಪ್ರಾಣಿ ಸಮಾಜಕ್ಕಿಂತ ಭಿನ್ನವಾಗಿರುವುದಕ್ಕೆ ಸಂಸ್ಕೃತಿಯು ಬಹುಮುಖ್ಯ ಕಾರಣವಾಗಿದೆ. ಮನುಷ್ಯರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಂಸ್ಕೃತಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.ಸಂಸ್ಕೃತಿಯು ವಿಸ್ತಾರವಾದ, ಆಳವಾದ, ಮಾಂತ್ರಿಕ ಅರ್ಥಗಳನ್ನು ಹೊಂದಿದೆ. ಸರಳವಾಗಿ ಹೇಳುವುದಾದರೆ ಗರ್ಭದ ತೊಟ್ಟಿಲಿನಿಂದ ಮಣ್ಣ ಮಡಿಲ ಸೇರುವವರೆಗಿನ ಪದ್ಧತಿ, ಆಚರಣೆಗಳೆಲ್ಲವನ್ನು ಒಳಗೊಂಡ ಜೀವನ ವಿಧಾನವನ್ನು ಸಂಸ್ಕೃತಿ ಎಂದು ಹೇಳಬಹುದು. ಆಚರಣೆಗಳು ಆಯಾ ಸಮುದಾಯದ ಲೋಕದೃಷ್ಟಿ, ಅರಿವು ಮತ್ತು ನೆನಪುಗಳ ಪರಂಪರೆಯ ಸಂಕೇತಗಳಾಗಿರುತ್ತವೆ.
ಸೂಕ್ಷ್ಮಾ ವಾಗಿ ಆಳವಾಗಿ ಗಮನಿಸಿದಾಗ ಸುತ್ತಲಿನ ಜೀವಜಾಲದ ಭೌಗೋಳಿಕ ಪರಿಸರ ಮತ್ತು ಅದರೊಂದಿಗಿನ ಸಹಬಾಳ್ವೆ, ಒಡನಾಟದ ಅನುಭವ ಅರಿವು ಮತ್ತು ಲೋಕದೃಷ್ಟಿಯನ್ನು ರೂಪಿಸಿರುವುದು ತಿಳಿಯುತ್ತದೆ. ಈ ಅರಿವು ಮತ್ತು ಲೋಕದೃಷ್ಟಿಯನ್ನು ಆಧರಿಸಿಯೇ ಪ್ರತಿಯೊಂದು ಸಮುದಾಯವು ತನ್ನದೇ ಸೃಷ್ಟಿ ಪುರಾಣವನ್ನು, ಜ್ಞಾನಪುರಾಣವನ್ನು ಕಟ್ಟಿಕೊಂಡಿರುತ್ತದೆ. ಅರಿವು ಮತ್ತು ಲೋಕದೃಷ್ಟಿಯು ಆಯಾ ಸಮುದಾಯದಲ್ಲಿ ಜಾರಿಯಲ್ಲಿರುವ ಆಚರಣೆಗಳಲ್ಲಿ ಸಾಂಕೇತಿಕವಾಗಿ ಬಿಂಬಿತವಾಗುತ್ತಿರುತ್ತದೆ.
ಬಡವರು-ಶ್ರೀಮಂತರು, ಮೇಲ್ಜಾತಿ-ಕೆಳಜಾತಿಯಂತಹ ಶ್ರೇಣೀಕರಣದ ಹೊರತಾಗಿಯೂ ಅರಿವು ಮತ್ತು ಲೋಕದೃಷ್ಟಿಗಳನ್ನು ಎಲ್ಲ ಸಮುದಾಯಗಳು ಕಟ್ಟಿಕೊಳ್ಳುತ್ತವೆ. ಆದರೂ ಸಮಾಜದಲ್ಲಿ ಅಂತಸ್ತು, ಆಸ್ತಿ, ಅಧಿಕಾರ ಹೊಂದಿರುವ ಪ್ರಬಲ ವರ್ಗಗಳ ಸಂಸ್ಕೃತಿ ಮಾತ್ರವೇ ಮುಖ್ಯ ಮತ್ತು ಉಚ್ಛ ಸಂಸ್ಕೃತಿಯಾಗಿ ಪರಿಗಣಿಸಲ್ಪಡುತ್ತದೆ. ಜಾತಿವ್ಯವಸ್ಥೆಯನ್ನು ಆಧರಿಸಿ ಶ್ರೇಣೀಕೃತಗೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿಶ್ರೇಣಿಯ ಮೇಲಿರುವ ಸವರ್ಣೀಯರ/ವೈದಿಕರ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ಮತ್ತು ಶ್ರೇಷ್ಠತೆಯ ಮಾನದಂಡವಾಗಿ ಬಿಂಬಿತವಾಗಿದೆ. ಹೀಗೆ ಬಿಂಬಿತವಾಗಿದ್ದರೂ ಸಹ ಮೇಲು-ಕೀಳು, ಪ್ರಬಲ-ದುರ್ಬಲವೆಂಬ ವಿಂಗಡಣೆಯೊಂದಿಗೇ ಪರಸ್ಪರ ಸಂಸ್ಕೃತಿಗಳ ನಡುವೆ ಅಪಾರವಾದ ತಿಕ್ಕಾಟ, ಪ್ರಭಾವಿಸುವಿಕೆ, ಅನುಸಂಧಾನ ಮತ್ತು ಕೊಡುಕೊಳ್ಳುವಿಕೆಯ ಸಂಕೀರ್ಣವಾದ, ಜಟಿಲವಾದ ಸಂಬಂಧಗಳ ಹೆಣಿಗೆ ಇರುತ್ತದೆ.
ಶ್ರೇಣೀಕರಣದ ಪ್ರಾಬಲ್ಯತೆಯಿಂದಾಗಿ ಶ್ರೇಣಿಯ ಕೆಳಗಿರುವವರು ಮೇಲಿನವರ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುವುದು ಅನುಕರಣೆ ಮತ್ತು ಸಂಸ್ಕೃತೀಕರಣ ಎನಿಸಿಕೊಳ್ಳುತ್ತದೆ. ಶ್ರೇಣಿಯ ಕೆಳಗಿರುವವರ ಸಂಸ್ಕೃತಿಯ ಪ್ರಭಾವವನ್ನು ಮೇಲಿನವರು ಮಾನ್ಯಮಾಡದೆ/ಅಂಗೀಕರಿಸದೆ ಅದು ತಮ್ಮದೇ ಎಂಬಂತೆ ಹೊಂದಿಸಿಕೊಳ್ಳುವುದನ್ನು ಕಾಣಬಹುದು. ಉದಾ: ಹಲವೆಡೆ ಮಾದಿಗ ಜಾತಿಯವರು ಮಣ್ಣಿನ ಮಡಕೆಯನ್ನು ಜಗಲಿಕಟ್ಟೆಯ ಮೇಲೆ ಹೂತಿಟ್ಟು ಅದರಲ್ಲಿ ನೀರು ತುಂಬಿಸಿ ಮೇಲೊಂದು ಸಣ್ಣಗುಡಿ ಕಟ್ಟಿ ಗಂಗೆ ಎಂದು ಪೂಜಿಸುತ್ತಾರೆ. ಈ ನೀರನ್ನು ಪವಿತ್ರವೆಂದು ಬ್ರಾಹ್ಮಣರೂ ಸೇರಿದಂತೆ ಇತರ ಮೇಲ್ಜಾತಿಯವರು ಶುಭಕಾರ್ಯಗಳ ಸಂದರ್ಭದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಇದನ್ನೆಲ್ಲೂ ಉಲ್ಲೇಖಿಸುವುದಿಲ್ಲ. ಹೀಗೆ ಕೆಳಜಾತಿಯ ದೇವಿಯರಿಗೆ ಸಲ್ಲಿಸುವ ಮೊದಲ ಪೂಜೆಯಲ್ಲದೆ ಜಾತ್ರೆ ಮತ್ತು ಉತ್ಸವಗಳ ಸಂದರ್ಭಗಳಲ್ಲಿ ಕೆಳಜಾತಿಯವರ ಕೈಲಿ ದೇವರ ಮುಂದೆ ದೀಪ/ಗರುಡಗಂಬ ಹಿಡಿಸುವುದು, ದೇವರ ಮುಂದೆ ಶಹನಾಯಿ ಊದಿಸುವುದು, ಮೊದಲಿಗೆ ರಥ ಎಳೆಸುವಂತಹ ಆಚರಣೆಗಳು ತಳಜಾತಿಯವರ ಹಕ್ಕಿನ ಸ್ಥಾನವನ್ನು ಕಿತ್ತುಕೊಂಡಿರುವುದರ ಅಥವಾ ಅವರ ದೇವರು ಮತ್ತು ಆಚರಣೆಗಳನ್ನು ತಮ್ಮದಾಗಿಸಿಕೊಂಡ ಚರಿತ್ರೆಯ ಗಾಯಗಳನ್ನು ಎಲ್ಲೆಲ್ಲೂ ಕಾಣಬಹುದಾಗಿದೆ.
ಸಂಸ್ಕೃತಿಯನ್ನು ಪ್ರಕೃತಿಯಿಂದ ಪ್ರತ್ಯೇಕವಾಗಿಯೋ ಅಥವಾ ಮಿಗಿಲಾಗಿಯೋ ನೋಡುವ ಕ್ರಮವೂ ಇದೆ. ಪ್ರತ್ಯೇಕಿಸಿ ನೋಡುವ ಅಥವಾ ಮಿಗಿಲೆಂದು ನೋಡುವಾಗ ಶ್ರೇಷ್ಠವೆಂದು ಸಾಬೀತುಗೊಳಿಸುವ ಅಪಾಯವಿರುತ್ತದೆ. ಎಲ್ಲರ ಮತ್ತು ಎಲ್ಲದರಲ್ಲೊಂದಾಗಿರುವುದಕ್ಕಿಂತ, ಎಷ್ಟೆಷ್ಟು ಪ್ರತ್ಯೇಕವಾಗಿ, ‘ಮುಟ್ಟಿಗೆ’ ದೂರವಾಗಿ ಉಳಿಯುವುದೇ ಶ್ರೇಷ್ಠತೆಗೆ ಆಧಾರವಾಗಿಬಿಡುವ ಅಪಾಯವದು. ಈ ಅಪಾಯವು ಸಮಗ್ರ ದೇಹದೊಳಗೆಯೇ ತಲೆ ಮತ್ತು ಇತರ ಅವಯವಗಳನ್ನು ಬೇರ್ಪಡಿಸಿ, ಪ್ರತ್ಯೇಕ ವಸಾಹತುಗಳಂತೆ ಮಾಡಿದೆ. ಇಲ್ಲಿ ಶ್ರೇಷ್ಠತೆಯ ವ್ಯಸನಕ್ಕಿಂತ ಜೀವಪರ ಕಾಳಜಿಯನ್ನು ಕೇಂದ್ರವಾಗಿಟ್ಟುಕೊಂಡು ಚಲನಶೀಲ ಜ್ಞಾನ ಪರಂಪರೆಯಾಗಿ ಸಂಸ್ಕೃತಿಯನ್ನು ಅರಿಯುವ ಪ್ರಯತ್ನಮಾಡಲಾಗಿದೆ. ತಲತಲಾಂತರಗಳಿಂದ ಪಡೆದುಕೊಂಡ ಜ್ಞಾನವೇ ಆಗಿರುವ ಸಂಸ್ಕೃತಿಯು ರಾಜಕೀಯ ಪ್ರಜ್ಞೆಯೇ ಆಗಿದೆ. ಸಾಯಿಲ್ ಎಂಬ ಇಂಗ್ಲಿಷ್ ಪದಕ್ಕೆ ಮಣ್ಣು ಮತ್ತು ಕೊಳೆ ಎಂಬ ಎರಡೂ ಅರ್ಥವಿದೆ. ಮಣ್ಣು ಮತ್ತು ಕೊಳೆಯೊಂದಿಗೆ ಕೆಲಸದ ಮೂಲಕ ಒಡನಾಡುತ್ತ ಪಡೆದುಕೊಳ್ಳುವ ಜ್ಞಾನ ನಿಜವಾದ ಜ್ಞಾನವಾದ್ದರಿಂದಲೇ ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆ ಹುಟ್ಟಿಕೊಂಡಿದೆ.
ಸಫಾಯಿ ಕರ್ಮಚಾರಿಗಳಿಗೂ ಲೋಕದೃಷ್ಟಿ, ತಿಳಿವು ಮತ್ತು ನೆನಪಿನ ಪರಂಪರೆ ಇದೆ. ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾರೆ.ಪರಸ್ಪರರ ಸಾವು-ನೋವಿಗೆ ಮಿಡಿಯುವ ಮತ್ತು ಹಂಚಿ ಉಣ್ಣುವ, ಅನ್ಯ ದೇವರು, ಧರ್ಮ ಇತ್ಯಾದಿಗಳನ್ನು ಬೇಧವೆಣಿಸದೆ ಒಳಗೊಳ್ಳುವ, ಸ್ಪರ್ಶಕ್ಕೆ, ಭಾವಕ್ಕೆ ಎಟುಕುವ ದೇವರು ಮತ್ತು ಸಂತರು ಅವರ ಸಾಂಸ್ಕೃತಿಕ ಲೋಕದ ಭಾಗವಾಗಿದ್ದಾರೆ. ಮುಟ್ಟುವುದಕ್ಕೆ ಅನರ್ಹವಾದುದು, ಅಶುದ್ಧವಾದುದು ಮತ್ತು ಅಪವಿತ್ರವಾದುದು ಯಾವುದೂ ಈ ಲೋಕದಲ್ಲಿ ಇಲ್ಲ. ಶ್ರಮವೇ ಅವರ ಬದುಕಿನ ಅಧಾರ. ಶ್ರಮದ ಮೂಲಕ ಪಡೆದುಕೊಳ್ಳುವ ಅನುಭವ ಮತ್ತು ಅರಿವೇ ಅವರ ಸಂಸ್ಕೃತಿಯ ಮೂಲಧಾರವಾದ್ದರಿಂದ ಅವರದು ಶ್ರಮ ಸಂಸ್ಕೃತಿಯಾಗಿದೆ. ‘ನಾನು’ ‘ನನ್ನದು’ ಎಂಬುದಕ್ಕಿಂತ ‘ನಾವು’, ‘ನಮ್ಮ’ ಎಂಬ ಪರಸ್ಪರಾವಲಂಬನೆಯ ಸಾಮೂಹಿಕ ಸಂಸ್ಕೃತಿಯಾಗಿದೆ. ತಿಕ್ಕಾಟ, ದಮನಗಳನ್ನು ಎದುರಿಸುತ್ತಲೇ ಅನುಸಂಧಾನದ ದಾರಿಗಳನ್ನು ಹುಡುಕಿಕೊಳ್ಳುವ ಭಾರತೀಯ ಬಹು ಸಂಸ್ಕೃತಿಯ ದರ್ಶನವೂ ಆಗಿದೆ.
ಕಡೆಗಣಿಸಲಾದ ತಳಸಮುದಾಯದವರ ಜ್ಞಾನ, ಅರಿವು, ದರ್ಶನ, ಕಾಣ್ಕೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಕರ್ನಾಟಕದ ಸಾಂಸ್ಕೃತಿಕ ಚಿಂತನೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಂತಹ ಸಮುದಾಯಗಳ ಸಂಸ್ಕೃತಿಯನ್ನು ಉಪಸಂಸ್ಕೃತಿಯಾಗಿ, ಪ್ರತಿಸಂಸ್ಕೃತಿಯಾಗಿ ಚರ್ಚಿಸಲಾಗಿದೆ. ಸಿಂದ್ ಮಾದಿಗರು, ದಕ್ಕಲರು, ಮಾಷ್ಟಿಕರು ಇತ್ಯಾದಿ ಕಡೆಗಣಿಸಲಾದ ಸಮುದಾಯಗಳ ಸಾಂಸ್ಕೃತಿಕ ಇತಿಹಾಸವನ್ನು ಪುಸ್ತಕ ರೂಪದಲ್ಲಿ ಉಪಸಂಸ್ಕೃತಿಯ ಮಾಲಿಕೆಯಡಿ ದಾಖಲಿಸಲಾಗಿದ್ದು ಪ್ರಧಾನ ಸಂಪಾದಕರಾದ ಬರಗೂರು ರಾಮಚಂದ್ರಪ್ಪನವರು ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ-
“ಸಂಸ್ಕೃತಿ ಎನ್ನುವುದು ಒಂದೇ ಅಲ್ಲ; ಧರ್ಮ ಎಂಬುದು ಒಂದೇ ಅಲ್ಲ. ಏಕ ಸಂಸ್ಕೃತಿ-ಧರ್ಮಗಳ ಯಜಮಾನ್ಯದಲ್ಲಿ ನಿರ್ಲಕ್ಷಿಸುತ್ತಲೇ ಬಂದ ನೂರೆಂಟು ಸಂಸ್ಕೃತಿಗಳು ನಮ್ಮ ಕಣ್ಣೆದುರಿಗೇ ಇವೆ. ಊರಾಚೆಯ ಅಂಚಿನಲ್ಲಿ ಕಾಡಿನ ಒಡಲಲ್ಲಿ ಜೀವ ಹಿಡಿದುಕೊಂಡಿವೆ. ಅವುಗಳ ಜೀವನ ವಿಧಾನ ಗೊತ್ತೆ? ಕಲೆ ಸಾಹಿತ್ಯಗಳು ಗೊತ್ತೆ?ಇವು ಗೊತ್ತಾಗುತ್ತಾ ಹೋದಂತೆ ಏಕ ಸಂಸ್ಕೃತಿ ಯಜಮಾನಿಕೆಯ ಭ್ರಮೆ ಕರಗತೊಡಗುತ್ತದೆ. ನಮ್ಮೊಂದಿಗೆ ಕರೆದು ಕೂಡಿಸಿಕೊಂಡು ಮುನ್ನಡೆಯಬೇಕಾದ ಬಹು ಸಂಸ್ಕೃತಿಗಳ ಬಹುದೊಡ್ಡ ಲೋಕವೇ ನಮ್ಮೊಳಗೆ ಕಾಣುತ್ತದೆ. ನಾವು ಎಲ್ಲಿಂದ ಎಷ್ಟು ದೂರ ಬಂದಿದ್ದೇವೆ?ನಮ್ಮ ಮೂಲ ನೆಲೆಯಲ್ಲಿ ಎಷ್ಟೊಂದು ಜನರನ್ನು ಎಷ್ಟೊಂದು ದೂರ ನಿಲ್ಲಿಸಿದ್ದೇವೆ ಎಂಬ ಅರಿವು ಆವರಿಸಿಕೊಳ್ಳುತ್ತದೆ. ಈ ‘ದೂರ’ ಸಮೀಪವಾಗುವುದು ಯಾವಾಗ? ಹೇಗೆ ಎಂಬ ಪ್ರಶ್ನೆಗಳಲ್ಲಿ ಉತ್ತರದ ಹುಡುಕಾಟ ಆರಂಭವಾಗುತ್ತದೆ. ಈ ಹುಡುಕಾಟ ದೂರವನ್ನು ಸಮೀಪವಾಗಿಸುವ ಸಂಸ್ಕೃತಿಯಾಗಿ ರೂಪುಗೊಳ್ಳುತ್ತದೆ”(BarguruRamachandrappa: 32&33:1993)
ತಳಸಮುದಾಯ ಮತ್ತು ಅಲಕ್ಷಿತ ಸಮುದಾಯದ ಸಂಸ್ಕೃತಿಯನ್ನು ಪ್ರತಿಸಂಸ್ಕೃತಿಯಾಗಿ ಚರ್ಚಿಸುವ ಸಾಂಸ್ಕೃತಿಕ ಚಿಂತಕ ರಹಮತ್ ತರಿಕೆರೆಯವರು ನೀಡಿರುವ ವಿವರಣೆ ಹೀಗಿದೆ. “ಸಾಮಾಜಿಕವಾಗಿ, ಆರ್ಥಿಕವಾಗಿ ‘ತಳ’ಸ್ತರಕ್ಕೆ ಸೇರಿದ ಸಮುದಾಯಗಳಿಗೆ ಬದುಕಲೇಬೇಕೆಂಬ ಅದಮ್ಯ ಆಸೆಗಳಿರುತ್ತವೆ; ತಮ್ಮಾಸೆ ಕನಸುಗಳ ಈಡೇರಿಕೆಗೆ ವಾಸ್ತವದ ಹೊಳೆ ಅಡ್ಡ ಬಂದರೆ, ಅವು ಈಸುಬಿದ್ದು ಸೆಣಸುವ ಹಠ ತೋರುತ್ತವೆ; ತಮ್ಮನ್ನು ಆವರಿಸಿರುವ ಎಲ್ಲ ತಲ್ಲಣಗಳ ನಡುವೆ ಕೂಡ ಅವು ಪ್ರತಿರೋಧದ ವಿಚಿತ್ರ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ಪ್ರತಿಸಂಸ್ಕೃತಿಯ ಸಾಧ್ಯತೆಗಳು ಸಾಮಾನ್ಯವಾಗಿ ರೂಪು ತಳೆಯುವುದೇ ಇಕ್ಕಟ್ಟುಗಳಲ್ಲಿ. ಹಾಗೆಂದು, ವ್ಯವಸ್ಥೆಯೊಡ್ಡಿದ ಇಕ್ಕಟ್ಟುಗಳಲ್ಲಿ ಪಾರಾಗಿ ತಪ್ಪಿಸಿಕೊಳ್ಳುವ ಜಾಣತನಗಳೇ ಪ್ರತಿಸಂಸ್ಕೃತಿಯಲ್ಲ. ಪ್ರತಿಸಂಸ್ಕೃತಿಯು ಸಂಕಟಗಳಲ್ಲಿರುವ ಸಮುದಾಯಕ್ಕೆ ಪ್ರತಿರೋಧಿಸಿ ಚೈತನ್ಯವನ್ನು ತುಂಬಿ, ಪರ್ಯಾಯಗಳ ಶೋಧನೆಗೆ ಪ್ರೇರೇಪಿಸಬಲ್ಲ ಸಾಮುದಾಯಿಕ ಪ್ರತಿಭೆ ಕೂಡ. ಆದರೆ ‘ಪರ್ಯಾಯ’ವೊಂದು ಒಮ್ಮೆ ರೂಪುಗೊಂಡ ಮೇಲೆ, ಅದು ಸಮುದಾಯಗಳೆಂಬ ಕೆಳಗದ್ದೆಗಳಿಗೆ ಯಾವತ್ತೂ ನೀರುಣಿಸಬಲ್ಲ ಬತ್ತದ ತೊರೆಯಾಗಿ ಉಳಿಯುವುದಿಲ್ಲ. ಒಂದು ಕಾಲಕ್ಕೆ ‘ಪ್ರತಿಸಂಸ್ಕೃತಿ’ ಎಂಬಂತೆ ಮೈತಳೆದ ವಚನ ಚಳುವಳಿಯು ಈಗ ಏನಾಗಿ ನಿಂತಿದೆ ಎಂಬುದು ಇದಕ್ಕೆ ಸಾಕ್ಷಿ. ಈ ಅರ್ಥದಲ್ಲಿ ಬದಲಾಗುವ ಚಾರಿತ್ರಿಕ ಸನ್ನಿವೇಶಗಳಲ್ಲಿ ‘ಪ್ರತಿಸಂಸ್ಕೃತಿ’ಗಳು ಮತ್ತೆ ಮತ್ತೆ ಮೂಡುತ್ತಲೇ ಇರುತ್ತವೆ. ಇದೊಂದು ನಿಲ್ಲದ ಪ್ರಕ್ರಿಯೆ. (ರಹಮತ್ ತರೀಕೆರೆ:ಪೀಠಿಕೆ:೨೦೦೨).
ಸಫಾಯಿ ಕರ್ಮಚಾರಿಗಳನ್ನು ನೈರ್ಮಲ್ಯದ ಕೆಲಸಕ್ಕೆ ಕಟ್ಟಿಹಾಕಲು ಅವರ ಅಸ್ಮಿತೆ ಮತ್ತು ಅಸ್ತಿತ್ವವನ್ನು ರೂಪಿಸಿರುವ ಅವರ ಸಂಸ್ಕೃತಿಯನ್ನೇ ಕೀಳಾಗಿಸಿ ಅನ್ಯರನ್ನಾಗಿಸಲಾಗಿದೆ. ಆ ಮೂಲಕ ಅವರ ಸಂಸ್ಕೃತಿಯ ಮೂಲಾಧಾರವಾಗಿರುವ ಅವರ ತಿಳಿವು ಮತ್ತು ಲೋಕದೃಷ್ಟಿಯನ್ನೇ ಕಡೆಗಣಿಸಲಾಗಿದೆ, ಹತ್ತಿಕ್ಕಲಾಗಿದೆ. ಹೀಗೆ ಅಂಚಿಗೆ ತಳ್ಳಲಾದ ಜನರ ಅನನ್ಯತೆಯೇ ಅವರ ಸಂಸ್ಕೃತಿಯಿಂದ ರೂಪುಗೊಂಡಿರುತ್ತದೆ. ಅವರ ಪೋಷಣೆ ಮತ್ತು ಅವರ ಸಂಸ್ಕೃತಿಯ ಪೋಷಣೆ ಒಂದಕ್ಕೊಂದು ಪೂರಕ ಮತ್ತು ಪ್ರಚೋದಕ. ಇಂಥ ಜೀವನ ಕ್ರಮವೇ ಅಮಾನವೀಯ ವಾಸ್ತವದ ವಿರುದ್ಧ ಸೆಣೆಸಾಡುವ ಸಾಮರ್ಥ್ಯವನ್ನು ನೀಡಿದೆ. ಹಾಗೂ ಅವರನ್ನು ಮಾನವೀಯರನ್ನಾಗಿ ಉಳಿಸಿದೆ. ಪ್ರಭಾವ, ಪ್ರಾಬಲ್ಯ, ದಮನವನ್ನು ಎದುರಿಸುತ್ತಲೇ ತಮ್ಮ ಹೊಲಸನ್ನು ಬಾಚಿಸಿಕೊಂಡು ತುಚ್ಛವಾಗಿ ಕಾಣುವವರ ವಿರುದ್ಧ ಮಾನವೀಯ ಅಂತಃಕರಣವನ್ನು ಕಾಪಾಡಿಕೊಳ್ಳಲು ಗುರಾಣಿಯಂತೆ ಕೆಲಸ ಮಾಡಿದೆ. ಇಂತಹ ಸಂಸ್ಕೃತಿಯನ್ನು ಅರಿಯುವುದು ಅವರ ಪರಿಸ್ಥಿತಿಯ ಸುಧಾರಣೆಗಷ್ಟೇ ಅಲ್ಲದೆ ಒಟ್ಟಾರೆ ಸಮಾಜದ ಒಳಿತಿಗಾಗಿ ಅವಶ್ಯಕ.
ಅಪಾಯಕಾರಿ ಕೆಲಸದ ವಾತಾವರಣದಲ್ಲಿ ಆರೋಗ್ಯವನ್ನು ಕಾಪಾಡುವಂತಹ ಅವಶ್ಯಕ ಕೆಲಸವನ್ನು ಮಾಡುವ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ಸಲ್ಲಿಸಬೇಕಾದುದು ಪ್ರಭುತ್ವದ ಮತ್ತು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಸಫಾಯಿ ಕರ್ಮಚಾರಿಗಳನ್ನು ಮನುಷ್ಯರಾಗಿ, ಪ್ರಜೆಗಳಾಗಿ ಒಪ್ಪಿಕೊಳ್ಳಲು ಅವರ ದುಡಿಮೆಗೆ ನ್ಯಾಯಬದ್ಧವಾಗಿ ಪ್ರತಿಫಲವನ್ನು ಸಲ್ಲಿಸಬೇಕು. ಹಾಗೆಯೇ ಮುಖ್ಯವಾಹಿನಿಯ ಸಂಸ್ಕೃತಿಯು ಅವರ ಮಾನವೀಯ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಪಡೆದುಕೊಳ್ಳುವುದು ಸಾಕಷ್ಟಿದೆ. ಇಲ್ಲಿ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯನವರ ಮಾತುಗಳು ಪ್ರಸ್ತುತ. “ಪ್ರಧಾನ ಸಂಸ್ಕೃತಿಯ ಪ್ರಾಬಲ್ಯದಡಿ ತನ್ನತನ ಕಾಪಾಡಿಕೊಳ್ಳಲು ಶತಾಯ ಗತಾಯ ಹೆಣಗುತ್ತಿರುವ ಮೂಲ ಸಂಸ್ಕೃತಿಗಳ ಅಧ್ಯಯನವು ಮನುಕುಲದ ಒಟ್ಟಾರೆ ಉಳಿವಿಗೆ ಅಗತ್ಯವಾದ ಒಳನೋಟಗಳನ್ನು ಒದಗಿಸಬಲ್ಲದು. ಪ್ರಧಾನ ಸಂಸ್ಕೃತಿಯ ಪ್ರವಾಹಕ್ಕೆ ವಿರುದ್ಧವಾದ ಹಾಗೂ ಭಿನ್ನವಾದ ನಾನಾಮೂಲಾಧಾರೆಗಳು ಆಶ್ಚರ್ಯಕರ ರೀತಿಯಲ್ಲಿ ಇನ್ನೂ ಉಳಿಸಿಕೊಂಡಿರುವ ‘ದೇಸೀ ಜೀವಜನ’ ‘ಜೀವಹೀನ’ ಸಂಸ್ಕೃತಿಯ ಏಕತಾನತೆಯನ್ನು ಮೀರಿ ‘ಜೀವಪರ’ ಸಾಂಸ್ಕೃತಿಕ ಪರ್ಯಾಯವೊಂದಕ್ಕೆ ದಾರಿ ಮಾಡಿಕೊಡಬಲ್ಲದು.
ನೆನಪಿನ ಶಕ್ತಿ, ಚಿಂತಿಸುವ ಶಕ್ತಿ, ಕಲ್ಪನೆ ಮಾಡಿಕೊಳ್ಳುವ ಶಕ್ತಿ ಮತ್ತು ತನ್ನ ಸುತ್ತಲಿನ ಪರಿಸರ ಕುರಿತ ಕುತೂಹಲದಿಂದಾಗಿ ಮನುಷ್ಯ ಸಮುದಾಯಗಳು ಭೂಮಿಯ ಹುಟ್ಟಿನ ಕುರಿತು ಸೃಷ್ಟಿ ಪುರಾಣಗಳನ್ನು ಹಾಗೂ ಸುತ್ತಲಿನ ಪರಿಸರದೊಂದಿಗಿನ ಸಂಬಂಧ, ಸಹಬಾಳ್ವೆ, ಒಡನಾಟದ ಅನುಭವ ಆಧರಿಸಿದ ಜ್ಞಾನ ಪುರಾಣಗಳನ್ನು ಕಟ್ಟಿಕೊಂಡಿವೆ.
ಇಲ್ಲಿ ಸಫಾಯಿ ಕರ್ಮಚಾರಿಗಳ ಸಾಂಸ್ಕೃತಿಕ ಬದುಕನ್ನು ಅವರಲ್ಲಿ ಜಾರಿ ಇರುವ ಸೃಷ್ಟಿ ಪುರಾಣಗಳು, ಜ್ಞಾನ ಪುರಾಣಗಳು ಹಾಗೂ ಅವರು ಜೀವನಾವರ್ತನ, ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಆಚರಿಸುವ ವಿವಿಧ ಆಚರಣೆಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಈ ಪುರಾಣಗಳು ಮತ್ತು ಆಚರಣೆಗಳನ್ನು ಅವಲೋಕಿಸುವಾಗ ಅವು ಪರಿಸರದೊಂದಿಗೆ ನಿಕಟವಾದ ಸಹಬಾಳ್ವೆಯಿಂದ ಪಡೆದುಕೊಂಡ ಪರಿಸರ ಪ್ರಜ್ಞೆ, ದೇಹವನ್ನು ಮಲಿನವೆಂದು ಭಾವಿಸದೆ, ಮೇಲು-ಕೀಳಿನ ಹೊರತಾದ ಜೀವಪರ ಪ್ರಜ್ಞೆ, ಸರ್ವರ ಹಿತ ಬಯಸುವ ಸಮಷ್ಟಿ ಪ್ರಜ್ಞೆಯ ಪರಂಪರೆ ಒಳಸೆಲೆಯಾಗಿ ಮುಂದುವರೆದುಕೊಂಡುಬಂದಿರುವುದನ್ನು ಕಾಣಬಹುದು. ಅಂತಹ ಪ್ರಜ್ಞೆಯನ್ನು ಸಂಕೇತಿಸುವ ಪ್ರಮುಖ ಪುರಾಣ ಮತ್ತು ಆಚರಣೆಗಳನ್ನು ಇಲ್ಲಿ ನೀಡಲಾಗಿದೆ.
ಸಫಾಯಿಕರ್ಮಚಾರಿಗಳಲ್ಲಿ ಅಸ್ಪೃಶ್ಯ ಜಾತಿಗಳಿಗೆ ಸೇರಿರುವ ಜನರಲ್ಲಿ ಜಾರಿ ಇರುವ ಸೃಷ್ಟಿಪುರಾಣಗಳಲ್ಲಿ ಮುಖ್ಯವಾದವುಗಳು ಹೀಗಿವೆ.